‘ತೇಜಸ್ವಿ’ ಎನ್ನುವ ಮಾಸದ ಅಚ್ಚರಿ!

ವೆಂಕಟೇಶ್ ಬಿ.ಎಂ.

ಚಿನ್ನದ ನಗರಿ ಎಲ್ಡೊರಾಡೋ ಕುರಿತ ಕೌತುಕಮಯ ಸಂಗತಿಗಳು, ಅಮೆಜಾನಿನ ಅದ್ಭುತ ಕಾಡಿನಲ್ಲಿ ಹೊರಜಗತ್ತಿನ ಉಸಾಬರಿಯೇ ಇಲ್ಲದೆ ಬದುಕುತ್ತಿರುವ ಅಲ್ಲಿನ ಮೂಲನಿವಾಸಿಗಳ ರಹಸ್ಯಮಯ ಬದುಕು, ಫ್ಲೈಯಿಂಗ್ ಸಾಸರ್ಸ್ ಎಂಬ ಪರಮ ಕೌತುಕ.. ಹೀಗೆ ಜಗತ್ತಿನ ಅನೇಕ ಅನೂಹ್ಯ ರಹಸ್ಯಗಳನ್ನು ಮಾತ್ರವಲ್ಲದೆ ನಮ್ಮದೇ ಮಲೆನಾಡಿನ ಮಕ್ಕಳಾದ ಮಂದಣ್ಣ, ಕರಿಯಪ್ಪ, ಎಂಗ್ಟ, ಕರಾಟೆ ಮಂಜ ಮುಂತಾದ ಪಾತ್ರಗಳ ಮೂಲಕ ಪ್ರಕೃತಿಯನ್ನು ಓದುಗರೆದುರು ಜೀವಂತವಾಗಿಸಿದ ಪ್ರತಿ ತಲೆಮಾರಿನ ಓದುಗರ ಡಾರ್ಲಿಂಗ್ ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು ಬಿಟ್ಟೂ ಬಿಡದೆ ಇಂದಿಗೂ ಕಾಡುತ್ತವೆ. ‘ಕೆರೆಯಲ್ಲಿ ಹೊಸ ನೀರು ಹರಿದಿದೆ’ ಎನ್ನುವ ಹಾಗೆ ತೇಜಸ್ವಿ ಕೃತಿಗಳಾಚೆ ಏನೆಲ್ಲಾ ಓದಿಕೊಂಡಿದ್ದರೂ ಕೂಡ, ಜೀವನದೃಷ್ಟಿಯಲ್ಲಿ ಆಗಿರುವ ಬದಲಾವಣೆಗಳ ಹೊರತಾಗಿಯೂ ತೇಜಸ್ವಿ ಇಂದಿಗೂ ಕೂಡ ಬೆರಗು ಹುಟ್ಟಿಸುತ್ತಾರೆ.

ಮನೆ ಹತ್ತಿರದ ಗ್ರಂಥಾಲಯದಲ್ಲಿ ಪರಿಚಯದ ಗ್ರಂಥಪಾಲಕರಿದ್ದಾರೆ. ತಾವು ಕೆಲಸ ಮಾಡುವ ಗ್ರಂಥಾಲಯದಲ್ಲಿ ತೇಜಸ್ವಿ ಪುಸ್ತಕಗಳನ್ನು ಇಟ್ಟಿರುವ ರ್ಯಾಕಿನ ಮೇಲೆ ಸದಾ ಅವರ ಒಂದು ಕಣ್ಣು ನೆಟ್ಟಿರುತ್ತದೆ! ತೇಜಸ್ವಿ ಪುಸ್ತಕಗಳನ್ನು ಓದುವ ಚಪಲಕ್ಕೆ ಬಿದ್ದವರು ಪುಸ್ತಕ ಎತ್ತಬಹುದು ಎನ್ನುವ ಆತಂಕವಂತೆ; ಅನುಭವ ಇದ್ದರೂ ಇರಬಹುದು! ನಾನೂ ಕೂಡ ತೇಜಸ್ವಿ ಸಾಹಿತ್ಯದ ಅಪ್ಪಟ ಓದುಗ ಎಂದು ತಿಳಿದ ನಂತರ ನನ್ನ ಕಡೆಯೂ ಓರೆನೋಟ ಬೀರುತ್ತಿದ್ದರು! ಸಂಕೋಚ ಬಿಟ್ಟು ಹೇಳುವುದಾದರೆ, ಈ ಗ್ರಂಥಪಾಲಕರು ‘ಧಮ್’ ಹೊಡೆಯಲು ಹೊರಗೆ ಹೋಗಿದ್ದಾಗ ನಾನೂ ಕೂಡ ತೇಜಸ್ವಿಯವರ ಒಂದೆರಡು ಪುಸ್ತಕಗಳನ್ನು ಅದೇ ಗ್ರಂಥಾಲಯದ, ಅದೇ ರ್ಯಾಕುಗಳಿಂದ ಎತ್ತಿದ್ದೆ! ನನ್ನ ಈ ಖದೀಮ ಕೆಲಸವನ್ನು ಹೇಗೋ ಕಂಡುಹಿಡಿದ ಅಮ್ಮ, ‘ನಿನ್ನಿಂದ ಆ ಲೈಬ್ರರಿಯನ್ ಕೆಲಸ ಹೋಗುತ್ತೆ’ ಎಂದು ಹೇಳಿದ್ದರಿಂದ ಕದ್ದಿದ್ದ ಎರಡು ಪುಸ್ತಕಗಳನ್ನು ಅದೇ ಜಾಗದಲ್ಲಿ ಮರಳಿ ಇಟ್ಟುಬಂದಿದ್ದೆ.

ಯುವಕರು ತಮ್ಮ ಬೈಕು, ಕಾರುಗಳ ಹಿಂಬದಿ ಸಿನಿಮಾ ನಟನಟಿಯರ ಚಿತ್ರ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ ಇಂದು ಅನೇಕ ಸಾಹಿತ್ಯಾಸಕ್ತ ಯುವಕರು ತಮ್ಮ ಬೈಕುಗಳ ಹಿಂಬದಿ ತೇಜಸ್ವಿಯವರ ಫೋಟೋ ಹಾಕಿಸಿಕೊಳ್ಳುತ್ತಿರುವುದನ್ನು ನೋಡಬಹುದು. ತೇಜಸ್ವಿ ಬದುಕಿದ್ದ ಮೂಡಿಗೆರೆಯ ಅವರ ಮನೆಗೆ ನಿರಂತರವಾಗಿ ಭೇಟಿ ನೀಡುವ ಸಾಹಿತ್ಯಾಸಕ್ತರು, ಕುತೂಹಲಿಗಳು ದಿನೇದಿನೇ ಹೆಚ್ಚುತ್ತಿದ್ದಾರೆ. ತೇಜಸ್ವಿ ಓದುಗರ ಮನಸ್ಸುಗಳಲ್ಲಿ ಬೆರೆತುಹೋಗಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಸರ್ಕಾರವೇ ಮೇಲೆ ಬಿದ್ದು ಪಂಪ ಪ್ರಶಸ್ತಿ ಕೊಡಲು ಬಂದಾಗ ತೇಜಸ್ವಿ ಅದನ್ನು ನಿರಾಕರಿಸಿದ್ದು ಓದುಗ ವಲಯದಲ್ಲಿ ದಂತಕಥೆ. ‘ಹಾರ, ಸನ್ಮಾನ ಎಲ್ಲಾ ಯಾರಿಗೆ ಬೇಕ್ರಿ! ಮುಜುಗರ ಕಣ್ರಿ’ ಎಂದು ಒಂದೇ ಏಟಿಗೆ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಹೋಗಲು ನಿರಾಕರಿಸಿದ್ದು ಸಾಹಿತ್ಯಾಸಕ್ತರಿಗೆ ಅಚ್ಚರಿ. ‘ನಾನು ಎಲ್ಲಿಗೂ ಹೋಗಲ್ಲ; ವಿಮಾನದ ಟಿಕೆಟ್ ಹಣವನ್ನು ಕನ್ನಡದ ಯಾವುದಾದರೂ ಉಪಯುಕ್ತ ಕೆಲಸಕ್ಕೆ ಬಳಸಿಕೊಳ್ಳಿ’ ಎಂದು ಹೇಳಿ ಅಮೇರಿಕದ ‘ಅಕ್ಕ’ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದ ಪ್ರಾಯೋಜಕತ್ವದಲ್ಲಿ ಹೋಗಲು ನಿರಾಕರಿಸಿದ್ದು ಕೂಡ ದಂತಕಥೆಯೇ. ಸಂದರ್ಶನವೊಂದರಲ್ಲಿ ‘ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದೆಯೇನ್ರೀ’ ಎಂದು ತೇಜಸ್ವಿ ಮುಂದಿಟ್ಟ ಸರಳ ಪ್ರಶ್ನೆ ಸಹೃದಯರ ಅಂತರಾಳವನ್ನು ಕಲಕುವಷ್ಟು ಸಶಕ್ತವಾಗಿದೆ. ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ನೂರಾರು ಜನರನ್ನು ಯೋಚನೆಗೆ ಹಚ್ಚುತ್ತದೆ. ಸಾಹಿತ್ಯದ ಆಶಯ ಇದೇ ಅಲ್ಲವೇ? ಪ್ರಶ್ನೆಗಳನ್ನು ಹುಟ್ಟಿಸುವುದು; ಉತ್ತರ ಕಂಡುಕೊಳ್ಳಲು ಬೇಕಾದ ಮನೋಭೂಮಿಕೆಯನ್ನು ಸಿದ್ಧಪಡಿಸುವುದು.

ಇಂದು ತೇಜಸ್ವಿಯವರ ಹೆಸರಿನಲ್ಲಿ ವಾಟ್ಸಪ್ ಗುಂಪುಗಳಿವೆ; ಫೇಸ್ಬುಕ್ಕಿನಲ್ಲಿ ಅವರ ಪುಸ್ತಕಗಳ ಕುರಿತು ಚಿತ್ರಗಳು, ಬರಹಗಳು ನಿರಂತರವಾಗಿ ಚಾಲ್ತಿಯಲ್ಲಿ ಇರುತ್ತವೆ. ಅವರ ಪ್ರಸಿದ್ಧ ಹೇಳಿಕೆಗಳನ್ನು ವೈರಲ್ ಮಾಡಿ ವಿದ್ಯಾರ್ಥಿಗಳಿಗೆ, ಯುವಜನತೆಗೆ ತಲುಪಿಸುವ ಕೆಲಸ ಆಗುತ್ತಿದೆ. ಕನ್ನಡದ ಬೇರೆ ಯಾವ ಲೇಖಕರಿಗೂ ಸಿಗದ ಜನಪ್ರಿಯತೆ, ತಾರಾಪಟ್ಟ ತೇಜಸ್ವಿಯವರಿಗೆ, ಅವರು ನಿಧನರಾದ ಹಲವು ವರ್ಷಗಳ ನಂತರವೂ ಸಿಗುತ್ತಿದೆ. ಅವರ ಮಾಂತ್ರಿಕ ಬರಹ ಶೈಲಿ, ಫೋಟೋಗ್ರಫಿ, ಸರಳ ಮದುವೆ; ಹೀಗೆ ಎಲ್ಲವೂ ಕೂಡ ದಂತಕಥೆಗಳಾಗಿ ಮುಕ್ತಮನಸ್ಸಿನ ಯುವಕ ಯುವತಿಯರನ್ನು ಸೆಳೆಯುತ್ತಲೇ ಇದೆ.

ನಾನು ಬಿ.ಎಡ್. ಓದುತ್ತಿದ್ದಾಗ ಗ್ರಾಮೀಣ ಶಾಲೆಯೊಂದರಲ್ಲಿ ಪಾಠಗಳನ್ನೆಲ್ಲಾ ಮುಗಿಸಿದ ನಂತರ ಭೌತಶಾಸ್ತ್ರ ವಿಷಯದ ಪರೀಕ್ಷೆ ಕೊಟ್ಟಿದ್ದೆ. ಇದರಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ ಮೂವರು ಮಕ್ಕಳಿಗೆ ಪುಸ್ತಕ ಬಹುಮಾನ. ಯಾವ ಪುಸ್ತಕ ಕೊಡುವುದು ಎಂದು ಯೋಚಿಸುವ ಪ್ರಮೇಯವೇ ಇಲ್ಲ! ಪುಸ್ತಕದ ಅಂಗಡಿಗೆ ನುಗ್ಗಿದವನೇ ತೇಜಸ್ವಿಯವರ ಪರಿಸರದ ಕಥೆ ಸೇರಿದಂತೆ ಮಕ್ಕಳಲ್ಲಿ ಓದಿನ ಪ್ರೀತಿ ಮೂಡಿಸಬಲ್ಲ ‘ಮಿಲೇನಿಯಮ್’ ಸೀರೀಸಿನ ಅವರ ಹಲವು ಪುಸ್ತಕಗಳನ್ನು ಕೊಂಡುಕೊಂಡೆ. ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದಿದ್ದ ಹುಡುಗಿಯೊಬ್ಬಳಿಗೆ ‘ಪರಿಸರದ ಕಥೆ’ ಪುಸ್ತಕ ಕೊಟ್ಟಿದ್ದೆ. ತಮಾಷೆಯೆಂದರೆ , ಎರಡು ವರ್ಷಗಳ ಬಳಿಕ ಅಚಾನಕ್ಕಾಗಿ ಬಸ್ಸಿನಲ್ಲಿ ಸಿಕ್ಕಿದ್ದ ಅದೇ ಹುಡುಗಿ ತಾನಾಗಿಯೇ ಪುಸ್ತಕದ ವಿಷಯ ತೆಗೆದು ಪರಿಸರದ ಕಥೆಯ ಒಂದೊಂದು ಕಥೆಯನ್ನೂ ಹಲವು ಬಾರಿ ಓದಿದ್ದೇನೆ ಎಂದು ಸಂಭ್ರಮದಿಂದ ಹೇಳಿದಳು.

ಯಾವುದೋ ಸಮಾರಂಭದಲ್ಲಿ ಕವಿ ಸುಮತೀಂದ್ರ ನಾಡಿಗರು ಹೇಳಿದ್ದು ನೆನಪಾಗುತ್ತಿದೆ; ತೇಜಸ್ವಿ ಸಾಹಿತ್ಯವನ್ನು ಪ್ರೀತಿಯಿಂದ ಓದಿದ ಯಾರೇ ಆದರೂ, ಬೇರೆ ಏನೂ ಆಗದಿದ್ದರೂ ಕನಿಷ್ಟ ಪಕ್ಷ ಒಳ್ಳೆಯ ಮನುಷ್ಯರಂತೂ ಆಗುತ್ತಾರೆ ಎಂದು ಹೇಳಿದ್ದರು ಸುಮತೀಂದ್ರ ನಾಡಿಗರು. ಇದು ಜಗತ್ತಿನ ಎಲ್ಲಾ ಉತ್ತಮ ಸಾಹಿತ್ಯಕ್ಕೂ ಅನ್ವಯಿಸುತ್ತದೆ. ಉತ್ತಮ ಸಾಹಿತ್ಯ ಓದಿದ ಯಾರಿಗೇ ಆದರೂ ತಮ್ಮೊಳಗೇ ಸಂಭವಿಸುತ್ತಿರುವ ಮಾನಸಿಕ ಬದಲಾವಣೆ ಅನುಭವಕ್ಕೆ ಬರುತ್ತದೆ. ನಮ್ಮ ಹಿಂದಿನ ವ್ಯಕ್ತಿತ್ವ, ಸಂಸ್ಕಾರಗಳು ಏನೇ ಇರಲಿ; ಉತ್ತಮ ಸಾಹಿತ್ಯ ನಮ್ಮ ಅಂತರಾಳವನ್ನು ಕಲಕುತ್ತದೆ, ಹೊಸ ಹುಟ್ಟನ್ನು ನೀಡುತ್ತದೆ. ಕರ್ವಾಲೋ, ತಬರನ ಕತೆ, ಅವನತಿ, ಕುಬಿ ಮತ್ತು ಇಯಾಲ ಸೇರಿದಂತೆ ತೇಜಸ್ವಿಯವರ ಹಲವು ಕಲಾಕೃತಿಗಳು ನಮ್ಮನ್ನು ಕಾಡುವ, ಚಿಂತನೆಗೆ ಹಚ್ಚುವ ಗುಣವನ್ನು ಹೊಂದಿದೆ.
‘ಅಲೆಮಾರಿ ಅಂಡಮಾನ್’, ನಿಗೂಢ ಮನುಷ್ಯರು ಮುಂತಾದ ಪುಸ್ತಕ ಓದುತ್ತಿದ್ದಾಗ ಅರ್ನೆಸ್ಟ್ ಹೆಮ್ಮಿಂಗ್ವೇ ಬರೆದ ‘ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ’ ಪುಸ್ತಕದ ಪ್ರಕೃತಿಯ ಜೊತೆಗಿನ ಮನುಷ್ಯನ ಗುದ್ದಾಟ ನೆನಪಾಗುತ್ತದೆ. ಇಂದಿನ ಕೇರಳ, ಕೊಡಗು ಮುಂತಾದ ಕಡೆ ಸಂಭವಿಸುತ್ತಿರುವ ಭಯಂಕರ ಪ್ರವಾಹಗಳನ್ನು ನೋಡಿದಾಗ ‘ನಿಗೂಢ ಮನುಷ್ಯರು’ ಕಿರುಕಾದಂಬರಿ ಕಣ್ಣಮುಂದೆ ಬರುತ್ತದೆ.

ತೇಜಸ್ವಿಯವರ ಸಾಹಿತ್ಯ ಹಾಗೂ ವ್ಯಕ್ತಿತ್ವದ ಬಗ್ಗೆ ಇಷ್ಟೆಲ್ಲಾ ಹೇಳಿದ ನಂತರ, ಅವರ ಸಾಹಿತ್ಯವನ್ನು ಹಾಗೂ ಚಿಂತನೆಗಳ ಒಂದಷ್ಟು ಅಂಶಗಳನ್ನು ಇಂದಿನ ಸಾಹಿತ್ಯ ಹಾಗೂ ಸಮಾಜಾಸಕ್ತ ಯುವಕ ಯುವತಿಂiÀiರು ವಿಮರ್ಶಿಸಿ ವಿಶ್ಲೇಷಿಸಬಹುದಲ್ಲವೇ ಅನ್ನಿಸುತ್ತದೆ. ಸ್ವತಃ ತೇಜಸ್ವಿಯವರೇ ವ್ಯಕ್ತಿ ಆರಾಧನೆಯನ್ನು ಸುತಾರಾಂ ಒಪ್ಪುತ್ತಿರಲಿಲ್ಲ. ಸಾಹಿತ್ಯಾಸಕ್ತರು ಕೇವಲ ಸಾಹಿತ್ಯದ ಗೊಡ್ಡುಗಳಾಗಬಾರದು; ವಿಜ್ನಾನ, ಚರಿತ್ರೆ, ಭೂಗೋಳ; ಹೀಗೆ ಎಲ್ಲವನ್ನೂ ಓದಿ ತಿಳಿಯಬೇಕು ಎಂದು ಹೇಳುತ್ತಿದ್ದರು. ಹೀಗಾಗಿ ಇಂದಿನ ಭಾರತ ಹಾಗೂ ಜಾಗತಿಕ ವಿದ್ಯಮಾನಗಳ ಬೆಳಕಿನಲ್ಲಿ ತೇಜಸ್ವಿಯವರ ಸಾಹಿತ್ಯ, ಚಿಂತನೆಗಳನ್ನು ಮರುವಿಶ್ಲೇಷಣೆ ಹಾಗೂ ಮರುಓದಿಗೆ ಒಳಪಡಿಸುವುದು ಅಗತ್ಯ. ಇದು ನಾವು ಅವರಿಗೆ ಸಲ್ಲಿಸುವ ಗೌರವ ಹಾಗೂ ಅರ್ಥಗರ್ಭಿತ ನಮನವೂ ಹೌದು.

‍ಲೇಖಕರು avadhi

September 8, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Prasanna Kumar Bodh

    ತೇಜಸ್ವಿ ಎಂದರೆ ನಮಗೆ ಕುತೂಹಲ ..ಒಲವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: