ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

#Me Too ಈ ರೀತಿ ಯೋಚಿಸಲು ಒಂದು ವೇದಿಕೆಯನ್ನು ನಿರ್ಮಿಸಿದೆ

ನಾ ದಿವಾಕರ 

ಶಬರಿ ಮಲೆಯ ಅಯ್ಯಪ್ಪ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಸುತ್ತ ನಡೆಯುತ್ತಿರುವ ಚರ್ಚೆ ಮತ್ತು ಸಂವಾದ ಭಾರತದ ಸಾಮಾಜಿಕ ವಲಯದಲ್ಲಿ ಅಡಗಿದ್ದ ಎಲ್ಲ ಹೊಲಸುಗಳನ್ನೂ ಒಮ್ಮೆಲೆ ಹೊರ ಹಾಕುತ್ತಿದೆ.

ಇದರೊಂದಿಗೆ ಕೆಲವು ಬಾಲಿವುಡ್ ನಟಿಯರು ತಮ್ಮ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ವಿರುದ್ಧ ದನಿ ಎತ್ತಿರುವುದು ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿದ್ದರೂ ಮೇಲ್ನೋಟಕ್ಕೆ ಕಾಣದಂತಿದ್ದ ಪುರುಷ ಪ್ರಧಾನ ಧೋರಣೆ ಮತ್ತು ಸಾಮಾಜಿಕ ಕ್ಲೇಷವನ್ನು ಒಮ್ಮೆಲೆ ಹೊರಹಾಕಿದೆ.

ಈ ಎರಡೂ ವಿದ್ಯಮಾನಗಳು ಕೇವಲ ಮಹಿಳೆಗೆ ಸಂಬಂಧಿಸಿದ್ದು ಎನ್ನುವ ಧೋರಣೆಯೇ ನಮ್ಮ ಸಮಾಜೋ ಸಾಂಸ್ಕೃತಿಕ ಅಧಃಪತನಕ್ಕೆ ಕನ್ನಡಿ ಹಿಡಿದಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಮುದ್ರಣ ಮಾಧ್ಯಮಗಳಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ವಿವಾದಗಳನ್ನು ಕುರಿತು ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ಮಹಿಳೆಯನ್ನು ಮತ್ತಷ್ಟು ರಕ್ಷಣಾ ವಲಯಕ್ಕೆ ನೂಕುತ್ತಿರುವುದು ಸ್ಪಷ್ಟ. ಬಹುಶಃ ಭಾರತದ ಮಹಿಳಾ ಚಳುವಳಿಯಲ್ಲಿ ಇಂತಹ ಒಂದು ಅಗ್ನಿ ಪರೀಕ್ಷೆ ಎಂದೂ ಎದುರಾಗಿರಲಿಲ್ಲ ಎನ್ನಬಹುದು.

ನಿರ್ಭಯ ಪ್ರಕರಣದ ಸಂದರ್ಭದಲ್ಲಿ ಚರ್ಚೆಗೊಳಗಾದ ಅತ್ಯಾಚಾರ ಮತ್ತು ಖೈರ್ಲಾಂಜಿ, ಅಯೋಧ್ಯಾ, ಮುಝಫರನಗರ ಮುಂತಾದ ಘಟನೆಗಳ ಸಂದರ್ಭದಲ್ಲಿ ಎದುರಾಗಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ಇವೆಲ್ಲವೂ ಮಹಿಳಾ ಕೇಂದ್ರಿತವಾಗಿದ್ದವು. ಆದರೆ ಮೀ ಟೂ ಮತ್ತು ಶಬರಿ ಮಲೆ ಪ್ರಕರಣಗಳು ಮೂಲತಃ ಮಾನವ ಹಕ್ಕುಗಳ ಪ್ರಶ್ನೆಯಾಗಿ ಪರಿಣಮಿಸಿವೆ. ನಾಸ್ತಿಕರಿಗೆ ಶಬರಿ ಮಲೆಯ ಗೊಡವೆಯೇಕೆ ಎಂದು ಪ್ರಶ್ನಿಸುವ ವಿತಂಡವಾದಗಳನ್ನು ಬದಿಗೊತ್ತಿ, ಮೀ ಟೂ ಚಳುವಳಿ ಕೇವಲ ಮೇಲ್ವರ್ಗದ ಸೆಲೆಬ್ರಿಟಿಗಳ ಪ್ರಚಾರ ಎಂದು ಹೀಗಳೆಯುವ ವಿಕೃತಿಗಳನ್ನು ಬದಿಗೊತ್ತಿ ನೋಡಿದಾಗ ಈ ಎರಡೂ ವಿದ್ಯಮಾನಗಳನ್ನು ಸಮಗ್ರ ದೃಷ್ಟಿಕೋನದಿಂದ ನೋಡಲು ಸಾಧ್ಯ.

ಮೀ ಟೂ ಚಳುವಳಿಯ ಸಂದರ್ಭದಲ್ಲಿ ಯಾರು ಯಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ? ಆರೋಪಕ್ಕೊಳಗಾದವರು ವಿಶ್ವಾಸಾರ್ಹರೇ ? ಆರೋಪ ಮಾಡುತ್ತಿರುವವರು ವಿಶ್ವಾಸಾರ್ಹರೇ ? ಎಂದೋ ನಡೆದ ಘಟನೆಯನ್ನು ಇಂದೇಕೆ ಹೊರತರಲಾಗುತ್ತಿದೆ ? ಇದು ವ್ಯವಸ್ಥಿತ ಪಿತೂರಿಯೇ ಅಥವಾ ಪ್ರಚಾರದ ಗೀಳೇ ? ಈ ಎಲ್ಲ ಕ್ಲೀಷೆಗಳನ್ನು ಬದಿಗೊತ್ತಿ ಈ ಆರೋಪಗಳು ಏಕೆ ಒಮ್ಮೆಲೆ ಹೊರಬರುತ್ತಿವೆ ಎಂದು ಯೋಚಿಸುವುದರಿಂದ ಸಮಸ್ಯೆಯ ಮೂಲವನ್ನು ಗ್ರಹಿಸುವುದು ಸುಲಭ.

ಒಂದು ಸಾಂಪ್ರದಾಯಿಕ ಸಮಾಜದಲ್ಲಿ ಸ್ಥಾಪಿತ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳುವ ಸಂಸ್ಕೃತಿ ಮತ್ತು ಪರಂಪರೆ ಸಹಜವಾಗಿಯೇ ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ. ಈ ಜೀವಂತಿಕೆಯನ್ನು ಉಳಿಸಿಕೊಳ್ಳಲು ಪ್ರಭುತ್ವ ಮತ್ತು ಆಳುವ ವರ್ಗಗಳು, ಸ್ಥಾಪಿತ ವ್ಯವಸ್ಥೆಯನ್ನು ಸಮರ್ಥಿಸುವ ಯಥಾಸ್ಥಿತಿವಾದಿಗಳು ಹಾಗೂ ಸಂಪ್ರದಾಯವಾದಿ ಮನಸುಗಳು ಸತತ ಪ್ರಯತ್ನ ಮಾಡುತ್ತಲೇ ಇರುತ್ತವೆ. ಭಾರತೀಯ ಸಮಾಜದಲ್ಲಿ ಮಹಿಳೆಯ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕುರಿತ ಯಾವುದೇ ಪ್ರಶ್ನೆ ಉದ್ಭವಿಸಿದರೂ ಈ ಸ್ಥಾಪಿತ ವ್ಯವಸ್ಥೆಯ ಪ್ರಬಲ ದನಿ ಎಲ್ಲ ಪ್ರತಿರೋಧದ ದನಿಗಳನ್ನೂ ಅಡಗಿಸಿ ತನ್ನ ಪಾರಮ್ಯ ಮೆರೆಯುವುದನ್ನು ಎಲ್ಲ ಸಂದರ್ಭಗಳಲ್ಲೂ ಕಾಣಬಹುದು. ದುರಂತ ಎಂದರೆ ಮಹಿಳಾ ಸಂವೇದನೆಯ ಪ್ರಶ್ನೆ ಉದ್ಭವಿಸಿದಾಗಲೆಲ್ಲಾ ಅನ್ಯ ಅಸ್ಮಿತೆಗಳು ಧುತ್ತೆಂದು ಪ್ರತ್ಯಕ್ಷವಾಗಿ ವಿಷಯವನ್ನೇ ಹಗುರ ಮಾಡಿಬಿಡುವ ಪರಂಪರೆಯನ್ನು ನಾವು ಕಾಣುತ್ತಿದ್ದೇವೆ. ಇದು ಪಿತೃ ಪ್ರಧಾನ ವ್ಯವಸ್ಥೆಯ ವ್ಯವಸ್ಥಿತ ಹುನ್ನಾರವೋ ಅಥವಾ ಹೆಣ್ತನದ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸದ ಶೂನ್ಯ ಸಂವೇದನೆಯ ಸಂಕೇತವೋ ಯೋಚಿಸಬೇಕಿದೆ.

ಪುಟ್ಟಣ್ಣ ಕಣಗಾಲ್ ಅವರ ಧರ್ಮಸೆರೆ ಚಿತ್ರದಲ್ಲಿ ಒಂದು ದೃಶ್ಯದ ಸಂಭಾಷಣೆ ಇಲ್ಲಿ ನೆನಪಾಗುತ್ತದೆ. ಮಾತು ಬಾರದ ನಾಯಕಿಗೆ (ಆರತಿ) ಉಪದ್ರವ ನೀಡಲೆಂದೇ ಇರುವ ವ್ಯಕ್ತಿ (ಮುಸುರಿ ಕೃಷ್ಣಮೂರ್ತಿ) ಕೆಲವು ನಿಮಿಷಗಳ ಕಾಲದ ಅವಳ ಬಳಿ ಮಾತನಾಡುತ್ತಲೇ ಇರುತ್ತಾನೆ. ಅವಳು ಮೌನವಾಗಿಯೇ ಎಲ್ಲವನ್ನೂ ಕೇಳಿಸಿಕೊಂಡು “ನನಗೆ ಮಾತು ಬರುವುದಿಲ್ಲ ” ಎಂದು ಸಂಜ್ಞೆ ಮಾಡುತ್ತಾಳೆ. ಆಗ ಮುಸುರಿ ತಮ್ಮದೇ ಆದ ಶೈಲಿಯಲ್ಲಿ “ಮೂಕಿ ಅಂತ ಮೊದಲೇ ಹೇಳಬಾರದೇ ” ಎಂದು ಹೀಯಾಳಿಸುತ್ತಾರೆ. ಎಷ್ಟೋ ವರ್ಷಗಳ ಹಿಂದೆ ತಮ್ಮ ಸಾಮಾಜಿಕ ಪರಿಸರದ ಒತ್ತಡಗಳಿಗೆ ಮಣಿದು ತಮ್ಮ ಮೇಲಿನ ದೌರ್ಜನ್ಯಗಳನ್ನು ಅದುಮಿಟ್ಟುಕೊಂಡ ಮಹಿಳೆಯರು ಹಠಾತ್ತನೆ ಒಂದು ವೇದಿಕೆ ಸೃಷ್ಟಿಯಾದ ಕೂಡಲೇ ತಮ್ಮ ವೇದನೆಯನ್ನು ಬಹಿರಂಗಪಡಿಸುತ್ತಿರುವುದನ್ನು ಈ ದೃಶ್ಯದೊಡನೆ ತುಲನಾತ್ಮಕವಾಗಿ ನೋಡಿದರೆ ನಮ್ಮ ಪುರುಷ ಸಮಾಜದ ಮನಸ್ಥಿತಿಯ ಅರಿವಾಗುತ್ತದೆ.

ಮೀ ಟೂ ಆಂದೋಲನದಲ್ಲಿ ಆರೋಪ ಮಾಡುತ್ತಿರುವವರು ಯಾರು ಎನ್ನುವುದೇ ಬಹಳಷ್ಟು ಚರ್ಚೆಗಳ ಕೇಂದ್ರ ವಿಷಯವಾಗಿರುವುದೇ ನಮ್ಮ ಸಮಾಜ ಶೂನ್ಯ ಸಂವೇದನೆಯತ್ತ ಸಾಗುತ್ತಿರುವುದಕ್ಕೆ ಸಾಕ್ಷಿ. ಇಲ್ಲಿ ಆರೋಪಿ ಯಾರು, ಸಂತ್ರಸ್ತರು ಯಾರು ಎನ್ನುವ ಪ್ರಶ್ನೆ ಅಪ್ರಸ್ತುತ. ಏಕೆಂದರೆ ಹಲವು ವರ್ಷಗಳ ಹಿಂದೆ ನಡೆದ ದೌರ್ಜನ್ಯ, ಕಿರುಕುಳ, ಚಿತ್ರಹಿಂಸೆ ಅಥವಾ ಅತ್ಯಾಚಾರವನ್ನು ಮನದಾಳದಲ್ಲೇ ಹುಗಿದಿಟ್ಟುಕೊಂಡು ತನ್ನ ಅಭಿವ್ಯಕ್ತಿಗೆ ಒಂದು ಭೂಮಿಕೆ ಸಿದ್ಧವಾದ ಸಂದರ್ಭದಲ್ಲಿ ಹೊರಗೆಡಹುವ ಮಹಿಳೆಯ ಮನದಾಳದ ವೇದನೆಗೆ ಶಿಕ್ಷೆ ಪರಿಹಾರವಲ್ಲ. ಯಾವುದೇ ಸಾಕ್ಷ್ಯಾಧಾರಗಳಿಲ್ಲದ ತನ್ನ ಆರೋಪಗಳಿಗೆ ನ್ಯಾಯಾಂಗವೂ ಮನ್ನಣೆ ನೀಡುವುದಿಲ್ಲ ಎಂಬ ವಾಸ್ತವವನ್ನು ಪ್ರತಿಯೊಬ್ಬ ನೊಂದ ಮಹಿಳೆಯೂ ಅರಿತಿರುತ್ತಾಳೆ. ಆದರೂ ಆರೋಪಗಳು ಹೊರಬರುತ್ತಲೇ ಇವೆ. ಈ ಆರೋಪಗಳು ವ್ಯಕ್ತಿಗಳಿಗಿಂತಲೂ ನಮ್ಮ ಸುತ್ತಲಿನ ಸಮಾಜ ಮತ್ತು ಸ್ಥಾಪಿತ ವ್ಯವಸ್ಥೆಯ ಹೃದಯಶೂನ್ಯತೆಯನ್ನು ಪ್ರಶ್ನಿಸುವುದೇ ಹೆಚ್ಚು. ಹಾಗಾಗಿಯೇ ಸ್ಥಾಪಿತ ವ್ಯವಸ್ಥೆಯ ಸಂರಕ್ಷಕರು ಹೌಹಾರುತ್ತಾರೆ. ಇದೇನು ಮಹಾ ಅಲ್ಲಿ ನೋಡಿ ಎನ್ನುವ ಕುತರ್ಕದ ಮಾರ್ಗಗಳನ್ನು ಅನುಸರಿಸುತ್ತಾರೆ.

ಹಾಗಾಗಿಯೇ ಸಮಾಜದ ಆಂತರಿಕ ಹುಳುಕುಗಳನ್ನು ಹೊರತೆಗೆಯುವ ಯಾವುದೇ ಪ್ರಯತ್ನಕ್ಕೆ ವಿರೋಧ, ಪ್ರತಿರೋಧ ಹೆಚ್ಚಾಗಿರುತ್ತದೆ. ಚರಿತ್ರೆಯ ಪುಟಗಳನ್ನೇ ಒಮ್ಮೆ ತಿರುವಿ ಹಾಕಿದರೆ ಇಂತಹ ಯಾವುದೇ ಪ್ರಯತ್ನಕ್ಕೆ ನೋಯಿಸುವವರು ಮಾತ್ರವೇ ಅಲ್ಲದೆ ನೊಂದವರೂ ಸಹ ಪ್ರತಿರೋಧ ವ್ಯಕ್ತಪಡಿಸುವುದನ್ನು ಗುರುತಿಸಬಹುದು. ಸ್ಥಾಪಿತ ವ್ಯವಸ್ಥೆ ಮತ್ತು ಆ ವ್ಯವಸ್ಥೆಯ ಮೌಲ್ಯಗಳ ಪಾರಮ್ಯವನ್ನು ಒಪ್ಪಿಕೊಳ್ಳುವ, ಸಮರ್ಥಿಸಿಕೊಳ್ಳುವ ಮನಸುಗಳಿಗೆ ವ್ಯವಸ್ಥೆಯನ್ನು ನಿಯಂತ್ರಿಸುವ ಶಕ್ತಿಗಳ ಕ್ರೌರ್ಯ ಮತ್ತು ದೌರ್ಜನ್ಯಗಳು ಸ್ವೀಕಾರಾರ್ಹ ಅನಿವಾರ್ಯತೆಗಳಾಗಿಬಿಡುತ್ತವೆ. ಇಂತಹ ವಿಷವರ್ತುಲದಲ್ಲಿ ಸಾಮಾಜಿಕ ನ್ಯಾಯ, ಮಾನವ ಸಂವೇದನೆ ಮತ್ತು ಮೌಲ್ಯಯುತ ಸಮಾಜಕ್ಕಾಗಿ ತುಡಿಯುವ ಮನಸುಗಳಿಗೆ ವ್ಯವಸ್ಥೆಯ ಪರಿವರ್ತನೆಯ ಒಂದು ಕಿಡಿ ಅವಶ್ಯಕತೆ ಇರುತ್ತದೆ. ಈ ಕಿಡಿಯನ್ನು ಸಮಷ್ಟಿಯ ನೆಲೆಯಲ್ಲಿ ನೋಡಿದಾಗ ಇದು ವ್ಯವಸ್ಥೆಯ ಅಂತರಾಳವನ್ನು ಕದಡುವ ಅಸ್ತ್ರದಂತೆ ಕಾಣುತ್ತದೆ. ವ್ಯಷ್ಟಿ ನೆಲೆಯಲ್ಲಿ ನೋಡಿದಾಗ ವ್ಯಕ್ತಿಗತ ಸಮಸ್ಯೆ ಎಂದು ಕಾಣುತ್ತದೆ. ಸಮಗ್ರ ದೃಷ್ಟಿಕೋನ ಮತ್ತು ಸಂವೇದನೆ ಇಲ್ಲದ ಒಂದು ಸಮಾಜದಲ್ಲಿ ಈ ರೀತಿ ವ್ಯಷ್ಟಿ ನೆಲೆಯಲ್ಲಿ ನೋಡುವ ಪರಂಪರೆ ಗಟ್ಟಿಯಾಗಿ ಬೇರೂರಿರುತ್ತದೆ.ಹಾಗಾಗಿಯೇ ಪರಿವರ್ತನೆಯ ಕೂಗು ವಿದ್ರೋಹದಂತೆ ಕಾಣತೊಡಗುತ್ತದೆ. ಇಲ್ಲಿ ಶೋಷಣೆಗಿಂತಲೂ ಶೋಷಿತರ ಸುತ್ತ ನಡೆಯುವ ಸಂಕಥನಗಳು ಈಗಾಗಲೇ ಕವಲು ಹಾದಿಯಲ್ಲಿರುವ ಸಮಾಜದ ದಿಕ್ಕು ತಪ್ಪಿಸುತ್ತದೆ. ಮೀ ಟೂ ಚಳುವಳಿಯ ಸಂದರ್ಭದಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು.

ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಗಳು ಏನೇ ಇರಲಿ , ಇದರ ಸತ್ಯಾಸತ್ಯತೆಗಳು ಏನೇ ಇರಲಿ, ಈ ವಿವಾದದ ಸುತ್ತ ನಡೆದಿರುವ ಚರ್ಚೆಗಳು ನೈತಿಕತೆಯ ಚೌಕಟ್ಟನ್ನು ದಾಟಿ ನಡೆದಿರುವುದು ಮಾತ್ರ ಸತ್ಯ. ಶ್ರುತಿ ವಿರುದ್ಧ ಕೇಳಿಬರುತ್ತಿರುವ ಆಕ್ಷೇಪಗಳು, ಸರ್ಜಾ ಪರ ಕೇಳಿಬರುತ್ತಿರುವ ದನಿಗಳು ಕನ್ನಡ ಚಿತ್ರ ರಂಗದ ನೈತಿಕ ಅಧಃಪತನದ ಸಂಕೇತವಾಗಿ ಕಾಣುತ್ತಿದೆ. ಮೀ ಟೂ ಅಭಿಯಾನ ಕೇವಲ ಮೇಲ್ವರ್ಗದ ಮಹಿಳೆಯರ ಪ್ರಚಾರ ತಂತ್ರ ಎನ್ನುತ್ತಾ, ನಿತ್ಯ ದೌರ್ಜನ್ಯ ಎದುರಿಸುತ್ತಿರುವ ಅಸಂಖ್ಯಾತ ಅಸಹಾಯಕ ಮಹಿಳೆಯರ ಬಗ್ಗೆ ಏಕೆ ದನಿ ಎತ್ತುವುದಿಲ್ಲ ಎಂದು ಪ್ರಶ್ನಿಸುವವರು ಒಂದು ಅಂಶವನ್ನು ಅರಿತರೆ ಒಳಿತು. ಮೀ ಟೂ ವ್ಯಕ್ತಿಗತ ಅಭಿಯಾನವಲ್ಲ. ಇದನ್ನು ಆರಂಭಿಸಿದ್ದು ಒಬ್ಬ ವ್ಯಕ್ತಿಯೇ ಆದರೂ ಅಭಿಯಾನದ ಆಶಯಗಳಿಗೆ ಗೋಡೆಗಳಿಲ್ಲ. ಒಂದು ವೇಳೆ ಶ್ರುತಿ ಹರಿಹರನ್ ಅಥವಾ ಮತ್ತಾವುದೇ ನಟಿ ಈ ಅಭಿಯಾನವನ್ನು ತಮ್ಮ ವ್ಯಕ್ತಿಗತ ಪ್ರಚಾರಕ್ಕಾಗಿ ಬಳಸಿಕೊಂಡರೆ ಅದು ತಪ್ಪಾಗುತ್ತದೆ. ಹಾಗೆಂದ ಮಾತ್ರಕ್ಕೆ ಅವರ ಆರೋಪಗಳನ್ನೇ ಸಾರಾಸಗಟಾಗಿ ನಿರಾಕರಿಸುವುದು ಪುರುಷ ಸಮಾಜದ ವಿಕೃತಿ ಮತ್ತು ಶೂನ್ಯ ಸಂವೇದನೆಯ ಸಾಕ್ಷಿಯಾಗುತ್ತದೆ.

ವಿಪರ್ಯಾಸವೆಂದರೆ ಸಾಮಾಜಿಕ ತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಕೆಲವು ಮಹಿಳೆಯರೂ ಸಹ ಚಿತ್ರ ನಟಿಯವ ಚಾರಿತ್ರ್ಯವನ್ನೇ ಪ್ರಶ್ನಿಸುವಂತಹ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಇದೆಲ್ಲವೂ ಸಹಜ, ಸರ್ವೇ ಸಾಮಾನ್ಯ ಎಂದು ಹೇಳುವ ಮೂಲಕ ಮಹಿಳೆಯರ ಸಹನೆಯ ಸಾರ್ವತ್ರಿಕತೆಯನ್ನು ಪುರುಷರ ಅಹಮಿಕೆಗೆ ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಕೇವಲ ಚಿತ್ರ ನಟಿಯರ ಪ್ರಶ್ನೆ ಅಲ್ಲ. ಇದು ಮೂಲತಃ ಹೆಣ್ತನದ ಪ್ರಶ್ನೆ. ಹೆಣ್ತನವನ್ನು ಅಪಮಾನಕ್ಕೊಳಪಡಿಸುವ ಮೂಲಕ ಸಮಾಜೋ ಸಾಂಸ್ಕೃತಿಕ ಅಧಿಪತ್ಯ ಸಾಧಿಸುವ ಪಿತೃ ಪ್ರಧಾನ ವ್ಯವಸ್ಥೆಯ ವಿರುದ್ಧ ಎತ್ತಿರುವ ಪ್ರಶ್ನೆ. “ನಾನು ಮನಸ್ಸು ಮಾಡಿದ್ದರೆ ನಿನ್ನನ್ನು ಏನು ಬೇಕಾದರೂ ಮಾಡಬಹುದಿತ್ತು ಆದರೆ ನಾನು ಅಂಥವನಲ್ಲ” ಎಂದು ಸಿನಿಮಾ ಪರದೆಯ ಮೇಲೆ ಹೀರೋ ಹೇಳುವಾಗ ಸಿಳ್ಳೆ ಹೊಡೆಯಲಾಗುತ್ತದೆ. ಆದರೆ ಇಂತಹ ಸಂಭಾಷಣೆ (ಡಾ ರಾಜ್ ಚಿತ್ರದಲ್ಲೂ ಇಂತಹ ಸಂಭಾಷಣೆ ಇರುತ್ತಿತ್ತು) ಮಹಿಳೆಯನ್ನು ಅಧೀನಳನ್ನಾಗಿಯೇ ನೋಡುವ ಸಮಾಜದ ಒಂದು ವಿಕೃತ ದೃಷ್ಟಿಕೋನ ಎನ್ನುವುದನ್ನು ಪರದೆಯಿಂದಾಚೆಗಿನ ಪ್ರಜ್ಞಾವಂತ ಸಮಾಜ ಯೋಚಿಸಬೇಕಲ್ಲವೇ ?

ಮೀ ಟೂ ಈ ರೀತಿ ಯೋಚಿಸಲು ಒಂದು ವೇದಿಕೆಯನ್ನು ನಿರ್ಮಿಸಿದೆ. ಇದು ಎಲ್ಲೆಡೆ ಪಸರಿಸಿದರೆ ಅಸಹಾಯಕ ಮಹಿಳೆಯರಲ್ಲಿ ಎಂತಹ ಆತ್ಮಸ್ಥೈರ್ಯ ಮೂಡಿಸುತ್ತದೆ, ಪುರುಷ ಸಮಾಜದಲ್ಲಿ ಎಂತಹ ಎದೆ ನಡುಕ ಹುಟ್ಟಿಸುತ್ತದೆ ಎಂದು ಯೋಚಿಸಬಹುದಲ್ಲವೇ ? ಇಲ್ಲಿ ಸೈದ್ಧಾಂತಿಕ, ರಾಜಕೀಯ ಪ್ರಶ್ನೆ ಇಲ್ಲ ಆದರೆ ತಾತ್ವಿಕ ಪ್ರಶ್ನೆಗಳಿವೆ. ಈ ತಾತ್ವಿಕ ಪ್ರಶ್ನೆಗಳ ಸುತ್ತ ಚರ್ಚೆ ನಡೆದಲ್ಲಿ ಮಾತ್ರ ನಮ್ಮ ಸುತ್ತಲಿನ ಸಮಾಜ ಪ್ರಬುದ್ಧತೆ ಪಡೆದಿದೆ ಎಂದು ಭಾವಿಸಬಹುದು. ಇಲ್ಲವಾದಲ್ಲಿ ನಾವು ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ ಎಂಬ ಹತಾಶೆಯಿಂದಲೇ ಮುನ್ನಡೆಯಬೇಕಾಗುತ್ತದೆ.

‍ಲೇಖಕರು Avadhi

26 October, 2018

1 Comment

  1. Suma KB

    If Arjun Sarja is a real gentleman he should immediately apologize Shruti for knowingly or unknowingly demeaning her modesty as a woman.He will become a real hero then. The statement he made that several men are behind her allegation is a mirror to his male chauvinistic attitude. His followers should condemn him for this attitude and threaten to boycott his movies. That is the ideal society I am praying for.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading