ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಹ್! ಪತ್ತೆಯಾಗಿಯೇ ಹೋಯಿತು..

playing piano in cuba

ಒಂದು ಪಿಯಾನೋ, ಹವಾನಕ್ಕಾಗಿ

ಬಹುರೂಪಿ 

playing piano in cuba

ಹಡಗು ಇನ್ನೇನು ಅಮೇರಿಕಾದ ಬಂದರನ್ನು ಬಿಡಲು ಸಜ್ಜಾಗಿತ್ತು. ಆಗ ಅವರು ಧಾವಿಸಿ ಬಂದರು. ಹಡಗಿನ ಮೂಲೆ ಮೂಲೆ ಶೋಧಿಸಿದರು. ಪ್ರಖರ ಬೆಳಕು ಚಿಮ್ಮಿತು. ಲೋಹ ಶೋಧಕಗಳು ಅತ್ತಿಂದಿತ್ತ ಇತ್ತಿಂದತ್ತ ಓಡಿಯಾಡಿತು. ತರಬೇತಿ ಪಡೆದ ಪೊಲೀಸ್ ನಾಯಿಗಳು ಬೊಗಳಿದವು. ವಾಹ್! ಪತ್ತೆಯಾಗಿಯೇ ಹೋಯಿತು. ಅಲ್ಲ, ಅದು ಭಯೋತ್ಪಾದಕನಲ್ಲ, ಕೆಟ್ಟು ಕೂತಿದ್ದ ಹತ್ತಾರು ಪಿಯಾನೋಗಳು. ಬಂದವರ ಕಣ್ಣು ಕೆಂಪಗಾಯಿತು. ತಕ್ಷಣವೇ ಪಿಯಾನೋಗಳನ್ನು ಹೊರಗಿಡಿ ಕತ್ತಲೆಯ ಕೋಣೆಗೆ ತಳ್ಳಿ ಎಂದು ಆಜ್ಞೆ ಹೊರಡಿಸಿದರು.

ಪಿಯಾನೋ, ಕೇವಲ ಪಿಯಾನೋ ಅಮೇರಿಕಾದ ಎದೆಯನ್ನು ನಡುಗಿಸಿಹಾಕಿತ್ತು. ಅಣ್ವಸ್ತ್ರಗಳನ್ನು ಹೊಂದಿದ್ದ ಜಗತ್ತಿನ ಸಾರ್ವಭೌನಂತೆ ಮೀಸೆ ತಿರುವುದಿದ್ದ ಅಮೇರಿಕಾ ಕೆಟ್ಟು ಹೋದ, ರಾಗ ನುಡಿಸಲಾಗದ ಪಿಯಾನೋಗಳನ್ನು ಕಂಡು ಬೆಚ್ಚಿಬಿದ್ದಿತ್ತು. ತನ್ನ ಒಂದೇ ಒಂದು ಕಣ್ಸನ್ನೆಯಲ್ಲಿ ಜಗತ್ತನ್ನು ಭಸ್ಮ ಮಾಡಿಹಾಕುತ್ತೇನೆ ಎಂಬ ಹಮ್ಮಿನಿಂದ ಬೀಗುತ್ತಿದ್ದ ಅದೇ ಅಮೇರಿಕಾ ಪಿಯಾನೋಗಳನ್ನು ಕಂಡು ತತ್ತರಿಸಿತ್ತು. ಹಡಗಿನತ್ತ ಧಾವಿಸಿ ಬಂದವರು ಸಾಮಾನ್ಯ ಪೋಲಿಸರಾಗಿರಲಿಲ್ಲ. ಯುದ್ಧಾಸ್ತ್ರ ಹಾಗೂ ಅಣು ತಂತ್ರಜ್ಷಾನ ವಿಭಾಗದ ಅಧಿಕಾರಿಗಳು ಹಿಡಿದುಹಾಕಿದ್ದು ಪಿಯಾನೋಗಳನ್ನು

piono shippingಅಮೇರಿಕಾದ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿದ್ದು 53 ವರ್ಷದ ಬೆನ್ ಥ್ರೆಹಾಫ್ಟ್. ಅಮೇರಿಕಾದ ವಿರುದ್ಧ ಆತ ಬಳಸಿದ್ದು ಪಿಯಾನೋ ಎಂಬ ಅಸ್ತ್ರವನ್ನು ಅಮೇರಿಕಾದಲ್ಲಿ ಪಾಠ ತಲೆಗೆ ಹತ್ತದೆ ಪಿಯಾನೋ ರಿಪೇರಿಗೆ ಶರಣಾದ ಬೆನ್ ಈಗ ಅಮೇರಿಕಾದೊಳಗಿದ್ದೇ ಅಮೇರಿಕಾದ ವಿರುದ್ಧ ಕತ್ತಿ ಝಳಪಿಸಲಾರಂಭಿಸಿದ್ದ. ಯಾವಕ್ಯೂಬಾದ ವಿರುದ್ಧ ಅಮೇರಿಕಾ ಯಾರೂ ಹೋಗಬಾರದು, ಏನನ್ನೂ ಕಳಿಸಬಾರದು, ಏನನ್ನೂ ತರಿಸಬಾರದು ಎಂದು ಕಟ್ಟಳೆಗಳನ್ನು ಹೇರಿತೋ ಅದೇ ಕ್ಯೂಬಾಗೆ ಪಿಯಾನೋಗಳನ್ನು ಕಳಿಸುವ ಮೂಲಕ ಅಮೇರಿಕಾದ ನೀತಿ ನಿಯಮ ಗಾಳಿಗೆ ತೂರಿದ್ದ. ಕ್ಯೂಬಾದ ಮೇಲೆ ದಿಗ್ಭಂದನ ಹೇರಿ ಅದನ್ನು ಉಸಿರಗಟ್ಟಿಸಿದ್ದ ಅಮೇರಿಕಾ ಈಗ ಪಿಯಾನೋ ಕಂಡು ಬೆಚ್ಚಿ ಕೂತಿತ್ತು. ಬೆನ್ ಥ್ರಹಾಫ್ಟ್ ಪಿಯಾನೋ ದಾಳಿ ಆರಂಭಿಸಿದ್ದ ಜಗತ್ತಿನ ಎಲ್ಲೆಡೆ ಎಲ್ಲೆಲ್ಲಿ ಕೆಟ್ಟು ಕೂತ ಪಿಯಾನೋಗಳಿದೆಯೋ ಅದನ್ನೆಲ್ಲಾ ಹೊತ್ತು ತಂದು ಕ್ಯೂಬಾ ರಾಜಧಾನಿ ಹವಾನಕ್ಕೆ ಕಳಿಸಲು ಆರಂಭಿಸಿದ್ದ. ನಾದದ ನದಿ ಹರಿಯುತ್ತಿದ್ದ ಕ್ಯೂಬಾದಲ್ಲಿ ಹಾಡು ಕುಣಿತ ನಿಲ್ಲದಿರಲು ಈ ಅಳಿಲೂ ಸಹ ಶ್ರಮಿಸುತ್ತಿತ್ತು.ಕ್ಯೂಬಾಗೆ ಪಿಯಾನೋ ಕಳಿಸುವ ಮೂಲಕ ಅಮೇರಿಕಾದ ದಿಗ್ಭಂಧನದ ನೀತಿಗಳನ್ನು ಜಗತ್ತು ನೋಡಿ ನಗುವಂತೆ ಮಾಡಿದ್ದ. ಒಂದು ಪಿಯಾನೋ, ಎರಡು ಪಿಯಾನೋ, ಮೂರು ಪಿಯಾನೋ . . . ‘ಸೆಂಡ್ ಎ ಪಿಯಾನೋ ಟು ಹವಾನಾ” ಚಳವಳಿಯಾಗಿ ರೂಪುಗೊಂಡಿತ್ತು ತುಕ್ಕು ಹಿಡಿದ, ತಂತಿ ಕಿತ್ತು ಹೋಗಿದ್ದ, ಗೆದ್ದಲು ತಿಂದು ಹಾಕುತ್ತಿದ್ದ ಪಿಯಾನೋಗಳು ಈಗ ಪ್ರತಿಭಟನೆಯ ಅಸ್ತ್ರಗಳಾಗಿದ್ದವು.

ಶಾಲೆಯಲ್ಲಿ ಓದು ತಲೆಗೆ ಹತ್ತುವುದಿಲ್ಲೆಂದು ಗೊತ್ತಾದ ತಕ್ಷಣ ಬೆನ್ ಥ್ರಹಾಫ್ಟ್ ಕೈಗೆ ರಿಪೇರಿ ಸಲಕರಣೆಗಳನ್ನೆತ್ತಿಕೊಂಡ. ಹಾಳಾದ ಪಿಯಾನೋಗಳ ಬೆನ್ನತ್ತಿದ್ದ. ನ್ಯೂಯಾಕ೵್ನ ಪ್ರಖ್ಯಾತ ಕಂಪನಿಗಳಲ್ಲಿ ಪಿಯಾನೋಗಳಿಗೆ ನಾದ ಕೂರಿಸುವುದನ್ನು ಕಲಿತ. ಆಗಲೇ ಆತನಿಗೆ ಪಿಯಾನೋ ವಾದಸಕ ವಿಕ್ಟರ್ ಚಾರ್ಲ್ಸ್  ಸಂಪರ್ಕ ಬಂತು. ಪಿಯಾನೋ ಜೊತೆಗೆ ಮಾರ್ಕ್ಸ್ವಾದದ ಪಾಠ. ವಿಕ್ಟರ್ ಸತ್ತಾಗ ಈತನಿಗಾಗಿ 28 ಸಾವಿರ ಡಾಲರ್ ಗಳನ್ನು ಬಿಟ್ಟು ಹೋಗಿದ್ದ. ಬೆನ್ ನೊಳ್ ಇದ್ದ ಕ್ಯೂಬಾಕನಸು ಮತ್ತೆ ತಲೆಎತ್ತಿತು. ಕೈಯಲ್ಲಿ ರಿಪೇರಿ ಸಲಕರಣೆಗಳ ಜೊತೆ ಅಡ್ಡಾಡುತ್ತಲೇ ಇದ್ದ ಬೆನ್ ಕ್ಯೂಬಾದ ಸಂಗೀತದ ಸಾಮಾಗ್ರಿ ತರಿಸುವ ಕಂಪನಿಗೆ ಈ ಹಿಂದೆಯೇ ನಿಮ್ಮಲ್ಲಿಗೆ ಪಿಯಾನೋ ರಿಪೇರಿ ಮಾಡಲು ಬರಲೇ ಎಂದು ಕೇಳಿದ್ದ. ಉತ್ತರ ಬಂದಿರಲಿಲ್ಲ. ಈಗ ಹಣ ಕೈ ಸೇರಿದ್ದೇ ಕ್ಯೂಬಾವನ್ನು ಹೇಗಾದರೂ ಮಾಡಿ ನೋಡಿಯೇ ಬಿಡಲು ಸಜ್ಜಾದ. ಅಮೇರಿಕನ್ನರಿಗೆ ಕ್ಯೂಬಾಗೆ ಹೋಗುವುದು ಎಂದರೆ ತಾವಾಗಿಯೇ ಜೈಲಿನ ಬಾಗಿಲು ಬಡಿದು ಒಳಗೆ ಹೋಗಿ ಕೂರುವುದು ಎಂದೇ ಅಥ೵. ಅಮೇರಿಕಾದ ನೀತಿ ಅಷ್ಟು ಕಠಿಣವಾಗಿತ್ತು. ಅಮೇರಿಕಾದ ನೀತಿ ಲೇವಡಿ ಮಾಡಲೆಂದೇ ಒಂದಷ್ಟು ಜನ ಒಟ್ಟಾದರು. ಕದ್ದು ಮುಚ್ಚಿ ಕ್ಯೂಬಾಗೆ ಹಾರಿಯೇ ಬಿಟ್ಟರು ‘ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ಬಂದಿಲ್ಲಗೆ ನೀ ನಿಂತು ದೀಪ ಹಚ್ಚಾ…’ ಎನ್ನುವ ದೇಶ ಅದು. ಬೆನ್ ಕ್ಯೂಬಾ ಪ್ರೀತಿಸುವವರ ದಂಡಿನಲ್ಲಿ ಒಂದಾಗಿ ಹೋದ. ಕ್ಯೂಬಾಗೆ ಕೊಡಲು ಬೆನ್ ಕೈಯಲ್ಲಿ ಏನಿತ್ತು-ಪಿಯಾನೋ ರಿಪೇರಿ ಮಾಡುವ ಸಲಕರಣೆ ಹೊರತು. ಅಮೇರಿಕಾ ಅದಕ್ಕೇ ಬೆಚ್ಚಿಬಿತ್ತು.

Cuba, Trinidad. Young girls practising classical piano in Casa Fischer. Photo CUBA1462. Copyright Christopher P Baker

ಕ್ಯೂಬಾ ಗೆ ನೀವು ಹೋಗುವಿರಾದರೆ ಗಿಟಾರ್ ತಂತಿಗಳನ್ನು ತೆಗೆದುಕೊಂಡು ಹೋಗಿ, ಕ್ಯೂಬನ್ನರಿಗೆ ನೀವು ಕೊಡಬಹುದಾದ ಉತ್ತಮ ಕೊಡುಗೆ ಅದು-ಕಾಲಲ್ಲಿ ಚಕ್ರ ಕಟ್ಟಿಕೊಂಡಿರುವವರ ಬೈಬಲ್ ಎಂದೇ ಹೆಸರಾದ ಲೋನ್ಲಿ ಪ್ಲಾನೆಟ್ ಪ್ರವಾಸಿ ಗೈಡ್ಗಳು ವೆಬ್ ಸೈಡ್ ನಲ್ಲಿ ಕಂಡ ಪತ್ರ ಇದು. ಸೈಮನ್ ಬರೆದಿದ್ದ ಪತ್ರ. ‘ಯಾವ ಮರ, ಇದು ಯಾವ ಕೋಗಿಲಾ…’ ಬೇಂದ್ರೆ ಕವನ ನೆನಪಾಯಿತು. ಕ್ಯೂಬಾಗೂ ಸೈಮನ್ ಗೂ ಯಾವ ನಂಟು. ಆದರೆ ಸೈಮನ್ ಗೆ ಗೊತ್ತಿತ್ತು. ಹಾಡು ಕುಣಿತಗಳನ್ನು ಉಸಿರಿನಂತೆ ಪ್ರೀತಿಸುವ ಕ್ಯೂಬಾದಲ್ಲಿ ಗಿಟಾರ್ ಗಳು ತಂತಿಗಳಿಲ್ಲದೆ ಇರಬಾರದು, ಪಿಯಾನೋ ಉಸಿರುಗಟ್ಟಿ ಮೂಲೆ ಸೇರಬಾರದು. ಅಮೇರಿಕಾದ ಉಸಿರು ಕಟ್ಟಿಸುವ ದಿಗ್ಭಂಧನದಿನಂದ ಕ್ಯೂಬಾದ ಸಕ್ಕರೆ ಮಾತ್ರ ತತ್ತರಿಸಿರಲಿಲ್ಲ ಪೆಟ್ರೋಲ್ ಇಲ್ಲದೆ ವಾಹನಗಳು ಮಾತ್ರ ಮೂಲೆ ಸೇರಿರಲಿಲ್ಲ. ಮಕ್ಕಳಿಗೆ ಮಾತ್ರ ಹಾಲು ಇಲ್ಲವಾಗಿರಲಿಲ್ಲ. ಆ ದಿಗ್ಬಂಧನ ಗಿಟಾರ್ ಗಳಿಂದ ತಂತಿಗಳನ್ನು ಇಲ್ಲವಾಗಿಸಿತ್ತು. ಪಿಯಾನೋಗಳನ್ನು ಗೆದ್ದಲು ತಿನ್ನುವಂತೆ ಮಾಡಿತ್ತು.

ಗಿಟಾರ್ ಗೆ ಬೇಕಾದದ್ದು ನೈಲಾನ್ ಅಥವಾ ಸ್ಟೀಲ್ ನ ತಂತಿ. ಕ್ಯೂಬಾದ ಮೇಲೆ ಹರಡಿದ ಅಮೇರಿಕಾದ ಕರಾಳ ನೆರಳು ಗಿಟಾರ್ ಗಳ ತಂತಿಗಳನ್ನೂ ಬಿಡದೆ ನುಂಗಿಹಾಕಿತ್ತು. ಆದರೆ ಉಸಿರೆತ್ತಿದರೆ ಹಾಡುವ, ಕುಣಿತವನ್ನೇ ನಡಿಗೆ ಮಾಡಿಕೊಂಡಿರುವ ಕ್ಯೂಬಾದಲ್ಲಿ ಅಮೇರಿಕಾಗೆ ಸೆಡ್ಡು ಹೊಡೆಯುವ ಬಯಕೆಗೆ ಮಿತಿ ಎಲ್ಲಿ? ಕ್ಯೂಬನ್ನರು ತಮ್ಮ ಗಿಟಾರ್ ಗಳಿಗೆ ಎಲೆಕ್ಟ್ರಿಕ್ ತಂತಿಗಳನ್ನೇ ಬಿಗಿದು ಅದರಿಂದಲೇ ನಾದ ಹೊಮ್ಮಿಸುತ್ತಿದ್ದರು.

ಬೆನ್ ಕ್ಯೂಬಾಗೆ ಕಾಲಿಟ್ಟಾಗ ಅಲ್ಲಿನ ಪಿಯಾನೋಗಳ ಸ್ಥಿತಿ ನೋಡಿದ ಕೆಟ್ಟು ಹೋದ ಪಿಯಾನೋಗಳನ್ನು ರಿಪೇರಿ ಮಾಡಲು ಬೇಕಾದ ಸಲಕರಣೆಗಳಿಲ್ಲ. ಹೊಸ ತಂತ್ರಜ್ಞಾನದ ಪರಿಚಯವಿಲ್ಲ. ಕೇಳಿದರೆ ಕೊಡುವವರಿಲ್ಲ. ಹೀಗಾಗಿ ದೇಶದ ಬಹುತೇಕ ಪಿಯಾನೋಗಳನ್ನು ಗೆದ್ದಲು ತಿನ್ನುತ್ತಿತ್ತು. ಕ್ಯೂಬಾದ ಮಹತ್ವದ ಪಿಯಾನೋ ವಾದಕನ ಮನೆಗೆ ಹೋದ ಬೆನ್ ಅವರ ಪಿಯಾನೋದ ಮೇಲೆ ಕೈಯಾಡಿಸಿದ ಪಿಯಾನೋದಲ್ಲಿ ಎಲ್ಲಾ ಮಣೆಗಳೂ ಇರಲೇ ಇಲ್ಲ. ಬೆನ್ ಸಂಗೀತಗಾರನತ್ತ ನೋಡಿದ. ಪ್ರಶ್ನೆ ಅರ್ಥವಾಯಿತೇನೋ?ಆತ ನಾವು ಇರುವ ಮಣೆಗಳನ್ನು ಬಳಸಿಯೇ ಸಂಗೀತ ಸೃಷ್ಟಿಸುತ್ತೇವೆ ಎಂದ. ಬೆನ್ ಮುಖದಲ್ಲಿ ನೋವಿನ ಗೆರೆ ಹಾದು ಹೋಯಿತು. ಸ ರಿ ಗ ಮ ಪ ದ ನಿ ಸ ದಲ್ಲಿ ಸ ಮಣೆಐಏ ಇಲ್ಲದೇ ಹೋದರೆ ಉಳಿದದ್ದಷ್ಟೇ ಸಂಗೀತ. ಅಮೇರಿಕಾ ಕ್ಯೂಬಾದ ಎದೆಯೊಳಗಿನ ಸ ರಿ ಗ ಮ ವನ್ನು ಕಿತ್ತು ತಿನ್ನುತ್ತಿತ್ತು. ಬೆನ್ಕ್ಯೂಬಾದ ತಂತಿ ಮೀಟುವ ನಿರ್ಧಾರ ಮಾಡಿದ.

piono in artಅಮೇರಿಕಾಗೆ ಮರಳಿದ ಬೆನ್ ತನ್ನ ಗೆಳೆಯರ ಬಳಿ ಇದ್ದ ಮೂಲೆ ಸೇರಿದ್ದ ಪಿಯಾನೋಗಳನ್ನೆಲ್ಲಾ ಸಂಗ್ರಹಿಸಿದ. ಸಿಕ್ಕಿದ್ದೆಲ್ಲಾ ಹಡಗು ಹತ್ತಿ ಕ್ಯೂಬಾದ ದಿಕ್ಕಿನೆಡೆಗೆ ಪಯಣ ಬೆಳೆಸಿತು. ಕ್ಯೂಬಾಗಾಗಿ ಪಿಯಾನೋ ಕೇಳುವ ಬೆನ್ ನ ಹಿಂದೆ ಹತ್ತು ಹಲವರು ನಿಂತರು. ನೋಡ ನೋಡುತ್ತಿದ್ದಂತೆಯೇ ಹವಾನಾಕ್ಕಾಗಿ ಪಿಯಾನೋ ಆಂದೋಲನವಾಗಿ ಬದಲಾಗ ತೊಡಗಿತು. ಅಮೇರಿಕಾದ ಮೂಲೆ ಮೂಲೆಯಿಂದ ಪಿಯಾನೋಗಳು ಬರಲಾರಂಭಿಸಿತು. ಆಂದೋಲನ ಗಡಿ ದಾಟಿತು. ಯುರೋಪ್ ದೇಶಗಳು ಹವಾನಾಕ್ಕಾಗಿ ಎಂದು ಕೇಳಿದೊಡನೆ ತಮ್ಮ ಬಳಿ ಇದ್ದ ಪಿಯಾನೋಗಳನ್ನು ಕಳಿಸಲಾರಂಭಿಸಿದರು. ಆಗ ಬಿತ್ತು ಅಮೇರಿಕಾದ ಕೆಂಗಣ್ಣು. ಮೊದಲು ತೆರಿಗೆ, ನಂತರ ಪಿಯಾನೋಗಳನ್ನು ಹಿಂಸೆಗೆ, ಮಾನವ ಹಕ್ಕುಗಳ ಉಲ್ಲಂಘನೆಗೆ ಬಳಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಲು ಕೇಳಿತು’ ಹಾಡು ಹರಡಬೇಕು, ಮಾತು ಮರೀಬೇಕು’ ಎಂದು ನಂಬಿದ್ದವರು ದಿಗ್ಭ್ರಾಂತರಾದರು. ಮಾನವ ಹಕ್ಕುಗಳನ್ನು ಜಗತ್ತಿನಾದ್ಯಂತ ದಮನ ಮಾಡುತ್ತಿರುವ ಅಮೇರಿಕಾ ಹಾಡನ್ನು ಮಾನವ ಹಕ್ಕುಗಳ ುಲ್ಲಂಗನೆಯಾಗಿ ನೋಡಿತು.

ಇಷ್ಟಕ್ಕೇ ಸುಮ್ಮನಾಗಲಿಲ್ಲ. ಕ್ಯೂಬಾದ ಪಿಯಾನೋಗಳನ್ನು ರಿಪೇರಿ ಮಾಡಿದ್ದಕ್ಕಾಗಿ ಬೆನ್ ನನ್ನು ಜೈಲಿಗೆ ತಳ್ಳುವ ಬೆದರಿಕೆ ಹಾಕಿತು. 13 ಲಕ್ಷ ಡಾಲರ್ ದಂಡ ವಿಧಿಸಿತು. ಬೆನ್ ನಿಮ್ಮ ಸಹವಾಸವೇ ಬೇಡ ಕ್ಯೂಬಾದಲ್ಲಿಯೇ ಇರುತ್ತೇನೆ ಎಂದ. ಅಮೇರಿಕಾದಲ್ಲಿನ ಮುಖವಾಡದ ಹಬ್ಬ- ಹಾಲೋವಿನ್-ನಂದು ಮುಖ ಮರೆಸಿಕೊಂಡು ಕ್ಯೂಬಾಗೆ ಪ್ರಯಾಣ ಬೆಳೆಸಿದ. ಮತ್ತೆ ವಾಪಸ್ ಬಂದರೂ ಅಮೇರಿಕಾ ದಂಡ ವಿಧಿಸುವ ಮಾತೆತ್ತಲಿಲ್ಲ.

ಈಗ ಪ್ರತೀ ಫೆಬ್ರವರಿ ಬಂತೆಂದರೆ ಕ್ಯೂಬಾದಲ್ಲಿ ಪಿಯಾನೋ ಜಾತ್ರೆಯೇ ನಡೆಯುತ್ತದೆ. ‘ಸೆಂಡ್ ಎ ಪಿಯಾನೋ ಟು ಹವಾನಾ’ ಸಂಘಟನೆಯ ತಂಡ ಕ್ಯೂಬಾಗೆ ಬಂದಿಳಿಯುತ್ತದೆ. ಹತ್ತು ದಿನಗಳ ಕಾಲ ಹವಾನಾದಲ್ಲಿ ಮಾತ್ರವಲ್ಲದೆ ದೇಶದ ಎಲ್ಲೆಡೆ ಸುತ್ತಿ ಕೆಟ್ಟಿರುವ ಪಿಯಾನೋಗಳನ್ನು ರಿಪೇರಿ ಮಾಡುತ್ತದೆ. ಹೊಸ ರಾಗ ಕಲಿಸುತ್ತದೆ.ಕ್ಯೂಬಾದ ಎಲ್ಲಾ ಶಾಲೆಗಳಿಗೆ ಭೇಟಿಕೊಟ್ಟು ತಾವು ಕೊಡುಗೆಯಾಗಿ ತಂದ ಪಿಯಾನೋಗಳನ್ನು ವಿತರಿಸುತ್ತದೆ. ಮತ್ತೆ ಮುಂದಿನ ಫೆಬ್ರವರಿಗೆ ಬರುವುದಾಗಿ ಮಾತು ಕೊಟ್ಟು ಮರಳುತ್ತದೆ.

piono stairsಯಾವ ದೇಶದಲ್ಲಿ ಸ್ನೇಹವನ್ನು ಅಪರಾಧವಾಗಿಸಲಾಗಿದೆಯೋ ಅದೇ ದೇಶದಿಂದ ಬರುವ ಈ ಸೇತುವೆಯ ಕೆಲಸಗಾರರನ್ನು ನೋಡಿ ಕ್ಯೂಬಾ ವಿಸ್ಮಿತವಾಗಿದೆ. ಗೆಳೆಯನ ಮನೆಗೆ ಪಿಯಾನೋದ ಸೇತುವೆ ಕಟ್ಟಲಾಗಿದೆ. ಹೀಗೆ ಕ್ಯೂಬಾಗೆ ಇದುವರೆಗೂ ಸುಮಾರು 200 ಪಿಯಾನೋಗಳು ಬಂದಿಳಿದಿವೆ. ನಾರಾರು ಪಿಯಾನೋಗಳು ಸಂಗೀತ ಹೊಮ್ಮಿಸುವ ಸ್ಥಿತಿಯಲ್ಲಿದೆ.

ಕ್ಯೂಬಾ ಈಗ ಈ ಚಳವಳಿಗೆ ಕ್ಯೂಬಾ ರಾಷ್ಟ್ರೀಯ ಕಲಾ ಶಿಕ್ಷಣ ವ್ಯವಸ್ಥೆಯ ಮನ್ನಣೆ ಕೊಟ್ಟು ಗೌರವಿಸಿದೆ. ಕ್ಯೂಬಾದಲ್ಲಿಯೇ ಇಬ್ಬರು ಬೀಡುಬಿಟ್ಟು ಇಡೀ ವರ್ಷ  ಸಂಗಿತ ಪೆಟ್ಟಿಗೆಯ ಕೊರಳು ಸರಿಮಾಡುತ್ತಲೇ ಇರುತ್ತಾರೆ. ಅಮೇರಿಕಾದ ಅನೇಕ ಸಂಗೀತ ತಜ್ಞರು ಈಗ ಕ್ಯೂಬಾಗೆ ಬರುತ್ತಾರೆ.  ಕಾರ್ಯಗಾರ ನಡೆಸುತ್ತಾರೆ. ಹೊಸ ಸಂಶೋಧನೆ ತಿಳಿಸುತ್ತಾರೆ. ಅದೇ ರೀತಿ ಅಮೇರಿಕಾಗೆ ಬರುವವರಿಗೆ ಮಾತ್ರ ಅಮೇರಿಕಾ ಬಾಗಿಲು ಮುಚ್ಚಿದೆ.

ಬೆನ್ ಈಗ ಕ್ಯೂಬಾದಲ್ಲಿ ಪಿಯಾನೋ ಕಾರ್ಖಾನೆ ಸ್ಥಾಪಿಸಿದ್ದಾರೆ. ಅದಕ್ಕೆ ಕೊಟ್ಟ ಹೆಸರು ಹೆಲ್ಮ್- ಥ್ರೆಹಾಫ್ಟ್ ಕಂಪನಿ. ಯಾವ ಹೆಲ್ಮ್ಸ್ ಕ್ಯೂಬಾಕ್ಕೆ ಹೋಗಬಾರದು, ಬರಬಾರದು, ಏನೂ ಕೊಡಬಾರದು, ತರಬಾರದು ಎಂದು ಶಾಸನ ಬರೆದನೋ ಆ ಸೆನೆಟರ್ ನ ಹೆಸರನ್ನೇ ಕಾರ್ಖಾನೆಗೆ ಇಡಲಾಗಿದೆ. ಪಿಯಾನೋಗಳು ಹೆಲ್ಮ್ಸ್ ನ ಕಾಯಿದೆಗಳನ್ನು ಅಣಕಿಸುತ್ತಿವೆ.

ಕವಿ ಜಿ ಎಸ್. ಎಸ್ ಹೇಳುತ್ತಾರೆ – ಹಾಡು ಹಳೆಯದಾದರೇನು?

‍ಲೇಖಕರು admin

21 March, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading