ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೊ ಬಿ ಎ ವಿವೇಕ ರೈ ಅವರ 'ಮೊದಲ ಮೆಟ್ಟಿಲು'

ಪ್ರೊ ಬಿ ಎ  ವಿವೇಕ ರೈ ಅವರ ಹೊಸ ಕೃತಿ ‘ಮೊದಲ ಮೆಟ್ಟಿಲು’ ನಾಳೆ ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 
ಈ ಕೃತಿಗೆ ಪ್ರೊ ಸಿ ಎನ್ ಆರ್ ಬರೆದ ಮುನ್ನುಡಿ ಹಾಗೂ ಆ ಕೃತಿ ಗಮನಿಸಿರುವ ಪುಸ್ತಕಗಳ ಪಟ್ಟಿಯನ್ನೂ ನಿಮ್ಮ ಓದಿಗಾಗಿ ನೀಡುತ್ತಿದ್ದೇವೆ 
 

ಪ್ರೊ ಸಿ.ಎನ್. ರಾಮಚಂದ್ರನ್

ತುಳು-ಕನ್ನಡ-ಇಂಗ್ಲೀಷ್ ಭಾಷೆ-ಸಾಹಿತ್ಯಗಳಲ್ಲಿ ಖ್ಯಾತ ವಿದ್ವಾಂಸ, ಯಶಸ್ವಿ ಆಡಳಿತಗಾರ, ಹಾಗೂ ಪ್ರಸಿದ್ಧ ಸಾಹಿತಿ ಡಾ. ಬಿ.ಎ. ವಿವೇಕ ರೈ ಅವರ ಮೊದಲ ಕೃತಿ ‘ತುಳು ಗಾದೆಗಳು’ 1971ರಲ್ಲಿ ಪ್ರಕಟವಾಯಿತು. ಅಂದಿನಿಂದ ಕಳೆದ ನಾಲ್ಕೈದು ದಶಕಗಳ ಅವಧಿಯಲ್ಲಿ ವಿವೇಕ ರೈ ಅವರು (ಇಂಗ್ಲಿಷ್‍ನಲ್ಲಿ ಬರೆದಿರುವ ಕೃತಿಗಳನ್ನು ಹೊರತುಪಡಿಸಿ) ಕನ್ನಡ-ತುಳು ಭಾಷೆಗಳಲ್ಲಿ ರಚಿಸಿದ 17 ವೈವಿಧ್ಯಪೂರ್ಣ ಕೃತಿಗಳ ಪ್ರಸ್ತಾವನೆಗಳು, ಹಿರಿಯರ-ಗೆಳೆಯರ-ಶಿಷ್ಯರ ಕೃತಿಗಳಿಗೆ ಬರೆದಿರುವ 44 ಮುನ್ನುಡಿಗಳು, ಮತ್ತು ಅವರು ಸಂಪಾದಿಸಿರುವ 15 ಕೃತಿಗಳಿಗೆ ಬರೆದಿರುವ ಸಂಪಾದಕೀಯಗಳು – ಇವೆಲ್ಲವುಗಳ ವಾಙ್ಮಯ-ನಕಾಶೆಯನ್ನು ಈ `ಮೊದಲ ಮೆಟ್ಟಿಲು’ ನಮ್ಮೆದುರು ಇಡುತ್ತದೆ. ಈ ಸ್ವಾರಸ್ಯಕರ ನಕಾಶೆಯ ಮುಖ್ಯ ವಿವರಗಳನ್ನು ಓದುಗರಿಗೆ ಪರಿಚಯಿಸುವುದು ನನಗೆ ತುಂಬಾ ಅಭಿಮಾನದ ಸಂಗತಿ.

ಸಾಮಾನ್ಯವಾಗಿ, ಮುನ್ನುಡಿಗಳೆಂದರೆ ಲೇಖಕರ ಹಾಗೂ ಕೃತಿಯ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿ, ಈ ಲೇಖಕರಿಗೆ ಉತ್ತಮ ಭವಿಷ್ಯವಿದೆ ಎಂದು ಹಾರೈಸುವುದು. ಆದರೆ, ವಿವೇಕ ರೈ ಅವರ ಮುನ್ನುಡಿಗಳು ಈ ಹೇಳಿಕೆಗೆ ಅಪವಾದ; ಅವರ ಮುನ್ನುಡಿಗಳು ಅವರ ಬಹುಶಿಸ್ತೀಯ ಅಧ್ಯಯನ ಹಾಗೂ ಆಸಕ್ತಿಗಳನ್ನು ಪ್ರತಿಫಲಿಸುತ್ತವೆ. ಕಾವ್ಯ, ಸಾಹಿತ್ಯ ವಿಮರ್ಶೆ, ಭಾಷಾಶಾಸ್ತ್ರ, ಜಾನಪದೀಯ ಅಧ್ಯಯನ, ಚಾರಿತ್ರಿಕ ಹಾಗೂ ನಗರ ಅಧ್ಯಯನ, ಮೃಗಯಾ ಸಾಹಿತ್ಯ, ಅಂಕಣ ಬರಹಗಳು -ಇವೆಲ್ಲಾ ಬಗೆಯ ಕೃತಿಗಳಿಗೂ ವಿವೇಕ ರೈ ಅಧಿಕಾರಯುತವಾಗಿ ಬರೆದಿರುವ ಮುನ್ನುಡಿಗಳನ್ನು ಓದಿದಾಗ, ಪ್ರಾಚೀನ ಲಾಕ್ಷಣಿಕರು ತುಂಬಾ ಮಹತ್ವವನ್ನು ಕೊಡುತ್ತಿದ್ದ ‘ವ್ಯುತ್ಪತ್ತಿ’ ಎಂದರೇನು ಎಂಬುದು ನಮಗರಿವಾಗುತ್ತದೆ.
ಪ್ರತಿಯೊಂದು ಮುನ್ನುಡಿಯಲ್ಲಿಯೂ ಸಂಬಂಧಿಸಿದ ಕೃತಿಯ ಆಶಯ ಹಾಗೂ ಸ್ವರೂಪದ ತಾತ್ವಿಕ ಚರ್ಚೆಯಿದ್ದು, ಅನಂತರ ಆ ಚರ್ಚೆ ಇತರ ಸಮಾನ ಕೃತಿಗಳ ಸಮೀಕ್ಷೆಗೂ ಚಾಚುತ್ತದೆ. ಎಂದರೆ, ರೈ ಅವರ ಲೇಖನಗಳಲ್ಲಿ ಎದ್ದು ಕಾಣುವ ‘ಅಂತರ್ಪಠ್ಯೀಯತೆ’ ಅವರ ಮುನ್ನುಡಿಗಳಲ್ಲಿಯೂ ಹಾಸು ಹೊಕ್ಕಾಗಿದೆ.
ಉದಾಹರಣೆಗಾಗಿ : `ಬೇಟೆಯ ಸುತ್ತಮುತ್ತು’ ಎಂಬ ಕೃತಿಯ ಮುನ್ನುಡಿಯಲ್ಲಿ ‘ಅನುಭವಗಳು ನೆನಪುಗಳಾಗಿ ಇರುವ ಹಂತದಲ್ಲಿ ಸಾಂಸ್ಕೃತಿಕ ದಾಖಲೆಗಳಾಗುತ್ತವೆ ಮತ್ತು ಅನುಭವಗಳು ನೆನಪುಗಳ ಹಂತವನ್ನು ದಾಟಿ ಭ್ರಮೆಗಳಾದ ಬಳಿಕದ ರಚನೆಗಳು ಸೃಜನಶೀಲ ಸಾಹಿತ್ಯದ ಮಾದರಿಗಳಾಗುತ್ತವೆ’ ಎಂಬ ತಾತ್ವಿಕ ಪ್ರಮೇಯವನ್ನು ಮಂಡಿಸಿ, ಅನಂತರ ಈ ಪ್ರಮೇಯದ ಪ್ರಾತಿನಿಧಿಕ ಕೃತಿಗಳೆಂದು ಎಚ್.ಎಚ್. ಮನ್ರೋ (ಸಾಕಿ)ನ ಕಥೆಗಳನ್ನು ಮತ್ತು ಬೇಟೆಯ ಕಥೆಗಳನ್ನು ವ್ಯಾಖ್ಯಾನಿಸುತ್ತಾರೆ. ಅನಂತರ, ಮೃಗಯಾ ಸಾಹಿತ್ಯವೆಂಬ ವರ್ಗದಲ್ಲಿ ಬಂದಿರುವ ಇತರರ ಕೃತಿಗಳನ್ನು – ಜತ್ತಪ್ಪ ರೈ ಅವರ ಮೂರು ಪ್ರಸಿದ್ಧ ಕೃತಿಗಳನ್ನು ಮತ್ತು ಬಡ್ಯಡ್ಕ ಅಪ್ಪಯ್ಯ ಗೌಡರ ಸಾಹಸಕಥನವನ್ನು – ಉಲ್ಲೇಖಿಸುತ್ತಾರೆ. ಕೊನೆಗೆ, ಹೇಗೆ ಮೃಗಯಾ ಸಾಹಿತ್ಯದಲ್ಲಿ ಅರಣ್ಯದ ಪ್ರಾಣಿಸಂಪತ್ತು, ಸಸ್ಯಸಂಪತ್ತು, ಭೂಸಂಪತ್ತು ಇತ್ಯಾದಿಗಳ ವಿವರಗಳು ಆ ಕೃತಿಗೆ ರೋಚಕತೆಗಿಂತ ಹೆಚ್ಚಿನ ಮಹತ್ವವನ್ನು ಕೊಡುತ್ತವೆ ಎಂಬುದನ್ನು ವಿವರಿಸುತ್ತಾರೆ. ಇಡೀ ಮುನ್ನುಡಿಯನ್ನು ಓದಿದ ನಂತರ ಮೃಗಯಾ ಸಾಹಿತ್ಯವೆಂಬ ಹೊಸ ಸಾಹಿತ್ಯ ಪ್ರಭೇದದ ಸ್ವರೂಪ ಹಾಗೂ ನಿಯೋಗಗಳು ಓದುಗರ ಗಮನಕ್ಕೆ ಬಂದಿರುತ್ತವೆ.
ಇದೇ ರೀತಿಯಲ್ಲಿ, ಹಿರಿಯ ಸಾಹಿತಿಗಳಾದ (90ರ ಹರಯದ) ಏರ್ಯ ಲಕ್ಷ್ಮೀನಾರಾಯಣ ಆಳ್ವರ `ಹಿಂದಣ ಹೆಜ್ಜೆ’ ಕೃತಿಯ ಮುನ್ನುಡಿಯಲ್ಲಿ, ಬಂಟ ಜನಾಂಗವು ಶಿಕ್ಷಣ-ಉದ್ಯೋಗ ಕ್ಷೇತ್ರಗಳಲ್ಲಿ ಮಾಡಿದ ಸಾಹಸ-ಸಾಧನೆಗಳನ್ನು ವಿವರಿಸುತ್ತಾ, ಏರ್ಯರಂತೆಯೇ ದಕ್ಷಿಣ ಕನ್ನಡಿಗರ ಮುಂಬಯಿ ವಲಸೆಯ ಬಗ್ಗೆ ಇತರರು ನಡೆಸಿರುವ ಅಧ್ಯಯನಗಳನ್ನೂ ರೈ ಅವರು ಸಂಕ್ಷಿಪ್ತವಾಗಿ ಪರಿಗಣಿಸುತ್ತಾರೆ – ವಿಶ್ವನಾಥ ಕಾರ್ನಾಡ್ ಅವರ ಸಂಶೋಧನಾ ಗ್ರಂಥ, ಬೋಳ ಚಿತ್ತರಂಜನದಾಸ ಶೆಟ್ಟಿ ಅವರ ಅಳಿದುಳಿದವರು ಕಾದಂಬರಿ, ಇತ್ಯಾದಿ. ಹಾಗೆಯೇ, ಅಮೃತ ಸೋಮೇಶ್ವರ ಅವರ `ಮೋಯ ಮಲೆಯಾಳ-ಕನ್ನಡ ಪದಕೋಶ’ ಕೃತಿಯಲ್ಲಿ ರೈ ಅವರು ಕೈಗೊಳ್ಳುವ ಶಬ್ದಾರ್ಥ ಜಿಜ್ಞಾಸೆ ಹಾಗೂ ಪ್ರಧಾನ ಭಾಷೆ-ಉಪಭಾಷೆಗಳ ಸಂಬಂಧ, ಇತ್ಯಾದಿಗಳ ತಾತ್ವಿಕ ಚರ್ಚೆ; ವಾಮನ ನಂದಾವರ ಅವರ `ಕೋಟಿ ಚೆನ್ನಯ: ಜಾನಪದೀಯ ಅಧ್ಯಯನ’ದ ಮುನ್ನುಡಿಯಲ್ಲಿ ಬರುವ ಕಾಲ-ದೇಶ-ಜನಾಂಗ-ಮಾನಸಿಕ ಈ ನಾಲ್ಕು ಆಯಾಮಗಳ ಚರ್ಚೆ; ಲತಾ ಅಭಯ್ ಅವರ `ಕಲ್ಲು ಬೆಂಕಿಗಳಿಂದ ನಲಿವು ಬೆಳಕಿನೆಡೆಗೆ’ ಕೃತಿಯ ಮುನ್ನುಡಿ ಚರ್ಚಿಸುವ ‘ಪುರಾಣ ಸ್ತ್ರೀವಾದ’ ಎಂಬ ಪರಿಕಲ್ಪನೆಯ ಚರ್ಚೆ; ಇತ್ಯಾದಿಗಳನ್ನೂ ಹೆಸರಿಸಬಹುದು.
ಎರಡನೆಯ ಭಾಗದಲ್ಲಿ, ವಿವೇಕ ರೈ ತಮ್ಮ 17 ಕೃತಿಗಳಿಗೆ ಬರೆದ ‘ಅರಿಕೆ’ ಮತ್ತು ‘ಪ್ರಸ್ತಾವನೆ’ಗಳಿವೆ. ಪ್ರಸ್ತಾವನೆಗಳಂತೂ ದೀರ್ಘ ಹಾಗೂ ವಿದ್ವತ್ಪೂರ್ಣ ಲೇಖನಗಳಾಗಿದ್ದು, ಅವು ಇಡೀ ಕೃತಿಯ ತಾತ್ವಿಕ ನೆಲೆಗಳನ್ನು ಹಾಗೂ ನಿದರ್ಶನಗಳನ್ನು ಓದುಗರಿಗೆ ಪರಿಚಯಿಸುತ್ತವೆ. ತುಳು ಗಾದೆಗಳು ಕೃತಿಯ ಪ್ರಸ್ತಾವನೆ 20 ಪುಟಗಳಷ್ಟು ದೀರ್ಘವಾಗಿದ್ದು, ಗಾದೆ ಪದದ ನಿಷ್ಪತ್ತಿ, ಗಾದೆಯ ಲಕ್ಷಣಗಳು, ಗಾದೆಗಳು ದುಡಿಸಿಕೊಳ್ಳುವ ಅಲಂಕಾರಗಳು, ಗಾದೆಯ ಪ್ರಭೇದಗಳು ಹಾಗೂ ನಿಯೋಗಗಳು, ಇತ್ಯಾದಿ ಎಲ್ಲಾ ಪ್ರಮುಖ ಅಂಶಗಳನ್ನೂ ವಿವರಿಸುತ್ತದೆ. ಕೊನೆಯಲ್ಲಿ, ಅತ್ಯಂತ ಉಪಯುಕ್ತವಾದ ಗ್ರಂಥಸೂಚಿಯನ್ನೂ ಕೊಡುತ್ತದೆ.
ಒಂದು ಸಂಶೋಧನಾ ಗ್ರಂಥದಿಂದ ನಾವು ನಿರೀಕ್ಷಿಸುವಂತೆಯೇ, ಈ ಪ್ರಸ್ತಾವನೆಯೂ ಅನೇಕ ಹೊಸ ಕುತೂಹಲಕಾರಿ ವಿಷಯಗಳನ್ನು ಒಳಗೊಂಡಿದೆ: ಸಂಸ್ಕೃತದ ‘ಗಾಥಾ’ ಎಂಬುದರ ಕನ್ನಡ ರೂಪ ‘ಗಾದೆ’ಗೆ ಸಂವಾದಿಯಾಗಿರುವ ಲ್ಯಾಟಿನ್ ಪದದ ಅರ್ಥ ‘ಜನರೆದುರು ಆಡಿದ ಮಾತು’, ಗ್ರೀಕ್ ಪದದ ಅರ್ಥ ‘ಬೀದಿಯಲ್ಲಿ ಕೇಳಿದ ಮಾತು’; ಆದರೆ ಅಚ್ಚ ಕನ್ನಡದ ಪದ ‘ನಾಣ್ನುಡಿ’ಯ ಅರ್ಥ ‘ನಾಡ ನುಡಿ’. ಗಾದೆಗಳ ಮಹತ್ವವನ್ನು ವಿವಸುತ್ತಾ, `ಆಫ್ರಿಕನ್ ರಾಷ್ಟ್ರಗಳಲ್ಲಿ ಹೆಚ್ಚು ಗಾದೆಗಳನ್ನು ತಿಳಿದಿರುವ ವಕೀಲನನ್ನು ಕಕ್ಷಿದಾರರು ಅರಸುತ್ತಿದ್ದರು, ಮತ್ತು ವಕೀಲರು ತಮ್ಮ ವಾದಸಮರ್ಥನೆಗೆ ಸೂಕ್ತ ಗಾದೆಗಳನ್ನು ಉಪಯೋಗಿಸುತ್ತಿದ್ದರು’ ಎಂದು ರೈ ಅವರು ಹೇಳುತ್ತಾರೆ.
ಆದರೆ, ಎಲ್ಲಾ ಭಾಷೆಗಳಲ್ಲಿಯೂ ಇರುವ ಹೆಚ್ಚಿನ ಗಾದೆಗಳು `ಹೆಣ್ಣಿನ ಬಗ್ಗೆ ಕೊಂಕು ದೃಷ್ಟಿ’ ಇರುವ ಗಾದೆಗಳೇ ಎಂದು ಅವರು ಖೇದದಿಂದ ಹೇಳುತ್ತಾರೆ. ಇದೇ ನೆಲೆಯಲ್ಲಿ ಗಮನೀಯವಾದ ಮತ್ತೊಂದು ಪ್ರಸ್ತಾವನೆಯೆಂದರೆ ಲೋರ್ಕಾನ `ಬ್ಲಡ್ ವೆಡಿಂಗ್’ ನಾಟಕದ ಅವರೇ ಮಾಡಿರುವ ಅನುವಾದಕ್ಕೆ ಬರೆದಿರುವ ದೀರ್ಘ ಪ್ರಸ್ತಾವನೆ. ಇದು ಲೋರ್ಕನ ಸೈದ್ಧಾಂತಿಕ ಹಿನ್ನೆಲೆ, ಅವನ ರಂಗಭೂಮಿಯ ವೈಶಿಷ್ಟ್ಯ, ಅವನ ರಾಜಕೀಯ ನಾಟಕಗಳು, ಇತ್ಯಾದಿಗಳ ವಿಮರ್ಶಾತ್ಮಕ ಹಾಗೂ ಪಾಂಡಿತ್ಯಪೂರ್ಣ ಲೇಖನ.
ಮೂರನೆಯ ಭಾಗದಲ್ಲಿ, ರೈ ಅವರು ಸಂಪಾದಿಸಿರುವ ಸಂಕಲನಗಳಿಗೆ ಬರೆದಿರುವ ದೀರ್ಘ ಸಂಪಾದಕೀಯಗಳಿವೆ. ಈ ಭಾಗದಲ್ಲಿ ನಾವು ‘ಕಡೆಂಗೋಡ್ಲು ಸಾಹಿತ್ಯ’, ‘ಪೆರುವಾಯಿ ಸುಬ್ಬಯ್ಯ ಶೆಟ್ಟಿಯವರ ತುಳು ಗಾದೆಗಳು’, ‘ಪೊನ್ನಕಂಠಿ’, ‘ಪುಟ್ಟು ಬಳಕೆಯ ಪಾಡ್ದನಗಳು’, ‘ಮಂಗಳೂರು ದರ್ಶನ (ಮೂರು ಸಂಪುಟಗಳು)’ ಇತ್ಯಾದಿ ಮಹತ್ವಪೂರ್ಣ ಸಂಕಲನಗಳಿಗೆ ಬರೆದ ಅರ್ಥಪೂರ್ಣ ಲೇಖನಗಳಿವೆ. ಪ್ರಾತಿನಿಧಿಕ ವಾಗಿ ಅಖಿಲ ಭಾರತ 66ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನ ಸಂಪಾದಕರಾಗಿ ಸಿದ್ಧಪಡಿಸಿದ `ಪೊನ್ನಕಂಠಿ’ ಕೃತಿಗೆ ಬರೆದಿರುವ ವಿಸ್ತೃತ ಸಂಪಾದಕೀಯ ಲೇಖನವನ್ನು ನೋಡಬಹುದು.
ಪ್ರಾರಂಭದಲ್ಲಿ, 1915ರಂದು ಸ್ಥಾಪಿಸಲ್ಪಟ್ಟ ಸಾಹಿತ್ಯ ಪರಿಷತ್ತಿನ ಅಂದಿನ ಆದ್ಯತೆಗಳು ಮತ್ತು ಕಾರ್ಯಗಳು ಇವುಗಳನ್ನು ಪ್ರಸ್ತಾಪಿಸುತ್ತಾ, ಅನಂತರ ಪರಿಷತ್ತಿನ ಸಮ್ಮೇಳನಗಳಿಗೆ ಸರಕಾರದಿಂದ ಸಹಾಯಧನವನ್ನು ಸ್ವೀಕರಿಸುವುದರ ಪರ-ವಿರೋಧ ಚರ್ಚೆಯನ್ನು ದಾಖಲಿಸಿ, ‘ಜನರ ಹಣ ಎನ್ನುವ ಪರಿಕಲ್ಪನೆಯು ಕೂಡಾ ತುಂಬ ಅಸ್ಪಷ್ಟವಾದುದು’ ಎಂಬ ಅರ್ಥಪೂರ್ಣ ಸಂಗತಿಯನ್ನು ದಾಖಲಿಸುತ್ತಾರೆ. ಅನಂತರ, ಈ ಲೇಖನದ ಮುಖ್ಯ ಭಾಗದಲ್ಲಿ ‘ಕನ್ನಡ ಭಾಷೆ, ಸಾಹಿತ್ಯ ಮತ್ತು ನಾಡು ಇವುಗಳ ಕುರಿತು ನಮ್ಮ ಪ್ರೀತಿ, ಅಭಿಮಾನಗಳ ಭಾವಾವೇಶದ ಸಂರಚನೆಗಳನ್ನು ವಿರಚನಗೊಳಿಸಿ, ಮತ್ತೆ ಹೊಸದಾಗಿ ನೋಡಬೇಕಾಗಿದೆ’ ಎಂಬ ನಿಲುವನ್ನು, ದೀರ್ಘವಾಗಿ ಹಾಗೂ ವಸ್ತುನಿಷ್ಠವಾಗಿ, ಕಾರಂತರಿಂದ ಅನಂತಮೂರ್ತಿ, ವ್ಯಾಸರಾವ್ ನಿಂಜೂರ್ ಮತ್ತು ತಿರುಮಲೇಶ್ ಅವರವರೆಗಿನ ಅನೇಕ ಸಾಹಿತಿಗಳ ವಿಚಾರಗಳನ್ನು ಚರ್ಚಿಸುತ್ತಾರೆ. ಚರ್ಚೆಯ ಕೊನೆಗೆ ಅವರು ತಲಪುವ ತೀರ್ಮಾನವು ತುಂಬಾ ಮಹತ್ವದ್ದು: ‘ಕನ್ನಡವನ್ನು ಮಾತನಾಡಿದ ಮಾತ್ರಕ್ಕೆ, ಕನ್ನಡದಲ್ಲಿ ಬರೆದ ಮಾತ್ರಕ್ಕೆ ನಾವು ಕನ್ನಡ ಸಂಸ್ಕೃತಿಯನ್ನು ಬದುಕಿದ ಹಾಗಾಗುವುದಿಲ್ಲ.’ ಸಂಕಲನದ ಹೊರಗಡೆಯೂ ಒಂದು ಸ್ವೋಪಜ್ಞ ವೈಚಾರಿಕ ಲೇಖನವಾಗಿ ಈ ಸಂಪಾದಕೀಯವು ನಿಲ್ಲುತ್ತದೆ.
ಸಂಕ್ಷಿಪ್ತವಾಗಿ ಹೇಳಬೇಕಾದರೆ, ಈ ಮುನ್ನುಡಿ-ಪ್ರಸ್ತಾವನೆಗಳೆಲ್ಲವೂ ಒಂದು ಬಗೆಯ ‘ಹೊಸ ಓದು’ — ನಮಗೆ ಗೊತ್ತಿಲ್ಲದಿರುವ ಅಥವಾ ಓದಿಲ್ಲದಿರುವ ಕೃತಿಗಳ ಹಾಗೂ ಪರಿಕಲ್ಪನೆಗಳ ಓದು. (‘ಪುರಾಣ ಸ್ತ್ರೀವಾದ’ ಎಂಬ ಪರಿಕಲ್ಪನೆಯನ್ನು ನಾನು ಅರಿತುದು ಇಲ್ಲಿಯ ಒಂದು ಮುನ್ನುಡಿಯನ್ನು ಓದಿದ ಮೇಲೆಯೇ.) ಈ ಸಂಕಲನದ ಮೂರು ಭಾಗಗಳಿಗೆ ‘ಮುನ್ನುಡಿಗಳು,’ ‘ಲೇಖಕನ ಅರಿಕೆ ಮತ್ತು ಪ್ರಸ್ತಾವನೆಗಳು’, ‘ಸಂಪಾದಕನ ಮಾತು ಮತ್ತು ಪ್ರಸ್ತಾವನೆಗಳು’ ಎಂಬ ಭಿನ್ನ ಹೆಸರುಗಳನ್ನು ಕೊಟ್ಟಿದ್ದರೂ, ಅವೆಲ್ಲವೂ ಸ್ವತಂತ್ರ ವೈಚಾರಿಕ ಲೇಖನಗಳೇ; ಕೇವಲ ಮಾಹಿತಿಯನ್ನಲ್ಲದೆ ಚಿಂತನೆಗೂ ಪ್ರಚೋದಿಸುವ ಲೇಖನಗಳು.
ಕೊನೆಯಲ್ಲಿ, ಅಪ್ರಸ್ತುತವೆನಿಸಿದರೂ ಈ ಸಂಕಲನಕ್ಕಿರುವ ನನ್ನ ವೈಯಕ್ತಿಕ ಆಯಾಮ ವನ್ನು ಪ್ರಸ್ತಾಪಿಸಲೇ ಬೇಕು. ಒಂದು ದೃಷ್ಟಿಯಲ್ಲಿ, ವಿಮರ್ಶನ ಕ್ಷೇತ್ರದಲ್ಲಿ ನಾನಿಟ್ಟ ಹೆಜ್ಜೆಗಳನ್ನು ದಪ್ಪ ಗೆರೆಗಳಲ್ಲಿ ಈ ಸಂಕಲನವು ದಾಖಲಿಸುತ್ತದೆ: ಸಂಕಲನದ ಮೊದಲ ಲೇಖನವೇ ನನ್ನ ಮೊದಲ ಕನ್ನಡ ವಿಮರ್ಶನ ಕೃತಿಗೆ ವಿವೇಕ ರೈ ಅವರು ಬರೆದ ಮುನ್ನುಡಿ; ಅನಂತರ, 2007ರಲ್ಲಿ, ನನ್ನ `ಹೊಸ ಮಡಿಯ ಮೇಲೆ ಚದುರಂಗ’ ಕೃತಿಗೆ ಅವರೇ ಮುನ್ನುಡಿಯನ್ನೂ ಬರೆದು, ಕೃತಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಮಾಡಿದ ಆಪ್ತ ಭಾಷಣ, ಮತ್ತು 2011ರಲ್ಲಿ, `ಆಖ್ಯಾನ ವ್ಯಾಖ್ಯಾನ’ ಸಂಕಲನಕ್ಕೆ ಅವರು ಬರೆದ ಮುನ್ನುಡಿ, ಪ್ರೀತಿಯಿಂದ ವಿಶಿಷ್ಟ ರೀತಿಯಲ್ಲಿ ಅವರು ರೂಪಿಸಿದ ನನ್ನ ಅಭಿನಂದನಾ ಗ್ರಂಥ `ರೂಪಾಂತರ’ – ಇವೆಲ್ಲವುಗಳ ನೆನಪಿನಲ್ಲಿ ತೋಯ್ದ ಮನಸ್ಸು ‘ಯಾವ ಜನ್ಮದ ಮೈತ್ರಿ!’ ಎಂದು ಆದ್ರ್ರವಾಗುತ್ತದೆ.
ಪುಟನೋಟ
ಭಾಗ 1 : ಮುನ್ನುಡಿಗಳು
ಮುನ್ನುಡಿ ಬರೆದ ಗ್ರಂಥಗಳು / ಲೇಖಕರು
1. ಶಿಲ್ಪ ವಿನ್ಯಾಸ / ಸಿ.ಎನ್. ರಾಮಚಂದ್ರನ್
2. ಭೂತಾರಾಧನೆ : ಜಾನಪದೀಯ ಅಧ್ಯಯನ / ಕೆ. ಚಿನ್ನಪ್ಪ ಗೌಡ
3. ಮಾರುಮಾಲೆ : ಯಕ್ಷಗಾನ ವಿಮರ್ಶಾ ಪ್ರಬಂಧಗಳು /
ಎಂ. ಪ್ರಭಾಕರ ಜೋಶಿ
4. ಬೇಟೆಯ ಸುತ್ತುಮುತ್ತು / ಕೈಂತಜೆ ವಿಷ್ಣುಭಟ್
5. ಹೆಸರಾದ ಪಟ್ಟಣ ಬಸ್ರೂರು-ಒಂದು ಅಧ್ಯಯನ /
ಕನರಾಡಿ ವಾದಿರಾಜ ಭಟ್ (ಸಂ.)
6. ಹಕ್ಕಿ ಹರಿವ ನೀರು / ಕವಿತಾ ರೈ
7. ಮೋಯ ಮಲೆಯಾಳ-ಕನ್ನಡ ಪದಕೋಶ / ಅಮೃತ ಸೋಮೇಶ್ವರ
8. ನಾಡು-ನುಡಿಯ ರೂಪಕ / ಶಿವರಾಮ ಪಡಿಕ್ಕಲ್
9. ಕೋಟಿ ಚೆನ್ನಯ : ಜಾನಪದೀಯ ಅಧ್ಯಯನ / ವಾಮನ ನಂದಾವರ
10. ಇಂಗ್ಲಿಷನ್ನು ಪಳಗಿಸೋಣ / ಅಜಕ್ಕಳ ಗಿರೀಶ್ ಭಟ್
11. ಶ್ರೀ ರಾಮಾಯಣ ಮಹಾನ್ವೇಷಣಂ / ಎಂ. ವೀರಪ್ಪ ಮೊಯಿಲಿ
12. ನುಡಿಸಿಂಗಾರ / ಗಣೇಶ್ ಅಮೀನ್ ಸಂಕಮಾರ್
13. ಬಯಲ ಬೆಳಕು / ಅಪ್ಪಗೆರೆ ಸೋಮಶೇಖರ (ಸಂ.)
14. ಹೊಸಮಡಿಯ ಮೇಲೆ ಚದುರಂಗ / ಸಿ.ಎನ್. ರಾಮಚಂದ್ರನ್
15. ಕಲ್ಲು ಬೆಂಕಿಗಳಿಂದ ನಲಿವು ಬೆಳಕಿನೆಡೆಗೆ / ಲತಾ ಅಭಯ್
16. ಆದಿವಾಸಿ ಆಖ್ಯಾನ / ಎ.ಎಸ್. ಪ್ರಭಾಕರ (ಸಂ.)
17. ಇನ್ನೊಂದು ಮುಖ / ಮುಜಾಫರ್ ಎಚ್. ಅಸ್ಸಾದಿ
18. ಮಾಯ ಮತ್ತು ಜೋಗ / ಗಣೇಶ್ ಅಮೀನ್ ಸಂಕಮಾರ್
19. ಗಾಳಿಗೆ ಬಣ್ಣ ಇದ್ದಿದ್ದರೆ / ದಕ್ಷ ಮಾಲಗತ್ತಿ
20. ದ್ರೌಪದಿಯ ಸ್ವಗತ / ಮಂಜುಳಾ ಶೆಟ್ಟಿ
21. ಭಾವನಾ / ಎನ್.ಕೆ. ಲೋಲಾಕ್ಷಿ
22. ಕೊಡಗು ಗೌಡ ಸಮುದಾಯ :
ಸಾಂಸ್ಕೃತಿಕ ಅನನ್ಯತೆ ಮತ್ತು ಚಲನಶೀಲತೆ / ಕೋರನ ಸರಸ್ವತಿ ಪ್ರಕಾಶ್
23. ಅಬ್ಬಕ್ಕ ಸಂಕಥನ / ಅಮೃತ ಸೋಮೇಶ್ವರ (ಪ್ರ.ಸಂ.)
24. ಆಖ್ಯಾನ-ವ್ಯಾಖ್ಯಾನ / ಸಿ.ಎನ್. ರಾಮಚಂದ್ರನ್
25. ಮೂರು ಹೆಜ್ಜೆ ಮೂರು ಲೋಕ / ಡಿ.ಕೆ.ಚೌಟ-ನಾ. ದಾಮೋದರ ಶೆಟ್ಟಿ
26. ಬಹುರೂಪ / ಪುರುಷೋತ್ತಮ ಬಿಳಿಮಲೆ
27. ಯಕ್ಷಗಾನ ರಂಗಭಾಷೆ / ಚಂದ್ರಶೇಖರ ದಾಮ್ಲೆ
28. ಅತ್ತಾವರ ದೈಯೊಂಗುಳು / ಪ್ರಶಾಂತ್‍ರಾಮ್ ಕೊಟ್ಟಾರಿ
29. ಕೃಷಿ ಸಂಸ್ಕೃತಿಯಲ್ಲಿ ಹೆಣ್ಣಿನ ಪ್ರತಿನಿಧೀಕರಣ / ರಾಜಶ್ರೀ
30. 1837ರ ತುಳುನಾಡ ರೈತ ಬಂಡಾಯ / ಪಾಲ್ತಾಡಿ ರಾಮಕೃಷ್ಣ ಆಚಾರ್
21. ಹಸಿರು-ಉಸಿರು / ನರೇಂದ್ರ ರೈ ದೇರ್ಲ
32. ನೆನಪು ನೆನಕೆಗಳ ಯಾನ / ಚಂದ್ರಕಲಾ ನಂದಾವರ
33. ಹನಿ ಮೋಹಿನಿ / ಎಚ್. ಡುಂಡಿರಾಜ್
34. ದರ್ಬೆ / ನಂಜುಂಡಸ್ವಾಮಿ ತೊಟ್ಟವಾಡಿ (ಸಂ.)
35. ಸಿರಿ / ನಾ. ದಾಮೋದರ ಶೆಟ್ಟಿ
36. ಕೊಡಚಾದ್ರಿ : ಸಾಧಕರ ನುಡಿಚಿತ್ರ / ಲಕ್ಷ್ಮಣ ಕೊಡಸೆ
37. ಗಾಂಧಿ ಹೆಜ್ಜೆಯ ಜಾಡಿನಲ್ಲಿ / ಏರ್ಯ ಲಕ್ಷ್ಮೀನಾರಾಯಣ ಆಳ್ವ (ಸಂ.)
38. ಪುಳಿಂಚ / ಭಾಸ್ಕರ ರೈ ಕುಕ್ಕುವಳ್ಳಿ (ಸಂ.)
39. ಕುಡುಬಿಯರ ಮದುವೆ / ಯಂ. ಗೋಪಾಲ ಗೌಡ
40. ಹಿಂದಣ ಹೆಜ್ಜೆ / ಏರ್ಯ ಲಕ್ಷ್ಮೀನಾರಾಯಣ ಆಳ್ವ
41. ಸಂಘ ಜಂಗಮ / ಅನುಬೆಳ್ಳೆ (ಸಂ.)
42. ಸಿರಿ ಬಾರಿ ಲೋಕ / ಇಂದಿರಾ ಹೆಗ್ಗಡೆ
43. ಆನಂದಿಬಾಯಿ ಜೋಶಿ / ಚಂದ್ರಶೇಖರ ಮಂಡೆಕೋಲು
44. ಹತ್ತು ಹಲವು / ಎಂ. ರಾಮಚಂದ್ರ
ಭಾಗ 2 : ಲೇಖಕನ ಅರಿಕೆ ಮತ್ತು ಪ್ರಸ್ತಾವನೆಗಳು
1. ತುಳು ಗಾದೆಗಳು
2. ತುಳು ಒಗಟುಗಳು
3. ತೌಳವ ಸಂಸ್ಕೃತಿ
4. ತುಳುವ ಅಧ್ಯಯನ : ಕೆಲವು ವಿಚಾರಗಳು
5. ತುಳು ಜನಪದ ಸಾಹಿತ್ಯ
6. ಆನ್ವಯಿಕ ಜಾನಪದ
7. ಭಾರತೀಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು
8. ಗಿಳಿಸೂವೆ
9. ಹಿಂದಣ ಹೆಜ್ಜೆ
10. ರಂಗದೊಳಗಣ ಬಹಿರಂಗ
11. ಇರುಳ ಕಣ್ಣು
12. ಬ್ಲಾಗಿಲನು ತೆರೆದು
13. ಜರ್ಮನಿಯ ಒಳಗಿನಿಂದ
14. ಕನ್ನಡ ನುಡಿ ನಡೆಯ ಬರಹಗಳು
15. ಅರಿವು ಸಾಮಾನ್ಯವೆ
16. ನೆತ್ತರ ಮದುವೆ (ಫೆಡರಿಕೊ ಗಾರ್ಸಿಯ ಲೊರ್ಕ)
17. ಚಿಲಿಯಲ್ಲಿ ಭೂಕಂಪ (ಹದಿನೆಂಟು ಕಥನಗಳು)
ಭಾಗ 3 : ಸಂಪಾದಕನ ಮಾತು ಮತ್ತು ಪ್ರಸ್ತಾವನೆಗಳು
1. ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು
2. ಕಡೆಂಗೋಡ್ಲು ಸಾಹಿತ್ಯ
3. ಶಾಂಭವಿ
4. ಶ್ರೀ ಪೆರುವಾಯಿ ಸುಬ್ಬಯ್ಯ ಶೆಟ್ಟಿಯವರ ತುಳು ಗಾದೆಗಳು
5. ತುಳು ಕಬಿತಗಳು
6. ಮಲೆ ಕುಡಿಯರು
7. ಯಕ್ಷಗಾನ ಪ್ರಸಂಗ ಸಂಪುಟ
8. ಪೊನ್ನಕಂಠಿ
9. ಭೂತಾರಾಧನೆಯ ಬಣ್ಣಗಾರಿಕೆ
10. ಅಗ್ರಾಳ ಪುರಂದರ ರೈ ಸಮಗ್ರ ಸಾಹಿತ್ಯ
11. ಶತಮಾನದ ಕೊನೆಯಲ್ಲಿ ಶಿವರಾಮ ಕಾರಂತ
12. ಪುಟ್ಟು ಬಳಕೆಯ ಪಾಡ್ದನಗಳು
13. ತುಳು ಸಾಹಿತ್ಯ ಚರಿತ್ರೆ
14. ರೂಪಾಂತರ : ಸಿ.ಎನ್. ರಾಮಚಂದ್ರನ್ ಬದುಕು ಬರಹ
15. ಮಂಗಳೂರು ದರ್ಶನ (ಮೂರು ಸಂಪುಟಗಳು)

‍ಲೇಖಕರು admin

13 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading