ಆ ಕಥೆಗಳಲ್ಲೆಲ್ಲ ಕೃಷ್ಣನ ಪ್ರೀತಿಯ ಆಳವಿದೆ..


ಅದೊಂದು ಅಚ್ಚರಿಯ ಬೆಳಗು!

ಇಡಿಯ ಮಥುರೆಯೇ ಅಂದು ಹೊಸದೊಂದು ರಂಗಿನಲ್ಲಿ ಮಿಂದೆದ್ದಂತಿತ್ತು.

ವೃದ್ಧದೊರೆ ಉಗ್ರಸೇನನ ಬಂಧನದೊಂದಿಗೆ ಬಂಧಿಯಾದ ಕನಸುಗಳೆಲ್ಲ ಅಂದು ಬಿಡುಗಡೆಗೊಂಡು ಪುರದ ತುಂಬೆಲ್ಲಾ ಹಾರಾಡುತಿವೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಎಲ್ಲರ ಬಾಯಲ್ಲೂ ಅವನದೇ ಸುದ್ಧಿ. ಆ ನೀಲ ಮೈಬಣ್ಣದ, ಕಪ್ಪು ಬಟ್ಟಲುಗಣ್ಣಿನ ಹುಡುಗನ ಆಗಮನಕ್ಕೆಂದು ಇಡಿಯ ಮಧುರೆಯೇ ಕಣ್ಣಾಗಿ ಕಾಯುವಂತಿತ್ತು. ಬೃಂದಾವನದ ಅವನ ರಾಸಲೀಲೆಯ ಕಂಪು ಮಧುರೆಯವರೆಗೂ ಹರಡಿತ್ತು. ಹಾಗಾಗಿ ಮಧುರೆಯ ಹರೆಯದ ಹುಡುಗಿಯರ ನಡಿಗೆಗೆ ಹೊಸದೊಂದು ಲಾಸ್ಯ ಬೆಸೆದುಕೊಂಡಿತ್ತು. ನಾಳೆ ತಾವು ಧರಿಸಬೇಕಾದ ಧಿರಿಸಿನ ಬಗೆಗಿನ ಚರ್ಚೆಗೆ ಕೊನೆಮೊದಲೆಂಬುದಿರಲಿಲ್ಲ.

ಬರಿಯ ಹುಡುಗಿಯರಲ್ಲ. ತರುಣ ಕಣ್ಣುಗಳಲ್ಲೂ ನೂರಾರು ಕನಸುಗಳು ತುಂಬಿ ತುಳುಕುತ್ತಿದ್ದವು. ಕಣ್ಣನ ಬಾಲ್ಯದ ಸಾಹಸ ಗಾಥೆಗಳು ಅವರನ್ನು ಹುಚ್ಚೆಬ್ಬಿಸಿದ್ದವು. ನಿರ್ವೀರ್ಯರಂತೆ ಕಾಲ ತಳ್ಳುತ್ತಿದ್ದ ಅವರ ಮನಸ್ಸಿನಲ್ಲೊಂದು ಹೊಸಹುಮ್ಮಸ್ಸು ಮೊಳಕೆಯೊಡೆದಿತ್ತು. ಇನ್ನು ಊರಿನ ತುಂಬಿರುವ ಹೆಂಗಸರಿಗೋ ಆ ಸುಂದರ ರೂಪಿನ ಹುಡುಗನನ್ನು ಕಾಣುವ ತವಕ. ದೇವಕಿಯ ಕಷ್ಟವೆಲ್ಲ ತಮ್ಮದೇ ಎಂದುಕೊಂಡು ಮೌನವಾಗಿ ಅವಳ ನೋವಿಗೆ ಮರುಗಿದವರು ಅವರು. ಅವಳ ಪ್ರತಿಯೊಂದು ಮಗುವನ್ನು ಕಂಸ ಬಂಡೆಗಲ್ಲಿಗೆ ಅಪ್ಪಳಿಸಿದಾಗಲೂ ಅವರೆಲ್ಲರ ಎದೆ ನಡುಗಿದೆ. ಒಡಲಿನಲ್ಲಿ ಹೇಳಲಾರದ ಸಂಕಟವೊಂದು ಬೆರಳಾಡಿಸಿದೆ. ಅಷ್ಟೇ ಏಕೆ? ತೀರ ಇತ್ತೀಚಿನ ವರ್ಷಗಳಲ್ಲಿ ನಾರದರೆಂಬ ಮಹಾನ್ ನಾಟಕಕಾರ ಋಷಿಯ ಮಾತಿಗೆ ಕಿವಿಗೊಟ್ಟು ಮಧುರೆಯಲ್ಲಿರುವ ಎಲ್ಲ ಮಕ್ಕಳನ್ನೂ ಕಂಸ ಕೊಲ್ಲಿಸಿದ್ದಾನೆ. ಕರುಳಿನ ಕುಡಿಯನ್ನು ಕಳಕೊಂಡ ನೋವು ಅವರೆದೆಯಲ್ಲಿ ಹೆಪ್ಪುಗಟ್ಟಿದೆ. ತಮ್ಮ ಮಕ್ಕಳೆಲ್ಲರನ್ನೂ ಮೋಸದಿಂದ ವಿಷದ ಮೊಲೆಯುಣಿಸಿ ಕೊಂದ ಪೂತನಿಯನ್ನು ಸಂಹರಿಸಿದ ಈ ಬೆಡಗಿನ ಹುಡುಗನನ್ನು ನೋಡಲು ಅವರೆಲ್ಲರೂ ಕಾತರರಾಗಿದ್ದಾರೆ. ಅವನಲ್ಲಿ ತಮ್ಮೆಲ್ಲ ಮಕ್ಕಳ ಪ್ರತಿಬಿಂಬವನ್ನು ಕಾಣಲು ಕಾದು ಕುಳಿತಿದ್ದಾರೆ. ಅಲ್ಲಿಯ ವೃದ್ಧರಿಗಂತೂ ಉಗ್ರಸೇನ ಮಹಾರಾಜನ ಮೊಮ್ಮಗನನ್ನು ಕಣ್ಣುತುಂಬಿಸಿಕೊಳ್ಳುವ ಹಂಬಲ. ನಡುವಯದ ಗಂಡಸರಿಗೆ ಯುದ್ಧಮಾಡುವ ದೊರೆ ಕಂಸನಿಂದ ಎಂದು ಮುಕ್ತಿ ಪಡೆದೇವು ಎಂಬ ಚಿಂತೆ. ಎಲ್ಲರಿಗೂ ಬರಲಿರುವ ಕೃಷ್ಣ ತಮ್ಮೆಲ್ಲರ ಆಪದ್ಭಾಂಧವನೆಂಬ ಭಾವ.

 

ಹೀಗೆ ತೆರೆದುಕೊಂಡ ಆ ಬೆಳಗಿನಲ್ಲಿ ಕೈಕಾಲುಗಳಿಗೆ ಬಿಡುವಿಲ್ಲದಂತೆ ಗಡಿಬಿಡಿಯ ಕೆಲಸದಲ್ಲಿ ಮುಳುಗಿದ್ದಾಳೆ ಕುಬ್ಜೆ. ಕಂಸನ ಅರಮನೆಯ ಪ್ರಮುಖರೆಲ್ಲರಿಗೂ ಸುಗಂಧ ತಯಾರಿಸಿಕೊಡುವ ಗುರುತರವಾದ ಹೊಣೆ ಅವಳದ್ದು. ಆ ಕೆಲಸ ಸುಲಭವೇನೂ ಅಲ್ಲ. ಕಾಡಿನ ಮೂಲೆ ಮೂಲೆಯನ್ನು ಸುತ್ತಿ ಬೇರು ನಾರುಗಳನ್ನು ಹುಡುಕಿ ತರಬೇಕು. ಮತ್ತದನ್ನು ಅರೆದು, ಕುಟ್ಟಿ, ಪುಡಿಮಾಡಿ, ಬೇಯಿಸಿ, ಆರಿಸಿ ಸುಗಂಧ ದೃವ್ಯವನ್ನು ತಯಾರಿಸಬೇಕು. ಎಲ್ಲರಿಗೂ ಒಂದೇ ಸುಗಂಧದ್ರವ್ಯವನ್ನು ನೀಡಲಾಗದು. ಸುಗಂಧದ್ರವ್ಯದ ವಿಷಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪರಿಮಳದ ಬಯಕೆ. ಅವವೆಲ್ಲವೂ ಅವಳಿಗೆ ಬಾಯಿಪಾಠವಿದೆ. ಆದರೆ ಕಂಸನ ಹೆಂಡತಿಯರ ಬಯಕೆಯನ್ನು ಮಾತ್ರ ಅವಳು ಅರ್ಥ ಮಾಡಿಕೊಳ್ಳಲಾರಳು. ಇಂದು ಒಂದು ಪರಿಮಳದ್ರವ್ಯ ಬಯಸಿದವರು ನಾಳೆ ಅದನ್ನೇ ಹಿಡಿದು ಹೋದರೆ ಮುಖ ಸಿಂಡರಿಸುತ್ತಾರೆ. ಇಂದು ಒಬ್ಬಳು ಬಯಸಿದ್ದನ್ನು ನಾಳೆ ಇನ್ನೊಬ್ಬಳು ಬೇಕೆನ್ನುತ್ತಾಳೆ. ಅವರಿಗೆ ಏನು ಬೇಕೆಂಬುದೇ ಇವಳಿಗೆ ಅರ್ಥವಾಗುವುದಿಲ್ಲ. ಆದರೆ ಇತ್ತೀಚೆಗೆ ಕುಬ್ಜೆಗೆ ಅನಿಸುತ್ತಿದೆ ಗಂಡನ ಪ್ರೀತಿಯ ಕೊರತೆಯನ್ನವರು ತನ್ನ ಮೇಲಿನ ಅಸಹನೆಯಾಗಿ ವ್ಯಕ್ತಪಡಿಸುತ್ತಾರೆಂದು. ಹಾಗಾಗಿ ಅವರು ಸಿಡಿಸಿಡಿ ಎನ್ನುವಾಗಲೆಲ್ಲ ಇವಳು ತನಗಲ್ಲವೆಂಬಂತೆ ಸಾಗುತ್ತಾಳೆ.

ಕೃಷ್ಣ ಬರುವನೆಂಬ ವಿಷಯ ಕುಬ್ಜೆಯನ್ನೂ ತಲುಪಿದೆ. ಹಾಗೆಂದೇ ಅವಳು ಇಂದು ಬೇಗನೆ ಕೆಲಸ ಮುಗಿಸುವ ತವಕದಲ್ಲಿದ್ದಾಳೆ. ಎಲ್ಲರ ಕೆಲಸ ಮುಗಿಸಿ ಇಂದವಳು ಒಂದು ವಿಶೇಷವಾದ ಸುಗಂಧ ದ್ರವ್ಯವನ್ನು ಕೃಷ್ಣನಿಗಾಗಿ ತಯಾರಿಸಲಿದ್ದಾಳೆ. ಮುದ್ದು ಕೃಷ್ಣ ಶೃಂಗಾರ ಪ್ರಿಯ ಎಂಬುದು ಅವಳಿಗೆ ಮನದಟ್ಟಾಗಿದೆ. ಇಲ್ಲವಾದಲ್ಲಿ ಹೊಸ ಬಟ್ಟೆಯನ್ನು ನೀಡಲು ನಿರಾಕರಿಸಿದ ಅಗಸನನ್ನು ಮುಗಿಸುತ್ತಿರಲಿಲ್ಲ. ಹಾಗಾಗಿಯೇ ಅವಳಿಂದು ಕೃಷ್ಣನಿಗಾಗಿ ವಿಶೇಷವಾದ ಸುಗಂಧ ದ್ರವ್ಯವೊಂದನ್ನು ತಯಾರಿಸಲಿದ್ದಾಳೆ.

ಸುಗಂಧ ದ್ರವ್ಯ ತಯಾರಿಸುವ ಕಲೆಯನ್ನವಳು ತನ್ನ ತಾಯಿಯಿಂದ ಕಲಿತಿದ್ದಾಳೆ. ಅವಳ ತಾಯಿಯೂ ಅರಮನೆಯ ಗಂಧವಾರಿಣಿಯೇ ಆಗಿದ್ದಳು. ಅದನ್ನೇ ತನ್ನ ಮಗಳಿಗೂ ಕಲಿಸಿದಳು. ಅಮ್ಮ ಗುಟ್ಟಿನಲ್ಲಿ ತನಗೆ ಮಾತ್ರವೇ ಹೇಳಿದ ಅತ್ಯಮೂಲ್ಯ ಪರಿಮಳವೊಂದನ್ನು ಇಂದು ತಯಾರಿಸಿ ಅಮ್ಮನ ಸುವರ್ಣ ಕರಂಡಕದಲ್ಲಿ ಹಾಕಿಡಬೇಕು. ಆ ಪೆಟ್ಟಿಗೆ ಮಹಾರಾಜ ಉಗ್ರಸೇನ ತನ್ನ ತಾಯಿಯ ಕೆಲಸವನ್ನು ಮೆಚ್ಚಿ ನೀಡಿದ ಇನಾಮಾಗಿತ್ತು. ಅಮ್ಮ ಅದನ್ನು ತನ್ನ ಜೀವದಂತೆ ಜೋಪಾನ ಮಾಡಿದ್ದಳು. ಪುಟ್ಟ ಕನ್ನಡಿಯನ್ನು ಹೊಂದಿದ ಮುಚ್ಚಳವಿರುವ ಆ ಪೆಟ್ಟಿಗೆ ಕೈಯ್ಯಲ್ಲಿ ಹಿಡಿದವರ ಮುಖವನ್ನು ಇನ್ನಷ್ಟು ಸುಂದರವಾಗಿ ತೋರುತ್ತಿತ್ತು. ಅದರಲ್ಲಿ ಮುಖವನ್ನು ನೋಡಿದಾಗಲೆಲ್ಲ ತ್ರಿವಕ್ರೆ ತಾನೆಷ್ಟು ಸುಂದರಿ ಎಂದುಕೊಳ್ಳುತ್ತಾಳೆ.

 

ಸುಂದರಿ ಎಂಬ ಪದ ಮನದಲ್ಲಿ ಸುಳಿದದ್ದೇ ತಡ ಒಂದು ಕ್ಷಣ ಕುಟ್ಟುವ ಕೆಲಸವನ್ನು ನಿಲ್ಲಿಸಿದಳು ತ್ರಿವಕ್ರೆ. ಅದೇ ಕಾರಣದಿಂದಲ್ಲವೆ ಇಡಿಯ ಮಥುರೆಯ ಜನ ತನ್ನನ್ನು ಹೀಗಳೆಯುವುದು? ಇಡಿಯ ದೇಹ ಮೂರು ಕಡೆಯಲ್ಲಿ ಬಾಗಿದ್ದಕ್ಕಾಗಿಯೇ ತನ್ನನ್ನು ತ್ರಿವಕ್ರೆ ಎನ್ನುವುದು. ಬಾಗಿದ ದೇಹ ಕುಬ್ಜವಾದದ್ದಕ್ಕೆ ಕೆಲವರು ಕುಬ್ಜೆ ಎಂದೂ ಕರೆಯುತ್ತಾರೆ. ಹುಟ್ಟುವಾಗಲೇ ಹಾಗಿದ್ದರೆ ಬಹುಶಃ ಅವಳು ಈ ಅವಮಾನ, ಹೀಗಳಿಕೆಯನ್ನೆಲ್ಲ ಸ್ವೀಕರಿಸುತ್ತಿದ್ದಳೇನೋ? ಆದರೆ ಹುಟ್ಟುವಾಗ ಅವಳು ವಕ್ರೆಯಾಗಿರಲಿಲ್ಲ. ಸುಂದರ ರೂಪದ ಅವಳ ಹೆಸರು ಮಾಲಿನಿ ಎಂಬುದಾಗಿತ್ತು. ನೋಡಿದವರೆಲ್ಲ ರೂಪೆಂದರೆ ನಮ್ಮ ಮಾಲಿನಿಯದು ಎಂದು ಕೊಂಡಾಡುತ್ತಿದ್ದರು. ಎತ್ತರವಾದ ನೀಳ ಕಾಯ, ಮಂಡಿಯವರೆಗೆ ಬೆಳೆದ ಸೊಂಪಾದ ಕೂದಲ ರಾಶಿ, ಅಮ್ಮನ ಆರೈಕೆಯಲ್ಲಿ ಹೊಳೆಯುವ ಮೈಬಣ್ಣ, ದಟ್ಟವಾದ ರಪ್ಪೆಗಳು, ಮಿನುಗುವ ಅಗಲವಾದ ಬಟ್ಟಲುಗಣ್ಣುಗಳು… ಓಹ್ ! ತನ್ನ ಬಾಲ್ಯದ ರೂಪವನ್ನು ನೆನಪಿಸಿಕೊಂಡು ನಿಟ್ಟುಸಿರಿಟ್ಟಳು ತ್ರಿವಕ್ರೆ. ಅದೇ ರೂಪವನ್ನು ನೋಡಿಯೇ ಅಲ್ಲವೇನು ಸುಬಾಹು ತನ್ನ ಹಿಂದೆ ಬಿದ್ದದ್ದು, ಮದುವೆಯಾಗದೇ ಇಲ್ಲಿಂದ ಕದಲೆನೆಂದು ಬಾಗಿಲ ಬಳಿ ಹಠ ಹಿಡಿದು ಕುಳಿತದ್ದು, ಅರಮನೆಯ ಊಳಿಗದಲ್ಲಿರುವ ಅವನೊಂದಿಗೆ ಅಮ್ಮ ತನ್ನನ್ನು ಮದುವೆ ಮಾಡಿದ್ದು, ತಾವಿಬ್ಬರೂ ಆಗಸದಲ್ಲಿ ಹಾರುವ ಹಕ್ಕಿಗಳಂತೆ ವಿಹರಿಸಿದ್ದು…….

ಎಷ್ಟೊಂದು ಅಪ್ಯಾಯಮಾನವಾದ ನೆನಪುಗಳವು. ಆ ಕೆಟ್ಟ ಜ್ವರ ಯಾವ ಮುಹೂರ್ತದಲ್ಲಿ ಬಂದಿತೋ? ತಿಂಗಳುಗಳ ಕಾಲ ಮೇಲೇಳದಂತೆ ಮಲಗಿಸಿಬಿಟಿತ್ತು. ಮತ್ತೆ ಹಾಸಿಗೆಯಿಮದ ಏಳುವಾಗ ದೇಹ ಹೀಗೆ ಸೆಟೆದುಕೊಂಡಿತ್ತು. ಅಮ್ಮನ ಬೇರು, ನಾರುಗಳೆಲ್ಲವೂ ಜೀವ ಉಳಿಸಿದವೇ ವಿನಃ ರೂಪವನ್ನು ಮರಳಿ ತಂದುಕೊಡಲಿಲ್ಲ. ಹಾಗಾಗಿ ಚೆಂದದ ಮಾಲಿನಿ ಕುಬ್ಜೆಯಾದಳು. ಮೂರ್ಖ ಸುಬಾಹು! ಹೆಂಡತಿ ಎಂಬ ಮಮಕಾರವನ್ನೂ ತೋರದೇ ಇನ್ನೊಬ್ಬ ಚೆಂದದ ಹೆಣ್ಣಿನೊಂದಿಗೆ ಸಂಸಾರ ಆರಂಭಿಸಿದ. ಅವನು ಪ್ರೀತಿಸಿದ್ದು ಚೆಂದದ ಈ ದೇಹವನ್ನು ಎಂದು ಮೊದಲೇ ತಿಳಿದಿದ್ದರೆ…..

ಭೂತವನ್ನು ಬದಿಗೊತ್ತಿ ಮತ್ತೆ ತನ್ನ ಕೆಲಸದಲ್ಲಿ ಮುಳುಗಿದಳು ತ್ರಿವಕ್ರೆ. ಕಂಸ ಮಹಾರಾಜನಿಗೆ ಸುಗಂಧ ದ್ರವ್ಯವನ್ನು ಕೊಡುವಾಗಲೆಲ್ಲ ದೇಹ ಹಿಡಿಯಾಗುತ್ತದೆ. ತನ್ನ ಸುತ್ತಲೂ ಇರುವವರೊಂದಿಗೆ ತನ್ನ ಬಗ್ಗೆ ಏನಾದರೊಂದು ಕುಹಕವಾಡಿ ನಗದಿದ್ದರೆ ಅವನಿಗೆ ಸಮಾಧಾನವಿರಲಿಲ್ಲ. ನನ್ನ ನಡಿಗೆಯ ಬಗೆಗೋ ಗೂನಾಗಿ ಹೋದ ಬೆನ್ನಿನ ಬಗೆಗೋ, ಬಾಗಿ ಬಿಲ್ಲಿನಂತಾದ ಕಾಲುಗಳ ಬಗೆಗೋ ಏನಾದರೊಂದು ಕುಹಕವಾಡದೇ ಸುಮ್ಮನಿರುವವನಲ್ಲ ಅವನು. ಅಮ್ಮ ಹೇಳಿದ ಈ ಕೆಲಸವೊಂದು ಕೈಹಿಡಿಯದಿದ್ದರೆ ರಾಜಬೀದಿಯಲ್ಲಿ ಕುಳಿತು ಭಿಕ್ಷೆ ಬೇಡಬೇಕಾಗಿತ್ತು ಎಂಬುದು ನೆನಪಾದಾಗಲೆಲ್ಲ ಅವಳಿಗೆ ಈ ಕುಹಕಗಳು ದೊಡ್ಡದೆನಿಸುವುದಿಲ್ಲ. ಕೃಷ್ಣನ ಬಾಲ್ಯದ ಪವಾಡಗಳನ್ನು ಅವಳು ಕೇಳಿದ್ದಾಳೆ. ಅವನ ಬರವಿನ ಬಗೆಗೆ ಸಣ್ಣದೊಂದು ಆಸೆ ಅವಳೊಳಗೂ ಚಿಗುರೊಡೆದಿದೆ. ತನ್ನ ಕುಬ್ಜತೆಯನ್ನು ಅವನು ಕಳೆದಾನೇನೋ ಎಂಬ ಬಯಕೆ ಅವಳಲ್ಲಿ ಮೊಳೆಯುತ್ತಿದೆ. ಹಾಗಾಗಬೇಕೆಂದರೆ ಅವನನ್ನು ಭೇಟಿಯಾಗಬೇಕು. ಭೇಟಿಯಾಗಲು ಸುಗಂಧದ್ರವ್ಯದ ನೆವವೊಂದು ಬೇಕು. ಲಗುಬಗೆಯಿಂದ ತನ್ನ ಕೆಲಸದಲ್ಲಿ ಮುಳುಗಿಹೋದಳು ಕುಬ್ಜೆ. ಎಂದಾದರೊಂದು ದಿನ ತಾನು ಕಂಸ ಮಹಾರಾಜನೆದುರಿಗೆ ತಲೆಯೆತ್ತಿ ನಡೆಯಬೇಕು ಎಂದುಕೊಂಡಳು.

ಆ ರಾತ್ರಿ ಮಧುರೆಯ ಜನರ್ಯಾರೂ ಮಲಗಲಿಲ್ಲ. ಅಂತೆಯೇ ತ್ರಿವಕ್ರೆಯೂ ಕೂಡ. ತಾನು ವಿಶೇಷವಾಗಿ ತಯಾರಿಸಿದ ಸುಗಂಧ ದ್ರವ್ಯವನ್ನವಳು ಕಡಿಮೆಯೆಂದರೆ ನೂರುಬಾರಿ ತೆಗೆದು ಆಘ್ರಾಣಿಸಿದ್ದಳು. ಯಾಕೋ ಕೃಷ್ಣ ತನ್ನನ್ನು ಉದ್ಧರಿಸಲಾರನೇನೋ ಎನಿಸಿತವಳಿಗೆ. ಇದ್ದಕ್ಕಿದ್ದಂತೆ ತನ್ನ ಗೆಳತಿ ಪೂತನಿಯ ನೆನಪಾಯಿತು. ಗಂಡ ದೂರಾದ ಬಳಿಕ ಒಂಟಿಯಾಗಿದ್ದ ತನ್ನ ಜೊತೆಯಾಗಿದ್ದಳು ಅವಳು. ವರ್ಷಕ್ಕೊಂದರಂತೆ ನಾಲ್ಕು ಮಕ್ಕಳನ್ನು ಸಾಲಾಗಿ ಹೆತ್ತಿದ್ದಳು. ಎಲ್ಲ ಮಕ್ಕಳನ್ನು ಸಾಕಿದ್ದು ಮಾತ್ರ ತ್ರಿವಕ್ರೆಯೆ. ಅವಳ ಗಂಡ ಕಂಸ ಮಹಾರಾಜನ ಅರಮನೆಯೂಳಿಗದಲ್ಲಿದ್ದ. ದೇವಕಿಯ ಎಂಟನೇ ಮಗು ಕಂಸನ ಕೈಜಾರಿ ಹೋಗಿದ್ದ. ಮೊದಲೇ ಕ್ರೂರಿಯಾಗಿದ್ದ ಕಂಸ ವ್ಯಗ್ರನಾಗಿದ್ದ. ಯಾರು ದೇವಕಿಯ ಕಂದ ಎಂಬ ವಿವೇಚನೆಯನ್ನೇ ಕಳಕೊಂಡು ಕಂಡ ಮಕ್ಕಳನ್ನೆಲ್ಲ ಕೊಲ್ಲಿಸುವ ಯೋಜನೆ ಹಾಕಿದ. ಪಾಪ ಪೂತನಿ. ಅವನ ಮೋಸದ ಬಲೆಯ ದಾಳವಾದಳು. ಅವಳ ಗಂಡ ಬಂದು ಕಂಸನ ಯೋಜನೆಯನ್ನು ಮುಂದಿಟ್ಟು ಅದರಿಂದ ತಾವು ಪಡೆಯಬಹುದಾದ ಸಂಪತ್ತಿನ ಲೆಕ್ಕವನ್ನು ಒಪ್ಪಿಸುವಾಗ ಕ್ರೋಧಗೊಂಡಿದ್ದಳು. ಮರುದಿನವೇ ಮಹಾರಾಜನನ್ನು ಭೇಟಿಯಾಗಿ ತನ್ನ ನಿರಾಕರಣೆಯನ್ನೂ ಅರುಹಿದಳು. ಕಂಸನ ಮಾತಿಗೆ ಎದುರಾಡುವುದುಂಟೆ? ಅವನು ಹೇಳಿದಂತೆ ನಡೆದುಕೊಳ್ಳದಿದ್ದರೆ ಹುಟ್ಟಿರುವ ನಾಲ್ಕು ಮಕ್ಕಳೊಂದಿಗೆ ಹೊಟ್ಟೆಯಲ್ಲಿರುವ ಅವಳ ಐದನೆಯ ಮಗುವನ್ನು ಹೊರಗೆಳೆದು ಕೊಲ್ಲಿಸುವ ಬೆದರಿಕೆಯನ್ನ ಹಾಕಿದ್ದ.

 

ಪಾಪ ಪೂತನಿ! ಅವನು ನೀಡಿದ ವಿಷದ ಕರಡಿಗೆಯನ್ನು ಕೈಯಲ್ಲಿ ಹಿಡಿದು ಕಂಡ ಮಕ್ಕಳಿಗೆಲ್ಲ ವಿಷಪೂರಿತ ಮೊಲೆಯುಣಿಸಿ ಸಾಯಿಸುತ್ತಾ ನಡೆದಳು.

ಮಧುರೆಯ ಎಲ್ಲ ಮಕ್ಕಳನ್ನೂ ಮುಗಿಸಿದ ಮೇಲೆ ಅವಳು ಸುಖವಾಗಿ ಬಾಳಲುಂಟೆ? ಮನೆಯ ಹೊರಬಂದರೆ ಸಾಕು, ಜನರು ಕಲ್ಲು ಎಸೆದು ಓಡಿಸುತ್ತಿದ್ದರು. ತುಂಬು ಗರ್ಭಿಣಿ ಪೂತನಿ ತನ್ನ ಮನೆಯೊಳಗೆ ಕುಳಿತು ಕಣ್ಣೀರಾದದ್ದನ್ನು ತ್ರಿವಕ್ರೆಯೊಬ್ಬಳೇ ನೋಡಿದ್ದು. ತ್ರಿವಕ್ರೆಗೆ ಮೆಟ್ಟಿದಂಥದ್ದೇ ಜ್ವರ ಪೂತನಿಯ ಮಕ್ಕಳಿಗೂ ಮೆಟ್ಟಿಕೊಂಡಿತ್ತು. ಅಮ್ಮ ತನಗೆ ತಯಾರಿಸಿಕೊಟ್ಟ ಕಷಾಯವನ್ನೇ ಅವಳು ಮಕ್ಕಳಿಗೂ ತಯಾರಿಸಿಕೊಟ್ಟಿದ್ದಳು. ಪೂತನಿ ಅದನ್ನು ಕುಡಿಸಿದಳೋ ಇಲ್ಲವೋ ಯಾರಿಗೆ ಗೊತ್ತು? ಸಾಲಲ್ಲಿ ಮಲಗಿಸಿದ ನಾಲ್ಕು ಮಕ್ಕಳ ಚಿತ್ರ ಇನ್ನೂ ಅವಳ ಕಣ್ಣಿಂದ ಮಾಸಿಲ್ಲ. ಮಕ್ಕಳನ್ನು ಮಣ್ಣು ಮಾಡಲೂ ಯಾರೊಬ್ಬರೂ ಮುಂದೆ ಬರಲಿಲ್ಲ. ಅವರೇ ಕೈಯ್ಯಾರೆ ಮಕ್ಕಳನ್ನು ಗುಂಡಿಯೊಳಗಿಟ್ಟು ಬಂದರು. ಅದೇ ದಿನ ಪೂತನಿ ಸತ್ತ ಮಗುವೊಂದಕ್ಕೆ ಜನ್ಮ ನೀಡಿದ್ದಳು. ಅಷ್ಟಾದರೂ ಅವಳ ಕಣ್ಣೊಳಗಿಂದ ಹನಿನೀರು ಒಸರುತ್ತಿರಲಿಲ್ಲ. ಎಲ್ಲ ಕಣ್ಣೀರು ಹಸುಗೂಸುಗಳು ತತನ್ನ ಮಡಿಲಿನಲ್ಲಿ ಅಸುನೀಗುವಾಗ ಸುರಿದುಹೋಯಿತು ಎನ್ನುತ್ತಿದ್ದಳು.

ಬಾಣಂತಿಗೆ ಮಗುವಿರದೇ ಎದೆಹಾಲು ಕಟ್ಟಿಹೋಗಿತ್ತು. ತ್ರಿವಕ್ರೆ ಹಾಲು ಬತ್ತಿಸಲು ತನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದಳು. ಒಂದು ದಿನ ಎದೆ ಹಾಲಿನಿಂದ ತುಂಬಿದ ಎದೆಯನ್ನು ಸವರುತ್ತಾ ಪೂತನಿ ಹೇಳಿದ್ದಳಲ್ಲ. “ಮಾಲಿನಿ, ಈಗ ಸ್ವರ್ಗ ಯಾವುದೆಂದು ನನ್ನನ್ನು ಕೇಳಿದರೆ ನನ್ನ ಎದೆಗೆ ಬಾಯಿಟ್ಟು ಮಗುವೊಂದು ಹಾಲನ್ನು ಹೀರುವುದು ಅನಿಸುತ್ತದೆ. ಮಗು ಹಾಲು ಕುಡಿಯುವಾಗ ಯಾವಾಗ ಇದು ಮುಗಿಯುವುದಪ್ಪಾ ಅನಿಸುತ್ತಿತ್ತು. ಆದರೆ ಈಗ ನೋಡು. ಹಾಲು ಹೀರುವ ಹಸುಗೂಸಿನ ತುಟಿಗಳಿಗಾಗಿ ನಾನು ಹಂಬಲಿಸುವಂತಾಗಿದೆ. ಎಲ್ಲ ನಾನು ಮಾಡಿದ ಪಾಪದ ಫಲ.” ಅಂಥದೊಂದು ನಿರೂಪ ಮತ್ತೆ ಕಂಸ ಮಹಾರಾಜನಿಂದ ಬಂದಿತ್ತು. ಈಗವನಿಗೆ ಅದ್ಯಾರೋ ದೂರದ ಗೋಕುಲದಲ್ಲಿ ಕೃಷ್ಣನಿದ್ದಾನೆ ಎಂದು ವರದಿ ನೀಡಿದ್ದರಂತೆ. ಹಾಗಾಗಿ ಅಲ್ಲಿಗೆ ಹೋಗಿ ಕೃಷ್ಣನ ವಯಸ್ಸಿನ ಎಲ್ಲ ಮಕ್ಕಳನ್ನು ಕೊಲ್ಲುವಂತೆ ಪೂತನಿಗೆ ಪುನಃ ಆದೇಶಿಸಿದ್ದ. ಪೂತನಿಯ ಗಂಡನೀಗ ಅದನ್ನು ಸಾರಾಸಗಟಾಗಿ ನಿರಾಕರಿಸಿದ್ದ. ಕಂಸ ಅವನನ್ನು ಬಂಧಿಸಿಟ್ಟು ಪೂತನಿಯನ್ನು ಬರಹೇಳಿದ್ದ. ಪೂತನಿ ನಗುನಗುತ್ತಲೇ ಅವನ ಆಹ್ವಾನವನ್ನು ಸ್ವೀಕರಿಸಿದ್ದಳು. ಗೋಕುಲದಲ್ಲಿ ನೇರವಾಗಿ ಕೃಷ್ಣನ ಮನೆಯನ್ನು ಹುಡುಕಿ ಹೋಗಿದ್ದಳು. ಯಾರೂ ಕಾಣದ ಜಾಗದಲ್ಲಿ ಕೃಷ್ಣನಿಗೆ ಮೊಲೆಯೂಡಿಸುತ್ತಲೇ ಪ್ರಾಣಬಿಟ್ಟಳೆಂದು ಸುದ್ದಿಯಾಯಿತು. ವಿಷದ ಮೊಲೆಯೂಡಿಸಲು ಬಂದವನನ್ನು ಕೃಷ್ಣ ರಕ್ತ ಹೀರಿ ಕೊಂದ ಎನ್ನುತ್ತಾರೆ ಜನ. ತ್ರಿವಕ್ರೆಗೆ ಮಾತ್ರವೇ ಗೊತ್ತಿದೆ ಪೂತನಿ ತನ್ನ ಎದೆಹಾಲಿನೊಂದಿಗೆ ಜೀವಚೈತನ್ಯವನ್ನೂ ಕೃಷ್ಣನಿಗೆ ಬಸಿದುಕೊಟ್ಟ ಸತ್ಯ.

ಇವೆಲ್ಲವೂ ನೆನಪಾಗಿ ರೊಮಾಂಚನಗೊಂಡಳು ತ್ರಿವಕ್ರೆ. ಅದ್ಯಾವ ಮಾಯಕದಲ್ಲಿ ಬೆಳಗಾಯಿತೋ ಯಾರಿಗೆ ಗೊತ್ತು. ಅರಮನೆಯಲ್ಲಿ ಬಿಲ್ಲಹಬ್ಬದ ದ್ಯೋತಕವಾಗಿ ಮಂಗಳ ವಾದ್ಯಗಳು ಮೊಳಗಿದವು. ಮಧುರೆಯ ಜನರೆಲ್ಲರೂ ಸಾಲುಸಾಲಾಗಿ ರಸ್ತೆಯ ಇಕ್ಕೆಲಗಳಲ್ಲಿ ಕೃಷ್ಣನನ್ನು ನೋಡಲು ಕಾತರರಾಗಿ ನಿಂತಿದ್ದರು. ಅಷ್ಟು ದೂರದಲ್ಲಿ ಕೃಷ್ಣ ಬಲರಾಮರು ಬಂದದ್ದೇ ತಡ, ಜಯಘೋಷಗಳು ಮುಗಿಲು ಮಟ್ಟಿದವು. ಕಂಸನ ಸೇನೆಯ ಅಧಿಕಾರಿಗಳ ಆದೇಶವನ್ನೂ ಲೆಕ್ಕಿಸದೇ ಎಲ್ಲರೂ ಮುಗಿಬಿದ್ದು ಕೃಷ್ಣ ಬಲರಾಮರನ್ನು ಮುತ್ತಿಕೊಂಡರು. ಅವನ ಸುತ್ತಲೂ ಕುಣಿಯುವವರೇನು? ಅವನನ್ನು ಹೊಗಳುವವರೇನು? ಹೆಗಲಮೇಲೆ ಹೊತ್ತು ಮರೆಸುವವರೇನು? ಇಡಿಯ ಬೀದಿಯೇ ಗದ್ದಲದಿಂದ ತುಂಬಿಹೋಯಿತು.

ಕೈಯಲ್ಲಿ ಸುಗಂಧದ ಕರಂಡಕವನ್ನು ಹಿಡಿದು ಕಾದೇ ಕಾದಳು ಕುಬ್ಜೆ. ಆ ಗಲಾಟೆಯಲ್ಲಿ ಗುಂಪಿನಲ್ಲಿ ಮುನ್ನುಗ್ಗಿ ಕೃಷ್ಣನನ್ನು ಸಂಧಿಸುವುದಂತೂ ಕನಸಿನ ಮಾತು. ಇನ್ನು ಸುಗಂಧದ್ರವ್ಯವನ್ನು ಮುಟ್ಟಿಸುವುದು ಹೇಗೆಂಬ ಚಿಂತೆ ಅವಳ ಮನಸ್ಸನ್ನು ಕವಿಯಿತು. ನಿಧಾನವಾಗಿ ಗುಂಪು ಚದುರತೊಡಗಿತು. ನೀಲವರ್ಣದ ವಿಶಾಲ ಕಂಗಳ ಆಕೃತಿಯೊಂದು ತನ್ನೆಡೆಗೆ ಬರುತ್ತಿರುವುದನ್ನು ಕಂಡ ಕುಬ್ಜೆ ಇದು ತನ್ನ ಭ್ರಮೆಯಿರಬಹುದೆ ಎಂದು ಕಣ್ಣುಜ್ಜಿಕೊಂಡಳು. “ಮಾಲಿನಿ, ನನಗೇನೂ ತಂದಿಲ್ಲವೆ?” ಮೃದುವಾದ ಮಾತುಗಳು ಆ ದೇಹದಿಂದ ತೂರಿಬಂದವು. ಮಾಲಿನಿ ತಾನು ತಂದ ಕರಂಡಕವನ್ನು ಅವನ ಕೈಗಿತ್ತಳು, ಮಾಮೂಲಿನಂತೆ ತಲೆಯೆತ್ತದೆ. ಒಂದು ಮೃದುವಾದ ಕೈ ಅವಳ ಗಲ್ಲವನ್ನು ಹಿಡಿದೆತ್ತಿತು. “ತಲೆತಗ್ಗಿಸಿ ನಿಂತಿರುವಿಯೇಕೆ ಮಾಲಿನಿ? ಇಲ್ಲಿ ನನ್ನ ಮುಖವನ್ನೊಮ್ಮೆ ನೊಡಬಾರದೆ? ನನ್ನೊಡನೆ ಮಾತನಾಡುವುದಿಲ್ಲವೇನು?” ಉತ್ತರಕ್ಕಾಗಿ ಹಂಬಲಿಸುವ ಪ್ರಶ್ನೆಯೊಂದು ತೇಲಿಬಂತು. “ಹೇಗಿದೆ ಕೃಷ್ಣ ನಾನು ತಂದ ಉಡುಗೊರೆ?” ಮಾಲಿನಿ ತಲೆಯೆತ್ತುತ್ತಾ ಕೇಳಿದಳು. “ಸುಗಂಧಭರಿತವಾಗಿದೆ ನಿನ್ನ ಮನಸ್ಸಿನಂತೆ, ಈ ಕರಂಡಕವೋ ಎಷ್ಟು ಸುಂದರವಾಗಿದೆ ನಿನ್ನಂತೆ!” ಅವನು ನುಡಿದಾಗ ಅಚ್ಚರಿಯಿಂದ ಕಣ್ಣರಳಿಸಿದಳು ಕುಬ್ಜೆ. ಕೃಷ್ಣ ಅವಳ ವಕ್ರವಾದ ದೇಹವನ್ನು ಪ್ರೀತಿಯಿಂದ ತಡವುತ್ತಾ ನುಡಿದ, “ನಿಜಕ್ಕೂ ಮಾಲಿನಿ ನೀನು ತುಂಬ ಸುಂದರಳಾಗಿರುವೆ. ನಿನ್ನ ಈ ಹೊಳೆಯುವ ಕಣ್ಣುಗಳು, ಮಿರುಗುವ ಮೈಕಾಂತಿ, ದಟ್ಟವಾದ ಕೂದಲುಗಳು ಎಷ್ಟು ಸೊಗಸಾಗಿವೆ. ನೀನು ತಲೆಯೆತ್ತಿ ನಡೆದರೆ ನಿನ್ನ ಈ ದೇಹವೂ ಇನ್ನಷ್ಟು ಸುಂದರವಾಗಿಯೇ ಕಾಣುತ್ತದೆ. ನೀನು ಅನುಪಮ ಸುಂದರಿ. ಇಂದಿನಿಂದ ತಲೆಯೆತ್ತಿ ನಡೆ.” ಎನ್ನುತ್ತಲೇ ಅವಳ ಕೈಯ್ಯನ್ನು ತನ್ನೆರಡು ಕೈಗಳಲ್ಲಿ ಹಿಡಿದು ಅವಳನ್ನು ಗಿರಗಿರನೆ ತಿರುಗಿಸಿ ಉಯ್ಯಾಲೆಯಾಡಿಸಿ ನಡೆದ.

 

ಮಾಲಿನಿಯ ನಡಿಗೆಗೆ ಅಂದು ಹೊಸದೊಂದು ಗತ್ತು ಬಂದಿತ್ತು. ಕುಣಿಯುವ ನಡಿಗೆಯಲ್ಲವಳು ಕಂಸ ಮಹಾರಾಜನ ಕೊಠಡಿಯನ್ನು ಪ್ರವೇಶಿಸಿದಳು. ಕಂಸ ಅವಳನ್ನು ಕಡೆಗಣ್ಣಿನಿಂದ ನೋಡುತ್ತಲೇ ಇದ್ದ. “ಏನಿವತ್ತು, ನಡಿಗೆಯಲ್ಲಿ ಹೊಸದೊಂದು ಗತ್ತಿದೆ. ಬಾಗಿದ ಬೆನ್ನು ತುಸು ನೇರವಾಗಿದೆ. ತಗ್ಗಿರುತ್ತಿದ್ದ ತಲೆ ಮೇಲೆತ್ತಿದೆ?” ಗರ್ವದಿಂದ ಪ್ರಶ್ನಿಸಿದ ಕಂಸ. ಮಾಲಿನಿ ಹೇಳುತ್ತಲೇ ಹೋದಳು, “ಎಲ್ಲದಕ್ಕೂ ಅವನೇ ಕಾರಣ ದೊರೆ. ಅವನು ಎಲ್ಲರನ್ನೂ ಪ್ರೀತಿಸುತ್ತಾನೆ. ಎಲ್ಲರ ಬದುಕಿನ ಘನತೆಯನ್ನು ಅವರ ಅಂಗೈಯಲ್ಲಿಟ್ಟು ನಗುತ್ತಾನೆ. ದೇಹದ ವಕ್ರತೆಯನ್ನು ಬದಿಗಿಟ್ಟು ಆಂತರ್ಯದ ಸೌಂದರ್ಯವನ್ನು ತೆರೆದು ತೋರುತ್ತಾನೆ. ಅವನೆದುರು ಯಾರ ಪರಾಕ್ರಮವೂ ಗೆಲ್ಲದು, ಯಾವ ತಂತ್ರಗಳೂ ಫಲಿಸದು. ಜಾಗ್ರತೆಯಾಗಿರು, ಅವನು ನಿನಗಿಂತಲೂ ಖಂಡಿತಕ್ಕೂ ಬಲಶಾಲಿ…” ಕಂಸ ಅಸಹನೆಯಿಂದ ಕಿರುಚಿದ, “ನಿಲ್ಲಿಸು ನಿನ್ನ ಅಸಂಬದ್ಧ ಪ್ರಲಾಪವನ್ನು…” ಆದರೆ ಅದೊಂದೇ ಕೂಗು ಅವನ ಕೊನೆಯ ಕೂಗಾಗಿತ್ತು. ಅವನೊಳಗಿನ ಆತ್ಮವಿಶ್ವಾಸ ಕುಸಿದುಹೋಗಿತ್ತು. ಮರುದಿನ ಅವನು ಹೆಣವಾಗಿ ಬಿದ್ದಿದ್ದ.

ಒಂದು ಪ್ರೀತಿಯ ಸಾಂತ್ವನ ಇಡಿಯ ಬದುಕನ್ನೇ ಬೆಳಗಿದ ಕಥೆಗಳು ನಿಜ ಜೀವನದಲ್ಲಿ ಎಷ್ಟೊಂದಿಲ್ಲ. ಅಂದು ಕನ್ನಡ ಶಾಲೆಯ ಮಾಸ್ತರರೊಬ್ಬರು ಅನಕ್ಷರಸ್ತನಾಗಿದ್ದ ಅಪ್ಪನನ್ನು ಕರೆದು ನಿಮ್ಮ ಮಗಳು ನೌಕರಿ ಮಾಡಲಿಕ್ಕೆಂದೇ ಹುಟ್ಟಿದ್ದಾಳೆಂದು ಹೇಳದಿದ್ದರೆ ಅಕ್ಷರ ಲೋಕವೊಂದು ನನ್ನೆದುರು ತೆರೆದುಕೊಳ್ಳುತ್ತಲೇ ಇರಲಿಲ್ಲ. ಇಡಿಯ ಶಾಲೆಯನ್ನೇ ಹಾಳುಮಾಡುತ್ತಿರುವಳೆಂಬ ಟೀಕೆಗೆ ಒಳಗಾಗಿದ್ದ ತುತ್ಸುಕೋ ಕುರೋಯಾನಗಿಗೆ ಅವಳ ಶಿಕ್ಷಕರು ‘ನೀನೆಷ್ಟು ಒಳ್ಳೆಯ ಹುಡುಗಿ’ ಎನ್ನದಿದ್ದರೆ ಅವಳು ಶಾಲೆಯಲ್ಲಿ ಉಳಿಯುತ್ತಲೇ ಇರಲಿಲ್ಲ.

ಒಂದು ಆತ್ಮವಿಶ್ವಾಸದ ಕಿಡಿ ಸಾಧನೆಯ ಬೆಳಕಾಗಿ ತೆರೆದುಕೊಂಡ ಕಥೆಗಳಲ್ಲೆಲ್ಲ ಕೃಷ್ಣನ ಪ್ರೀತಿಯ ಆಳವಿದೆ. ತ್ರಿವಕ್ರೆಯ ವಕ್ರತೆಯನ್ನು ಕೃಷ್ಣ ತಿದ್ದಲಿಲ್ಲ. ಕೃಷ್ಣನ ಶೌರ್ಯ ಕಂಸನನ್ನು ಕೊಲ್ಲಲೂ ಇಲ್ಲ. ಅಲ್ಲಿ ಗೆದ್ದದ್ದು ಕೃಷ್ಣನ ಪ್ರೀತಿ ಮತ್ತು ಸೋತದ್ದು ಕಂಸನ ಆತ್ಮವಿಶ್ವಾಸದ ಅಗಾಧ ಸೆಲೆ!

‍ಲೇಖಕರು Avadhi

October 26, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Nivedita Thilak

    ಕುಬ್ಜಾ ಗಂಧಾನುವೀಲಿಪ್ತಾಂಗೋ ಮಾಯಿ ಪರಮ ಪುರುಷ:

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: