ಮಧುಕರ್ ಬಳ್ಕೂರು ಸರಣಿ ಕಥೆ 6 – ನಾವು ಕಂಡ ವರ್ಲ್ಡ್ ಕಪ್ ಕನಸು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

6

ಗೋಲಿ, ಲಗೋರಿ, ಚಿನ್ನಿದಾಂಡು ಆಟಗಳಿಗೂ ವರ್ಲ್ಡ್ ಕಪ್ ನಡೆಯಬೇಕೆಂಬ ಕನಸು

ನಿಮ್ಮನೆಲಿ ಟಿವಿ ಇದೆ. ಫ್ರೀಜ್ ಇದೆ. ಯಾವಾಗ ಬೇಕಾದ್ರೂ ಟಿವಿ ಹಾಕ್ಕೊಂಡು ನೋಡಬಹುದು. ಮ್ಯಾಚ್ ಇದ್ದಾಗ ಇಡೀ ಮ್ಯಾಚ್ ನೋಡಬಹುದು. ಇನ್ನು ಬೇಕೆಂದಾಗಲೆಲ್ಲ ಐಸ್ ತಿನ್ನಬಹುದು. ಏನ್ ಲಕ್ ನಿಮ್ದು. ಶ್ರೀಮಂತ್ರು ನೀವು” ಅಂದೆ. ಅದಕ್ಕೆ ಪುಟ್ಟಿ ಏನೆನ್ನಬೇಕು..? “ನಿಮ್ಮ ಮನೇಲಿ ಕ್ರಿಕೆಟ್ ಬ್ಯಾಟ್ ಇದೆ. ಬಾಲಿದೆ. ಆಡೋಕೆ ಗದ್ದೆ ಇದೆ. ಎರಡ್ಮೂರು ಹಸುಗಳು ಇದೆ. ಹಸುಗಳು ಹಾಲು ಕೊಡುತ್ತೆ. ಹಾಲು ಮಾರ್ತಿರ. ನೀವು ಶ್ರೀಮಂತ್ರು” ಅಂದ್ಲು. ಮನಸಲ್ಲೆ ನಕ್ಕೆ. ನಮ್ಮಿಬ್ಬರದು ಅದೇ ಬಾಲ್ಯದ ಮನಸ್ಥಿತಿಯಾದರೂ ಬೆಳೆದ ಪರಿಸರ, ಒಡನಾಟ ನಮ್ಮನ್ನು ಹೇಗೆಲ್ಲಾ ಯೋಚಿಸುವಂತೆ ಮಾಡುತ್ತದೆ ಎನ್ನೋದಕ್ಕೆ ಇದೊಂದು ನಿದರ್ಶನ.

ಪುಟ್ಟಿ ಇರೋದು ಶಿವಮೊಗ್ಗ ಟೌನ್ ಲ್ಲಿ. ನಮ್ಮ ಕೈಲಿದ್ದ ತೆಂಗಿನ ಹೆಡೆಯ ಬ್ಯಾಟು, ರಬ್ಬರ್ ಬಾಲು, ಆಡೋದಕ್ಕಂತ ಇದ್ದ ಗದ್ದೆಯೇ ಅವಳಿಗೆ ದೊಡ್ಡದಾಗಿ ಕಂಡಿತ್ತು. ಪಟ್ಟಣದಲ್ಲಿ ಮನೆಯೆದುರು ಅಂಗಳವೇ ಕಾಣದವರಿಗೆ ಹಾಗನಿಸುವುದು ಸಹಜವೇ. ಆದರೆ ನಮಗ್ಯಾಗೆ ಗೊತ್ತಾಗಬೇಕು..? ಕ್ರಿಕೆಟ್ ಮ್ಯಾಚ್ ನೋಡೋದಕ್ಕಂತ ಮನೆ ಮನೆಗೆ ಅಲೆಯುತ್ತಿದ್ದವರಿಗೆ ಮನೆಯಲ್ಲಿ ಒಂದ್ ಟಿವಿ ಇದ್ದರೆ ಅದುವೇ ದೊಡ್ಡ ವಿಷ್ಯ ಅನಿಸೋದು…!  

ಆಗೆಲ್ಲ ಹಾಗೆನೆ, ಯಾರ ಮನೇಲಿ ಟಿವಿ ಇದೆಯೋ ಅವರು ಅನುಕೂಲಸ್ಥರು ಅನ್ನೋ ಮೆಂಟಾಲಿಟಿ. ಯಾರ ಮನೇಲಿ ಕೊಡೆ ಇರೋ ಟಿವಿ ಇರುತ್ತೊ ಅವರು ಶ್ರೀಮಂತ್ರು ಅನ್ನೊ ಭಾವನೆ. ಜನರೇಟರ್, ಫ್ರೀಜ್, ಗ್ರ್ಯಾಂಡರ್, ಮಿಕ್ಸಿ ಟೆಲಿಫೋನ್ ಗಳಂತಹ ಉಪಕರಣಗಳಿದ್ದರಂತೂ ಅವರಿಗಿರುವ ಗೌರವವೇ ಬೇರೆ. ಇಡೀ ಊರಲ್ಲಿ ಎರಡೋ ಮೂರೋ ಟಿವಿ ಇರೋ ಮನೆಗಳು. ಅದು ಕೂಡ ಅವರು ಹಾಕೋವರೆಗೂ ಹೊರಗಡೆಯೇ ಕಾಯಬೇಕು. ಆದಿತ್ಯವಾರ ಬಂತಂದ್ರೆ ಸಿನಿಮಾ ನೋಡೋದಕ್ಕಂತಾನೆ ಜನ ಜಾತ್ರೆ.

ಸಿನಿಮಾ ನೋಡೋ ಆತುರಕ್ಕೆ ನೋಡೋದು ಬಿಡಿ, ಅದು ಶುರುವಾಗೊದಕ್ಕೂ ಮೊದಲೇ ರಂಪಾಟ, ಎಳೆದಾಟ…. ಅದರಲ್ಲೂ ಫೈಟಿಂಗ್ ಸೀನ್ ಬಂದರಂತೂ  ಹುಡುಗರ್ಯಾರು ತಮ್ಮ ಸ್ಥಳದಲ್ಲಿ ಕೂರದೆ ಮೈಮೇಲೆ ಹೀರೋಗಳು ಅವಾಹನೆ ಆದಂತೆ ಆಡೋರು…! ಅದೆಷ್ಟು ಅರ್ಥವಾಗ್ತಿತ್ತೊ ಗೊತ್ತಿಲ್ಲ. ಆದ್ರೆ ಸಿನಿಮಾ ನೋಡಿಕೊಂಡು ಮಾರನೇ ದಿನ ಶಾಲಾ ತರಗತಿಯೊಳಗೆ ನಮ್ಮದು ಮಾರಾಮಾರಿ ಶುರುವಾಗೋದು ನೋಡಿ.. ನೀನು ಅಂಬರೀಷ್ ನಾನು ಪ್ರಭಾಕರ್ ನೋಡುವ ಯಾರು ಗಟ್ಟಿ ಅಂತಾ..? ಆಗೆಲ್ಲ ಕಾರಣವಿಲ್ಲದೆ ಹೊಡೆದಾಟವೇ ಸ್ಟಾರ್ಟ್ ಆಗೋದು…

ಸೋಮವಾರ ಅಂತಂದ್ರೆ ಆದಿತ್ಯವಾರ ನೋಡಿದ ಸಿನಿಮಾ ಡಿಸ್ಕರ್ಷನ್ ಮಾಡೋದಕ್ಕಂತಲೇ ಇರುವ ದಿನ. ಇನ್ನು ನಾನು ಸಿನಿಮಾ ನೋಡಿ ಕತೆ ಹೇಳುವುದರಲ್ಲಿ ಹಿಂದೆನೆ. ನಾನೆನಿದ್ದರೂ ಕತೆ ಕೇಳೋದಕ್ಕಷ್ಟೇ. ಅದರಲ್ಲೆನಿದ್ದರೂ ನಮ್ಮ ಸ್ನೇಹಿತರೇ ಎತ್ತಿದ ಕೈ. ಆದ್ರೆ ಎಷ್ಟು ಅಂತ ನೋಡಿದ ಸಿನಿಮಾದ ಕತೆಯನ್ನೆ ಕೇಳೋದು..? ನಾನೆನಾದ್ರು ಊದಬೇಕಲ್ಲ. ನಾನೆನಾದ್ರೂ ಪುಂಗಿ ಉದೋದಿದ್ದರೆ ಅದು ಕ್ರಿಕೆಟ್ ವಿಷಯದಲ್ಲಿ ಮಾತ್ರ. ಕ್ರಿಕೆಟ್ ಮ್ಯಾಚ್ ನೋಡಿಕೊಂಡು ಇಲ್ಲಾ ಕೇಳ್ಕೊಂಡು ಹೇಯ್ಸ್ ಆ ರೆಕಾರ್ಡ್ ಮಾಡಿದ, ಟೇಲರ್ ಹೀಗ್ ಮಾಡ್ದ, ಡಿಸಿಲ್ವ ಈ ತರಹ ಆಡ್ದ ಅಂತೆಲ್ಲ ಡೈಲಾಗ್ ಹೊಡೆಯೋದು.. ಯಾಕೆ ಬರೀ ಫಾರೀನ್ ಪ್ಲೇಯರ್ ಹೆಸರುಗಳನ್ನೆ ಹೇಳುತ್ತಿದ್ದೆನಂದರೆ ನನ್ನ ಸ್ನೇಹಿತರಿಗೆ ಅವರ ಪರಿಚಯ ಇಲ್ಲದಿರುವುದರಿಂದ!! ಹಾಗೆ ಅವರ್ಯಾರಿಗೂ ಗೊತ್ತಿಲ್ಲದ ಒಂದಷ್ಟು ಹೆಸರುಗಳನ್ನು ಹೇಳಿ ಬಿಲ್ಡಪ್ ತೆಗೆದುಕೊಂಡಂತೆ ಮಾಡೋದು… ಹೀಗೆ ಬಿಲ್ಡಪ್ ತಗೋಳ್ಳೊದೇ ಅಭ್ಯಾಸವಾಗಿ ಅದೊಂದು ದಿನ ‘ಬಾರ್ಡರ್ ಗವಾಸ್ಕರ್ ನ ರೆಕಾರ್ಡ್ ಮುರಿದ ನಿಂಗೊತ್ತಾ ಅಣ್ಣಾ’ ಅಂತ ಅಣ್ಣನಿಗೆನೆ ಹೇಳೋಕೆ ಹೋಗಿದ್ದೆ. ‘ಅರೇ.. ನಾನೇ ಹೇಳಿರೋದನ್ನ ನನಗೆನೇ ತಿರುಗಿ ಹೇಳ್ತಿಯಲ್ಲೊ ಮಾರಾಯ’ ಅಂತಾ ಅಂದಿದ್ದ.

ಒಮ್ಮೊಮ್ಮೆ ಹೀಗೂ ಆಗೋದು… ಅಣ್ಣ ತರಿಸುತ್ತಿದ್ದ ರಾಜು ಪತ್ರಿಕೆಯನ್ನು ಓದಿಕೊಂಡು ಅದರಲ್ಲಿರೋ ಸ್ಪೋರ್ಟ್ಸ್ ಮ್ಯಾಟರ್ ಗಳನ್ನು ಅವನಿಗೆನೆ ತಿರುಗಾ ಹೇಳೋದು… ನನ್ನದೆನಿದ್ದರೂ ಕ್ರಿಕೆಟ್ ಏನ್ ಸೈಕ್ಲೋಪೀಡಿಯಾ ಆಗೋಕೆ ಹೊರಟಿದ್ದ ಮನಸು. ಏನೇ ಆದರೂ ಕ್ರಿಕೆಟ್ ಬಗ್ಗೆ ಮಾತಾಡೋದಷ್ಟೇ. ಆಲ್ಕರೆ ಜಡ್ಡಿನಲ್ಲಿ ನಮ್ಮ ವಯಸಿನ ಹುಡುಗರ್ಯಾರು ಕ್ರಿಕೆಟ್ ಆಡ್ತಿರಲಿಲ್ಲವಲ್ಲ..? ನೋಡ್ತಿದ್ದುದಷ್ಟೇ. ಆಡ್ತಿದ್ದುದೆಲ್ಲ ಗೋಲಿ, ಚಿನ್ನುದಾಂಡು, ಲಗೋರಿಯಂತಹ ಆಟಗಳೇ. ವಿಜ್ಜು, ಮಹೇಶಾ, ಸಚ್ಚಿ, ರಾಘು, ಚಂದ್ರ, ಉದಯ ಹೀಗೆ ನಮ್ಮದೇ ಒರಗೆಯವರ ಗುಂಪು. ಇನ್ನು ಶಾಲೆಯಲ್ಲಿ ಕಬ್ಬಡಿ, ಕಳ್ಳ ಪೋಲಿಸ್ ಅಂತಹ ಆಟಗಳೇ ನಮ್ಮ ಆಟಗಳು.

ವಿಚಿತ್ರ ಅಂತಂದ್ರೆ ಹೇಗೆ ಆಲ್ಕರೆ ಜಡ್ಡಿನಲ್ಲಿ ನಡೆಯುವ ಕ್ರಿಕೆಟ್ ಆಟವನ್ನು ಟಿವಿಯಲ್ಲಿ ಲೈವ್ ಟೆಲಿಕಾಸ್ಟ್ ಆಗಬೇಕೆಂದು ಬಯಸುತ್ತಿದ್ದೆವೋ, ಹಾಗೆ ಗೋಲಿ, ಲಗೋರಿ, ಚಿನ್ನಿದಾಂಡಿನಂತಹ ಆಟಗಳನ್ನು ಇಂಟರ್ನ್ಯಾಷನಲ್ ಲೆವೆಲ್ಲಿನಲ್ಲಿ ದೇಶ ದೇಶಗಳ ನಡುವೆ ಆಗಬೇಕೆಂದು ಕನಸು ಕಾಣುತ್ತಿದ್ದೇವು. ಕ್ರಿಕೆಟ್ ನಲ್ಲಿ ಹ್ಯಾಗೆ ನಾಲ್ಕು ವರುಷಕ್ಕೊಮ್ಮೆ ವರ್ಲ್ಡ್ ಕಪ್ ನಡೆಯುತ್ತಿತ್ತೊ ಹಾಗೆ ಗೋಲಿ, ಚಿನ್ನಿದಾಂಡು, ಲಗೋರಿಯಂತಹ ಆಟಗಳಿಗೂ ವರ್ಲ್ಡ್ ಕಪ್ ನಡೆಯಬೇಕೆಂದು ಆಸೆ ಪಡುತ್ತಿದ್ದೇವು. ನಮ್ಮ ಗ್ರಾಮೀಣ ಕ್ರೀಡೆಗಳು ಯಾಕೆ ವಿಶ್ವಮಟ್ಟದಲ್ಲಿ ನಡೆಯುತ್ತಿಲ್ಲ? ಯಾಕೆ ಅದರ ವಿಷ್ಯ ಪೇಪರಲ್ಲೇನು ಬರ್ತಾ ಇಲ್ಲ..? ಯಾಕೆ ದೇಶ ದೇಶಗಳ ನಡುವೆ ಕ್ರಿಕೆಟ್ ನಲ್ಲಿ ಟೆಸ್ಟ್ ಮ್ಯಾಚ್ ಗಳು ನಡೆಯುವಂತೆಯೇ ಲಗೋರಿ, ಗೋಲಿ, ಚಿನ್ನಿದಾಂಡುದಂತಹ ಕ್ರೀಡೆಗಳು ಐದೈದು ದಿನ ನಡೆಯುವುದಿಲ್ಲ? ಯಾಕೆ ಆ ತರಹದ ಪ್ರಯತ್ನವೊಂದು ಶುರುವಾಗಬಾರದು ಅಂತೆಲ್ಲ ಯೋಚಿಸುತ್ತಿದ್ದೇವು. ಯೋಚಿಸುವುದೇನು, ಅದು ಹ್ಯಾಗ್ಯಾಗೆ ನಡೆಯಬೇಕು, ಎಲ್ಲಿ ನಡೆಯಬೇಕು, ಯಾವ ಯಾವ ರೀತಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆಯೆಲ್ಲ ಟೈ ಟೇಬಲ್ ರೂಪಿಸಿ ಘನಗಂಭೀರವಾಗಿ ಚರ್ಚಿಸುತ್ತಿದ್ದೇವು ಕೂಡ. ನಮ್ಮ ಯೋಚನೆಗಳೆಲ್ಲ ಹೀಗೆನೆ. ಇಂಡಿಯಾ ಪಾಕಿಸ್ತಾನ ಮ್ಯಾಚ್ ನಂತೆ, ಕರ್ನಾಟಕ, ತಮಿಳುನಾಡು ರಣಜಿ ಪಂದ್ಯಗಳಂತೆ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗದ ನಡುವೆಯೂ ಕ್ರಿಕೆಟ್ ಪಂದ್ಯಗಳಾಗಬೇಕು. ಕುಂದಾಪುರ ಉಡುಪಿಯ ಮಧ್ಯೆಯೂ ಮ್ಯಾಚ್ ನಡೆಯಬೇಕೆಂದು ಹಂಬಲಿಸುತ್ತಿದ್ದೇವು. ಹಾಗೂ ಆ ಪಂದ್ಯಗಳಿಗೆಲ್ಲ ನಮ್ಮ ಆಲ್ಕರೆ ಜಡ್ಡೆ ಸ್ಪಾಟ್ ಆಗಬೇಕು. ಪಂದ್ಯಗಳೆಲ್ಲ ಇಲ್ಲಿಂದಲೇ ಲೈವ್ ಟೆಲಿಕಾಸ್ಟ್ ಆಗಿ ಇಡೀ ಪ್ರಪಂಚವೇ ನೋಡುವಂತಾಗಬೇಕು ಎಂದೆಲ್ಲಾ ಹವಣಿಸುತ್ತಿದ್ದೇವು. ಕೊನೆಗೂ ನಾವು ಕಂಡ ಕನಸು ಕೆಲ ವರ್ಷಗಳ ಹಿಂದೆ ಕೆಪಿಎಲ್ ಎಂಬ ನೂತನ ಸ್ವರೂಪದಲ್ಲಿ ಬಂದಿದ್ದನ್ನು ನೆನಪಿಸಿಕೊಳ್ಳಬಹುದು.

 ಆ ವಯಸ್ಸೆ ಹಾಗೆ. ಕನಸುಗಳನ್ನು ಕಾಣುವ ವಯಸು. ಹಾಗೆ ಕನಸುಗಳೆಲ್ಲ ಗರಿಗೆದರಬೇಕಾದರೆ ಅದೇ ವಯಸಿನ ಮನಸುಗಳ ಸಮಾಗಮವಾಗಬೇಕು. ಎಲ್ಲೇ ಹೋದರೂ ನಮ್ಮನ್ನು ಬೆಸೆಯುತ್ತಿದ್ದುದು ಮಾತ್ರ ಇಂತಹ ಆಟಗಳೇ. ಅದರಲ್ಲೂ ಕ್ರಿಕೆಟ್. ಬೇಸಿಗೆ ರಜೆಯಲ್ಲಿ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಶಂಕರನಾರಾಯಣದ ವೀರ ಕಲ್ಲುಕುಟಿಗ ದೈವಸ್ಥಾನದ ಮುಂಭಾಗದ ಮೈದಾನದಲ್ಲಿ ಕ್ರಿಕೆಟ್ ಆಡಿದ್ದನ್ನು ಮರೆಯಲು ಸಾಧ್ಯವೇ..? ಯಾಕೆ ಅಂತ ಬಿಸಿಲಿನ ಸಮಯದಲ್ಲೇ ಆಡುತ್ತಿದ್ದೆವೆಂದರೆ ಸಂಜೆ ಆ ಮೈದಾನದಲ್ಲಿ ದೊಡ್ಡವರು ವಾಲಿಬಾಲ್ ಆಡುತ್ತಿದ್ದರಿಂದ. ಹಾಗಾಗಿನೆ ಮಧ್ಯಾಹ್ನ ಒಂದುವರೆಗೆ ಆಗುತ್ತಲೇ ಗ್ರೌಂಡ್ ನತ್ತ ಬರೋದು… ಬಹುಶಃ ಊಟ ಮಾಡಿ ಹತ್ತು ನಿಮಿಷ ವಿರಮಿಸಿದ್ದು ನೆನಪೇ ಇಲ್ಲ. ಆ ಪರಿ ಆಟದ ತಪನೆ. ಪವನ್, ಸುಧಿ, ಗುರುರಾಜ್, ಗುರುರಂಜನ್, ದೀಪು, ಕೇಶವ, ಪ್ರಕಾಶ ಹೀಗೆ ನಮ್ಮದೇ ವಯಸಿನವರ ತಂಡ. ಆದರೆ ಒಮ್ಮೊಮ್ಮೆ ನಾವು ಬರೀ ನಾಲ್ಕೈದು ಮಂದಿಯೇ ಇರುತ್ತಿದ್ದುದು. ನಾವು ನಾಲ್ಕೇ ಮಂದಿ ಇದ್ದರೂ ಇಬ್ಬಿಬ್ಬರ ಒಂದು ತಂಡ ಮಾಡಿಕೊಂಡು ಆಡುತ್ತಿದ್ದರಿಂದ ಬ್ಯಾಟ್ಸ್ಮನ್ ಆದವರು ವಿಕೆಟ್ ಕೀಪಿಂಗ್ ಮಾಡಿಕೊಳ್ಳುವುದು, ಬೌಲರ್ ಆದವರು ಫೀಲ್ಡಿಂಗು ಮಾಡಿಕೊಳ್ಳೋದು ಅನಿವಾರ್ಯವಾಗಿರುತ್ತಿತ್ತು. ಒಂದರ್ಥದಲ್ಲಿ ಒಂದೇ ಸಮಯದಲ್ಲಿ ಎರಡೆರಡು ಪಾತ್ರ ನಿರ್ವಹಿಸಿಕೊಂಡು ಆಲ್ ರೌಂಡರ್ ರೋಲ್ ಮಾಡಿದ್ದೇವೆನ್ನಬಹುದು. ಆದರೆ ಅದು ನಿಜಕ್ಕೂ ಆಲ್ ರೌಂಡರ್ ರೋಲೋ ಅಥವಾ ಆಲ್ ಗ್ರೌಂಡರ್ ರೋಲೋ ಅನ್ನೋದೇ ಯಕ್ಷ ಪ್ರಶ್ನೆಯಾಗಿರುತ್ತಿತ್ತು.! ಏಕೆಂದರೆ ಬ್ಯಾಟ್ಸ್ಮನ್ ಆದವರು ಬಾಲ್ ಟಚ್ ಮಾಡದೆ ಬಿಟ್ಟರೆ ಹ್ಯಾಗೆ ಬಾಲ್ ತರೋಕೆ ವಿಕೆಟ್ ಹಿಂದೆ ಓಡಬೇಕಿತ್ತೋ, ಬೌಲರ್ ಕೂಡ ತಾನು ಹೊಡೆಸಿಕೊಂಡ ಬಾಲನ್ನು ಚೇಸ್ ಮಾಡೋದಕ್ಕೆ ಗ್ರೌಂಡ್ ತುಂಬಾ ಓಡಾಡಬೇಕಿತ್ತು. ಒಟ್ಟಾರೆ ಎರಡು ಮೂರು ಗಂಟೆಗಳ ಆಟದಲ್ಲಿ ಭರಪೂರ ಏಕ್ಸಾಸೈಸೇ ಆಗುತ್ತಿತ್ತೆನ್ನಬಹುದು. ಏನೇ ಆದರೂ ಆಲ್ಕರೆ ಜಡ್ಡಿನಲ್ಲಿ ಒಂದೆರಡು ಬಾಲು ಆಡೋಕೆ ಸಿಕ್ಕಿದ್ರು ಸಾಕು ಅನ್ನುತ್ತಿದ್ದ ನಾನು ಇಲ್ಲಿ ಒಂದಿಷ್ಟು ಮನಸೋ ಇಚ್ಛೆ ಆಡಿ ಆಡುವ ಚಟ ತೀರಿಸಿಕೊಂಡೆ ಅಂತಲೇ ಹೇಳಬಹುದು. 

ಮಧ್ಯಾಹ್ನ ಎರಡರ ಬಿರುಬಿಸಿಲಿನ್ನು ಲೆಕ್ಕಿಸದೆ, ಯಾರ್ಯಾರಿಗೂ ಕಾಯದೆ, ಯಾರೇನು ಅಂದರೂ ಡೊಂಟ್ ಕೇರ್ ಅನ್ನುತ್ತಲೇ, ಹುಚ್ಚುಕುದುರೆಯಂತೆ ಕಲ್ಲು ಮುಳ್ಳುಗಳ ನಡುವೆ ಬರಿಗಾಲಿನಲ್ಲಿ ಆಡಿದ ಆ ದಿನಗಳನ್ನು ನೆನಸಿಕೊಂಡರೆ, ಕ್ರಿಕೆಟ್ ಎನ್ನುವ ಮಾಂತ್ರಿಕ ಕ್ರೀಡೆ ನಮ್ಮನ್ನು ಯಾವ ರೀತಿಯಲ್ಲಿ ಬಂಧಿಸಿತ್ತೆನ್ನುವುದರ ಅರಿವಾಗುತ್ತದೆ. 

| ಇನ್ನು ನಾಳೆಗೆ |

‍ಲೇಖಕರು Admin

July 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: