ಸಂಜಯ ಮತ್ತು ಧೃತರಾಷ್ಟ್ರ

ಸ್ಫೂರ್ತಿ ಗಿರೀಶ್
ಸಂಜಯ
ಕಾಣುವುದೇ ಹೇಳು
ಅವನು
ಉಸಿರಿಡಿದು ಬಿಡುತ್ತಿರುವ
ಆ ಕೊನೆಯ ಕ್ಷಣ
ಮೂಲೆಮನೆಯ ಅವನ ಹೆಂಡತಿ
ಕಿರು ವಯಸ್ಸಿನ ಒಂಟಿ ಹೆಂಗಸು
ಮೂಳೆ ಚಕ್ಕಳಗೊಂಡ ನಾಲ್ಕು ಕೂಸು
ಒಂದರ ಬಾಯಲ್ಲಿ ಜೋತು ಬಿದ್ದ ಅವಳ ಮೊಲೆ
ಒಲೆಯ ಮೇಲಿನ ಖಾಲಿ ತಪ್ಪಲೆ
ನೋಡಿ
ಕಣ್ಣೀರು ತುಂಬಿ ಮಿನುಗುವ
ಅವಳ ಕಂಗಳು
ನಿನಗೆ ಕಾಣುವುದೇ ಸಂಜಯ
ಹೇಳು
ಸಂಜಯ ಕಾಣುವುದೇ
ನಂಜನುಗುಳುವ ಭೂಮಿ
ಬೆತ್ತಲೆ ಬಿರುಕಿನ ನಡುವೆ
ಅರಳಲಾಗದೆ ದಹಿಸುತ್ತಿರುವ
ಅವನ ಕನಸ್ಸಿನಂತ ಎಳೆಯ ಪೈರು
ಬತ್ತಿದ ಬಾವಿ
ಸತ್ತ ದನ ಕುರಿಗಳ ರಕ್ತತುಂಬಿ ನಾರುವುದು
ಕಾಣುವುದೇ
ಸ್ಮಶಾನದಲ್ಲಿ ಈಗ
ತಾನೇ ಸಿಡಿಯುತ್ತಿರುವ ಅವನ ತಲೆಯ ಚೂರು
ಕೇಳುವುದೇ
ಕಿವಿಗೊಟ್ಟು ಹೇಳು
ಸಂಜಯ ಕಾಣುವುದೇ
ಗಡಿಗಳಲ್ಲಿ ಹಾರಿಸುವ ವಿಜಯ ಧ್ವಜ
ಗಂಭೀರದಲ್ಲಿ ನಡೆಯುತ್ತಿರುವ
ಯವ್ವನ ತುಂಬಿದ
ಮುದುಕರು
ಅವರ ಕೈಯಾಳು
ಕಾಲಾಳು
ಯುದ್ಧದ ವಿಮಾನಗಳು
ಪಂಡಿತ ಪಾಮರರ
ಚರ್ಚಾ ಚಹಾ ಕೂಟಗಳು
ಜಗಮಗಿಸುವ ನಗರಗಳು
ಸುರಂಗದ ರೈಲುಗಳು
ತುಸು ವಿಸ್ತರಿಸಿ ಹೇಳು
ಸಂಜಯ ಕಾಣುವುದೇ
ಉರಿಗಾಳಿಗೆ
ಸಿಲುಕಿ
ಆಸ್ಪತ್ರೆಯ ಹಾಸಿಗೆಯ ಮೇಲೆ
ನರಳುತ್ತಿರುವ ಈ ಭೂಮಿ
ಕಣ್ಣಿಗೆ ಕತ್ತಲಿಡಿದು
ಕಟ್ಟಿದ ಬಟ್ಟೆ ಬಿಚ್ಚಲಾರದ
ನಾನು
ಕಾಣಿಸುವೆನೆ ಹೇಳು ಸಂಜಯ.





0 Comments