ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಬ್ರಹ್ಮಾಂಡ”ದ ಎದುರು

nh1.jpgವರು ಎಚ್ಚೆನ್; ಇವರು ಎನ್ನೆಚ್…!

ಪ್ರತಿಯೊಂದನ್ನೂ ಪ್ರಶ್ನಿಸಿ ಅರಿಯಬೇಕು ಎಂದು ಎಚ್.ನರಸಿಂಹಯ್ಯ (ಎಚ್ಚೆನ್) ಹೇಳಿದ್ದರೆ, ವಿಜ್ಞಾನ ಎಂಬ ಕಬ್ಬಿಣದ ಕಡಲೆಯನ್ನು ಕುಚ್ಚಿದ (ಅಂದರೆ ನೀರಿನಲ್ಲಿ ಬೇಯಿಸಿ, ಸುಲಿದು ಕೊಡುವ) ಶೇಂಗಾ ಕಾಳಿನ ಹಾಗೆ ನಮ್ಮೆದುರು ಇಟ್ಟವರು ಎನ್ನೆಚ್ (ಅಂದರೆ ನಾಗೇಶ ಹೆಗಡೆ).

ಹೆಚ್ಚೇನಿಲ್ಲ; ಕೇವಲ ಆರೆಂಟು ವರ್ಷಗಳ ಹಿಂದೆ ಚಿತ್ರಲೇಖನ ಎಂದರೆ ಕ್ಲೀಶೆ, ಪುನರಾವರ್ತಿತ ಶಬ್ದಗಳನ್ನು ಅಲಂಕಾರದೊಂದಿಗೆ ಹೆಣೆದರೆ ಸಾಕಿತ್ತು. ಆದರೆ ಲೇಖನ ಎಂದರೆ ಹೇಗಿರಬೇಕು? ಎಂಬುದನ್ನು ತಿಳಿಸಿಕೊಟ್ಟವರು ಹೆಗಡೆ ಸರ್. `ಒಂದಿಷ್ಟು ಟೇಸ್ಟ್, ಫ್ಯಾಂಟಸಿ, ಅಲ್ಲಲ್ಲಿ ಟರ್ನ್ ಕೊಟ್ಟು ಬರೆದ್ರೆ ಜನ ಖುಷಿಯಿಂದ ಓದ್ತಾರೆ ಕಣ್ರೀ’ ಅಂತ ಸಲಹೆ ಕೊಟ್ಟಿದ್ದು ಎನ್ನೆಚ್.

ಪ್ರಜಾವಾಣಿ ಪತ್ರಿಕೆಯ `ಕೃಷಿರಂಗ’ ಪುರವಣಿಯಲ್ಲಿ ಮೊದಲಿಗೆಲ್ಲ ವಿಜ್ಞಾನಿಗಳು ಹಾಗೂ ಸಂಶೋಧಕರದೇ ಅಬ್ಬರ ಇತ್ತು. ನಿಜ ಹೇಳಬೇಕೆಂದರೆ ವಿಜ್ಞಾನಿಗಳು ಎಂದೂ ಮಣ್ಣು ಮುಟ್ಟಿ ಕೆಲಸ ಮಾಡಿರೋದೇ ಇಲ್ಲ. ಅಂಥದ್ದರಲ್ಲಿ ಅವರ ಅಬ್ಬರಕ್ಕೆ ತಡೆ ಹಾಕಿ, `ಕೃಷಿ ರಂಗ’ದಲ್ಲಿ ಸಾವಯವ ಕೃಷಿಗೆ ಪ್ರಾಮುಖ್ಯ ನೀಡಿದ್ದು ಅವರ ಸಾಧನೆ.

ವಿಜಯ ಕರ್ನಾಟಕದ `ಸುದ್ದಿಮನೆ ಕತೆ’ಯಲ್ಲಿ ವಿಶ್ವೇಶ್ವರ ಭಟ್ ಅವರು ಬರೆದಿದ್ದು ಇಲ್ಲಿ ಉಲ್ಲೇಖನೀಯ: `ನಾಗೇಶ ಹೆಗಡೆ ಅವರು ಕರ್ನಾಟಕ ದರ್ಶನ ಪುರವಣಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದಿನಗಳಲ್ಲಿ ಹವ್ಯಾಸಿ ಪತ್ರಕರ್ತರಿಗೆ ಸುಗ್ಗಿ…!’ ಅದರಲ್ಲಿ ನಾನೂ ಒಬ್ಬ ಅಂತ ಹೇಳಲು ನನಗಂತೂ ಅಭಿಮಾನ.

ನಾಗೇಶ ಹೆಗಡೆಯವರು ನೀಡಿದ ಪ್ರೋತ್ಸಾಹದಿಂದ ಸಾಕಷ್ಟು ಯುವ ಬರಹಗಾರರು ಬೆಳಕಿಗೆ ಬಂದರು ಎಂಬುದರಲ್ಲಿ ಉತ್ಪ್ರೇಕ್ಷೆಯಾದರೂ ಏನಿದೆ?

ಆತೀಪಿ

* * *

ಕೇವಲ ಸಾಹಿತ್ಯ ಪ್ರಕಟಣೆಗಷ್ಟೇ ಸೀಮಿತವಾಗಿದ್ದ ಬ್ಲಾಗ್, ನಾಗೇಶ್ ಹೆಗಡೆಯವರ ವಿಜ್ಞಾನ ಲೇಖನ ಪ್ರಕಟಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಮೇಸ್ಟ್ರ ಬರಹ ಓದುವ ಅವಕಾಶ ಸಿಕ್ಕಿದ್ದಕ್ಕೆ ನನಗಂತೂ ಬಹಳ ಖುಷಿಯಾಗಿದೆ.

ಗಾಣದಾಳು ಶ್ರೀಕಂಠ

* * *

ನಾಗೇಶ ಹೆಗಡೆಯವರ ಕುರಿತ ಬರಹ ಸಿಂಪ್ಲಿ ಸೂಪರ್ಬ್. ಅಷ್ಟೇ ಮೌಲಿಕವಾದದ್ದು.

nhegde2.jpgಕೇಶವ ಎಚ್ ಕೊರ್ಸೆ

* * *

ಹೆಗಡೆಯವರ ಕುರಿತ ಬರಹ ನೂರಕ್ಕೆ ನೂರರಷ್ಟು ಸತ್ಯ.

ಡಾ. ಸತ್ಯನಾರಾಯಣ ಭಟ್

* * *

“ಪುರುಷರ ಶೃಂಗಾರಮಾಸ” ಲೇಖನ ಸಕಾಲಿಕ ಮತ್ತು ಕುತೂಹಲಕಾರಿ.

ಎಚ್ ಡುಂಡಿರಾಜ್

‍ಲೇಖಕರು avadhi

7 July, 2007

1 Comment

  1. Haldodderi Sudhindra

    ಏಕಲವ್ಯನಂತೆ ನಾಗೇಶ ಹೆಗಡೆಯವರನ್ನು ಗುರು ದ್ರೋಣಾಚಾರ್ಯರೆಂದು ಭಾವಿಸಿದ್ದೆ. ಮೂವತ್ತಾರನೆಯ ವಯಸ್ಸಿಗೆ ಗಂಭೀರವಾಗಿ ವಿಜ್ಞಾನ ಲೇಖನ ಬರೆಯಲಾರಂಭಿಸಿದವನಿಗೆ (ಈ ಬಗ್ಗೆ ವೈಯನ್ಕೆ ಅವರಿಂದ ಬೈಸಿಕೊಂಡಿದ್ದೆ – ‘ಕನ್ನಡ ಪ್ರಭದಲ್ಲಿ ಹೊಸ ಬೈಲೈನ್ ನೋಡಿದೊಡನೆಯೆ ಇನ್ನೂ ಚಿಕ್ಕ ಹುಡುಗನೆಂದು ಭಾವಿಸಿದ್ದೆ, ಇಷ್ಟೊಂದು ವಯಸ್ಸಾಗಿದೆ. ಇಷ್ಟು ದಿನ ಯಾಕೆ ಬರೆಯುತ್ತಿರಲಿಲ್ಲ’ ಎಂದು) ಮೊದಲ ಬಾರಿಗೆ ನಾಗೇಶ ಹೆಗಡೆಯವರ ಭೇಟಿಯಾಗಿದ್ದು ೧೯೯೯ರಲ್ಲಿ. ಅಳಕುತ್ತಲೇ ಮಾತನಾಡಿಸಿದವನನ್ನು ‘ನಿಮ್ಮ ಹೆಸರು ಚೆನ್ನಾಗಿದೆ. ಹಾಲಿನ ಡೈರಿಯ ನೆನಪು ಬರುತ್ತದೆ’ ಎಂದು ನಗಿಸಿದರು. ಲೇಖನಗಳನ್ನು ಗಮನಿಸಿದ್ದೇನೆಂದರು. ಒಮ್ಮೆಲೆ ಸ್ನೇಹದ ತೆಕ್ಕೆಗೆ ಸೆಳೆದುಕೊಂಡರು. ಮಾತನಾಡಲು ಶಬ್ದಗಳನ್ನು ಹುಡುಕುತ್ತಿದ್ದವನು ‘ನಿಮ್ಮ ಲೇಖನದ ಜತೆಗೆ ಚೇತನ ಶೀತಲಬಾವಿಯವರ ಲೇಖನಗಳನ್ನೂ ಸುಧಾದಲ್ಲಿ ಓದಿ ಆನಂದಿಸುತ್ತಿದ್ದೆ’. ‘ಶೀತಲಬಾವಿಯವರು ಈಗಿಲ್ಲ. ಹೋಗಿಬಿಟ್ರು’ ಎಂದರು ಸೀರಿಯಸ್ ಆಗಿ. ಮನಸ್ಸಿನಲ್ಲೇ ಮರುಗಿದೆ, ಲೊಚಗುಟ್ಟಿಕೊಂಡೆ. ಮುಂದೊಂದು ದಿನ ಉದಯವಾಣಿ ಸಂಪಾದಕರಾದ ಡಾ||ಆರ್.ಪೂರ್ಣಿಮಾ ಹೊರಗೆಡಹಿದ ಗುಟ್ಟೆಂದರೆ ‘ನಾಗೇಶ ಹೆಗಡೆ ಅವರು ಷಡಕ್ಷರಿ (ಅವರ ಹೆಸರಿಗೆ ಆರಕ್ಷರ ಅಲ್ಲವೆ?), ಚೇತನ ಶೀತಲಬಾವಿ, ಎನ್ನೆಚ್, …. ಮುಂತಾದ ಹೆಸರುಗಳಲ್ಲಿ ಬರೆಯುತ್ತಿದ್ದರು’.

    ನಾಗೇಶ ಹೆಗಡೆಯವರು ಒತ್ತಾಯ ಮಾಡದಿದ್ದರೆ ಇಷ್ಟೊಂದು ಲೇಖನಗಳನ್ನು ನಾನು ಖಂಡಿತವಾಗಿಯೂ ಬರೆಯುತ್ತಿರಲಿಲ್ಲವೇನೊ? ಮತ್ತೊಬ್ಬರ ಮುಂದೆ ನನ್ನ ಬಗ್ಗೆ ಅವರ ಪ್ರೀತಿಯ ಹೊಗಳಿಕೆ ಒಮ್ಮೊಮ್ಮೆ ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದೆ. ಹಿರಿಯ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮ ಇ-ಮೇಲ್ ಮೂಲಕ ಪರಿಚಿತರಾಗಿ ಕಳುಹಿಸಿದ ಮೊದಲ ಪತ್ರದಲ್ಲಿ ‘ನಾಗೇಶ ಹೆಗಡೆಯವರು ಹಾಲ್ಡೊಡ್ಡೇರಿ ಸುಧೀಂದ್ರ ಎಂಬ ಹೊಸ ಹೆಸರಿನಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದಾರೆಯೆ’? ಎಂದು ಪ್ರಶ್ನಿಸಿದ್ದರು (೨೦೦೦ರಲ್ಲಿ). ಈ ಪ್ರಶಂಸೆ ನನಗೆ ಸಂದ ಅತಿ ದೊಡ್ಡ ಗೌರವ ಎಂದು ಭಾವಿಸಿದ್ದೇನೆ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading