ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Me too ಎಂಬ ರಿಯಲ್ ಲೈಫ್ ಹಾರರ್ ಸ್ಟೋರಿ!

ಪ್ರಸಾದ್ ನಾಯ್ಕ್ 

ರಾಧೆ “Me too” ಎಂದು ಬರೆದಿದ್ದಳು.

ರಾಧೆಯ ಸ್ಟೇಟಸ್ ಅನ್ನು ಅವನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ. ಅವನಿಗೆ ತಕ್ಷಣ ನಾಚಿಕೆಯಾಯಿತು. ಹಾಗೆಯೇ ಕೊಂಚ ಭಯವೂ ಕೂಡ.

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೊಂಡ ಅನ್ನೋ ಥರ ತನ್ನ ಬಗ್ಗೆ ಇನ್ನೇನೂ ಬರೆದಿಲ್ಲ ತಾನೇ ಎಂದು ಅವಳ ಟೈಮ್ ಲೈನ್ ಎಲ್ಲಾ ಜಾಲಾಡಿದ. ಹಾಗೇನೂ ಇಲ್ಲದ್ದನ್ನು ಕಂಡು ಅವನಿಗೆ ಸಮಾಧಾನವಾಯಿತು. ಅಷ್ಟಕ್ಕೂ ನಾನೇನು ಮಾಡಿದೆ, ಇಂಥಾ ಮಹಾನಗರಿಯಲ್ಲಿ ಇದೆಲ್ಲಾ ದೊಡ್ಡ ವಿಷಯವೇ ಅಂದುಕೊಂಡ. ಇವರದ್ದೆಲ್ಲಾ ಡ್ರಾಮಾ ನೇ ಆಯಿತು, ಕೊಂಚ ಬೆರಳು ತಾಕಿಸಿದರೂ ಮಹಾ ರೇಪ್ ಆದಂತೆ ಬರೆದುಕೊಳ್ಳುವುದು ಅಂದುಕೊಂಡ. ಇದೆಲ್ಲಾ ತನ್ನ ಅಂತಃಸಾಕ್ಷಿಯೆದುರಲ್ಲಿ ಮುಖ ಮುಚ್ಚಿಕೊಳ್ಳಲು ನಡೆಸುತ್ತಿರುವ ಕ್ಷೀಣ ಪ್ರಯತ್ನ ಎಂದು ಅವನಿಗೆ ಗೊತ್ತಿತ್ತು. ಯಾಕೆಂದರೆ ರಾಧೆಯ ಸುಂದರ ಕಣ್ಣುಗಳಲ್ಲಿ ಅವನೆಡೆಗಿದ್ದ ಅಸಹ್ಯ, ಹೇವರಿಕೆ, ಸುಡುಸುಡು ಸಿಟ್ಟನ್ನು ಆತ ಕಂಡಿದ್ದ. ತಾನು ಅವಳ ಪರಿಸ್ಥಿತಿಯ ಲಾಭ ಪಡೆಯುತ್ತಿರುವೆನೆಂದು ಅವನಿಗೆ ಗೊತ್ತಿತ್ತು.

ಆದರೂ ತನ್ನ ರೂಪ, ಸ್ಥಾನಮಾನ, ಅಂತಸ್ತುಗಳಿಗೆ ಆಕರ್ಷಿತಳಾಗಿ ಅವಳು ತಾನಾಗಿ ನನ್ನೆಡೆಗೆ ಬರುತ್ತಾಳೆ ಎಂಬ ಹಮ್ಮು ಅವನಲ್ಲಿತ್ತು. ಆದರೆ ಹಾಗಾಗಲಿಲ್ಲ. ಅದೇನು ಆಮಿಷ ತೋರಿಸಿದರೂ, ಪುಸಲಾಯಿಸಿದರೂ, ಭಯ ಹುಟ್ಟಿಸಿದರೂ, ಹಿಂದೆ ಬಿದ್ದರೂ, ಕಾಡಿ ಕಂಗಾಲಾಗಿಸಿದರೂ ಅವಳು ತಾನಾಗಿ ಅವನೆಡೆ ಬರಲಿಲ್ಲ. ಅದಕ್ಕೇ ಅವನು ರೋಸಿಹೋದದ್ದು. ತನ್ನ ಹಮ್ಮಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂಬಂತೆ ಅವಳು ಅವನ ಮುಖಕ್ಕೆ ಉಗಿದಿದ್ದಳು.

ಅಸಮಾಧಾನಗೊಂಡ ಆತ ಆ ದಿನವೇ ಕನ್ನಡಿಯೆದುರು ಬಟ್ಟೆ ಬಿಚ್ಚಿ ನಿಂತಿದ್ದ. ತನಗೇನು ಕಮ್ಮಿ ಎಂದು ಮತ್ತೆ ಮತ್ತೆ ತಲೆ ಬಾಚಿ, ಗಡ್ಡ ತೀಡಿ, ಕಣ್ಣು ಕೆಕ್ಕರಿಸಿ, ಇಳಿಬಿದ್ದ ಹೊಟ್ಟೆಯನ್ನು ಹಿಂದಕ್ಕೆಳೆದುಕೊಳ್ಳುತ್ತಾ ನೋಡಿದ. ನನಗೇನಾಗಿದೆ ಧಾಡಿ, ಚೆನ್ನಾಗೇ ಇದ್ದೀನಲ್ಲಾ ಎಂದು ಕನ್ನಡಿಯ ಮುಂದೆ ಕ್ಷೀಣವಾಗಿ ನಕ್ಕ. ಆದರೆ ಬಂದೂಕು ತೋರಿಸಿ ಹೆಣ್ಣನ್ನು ಒಲಿಸಿಕೊಳ್ಳಲಾಗುವುದಿಲ್ಲ ಎಂಬುದು ಅವನಿಗೇನು ಗೊತ್ತು! ಮಿ ಟೂ ಅಂತೆಲ್ಲಾ ಬರೆಯುತ್ತಿದ್ದಾಳೆ, ಸದ್ಯ ಅವಳ ಹತ್ತಿರ ಹೋಗುವುದು ಬೇಡ ಎಂದುಕೊಂಡ. ಭಯಂಕರ ಸೊಕ್ಕು ಅವಳಿಗೆ ಎಂದು ಮನದಲ್ಲೇ ಬೈಯುವುದರ ಜೊತೆಗೇ ಥೂ, ಜೊಲ್ಲು ಸುರಿಸುತ್ತಾ ಬದುಕುವ ನಾಯಿ ಜನ್ಮವಾಯಿತು ನನ್ನದು ಎಂದು ಹಳಿದುಕೊಂಡ. ನನ್ನ ಬಗ್ಗೆ ಏನನ್ನೂ ಬರೆದು ನನ್ನ ಮಾನ ಹರಾಜು ಹಾಕದೇ ಇರಲಪ್ಪಾ ದೇವರೇ ಎಂದು ಮನದ ಮೂಲೆಯಲ್ಲೊಮ್ಮೆ ಹಂಬಲಿಸಿದ. ಅಂದು ರಾತ್ರಿ ಅವನಿಗೆ ನಿದ್ದೆ ಬೀಳಲಿಲ್ಲ.

ರೀಟಾ “Me too” ಎಂದು ಬರೆದಿದ್ದಳು.

ರೀಟಾಳ ಸ್ಟೇಟಸ್ ಅಪ್ಡೇಟ್ ಗೆ ಗುಂಪಿನಲ್ಲಿ ತನ್ನದೂ ಒಂದು ಗೋವಿಂದ ಎನ್ನುವಂತೆ ತಾನು ಲೈಕ್ ಒತ್ತಲೇ, ಏನಾದರೊಂದು ಕಮೆಂಟ್ ಮಾಡಲೇ ಎಂದು ಆತ ಯೋಚಿಸಿದ.

ಆದರೆ ಯಾವ ಮುಖ ಇಟ್ಟುಕೊಂಡು ಮಾಡಲಿ ಅನ್ನಿಸಿತು. ನನ್ನ ಬಗ್ಗೆ ಯೋಚಿಸಿಯೇ ಅವಳು ಮಿ ಟೂ ಎಂದು ಬರೆದಿರಬಹುದೇ ಎಂದು ಯೋಚಿಸಿದ. ಇಲ್ಲಪ್ಪಾ, ಎಲ್ಲಾ ಹುಡುಗರೂ ಇದನ್ನೇ ಮಾಡೋದು, ಇನ್ಯಾರೋ ಏನೋ ಮಾಡಿರಬೇಕು ಅಂದುಕೊಂಡ. ಪುಣ್ಯಕ್ಕೆ ಈ `ಎಲ್ಲಾ ಹುಡುಗರು’ ಯಾರು ಎಂದು ಅವನು ತನಗೆ ತಾನೇ ಕೇಳಲಿಲ್ಲ. ಕೇಳಿದ್ದರೆ ಮುಖಭಂಗವಾಗುತ್ತಿತ್ತೋ ಏನೋ! ಇವಳೂ ಕೂಡ ಏನೂ ಕಮ್ಮಿಯೇನಿಲ್ಲ, ಅದಕ್ಕೇ ನಾನು ಇವಳ ಬೆನ್ನ ಹಿಂದೆ ಬಿದ್ದು ಶನಿಯಂತೆ ಕಂಗೆಡಿಸಿದ್ದು ಎಂದು ತನಗೆ ತಾನೇ ಸಂತೈಸಿಕೊಂಡ. ಆದರೂ ಅದ್ಯಾಕೋ ಅಂದು ತನ್ನ ಬಗ್ಗೆಯೇ ಅವನಿಗೆ ಅಸಹ್ಯವೆನಿಸಿತು.

ಅದು ಅವಳು ಮಿ ಟೂ ಎಂದು ಬರೆದದ್ದಕ್ಕಲ್ಲ. ಅವರಿವರ್ಯಾಕೆ? ನನ್ನ ಕುಟುಂಬದ ಸದಸ್ಯರಿಗೇ ಈ ಬಗ್ಗೆ ತಿಳಿದರೆ ಚಪ್ಪಲಿ ಸವೆದುಹೋಗುವಷ್ಟು ಚಚ್ಚುತ್ತಾರಲ್ಲವೇ ಅಂದುಕೊಂಡ. ಹೀಗೆಲ್ಲಾ ಮಾಡಿದ ನಂತರ ಪ್ರತೀಬಾರಿಯೂ ಕಾಡುವ guilt ನ ಬಗ್ಗೆ ಯಾವತ್ತಾದರೂ ಗಂಭೀರವಾಗಿ ಯೋಚಿಸಿದ್ದೇನೆಯೇ ಅನಿಸಿತು. ಹೇಗಿದ್ದೆ ನಾನು, ಹೇಗಾಗಿಬಿಟ್ಟೆನಲ್ಲಾ ಎಂದೆನಿಸಿತು. ಇದೇನಾ ನನ್ನ ಗಂಡಸ್ತನ ಅನ್ನಿಸಿತು ಅವನಿಗೆ. ಆವತ್ತು ಅದ್ಯಾವನೋ ಅತ್ಯಾಚಾರಿಯೊಬ್ಬನ ಬಗ್ಗೆ ವರದಿಯಾದಾಗ ತನ್ನದೇ ಮುಖವು ಟಿವಿ ಪರದೆಯಲ್ಲಿ ಮೂಡಿದಂತಾಗಿ ತಕ್ಷಣ ಚಾನೆಲ್ ಬದಲಿಸಿದ್ದ. ತನ್ನಿಂದ ಕಿರುಕುಳಕ್ಕೀಡಾದ ಯಾರ್ಯಾರೆಲ್ಲಾ ಇಂದು ಮಿ ಟೂ ಎಂದು ಬರೆದಿರಬಹುದು ಎಂದು ಲೆಕ್ಕ ಹಾಕಿದ. ಇದೇ ಮೊದಲಬಾರಿಗೆ ಅವನ ಮೈಯಲ್ಲೆಲ್ಲಾ ಕಂಬಳಿಹುಳಿ ಹರಿದಾಡಿದಂತಾಯಿತು.

ರುಬೀನಾ “Me too” ಎಂದು ಬರೆದಿದ್ದಳು.

ಅವನಿಗೆ ಅದೇನೆಂದು ತಿಳಿಯಲ್ಲಿಲ್ಲ. ಸುಮ್ಮನೆ ಸ್ಕ್ರೋಲ್ ಡೌನ್ ಮಾಡುತ್ತಲೇ ಹೋದ. ಇನ್ನೂ ಹತ್ತಾರು ಮಿ ಟೂ ಗಳು ಸಿಕ್ಕವು. ಏನಪ್ಪಾ ಇದು ರಗಳೆ ಎಂದು ಕೊಂಚ ಗಮನವಿಟ್ಟು ನೋಡಿದರೆ ಒಂದಿಷ್ಟು ವಿಷಯ ತಿಳಿಯಿತು. ತಕ್ಷಣವೇ ಅವನ ಮುಖವು ಬಣ್ಣಕೆಟ್ಟಿತು.

ಛೀ ಎಂಥಾ ಸಮಾಜ ಅಂದುಕೊಂಡ. ಆದರೆ ಒಂದೆರಡು ಮಿ ಟೂಗಳಿಗೆ ತಾನು ಕೂಡ ಕಾರಣ ಎಂದೆನಿಸಿ ಇರಿಸುಮುರಿಸಾಯಿತು. ತಕ್ಷಣ ಲಾಗೌಟ್ ಮಾಡಿ ತನ್ನ ಉಳಿದೆರಡು ನಕಲಿ ಪ್ರೊಫೈಲ್ ಗಳನ್ನು ಪರಿಶೀಲಿಸಿದ. ಅಲ್ಲೂ ಹತ್ತಾರು ಮಿ ಟೂ ಗಳಿದ್ದವು. ಪುಣ್ಯಕ್ಕೆ ಇಲ್ಲೂ ಸಂತೆಯಲ್ಲಿ ಯಾರೂ ಇವನ ಲಂಗೋಟಿ ಬಿಚ್ಚಿರಲಿಲ್ಲ. ಆದರೂ ಅದ್ಯಾಕೋ ಬೆನ್ನ ಹುರಿಯಲ್ಲಿ ಭಯವು ಹರಿದಾಡಿದಂತಾಯಿತು. ಹಿಂದೆ ಮುಂದೆ ನೋಡದೆ, ಆದದ್ದಾಗಲಿ ಎನ್ನುತ್ತಾ ಇದ್ದದ್ದರಲ್ಲೇ ಅಸಹ್ಯವಾಗಿದ್ದ ಒಂದು ನಕಲಿ ಪ್ರೊಫೈಲ್ ಅನ್ನು ಡಿಲೀಟ್ ಮಾಡಿದ.

ಜೊತೆಗೇ ತನ್ನ ನಕಲಿ ಪ್ರೊಫೈಲುಗಳಂತೆ ತನಗೆ ಅದೆಷ್ಟು ಮುಖವಿದೆಯಲ್ಲಾ ಎಂದು ಅಚ್ಚರಿಪಟ್ಟ. ತಾನು ಮಹಾ ಕ್ಯಾಸನೋವಾ (Casanova) ಅಂತೆಲ್ಲಾ ಗೆಳೆಯರ ಬಳಿ ಕೊಚ್ಚಿಕೊಳ್ಳುವ ಬಗ್ಗೆ ಇದೇ ಮೊದಲಬಾರಿ ಹೇವರಿಕೆಯುಂಟಾಯಿತು. ಯಾರಾದರೂ ತನ್ನ ಕೋಣೆಯೊಳಕ್ಕೆ ಬರುವ ಮುನ್ನವೇ ಇಲ್ಲಿಂದ ಮಾಯವಾಗಬೇಕು ಎಂಬ ತರಾತುರಿಯಲ್ಲಿ ತನ್ನ ಅಕೌಂಟಿನಿಂದ ಲಾಗೌಟ್ ಆದ. ತಕ್ಷಣ ಅದ್ಯಾಕೋ ಅವನಿಗೆ ಮಡದಿಯ ನೆನಪಾಯಿತು. ನನ್ನ ಬೆನ್ನ ಹಿಂದೆ ಇವಳೇನು ಮಾಡುತ್ತಿರಬಹುದು ಎಂಬ ಕೆಟ್ಟ ಕುತೂಹಲ ಅವನಲ್ಲಿ ಮೂಡಿತು. ಯಾವುದಕ್ಕೂ ಒಮ್ಮೆ ನೋಡೇಬಿಡೋಣ ಎಂದು ಲೆಕ್ಕಹಾಕಿದ ಈತ ರಹಸ್ಯ ಪಾಸ್ ವರ್ಡನ್ನು ಹಾಕಿ ಅವಳ ಖಾತೆಯನ್ನು ತೆರೆದ. ಸೋಜಿಗವೆಂದರೆ ಅಲ್ಲೂ ಮಿ ಟೂ ಎಂದಿತ್ತು. ಸ್ವತಃ ಅವಳೇ ಬರೆದಿದ್ದು. ಇಲ್ಲಿರುವುದು ತಾನೋ ಅಥವಾ ಬೇರ್ಯಾವ ಗೋಮುಖವ್ಯಾಘ್ರನೋ ಎಂದು ತಿಳಿಯದೆ ಆತನಿಗೆ ಏಕಾಏಕಿ ವಾಕರಿಕೆ ಬಂದಂತಾಯಿತು.

ರೆಬೆಕ್ಕಾ “Me too” ಎಂದು ಬರೆದಿದ್ದಳು.

ಅವಳಿಂದ ಸಾವಿರಾರು ಮೈಲುಗಳ ದೂರದಲ್ಲಿದ್ದ ಇವನಿಗೆ ಆ ಮಿ ಟೂ ಕಂಡಿತ್ತು. ಬಿಳಿತೊಗಲಿನ ಹುಚ್ಚಿಗೆ ಬಿದ್ದಿದ್ದ ಇವನು ತನ್ನ ದೇಶಕ್ಕೆ ಹೊಸದಾಗಿ ಬಂದ ಇವಳನ್ನು ಇನ್ನಿಲ್ಲದಂತೆ ಪೀಡಿಸಿದ್ದ.

ಪ್ರವಾಸವನ್ನು ಆಸ್ವಾದಿಸಲು ಬಂದಾಕೆ ದುರಾದೃಷ್ಟವಶಾತ್ ಕೆಲ ರಾಕ್ಷಸರ ಕೈಯಲ್ಲಿ ನಲುಗಿಹೋಗುವಷ್ಟು ಅಪಾಯದ ಅಂಚಿಗೆ ಬಂದು ನಿಂತಿದ್ದಳು. ಪಾಶ್ಚಾತ್ಯ ದೇಶಗಳಲ್ಲೆಲ್ಲಾ ಇದೆಲ್ಲಾ ಸಾಮಾನ್ಯವಲ್ಲವೇ, ಇದರಲ್ಲೇನಿದೆ ಮಣ್ಣಾಂಗಟ್ಟಿ ಎಂದು ಈತ ಅಂದುಕೊಂಡ. ಆದರೆ ತಕ್ಷಣ ಆತನಿಗೆ ತಾನು ತನ್ನ ರಾಜ್ಯವನ್ನೂ ಬಿಟ್ಟು ಹೋಗಿಲ್ಲ ಎಂದು ನೆನಪಾಯಿತು. ಇನ್ನು ಯಾವ ದೇಶದ ಬಗ್ಗೆಯಾದರೂ ಓದಿಯೋ ಅಥವಾ ಇನ್ಯಾವ ಮೂಲದಿಂದಲೂ ತಿಳಿದುಕೊಂಡಿಲ್ಲ ಎಂಬುದೂ ನೆನಪಾಯಿತು. ಅರೇ, ಮತ್ತೆ ಈ ಸಂಗತಿ ನನಗ್ಯಾರು ಹೇಳಿದ್ದು ಎಂದು ತಲೆಕೆರೆದುಕೊಂಡ. ಬಹುಷಃ ಅದು ಅವನ ಹಲವು ತಲೆಬುಡವಿಲ್ಲದ ಪೂರ್ವಾಗ್ರಹಗಳಲ್ಲಿ ಒಂದಾಗಿತ್ತು.

ಆದರೂ ಹೊರಗಿನವರ ಬಟ್ಟೆಗಳನ್ನು ನೆನೆಸಿಕೊಂಡು ಇವರು ಹೀಗೆಲ್ಲಾ ಓಡಾಡಿದರೆ ನಮಗೆ ತಡ್ಕೊಳ್ಳೋಕಾಗುತ್ತಾ ಎಂದು ತಾನೊಬ್ಬ ಭಾವೀ ಸಂಭಾವಿತನಂತೆ ಮನದಲ್ಲೇ ತಿಪ್ಪೆ ಸಾರಿಸಲು ಯತ್ನಿಸಿದ. ಆತ ಇಂಥವುಗಳನ್ನು ಅದೆಷ್ಟು ಮಾಡಿದ್ದನೋ! ಆದರೆ ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ನೆನಪಿಸಿಕೊಂಡು ಆಕೆ ಮಿ ಟೂ ಎಂದು ಬರೆದಾಗ ಅವನಿಗೆ ತಕ್ಕಮಟ್ಟಿನ ಆಘಾತವಂತೂ ಆಗಿತ್ತು. ಈ ಮಿ ಟೂ ಹಿಂದಿರುವ ವ್ಯಕ್ತಿಯೂ ನಾನೇ ಎಂಬುದೂ ಅವನಿಗೆ ಸ್ಪಷ್ಟವಾಗಿ ತಿಳಿದಿತ್ತು. ಇರಲಿ. ಅದೇನೇ ಆದರೂ ನಾನು ಈವರೆಗೆ ಎಲ್ಲೂ ಸಿಕ್ಕಿಬೀಳಲಿಲ್ಲವಲ್ಲಾ ಎಂದು ಆತನಿಗೆ ಕೊಂಚ ಸಮಾಧಾನವಾಯಿತು.

ಆದರೆ ಅವನ ಸಮಾಧಾನಕ್ಕೆ ಕೆಲನಿಮಿಷಗಳಲ್ಲೇ ಅವನ ದೊಡ್ಡಬಾಯಿಯ ಹೆಂಡತಿ ಕಲ್ಲು ಹಾಕಿದಳು. ಮಗಳಿಗೆ ಊರಬೀದಿಯಲ್ಲಿ ಯಾರೋ ಛೇಡಿಸಿದರೆಂದು ಆಕಾಶಭೂಮಿ ಒಂದು ಮಾಡಿ, ಪೊರಕೆ ಹಿಡಿದುಕೊಂಡು ಯಾರೊಂದಿಗೋ ರಂಪ ಮಾಡುತ್ತಿದ್ದಳು ಆ ಮಹಾತಾಯಿ. ಅಬ್ಬಬ್ಬಾ, ತನ್ನ ಪುಟ್ಟ ಪಾದಗಳಿಂದ ನನ್ನೆದೆಯನ್ನು ಒದೆಯುತ್ತಿದ್ದ ಮಗಳು ಇಷ್ಟು ಬೇಗ ದೊಡ್ಡವಳಾದಳೇ ಎಂದು ಅನ್ನಿಸಿತು ಅವನಿಗೆ. ಅದೇನೆಂದು ಮನೆಯಂಗಳಕ್ಕೆ ಬಂದು ನೋಡಿದರೆ ಮಡದಿ ಮೂವರು ಆಗಂತುಕರಿಗೆ ಪೊರಕೆ ಸೇವೆ ಮಾಡುತ್ತಿದ್ದಳು. ಈ ಗಡಿಬಿಡಿಯ ಮಧ್ಯದಲ್ಲೇ ಅವರಲ್ಲೊಬ್ಬ ಈತನನ್ನು ಅಚಾನಕ್ಕಾಗಿ ನೋಡಿ ಕಿಸಕ್ಕನೆ ನಕ್ಕಂತಾಯಿತು. ಕ್ಷಣಾರ್ಧದಲ್ಲಿ ಅವನ ಕಾಲ ಕೆಳಗಿನ ನೆಲವೇ ಜಾರಿದಂತಾಯಿತು.

ರೂಪೀಂದರ್ ”Me too” ಎಂದು ಬರೆಯಬೇಕಿತ್ತು.

ಆದರೆ ಅವಳ ಬದಲು ಅವನೇ ರೂಪೀಂದರ್ ಹೆಸರಿನಲ್ಲಿ ಅಂದು ಹಾಗೆಂದು ಬರೆದ. ಆದರೆ ಈ ಸ್ಟೇಟಸ್, ರೀಟ್ವೀಟುಗಳಾಚೆಗೂ ಒಂದು ನೈಜ ಜಗತ್ತಿತ್ತು. ಅಲ್ಲಿ ರೂಪೀಂದರ್ ನ ಹೆತ್ತವರು ಗರಬಡಿದವರಂತೆ ಆಕಾಶ ನೋಡುತ್ತಾ ಕುಳಿತಿದ್ದರು.

ಅವರ ಮನೆಯಲ್ಲಿ ಕಳೆದ ಕೆಲ ದಿನಗಳಿಂದ ಸ್ಮಶಾನಮೌನ. ರೂಪೀಂದರ್ ಪರವಾಗಿ ಮಿ ಟೂ ಎಂದು ಬರೆದ ಅವಳ ಗೆಳೆಯ ಅಂದು ತನ್ನ ಡೈರಿಯಲ್ಲಿ ಹೀಗೆ ಬರೆದುಕೊಂಡ: “ಗೆಳತಿ ರೂಪೀಂದರ್ ಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಬಗ್ಗೆ ನನಗೆ ಖೇದವಿದೆ. ನೆರಳಿನಂತೆ ಹಿಂಬಾಲಿಸುತ್ತಾ ಪ್ರತೀಕ್ಷಣವೂ ಅವಳಲ್ಲಿ ಭಯವನ್ನು ಹುಟ್ಟಿಸಿದ್ದ ಅವಳ ಮಾಜಿ ಸಹೋದ್ಯೋಗಿಯೊಬ್ಬನ ಬಗ್ಗೆ ಆಕೆ ನನ್ನಲ್ಲಿ ಆತಂಕದಿಂದ ಹೇಳಿಕೊಳ್ಳುತ್ತಿದ್ದ ಬಗ್ಗೆ ಈಗ ನೆನಪಾಗುತ್ತಿದೆ. ಆದರೆ ನಾನೇ ಇವೆಲ್ಲಾ ಇದ್ದಿದ್ದೇ, ಇರಲಿ ಬಿಡು ಅಂದೆ. ಸುಧಾರಿಸಿಕೊಂಡು ಹೋಗು, ಈ ಬಗ್ಗೆ ಏನಾದರೂ ಮುಂದಿನ ಹೆಜ್ಜೆಯಿಟ್ಟರೆ ನಿನಗೇ ತೊಂದರೆ ಎಂದು ಅವಳನ್ನು ಮತ್ತಷ್ಟು ಅಧೀರಳನ್ನಾಗಿಸಿದೆ.

ಹಂತಹಂತವಾಗಿ ಅವಳನ್ನು ಏಕಾಂಗಿಯನ್ನಾಗಿಸಿದೆ. ನಿಜಕ್ಕೂ ನನಗೆ ಇವೆಲ್ಲಾ ಇಷ್ಟು ಭಯಂಕರವಾಗಿರುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಅವಳ ಭಯ, ಆತಂಕಗಳು ಅವಳನ್ನು ಸಾವಿನವರೆಗೂ ಕೊಂಡೊಯ್ಯಲಿವೆ ಎಂಬ ಸುಳಿವೂ ನನಗಿರಲಿಲ್ಲ. ನಾನೇ ಅವಳನ್ನು ಕೊಂದುಬಿಟ್ಟೆನೋ ಎಂದನ್ನಿಸುತ್ತಿದೆಯೀಗ. ದೌರ್ಜನ್ಯ, ಕಿರುಕುಳ, stalking ಇತ್ಯಾದಿಗಳು ನಿನ್ನೆಮೊನ್ನೆಯವರೆಗೆ ನನಗೆ ಕೇವಲ ಒಣ ಪದಗಳಷ್ಟೇ ಆಗಿದ್ದವು. ಅವುಗಳು ಎಲ್ಲೋ, ಮತ್ಯಾರಿಗೋ ಆಗುತ್ತಿತ್ತು. ರೂಪೀಂದರ್ ನನ್ನ ಜಗತ್ತನ್ನೇ ಅಲ್ಲೋಲಕಲ್ಲೋಲ ಮಾಡಿಹಾಕಿದ್ದಾಳೆ. ಈ ನೆನಪುಗಳ ಹೆಣಭಾರದೊಂದಿಗೆ ನಾನೀಗ ಬದುಕಬೇಕಿದೆ. ನನ್ನದೊಂದು ಪುಟ್ಟ ಪ್ರಯತ್ನದಿಂದ ಮತ್ಯಾರದ್ದೋ ಒಂದೇ ಒಂದು “ಮಿ ಟೂ” ಸ್ಟೇಟಸ್ ತಪ್ಪಿದರೂ ಬಹುಷಃ ನನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಗಬಹುದೇನೋ…”

ಹೀಗೆ ಲಕ್ಷಾಂತರ ಹೆಣ್ಣುಮಕ್ಕಳು ”Me too” (ನಾನೂ ಕೂಡ) ಎಂದು ಬರೆಯುತ್ತಲೇ ಇದ್ದಾರೆ… ಇನ್ನು ಇವುಗಳನ್ನು ಓದುತ್ತಿರುವ, ತರಹೇವಾರಿ ಮುಖವಾಡಗಳ ಹಿಂದೆ ಬಚ್ಚಿಟ್ಟುಕೊಂಡಿರುವ ಬಹುತೇಕ ಅಷ್ಟೇ ಸಂಖ್ಯೆಯ ಗಂಡಸರು ಕೂತಲ್ಲೇ ಕೊಸರಾಡುತ್ತಿದ್ದಾರೆ… ಅವರ ಗಂಡಸ್ತನದ ಮೀಸೆ ಮಣ್ಣಾಗಿದೆ ಎಂದರೆ ಕಮ್ಮಿಯಾದೀತು. ಏಕೆಂದರೆ ಸಂಪೂರ್ಣವಾಗಿ ಕೆಸರಿನಲ್ಲೇ ಮಿಂದೆದ್ದ ಪರಿಸ್ಥಿತಿಯಿದು! ಇನ್ನಾದರೂ ಈ ಬಗ್ಗೆ ನಾವು ಮುಕ್ತವಾಗಿ ಮಾತನಾಡಬೇಕಿದೆ. ಕುಟುಂಬಗಳಲ್ಲಿ, ಸಮುದಾಯಗಳಲ್ಲಿ ಆರೋಗ್ಯಕರ ಚರ್ಚೆಗಳಾಗಬೇಕಿವೆ. ಸಮಸ್ಯೆಗಳು ಇವೆ ಎಂಬುದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕಿದೆ. ಅಷ್ಟೂ ಪ್ರಾಮಾಣಿಕತೆಯಿರದಿದ್ದರೆ ಸಮಸ್ಯೆಯ ಪರಿಹಾರವಾದರೂ ಹೇಗಾದೀತು? ”ಮೀಸೆ ಬೇಕೋ, ತಲೆ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ. ಮೀಸೆಯನ್ನು ಹೆಚ್ಚು ತಿರುವಿದರೆ ತಲೆದಂಡವೂ ಆದೀತು”, ಎಂಬರ್ಥದ ಕಾನೂನುಗಳನ್ನು ತರುವುದೇನೋ ಸರಿ. ಆದರೆ ಮಾನವೀಯ ಸಂವೇದನೆಗಳುಳ್ಳ ಹೊಸ ಪೀಳಿಗೆಯ ಸೃಷ್ಟಿಯೂ ಕೂಡ ನಮ್ಮ ಕಳಕಳಿಯಾಗಬೇಕು ಎಂಬ ಅಭಿಪ್ರಾಯ ಮತ್ತು ಆಶಾವಾದ ನನ್ನದು.

 

‍ಲೇಖಕರು avadhi

19 October, 2017

4 Comments

  1. Kavya Kadame

    ಪ್ರಸಾದ ನಾಯ್ಕ್ ಅವರೇ, ತುಂಬಾ timely ಲೇಖನ. ಅದ್ಯಾವುದೋ ಕಾರಣಕ್ಕೆ ಇದು ಗಂಡು ಹೆಣ್ಣುಗಳ ನಡುವಿನ ಅಂತ£ಯುದ್ಧವೆಂಬಂತೆ ಪ್ರಾಜೆಕ್ಟ್ ಮಾಡಲಾಗುತ್ತಿದೆ. ಆದರೆ ನಾವೆಲ್ಲ ಒಂದೇ ಬದಿಗಿದ್ದೇವೆ, ವಿಕೃತಿಯ ವಿರುದ್ಧ ನಮ್ಮ ದನಿ ಎಂದು ನಿರೂಪಿಸಬೇಕಿದೆ. ಆ ನಿಟ್ಟಿನಲ್ಲಿ ನಿಮ್ಮ ಈ ಬರಹ ಸ್ತುತ್ಯಾಹ£. ಅಭಿನಂದನೆಗಳು.

    • Prasad

      ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ಕಾವ್ಯಾ ಕಡಮೆಯವರಿಗೆ ಧನ್ಯವಾದಗಳು… ಹೌದು, ಮಾನವೀಯ ಸಂವೇದನೆಯ ವಿಚಾರಗಳು ಬಂದಾಗ ನಾವೆಲ್ಲರೂ ಒಂದಾಗಲೇಬೇಕು… ನಮ್ಮೆಲ್ಲರಿಂದಲೇ ಇದರ ಶುಭಾರಂಭವಾಗಲಿ… ನಿಮ್ಮ ಬರಹವು ನನ್ನನ್ನು ತುಂಬಾ ಕಾಡಿದ್ದು ಕೂಡ ಸತ್ಯ…

  2. pradeep

    ತುಂಬಾ ಅಗತ್ಯವಾದ ಮತ್ತು ಚರ್ಚೆಗೆ ಒಳಪಡಬೇಕಾದ ಲೇಖನ.
    ಸಂಸೃತಿ , ಸಂಸ್ಕಾರ, ಭಕ್ತಿ ಅನ್ನುವ ಭಾರತದಲ್ಲೇ ಈ ತರಹದ ವಿಕೃತ ಮನಸ್ಸುಗಳು ಹೆಚ್ಚಿರುವುದು ಏನು ಸೂಚಿಸುತ್ತದೆಯೋ !
    ಬಹುಶಃ ಆಗಾಗ ಕೇಳಿ ಬರುವ ಧರಿಸುವ ಬಟ್ಟೆ ಮುಂತಾದವುಗಳ ವಿರೋಧ ಈ ಮನಸ್ಥಿತಿಯವರ ಒಳಗಿನ ಸಮರ್ಥನೆಯೇ ಆಗಿದೆ.

    • Prasad

      ಧನ್ಯವಾದಗಳು ಪ್ರದೀಪ್ ರವರೇ ನಿಮ್ಮ ಪ್ರತಿಕ್ರಿಯೆಗೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading