ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕಿಮಂಗಲ ಮಂಜುನಾಥ ಬರೆದಿರುವ ಮಕ್ಕಳ ಪದ್ಯಗಳು

-ಅಕ್ಕಿಮಂಗಲ ಮಂಜುನಾಥ


ದಂತ ಕತೆ
ಎಲ್ಲ ಹೇಳುವುದು ಎಂಥ ಕತೆ?
ಮಗೂ
ನಾ ಹೇಳುವೆ ಕೇಳು ದಂತ ಕತೆ
 
ಕರುನಾಡಿನ ಬುಡದಲಿ ಕಾಡಿತ್ತು
ಅದಕೂ ಕೆಳಗೆ ತಮಿಳುನಾಡಿತ್ತು
 
ಆ ಕಾಡಲಿ ಮರಗಿಡ ತುಂಬಿತ್ತು
ಪ್ರಾಣಿ ಸಂಪತ್ತೂ ಬಹಳಿತ್ತು
 
ಹೊನ್ನೆ ತೇಗ ಗಂದದ ಬೀಡು
ಆನೆ ದಂತಗಳ ಸಿರಿಗೂಡು
 
ಅಲ್ಲಿಗೆ ಬಂದನು ರಕ್ಕಸನೊಬ್ಬ
ಎಲ್ಲಾ ಲೂಟಿಯ ಮಾಡಿದ, ಅಬ್ಭಾ !
 
ಪೊಲೀಸರ ಕೋವಿಗೆ ಸಿಕ್ಕಲೆ ಇಲ್ಲ
ಯಾರಪ್ಪನಿಗೂ ಅವ ಮಣಿಯಲೆ ಇಲ್ಲ
 
ನಂತರ ಇವನದು ಬರಿ ನರಬೇಟೆ
ದೋಚಿದ ದುಡ್ಡನು ಮೂಟೆ ಮೂಟೆ
 
ಕೊಯ್ದನು ಎಷ್ಟೋ ಜನಗಳ ಕೊರಳು
ಸಾಲದು ಎಣಿಸಲು ಕೈ ಕಾಲ್ ಬೆರಳು
 
ಸಾವಿರ ಸಾವಿರ ಸಲಗದ ದಂಡು
ನೂರಕ್ಕೂ ಮಿಗಿಲು ನರ ಪ್ರಾಣಿಯ ಹಿಂಡು
 
ಮುಗ್ಧ ಮಾನವರ ಹಿಂಸಿಸಿದ
ಕ್ರೂರ ಕಾಯಿದೆಯ ರಕ್ಷಿಸಿದ
 
ದಿಗಿಲಿಗೆ ಅವಿತವು ಆನೆಗಳು
ಥರಗುಟ್ಟಿದವು ಪ್ರಾಣಿಗಳು
 
ಸರ್ಕಾರಗಳೇ ಕೊರಗಿದವು
ದೇಶ ದೇಶಗಳೆ ಮರುಗಿದವು
 
ಆದರೂ ಬಿಟ್ಟನೆ ಜವರಾಯ?
ಅವನ ಕತೆಯೂ ಓಂ ನಮಃ ಶಿವಾಯ
 
ಪೊಲೀಸರ ಗುಂಡಿಗೆ ಗುರಿಯಾದ
ಯಮ ರಾಜನಿಗೆ ಶರಣಾದ
 
ಕೇಳಿದ್ದೀಯಾ ಇಂಥ ಕತೆ
ಮಗೂ
ನಿಜವಾಗಿಯೂ ಇದು ದಂತ ಕತೆ

****

ಹೂವು ಮಾರುವವಳು
ಮುಡಿಯ ತುಂಬ ಮುಡಿದುಕೊಂಡು
ಜಾಜಿ ಮುರುಗ ಕೇದಗೆ
ಬುಟ್ಟಿ ತುಂಬ ತುಂಬಿ ಕೊಂಡು
ತಾವರೆ ಸೇವಂತಿಗೆ
 
ಜೊತೆಗೆ ಹಾರ ಕಟ್ಟಿಕೊಂಡು
ಸಂಪಿಗೆ ಜೊತೆ ಮಲ್ಲಿಗೆ
ಹೂವಿನಂತೆ ಮುಖವ ಮಾಡಿ
ಹಾಡು ಹಾಡಿ ಮೆಲ್ಲಗೆ
 
ಹಿಂಪಾದ ಹಾಡು ಕಲಿಸಿ
ಕಾಲಿನ ಕಿರು ಗೆಜ್ಜೆಗೆ
ಬಂದಳದೊ ಹೂವಿನವಳು
ಹೂವೆ ಆಗಿ ಬೀದಿಗೆ
 
“ಬನ್ನಿರಣ್ಣ ಅಕ್ಕ ತಂಗಿ
ಅಂದದ ಹೂ ಕೊಳ್ಳಲು
ಬುಟ್ಟಿಯಲ್ಲಿ ಗಮಗುಡುತಿವೆ
ನೂರು ತರದ ಹೂಗಳು”
 
“ಕೊಂಡ ಹೂವ ಸಿಗಿಸಿಕೊಳ್ಳಿ
ತಲೆಯ ಹೆರಳ ಕೊರಳಲಿ
ಮೂರ್ತಿ ಪಟಕೆ ಮುಡಿಸಿ ನಮಿಸಿ
ನಿಮಗೆ ಶುಭವ ನೀಡಲಿ ”
 
ಎಂದು ಹಾಡಿ ಹೂವು ಮಾರಿ
ಹೋದಳವಳು ಮುಂದಕೆ
ಹೋದ ಮೇಲೂ ಹಾಗೇ ಇದೆ
ನೆನಪು ಗಂಧ ಚಂದಕೆ

ಕೋಳಿ ಕತೆ
ಮಕ್ಕಳೆ ಈ ಕತೆ ಕೇಳಿ
ಇತ್ತು ಒಂದು ಕೋಳಿ
 
ಬೆಳಕು ಮೂಡುತಿದೆ ಏಳಿ
ಎನ್ನುತ್ತಿತ್ತು ಕೋಳಿ
 
ಬಯಲಿನಲ್ಲಿ ಹಾರಿ
ತನ್ನ ರೆಕ್ಕೆ ಕೆದರಿ
 
ಹಾರುತಿತ್ತು ಕೋಳಿ
ಮಿಗಿಲಾರು ಇಹರು ಹೇಳಿ?
 
ತಿಪ್ಪೆ ಗುಂಡಿ ಕೆದಕಿ
ಕಸದಲ್ಲಿ ರಸ ಹುಡುಕಿ
 
ಬಗ್ಗಿಸಿ ಕೆಳಗಡೆ ಕತ್ತು
ತುತ್ತು ಹುಡುಕುತಿತ್ತು
 
ನೂರಾರು ಮೊಟ್ಟೆ ಇಟ್ಟು
ಎಲ್ಲಾನು ಜನಕ್ಕೆ ಕೊಟ್ಟು
 
ಮಂದೆ ಮರಿಯ ಮಾಡಿ
ದಷ್ಟರಿಂದ ಕಾಪಾಡಿ
 
ಯಾರಿಂದಲೂ ಬೇಡದೆ ತುತ್ತು
ಹೇಗೋ ಬದಕುತಿತ್ತು
 
ಹೀಗೆ ಬದುಕುತಿರಲು
ಗಂಟಲ ಹೊಕ್ಕಿತು ಮುಳ್ಳು
 
ಯಾರು ಕೇಳುವರು ದಃಖ
ಚೂರಿಯ ತಂದನು ಚಿಕ್ಕ
 
ಕತ್ತು ಕಡಿದು ಬಿತ್ತು
ಜನಕ್ಕೆ ಆಯ್ತು ತುತ್ತು.

ಅರಿಯದ ಇರುವೆಯ ಕತೆ
ಕಿಂದರಿ ಜೋಗಿಯ ಕಿನ್ನರಿ ನಾದಕೆ
ಇಲಿಗಳು ಹೊರಟಂತೆ
ಸಾಲಲಿ ಹೊರಟವು ಇರುವೆಯ ಹಿಂಡು
ಸಕ್ಕರೆ ಡಬ್ಬಕ್ಕೆ
 
ಇರುವೆಯ ಹಿಂಡು ಶಿಸ್ತಿನ ದಂಡು
ಹೊರಟರೆ ಸಾಲಲ್ಲಿ
ಪ್ರಾರ್ಥನೆ ಮಾಡುವ ಮಕ್ಕಳು ನಿಲುವರು
ನಾಚುತ ಶಾಲೆಯಲಿ
 
ಸಕ್ಕರೆ ಡಬ್ಬಕೆ ಮುತ್ತಿಗೆ ಹಾಕಿ
ಹೊಯ್ಯಲು ಹವಣಿಸಿರೆ
ಗೀಚಿದಳಮ್ಮನು ಲಕ್ಷ್ಮಣ ರೇಖೆಯ
ಡಬ್ಬದ ಸುತ್ತ ಗೆರೆ
 
ಏನಿದು ಕೋಟೆ! ನಮಗಿದು ಸಾಟೆ
ದಾಟಲು ಗೆರೆಯನ್ನು
ಅರಿಯದೆ ತಿಂದು ಸತ್ತವು ಮುಂದು
ತಲುಪದೆ ಗುರಿಯನ್ನು.
 
ಜಟಕ
ತಟಕ ಪಟಕ
ತಟಕ ಪಟಕ
ಬಂದಿತಣ್ಣ ಜಟಕ
 
ಬಂಡಿ ತುಂಬ
ತುಂಬಿ ಕೊಂಡು
ಮೂಟೆ ಮೂಟೆ ಗುಟಕ
 
ಲಟಕ ಪಟಕ
ಲಟಕ ಪಟಕ
ಹೋಯಿತಣ್ಣ ಜಟಕ
 
ಬಂಡಿ ತುಂಬ
ತುಂಬಿಕೊಂಡು
ರಾಶಿ ರಾಶಿ ಬದುಕ
 

‍ಲೇಖಕರು G

9 August, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading