ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

96 ರಿಂದ 99

ತಣ್ಣಗೆ ಹರಿಯುವ ಪ್ರೀತಿಯನ್ನು ಅಳಕವಾಗಿಸಿದ  99 ಸಿನಿಮಾ

ಡಿ.ಎಸ್. ರಾಮಸ್ವಾಮಿ

ಕನ್ನಡ ಸಿನಿಮಾಗಳಿಗೆ ಕಾಲದ ಸೂಕ್ಷ್ಮತೆಯನ್ನು ಹಿಡಿಯುವ ಮತ್ತು ಹೊಸ ತಲೆಮಾರಿನ ತವಕಗಳನ್ನು ಯಶಸ್ವಿಯಾಗಿ ಚಿತ್ರಿಸುವ ತಾಕತ್ತು ಇಲ್ಲವೆಂಬುದನ್ನು ಸದ್ಯ ತೆರೆ ಕಾಣುತ್ತಿರುವ ಹಲವು ಸಿನಿಮಾಗಳನ್ನು ನೋಡಿದಾಗಲೆಲ್ಲ ಅನ್ನಿಸುವುದು ಸಹಜ. ಪಕ್ಕದ ಭಾಷೆಯೊಂದರಲ್ಲಿ ಈಗಾಗಲೇ ಯಶಸ್ವಿಯಾಗಿದ್ದ ಚಿತ್ರಗಳನ್ನು ರೀಮೇಕ್ ಮಾಡುವ ಗಾಂಧಿನಗರದ ಪ್ರಭೃತಿಗಳಿಗೆ ಚಿತ್ರಕತೆಯನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುವ ತಾಕತ್ತು ಇಲ್ಲದಿರುವುದು ಕೂಡ ಇಂಥ ರೀಮೇಕ್ ಚಿತ್ರಗಳ ಸೋಲಿಗೆ ಕಾರಣ.

ಕಳೆದ ವರ್ಷ ಬಿಡುಗಡೆಯಾಗಿ ಯಶಸ್ವಿಯಾದ ಪಕ್ಕದ ತಮಿಳು ತೆಲುಗು ಮಲೆಯಾಳಂ ಮತ್ತು ಮರಾಠೀ ಚಿತ್ರಗಳು ಯಾವುವೆಂದು ಮತ್ತೆ ಹೇಳಬೇಕಿಲ್ಲ. ಅದ್ದೂರಿ ತಾರಾಗಣ, ಹೈ ಬಜೆಟ್, ರಿಚ್ ಮೇಕಿಂಗ್ ಇತ್ಯಾದಿಗಳ ನಡುವೆಯೂ ಕಡಿಮೆ ಬಜೆಟ್ಟಿದ್ದರೂ ಹೊಸತನ, ರೋಮಾನ್ಸ್, ತಾಜಾ ಮುಖಗಳು, ಹಿತವಾದ ಸಂಗೀತದ ಮೂಲಕ ಗೆದ್ದ ಚಿತ್ರಗಳೂ ಸಾಕಷ್ಟಿವೆ. ಕೆಲವನ್ನು ರೀಮೇಕ್ ಮಾಡಲಾಗಿದೆ ಕೂಡ. ಇನ್ನು ಕೆಲವನ್ನು ಡಬ್ ಮಾಡುವ ಸುದ್ದಿ ಇದ್ದಿತ್ತಾದರು ಯಾಕೋ ಇನ್ನೂ ಡಬ್ಬಿಂಗ್ ಕನ್ನಡದ ಜಾಯಮಾನಕ್ಕೆ ಸ್ವಲ್ಪ ದೂರದಲ್ಲೇ ಇದೆ.

ಇರಲಿ, ನಾನೀಗ ಹೇಳ ಹೊರಟದ್ದು ತಮಿಳಿನ ೯೬ ಸಿನಿಮ ಬಗ್ಗೆ. ಆ ಸಿನಿಮಾದ ಬಗ್ಗೆ ಮಯೂರದಲ್ಲಿ ಅವಧಿಯಲ್ಲಿ ಓದಿದ ನಂತರವೇ ನನಗೆ ಆ ಚಿತ್ರದ ಬಗ್ಗೆ ತಿಳಿದದ್ದು. ಚಿತ್ರದ ಬಗ್ಗೆ ಹುಟ್ಟಿಕೊಂಡ ಕುತೂಹಲ ಆ ಚಿತ್ರವನ್ನು ಹುಡುಕಿಕೊಂಡು ಹೋಗಿ ನೋಡುವವರೆಗೂ ನನ್ನಿಂದ ದೂರವಾಗಲಿಲ್ಲ. ಅತ್ಯಂತ ಸಮಾಧಾನ ಮತ್ತು ಹಿತಾನುಭವ ಆ ಚಿತ್ರದಿಂದ ನನಗೆ ಸಿಕ್ಕಿತ್ತು.

ಸಿನಿಮಾ ನೋಡಿ ಬಂದ ಮೇಲೆ ಕನ್ನಡಕ್ಕೆ ಯಾರಾದರೂ ಈ ಸಿನಿಮಾ ತರಬಾರದೇ ಅಂದುಕೊಳ್ಳುತ್ತಿದ್ದಾಗಲೇ ಪ್ರೀತಂ ಗುಬ್ಬಿ ಇದನ್ನು ರೀಮೇಕ್ ಮಾಡುತ್ತಿದ್ದಾರೆ ಎಂದು ಓದಿ ಸಂಭ್ರಮಿಸಿದ್ದೆ.

ಗಣೇಶ್‌ ಮತ್ತು ಭಾವನಾ ಮೆನನ್‌ ತಮಿಳಿನ ೯೬ರ ರೀಮೇಕ್ 99 ಚಿತ್ರದಲ್ಲಿ ನಟಿಸಿದ್ದಾರೆ. ಏಳು ವರ್ಷಗಳ ನಂತರ ಒಟ್ಟಿಗೆ ನಟಿಸಿರುವ ಇಬ್ಬರ ಲುಕ್‌ನಲ್ಲಿ ಬಹಳ ಬದಲಾವಣೆ ಆಗಿದೆ. ಮೂಲ ತಮಿಳು ಸಿನಿಮಾ ನೋಡಿದವರಿಗೆ ಕನ್ನಡ ರಿಮೇಕ್‌ ಇಷ್ಟವಾಗದಿರುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಕನ್ನಡದಲ್ಲಿ ಮೊದಲ ಬಾರಿಗೆ ನೋಡಿದವರಿಗೂ ಚಿತ್ರದಲ್ಲಿ ಇಂಟೆನ್ಸಿಟಿ ಕಡಿಮೆ ಇದೆ ಎನ್ನಿಸಿದರೆ ಆಶ್ಚರ್ಯವಿಲ್ಲ.

ಶಾಲಾ ದಿನಗಳಲ್ಲಿನ ಮೊದಲ ಪ್ರೀತಿ ಯಾರಿಗೂ ಮರೆಯಲು ಸಾಧ್ಯವಾಗದು. ಹೀಗೊಂದು ಪ್ರೀತಿ ರಾಮಚಂದ್ರ ತೀರ್ಥಹಳ್ಳಿ (ಗಣೇಶ್‌) ಮತ್ತು ಜಾನಕಿ(ಭಾವನಾ) ನಡುವೆ ಇರುತ್ತದೆ. ನದಿಯಂತೆ ತಣ್ಣಗೆ ಹರಿಯುವ ಪ್ರೀತಿ ಬೇರೆ ಬೇರೆ ದಾರಿ ಹಿಡಿದು ಮುಂದಕ್ಕೆ ಸಾಗುತ್ತದೆ. ಹೈಸ್ಕೂಲ್‌ನಲ್ಲಿರುವಾಗ ತಾನು ಪ್ರೀತಿಸುವ ಹುಡುಗಿ ಜಾನಕಿಗೆ ಅದನ್ನು ಹೇಳಲಾಗದೆ, ಎದೆಯಲ್ಲೇ ಇಟ್ಟುಕೊಂಡುಬಿಡುವ ರಾಮಚಂದ್ರ, ಅದನ್ನು ಹೇಳುವ ಕ್ಷಣಕ್ಕಾಗಿ ಕಾಯುವ ಜಾನಕಿ, ಕೊನೆಗೆ ಬದುಕು ತಿರುವು ಪಡೆದುಕೊಂಡ ನಂತರ ಅವರು ಭೇಟಿಯಾಗುತ್ತಾರೆ, ಅದೂ 20 ವರ್ಷಗಳ ನಂತರ. ಶಾಲಾ ಗೆಳೆಯರೆಲ್ಲರೂ ರೀಯೂನಿಯನ್‌ ಆಗಲು ಬಯಸಿದಾಗ ಭಗ್ನ ಪ್ರೇಮಿಗಳು ಎದುರಾಗುತ್ತಾರೆ. ಶಾಲಾ ದಿನಗಳು ಮರುಕಳಿಸುತ್ತವೆ. ಹೃದಯಗಳು ಪ್ರೀತಿಯನ್ನು ನೆನೆದು ತುಡಿಯುತ್ತವೆ. ರಾಮಚಂದ್ರ ಈ ಪ್ರೀತಿಯನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುತ್ತಾನೆ.

ರೀಮೇಕ್‌ ಸಿನಿಮಾ ನೋಡಿದಾಗ ಸಹಜವಾಗಿಯೇ ಮೂಲ ಚಿತ್ರದೊಟ್ಟಿಗೆ ಮನಸ್ಸು ತುಲನೆಗೆ ಇಳಿಯುತ್ತದೆ. ವಿಜಯ್‌ ಸೇತುಪತಿ–ತ್ರಿಷಾ, ಗೌರಿ–ಆದಿತ್ಯಾ ಜೋಡಿಗಳ ಎರಡು ಹಂತಗಳ ಹದವರಿತ ಪ್ರೇಮಾಭಿನಯ ತಮಿಳು ಸಿನಿಮಾದ ಜೀವಾಳ. ಮೇಲಾಗಿ ಸಂಗೀತ ಇಡೀ ಚಿತ್ರದ ಆತ್ಮದಲ್ಲೊಂದು ನಾದದಲೆ ಎಬ್ಬಿಸಿತ್ತು. ಕನ್ನಡದಲ್ಲಿ ಗಣೇಶ್, ಭಾವನಾ ಇಬ್ಬರೂ ಅಭಿನಯಕ್ಕೆ ನ್ಯಾಯ ಸಲ್ಲಿಸಿದ್ದಾರಾದರೂ, ಮೂಲದಲ್ಲಿ ಇದ್ದ ಆ ನಾದದ ಅಲೆ ಇಲ್ಲಿ ಇಲ್ಲವಾಗಿದೆ. ಮೂಲ ಸಿನಿಮಾದ ಅವಧಿಗೆ ಹೋಲಿಸಿದರೆ ಕನ್ನಡದ ಅವಧಿ  ಅರ್ಧ ಗಂಟೆಯಷ್ಟು ಕಡಿಮೆ. ಭಾವುಕತೆಯ ಹೆಣಿಗೆಗೆ ಕಾಣ್ಕೆ ನೀಡಿದ್ದ ಅಲ್ಲಿನ ಅನೇಕ ಸಣ್ಣ–ಪುಟ್ಟ ವಿವರಗಳು ಇಲ್ಲಿ ಮಾಯವಾಗಿದೆ ಅನ್ನಿಸಲಿಕ್ಕೆ ಇದೂ ಒಂದು ಕಾರಣ.

ತಮಿಳು ಚಿತ್ರದಲ್ಲಿ ಸಹನೀಯ ಸಾವಧಾನವಿತ್ತು. ಎಲ್ಲೂ ಅತಿ ಅನ್ನಿಸದ  ಭಾವಗೀತಾತ್ಮಕವಾದ ಹಾಡುಗಳಿದ್ದವು ಹಾಗೂ ಆ ಹಾಡುಗಳನ್ನು ತುಳುಕಿಸುವ ನಾಯಕಿಯು ತನ್ನ ಕಣ್ಣಭಾಷೆ, ಕಕ್ಕುಲತೆಗಳೊಂದಿಗೆ ಒಪ್ಪಿತ ಮೆಲೋಡ್ರಾಮಾಗಳ ಸಮೇತ ಎದೆಯೊಳಗೆ ಇಳಿದುಬಿಡುತ್ತಿದ್ದಳು. ಆದರೆ ಈ ಕನ್ನಡ ರೀಮೇಕಿನಲ್ಲಿ

ಅರ್ಜುನ್ ಜನ್ಯ ಮಟ್ಟು ಹಾಕಿರುವ ಹಾಡುಗಳು ಸ್ವತಂತ್ರವಾಗಿ ಹೃದ್ಯವಾಗಿ ಇವೆಯಾದರೂ, ಒಟ್ಟಂದದಲ್ಲಿ ಸಂಗೀತ ಸಿನಿಮಾದ ಪರವಾಗಿಲ್ಲ. ಅದು ಬೇರೆಯೇ ಆಗಿ ಉಳಿದು ಸಿನಿಮಾವನ್ನು ಅನಾಥವಾಗಿಸಿದೆ. ಜಾನಕಿ ಹಾಡುವ ಹಳೆಯ ಚಿತ್ರಗೀತೆಗಳನ್ನು ಆಯ್ಕೆ ಮಾಡುವಾಗ ಇನ್ನೂ ಜನಪ್ರಿಯವಾಗಿದ್ದ ಮತ್ತು ಭಾವುಕತೆ ತುಂಬಿದ್ದ ಹಾಡುಗಳನ್ನು ಆಯ್ಕೆ ಮಾಡಬಹುದಿತ್ತು.  ನಾಯಕಿಯ ವಸ್ತ್ರ ವಿನ್ಯಾಸ, ಆಕೆಯ ಹಾವ ಭಾವ,  ಕದಲಿಕೆಗಳು ಎಲ್ಲವನ್ನೂ ನಿರ್ದೇಶಕರು ಅನಾಮತ್ತಾಗಿ ಮೂಲದಿಂದ ಎಗರಿಸಿಕೊಂಡು ಬಂದಿರುವುದು ತಂತಾನೇ ಅವರಿಗೆ ಮಿತಿಯೊಂದನ್ನು ಹೇರಿಬಿಟ್ಟಿದೆ. ನಾಯಕನಿಗೆ ಅಂಟಿಸಿರುವ ಗಡ್ಡದಲ್ಲೂ ಅಂಥದೇ ಅಸಹಜತೆಯ ಅನುಪಲ್ಲವಿ.

ತಮ್ಮತನದ ಅಭಿನಯ ಸಾಮರ್ಥ್ಯವನ್ನು ಗಣೇಶ್ ಇಲ್ಲಿ ಹತ್ತಿಕ್ಕಿ ವಿಜಯ್ ಸೇತುಪತಿ ನಟನೆಯ ಮಾದರಿಯನ್ನೇ ಅನುಕರಿಸಿರುವುದು ಹೆಗ್ಗಳಿಕೆಯಾದರೂ ಸಂಭಾಷಣೆಯಲ್ಲಿ ಮಾತ್ರ ಸೋತಿದ್ದಾರೆ.  ಭಾವನಾ ನಯನಾಭಿನಯಕ್ಕೆ ಮಾತಿನ ಗಟ್ಟಿತನ ಬೇಕಿತ್ತು. ಪ್ರೌಢ ಹಾಗೂ ತಾರುಣ್ಯದ ರಾಮ್–ಜಾನು ಜೋಡಿಯಾಗಿ ಹೇಮಂತ್–ಸಮೀಕ್ಷಾ ಮೂಲ ಸಿನಿಮಾದ ತುಲನೆಯಲ್ಲಿ ನಪಾಸಾಗದ್ದರೆ, ಅಲ್ಲಿನ   ಸೂಕ್ಷ್ಮವನ್ನು ಹಿಡಿಯುವಲ್ಲಿ ನಿರ್ದೇಶಕರು ದಯನೀಯವಾಗಿ ಸೋತಿದ್ದಾರೆ.

ಸಂತೋಷ್‌ ರೈ ಪಾತಾಜೆ ಸಿನಿಮಾಟೊಗ್ರಾಫಿಯಲ್ಲಿ ಸೃಜನಶೀಲತೆ ಉಳದಿದ್ದರೂ 96’ ಸಿನಿಮಾ ಶುರುವಾಗುವ ದಟ್ಟ ದೃಶ್ಯಕಾವ್ಯಗಳ ಹಾಡು 99’ನಲ್ಲಿ ಅಂಥ ಹಾಡೊಂದನ್ನು ವಿಫಲಗೊಳಿಸಿದ್ದು ಕೂಡ ಒಟ್ಟೂ ಸಿನಿಮಾದ ಮೇಕಿಂಗ್ ನಲ್ಲಿ ಕಂಡ ನೆಗೆಟೀವ್ ಅಂಶವಾಗಿದೆ.

‍ಲೇಖಕರು avadhi

5 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading