
ಶುಭಶ್ರೀ ಭಟ್ಟ
‘BB5’ಯ ಹೆಸರು ಕೇಳಿ ಇದ್ಯಾವುದೋ ಭೂತ ಬಂಗಲೆಯ ಭಯಾನಕ ಕಥೆಯಿರಬೇಕು, ಅದಕ್ಕೇ ಭೂತ ಬಂಗಲೆ 5 (BB5)ಯೆಂಬ ಹೆಸರಿಟ್ಟಿದ್ದಾರೆಂದುಕೊಂಡಿದ್ದೆ.
ಆದರೂ ಇತ್ತೀಚೆಗೆ ಹೊಸಬರ ಸಿನೆಮಾವನ್ನು ಅಲ್ಲಗಳೆಯುವಂತಿಲ್ಲವಲ್ಲ ಅದಕ್ಕಾಗಿ ನೋಡುವ ಧೈರ್ಯಮಾಡಿ ಹೊರಟ ನಮ್ಮ ನಂಬಿಕೆಗೆ ಮೋಸವಾಗಲಿಲ್ಲ. ನೈಜ ಘಟನೆಯನ್ನು ಆದರಿಸಿ ತಯಾರಾದ ಚಿತ್ರ, ಕ್ಷಣ ಕ್ಷಣಕ್ಕೂ ಕೂತೂಹಲವನ್ನು ತೆರೆದಿಟ್ಟು ಪ್ರೇಕ್ಷಕನನ್ನು ಕೊನೆಯ ತನಕ ಹಿಡಿದಿಟ್ಟುಕೊಳ್ಳುತ್ತಾರೆ. ಒಂದು ಕೊಲೆಯ ಸುತ್ತ ನಡೆಯುವ ಸಾಮಾನ್ಯ ಕಥೆಯೆನಿಸಿದರೂ, ಅದನ್ನು ಹೆಣೆದು ಪೋಣಿಸಿದ ರೀತಿ ಪ್ರೇಕ್ಷಕನಿಗೆ ಹಿಡಿಸುತ್ತದೆ.. ಕತ್ತಲ ರಾತ್ರಿ, ಅರ್ಧಸುಟ್ಟ ಮುಖದ
ಮನುಷ್ಯ, ಆಕ್ಸಿಡೆಂಟ್, ಕೊಲೆಯ ತನಿಖೆಗಳೆಂಬ ಭಯಾನಕದೊಡನೆ ಶುರುವಾಗುವ ಕಥೆ ತೆಗೆದುಕೊಳ್ಳುವ ತಿರುವುಗಳು ಅದ್ಭುತ. ಇಲ್ಲಿಗೆ ಮತ್ತೊಬ್ಬ ನವ ನಿರ್ದೇಶಕ ತಮ್ಮ ಚೊಚ್ಚಲ ಚಿತ್ರದೊಂದಿಗೆ ಕನ್ನಡ ಚಿತ್ರರಂಗಕ್ಕೆ ಭರವಸೆಯ ಬೆಳಕು ನೀಡುವುದರೊಂದಿಗೆ ಜೊತೆಗೆ ಪ್ರೇಕ್ಷಕರಿಗೆ ಹೊಸ ಅನುಭವವನ್ನೂ ಕಟ್ಟಿಕೊಡುತ್ತಾರೆ.
ನಾಲ್ಕೈದು ಒಳ್ಳೆಯ ಸಿನೆಮಾ, ಅದರಲ್ಲೂ ನೈಜ ಘಟನೆಯನ್ನಾದರಿಸಿ ಚಿತ್ರ ತೆಗೆದು ತಮ್ಮ ಹೆಸರನ್ನು ಚಿತ್ರರಂಗದಲ್ಲಿ ಭದ್ರಪಡಿಸಿಕೊಂಡಿರುತ್ತಾರೆ ‘ದಯಾನಂದ ದೇಸಾಯಿ’ ಎನ್ನುವ ನಿರ್ದೇಶಕ. ಅವರ ಜೊತೆ ಕೆಲಸ ಮಾಡಲು ಹಾತೊರೆದು ಬರುವ ಜನಕ್ಕೇನೂ ಕಡಿಮೆಯಿರಲಿಲ್ಲ, ಇದಕ್ಕೆ ಕಥಾನಾಯಕನೂ ಹೊರತಾಗಿರಲಿಲ್ಲ. ಅಥರ್ವನೆಂಬ ಹೆಸರಿನ ಈ ಕಥಾನಾಯಕ ತಾನೊಬ್ಬ ಒಳ್ಳೆಯ ಕಥೆಗಾರನಾಗಬೇಕು, ದೇಸಾಯಿಯವರ ಜೊತೆ ಕೆಲಸ ಮಾಡಬೇಕೆಂಬ ಮಹಾದಾಸೆಯಿಂದ ತನ್ನ ಪ್ರೇಯಸಿಯ ಕಿವಿಮಾತನ್ನೂ ಕೇಳದೇ, ತನ್ನ ಅಂತಿಮ ವರ್ಷದ ಪರೀಕ್ಷೇಯನ್ನೂ ಲೆಕ್ಕಿಸದೇ, ದೇಸಾಯಿಯವರನ್ನರಸಿ ಬರುತ್ತಾನೆ.
ಅಷ್ಟು ಸುಲಭವಾಗಿ ದೇಸಾಯಿವರನ್ನು ಮೆಚ್ಚಿಸಲಾಗದೆಂಬ ಸತ್ಯದರಿವಿದ್ದರೂ, ತನ್ನ ಕಥೆಯನ್ನು ಅವರಿಗೆ ವಿವರಿಸಹೊರಡುತ್ತಾನೆ. ಮೊದಲಿನಿಂದ ನೈಜಕಥೆಗೆ ಪ್ರಾಮುಖ್ಯತೆ ಕೊಡುವ ದೇಸಾಯಿಯವರಿಗೆ ಈ ಹುಡುಗನ ಕಥಾಶೈಲಿ ಇಷ್ಟವಾಗದೇ, ಅವನನ್ನು ಮನೆಯಿಂದ ಹೊರದಬ್ಬಿಸುತ್ತಾರೆ. ನಂತರ ಅವರ ಟೀಕೆಯನ್ನು ಗಂಭೀರವಾಗಿ ಪರಿಗಣಿಸಿದ ಅಥರ್ವ, ನೈಜಕಥೆಯ ಪ್ರೇರಣೆಗೆ ತೆಗೆದುಕೊಳ್ಳುವ ವಿಪತ್ತು ದೇಸಾಯಿಯವರನ್ನೂ ದಂಗುಬಡಿಸುತ್ತದೆ.
ಕೊನೆಗೆ ಅವನ ಆಕಾಂಕ್ಷೆಗೆ ಬೆನ್ನುತಟ್ಟುವ ದೇಸಾಯಿಯವರು ತಮ್ಮ ಟೀಮ್ ಗೆ ಅವನನ್ನು ಸೇರಿಸಿಕೊಳ್ಳುತ್ತಾರೆ. ಆದರೆ ಅಥರ್ವನ ಜೀವನವನ್ನೇ ಕುರಿತು ತಮ್ಮ ಸಿನೆಮಾದ ಕಥೆ ಬರೆಯತೊಡಗುತ್ತಾರೆ ದೇಸಾಯಿಯವರು.. ದರ್ಪದ ನಿರ್ದೇಶಕ, ಆತ್ಮೀಯ ಗೆಳೆಯ, ಕೆಲವು ಕಡೆ ಅಪ್ಪನಂತೇ, ಅಸೆಬುರುಕನಂತೆ ಹೀಗೆ ವಿವಿಧ ಆಯಾಮಗಳನ್ನೊಳಗೊಂಡ ಪಾತ್ರವೇ ದಯಾನಂದ ದೇಸಾಯಿ..
ಇಂತಹ ಹೆಸರಾಂತ ನಿರ್ದೇಶಕನ ಪಾತ್ರದಲ್ಲಿ ಅಭಿನಯಿಸಿದ ರಾಜೇಶ್ ನಟರಂಗ ಅವರದು ಎಂದಿನ ಹಾಗೇ ಮಾಗಿದ ಅಭಿನಯ.. ಒಳ್ಳೆಯ ಕಥೆಗಾರನೆಂಬಾಸೆ- ಕನಸುಗಳ್ಳನ್ನೊತ್ತ ಹುಡುಗ, ಛಲಗಾರ ಮತ್ತವನ ಸೆಣೆಸಾಟ, ತೊಳಲಾಟ, ಇಬ್ಬರು ಹುಡುಗಿಯರ ಮುದ್ದಿನ ರಾಜಕುಮಾರ, ಕಥೆಯ ಹೆಣೆಯುವ ಸೂತ್ರಧಾರನ ಪಾತ್ರವೇ ಕಥಾನಾಯಕನಾದ ‘ಅಥರ್ವ’ನದು. ಈ ಪಾತ್ರವನ್ನು ಪೂರ್ಣಚಂದ್ರ ಮೈಸೂರು ಲೀಲಾಜಾಲವಾಗಿ ಅಭಿನಯಿಸಿದ್ದಾರೆ.
ಹೀಗಿರುವಾಗ ಅಥರ್ವನ ಜೀವನ ಪ್ರವೇಶಿಸುವ ನಾಯಕಿಯೇ ಕೃತಿ. ನಾಯಕ ಹೋದಲ್ಲೆಲ್ಲಾ ಅವನನ್ನೂ ಹಿಂಬಾಲಿಸುತ್ತಾ, ಅವನನ್ನು ಪರೀಕ್ಷೆಗೊಳಪಡಿಸುವ ಇವಳನ್ನು ದೇಸಾಯಿಯವರೇ ಕಳುಹಿಸಿರಬಹುದೆಂಬ ಕೂತೂಹಲಕ್ಕೆ ಸತ್ಯ ಕೊನೆಯಲ್ಲಿ ಅನಾವರಣಗೊಳ್ಳುತ್ತದೆ. ಇವಳಲ್ಲೂ ಕಥೆಯ ಹುಡುಕಹೊರಟ ನಾಯಕ ಕೃತಿಯ ಮಾತಿನ ಮೋಡಿಗೆ ಸಿಲುಕಿ ಪ್ರೀತಿಸತೊಡಗುತ್ತಾನೆ. ಅಷ್ಟರಲ್ಲೇ ಮರಳಿ ಬರುವ ಮೊದಲ ಪ್ರೇಯಸಿ, ತನ್ನಿನಿಯನ ಪ್ರೀತಿಯ ವಿಷಯ ತಿಳಿದ ಅವಳ ದ್ವೇಷ, ಆಕ್ರೋಶ ಎಲ್ಲವೂ ನಿಮ್ಮನ್ನು ಅದ್ಯಾವುದೋ ತರ್ಕಕ್ಕೆ ಕರೆದೊಯ್ಯುತ್ತದೆ.
ಈ ಕುತೂಹಲಕ್ಕೆಲ್ಲಾ ತೆರೆ ಬೀಳಬೇಕಾದರೆ ಸಿನೆಮಾ ನೋಡಲೇಬೇಕು.. ತುಂಟಾಟದ ಹುಡುಗಿ, ಮುದ್ದು ಗೆಳತಿ, ಪ್ರೀತಿಯ ಅಕ್ಕನ ಪಾತ್ರವೇ ನಾಯಕಿಯಾದ ‘ಕೃತಿ’ಯದ್ದು. ಮೊದಲಬಾರಿಗೆ ಇಂತಹ ಪಾತ್ರ ನಿರ್ವಹಿಸುತ್ತಿರುವ ರಾಧಿಕಾ ಚೇತನ್ ಅಭಿನಯ ಸೊಗಸಾಗಿದೆ. ಇವರಿಗೆ ಸರಿಸಾಟಿಯಾಗಿ ಪ್ರೀತಿಸುವ ಹುಡುಗಿ, ವಾಸ್ತವದಲ್ಲಿ ನಂಬಿಕಿಯಿಟ್ಟ ಹೆಣ್ಣು, ಅಸೂಯೆಯ ಇನ್ನೊಂದು ಮುಖ, ನಾಯಕನ ಹಳೇ ಪ್ರೇಯಸಿಯ ಪಾತ್ರವೇ ಸ್ವಪ್ನ, ಪಾತ್ರಕ್ಕೆ ಪೂರಕವಾದ ಅಭಿನಯವನ್ನು ಮಾಡಿ, ತಮ್ಮ ಪಾತ್ರಕ್ಕೆ ನ್ಯಾಯವನ್ನೊದಗಿಸಿದ್ದಾರೆ ರಶ್ಮಿ ಪ್ರಭಾಕರ.
ಸಂಗೀತಾ ಕಟ್ಟಿಯವರು ಹಾಡಿರುವ ‘ಬೊಗಸೆ ಪ್ರೀತಿಗೆ ಕಾಯುವೆ’ ಮನಸ್ಸಿಗೆ ನಾಟಿದರೆ, ರಾಜೇಶ್ ಕೃಷ್ಣನ್ ಅವರ ದನಿಯಲ್ಲಿ ಮೂಡಿಬಂದ ‘ಪುಟ್ಟ ಪುಟ್ಟ ಅಕ್ಷರ’ ಕೇಳಲು ಇಂಪಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದರೂ, ಮನದಲ್ಲಿ ಉಳಿಯುವುದು ಇವೆರಡೇ. ಚೇತನ್ ಕುಮಾರ್ ಶಾಸ್ತ್ರೀ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಸಂಗೀತ ಸಿನೆಮಾಕ್ಕೆ ಪೂರಕವಾಗಿದೆ.
ಮೊದಲ ಬಾರಿಗೆ ನಿರ್ದೇಶಕನ ಸ್ಥಾನದಲ್ಲಿ ಕುಳಿತು ಒಂದೊಳ್ಳೆ ಸಿನೆಮಾವನ್ನು ಪ್ರೇಕ್ಷಕನಿಗೆ ಇಷ್ಟವಾಗುವ ರೀತಿ ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಈ ಕೆಲಸವನ್ನು ಅದ್ಭುತವಾಗಿ ಮಾಡಿದ್ದಾರೆ ನವ ನಿರ್ದೇಶಕರಾದ ಜನಾರ್ಧನ್ ಎನ್ ಅವರು. ಇವರಿಂದ ಮತ್ತಷ್ಟೂ ಒಳ್ಳೊಳ್ಳೆ ಸಿನೆಮಾಗಳು ಬರಲಿ, ನಮ್ಮ ಕನ್ನಡ ಚಿತ್ರರಂಗದ ಪರಭಾಷಾ ಚಿತ್ರದ ಪಿಡುಗಿನಿಂದ ಹೊರಬರುವಂತಾಗಲಿ. ನೀವೂ ನೋಡಿ ಹೊಸಬರ ಹೊಸಪ್ರಯತಕ್ಕೆ ಪ್ರೋತ್ಸಾಹವನ್ನು ನೀಡಿ ಹೊಸ ಅನುಭವ ಕಟ್ಟಿಕೊಂಡು ಬನ್ನಿ..





Hosa prayatnakke yaavagalu protsahavidde irutade