ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"Is your brother?" ಎಂದು ಕೇಳಿಬಿಟ್ಟೆ'

ಅಮೆರಿಕಾ ಪ್ರವಾಸ ಕಥನ
ಕೋರ್ಟ್ ಷಿಪ್..
ಗಿರಿಜಾ ಶಾಸ್ತ್ರಿ 
ಮಗ ಖುಷಿಯಿಂದ ಡ್ರೈವ್ ಮಾಡುತ್ತಿದ್ದ ಇದೇ ಸಮಯವೆಂದು ನಾನು “೨೬ ವರ್ಷ ಆಯಿತಲ್ಲಾ ಯಾವುದಾದರೂ ಹುಡುಗಿಯನ್ನು ನೋಡ್ಕೋ ಒಂದು ಎರಡು ವರ್ಷ ಡೇಟ್ ಮಾಡು, ಮದುವೆ ಮಾಡ್ಕೋಬಹುದು ಅಂತ ಇಬ್ಬರಿಗೂ ಅನ್ನಿಸಿದರೆ, ಮಾಡಿದ್ರಾಯ್ತು. ಈ ಕಾಣದ ದೇಶದಲ್ಲಿ ನಮ್ಮವರು ಅಂತಾ ಯಾರಿದ್ದಾರೆ? ಓದೋವಾಗಾದ್ರೆ ಬೇಕಾದಷ್ಟು ಇಂಡಿಯನ್ ಸಹಪಾಠಿಗಳು ಇದ್ದರು ನನಗೆ ಯೋಚನೆ ಇರಲಿಲ್ಲ. ಈಗ ಎಲ್ಲರೂ ಚೆದುರಿ ಹೋಗಿದ್ದೀರಾ. ಈಗ ಇಲ್ಲಿ ಯಾರೂ ಇಲ್ಲ. ಖಾಯಿಲೆ ಕಸಾಲೆ ಬಂದ್ರೆ ನೋಡೋವರ್ಯಾರು? ನನಗೆ ಅಲ್ಲಿ ಹೋದರು ನಿಂದೇ ಚಿಂತೆ ಕಣೋ’ ಎಂದೆ.
‘ಹ್ಞೂ ಸುಮ್ಮನಿರು ಆಮೇಲೆ ಅವಳಿಗೂ ನಾನೇ ಮಾಡಹಾಕಬೇಕು’ ಎಂದ
‘ಇಲ್ಲ ವರ್ಕ್ ಫ್ರಂ ಹೋಂ’ ಮಾಡುವ ಹುಡುಗಿಯನ್ನು ಮದುವೆ ಮಾಡ್ಕೊಂಡ್ರೆ ಅಂಥ ಸಮಸ್ಯೆ ಇರೋದಿಲ್ಲ’
‘ಅಂದ್ರೆ ಅವಳು ನನಗೆ ಬೇಯಿಸಿ ಹಾಕಬೇಕು ಅಂತಾ ಹೇಳ್ತಿದ್ದೀಯಾ? ಅವಳಿಗೆ ಕೆರಿಯರ್ ಇರೋಲ್ವಾ? ಏನು ಫೆಮಿನಿಸ್ಟೋ ನೀನು, ಆಮೇಲೆ ಅವಳು ನೀನೇ ವರ್ಕ್ ಫ್ರಂ ಹೋಂ ಮಾಡು ನಾನೇ ಹೊರಗೆ ಹೋಗ್ತೀನಿ, ಬೇಬಿ ಸಿಟ್ಟಿಂಗ್ ಮಾಡು ಅಂದ್ರೆ?’
‘ಮಾಡು ಅದಕ್ಕೇನು? ಇಬ್ಬರೂ ಅನುನಯದಿಂದ ಮನೆ ನಡೆಸಬಹುದಪ್ಪಾ, ನೀನು ತರಕಾರಿ ಹಚ್ಚಿಕೊಡು ಅವಳ ಬೇಯಿಸ್ತಾಳೆ ಅಥವಾ ನೀನೇ ಬೇಯಿಸು ಅವಳು ಹಚ್ಚಿಕೊಡ್ತಾಳೆ. ಮನೆಗೆ ಶಾಪಿಂಗ್ ಮಾಡಿ, ಪ್ರವಾಸಕ್ಕೆ ಹೋಗಿ, ಒಟ್ಟಿಗೇ ಸುತ್ತಾಡಿ. ಲೈಫ್ ಚೆನ್ನಾಗಿರುತ್ತೆ ಕಣೋ ಹೊಸದರಲ್ಲಂತೂ ತುಂಬಾ ರೋಮ್ಯಾಂಟಿಕ್ ಆಗಿ..ಯಾರಾದರೂ ಜೊತೆಗೆ ಬೇಕು ಕಣೋ’
‘ಹಳೇದಾದ ಮೇಲೆ ಏನು? ಈಗ ನೀನು ಅಪ್ಪಾ ಜಗಳ ಆಡ್ತೀರಲ್ಲ ಹಾಗಾ?’
‘ಜಗಳಾನೂ ಒಂಥರಾ ಚೆನ್ನಾಗಿರುತ್ತೆ. ಬದುಕಿಗೆ ಮಸಾಲಾ ಇದ್ದ ಹಾಗೆ. ಇಲ್ಲದಿದ್ದರೆ ನೀನು ಹೇಳ್ತೀಯಲ್ಲಾ ‘ಥೂ ಇದು ತುಂಬಾ ಸಪ್ಪೆ, ಸ್ಪೈಸಿಯಾಗಿಲ್ಲ?’ ಅಂತಾ… ಬದುಕು ಸ್ಪೈಸಿಯಾಗಿ ಇರಬೇಕು ಅಂದ್ರೆ ಇದೆಲ್ಲ ಇರಬೇಕು… ಹುಡುಗಿ ಬಗ್ಗೆ ಯೋಚನೆ ಮಾಡು, ಇಂಡಿಯನ್ ಹುಡುಗಿ ಆದ್ರೆ ಒಳ್ಳೇದು’
‘ಯಾಕೆ ಅಮೇರಿಕಾ ಹುಡುಗಿ ಆಗೋಲ್ವಾ? ಅಮ್ಮಾ, ನಿಜ ಹೇಳ್ಬೇಕು ಅಂದ್ರೆ ಫಾರಿನರ್ಸ್ ಲ್ಲಿ ನಮ್ಮ ಹಾಗೆ ಸಾಸ್ ಬಹೂ ಕಾನ್ಸೆಪ್ಟೇ ಇಲ್ಲ. ಅತ್ತೆ ಸೊಸೆ ಚೆನ್ನಾಗಿರ್ತಾರೆ’ ಎಂದು ಕಿಚಾಯಿಸಿದ.
ನಾನು ಮಾತು ಬದಲಾಯಿಸುತ್ತಾ ‘ನೀನು ನೋಡ್ಕೋಳ್ಳಕ್ಕೆ ಆಗೋಲ್ಲ ಅಂದ್ರೆ ಹೇಳು ಯಾವುದಾದ್ರೂ ಒಳ್ಳೆ ಹುಡುಗೀನ ನಾವೇ ನೋಡ್ತೀವಿ.
ನೀವಿಬ್ಬರೂ ಸ್ವಲ್ಪ ದಿನ ಓಡಾಡಿ ಆಮೇಲೆ…..’
‘ಏನು, ಹುಡುಗಿ, ಡೇಟಿಂಗ್ ಅಂತೆಲ್ಲಾ ಮಾತಾಡ್ತಿದೀಯಾ? ಆ ಸ್ಯಾಂಡಿ ಚೆನ್ನಾಗೇ influence ಮಾಡಿದ್ದಾಳೆ. ಹುಡುಗೀನ ನೋಡ್ಕೋ ಅಂದ್ರೆ ಏನು? ನೀನೆ ಹೇಳ್ತಿರ್ತೀಯ it only happens ಅಂತಾ ಅದು ಆದಾಗ ನೋಡೋಣ.. ಅಷ್ಟೇ’. ಸ್ವಲ್ಪ ಧ್ವನಿ ಗಡಸಾಯಿತು. ‘ಕಾಲೇಜಿನಲ್ಲಿ ಓದೋವಾಗ, ಹುಡ್ಗಿ ಗಿಡ್ಗಿ ಎಲ್ಲಾ ಈಗಲೇ ಬೇಡಾ ಚೆನ್ನಾಗಿ ಓದು ಅಂತಿದ್ದೆ ಹುಡುಗೀರು ಕಾಲೇಜಿನಲ್ಲಿ ಅಲ್ಲದೇ ಕೆಲಸ ಮಾಡೋ ಕಡೆ ಸಿಕ್ತಾರಾ?’
‘ಹೌದು ಹೇಳಿದ್ದೆ ಚೆನ್ನಾಗಿ ಓದಿ ಒಳ್ಳೇ ಕೆಲಸಕ್ಕೆ ಸೇರಿಕೋ ಆಮೇಲೆ ಹುಡುಗೀರು ತಾವಾಗಿಯೇ ಬರ್ತಾರೆ ಅಂತ ಅದರಲ್ಲೇನು ತಪ್ಪು? ನಿನ್ನ ಒಳ್ಳೇದಕ್ಕೇ ಹೇಳಿದ್ದು’
‘ಹ್ಞೂ ಬರ್ತಾರೆ, ಬರ್ತಾರೆ ಹುಡುಗೀರು! ಥೂ ನಮ್ಮ ಆಫೀಸಿನಲ್ಲಿ ಇರೋರೆಲ್ಲಾ ಬರೀ ಆಂಟೀರು’
‘ಅವನು ಡ್ರೈವ್ ಮಾಡ್ತಿದ್ದಾನೆ ಅಷ್ಟು ಗೊತ್ತಾಗೋಲ್ವಾ ನಿಂಗೆ? ಏನೇನೋ ಮಾತಾಡಿ ಅವನ ತಲೆ ಕೆಡಿಸ್ತೀಯಾ? ಎಂದು ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇವನು ಹೇಳಿದ.
‘ಅಮ್ಮಂಗೆ ಸ್ವಲ್ಪ ಸುಮ್ಮನಿರೋಕ್ಕೆ ಹೇಳಪ್ಪಾ’ ಎಂದು ಗದರಿದ.
ಯಾವಾಗಲೂ ಬಾಲ ಸುಟ್ಟ ಬೆಕ್ಕಿನ ಹಾಗೆ ಪರದಾಡುತ್ತಾ, ಸಿಡಿ ಸಿಡಿ ಎನ್ನುತ್ತಿದ್ದ ಸ್ಯಾಂಡಿ ಹಿಂದಿನ ರಾತ್ರಿ ಸಿಕ್ಕಾಗ ಖುಷಿಯಾಗಿರುವಂತೆ ಕಂಡಳು. ಲೋಕಾಭಿರಾಮವಾಗಿ ಮಾತಿಗೆ ತೊಡಗಿದಳು. ಆಗ “ನಿಮ್ಮ ದೇಶದಲ್ಲಿ ಸಾಮಾನ್ಯವಾಗಿ ಎಷ್ಟು ವರ್ಷಕ್ಕೆ ಮದುವೆ ಮಾಡ್ಕೋತಾರೆ” ಎಂದು ಕೇಳಿದೆ.
It depends ಎಂದು ಭುಜ ಹಾರಿಸಿ. ‘ನನ್ನ ದೊಡ್ಡ ಮಗನಿಗೆ ನೋಡು ೨೫ ವರ್ಷವಾಯಿತು ಇನ್ನೂ ಅವನು ಯಾರ ಜೊತೆಯೂ ಡೇಟಿಂಗ್ ಶುರು ಮಾಡಿಲ್ಲ, ಇನ್ನು ಮದುವೆ ಯಾವಾಗ ಮಾಡ್ಕೋಳ್ತಾನೋ ಯಾರಿಗೆ ಗೊತ್ತು?’ ಎಂದು ಆಕಾಶ ತಲೆಯಮೇಲೆ ಬಿದ್ದ ಹಾಗೆ ಮಾತನಾಡಿದಳು.
ಆನಂತರ ಖುಷಿಯಿಂದ ‘ದೊಡ್ಡ ಮಗಳಿಗೆ ಬಾಯ್ ಫ್ರೆಂಡ್ ಇದ್ದಾನೆ. ಈಗ ಅವನ ಊರಾದ ನ್ಯೂ ಮೆಕ್ಸಿಕೊ ಗೆ ಕೂಡ ಹೋಗಿ ಬಂದಳು. ಆದರೆ ಈಗಲೇ ಅವಳಿಗೆ ಮದುವೆ ಮಾಡುವುದಿಲ್ಲ. Let them enjoy ಎನ್ನುವ ಹಾಗೆ ಮಾತನಾಡಿದಳು.
ನಾವು ಇಲ್ಲಿಗೆ ಬಂದ ಹೊಸದರಲ್ಲಿ ಅವಳ ಅದೇ ಮಗಳು ಅಮಾದ ಎಸ್ಪರಾಂಝಾ ತನ್ನ ಬಾಯ್ ಫ್ರೆಂಡ್ ನ್ನು ಕರೆದುಕೊಂಡು ಬಂದಿದ್ದಳು. ನನಗೆ ತಿಳಿಯದೇ ಅವನು ಮನೆಯೊಳಗೆ ಬಂದ ಸಲುಗೆಯ ರೀತಿಯಿಂದ “is your brother?” ಎಂದು ಕೇಳಿ ಬಿಟ್ಟೆ. ‘ nou he is my boy friend’ ಎಂದಾಗ ನನಗೆ ತುಂಬಾ ನಾಚಿಕೆಯಾಗಿ ‘ಸಾರಿ’ ಎಂದಿದ್ದೆ. ಆನಂತರ ಅವರಿಬ್ಬರೂ ದಿನವಿಡೀ ರೂಮಿನೊಳಗೆ. ಮಾರನೆಯ ದಿನ ದೊಡ್ಡ ಸೂಟ್ಕೇಸ್ ಹಿಡಿದು ಹೊರಟರು. ಅಲ್ಲಿಯೇ ಇದ್ದ ನಾನು ನಕ್ಕೆ. Going for trip ಎಂದು ಮರು ನಕ್ಕಳು. ಎಷ್ಟು ದಿನ ಎಂದು ಕೇಳಿದ್ದಕ್ಕೆ ಎಂಟು ದಿನವೆಂದು ಹೇಳಿದಳು. ನಾನು ಶುಭ ಪ್ರಯಾಣ ಕೋರಿದೆ.
ಮೊನ್ನೆ ಅವಳ ತಂಗಿ ೧೨ ನೇ ಕ್ಲಾಸ್ ಮುಗಿಸಿರುವ ಸೋಲೇ ಎಸ್ಪರಾಂಝಾ ಕಾಲೇಜು ಪ್ರವೇಶಕ್ಕೆಂದು ಮುಂಜಾನೆಯೇ ಹೋಗಿದ್ದಳು. ‘ಸಂಜೆಯಾಯಿತು ಯಾಕೆ ಇನ್ನೂ ಸೋಲೇ ಬರಲಿಲ್ಲ’ ಎಂದು ನಾನು ಕೇಳಿದ್ದಕ್ಕೆ ‘ಇಲ್ಲ ಅವಳು ರಾತ್ರಿ ಅಲ್ಲಿಯೇ ತಂಗುವವಳಿದ್ದಾಳೆ ಎಂದು ಬಹಳ ಸ್ವಾಭಾವಿಕವಾಗಿ ಅವಳ ಅಕ್ಕ ಹೇಳಿದಳು. ….ಅಯ್ಯೋ ರಾಮ!
೩೫ ವರುಷಗಳ ಹಿಂದೆ ನಾನು ಮತ್ತು ರಘು ಮದುವೆಯಾಗಬೇಕೆಂದು ನಿಶ್ಚಯಿಸಿಕೊಂಡಾಗ ಮನೆಯವರು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ್ದರು.
ತಂಜಾವೂರಿನ ತಮಿಳು ವಿ.ವಿ. ಯಲ್ಲಿ ರಘುವಿನ ಜೊತೆಗಿದ್ದ ಪ್ರಖ್ಯಾತ ಇಂಡಾಲಜಿಸ್ಟ್ ಸಿ.ಆರ್ ಶ್ರೀನಿವಾಸನ್ ಅವರು ನನ್ನನ್ನು ಮೈಸೂರಿನ ಅವರ ಮನೆಗೆ ಕರೆದುಕೊಂಡು ಬರಬೇಕೆಂದು ಹೇಳಿದ್ದರು. ನನ್ನನ್ನು ಕರೆದೊಯ್ಯಲು ರಘು ಅಣ್ಣನ ಒಪ್ಪಿಗೆಯನ್ನು ಕೇಳಿದರು. ಆಗ ನಾವೇನು ಪಿಕ್ನಿಕ್ ಹೊರಟಿರಲಿಲ್ಲ. ಆದರೂ ಅಳೆದೂ ಸುರಿದು ಅಣ್ಣ, ಸಂಜೆಯೊಳಗೆ ವಾಪಸ್ ಬಂದು ಬಿಡಬೇಕೆಂದು ತಾಕೀತು ಮಾಡಿ ಕಳುಹಿಸಿದ್ದ.
ಶ್ರೀನಿವಾಸನ್ ಅವರ ಮನೆಯಿಂದ ಹೊರಟಾಗ, ‘ರಾತ್ರಿ ಬೆಂಗಳೂರು ತಲುಪಲು ತುಂಬಾ ತಡವಾಗುತ್ತದೆ ಇಲ್ಲೇ ಉಳಿದು ಕೊಳ್ಳಿ ನಾಳೆ ಹೋದರಾಯ್ತು’ ಎಂದು ಅವರ ಹೆಂಡತಿ ಬಹಳ ಹೇಳಿದರು. ನಾವು ಹಟ ಮಾಡಿ ಬೆಂಗಳೂರು ಬಸ್ ಹತ್ತಿದ್ದೆವು. ನಾನೇನಾದರೂ ಅಲ್ಲೇ ಉಳಿದುಕೊಂಡಿದ್ದರೇ ಅನೇಕ ಅಪಾರ್ಥಗಳಿಗೆ ದಾರಿಮಾಡಿಕೊಟ್ಟಂತಾಗುತ್ತಿತ್ತು. ಮನೆಗೆ ಮರಳಿ ಬರುವಾಗ ರಾತ್ರಿ ತಡವಾಗಿತ್ತು. ಮನೆ ಮರ್ಯಾದೆ ಹೋದವರ ಹಾಗೆ ಅಮ್ಮ ಮುಖ ಊದಿಸಿಕೊಂಡು ಎರಡು ದಿನ ಮಾತನಾಡಿಸಿಯೇ ಇರಲಿಲ್ಲ.
ಕಾಲ ಬದಲಾಗಿದೆ ನಿಜ. ಈ ೩೫ ವರುಷಗಳಲ್ಲಿ ಕಾವೇರಿಯಲ್ಲಿ ಬಹಳ ನೀರು ಹರಿದು ಹೋಗಿದೆ. ಆದರೆ ಈಗಲೂ ನನಗೇನಾದರೂ ಒಬ್ಬ ಮಗಳಿದ್ದು ಅವಳು ತನ್ನ ಬಾಯ್ ಫ್ರೆಂಡ್ ಜೊತೆ ತುಂಡು ಚೆಡ್ಡಿ ತೊಟ್ಟು, ಬೆತ್ತಲೆ ಎದೆ ಕಾಣಿಸಿಕೊಂಡು ದಿನಗಟ್ಟಲೆ ಟ್ರಿಪ್ ಗೆ ಹೋಗುವೆನೆಂದು ಹೇಳಿದ್ದರೆ ನಾನು ಹೇಗೆ ಪ್ರತಿಕ್ರಿಯಿಸುತ್ತಿದ್ದೆನೋ ತಿಳಿಯದು. ವೇದಿಕೆಯ ಮೇಲೆ ‘ನನ್ನ ಉಡುಪು ನನ್ನ ಹಕ್ಕು’ ಎಂದು ಮಾತನಾಡುವುದು ಬೇರೆ, ಮಗಳಿಗಾದ ಅನ್ಯಾಯಕ್ಕಾಗಿ ಜೀವಮಾನವಿಡಿ ಕೋರ್ಟ್ ಕಛೇರಿ ಅಲೆದು ಹೋರಾಡುವುದು ಬೇರೆ. ನಾನು ಯಾವುದನ್ನು ಆರಿಸಿಕೊಳ್ಳುತ್ತಿದ್ದೆ? ಅಥವಾ ಅವಳನ್ನು ತುಂಡು ಚೆಡ್ಡಿ ಯಲ್ಲಿ ‘ಹೋಗಿ ಬಾ ಮಗಳೇ’ ಎಂದು ಹೆಮ್ಮೆಯಿಂದ ಕಳುಹಿಸಿಕೊಡಲು ನಾನೇನು ಟೀನಾ ಅಂಬಾನಿಯೇ?’
ಇಂಡಿಯಾ, ಅಮೇರಿಕಾ ಆದರೆ ಬೇರೆ ಮಾತು. ಅಮೇರಿಕಾವನ್ನು ನಾವು ಎಷ್ಟು ತೆಗೆದುಕೊಳ್ಳಬೇಕು ಅಥವಾ ಬಿಡಬೇಕು? ಕೇವಲ ಉಡಪನ್ನಷ್ಟೇ ತೆಗೆದುಕೊಂಡರೆ ಸಾಕೇ? ಅದಕ್ಕೆ ತಕ್ಕುದಾದ ಸಾಮಾಜಿಕ ವಿಧಿಯನ್ನು ರೂಪಿಸಬೇಡವೇ? ಸಮಾಜದ ಮನಸ್ಸು ಸಿದ್ಧವಾಗಬೇಡವೇ?
ಅಮಾದಳ ಹಾಗೆ ನನ್ನ ಮಗಳೇನಾದರೂ ಮುಂಬಯಿಯಲ್ಲಿ ಹೊರಟು ನಿಂತಿದ್ದರೆ ಬಹುಶಃ “ನಿನ್ನ ಮೇಲೆ ನಂಬಿಕೆ ಇದೆ, ಆದರೆ ಸಂದರ್ಭಗಳ ಮೇಲೆ ಇಲ್ಲ” ಎಂದು ೩೫ ವರುಷಗಳ ಹಿಂದೆ ಅಣ್ಣ ನನಗೆ ಹೇಳಿದ ಮಾತನ್ನೇ ಹೇಳುತ್ತಿದ್ದೆನೇನೋ.
ಚಿತ್ರದಲ್ಲಿ ಅಮಾದಾ (ನೀಲಿ ಚೆಡ್ಡಿಯಲ್ಲಿರುವವಳು) ಅವಳ ಬಾಯ್ ಫ್ರೆಂಡ್ ಮತ್ತು ಸ್ನೇಹಿತೆಯೊಂದಿಗೆ

‍ಲೇಖಕರು avadhi

27 June, 2019

1 Comment

  1. T S SHRAVANA KUMARI

    ಲೇಖಕಿ ಕೇಳಿಕೊಂಡ ಪ್ರಶ್ನೆಯೇ ನನ್ನದೂ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading