ಶ್ಯಾಮಲಾ ಮಾಧವ
ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು ಕಲ್ಲು ಕಟ್ಟಿದ ಮೆಟ್ಟಲುಗಳ ನಡುಮಧ್ಯೆ ನೀರಿರುವ ತೋಡುಬಾವಿಗಳು. ಚಬುಕಿನ ಸಸಿಗಳಿಗೂ, ತೆಂಗುಗಳಿಗೂ ನೀರುಣಿಸಲು ಕೊರೆದ ಬಾವಿಗಳವು. ತೋಪಿನಾಚೆ ತೆಂಗುಗಳು ತಲೆದೂಗುವ ಹಿತ್ತಿಲುಗಳಲ್ಲೂ ಮರಳೇ ಭೂಮಿ.
ತೀರದ ಮರಳ ಹಾಸಿನಲ್ಲಿ ನೇರಳೆ ಗಂಟಿಹೂಗಳ ಹಚ್ಚಹಸುರಿನ ಕುರುಚಲು ಬಳ್ಳಿಗಳು. ಚಕ್ರದಂತೆ ಬಿಡಿಸಿಕೊಂಡು ಗಾಳಿಗೆ ಉರುಳುರುಳಿ ಸಮುದ್ರ ಸೇರುವ ಚುಳ್ಳಿಕಂಟಿಯ ಬಳ್ಳಿಗಳು. ಮರಳಲ್ಲೆಲ್ಲ ಹೊಳೆವ ಚಿಪ್ಪುಗಳು, ಶಂಖಗಳು, ಸಮುದ್ರನಾಲಗೆಳು, ನಕ್ಷತ್ರಮೀನುಗಳು.
ಈ ಮರಳಭೂಮಿಗೆ ನಮ್ಮ ಪ್ರಾದೇಶಿಕ ನುಡಿಗಟ್ಟಲ್ಲಿ ಬಾಡಿ (ಹಾಡಿ) ಎನ್ನುವರು. ಆ ಬಾಡಿಗಳಲ್ಲಿ ಮುಖ್ಯವಾಗಿದ್ದುದು ನಮ್ಮ ತಲೆಬಾಡಿ. ನಮ್ಮಮ್ಮನ ಮಾವಂದಿರ ಕೂಡುಕುಟುಂಬದ ಮನೆ. ಮಾವು, ಗೇರು, ಹಲಸು, ನುಗ್ಗೆ, ತೆಂಗು ಇಂತಹ ಮರಗಳ ಸಮೃಧ್ಧಿಯ ನಡುವೆ ವಿಶಾಲ ಅಂಗಣ. ಎದುರಿಗೆ ಚೆಲುವಿನ ಸೋಪಾನಗಳನ್ನೇರಿದರೆ ಪೂರ್ವ ಪಶ್ಚಿಮೋತ್ತರವಾಗಿ ಸಾಗಿದ ಜಗಲಿ. ಒಳಗೆ ವಿಶಾಲ ತೆಣೆ.
ಚೆಲುವಾದ ಬಾಜಿರಕಂಬಗಳುಳ್ಳ ಚಾವಡಿ. ಚಾವಡಿಯ ಬಲಮೂಲೆಯಲ್ಲಿ ದೇವರುಗಳ ಸಾಮ್ರಾಜ್ಯ. ಉಳಿದಂತೆ ಗೋಡೆಯ ಮೇಲೆಲ್ಲ ಅಜ್ಜ, ಅಜ್ಜಿ ಹಾಗೂ ಈ ಕೂಡುಕುಟುಂಬದ ದಂಪತಿಗಳ, ಶಿಶುಗಳ ಫೋಟೋಗಳು. ರಾಜಾ ರವಿವರ್ಮನ ಮನೋಹರ ಕ್ಯಾಲೆಂಡರ್‌ಗಳು. ಅತ್ತಿತ್ತ ಮಲಗುವ ಕೋಣೆಗಳು, ವಿಶಾಲವಾದ ಊಟದ ಕೋಣೆಯಲ್ಲಿ ವಿಶಾಲವಾದ ಊಟದ ಮೇಜು.
ಮಕ್ಕಳಿಗಾಗಿ ಉದ್ದದ ತಗ್ಗಿನ ಬೆಂಚ್. ಉಗ್ರಾಣ. ಅಡಿಗೆಮನೆ. ಹೊರಗೆ ಸದಾ ಚಬುಕಿನ ತರಗು ಉರಿಯುತ್ತಾ ಹೊಗೆಕಾರುವ ಬಚ್ಚಲುಮನೆ. ಎದುರಿಗೆ ಕೈಯೆಟುಕಿನಲ್ಲಿ ಎಂಬಂತೆ ಆಳವಿರದ ಬಾವಿ. ಬಾವಿಯ ಪಕ್ಕ ನೀರಿನ ತೊಟ್ಟಿ. ಅಂಗಳದಂಚಿಗೆ ಹೂತೋಟ.
ಹೊರಗೆ ಅಂಗಳದ ಎಡತುದಿಯಲ್ಲಿ ದೋಣಿ ಪರಿಕರಗಳ ಕೋಣೆ. ಅದರಾಚೆ ಆಫೀಸ್ ಕೋಣೆ. ಮುಂಬೈಯಲ್ಲಿದ್ದ ನಮ್ಮ ದೊಡ್ಡಜ್ಜನ ಮಗ ಜನಾರ್ಧನಣ್ಣ ಮುಂಬೈಯಿಂದ ಬಂದಾಗ ಇಲ್ಲಿ ರೇಡಿಯೋದಲ್ಲಿ ಸಿನೆಮಾ ಹಾಡುಗಳನ್ನು ಕೇಳುತ್ತಾ, ಗುನುಗುತ್ತಾ, ಪಿಕ್ಚರ್ ಪೋಸ್ಟ್ ಪತ್ರಿಕೆಗಳನ್ನು, ಇಂಗ್ಲಿಷ್, ಕನ್ನಡ ಕಾದಂಬರಿಗಳನ್ನೋದುತ್ತಾ ಇರುತ್ತಿದ್ದರು.
ನಾವು ಬಂಧುವರ್ಗದ ಗೆಳತಿಯರು ಹಾಡಿಯಲ್ಲಿ ಅಲೆಯುತ್ತಾ, ಸಮುದ್ರದ ನೀರಿಗಿಳಿದು ಆಡುತ್ತಾ, ಶ್ರೀರಾಮನಿಂದ ಸೋತ ಕಡಲು ಎಂದು ಬರೆದು, ಅಟ್ಟಿಸಿ ಬರುವ ಅಲೆಗಳಿಂದ ತಪ್ಪಿಸಿ ಓಡುತ್ತಾ, ಚಬುಕಿನ ಮರಗಳಿಗೆ ಕಟ್ಟಿದ ಉಯ್ಯಾಲೆಯಲ್ಲಿ ತೂಗುತ್ತಾ, ಅಡಿಗೆ ಮನೆಯಿಂದ ಹುಣಿಸೆಹಣ್ಣು ಲಪಟಾಯಿಸಿ, ಉಪ್ಪು, ಮೆಣಸಿನ ಹುಡಿಯಲ್ಲದ್ದಿ, ಉಂಡೆ ಮಾಡಿ ಕಡ್ಡಿಗೆ ಸಿಕ್ಕಿಸಿ ಮೆಲ್ಲುತ್ತಾ, ಬೇಲಿಯಂಚಿನ ಗಿಡಗಳ ಎಲೆ ಮುರಿದು ತೊಟ್ಟಿನಿಂದ ಸರ ಮಾಡಿ ತೊಟ್ಟು ಸಂಭ್ರಮಿಸುತ್ತಾ ದಿವ್ಯಬಾಲ್ಯಕಾಲದಲ್ಲಿ ನಾವೇ ನಾವಾಗಿ ಮೆರೆಯುತ್ತಿದ್ದೆವು.
ಒಮ್ಮೆ ಮನೆ ಮಕ್ಕಳಿಬ್ಬರು ಅಣ್ಣ ತಂಗಿ, ಕೈ ಕೈ ಹಿಡಿದು ಹಿತ್ತಿಲಲ್ಲಾಡುತ್ತಾ ಹಾಗೇ ಹಾಡಿಗೆ ದಾಟಿ, ತೋಡುಬಾವಿಯ ಬಳಿಗೆ ಹೋಗಿ ಕೆಳಗಿಳಿದು ನೀರಲ್ಲಿ ಮುಳುಗಿದಾಗ, ಪುಣ್ಯವಶಾತ್ ಅತ್ತ ಬಂದ ಪುಣ್ಯಾತ್ಮರೋರ್ವರು ಈ ಚಿಣ್ಣರನ್ನು ರಕ್ಷಿಸಿದ್ದರು.
ಇಂದಿನ ನಮ್ಮ ಮಕ್ಕಳಿಗೆ ಈ ಸುಂದರ ತೋಡುಬಾವಿಗಳನ್ನು ತೋರುವಾ ಎಂದರೆ, ಒಂದಾದರೂ ಅಂತಹ ಬಾವಿ ಉಳಿದಿಲ್ಲ. ಮರಳ ಹಾಸೇ ಇಲ್ಲ; ಬಾಂಧವ್ಯದ ಸವಿಯನ್ನುಣಿಸುತ್ತಿದ್ದ ತಲೆಬಾಡಿ ಮನೆ ಈಗ ಪಾಲು ಪಾಲಾಗಿ ಆ ವಿಶಾಲ ಭೂಮಿಯಲ್ಲಿ ಹಲವು ಮನೆಗಳೆದ್ದಿವೆ. ಅತ್ಯಂತ ಪ್ರಿಯವಾಗಿದ್ದ ವಿನ್ಯಾಸದ ಆ ಮನೆ ಕೆಡವಲ್ಪಟ್ಟು, ಶಾರದಾ ನಿವಾಸ ಚೆಲುವಾಗಿಯೂ, ಭವ್ಯವಾಗಿಯೂ ತಲೆಯೆತ್ತಿ ನಿಂತಿದ್ದರೂ, ಆ ಹಳೆಯ ಮನೆಯ ಚೆಲುವನ್ನು ಇನ್ನೆಲ್ಲಿ ಕಾಣೋಣ?
ಗಾಂಧೀವಾದಿ ಹಿರಿಯಜ್ಜ ಪಿ.ಕೆ.ಉಚ್ಚಿಲ್, ಸ್ವಾತಂತ್ರ್ಯ ಹೋರಾಟಗಾರ ಅಜ್ಜ ಕೆ.ಕೆ.ಉಚ್ಚಿಲ್ ತಮ್ಮ ಇತರ ನಾಲ್ವರು ಸೋದರರಂತೆ ನಮ್ಮನ್ನಗಲಿದ್ದಾರೆ. ಉಪ್ಪಿನ ಸತ್ಯಾಗ್ರಹಕ್ಕಾಗಿ ಮನೆಯಂಗಳದ ತೊಟ್ಟಿಯಲ್ಲೇ ಉಪ್ಪು ಮಾಡಿದ ಶತಾಯುಷಿ ನಾರಾಯಣಜ್ಜ ಒಬ್ಬರೇ ಈಗುಳಿದಿದ್ದಾರೆ.
ಅಜ್ಜಂದಿರ ಓರ್ವಳೇ ಸೋದರಿಯ ಮಗಳು, ಶಾರದ ಚಿಕ್ಕಮ್ಮನನ್ನು ವರಿಸಿದವರು, ನಮ್ಮ ಒಲಿಂಪಿಯನ್ ಫುಟ್ ಬಾಲರ್ ಸಂಜೀವ ಕೆ.ಉಚ್ಚಿಲ್. ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತ ತಂಡದ ಗೋಲ್ ಕೀಪರ್ ಆಗಿ ಮಿಂಚಿದವರು. ಒಲಿಂಪಿಕ್ಸ್ಗಾಗಿ, ಮೊದಲೇ ದಿನ ನಿಶ್ಚಯವಾಗಿದ್ದ ತನ್ನ ಮದುವೆಯನ್ನೂ ಮುಂದಕ್ಕೆ ಹಾಕಿದವರು.
ನ್ಯಾಶನಲ್ ಛಾಂಪಿಯನ್‌ಶಿಪ್‌ಗಾಗಿ ಹನ್ನೆರಡು ಬಾರಿ ಸಂತೋಷ್ ಟ್ರಾಫಿ ಮ್ಯಾಚ್‌ಗಳನ್ನಾಡಿದ ಸಂಜೀವ ಚಿಕ್ಕಪ್ಪ, ತಮ್ಮ ಮಗನನ್ನು ಸಂತೋಷ್ ಎಂದೇ ಹೆಸರಿಸಿದವರು. ವೆಸ್ಟರ್ನ್ ಇಂಡಿಯಾ ಫುಟ್‌ಬಾಲ್ ಅಸೋಸಿಯೇಶನ್, ನ್ಯಾಶನಲ್ ಗೇಮ್ಸ್, ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್,
ಬಿಪಿನ್ ಮೆಮೊರಿಯಲ್ ಹೀಗೆ ಹಲವು ಸಂಸ್ಥೆಳಲ್ಲಿ ಮ್ಯಾನೇಜರ್ ಹಾಗೂ ಕೋಚ್ ಆಗಿ ಆಟವನ್ನು ಆಟಗಾರರನ್ನು ಬೆಳೆಸಿದ ಚಿಕ್ಕಪ್ಪ, ೨೦೦೬ ಫೆಬ್ರವರಿಯಲ್ಲಿ ಕೊನೆಯುಸಿರೆಳೆದರು.
ಈಗ ನಮ್ಮೂರಲ್ಲಿ ಸಮುದ್ರದ ಮೊರೆತ ರೌರವ ನಾದವೇ ಆಗಿದೆ. ಮರಳ ಹಾಸಿನ, ಚಬುಕು, ತೆಂಗುಗಳ ತೋಪಿನ, ಕುರುಚಲು ಬಳ್ಳಿಗಳ, ಚಿಪ್ಪು, ಶಂಖದ ಸಿರಿಯ ಅವಶೇಷವೂ ಅಲ್ಲಿಲ್ಲ. ಮೊರೆ ಮೊರೆದು ಉಕ್ಕಿ ಬಂದ ಕಡಲು ಎಲ್ಲವನ್ನೂ ಕಬಳಿಸಿದೆ. ಎಷ್ಟೋ ಮನೆಗಳು, ಚಬುಕಿನ ತೋಪುಗಳು, ತೆಂಗಿನ ತೋಟಗಳು ಕಡಲ ಗರ್ಭ ಸೇರಿವೆ.
ಏರಿ ಬರುವ ತೆರೆಗಳು ತೆಂಗುಗಳ ಬುಡವನ್ನು ಸುತ್ತುವರಿದು, ಹಾಗೇ ಎತ್ತಿಕೊಂಡೊಯ್ವಂತೆ ಒಯ್ಯುವ ಚಂದವನ್ನು ನೋಡಬೇಕು. ಬಡಗಿನಲ್ಲಿ ಸೋಮನಾಥನ, ತೆಂಕಿನಲ್ಲಿ ವಿಷ್ಣುಮೂರ್ತಿಯ ಬೆಟ್ಟದ ಪಾದ ತೊಳೆವಂತಿದ್ದ ಕಡಲು ಈಗ ಅದು ಸಾಲದೆಂಬಂತೆ ಮುನ್ನುಗ್ಗುತ್ತಿರುವ ಪರಿ ವಿಭ್ರಮೆಯನ್ನೇ ಹುಟ್ಟಿಸುವಂತಿದೆ. ಹುಲುಮನುಜ ತನ್ನನ್ನು ತಡೆಯಲೆಂದು ತಂದು ಸುರಿದ ಬಂಡೆಗಳ ರಾಶಿಯನ್ನೂ ಸ್ವಾಹಾ ಮಾಡಿದೆ. ಪ್ರಕೃತಿಯನ್ನು ಮೀರಿದ ಶಕ್ತಿ ಇನ್ನಿಲ್ಲವೆಂಬ ಸತ್ಯ ನಿಚ್ಚಳವಾಗಿದೆ.
ಸುಂದರ ಬರಹ
ಥ್ಯಾಂಕ್ಯೂ ಅವಧಿ. ಮರೆಯಾಗುತ್ತಿರುವ ಇತಿಹಾಸಕ್ಕೆ ಬೆಳಕು ನೀಡಿದಿರಿ.
ಶ್ಯಾಮಲ ಮೇಡಮ್ ಅವರ ನೆನಪು ತರಂಗಗಳಲಿ ಓದುಗರೂ ತೇಲುವಂತಹ ಸುಂದರ ಕಥನ ಶೈಲಿ… ಅದ್ಭುತ ಎನಿಸುವಂತಹ ನೆನಪಿನಾಳದ ಕಥಾನಕದ ನಿರೂಪಣೆ….