ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'96: ಪ್ರೀತಿಸಲು ಜತೆಯಾಗೇ ಇರಬೇಕೆಂದಿಲ್ಲ..

96 
ಕೆ ನಲ್ಲತಂಬಿ 
ಇತ್ತೀಚೆಗೆ ತಮಿಳಿನಲ್ಲಿ ಬಂದ ಸಿನಿಮಾಗಳಲ್ಲಿ ಹೆಚ್ಚಾಗಿ ಚರ್ಚೆಯಾಗುತ್ತಿರುವ ಸಿನಿಮಾ ಈ ’96. ವಿಜಯ್ ಸೇತುಪತಿ, ತೃಷಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಸಿ.ಪ್ರೇಂಕುಮಾರ್. ‘ನಡುವಿಲ ಓರು ಪಕ್ಕತ್ತೈಕ್ ಕಾಣೋಮ್” (ಮಧ್ಯದಲ್ಲಿ ಒಂದು ಪುಟ ಇಲ್ಲ)) ಎಂಬ ಸಿನಿಮಾಕ್ಕೆ ಸಿನಿಮಟೋಗ್ರಫಿ ಮಾಡಿದವರು.
ಇದೊಂದು ನಾಸ್ಟಾಲ್ಜಿಕ್ ಕಾಲ್ಫ್ ಲವ್. ಶಾಲಾ ದಿನಗಳಲ್ಲಿ ತಮಗಿದ್ದ ಕ್ರಶ್ಶನ್ನು ಮೆಲುಕುಹಾಕಿ ಸಂತೋಷವೋ, ದುಃಖವೋ ಅಥವಾ ಹಾಸ್ಯವಾಗಿ ಒಂದು ನಗುವನ್ನೋ ಬೀರಿ ತಲೆ ಕುಣಿಸಬಹುದು. ಅನೇಕ ಪ್ರೇಮ ಕಥೆಗಳ ಸೋಲಿಗೆ ಕಾರಣಿಗಳು – 1. ಮನಸ್ಸಿನ ಭಾವನೆಗಳನ್ನೂ ಸರಿಯಾಗಿ ಹೊರಪಡಿಸಲಾಗದೆ ಗೊಂದಲದಲ್ಲಿರುವುದು, ಅಹಂಕಾರಗಳ ತಿಕ್ಕಾಟ, ಜಾತಿ,ವರ್ಗ ಬೇಧಗಳು, ಆರ್ಥಿಕ ಅಸಮಾನತೆ, ಅಪಾರ್ಥಗಳು, ಕೆಲವೊಮ್ಮೆ ಡಿಸ್ಟೆಂಟ್ ರಿಲೇಷನ್, ಮರಣ ಇಂತಹ ಅನೇಕ . ಯಾವ ಭೂತಗಳು ಇಲ್ಲಿ ತಲೆಬಿಚ್ಚಿಕೊಂಡು ಕುಣಿವುದಿಲ್ಲ, ಯಾವ ದ್ವೇಷದ ಸೇಡು ಇಲ್ಲ, ರಕ್ತ ಪಾತವಿಲ್ಲ. ಆದರೆ ಡೆಸ್ಟಿನಿ ತನ್ನ ಕೈಚಳಕವನ್ನು ತೋರಿಸಿ ಶಾಲಾ ದಿನಗಳಿಂದಲೂ ಪ್ರೀತಿಸುತ್ತ ಬಂದ ಇಬ್ಬರು ಪ್ರೇಮಿಗಳನ್ನು ದೂರ ಮಾಡುತ್ತದೆ.
ರಾಮಚಂದ್ರ, ಜಾನಕಿ ಶಾಲ ದಿನಗಳಿಂದಲೂ ಸ್ನೇಹಿತರು, ಪ್ರೇಮಿಗಳು. ವಿಧಿ ಇಬ್ಬರನ್ನೂ ದೂರಮಾಡುತ್ತದೆ. ರಾಮ ಟ್ರಾವೆಲ್ ಫೊಟೋಗ್ರಾಫರ್. ಶಾಲಾ ಸ್ನೇಹಿತರೆಲ್ಲರೂ ಒಮ್ಮೆ ಸೇರಬೇಕೆಂದು ನಿರ್ಧರಿಸಿ , ವಾಟ್ಸ್ಅಪ್ ಗ್ರೂಪ್ ಒಂದನ್ನು ಮಾಡಿ ಸಂಪರ್ಕಕ್ಕೆ ಬರುತ್ತಾರೆ. ಆ ಒಂದು ದಿನವೂ ಬರುತ್ತದೆ. ಎಲ್ಲರೂ ಚೆನ್ನೈನಲ್ಲಿ ಸೇರುತ್ತಾರೆ. ರಾಮ ಜಾನುಗಾಗಿ ಕಾಯುತ್ತಾನೆ. ಮಧ್ಯೆ ಮಧ್ಯೆ ಅವನ ಶಾಲಾ ದಿನಗಳ ನೆನಪು ಫ್ಲಾಶ್ಬೇಕಿನಲ್ಲಿ ಬಂದು ಹೋಗುತ್ತದೆ. ಅವಳು ಶಾಲೆಗೆ ಬಾರದ ಎರಡು ಮೂರು ದಿನ ಇವನು ಪಡುವ ಅವಸ್ಥೆ. ಅವಳು ಬಂದಮೇಲೆ ಇವನನ್ನು ಹುಡುಕುವ ಅವಳ ಕಣ್ಣುಗಳು. ಎದುರೆದುರು ನಿಂತಾಗ ಡವಗುಟ್ಟುವ ರಾಮನ ಎದೆ, ಜಾನು ಅವನ ಎದೆಯಮೇಲೆ ಕೈಯಿಟ್ಟಾಗ ರಾಮ ಮೂರ್ಛೆ ಹೋಗುವುದು. ಇಂತಹ ಅನೇಕ ಬಾಲಿಶ ದೃಶ್ಯಗಳನ್ನು ನೋಡಿ ಥ್ಯೇಟರಿನಲ್ಲಿ ಮುಗುಳ್ನಗುತ್ತಾ ಕೂರಬಹುದು.
ತಡವಾಗಿ ಬರುವ ಜಾನುವನ್ನು ಕಾಯುತ್ತಾ ತವಕಿಸುತ್ತಾ, ಬಾಗಿಲ ಕಡೆಯೇ ಕಣ್ಣು ಹಾಯಿಸುತ್ತಾ ಕಾಯುವ ರಾಮನ ಪಾತ್ರದಲ್ಲಿ, ವಿಜಯ ಸೇತುಪತಿ ನಟಿಸಿಲ್ಲ ಅನಿಸುತ್ತದೆ. ಪ್ರಿಯೆಗಾಗಿ ಕಾಯುವ ಪ್ರಿಯಾತಮನಾಗಿ ಆ ಪಾತ್ರಕ್ಕೆ ಜೀವ ತುಂಬಿಬಿಡುತ್ತಾರೆ. ಜಾನೂ ಸಹಾ ಬಂದಕೂಡಲೆ ರಾಮನನ್ನು ಹುಡುಕಾಡುವ ಅವಳ ಕಣ್ಣುಗಳು ಜಿಂಕೆಯಂತೆ ಎಲ್ಲಕಡೆ ಜಿಗಿಯುತ್ತದೆ. ರಾಮ್ ಜಾನುವನ್ನು ಬೇಟಿಯಾಗುವಾಗ ಅದೇ ಹಳೆಯ ಎದೆಬಡಿತ, ಅವಳನ್ನು ನೋಡಿದಕೂಡಲೆ ಮೂರ್ಛೆಹೋಗುವುದು…..ಓ…ಹೀಗೂ ಒಂದು ಪ್ರೇಮವೇ ಅನಿಸುತ್ತದೆ.
ಜಾನು ಮದುವೆಯಾಗಿ ಸಿಂಗಪೂರದಲ್ಲಿ ನೆಲೆಸಿರುವುದು. ಅವಳಿಗೆ ಮಗಳಿರುವುದು. ರಾಮು ಮದುವೆಯಾಗದೆ ಉಳಿದಿರುವುದು. ಆದರೂ ಅವರ ನಡುವಿನ ಪ್ರೀತಿ ಸ್ನೇಹ ಕುಂದುಕೊರತೆಯಿಲ್ಲದೆ ಹಳೆಯ ತೀವ್ರತೆಯಲ್ಲಿಯೇ ಉಳಿದಿರುವುದು, ದೂರವಾದ ತಕ್ಷಣ ಪ್ರೀತಿ ಕಡಿಮೆಯಾಗ ಬೇಕಿಲ್ಲ ಎಂದು ಹೇಳಿ ಪ್ರೀತಿಯ ಬಗ್ಗೆ ಇನ್ನಷ್ಟು ಹೆಚ್ಚು ನಂಬಿಕೆ, ಭರವಸೆಯನ್ನು ಮೂಡಿಸುತ್ತದೆ. ಜಾನು ಮಾರನೆಯ ದಿನ ಬೆಳಗ್ಗೆಯೇ ಹಿಂತಿರುಗಬೇಕಾಗಿರುತ್ತದೆ. ಆ ಒಂದು ರಾತ್ರಿಯನ್ನು ಇಬ್ಬರೂ ಒಟ್ಟಾಗಿ ಕಳೆಯುತ್ತಾರೆ. ಚೆನ್ನೈಯನ್ನು ರಾತ್ರಿಯಲ್ಲಿ ತಿರುಗಾಡುವುದು – ಸಮುದ್ರ ತೀರ, ಚೆನ್ನೈನ ಕೆಲವು ರಸ್ತೆಗಳು, ಮೆಟ್ರೋ ಪಯಣ, ಕಾಫೀ ಶಾಪಿನಲ್ಲಿ ಮಧ್ಯರಾತ್ರಿ ಕಾಫಿ, ಮಳೆಯಲ್ಲಿ ನೆನೆಯುವುದು ಇವೆಲ್ಲ Before Sunrise (1995), Before Sunset (2004), Before Midnight (2013) ಈ sequel ಸಿನಿಮಾಗಳನ್ನು ನೆನಪುಮಾಡಿಕೊಡುತ್ತವೆ.
ಜಾನು ಹೋಟೆಲಿಗೆ ಹಿಂತಿರುಗಿದಾಗ ಕಾರಿಡಾರಿನಲ್ಲಿ ನಡೆಯುತ್ತಾ, ರಾಮ್ ಹಿಂದೆ ಬರುತ್ತಿದ್ದಾನೆಯೇ ಎಂದು ತಿರುಗಿ ನೋಡಿಕೊಂಡೇ ನಡೆಯುವಾಗ ಅವಳ ಕಣ್ಣುಗಳಲ್ಲಿ ಕಾಣುವ ಆ ಆಸೆ, ತವಕ…..ರೂಮಿಗೆ ಹೋದಕೂಡಲೆ ಅವನಿಗೆ ಫೋನ್ ಮಾಡಿ ‘ರಾಮ್ ತುಂಬಾ ದೂರ ಹೊರಟು ಹೋದೆಯಾ?” ಎಂದು ಕೇಳುವಾಗ, “ಇಲ್ಲ, ನೀನು ಎಲ್ಲಿ ಬಿಟ್ಟು ಹೋದಯೋ ಅಲ್ಲೇ ನಿಂತಿದ್ದೇನೆ” ಎಂದು ಹೇಳುವಾಗ ಕಣ್ಣು ಹನಿಯದಿದ್ದರೆ ಅವರು ಯಾರೂ ಪ್ರೀತಿಸಿಲ್ಲ ಎನ್ನಬಹುದು. ಮತ್ತೆ ಅವಳು ಬಂದಾಗ, ಕಾರನ್ನು ಬಿಟ್ಟು ನಡೆದುಕೊಂಡೇ ತಿರುಗಾಡುವುದು. ಮಳೆಯಲ್ಲಿ ನೆನೆಯುವುದು. ‘ಇಲ್ಲೇ ಹತ್ತಿರ ನನ್ನ ಮನೆ ಇದೆ ಹೋಗೋಣವೇ?’ ಎಂದು ರಾಮ್ ಹೇಳುವಾಗ ಅವಳು ಒಂದು ನೋಟ ಬೀರಿ ‘ಸರಿ’ ಎನ್ನುವುದು ನೋಡುಗರ ಕಲ್ಪನೆಯ ಕುದುರೆಯ ವೇಗವನ್ನು ಹೆಚ್ಚಿಸಿ ಎಲ್ಲೆಲ್ಲಿಗೋ ಕೊಂಡು ಹೋಗುತ್ತದೆ.
ಮನೆಗೆ ಬಂದಾಗ ಒದ್ದೆ ಬಟ್ಟೆಗಳನ್ನು ಬದಲಾಯಿಸಿ ಅವನ ಬಟ್ಟೆಗಳ ತೊಟ್ಟುಕೊಂಡು, ಬ್ಲಾಕ್ ಕಾಫಿ ಮಾಡಿಕೊಂಡು ಕುಡಿಯುತ್ತಾ, ಹಳೆಯದೆಲ್ಲವನ್ನೂ ನೆನಪು ಮಾಡಿಕೊಳ್ಳುತ್ತಾ ಇಡೀ ರಾತ್ರಿ ಇಬ್ಬರೂ ಮಾತನಾಡುತ್ತಾ ಕುಳಿತಿರುವಾಗ ಇದ್ದಕ್ಕಿಂದಂತೆ ಕರಂಟ್ ಹೋಗಿ, ನೋಡುಗರ ಕೈಯಲ್ಲಿಯ ಲಗಾಮು ಜಾರಿ ಕುದುರೆ ಮಿಂಚಿನ ಓಟವನ್ನು ಮುಟ್ಟಿದರೂ, ಹಾಗೆಲ್ಲಾ ಏನೂ ನಡೆಯದೆ ಅದು ಒಂದು ಪ್ಲೂಟಾನಿಕ್ ಲವ್ವಾಗೆ ಉಳಿಸಿಬಿಡುವುದು ಸಿನಿಮಾವನ್ನು ಸ್ವಲ್ಪ ಎತ್ತರಕ್ಕೆ ಕೊಂಡೊಯ್ಯುತ್ತದೆ. ಅವನು ಶಾಲಾ ದಿನಗಳಿಂದ ಕೇಳಿದರೂ ಅವಳು ಹಾಡದೇ ಅವನನ್ನು ಚೇಡಿಸುತ್ತಲೇ ಇದ್ದ ಆ ಹಾಡಾದ ”ಯಮುನೈಕ್ಕರೈಯಿನಿಲೇ…..” ಹಾಡಿದಾಗ, ಅವನು ಟಾರ್ಚ್ ಬೆಳಕಲ್ಲಿ ಅವಳನ್ನು ನೋಡುವುದು……ಇವೆಲ್ಲ ಕೆಲವು ಫೈನ್ ಟಚಸ್. ಅವನು ಪೆಟ್ಟಿಗೆ ತೆಗೆದು ತನ್ನ ಹಳೆಯ ನೆನಪಿನ ಗುರುತುಗಳಾದ, ಅವಳು ಶಾಲೆಯಲ್ಲಿ ಇಂಕ್ ಚಿಮುಕಿಸಿದ ಶರ್ಟ, ಅವಳ ದುಬ್ಬಟ್ಟ, ಹೇರ್ಪಿನ್, ಅವಳ ತಲೆಯಿಂದ ಬಿದ್ದ ಗುಲಾಬಿ…. ಇವುಗಳನ್ನು ತೆರೆದಿಡುವುದನ್ನು ನೋಡಿ ಅನೇಕರು ಮನೆಗೆ ಹೋಗಿ ಅವರ ಪೆಟ್ಟಿಗೆಗಳನ್ನು ದೂಳು ಕೊಡವಿ ತೆಗೆಯದೇ ಇರಲು ಸಾಧ್ಯವಿಲ್ಲ….
“ನಿನ್ನ ಬದುಕು ಹೇಗಿದೆ?” ಎಂದು ರಾಮ್ ಕೇಳುವಾಗ, ಜಾನು, “ಕೊರತೆ ಏನೂ ಇಲ್ಲ. ಒಳ್ಳೆಯ ಗಂಡ, ಮುದ್ದಾದ ಮಗಳು. ಸಂತೋಷವಾಗಿ ಇದ್ದೀನಿ ಅನ್ನೋದಿಕ್ಕೆ ಆಗಲ್ಲ, ನೆಮ್ಮದಿಯಾಗಿದ್ದೀನಿ” – ಪ್ರಾಮಾಣಿಕವಾದ ಮಾತು. “ನೀನು ಯಾರನ್ನೂ ಪ್ರೀತಿಸಲಿಲ್ಲವೇ?” –ಜಾನುವಿನ ಪ್ರಶ್ನೆ. “ಕಾಲೇಜಲ್ಲಿ ಒಬ್ಬಳು ಪ್ರೀತಿಸಿದ್ಳೂ, ಆದರೆ ಒಂದು ದಿನ ಬಂದು ಅವಳ ಮದುವೆ ಇನ್ವಿಟೇಶನ್ ಕೊಟ್ಟುಹೋದಳು”, “ನೀನು ಇನ್ನೂ ವರ್ಜಿನ್ ಏನೋ?” – ಎಂದಾಗ ನಾಚಿ ತಲೆ ತಗ್ಗಿಸುವ ವಿಜಯ ಸೇತುಪತಿಯ ನಟನೆ – ಹೀಗೆ ಸಿನಿಮಾದಲ್ಲಿ ಬಹಳ ಸಂಗತಿಗಳನ್ನು ನೆನಪು ಮಾಡಿಕೊಳ್ಳಲು, ನಮ್ಮ ಬದುಕಿನ ಪ್ರೇಮವನ್ನು ಮೆಲುಕುಹಾಕಲು ಬಹಳ ಸರಕುಗಳಿವೆ.
ಆಶ್ಚರ್ಯ ಎಂದರೆ ಶಾಲೆ, ಕಾಲೇಜು ಮತ್ತು ಸುಮಾರು 40ವಯಸ್ಸಿನವರೆಗಿನ ಅನೇಕ ಪಾತ್ರಗಳ ಮುಖಗಳ ಹೋಲಿಕೆ.
ಸಿಂಗಪೂರಕ್ಕೆ ನೇರವಾದ ಟಿಕಟ್ ಇಲ್ಲದೆ ತಿರುಚ್ಚಿ ಹೋಗಿ ಅಲ್ಲಿಂದ ಫ್ಲೈಟ್ ಬದಲಾಯಿಸಬೇಕಾಗಿರುತ್ತದೆ. ಇಬ್ಬರ ಕಣ್ಣುಗಳು ತುಂಬಿಕೊಳ್ಳುತ್ತವೆ. ಅವನು ನಾನು ತಿರುಚ್ಚಿಗೆ ಒಂದು ಟಿಕಟ್ ಕೊಂಡುಕೊಂಡಿದ್ದೀನಿ, ನೀನು ಫ್ಲೈಟ್ ಹತ್ತುವವರೆಗೂ ನಿನ್ನ ಜತೆ ಇರುತ್ತೇನೆ ಎಂದು ಹೇಳಿ ಅವಳ ಜತೆ ಇರುವುದು. ಕೆಲವರಿಗೆ ತಮ್ಮ ಬದುಕಿನ ಇಂತಹ ಹುಚ್ಚುತನಗಳ ನೆನಪಾಗಬಹುದು.
ಹಿರಿಯರು ಅನೇಕರು ತಮ್ಮ ಪ್ಲೂಟಾನಿಕ್ ಪ್ರೇಮವನ್ನು ನೆನಪು ಮಾಡಿಕೊಂಡು ಆನಂದಪಟ್ಟುಕೊಂಡರೆ, ಕಿರಿಯರು ಹೀಗೂ ಒಂದು ಪ್ರೇಮಕಥೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು.
ಪ್ರೀತಿಸಲು ಜತೆಯಾಗೇ ಇರಬೇಕೆಂದಿಲ್ಲ.

‍ಲೇಖಕರು avadhi

8 October, 2018

3 Comments

  1. Dhanyakumar

    ನಾನು ಈ ಚಲನಚಿತ್ರ ನೋಡಿ ಅದರ ಅಂದವನ್ನು ಕಾಣಬಯಸಿದ್ದೆ ಆದರೆ ಈ ಲೇಖನ ಓದಿದ ನಂತರ ನನ್ನನ್ನು ಕಾಡುತ್ತಿರುವುದು , ನಿಜವಾಗಿಯೂ ಇಷ್ಟೊಂದು ಚೆನ್ನಾಗಿರಬಹುದೇ? ಫಿಲ್ಮಿನ ಇಡೀ ಕ್ಯಾನವಾಸನ್ನೇ ಮನದಲ್ಲಿ ಅಚ್ಚಳಿಯದಂತೆ ಈ ಬರಹ ತನ್ನ ಛಾಪನ್ನು ಒತ್ತಿದೆ. ಲೇಖರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
    ಧನ್ಯಕುಮಾರ ಮಿಣಜಗಿ

  2. Vijayavaman

    ಪ್ಲೇಟೊನಿಕ್! ಇರಬೇಕು.

  3. GURURAJ KATHRIGUPPE

    Thanx to Nallathambi, his article made me to watch a tamil movie after a long time…really premkumar is apromising director,,, it looks like extention of nostalgic movie of direcor CHERAN”S MY AUTOGRAPH….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading