ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

I am ಸ್ಪೂರ್ತಿ ಅಲಿಯಾಸ್ ಸ್ಪೂರ್ತಿ ಗಿರೀಶ್‌..

ಒಂದು ಬದುಕು ಕಟ್ಟಿಕೊಳ್ಳುವ ಸ್ಫೂರ್ತಿಯುತ ಕಥೆ ಇಲ್ಲಿದೆ 

sphoorti gireesh2

ವಿಶಾಲಾಕ್ಷಮ್ಮ ( ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು)
ಊರು : ಕನಕಪುರದ ಯಲಚವಾಡಿ
ಅಪ್ಪ: ವೀರಭದ್ರೇಗೌಡ
ಪತಿ: ಗಿರೀಶ್‌
ಮಕ್ಕಳು: ತನ್ಮಯಕೃಷ್ಣ,  ಬೃಂದ
ಶಿಕ್ಷಣ: ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ, ಕರ್ನಾಟಕ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ
*

ವಿಶಾಲಾಕ್ಷಮ್ಮ ಅರ್ಥಾತ್‌ ಸೂರ್ತಿ ಗಿರೀಶ್‌ ಸಣ್ಣಹಳ್ಳಿಯಿಂದ ಬಂದವರು. ಕಷ್ಟಪಟ್ಟು ವಿದ್ಯಾಭ್ಯಾಸ ಪೂರೈಸಿ ಮಂಡ್ಯದಲ್ಲಿ ತೆರಿಗೆ ವಿಭಾಗದಲ್ಲಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬದುಕೇ ಸೂರ್ತಿಯ ಸೆಲೆ. ಆ ಅನುಭವಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.
*
ನಾನು ಕನಸುಗಳಲ್ಲಿ ಜೀವಿಸುವವಳು. ಕನಸು ಕಾಣುತ್ತಲೇ ಬೆಳೆದವಳು. ಕನಸ್ಸುಗಳ ಬೆನ್ನಟ್ಟಿ ಇಲ್ಲಿಯವರೆಗೂ ಬಂದವಳು. ಕನಸುಗಳು ಇರದಿದ್ದರೆ ದಟ್ಟಕಾಡಿನ ಹಳ್ಳಿಯೊಂದರ ಹುಡುಗಿ ನಗರದ ನವನಾಗರಿಕತೆಯ ಜನರ ನಡುವೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಸಾಧ್ಯವಾಗುತ್ತಿರಲಿಲ್ಲ.
ನನ್ನ ಊರಿಗೆ ನಾನು ಮೊದಲ ಮಹಿಳಾ ಪದವೀಧರೆ!

ನನ್ನ ಊರು ಕನಕಪುರ ತಾಲ್ಲೂಕಿನ ಕಾಡಿನಂಚಿನ ಒಂದು ಹಳ್ಳಿ. ಯಲಚವಾಡಿ ಊರಿನ ಹೆಸರು. ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದೆ  ಕಾಡಿನಲ್ಲಿ ಹುದುಗಿಹೋದಂತಿತ್ತು.

ನಾನು ಹುಟ್ಟಿದ ಕಾಲಕ್ಕೆ ಊರಿಗೆ ಬಸ್ಸು ಇರಲಿಲ್ಲ. ನದಿ ತೆಳ್ಳಗೆ ಹರಿಯುವ ಕಡೆಗೆ ದಾಟಿಕೊಂಡು ಬಂದು ಪಕ್ಕದ ಪುಟ್ಟ ಪಟ್ಟಣಕ್ಕೆ ಕಾಲ್ನಡಿಗೆಯಿಂದ ಇಲ್ಲವೆ ಎತ್ತಿನಗಾಡಿಯಲ್ಲಿ ಹೋಗಿಬರುತ್ತಿದ್ದರು.

ನಾನು ಐದನೆಯ ತರಗತಿಗೆ ಬಂದಾಗ ಇನ್ನೂ ಆ ಪುಟ್ಟ ನದಿಗೆ ಸೇತುವೆ ಕಟ್ಟುತ್ತಿದ್ದರು. ನಾಲ್ಕೈದು ಮೈಲು ದೂರದ ಸ್ಕೂಲಿಗೆ ಹೆಣ್ಣು ಮಕ್ಕಳನ್ನು ತಂದೆತಾಯಂದಿರು ಯಾರು ಕಳಿಸಲು ಧೈರ್ಯಮಾಡುತ್ತಿರಲಿಲ್ಲ. ನನ್ನಿಂದ ಸ್ಪೂರ್ತಿ ಪಡೆದು , ತರುವಾಯ ಎಷ್ಟೋ ತಂದೆತಾಯಿಯರು ಹೆಣ್ಣು ಮಕ್ಕಳನ್ನು ದೂರದ ಶಾಲಾ ಕಾಲೇಜಿಗೆ ಕಳಿಸಿದ್ದಾರೆ. ನನ್ನತಂದೆ ದೇಶ ಸುತ್ತುವ ಸ್ವಭಾವದವರು, ನಗರಗಳನ್ನು ಕಂಡವರು , ಅಕ್ಷರ ಕಲಿಯದಿದ್ದರೂ ನನ್ನನ್ನು ಬೆನ್ನಿಗೆ ಬ್ಯಾಗು ಹಾಕಿ ದೂರದ ಸ್ಕೂಲಿಗೆ ಗಂಡುಮಕ್ಕಳ ಸಂಗಡವೇ ಕಳಿಸುತ್ತಿದ್ದರು.

sphoorti gireesh4ಎಂಟನೆಯ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೂ ಸರ್ಕಾರಿ ಹಿಂದುಳಿದ ಇಲಾಖೆಯ ವಿದ್ಯಾರ್ಥಿನಿ ನಿಲಯಗಳಲ್ಲೇ ಇದ್ದು ಓದಿಕೊಂಡೆನು. ಸಾಮಾನ್ಯ ಕೃಷಿಕನಾದ ಅಪ್ಪ ಒಂದೊಂದು ರೂಪಾಯಿ ಹೊಂದಿಸಿಕೊಂಡು ಶಾಲಾ ಕಾಲೇಜಿಗೆ ಶುಲ್ಕ ಕಟ್ಟಲು ಪಡುತ್ತಿದ್ದ ಶ್ರಮ ವ್ಯರ್ಥವಾಗಬಾರದೆಂದೇ  ಶ್ರಮವಹಿಸಿ ಓದುತ್ತಿದ್ದೆನು.

ನನ್ನ ಹದಿಮೂರನೆಯ ವಯಸ್ಸಿಗೆ ಸಾಮಾನ್ಯ ಮಕ್ಕಳನ್ನು ಕಾಡುವ ಸಂಧಿವಾತ ಮತ್ತು ಹೃದಯಕವಾಟದ ತೊಂದರೆಗೆ ತುತ್ತಾಗಿದ್ದೆ. ಇದ್ದಕಿದ್ದಂತೆ ಕೀಲುಗಳು ಊದಿಕೊಂಡು ಹೆಜ್ಜೆ ಎತ್ತಿ ಇಡಲಾರದಂತಹ ಸ್ಥಿತಿ ಉಂಟಾಗುತ್ತಿತ್ತು. ಹತ್ತು ವರ್ಷಕಾಲ ವೈದ್ಯಕೀಯ ಉಪಚಾರಗಳಿಗೆ ಒಳಗಾಗಿದ್ದೆ. ಇಂದು ಈ ಸಮಸ್ಯೆಗಳಿಂದ ಮುಕ್ತವಾಗಿ ಆರೋಗ್ಯದಿಂದಿರುವೆನು. ಇಂತಹ ಸವಾಲಿಗೆ ಒಳಪಟ್ಟು ಹೊರಗೆ ಬಂದ ಮೇಲೆ ಮತ್ತೆಲ್ಲ ಸಮಸ್ಯೆಗಳು ಗೌಣ ಅನಿಸುವುವು.

ಸಾಮಾನ್ಯ ಕೃಷಿಕ ಕುಟುಂಬದ ಹಳ್ಳಿಯ ಪರಿಸರದ ನನಗೆ ಪ್ರತಿ ಹೆಜ್ಜೆಯೂ ಸವಾಲಿನದು. ಪ್ರತಿದಿನವೂ ಸ್ಪರ್ಧೆಯೇ. ಪ್ರತಿ ಹೆಜ್ಜೆಯಲ್ಲೂ ಸ್ಪರ್ಧೆಯೇ. ಓದುವುದೇ ನನ್ನ ಅಭ್ಯಾಸ ಮತ್ತು ಹವ್ಯಾಸ. ಕಾಲೇಜು ದಿನಗಳಲ್ಲಿ ಲೈಬ್ರರಿಯಲ್ಲಿ ಪುಸ್ತಕ ತೆಗೆದುಕೊಂಡು ಓದುತ್ತಿದ್ದೆನು. ಆ ಕಾಲಕ್ಕೆ ತರಬೇತಿ ಕೇಂದ್ರಗಳು ಈಗಿನಂತೆ ಇರಲಿಲ್ಲ. ಲೈಬ್ರರಿಯಲ್ಲಿಯೇ ಓದಿಕೊಂಡು ಈ ಹಂತಕ್ಕೆ ಬಂದೆ.

ಕರ್ನಾಟಕ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷಾ ದಿನಗಳಲ್ಲಿ ನನಗೆ ಹೈಸ್ಕೂಲ್… ಪುಸ್ತಕ ಬೇಕಾಗಿದ್ದವು. ಸಂಜೆ ಸ್ಕೂಲ್… ಮಕ್ಕಳನ್ನು ಪರಿಚಯಿಸಿಕೊಂಡು ಪುಸ್ತಕ ತೆಗೆದುಕೊಂಡು ರಾತ್ರಿ ಎಲ್ಲಾ ಕುಳಿತು ನೋಟ್ಸ್… ಮಾಡಿಕೊಂಡು ಬೆಳಿಗ್ಗೆ ವಾಪಸ್ಸು ಕೊಡುತ್ತಿದ್ದೆ.

ಒಮ್ಮೆ ಒಬ್ಬ ಗೆಳೆಯನ ಮನೆಗೆ ಹೋಗಿದ್ದೆವು ಇಡೀ ದಿನ ಸಂಭ್ರಮಾಚರಣೆಯಲ್ಲಿ ಎಲ್ಲರೂ ಕಳೆದರೂ ನಾನು ಅವನ ಮನೆಯಲ್ಲಿ ಎರಡು ರೀತಿಯ ದಿನಪತ್ರಿಕೆಗಳನ್ನು ಕತ್ತರಿಸಿ ಇಟ್ಟುಕೊಂಡು ಓದಿದೆನು. ಇವೆಲ್ಲವೂ ಈಗ ನೆನಪು. ಎಷ್ಟು ಹಗಲು ರಾತ್ರಿಗಳ ನಿದ್ರೆಕಳೆದುಕೊಂಡು  ಓದಿ ಪರೀಕ್ಷೆ ಪಾಸುಮಾಡಬೇಕು. ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳು ಅವು. ಎಷ್ಟೋ ಯುವಜನತೆ ಈ ಪರೀಕ್ಷೆಗಳನ್ನು ಪಾಸುಮಾಡಲು ಒಂದು ತಪಸ್ಸು ಅನ್ನುವಂತೆ ಓದುವರು. ಇಂತಹ  ಕಠಿಣ ಪರೀಕ್ಷೆಗಳಲ್ಲಿ ಸ್ಪರ್ಧಾಳುವಾಗಿ ಆಯ್ಕೆಯಾಗುವುದೇ ಸಾಧನೆ.

sphoorti gireesh3ನಾನು ಪತ್ರಿಕೋದ್ಯಮ (ಸಮೂಹ ಸಂವಹನ ) ದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದು 2004. ಅದೇ ವರ್ಷ ಡಿಸೆಂಬರ್‌ನಲ್ಲಿ ಕರ್ನಾಟಕ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂಡೆನು. ಸತತ ಒಂದೂವರೆ ವರ್ಷ ಓದಿಕೊಂಡು 2006 ರ ಬ್ಯಾಚಿನ ಕೆ ಸಿ ಟಿ ಎಸ್‌ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಬಿ ಗುಂಪಿನ ಅಧಿಕಾರಿಯಾಗಿ ಆಯ್ಕೆಯಾದೆ. ನನ್ನ ಮೌಖೀಕ ಸಂದರ್ಶನದ ಸಮಯದಲ್ಲಿ ನನ್ನನ್ನೇ ಯಾಕೆ ಆಯ್ಕೆ ಮಾಡಬೇಕು ಅನ್ನುವ ಪ್ರಶ್ನೆ ಬಂತು.  ಶಿಕ್ಷಣ ಪಡೆಯಲು ಪಡಬಾರದ ಶ್ರಮ ಪಟ್ಟಿರುವ ಬಗೆಗೆ ಹೇಳಿಕೊಂಡೆ. ಶ್ರಮ ಸಾರ್ಥಕವಾಗಲು ನನ್ನನ್ನು ಆಯ್ಕೆ ಮಾಡಿರೆಂದು ಆಮೇಲೆ ಕೇಳಿ ತಿಳಿಯಿತು.

ಅಧಿಕಾರಿಯಾಗಬೇಕು ಅನ್ನುವುದು ನನ್ನ  ತಂದೆಯ ಕನಸು, ತಂದೆಯ ಕಣ್ಣಿಗೆ ಕಾಣುತ್ತಿದ್ದ ತಹಶೀಲ್ದಾರರು , ಕೃಷಿ ಅಧಿಕಾರಿಗಳಂತೇ ತನ್ನ ಮಗಳು ಆಗಬೇಕು ಅನ್ನುವ ಕನಸು ಅವರದು. ನಾನು ಸಹ ಬಿ ಎ ಓದುವ ದಿನಗಳಿಂದ ಅದಕ್ಕಾಗಿ ಸಿದ್ಧಗೊಳ್ಳುತ್ತಿದ್ದೆ. ನನ್ನ ಆಯ್ಕೆ ಕೆಲಸ ಸಂಪಾದಿಸಬೇಕು, ಎಲ್ಲಾ  ನೋವು ಅವಮಾನ ಮೀರಬೇಕು. ನನ್ನ ಕುಟುಂಬಕ್ಕೆ ಸಹಕಾರಿಯಾಗಬೇಕು. ಜೊತೆಗೆ ಪ್ರೀತಿಸಿದ ಹುಡುಗನನ್ನು ಮದುವೆಯಾಗಬೇಕು ಅನ್ನುವ ಅಚಲ ಗುರಿಯಿತ್ತು.

ತುಂಬಾ ಸೋತಾಗ ಬದುಕಿನತ್ತ ಮುನ್ನುಡೆಸಿದ ಭರವಸೆಗಳು ಆತ್ಮವಿಶ್ವಾಸ, ಪ್ರತಿ ಕತ್ತಲು ಕಳೆದ ಮೇಲೆ ಬೆಳಕಿನ ಹಗಲು ಬಂದೆ ಬರುತ್ತದೆ ಅನ್ನುವ ಆಶಯ. ಒಂದು ಹೆಜ್ಜೆ ಮುಂದಿಟ್ಟರು ಎಷ್ಟೇ ನೋವಿನ, ದುಃಖದ ಭಾವವು  ಅಳಿಸಿಹೋಗುತ್ತದೆ ಅನ್ನುವ ದೃಢವಿಶ್ವಾಸ.

ನಾನು ತೆರಿಗೆ ಅಧಿಕಾರಿ. ಒತ್ತಡ ಹೆಚ್ಚಾಗಿರುವ ಇಲಾಖೆ ನಮ್ಮದು. ನಾವು ಸರ್ಕಾರದ ಯಂತ್ರಗಳು.
ಸರ್ಕಾರದ ಚಕ್ರ ತಿರುಗಲು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಲೇಬೇಕು.

ಸರಳವಾದ ಜೀವನಶೈಲಿ ನಮ್ಮದು. ಮನಸ್ಸನ್ನು ಉತ್ಸಾಹ ಮತ್ತು ಸಂತೋಷವಾಗಿಟ್ಟುಕೊಳ್ಳಲು ಪ್ರಯತ್ನಿಸುವೆನು. ಕಛೇರಿಯಲ್ಲಿ ಗಂಭೀರ ಸಮಸ್ಯೆಗಳು ಎದುರಾಗುವುದರಿಂದ ಗಂಭೀರ  ವದನಗಳು ಮಾತ್ರವೇ ಕಾಣಬಲ್ಲವು. ಇನ್ನೂ ವೈಯಕ್ತಿಕ ಬದುಕಿನಲ್ಲಿ ಉತ್ಸಾಹ ಹುಮ್ಮಸ್ಸು ಖುಷಿಯಿಂದ ಬದುಕಲು ಪ್ರಯತ್ನಿದುವೆವು. ನನ್ನ ಜೀವನ ಸಂಗಾತಿ ಹಾಸ್ಯಪ್ರಜ್ಞೆ ಉಳ್ಳವನು. ಎಲ್ಲವನ್ನು ತೇಲಿಸಿ ಹಗುರಾಗಿಸಿ ಬಿಡುವ ಪ್ರವೃತ್ತಿ ಅವನ ಜೊತೆಗೆ ಜೀವನ ಹಗುರವಾಗಿದೆ.

ಆಗಾಗ ನನ್ನ ಬಾಲ್ಯದ ದಿನಗಳು. ಹಳ್ಳಿ ,ಕಾಡು, ಭತ್ತದ ಗದ್ದೆಗಳು, ಆ ಕಾಲದ ಮುಂಜಾವು, ಸಂಜೆಗಳು, ಮಳೆಯದಿನಗಳು ನೆನಪು.

ಪ್ರತಿಸಲ ಸೋತಾಗಲೂ,  ಅತಿ ತೀವ್ರವಾದ ನೋವು ನಿರಾಸೆ ಅನುಭವಿಸಿದಾಗಲೂ ಆತ್ಮಹತ್ಯೆ ಮಾಡಿಕೊಂಡಿದ್ದರೆ ಇಷ್ಟೊತ್ತಿಗೆ ಸಾವಿರ ಸಲ ಸತ್ತುಹೋಗಿರುತ್ತಿದ್ದೆ. ಅಷ್ಟು ನೋವು, ನಿರಾಸೆ, ದುಃಖಗಳನ್ನು ಮನುಷ್ಯ ಅನುಭವಿಸಬೇಕಾಗಿ ಬರುವುದು. ಸುಖ ಅನ್ನುವ ಭಾವ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ, ದುಃಖ ಗಾಢವಾಗಿ ಕಾಡುತ್ತದೆ. ಇನ್ನೊಂದು ವ್ಯಕ್ತಿತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಹೆಜ್ಜೆ ಇಡುವಾಗ ವೃತ್ತಿ ಬದುಕು ಅಥವಾ ವೈಯುಕ್ತಿಕ ಬದುಕಿನಲ್ಲಾಗಲಿ ಸಂಘರ್ಷಣೆಗಳು ಸಂಭವಿಸುತ್ತಲೆ ಇರುವವು. ಇವನ್ನೆಲ್ಲಾ ಮೀರುವುದೇ ನಿಜವಾದ ಬದುಕು.

treesವೃತ್ತಿ ಜೀವನದ ಸಮಸ್ಯೆಗಳ ಬಗೆಗೆ ಹಿರಿಯ ಸಹ ಅಧಿಕಾರಿಗಳ್ಳೋಡನೆ ಚರ್ಚಿಸುವೆನು. ನನ್ನ ವೈಯುಕ್ತಿಕ ವಿಚಾರಗಳ ಸಂಘರ್ಷಗಳು ಸರಿದೂಗಿಸಿಕೊಳ್ಳಲು ಆತ್ಮೀಯ ಸ್ನೇಹಿತರು, ಸಹೋದರಿಯರು, ಜೀವನ ಸಂಗಾತಿ ಜೊತೆ ಹಂಚಿಕೊಳ್ಳುವೆನು. ಎಂತಹ ಸಮಸ್ಯೆಯನ್ನು ಕಾಲವೇ ಪರಿಹರಿಸುವುದು ತಾಳ್ಮೆಬೇಕು.

ಈಗಿನ ಬದುಕು ಮತ್ತು ವೃತ್ತಿಯ ಹೊಂದಾಣಿಕೆ
ಬದುಕು ಸರಳ ಮತ್ತು ಸುಂದರವಾಗಿದೆ. ಕಛೇರಿ ಸಮಯ ಹೊರತಾಗಿ  ಮಕ್ಕಳು ಎಲ್ಲಾ ಸಮಯವನ್ನು ತುಂಬುವರು. ಮಹಿಳೆಯರು ದ್ವಿಪಾತ್ರ ವಹಿಸಲೇ ಬೇಕು. ಕಛೇರಿಯ ಕೆಲಸವೂ ಸರಿಸಮನಾಗಿ ನಿರ್ವಹಿಸುವುದರ ಜೊತೆಗೆ ಮಕ್ಕಳ ಲಾಲನೆ ಪಾಲನೆ ಪೋಷಣೆಮಾಡುತ್ತಾ ಸಮಾಜದ ಆಸ್ತಿಗಳನ್ನಾಗಿಸುವ ಬಹುದೊಡ್ಡ ಸವಾಲು ತಾಯಿಯದಾಗಿದೆ. ಎರಡನ್ನೂ ಸರಿದೂಗಿಸುತ್ತ ಕಳೆಯುವುದೇ ದಿನಚರಿ.

ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣು ಇರುವಂತೆಯೇ ನನ್ನ ಎಲ್ಲಾ ಸಾರ್ಥಕ್ಯ ಜೀವನದಲ್ಲಿ ನನ್ನ ಜೀವನ ಸಂಗಾತಿ, ಆತ್ಮೀಯ ಗೆಳೆಯರು ಮತ್ತು ನನ್ನ ಅಪ್ಪನ ಪಾತ್ರ ದೊಡ್ಡದಿದೆ.
ನನ್ನ ಪತಿ ಗಿರೀಶ್‌ ವೃತ್ತಿಯಿಂದ ವಕೀಲರು. ಮಕ್ಕಳು ತನ್ಮಯಕೃಷ್ಣ ಮತ್ತು ಬೃಂದ. ಅಪ್ಪ ವೀರಭದ್ರೇಗೌಡ.

– ವಿಶಾಲಾಕ್ಷಮ್ಮ (ಸ್ಪೂರ್ತಿ ಗಿರೀಶ್‌)
ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು
ಮಂಡ್ಯ.

ಉದಯವಾಣಿಯಿಂದ 

‍ಲೇಖಕರು admin

3 March, 2016

8 Comments

  1. ಆನಂದ್ ಋಗ್ವೇದಿ

    ಸ್ಪೂರ್ತಿ, ನೀವು ಹೊಸ ತಲೆಮಾರಿನಲ್ಲೂ ಸಾಧನೆಗಾಗಿ ಪಡಬಾರದ ಕಷ್ಟ ಓಡುತ್ತಿರುವ ಅನೇಕ ಹೆಂಗಳೆಯರಿಗೆ ಸ್ಪೂರ್ತಿ. ನಮ್ಮ ತಲೆಮಾರಿನ ಹೆಮ್ಮೆ

  2. ಸ್ಪೂರ್ತಿ ಗಿರೀಶ್

    ಧನ್ಯವಾದಗಳು ಅವಧಿ …… ಬಳಗಕ್ಕೆ, ಹಂಚಿಕೊಂಡಿದಕ್ಕೆ.
    ಧನ್ಯವಾದಗಳು ಆನಂದ್ ಸರ್, ನಿಮ್ಮ ಸ್ಫೂರ್ತಿಯ ನುಡಿಗೆ.

    ಸ್ಪೂರ್ತಿ ಗಿರೀಶ್

  3. ಮುರಳಿಕೃಷ್ಣ. ಬಿ. ವೆಂ

    ವಿಶಾಲಾಕ್ಷಮ್ಮರವರ ಅವರ ಬದುಕು ಮತ್ತು ಸಾಧನೆಯ ಬಗ್ಗೆ ಓದಿ ಬಹಳ ಸಂತೋಷವಾಯಿತು ಹಾಗೂ ಸ್ಪೂರ್ತಿದಾಯಕವಾಯಿತು. ಅವರ ಕಾರ್ಯವೈಖರಿ ಮತ್ತು ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕಾವಾಗಲಿ. ಒಬ್ಬ ಮಹಿಳೆ ಗೃಹಣಿಯ ಸ್ಥಾನದೊಡನೆ ಅಧಿಕಾರಿಯಾಗಿ ಸಾಧನೆಯನ್ನು ಮಾಡುವುದು ಬಹಳ ಪ್ರಶಂಸನೀಯವಾಗಿದೆ.
    ಒರ್ವ ಮಹಿಳೆ, ಮಗಳಾಗಿ, ತಾಯಿಯಾಗಿ, ಗೃಹಣಿಯಾಗಿ, ಗೆಳತಿಯಾಗಿ, ಸಹೋದ್ಯೋಗಿಯಾಗಿ, ಅಧಿಕಾರಿಯಾಗಿ, ಕಾರ್ಯನಿರ್ವಹಿಸಿ ಬದುಕು ಮತ್ತು ಕೆಲಸದ ಸಮತೋಲನ ಕಾಯ್ದಕೊಳ್ಳವುದು ಪ್ರಶಂಸನೀಯವಾಗಿದೆ.

    ಮಾರ್ಚ ೮ರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಎಲ್ಲಾ ಮಹಿಳೆಯರಿಗೂ ಅನಂತ ಧನ್ಯವಾದಗಳು, ನಿಮ್ಮಗಳ ಜೀವನ, ಬದುಕು ಬೇರೆಯವರಿಗೆ ಸ್ಪೂರ್ತಿಯಾಗಲಿ.

  4. shivaprakash

    Good one….Expect more of this kind in Avadhi…..

  5. Dr.Sulekha Varadaraj

    Respected Spoorthi madam, congratulations

  6. Adrusha banajagi

    Avadhi super madam congratulations madam.nimma e prayatnakke tumbha tumbha dhanyavadagalu madam

  7. ಆದಿವಾಲ ಗಂಗಮ್ಮ

    ಸ್ಪೂರ್ತಿ ಗಿರೀಶ್ ನಿಮ್ಮ ಈ ಲೇಖನದಿಂದ ಇನ್ನೂ ನೂರಾರು ಮಹಿಳೆಯರಿಗೆ ಸ್ಪೂರ್ತಿ ಸಿಗಲಿ ಎಂದು ಆಶಿಸುತ್ತೇನೆ.ನಿಮ್ಮ ಚಲ ಬಿಡದ ಪ್ರಯತ್ನಕ್ಕೆ ಕನಸಿನ ಸಾಕಾರಕ್ಕೆ ಮತ್ತು ನಿಮ್ಮ ಗಿರೀಶ್ ರವರ ಸಹಕಾರಕ್ಕೆ ನಮೋ ನಮಃ.

  8. ನಾದ ಮಣಿನಾಲ್ಕೂರು

    ಗ್ರೇಟ್ ಸ್ಪೂರ್ತಿ ಇದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading