ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

MEN 6625

 

 

 

 

 

ಮಂಜುನಾಥ ವಿ ಎಂ

 

 

 

 

 

ದಟ್ಟ ಹಳದಿ ಬಣ್ಣದ
ಸೂರ್ಯಕಾಂತಿ ಹೂಗಳ ಮಡುವಿನಲ್ಲಿ
ಸದ್ದಿಲ್ಲದೆ 
ನುಸುಳಿ ಮಲಗಿದೆ
MEN
6625
ನಂಬರಿನ ಬೂದುಬಣ್ಣದ ಸ್ಕೂಟರ್,
ಪರೋಡಿ ಹುಡುಗನಂತೆ ;
ಹುಟ್ಟಿದಾಗಿನಿಂದ ಹಾಡುತ್ತಾ
ದಣಿದು ಗೂಡು ಸೇರಿದ ಹಕ್ಕಿಯಂತೆ .

ಗಾಲಿಯೊಂದು ತಿರುಗುತ್ತಿದೆ ,
ಜಗದಂತೆ ನಿಲ್ಲದೆ;
ಸಾವಿನಂತೆ ಕಾಣದೆ.

ಕಲೆ,ಸಂಸ್ಕೃತಿ ಸಾಹಿತ್ಯವನ್ನರಿಯದ
ಐಟಿಬಿಟಿ ಕೇಂದ್ರಗಳ,
ಅನೀತಿ ಪಾಠಿಕೆಗಳ ಅವ್ಯಾಹತವಾಗಿ
ಓದಿಕೊಳ್ಳುವ,
ಹಾದರವನ್ನು
ತಾಯಿ ರಕ್ತವನ್ನಾಗಿಸುವ ಮಠಗಳ,
ರಾಜಕಾರಣಿಗಳ ಭವ್ಯಕಟ್ಟಡಗಳ;
ಕಾಸಿಗಾಗಿ,
ಹೆಂಡದಾಸೆಗಾಗಿ,
ಮೈಮೇಲಿನ ಬಟ್ಟೆ ಹರಿದು ಹಾಸುವ
ಸರ್ಕಾರಿ ಸಂಸ್ಥೆಗಳ ಮುಂದೆ
ಅಲೆಯದ ಸೌಭಾಗ್ಯ ಅದರದ್ದು.
ಕಾಫಿ,ಭತ್ತದ ಕೊಯ್ಲು ಆರಂಭವಾದಾಗ
ಅದು ಚಲಿಸುವುದು
ಗಾಳಿಯಲೆಯ ಹನಿಗಳ ಮೇಲೆ ,
ಬಹುಸುರುಳಿಗಳಲಿ ಶ್ರೇಷ್ಠ ವರ್ಣಚಿತ್ರದಂತೆ.

ಸ್ವರ್ಗ ಸೀಮೆಯಲಿ
ಸ್ವೇಚ್ಛೆಯಾಗಿ ನಲಿದಾಡುವ,
ಮಿಂಚುಳ್ಳಿಯ ಗಾನಕ್ಕೆ ತಲೆದೂಗುವ
ಅದಕ್ಕೆ ಯೋಧನ ಪ್ರೀತಿಯ ಸಿಟ್ಟು.
ದಿವ್ಯ ಶಾಂತಿಯ ನಡಾವಳಿಗಳಿವೆ.

ಸೈಡ್ ಮಿರರ್ ನಲ್ಲಿ ಕಾಣುವ
ಗೂಡ್ಸ್ ವಾಹನದ ನೆತ್ತಿಯ ಮೇಲೆ ಕುಳಿತ
ಕೂಲಿಕಾರ ರೈತರ ಬದುಕಿನ ಪಯಣ-
ಮುಂದಿನ ಹಾದಿಯ ಸ್ಪಷ್ಟ ಗೆಲುವಿನ ಯಾತನೆ;
ಮೆಲುದನಿಯಲಿ ಮಿಡುಕುವ ಮರಗಳು.

ಬಿರುಕು ಗೋಡೆಗಳಿಂದ
ಗುಬ್ಬಚ್ಚಿಗಳ ಹಿಂಡು ಹಾರುವ,
ಹಿತ್ತಲ ಹೊಂಡದಲ್ಲಿ ಬಾಳೆಮೀನು ಗಾಳಕ್ಕೆ
ಚುಂಬಿಸುವ ಆಕಾಶ ಕಡೆವ ಶಬ್ದ.

ನೆಲದೊಡಲ ಮಕ್ಕಳು ಕಾಯುತ್ತಿವೆ .
ಸದ್ದಿಲ್ಲದೆ
ನುಸುಳಿ ಮಲಗಿದೆ.
MEN…..
6625
ನಂಬರಿನ ಬೂದುಬಣ್ಣದ ಸ್ಕೂಟರ್.

ಗಾಲಿಯೊಂದು ತಿರುಗುತ್ತಿದೆ,
ಜಗದಂತೆ ನಿಲ್ಲದೆ;
ಸಾವಿನಂತೆ ಕಾಣದೆ.

‍ಲೇಖಕರು avadhi

9 September, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading