ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

#Me too..

#Me too..

ಎನ್.ರವಿಕುಮಾರ್

ನಾನೂ ಕೂಡ….
ಈ ಹಾಡು ಹೇಳುತ್ತೇನೆ…
ನಿಮ್ಮ ಕಿವಿಗಳ ತೆರೆದಿಡಿ
ಹೃದಯ ಕವಾಟುಗಳ ಬಿಚ್ಚಿಡಿ ಅಭಿದಮನಿ,ಅಪದಮನಿಗಳ ನರ -ನಾಳಗಳಲ್ಲಿ ಹಾಡು ಹರಿಯಬೇಕಿದೆ.
ಎಂದೂ ಮರೆಯಲಾಗದ
ನೋವುಗಳ ಈಗ ಎಲ್ಲರೂ ಮೀಟುತ್ತಿದ್ದಾರೆ
ನನ್ನೊಬ್ಬಳನ್ನು ಮರೆತು.

ನಿಮಗೆ ಗೊತ್ತಾ?

ಆ ದೇವರೆಂಬ ದೇವರೇ ಗಂಡನಾದ,
ಮಿಂಡನಾದ ಕಥೆ
ಹಗಲು- ರಾತ್ರಿಗಳ ಎಣೆಯಿಲ್ಲದೆ
ದಾಸಿ ಮಾಡಿಕೊಂಡು ದೇಹ ತೇಗಿದವನ
ದೇಶಾವರಿತನ.
ಸೆರಗ ಸೆಳೆದು ರವಿಕೆ ಹರಿದು
ಜುಟ್ಟು ಜುಮ್ಮಿರಿದು ಬಿಟ್ಟೂ ಬಿಡದೆ
ಸವತಿಯಂತೆ ಸೂರಾಡಿ ಎಳೆ ಮೈಯ್ಯ ತಿಂದು
ತೇಗಿಬಿಟ್ಟ …..ಸ್ವರ್ಗ ಸೇರಿಬಿಟ್ಟ ಲಂಪಟ.
ಉಳಿದದ್ದು ‘ಊರ’ ಸರದಿ
ಸೊಲ್ಲು ಸತ್ತು ಸೊರಗುವ ತೊಗಲ ಮೇಲೆ
‘ ಮೆರವಣಿಗೆ’ ಸಾಗಿದೆ…
ಯಾರ ಮುಂದೆ ಹೇಳಲಿ #Mee too….?

ಸುಖದ ಹಾಡೆಂದರು..
ದೇವರ ಸಖಿ..ಸೂಳೆ ಎಂದರು
ಮೋಕ್ಷದ ಪರಮಾರ್ಥವೆಂದರು
ಕೇಳುವುದಷ್ಟೇ ಪಾಲು ನಂದು
ಮೂಕ ಮಹಾವೇದನೆ
ಪರದೆ .ಪಲ್ಲಂಗಗಳೆ ಇಲ್ಲದ
ಕಂಡ ಕಂಡವರ ಕಾಮದುರಿಯಲ್ಲಿ
ಬೆಂದು ಬೂದಿಯಾದವಳು
ಸುಖದ ಶೂಲದೊಳಗೆ ಸಿಕ್ಕು
ರಕ್ತ ತೊಟ್ಟಿಕ್ಕಿ ನರಳುವಾಗಲೂ
ಅವರೆಲ್ಲಾ ಮತ್ತುಗೊಂಡು ಗಂಧರ್ವಲೋಕದಲ್ಲಿ
ಮೀಯುತ್ತಿದ್ದರು..
ನಾನೀಗ ಯಾರಿಗೆ ಹೇಳಲಿ #Me too……?

ನನಗೆ ಬಣ್ಣವಿರಲಿಲ್ಲ.ರೂಪವಿರಲಿಲ್ಲ
ಮಾರುಕಟ್ಟೆಯ ಹರಾಜಿನಲ್ಲಿ
ನನಗೆ ನಾನೆ ಏನೆಂಬುದು ಇರಲಿಲ್ಲ
ಕೊಂಡವರ ಬೆಲೆಯಿಲ್ಲದ ಸರಕು
ಹೆಸರಿಲ್ಲದ ಬಸಿರ ಹಡೆದು
ಉಯ್ಯಾಲೆ ತೂಗುವಾಗ
ಗರತಿಯರ ಹಜಾರದೊಳಗೆ ಗಂಡೆಂಬ ಗಂಡುಗಳ
ದರ್ಬಾರು ನಡೆದಿತ್ತು.
ನಾನೀಗ ಯಾರಿಗೆ ಹೇಳಲಿ #Me too…..?

ಕಾಲ ಬದಲಾಗಿದೆ
ನನಗೆ ಬಣ್ಣ ಬಂದಿದೆ,ರೂಪ ಬಂದಿದೆ
ಮಾರುಕಟ್ಟೆಯೂ ಎದ್ದು ನಿಂತಿದೆ
ಮಾಸಲು ಬಟ್ಟೆ ಕಳಚಿ ಗಂಟೆ ಗಂಟೆಗೂ ರಂಗು ರಂಗಿನ
ಬಟ್ಟೆ ಉಡಿಸಲಾಗುತ್ತಿದೆ
ಮರು ನಾಮಕರಣಗೊಂಡಿದ್ದೇನೆ
ದೇವರೂ ಬದಲಾಗಿದ್ದಾನೆ
ಝಗಮಗಿಸುವ ಮಂದಕತ್ತಲಿನಲ್ಲಿ
ಕಿವಿಗಳಿಗೆ ಪಿಸುಮಾತುಗಳ
ಉಯ್ಯುತ್ತಾ
ಗರಿ ಗರಿ ನೋಟುಗಳ ತೂರುತ್ತಾ
ಮುದ್ದಾಡುತ್ತಿದ್ದಾರೆ – ಕೊಂಡಾಡುತ್ತಿದ್ದಾರೆ..
ನಾನೀಗ ಯಾರಿಗೆ ಹೇಳಲಿ
#Mee too……

‍ಲೇಖಕರು avadhi

14 October, 2018

1 Comment

  1. ಗಣೇಶ್

    ಸೂಪರ್ ರವಿ, ದನಿ ಇಲ್ಲದ ಶೋಷಿತ ಸಮುದಾಯದ ಹೆಣ್ಮಕ್ಕಳ ನೋವ ಹಿಡಿದಿಟ್ಟಿವೆ ಸಾಲುಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading