ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಉಪ್ಪಿನ ಕಾಗದ’ಕ್ಕೆ ಶರಣು

ರೇಣುಕಾ ನಿಡಗುಂದಿ 

ಒಂದು ಒರಟು ಮರದ ದಿಮ್ಮಿಯನ್ನು ಕಡಿದು ತುಂಡರಿಸಿ ಕೆತ್ತಿ ಕೊರೆದು ರೂಪಕೊಟ್ಟುಬಿಟ್ಟರೆ ಸುಂದರ ಕಲಾಕೃತಿ ಮೂರ್ತವಾಗಿ ಬಿಡುವುದಿಲ್ಲ. ಉಪ್ಪಿನ ಕಾಗದದಿಂದ ಉಜ್ಜಿದಷ್ಟೂ ಅದರ ಒರಟುತನ ಮಾಯವಾಗಿ, ಮೈ ನುಣುಪಾಗಿ, ಹೊಳಪು, ನಾಜೂಕುತನದಲ್ಲಿ ಕುಸುರಿ ಕೌಶಲ್ಯ ಅರಳುತ್ತದೆ. ಈ ಬದುಕೂ ಅಷ್ಟೇ ಒರಟಾಗಿ ನೋಯಿಸುವ  ಕಷ್ಟಕಾರ್ಪಣ್ಯಗಳು ಮನುಷ್ಯನನ್ನು ಉಜ್ಜಿ ಉಜ್ಜಿ ಕಾಲ- ವಯಸ್ಸು ಮಾಗಿದಂತೆ ಬದುಕನ್ನು ನುಣುಪಾಗಿಸುತ್ತದೆ, ಮನಸ್ಸನ್ನೂ ಹಸನಾಗಿಸುತ್ತದೆ.

ಒಂದು ದಶಕಗಳನ್ನೂ ಮೀರಿ ಮನಸ್ಸಿನಲ್ಲಿ ನೆಲೆಸಿ ಕಾಡಿದ ನೈಜ ಘಟನೆಯನ್ನೇ ಸುರೇಶ್ ಇಂದು ಪರದೆಗೆ ತಂದಿದ್ದಾರೆ. ಜಾತಿ ಎನ್ನುವುದು ಮನುಕುಲಕ್ಕೆ ಅಂಟಿದ ಕೊಳೆ ರೋಗ. ಹಸಿವಿಗೆ ಭಯಪಡದ ಮನುಷ್ಯ ಇಂದು ಜಾತಿ ಜನಾಂಗೀಯ ವಿಷಯಗಳಿಗೆ ಭಯಪಡುವಂತಾಗಿದೆ. ಎಲ್ಲೂ ಯಾವುದಕ್ಕೂ ಶಬ್ದವಾಗದ ಚಿತ್ರ ಎಲ್ಲವನ್ನೂ ನಿಶ್ಯಬ್ಧವಾಗಿ ಹೇಳುತ್ತದೆ.

ಚಿತ್ರ  ಆರಂಭವಾಗುವುದೇ ಮಂಡ್ಯ ರಮೇಶ್ ( ಚಿನ್ನಯ್ಯ)  ಆಚಾರಿಯನ್ನು ಹುಡುಕಿಕೊಂಡು ಅವನ ಮನೆಗೆ ಬರುವುದರಿಂದ. ’ಇನ್ನೂ ಉಪ್ಪಿನ ಕಾಗದವನ್ನ ಬಳಸ್ತೀಯಲ್ಲ ಆಚಾರಿ, ಇಕಾ ತಗಾ”ಎಂದು ಹೊಸ ಔಜಾರುಗಳನ್ನು ಕೊಡುತ್ತಾನೆ.

ಕಾಲ ಬದಲಾಗಿ ಬಡಿಗತನದ ಕರಕುಶಲ ಕೆಲಸಕ್ಕೆ ಹೊಸ ಹೊಸ ಔಜಾರಗಳಿದ್ದರೂ ಇನ್ನೂ ಉಪ್ಪಿನ ಕಾಗದವನ್ನೇ ಬಳಸುತ್ತಾನೆ.  ಮನೆಯಲ್ಲಿಗ್ಯಾಸ್ ಸ್ಟೌ ಇದ್ದರೂ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಾನೆ. ಮಣ್ಣಿನ ಮಡಕೆಗಳನ್ನೇ ಬಳಸುತ್ತಾನೆ. ಬಹುಶಃ  ಕಾಲಪ್ರವಾಹದೊಂದಿಗೆ ಅನಿವಾರ್ಯವಾಗಿ ಬಿಡುವ ಬದಲಾವಣೆಗೆ ಅವನ ಮನಸ್ಸು ಒಗ್ಗುತ್ತಿಲ್ಲ. ಅಥವಾ ಮೂವತ್ತು ವರ್ಷಗಳ ಹಿಂದೆ ಇದ್ದ ತಾನು ತಾನಲ್ಲ ಈಗ.

ತಾನು ತಾನಾಗಿಯೇ ಇರಬೇಕು ಎನ್ನುವ ತೀವ್ರ  ತುಡಿತ ಅವನೊಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಒಮ್ಮೆ ಭೋರ್ಗರೆವ, ಮಗದೊಮ್ಮೆ ಪ್ರಶಾಂತ ಮಂದಗಮನೆಯಾಗಿ   ಚಿತ್ರದುದ್ದಕ್ಕೂ  ಹರಿಯುವ ನದಿ  ಆಚಾರಿಯ ಮೂಕಭಾವನೆಗಳಿಗೆ ಕನ್ನಡಿಯಾಗುತ್ತದೆ.  ಎರಡು ಗಂಟೆಗಳ ದೀರ್ಘಾವಧಿಯವರೆಗೆ ಆಚಾರಿಯ ಮೌನದೊಂದಿಗೆಯೇ ಪ್ರೇಕ್ಷಕರು ಸಂವಹಿಸುತ್ತಾರೆ.

ಇತ್ತ ಕಡೆ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂದು ಕ್ರಿಶ್ಚಿಯನ್ ಮಿಷಿನರಿನಲ್ಲಿ ಬೆಳೆದು ತನ್ನ ತಂದೆಯ ವಿವರ ಮತ್ತು ಆತ ಕೆತ್ತಿರಬಹುದೆನ್ನುವ ಏಸುವಿನ ಶಿಲುಬೆಯನ್ನು ಕೈಯಲಿಟ್ಟುಕೊಂಡು ತಂದೆಯನ್ನು ಹುಡುಕಿಕೊಂಡು ಹೊರಟ ಯುವತಿ ( ನಯನಾ)  ತನ್ನ ಎಲ್ಲಾ ಪ್ರಶ್ನೆಗಳ ಉತ್ತರವನ್ನು ಆಚಾರಿಯ ಬಾಯಿಬಿಡಿಸಿ ಬಗೆಹರಿಸಿಕೊಳ್ಳಬೇಕೆಂದು ಆಶಿಸುತ್ತಾಳೆ.  ಅವಳು ಹುಡುಕುತ್ತಿದ್ದ ತಂದೆ ಅವಳಿಗೆ ಸಿಕ್ಕಿದ್ದಾನೆ. ಆದರೆ ಆತ ಬಾಯಿಬಿಡುತ್ತಿಲ್ಲ. ಮಗಳೆಂದು ಒಪ್ಪಿಕೊಳ್ಳುತ್ತಿಲ್ಲ.  ಹತಾಶೆಯಲ್ಲಿ ಅವನನ್ನು ಅವಮಾನಿಸುತ್ತಾಳೆ, ಜರಿಯುತ್ತಾಳೆ, ಹೇಗಾದರೂ ಬಾಯಿ ಬಿಡಲೆಂದು ಕೆಣಕುತ್ತಾಳೆ.. ತಾನು ಕೇಳಿದ ಕತೆಯನ್ನು ತಾನೇ ಹೇಳುತ್ತಾಳೆ ಚಿನ್ನಯ್ಯನಿಗೆ. “ಸಜ್ಜನಂತೆ ತೋರುವ ಇವನು ನೀವಂದು ಕೊಂಡಷ್ಟು ಸಜ್ಜನನಲ್ಲ” ಎಂದು ಚಿನ್ನಯ್ಯನಎದುರೇ ಮೂದಲಿಸುತ್ತಾಳೆ. ಯಾವುದಕ್ಕೂ ಆಚಾರಿ ಮೌನ. ನೋಟ ಶೂನ್ಯ !

ನಿಗೂಢತೆಯನ್ನು ತನ್ನೊಳಗೇ ಹುದುಗಿಸಿಟ್ಟುಕೊಂಡ ಚಿತ್ರದ ಕೊನೆಯ ಹಂತದಲ್ಲಿ ಆತ ಬಾಯಿಬಿಡುತ್ತಾನೆ.  ತಾನು ಅವಳ ತಂದೆ ಅಲ್ಲ. ಆಕೆ ತನ್ನ  ಮಗಳಲ್ಲ ಎಂದಾಗ ಆಕೆ ಕುಸಿದುಹೋಗುತ್ತಾಳೆ.  ಈಗಷ್ಟೇ ಬೆರೆಳ ಸೋಕಿದ ಬದುಕು ಜಾರಿ ಹೋದಂತೆ ಆಕೆ ವಿಲಗುಟ್ಟುತ್ತಾಳೆ.  ಕಮರಿಹೋದ ಆಶೆ, ಆವರಿಸಿದ ನೋವು ಅವಳನ್ನು ಕಂಗೆಡಿಸುತ್ತದೆ. ಆಚಾರಿ ತಾನೆಕೆತ್ತಿದ ಮರದ ಮೂರ್ತಿಗಳ ಮೂಲಕ ಬಿಟ್ಟಹೋದ ಕತೆಯನ್ನು ಕಟ್ಟಿಕೊಡುತ್ತಾನೆ. ಇದೇ ಈ ಚಿತ್ರದ ವೈಶಿಷ್ಟ್ಯ.  ನಟ ನಟಿಯರ ಬದಲು ಮರದ ಬೊಂಬೆಗಳಿಂದ ಕಥೆ ಹೇಳುವ ಈ ವಿಧಾನ ಹೆಚ್ಚು ಆಕರ್ಷಣೀಯವಾಗಿತ್ತು ಮತ್ತು ಹೆಚ್ಚು ಪರಿಣಾಮಕಾರಿಯಾಗಿತ್ತು..

ಯುವತಿಯ ತಂದೆ ರಾಘವ ಆಚಾರಿ  ಇವನು ತಯಾರಿಸುತ್ತಿದ್ದ ಮೂರ್ತಿಗಳನ್ನು, ಕೆತ್ತನೆಯ ಸಾಮಾನುಗಳನ್ನು ಮಾರುವ ವ್ಯಾಪಾರಿ. ರಾಘವ್ ಆಚಾರಿಯ ಹೆಂಡತಿ ಚೊಚ್ಚಲು ಹೆರಿಗೆಗೆಂದು ಹೋದಾಗ ಆತ ತನ್ನ ಗೆಳೆಯನ ಮನೆಗೆ ಬಂದಿರುತ್ತಾನೆ.  ಇಬ್ಬರೂ ಅವನ ಮಗಳೊಂದಿಗೆ ಆಡುತ್ತಿರುತ್ತಾರೆ. ಕೆಲ ಮತಾಂಧರ ದಾಳಿಗೆ ರಾಘವ ಮತ್ತು ಗೆಳೆಯನ ಹೆಂಡತಿ ಮತ್ತು ಮಗಳೂ ತುತ್ತಾಗುತ್ತಾರೆ. ಜೀವ ಉಳಿಸಿಕೊಂಡ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿ ಈ ದೂರದ ಹೊಳೆ ದಂಡೆಯ ತಪ್ಪಲಿನಲ್ಲಿ ಪ್ರಜ್ಞೆಯಿಲ್ಲದೇ ಬಂದುಬಿದ್ದಾಗ ನವಿಲ್ಲಾ ಮತ್ತು ಚಿನ್ನಯ್ಯ ಅವನ ಜೀವವುಳಿಸಿ ಕಾಪಾಡುತ್ತಾರೆ.  ಅಲ್ಲಿಂದ ಆಚಾರಿಯಾಗಿ ಅವನ ಹೊಸ ಬದುಕು ಪ್ರಾರಂಭವಾಗತ್ತದ.

ಊರಿನ ಪ್ರಮುಖ ದೇವಸ್ಥಾನದ ಬಾಗಿಲು, ಧ್ವಜಸ್ಥಂಭ, ದೀಪಸ್ಥಂಬ , ದೇವರಮೂರ್ತಿ, ರಥ , ಪಲ್ಲಕ್ಕಿಗಳನ್ನೆಲ್ಲ ತಯಾರಿಸಿದ ಆಚಾರಿಯನ್ನು ದೇವಸ್ಥಾನದ ಟ್ರಸ್ಟು ಸನ್ಮಾನಿಸುತ್ತದೆ. ಆಚಾರಿಯನ್ನು ಊರಿನ ಜನ ಗೌರವಿಸುತ್ತಾರೆ. ಆದರೆ ಅವನು ಮಾತಿಲ್ಲದ ಮೌನಿಬಾಬಾನಂತೆ ಮಾತುಗಳನ್ನು ಹೊಟ್ಟೆಯಲ್ಲೇ ಅಡಗಿಸಿಟ್ಟುಕೊಂಡು ಭೋರ್ಗರೆಯುವ  ಹೊಳೆ, ಹರಿವ ನದಿ, ಈಜುವ ಮೀನು, ಹಸಿರಿನ ಗಿಡಮರ, ಸುತ್ತಲಿನ ಕಾಡು, ಸೋನೆ ಸುರಿವ ಮಳೆ- ಪ್ರಕೃತಿಯೊಂದಿಗೆ ಸಂವಾದಿಸುತ್ತ, ತನ್ನ ಪಾಡಿಗೆ ತಾನು ಹಾಡುತ್ತ,  ಮನುಷ್ಯರ ದನಿಗಳ್ಯಾವವೂ ತಾಕುತ್ತಲೇ ಇಲ್ಲವೇನೋ ಎನ್ನುವ ಸಂತನಂತಿರುತ್ತಾನೆ.  ಹಿಂದೂ , ಕ್ರೈಸ್ತ, ಮುಸಲ್ಮಾನ ಭಾವೈಕ್ಯದ ಸಂದೇಶವನ್ನು ಕಟ್ಟಿಕೊಡುತ್ತದೆ ಉಪ್ಪಿನ ಕಾಗದ.

ಪ್ರಧಾನ ಪಾತ್ರದಲ್ಲಿ ಟಿ.ಎಸ್.ನಾಗಾಭರಣರ ಅಭಿನಯವಂತೂ ಮರೆಯುವಂತಿಲ್ಲ.  ಮಂಡ್ಯ ರಮೇಶ್, ಮುರಳಿ ಶಂಗೇರಿ, ಅಪೂರ್ವ ಭಾರದ್ವಾಜ್ ಅವರೂ ಪಾತ್ರಗಳಿಗೆ ಜೀವತುಂಬಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜನೆ ಇದೆ. “ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ…,” ;  ಸಂಗೀತಾ ಕಟ್ಟಿ ಅವರ ಕಂಠದಲ್ಲಿ , ಜೀವ ನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು ! ಕಡಲು ಮುಳುಗಿ ಕಣ್ಣ ಮುಚ್ಚುವ ಕಾಲವೆಂಬ ಮೀನು“ ,   ಇಂಪಾಗಿದೆ. “ ಅಲೆ ಅಲೆ ಅಲೆ….ಸರಿಗಮಾ….”  ಹಾಗೂ  ಜಯಂತ ಕಾಯ್ಕಿಣಿ ಅವರ “ಎಲ್ಲರ ನೋವನೂ “ ವೈಷ್ಣವ ಜನತೋ” ದ ಭಾವಾನುವಾದ ಒಟ್ಟಾರೆ ಎಲ್ಲ ಹಾಡುಗಳೂ ಗುನುಗುನಿಸಿಕೊಳ್ಳುವಂತಿವೆ.  ಚೇತನಾ ತೀರ್ಥಹಳ್ಳಿ ಮತ್ತು ಸುರೇಶ್ ಒಳ್ಳೆಯ ಸಾಹಿತ್ಯ ಬರೆದಿದ್ದಾರೆ., ಜೊತೆಗೆ ಒಳ್ಳೆಯ ಸಂಗೀತ.

ದೆಹಲಿಯ ಹ್ಯಾಬಿಟೇಟ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ’ಉಪ್ಪಿನ ಕಾಗದ ’,  ಜತೆಗೆ ನಿರ್ದೇಶಕ ಬಿ.ಸುರೇಶ್ ಅವರೊಂದಿಗಿನ ಭೇಟಿ ಮತ್ತು ಮಾತು. ದೆಹಲಿ ಕನ್ನಡಿಗರ  ವಾರಾಂತ್ಯವನ್ನು ಸಾರ್ಥಕಗೊಳಿಸಿತು.

ಕನ್ನಡಕ್ಕೆ ಇಂಥ ಒಳ್ಳೆಯ ಚಿತ್ರವನ್ನು ನೀಡಿದ ಬಿ. ಸುರೇಶ್ ಅವರಿಗೆ ಅಭಿನಂದನೆಗಳು.

‍ಲೇಖಕರು avadhi

2 June, 2017

4 Comments

  1. kishor k

    ಇಂಥ ಉತ್ತಮ ಸದಭಿರುಚಿಯ ಸಿನಿಮಾಗಳನ್ನು ನೋಡಲು ಅವಕಾಶಗಳು ವಿರಳವಾಗಿರುವುದು ಕನ್ನಡಿಗರ ದುರ್ದೈವ…

  2. sangeetha raviraj

    ಉತ್ತಮ ಚಿತ್ರ ವೊಂದನ್ನು ಪರಿಚಯಿಸಿದಕ್ಕೆ ದನ್ಯವಾದಗಳು

  3. vinod scribble

    ಚಿತ್ರ ನೋಡಲಾಗಲಿಲ್ಲ, ನೀವು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ. ಧನ್ಯವಾದಗಳು

  4. LC. Nagaraj

    Good write up

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading