
ವಿಠಲ ಭಂಡಾರಿ
ಬಂಗಾರೇಶ್ವರ ಗೌಡರು ಎಂದ ತಕ್ಷಣ ನೆನಪಾಗೋದು ಅವರ ಬಳಿ ಇರುವ ಸೈಕಲ್.
ಬಿಕ್ಕನಹಳ್ಳಿಯಿಂದ ಸುಮಾರು 10 ಕಿಮಿ ದೂರದಲ್ಲಿರುವ ಶಿರಸಿಗೆ ಅವರು ಸೈಕಲ್ ಹೊಡೆದುಕೊಂಡು ಬರುತ್ತಿದ್ದರು. ಅತಿಕ್ರಮಣ ಭೂಮಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜನರನ್ನು ಸಂಘಟಿಸಲು ಹಳ್ಳಿ ಹಳ್ಳಿ ತಿರುಗಲೂ ಇದೇ ಸೈಕಲ್. ಎಲ್ಲಾ ಕೆಲಸ ಮುಗಿಸಿ ಇದೇ ಸೈಕಲ್ ಹಿಡಿದು ರಾತ್ರಿ ಮನೆಗೆ ಹೋಗುತ್ತಿದ್ದರು.
ನಾನು ಅವರನ್ನು ನೋಡಿದಾಗಿನಿಂದ ಅವರ ಸಂಗಾತಿಯಾಗಿದ್ದುದು ಈಸೈಕಲ್. ಆದರೆ ಈಗ ಅದು ತನ್ನ ಬಹುಕಾಲದ ಸಂಗಾತಿಯನ್ನು ಕಳೆದುಕೊಂಡು ಮೂಲೆಯಲ್ಲಿ ಕುಳಿತಿದೆ.
ಅದರ ಪಕ್ಕದಲ್ಲಿರುವುದು ಬರೇ ಕಭ್ಬಿನ ಪಟ್ಟಿಯಲ್ಲ. ಹೊಸ ಮನೆ ಕಟ್ಟಿದ ಮೇಲೆ ಮಧ್ಯೆ ನಾಲ್ಕು ಮರದ ಹಲಗೆ ಹಾಕಿ ಪುಸ್ತಕ ಇಡಲು ಒಂದು ಕಪಾಟು ಮಾಡಿಕೊಳ್ಳಬೇಕೆನ್ನುವ ಆಸೆಯಿಂದ ಮಾಡಿಸಿಟ್ಟಿದ್ದು. ಈ ಆಸೆಯೂ ಪೂರೈಸಲೇ ಇಲ್ಲ.
ವೈದ್ಯಕೀಯ ಕ್ಷೇತ್ರ ಎಷ್ಟೇ ಸುಧಾರಿಸಿದೆ ಅಂದರೂ ಬಡವರಪಾಲಿಗೆ ಅದು ಯಮರೂಪಿಯಾಗಿಯೇ ಇದೆ. ಬೆನ್ನು ಮೂಳೆಯ ಆಪರೇಶನ್ ಮಾಡಲು ಹೋದ ವೈದ್ಯರ ಅಜಾಗರೂಕತೆಯಿಂದಾಗಿ ದೇಹದ ಅರ್ಧಭಾಗವನ್ನು ಕಳೆದುಕೊಳ್ಳಬೇಕಾಯಿತು.
ಹೆಂಡತಿ ಕೂಡ 70 ವರ್ಷ ದಾಟಿದವರು. ಅನಾಥರಾಗಿ ಬದುಕಿನ ಸಂಧ್ಯಾಕಾಲವನ್ನು ಕಳೆಯಬೇಕು.
ಅರ್ಧ ಕಟ್ಟಿದ ಮನೆ, ಜಂಗುಹಿಡಿದ ಸೈಕಲ್ಲು, ಬಡತನದ ನಿತ್ಯದೂಟ….





0 Comments