145 ಪುಸ್ತಕಗಳ ಸಾವು…

ರಹಮತ್‌ ತರೀಕೆರೆ

ನಮ್ಮೊಬ್ಬ ಮೇಷ್ಟ್ರು ಹೇಳುತ್ತಿದ್ದರು: ಕೆಲವು ಅಧ್ಯಾಪಕರ ಮನೆಯಲ್ಲಿ ಟಿವಿ ಫ್ರಿಜ್ಜು ವಾಶಿಂಗ್‍ಮಶಿನ್ ಎಸಿ ಇರುತ್ತವೆ, ಪುಸ್ತಕದ ಕಪಾಟು ಮಾತ್ರ ಇರುವುದಿಲ್ಲ ಎಂದು. ಇದಕ್ಕೆ ಪ್ರತಿಯಾದ ಇನ್ನೊಂದು ಅವಸ್ಥೆಯೂ ಇದೆ. ಕೆಲವರಲ್ಲಿ ಕಪಾಟಿರುತ್ತದೆ, ಪುಸ್ತಕಗಳೂ ತುಂಬಿರುತ್ತವೆ. ಈ ಬಗ್ಗೆ ಅವರೂ ಕೊಚ್ಚಿಕೊಳ್ಳುತ್ತಲೂ ಇರುತ್ತಾರೆ. ಆದರೆ  ಓದಿರುವುದಿಲ್ಲ. ಅವು ಅವರ ಪಾಲಿಗೆ ಪ್ರದರ್ಶನ ಸರಕು; ಶೋಕೇಸಿನ ಬೊಂಬೆ. 

ಈ ಅವಸ್ಥೆ ಅನೇಕ ಸಾರ್ವಜನಿಕ ಗ್ರಂಥಾಲಯಗಳ ಮಟ್ಟಿಗೂ ಅನ್ವಯವಾಗುತ್ತದೆ. ಗ್ರಂಥಪಾಲಕರು ‘ನಮ್ಮಲ್ಲಿ ಇಷ್ಟು ಸಾವಿರ ಪುಸ್ತಕಗಳಿವೆ, ಪುಸ್ತಕದ ಅಥವಾ ಲೇಖಕರ ಹೆಸರನ್ನು ಕಂಪ್ಯೂಟರಿನಲ್ಲಿ ಟೈಪುಮಾಡಿದರೆ ಅದು ಇದೆಯೊ ಇಲ್ಲವೊ, ಕೊಂಡೊಯ್ದಿದ್ದರೆ ಯಾವಾಗ ಮರಳುತ್ತದೆ ಎಂದೆಲ್ಲ ಗೊತ್ತಾಗುತ್ತದೆ’ ಎಂದು ಅಗ್ಗಳಿಕೆಯಿಂದ ಹೇಳುವರು. ಈ ತಾಂತ್ರಿಕ ಸೌಲಭ್ಯದ ಮೂಲಕ ಎಷ್ಟು ಓದುಗರು ಪುಸ್ತಕ ಪಡೆದುಕೊಂಡರು ಮತ್ತು ಓದಿದರು, ಓದಿದ್ದರ ಪರಿಣಾಮ ಏನು ಎಂದು ಹುಡುಕಿದರೆ ಸಿಗುವ ಉತ್ತರ ನಿರಾಶೆ ಬರಿಸುತ್ತದೆ.

ನನಗೆ ಈ ಅನುಭವ ಮುಂಬೈನ ಏಶಿಯಾಟಿಕ್ ಸೊಸೈಟಿ, ಮುಂಬೈ ವಿಶ್ವವಿದ್ಯಾಲಯದ ಲೈಬ್ರರಿ, ಪುಣೆಯ ಭಂಡಾರ್ಕರ್ ಲೈಬ್ರರಿ, ದೆಹಲಿಯ ತೀನ್‍ಮೂರ್ತಿ ಭವನದ ಗ್ರಂಥಾಲಯ, ಉಸ್ಮಾನಿಯ ವಿಶ್ವವಿದ್ಯಾಲಯದ ಗ್ರಂಥಾಲಯ, ಕೊಲ್ಕತ್ತೆಯ ನ್ಯಾಶನಲ್ ಲೈಬ್ರರಿ- ಮುಂತಾದ ಹಳೆಯ ಗ್ರಂಥಾಲಯಗಳಿಗೆ ಹೋದಾಗ ಆಗಿದೆ.

ನ್ಯಾಶನಲ್ ಲೈಬ್ರರಿಯ ಕನ್ನಡ ವಿಭಾಗದಲ್ಲಿದ್ದ ಕುಮಾರಪ್ಪನವರು ಬಂದವರಿಗೆಲ್ಲ ಕರ್ನಾಟಕ ಸಂಬಂಧಿ ಗ್ರಂಥಗಳನ್ನು ತೋರಿಸುವ ಪರಿಪಾಠ ಇರಿಸಿಕೊಂಡಿದ್ದರು. ಹೆಚ್ಚಿನವು ಧೂಳುಹಿಡಿದು, ಮುಟ್ಟಿದರೆ ಮುರಿವಂತೆ ಕೆಂಬಣ್ಣಪಡೆದು, ಜೋಲುಮುಖ ಹಾಕಿಕೊಂಡು ಮೃತ್ಯುಧ್ಯಾನದಲ್ಲಿರುವ ಮುದುಕರಂತೆ ಕಪಾಟಿನಲ್ಲಿ ಕೂತಿದ್ದವು. ಇವನ್ನು ಎಷ್ಟು ಜನ ಬಳಸಿದ್ದಾರೆ ಎಂದು ಕೇಳಿದರೆ ಹುಳ್ಳನಗೆ ನಗುತ್ತಿದ್ದರು. ಈ ಪ್ರತಿಷ್ಠಿತ ಸಾರ್ವಜನಿಕ ಗ್ರಂಥಾಲಯಗಳಿಗೆ ಓದುಗರೇ ಬರುವುದಿಲ್ಲ ಎಂತಲ್ಲ. ಆದರೆ  ಗ್ರಂಥಾಲಯದ ಬೃಹತ್ ವ್ಯವಸ್ಥೆಗೂ ಅದರ ಓದುಗರಿಗೂ ತಾಳೆಯಾಗುವುದಿಲ್ಲ. ಇದಕ್ಕೆ ಹೋಲಿಸಿದರೆ, ಜನಪ್ರಿಯ ಕಾದಂಬರಿ ಓದಲು ಜನ ಬರುವ ಸ್ಥಳೀಯ ಗ್ರಂಥಾಲಯಗಳೇ ವಾಸಿ.

ಪ್ರತಿಷ್ಠಿತ ಗ್ರಂಥಾಲಯಗಳು ಓದುಗರಿಂದ ಗಿಜಿಗುಡುತ್ತಿರಬೇಕು ಎಂಬ ನಿರೀಕ್ಷೆಯೇ ಬಹುಶಃ  ತಪ್ಪು. ‘ಒಂದು ಗ್ರಂಥ ತನ್ನ ಓದುಗರಿಗಾಗಿ ವರುಷಗಟ್ಟಲೆ ಕಾಯುತ್ತಿರುತ್ತದೆ. ಅಂತಹ ಒಬ್ಬ ಓದುಗರಿಗೆ ಉಪಯುಕ್ತವಾದರೆ ಸಾಕು, ಸಾರ್ಥಕವಾದಂತೆ’ ಎಂಬ ವಾದವನ್ನೂ ಹೂಡಬಹುದು. ಆದರೆ ಪುಸ್ತಕಗಳಿದ್ದೂ ಅವು ಹೆಚ್ಚು ಜನರಿಗೆ ಉಪಯೋಗವಾಗದಿದ್ದರೆ ಗ್ರಂಥಾಲಯ ಶವಾಗಾರವಿದ್ದಂತೆ. ಶವಾಗಾರದಲ್ಲಿ ದೇಹಗಳಿರುತ್ತವೆ. ಚಲಿಸುವುದಿಲ್ಲ, ಮಾತಾಡುವುದಿಲ್ಲ. ಮಾತಾಡಿದವರಿಗೆ ಪ್ರತಿಕ್ರಿಯಿಸುವುದಿಲ್ಲ. ಕೆಲವೊಮ್ಮೆ ಗ್ರಂಥಾಲಯದಲ್ಲಿ ಕಳುವು ಮಾಡಿದ ವರದಿ ಬರುವುದುಂಟು. ಅದು ಅಪರಾಧ. ಆದರೆ ಪುಸ್ತಕಗಳನ್ನು ಕೇಳುವವರಿಲ್ಲದ ದಿನಗಳಲ್ಲಿ ಅವನ್ನು ಕದ್ದು ಕೊಂಡೊಯ್ಯುವವರೂ ಇದ್ದಾರೆಯೇ ಎಂದು ವಿಸ್ಮಯವಾಗುತ್ತದೆ.

ಯಾಕೆ ಹೀಗೆ? ಗ್ರಂಥಾಲಯಗಳನ್ನು ಓದುಗ ಸ್ನೇಹಿಯಾಗಿಸದೆ ಯಾಂತ್ರಿಕ ನಿಯಮಗಳಿಂದ ನಿಯಂತ್ರಿಸುತ್ತಿರುವ ವ್ಯವಸ್ಥೆಯ ದೋಷವೇ? ಪುಸ್ತಕವಿದ್ದರೂ ಕೂಡಲೇ ಸಿಗುವಂತೆ ಮಾಡಲಾಗದ ಗ್ರಂಥಾಲಯಗಳ ಸೋಮಾರಿತನವೇ? ಬೇಕಾದ್ದು ಬೇಡಾದ್ದು ತುಂಬಿಕೊಂಡು ಗೋದಾಮು ಆಗಿವೆಯೇ ಅವು? ಓದಿನ ಹುಚ್ಚುಳ್ಳ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆಯೇ? ಪರ್ಯಾಯ ಗ್ರಂಥಾಲಯಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿದ್ದು, ಹಾಲಿ ಗ್ರಂಥಾಲಯಗಳು ಅಪ್ರಸ್ತುತ ಆಗುತ್ತಿವೆಯೇ?

 ಕೊನೆಯ ಪ್ರಶ್ನೆಯಲ್ಲಿ ಹುರುಳಿದೆ. ಸಾಮಾನ್ಯ ಜ್ಞಾನದ ವಿಷಯದಲ್ಲಿ ಕೋಶಗಳಿಂದ ಪಡೆಯಬೇಕಾದ ತಿಳಿವನ್ನು ಅಂತರ್‍ಜಾಲದಲ್ಲಿ ಸುಲಭವಾಗಿ ಪಡೆವ ವ್ಯವಸ್ಥೆ ಬಂದಿದೆ. ಗ್ರಂಥಾಲಯಕ್ಕೆ ಹೋಗಿ, ಸಾಲಾಗಿ ಜೋಡಿಸಿರುವ ವಿಶ್ವಕೋಶಗಳನ್ನು ಕಪಾಟಿನಿಂದ ಮೆಲ್ಲಗೆ ಇಳಿಸಿ, ಧೂಳನ್ನು ಕೊಡವಿ, ಪುಟ ತಿರುಗಿಸಿ, ಅಕ್ಷರಾನುಕ್ರಮದಲ್ಲಿ ಸಂಬಂಧಪಟ್ಟ ನಮೂದಿಗೆ ಹೋಗಿ, ಓದಿ ಟಿಪ್ಪಣಿ ಮಾಡಿಕೊಳ್ಳುವ ದಿನ ಕಡಿಮೆಯಾಗುತ್ತಿವೆ. ಸರಕ್ಕನೆ ಗೂಗಲ್ ಸರ್ಚಿಗೆ ಹೋಗಿ, ಬೇಕಾದ ಸಂಗತಿಯ ಹೆಸರನ್ನು ಟೈಪುಮಾಡಿ ಬ್ರೌಸ್ ಮಾಡುವ ನಮಗೆ ಮುದ್ರಿತಕೋಶಗಳು ಅನಿವಾರ್ಯವಲ್ಲ.

ಒಮ್ಮೆ  ನನ್ನ ಪುಸ್ತಕಗಳನ್ನು ಧೂಳು ಝಾಡಿಸಿ, ಬೇಡಾದ ಪುಸ್ತಕ ತೆಗೆದು ಪ್ರಕಾರವಾರು ಜೋಡಿಸುವ ವಾರ್ಷಿಕ ಕಾರ್ಯಾಚರಣೆಯಲ್ಲಿದ್ದಾಗ, ಅತಿಹೆಚ್ಚು ಬಳಸಿರುವ ಪುಸ್ತಕ ಯಾವುದು ಎಂದು ಪ್ರಶ್ನೆ ಮೂಡಿತು. ಕೆಲವನ್ನು ಓದಲು ಆಸಕ್ತಿಯೆ ಹುಟ್ಟಿಲ್ಲ ಅಥವಾ ಗಳಿಗೆ ಕೂಡಿಬಂದಿಲ್ಲ; ಕೆಲವನ್ನು ಓದುತ್ತ ಅರ್ಧಕ್ಕೆ ಸಾಕಾಗಿ ನಿಲ್ಲಿಸಿದ್ದೇನೆ; ಕೆಲವನ್ನು ಮುಗಿಸಿದ್ದು, ಮತ್ತೊಮ್ಮೆ ಓದುವ ತುಡಿತ ಹುಟ್ಟುತ್ತಿಲ್ಲ.

ಕೆಲವು ಮಾತ್ರ ಮತ್ತೆ ಮತ್ತೆ ಭೇಟಿ ಕೊಡಬೇಕು ಅನಿಸುವಂತೆ ಸೆಳೆಯುತ್ತವೆ. ಮತ್ತೆ ಕೆಲವಿವೆ- ಅವನ್ನು ಒಂದು ಬೈಠಕ್ಕಿನಲ್ಲಿ ಮುಗಿಸದೆ ಅಗತ್ಯ ಬಿದ್ದಾಗಲೆಲ್ಲ ಮತ್ತೆಮತ್ತೆ ಹೊಕ್ಕಿದ್ದೇನೆ. ಇವುಗಳಲ್ಲಿ ವಿಶ್ವಕೋಶ ಮತ್ತು ನಿಘಂಟು ಬರುತ್ತವೆ. ಇದರಲ್ಲೆಲ್ಲ ಅತಿಹೆಚ್ಚು ಬಳಕೆಯಾಗಿರುವುದು ಮೈಸೂರು ವಿಶ್ವವಿದ್ಯಾಲಯದ ಕರ್ನಾಟಕ ವಿಷಯ ವಿಶ್ವಕೋಶ- ಒಂದೂ ಮುಕ್ಕಾಲು ಸಾವಿರ ಪುಟಗಳ ಹೆಬ್ಬೊತ್ತಿಗೆ.

ಇದನ್ನು ಕೊಂಡ ಗಳಿಗೆ ನೆನಪಾಗುತ್ತಿದೆ. 1981ನೇ ಇಸವಿ. ಮೈಸೂರಿನಲ್ಲಿ ಕಲಿಯುತ್ತಿದ್ದೆ. ಬಿಡುಗಡೆ ಮಾಡಿದವರು ಮಾಸ್ತಿ. ಕೋಶಕ್ಕೆ ಸುತ್ತಿದ್ದ ಬಣ್ಣದ ಕವಚ ಬಿಚ್ಚಿ ಅದನ್ನು ಎರಡೂ ಕೈಯಲ್ಲಿ ಎತ್ತಿಹಿಡಿದು ಸಭಿಕರಿಗೆ ತೋರಿಸಿದರು. ಆಗ ಅವರು ಎಲ್ಲಿ ಕೋಶವನ್ನು ಬೀಳಿಸುವರೊ ಎಂದು ಪಕ್ಕದಲ್ಲೇ ಇದ್ದ ಹಾ.ಮಾ.ನಾಯಕರು ಕೈಗಳನ್ನು ಕೆಳಹಿಡಿದರು. ನನಗಿನ್ನೂ ಕಸುವಿದೆ ಎಂದು ರುಜುವಾತು ಮಾಡುವಂತೆ ಐದು ಕೆಜಿ ತಿಣ್ಣವಿರುವ ಸದರಿ ಕೋಶವನ್ನು ಒಂದೇ ಕೈಯಲ್ಲೆತ್ತಿ ಮಾಸ್ತಿ ಸಭೆಯ ಮುಂದೆ ಹಿಡಿದರು. ಜನ ಚಪ್ಪಾಳೆ ತಟ್ಟಿತು-ಗ್ರಂಥ ಬಿಡುಗಡೆಯಾಯಿತು ಎನ್ನುವುದಕ್ಕಿಂತ ಮಾಸ್ತಿಯವರಿಗೆ ಇಷ್ಟೊಂದು ತ್ರಾಣವಿದೆಯಲ್ಲ ಎಂದು. ನಾನು ಮನೆಯಿಂದ ಬರುತ್ತಿದ್ದ ಹಣದಲ್ಲಿ ಕಷ್ಟಪಟ್ಟು ಉಳಿಸಿದ 50 ರೂಪಾಯಿ ಹೊಂಚಿ, ಶೇಕಡಾ 50ರ ರಿಯಾಯಿತಿಯಲ್ಲಿ ಅದನ್ನು ಖರೀದಿಸಿದೆ.

ಈ ಕೋಶ ನಾನು ಕರ್ನಾಟಕದ ತಿರುಗಾಟಕೆಂದು ಹೊರಡುವಾಗೆಲ್ಲ ಹಾದಿತೋರುಗನಾಗಿ ಕೈದೀವಿಗೆಯಾಗಿ ನೀಲಿನಕ್ಷೆಯಾಗಿ ಒದಗಿತು.  ಕ್ಷೇತ್ರಕಾರ್ಯಕ್ಕೆ ಹೊರಡುವ ಮುನ್ನ, ಇದನ್ನು ತೆರೆದು ಹೋಗಬೇಕಿರುವ ಸ್ಥಳದ ಆಸುಪಾಸಿನ ವಿವರಗಳನ್ನೆಲ್ಲ ಗಮನಿಸುತ್ತೇನೆ. ಸುರಪುರದ ಮೊಹರಂ ಗಾಯಕರನ್ನು ನೋಡಲು ಹೊರಟರೆ, ಅಲ್ಲಿರುವ ವೇಣುಗೋಪಾಲ ಗುಡಿ, ನಾಯಕರ ಅರಮನೆ, ಮೆಡೊಸ್ ಟೇಲರನ ಬಂಗಲೆ, ತಿಮ್ಮಾಪುರ-ರಂಗಂಪೇಟೆಯ ಪ್ರಾಚೀನ ಕವಿಗಳು, ಈಗಿರುವ ಆಧುನಿಕ ಕವಿಗಳು, ಅಲ್ಲಿನ ಜನಪದ ಕಲೆಗಳು; ಹಾದಿಯಲ್ಲಿ ಹತ್ತುವ ತಿಂತಿಣಿ ಮೋನಪ್ಪನ ಗದ್ದಿಗೆ, ಕೃಷ್ಣಾನದಿ, ಜಲದುರ್ಗ, ಛಾಯಾಭಗವತಿ ಗುಡಿ- ಇತ್ಯಾದಿ ನಮೂದುಗಳನ್ನು ಗಮನಿಸುತ್ತೇನೆ.

ಈ ಗಮನವು ನನ್ನ ತಿರುಗಾಟಕ್ಕೆ ಒಂದು ಚೌಕಟ್ಟನ್ನು ಕಟ್ಟಿಕೊಡುತ್ತದೆ. ಇದರಿಂದ ಮುದ್ದಾಮಾಗಿ ಹುಡುಕುವ ವಿಷಯ ಮಾತ್ರವಲ್ಲದೆ, ಕರ್ನಾಟಕ ಸಂಸ್ಕೃತಿ ಅರಿಯಲು ಅಗತ್ಯವಿರುವ ಇತರೆ ಸಂಗತಿಗಳೂ ಸಿಗುತ್ತವೆ. ಹುಲ್ಲು ತರಲು ಹೊಲಕ್ಕೆ ಹೋದವರು, ಮಡಿಲಿನಲ್ಲಿ ಬೆರಕೆಸೊಪ್ಪನ್ನು ಬಿಡಿಸಿಕೊಂಡು, ಜತೆಯಲ್ಲಿರುವ ಕುರಿಯನ್ನು ಮೇಯಿಸಿಕೊಂಡು, ಸಾಧ್ಯವಾದರೆ ಉರುವಲಿಗೆ ಬೇಕಾದ ಪುಳ್ಳೆಗಳನ್ನು ಹಿಡಿದುಕೊಂಡು ಬರುವಂತೆ ತಿರುಗಾಟ ಸಂಪನ್ನವಾಗುತ್ತದೆ.

ಈಗಲೂ ತುಸುಭಾರವಾದ ಈ ಕೋಶವನ್ನು ಎತ್ತಿಕೊಂಡು ಬೇಕಾದ ವಿಷಯಗಳಿಗೆ ಹೋಗುತ್ತೇನೆ. ಆದರೆ ಇದಕ್ಕೆ ಎಷ್ಟೊಂದು ಮಹತ್ವದ ಮಾಹಿತಿ  ಸೇರಬೇಕಾಗಿದೆ ಎಂದು ಮನ ಕೊರಗುತ್ತದೆ. ಹಾಗೆಕಂಡರೆ ಕೋಶಗಳು ಎಂದೂ ಪರಿಪೂರ್ಣಗೊಳ್ಳುವುದಿಲ್ಲ; ಆ ದಿಕ್ಕಿಗೆ ಚಲಿಸಬಹುದೇ ಹೊರತು, ಅದನ್ನು ಮುಟ್ಟಲು ಸಾಧ್ಯವಿಲ್ಲ. ಮುಟ್ಟಲೂ ಬಾರದು. ಕಾಲಕಾಲಕ್ಕೆ ಜರುಗುವ ಸೇರ್ಪಡೆ ಮೂಲಕ ಅವು ಬೆಳೆಯುತ್ತವೆ. ಆದರೆ ಮೂರು ದಶಕಗಳಾದರೂ ಈ ಕೋಶಕ್ಕೆ ಪರಿಷ್ಕಾರ ಭಾಗ್ಯ ಸಿಕ್ಕಿಲ್ಲ. ಸಿಗುವುದು ಕಷ್ಟವೂ ಇದೆ. ಯಾಕೆಂದರೆ ತಂತ್ರಜ್ಞಾನವು, ಮುದ್ರಿತ ಕೋಶಗಳಿಗೆ ಕೊನೆ ಹಾಡುತ್ತಿದೆ. ಬ್ರಿಟಾನಿಕಾ ವಿಶ್ವಕೋಶ ಮುದ್ರಿತ ರೂಪದ ಪ್ರಕಟಣೆಯನ್ನು ನಿಲ್ಲಿಸಿದೆ. 

ಈಗ ಪ್ರಕಟಿತ ಕೋಶಗಳನ್ನು ಕೊಂಡುತಂದು, ಮನೆಯಲ್ಲಿರಿಸಿ, ಧೂಳು ಝಾಡಿಸುತ್ತ ಉಪಚಾರ ಮಾಡಲು ಹೊಸ ತಲೆಮಾರು ತಯಾರಿಲ್ಲ. ಒಮ್ಮೆ ದೂರ ಊರಲ್ಲಿರುವ ಗೆಳೆಯರೊಬ್ಬರಿಗೆ ನನ್ನ ಹೊಸ ಪುಸ್ತಕ ಕಳಿಸಲೇ ಎಂದು ಕೇಳಿದೆ. ಅವರು ‘ಅಯ್ಯೊ ಮಾರಾಯ! ಅದನ್ನೆಲ್ಲಿ ಇಟ್ಟುಕೊಳ್ಳುವುದು? ಮನೆಯಲ್ಲಿ ನಮಗೇ ಜಾಗವಿಲ್ಲ. ಪಿಡಿಎಫ್ ಕಳಿಸು ಸಾಕು’ ಎಂದರು. ಇದಕ್ಕೆ ತಕ್ಕಂತೆ ತಂತ್ರಜ್ಞಾನವು ಹೊಸರೂಪದಲ್ಲಿ ಸಾಹಿತ್ಯವನ್ನು ಒದಗಿಸುತ್ತಿದೆ. ನಿನ್ನೆ ಹುಟ್ಟಿದ ಶಬ್ದವೊಂದು ಇಂದು ಆನ್‍ಲೈನ್ ನಿಘಂಟಿಗೆ ಸೇರಿಬಿಡುತ್ತದೆ. ಹೀಗಾಗಿ ಯಾವುದೊ ಕಾಲದ ಮಾಹಿತಿ ಇಟ್ಟುಕೊಂಡು ಕಾಲಸ್ಪರ್ಧೆಯನ್ನು ಎದುರಿಸಲಾಗದೆ ಮುದ್ರಿತ ಕೋಶಗಳು ನಮ್ಮೊಡನಿದ್ದೂ ನಮ್ಮಂತಾಗದ ಇಕ್ಕಟ್ಟನ್ನು ಎದುರಿಸುತ್ತಿವೆ.

ಕಾವ್ಯ ಕತೆ ಕಾದಂಬರಿಗಳ ವಿಷಯದಲ್ಲಿ ಹೀಗಾಗದು. ಅವನ್ನು ತೆರೆಯ ಮೇಲೆ ಬಹಳ ಹೊತ್ತು ಓದಲಾಗುವುದಿಲ್ಲ. ಮುದ್ರಿತ ರೂಪವೇ ಹೆಚ್ಚು ಆಪ್ತ. ಈಗೀಗ ಅವೂ ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತಿವೆ. ಜರೂರಿದ್ದವರು ಡೌನ್‍ಲೋಡ್ ಮಾಡಿಕೊಳ್ಳಬಹುದು. ತಂತ್ರಜ್ಞಾನವು ಮುದ್ರಿತ ಪುಸ್ತಕದ ಅವಕಾಶಗಳನ್ನು ಕ್ಷೀಣಗೊಳಿಸುತ್ತಿದೆ. ಇಷ್ಟಾದರೂ ಎಲ್ಲಕ್ಕೂ ವೆಬ್‍ಸೈಟುಗಳನ್ನು, ಇ-ಪಠ್ಯ, ಇ-ಗ್ರಂಥಾಲಯಗಳನ್ನು ಪೂರ್ತಿ ಅವಲಂಬಿಸಲು ಸಾಧ್ಯವಿಲ್ಲ. ಮುದ್ರಿತ ಹೊತ್ತಗೆಗಳನ್ನು ಬೀಳ್ಕೊಡುವ ದಿನವಿನ್ನೂ ಬಂದಿಲ್ಲ.

ಪುಸ್ತಕ ರಚನೆ, ಪ್ರಕಾಶನ, ವಿತರಣೆ ಹಾಗೂ ಸಂಗ್ರಹಗಳ ತರ್ಕದ ತುದಿಯಲ್ಲಿ, ಅವು ಎಲ್ಲಿಗೆ ಹೋಗುತ್ತವೆ, ಯಾರು ಓದುತ್ತಾರೆ, ಎಷ್ಟು ಮಂದಿ ಓದುತ್ತಾರೆ ಎನ್ನುವ ಪ್ರಶ್ನೆ ಬಹಳ ಮುಖ್ಯ. ಗ್ರಂಥಾಲಯಗಳಲ್ಲಿ ಪುಸ್ತಕ ತುಳುಕುತ್ತಿದ್ದರೆ ಅಥವಾ ಜನ ಅವನ್ನು ಓದುತ್ತಿದ್ದರೆ, ಅವು ಎಂಥ ಪುಸ್ತಕಗಳು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು. 

ನಾಡಿನ ಸಾಂಸ್ಕೃತಿಕ ಹದುಳವನ್ನು ಪರೀಕ್ಷಿಸಲು ಅಲ್ಲಿರುವ ಗ್ರಂಥಾಲಯಗಳೂ ಮಾನದಂಡ. ಅವು ಬಿಕೊ ಎನಿಸಿದರೂ ಪರವಾಗಿಲ್ಲ, ಲೋಕದ ಹದುಳ ಕದಡುವ ಪುಸ್ತಕಗಳಿಂದ ಕೂಡಿರಬಾರದು. ಪುಸ್ತಕ ಓದುಗರ ಸಂವೇದನೆಯನ್ನು ಸೂಕ್ಷ್ಮಗೊಳಿಸಬೇಕು, ಬದುಕಿನ ಪ್ರೀತಿಯನ್ನು ಹೆಚ್ಚಿಸಬೇಕು, ಪ್ರಶ್ನೆಗಳನ್ನು ಹುಟ್ಟಿಸಬೇಕು, ಮನುಷ್ಯತ್ವವನ್ನು ಸಾಯಿಸಬಾರದು. ಮನುಷ್ಯತ್ವ ಸಾಯಿಸುವ ಪುಸ್ತಕಗಳೂ ಇರುವುದರಿಂದ ಈ ಎಚ್ಚರಿಕೆ.

‍ಲೇಖಕರು Avadhi

April 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಾಸುದೇವ ಶರ್ಮಾ

    ಭಾರೀ ಸೊಗಸಾದ ಪರಿಚಯ. ಕರ್ನಾಟಕ ವಿಷಯ ವಿಶ್ವಕೋಶವನ್ನು ನಾನು‌ಕೊಂಡದ್ದು‌೧೯೮೮ರಲ್ಲಿ. ಈ ಕೋಶವನ್ನು‌ ಮೊದಲು ಕಂಡದ್ದು ಮಹಾರಾಜಾ ಕಾಲೇಜಿನಲ್ಲಿ ಎರಡನೇ‌ ವರ್ಷದ ವಿದ್ಯಾರ್ಥಿಯಾಗಿದ್ದಾಗ (೧೯೮೬). ಆಗ ಅಷ್ಟೊಂದು ದುಡ್ಡು ಕೈಯಲ್ಲಿರಲಿಲ್ಲ. ಅಕ್ಕಂದಿರು ನಾಗರಪಂಚಮಿಯಲ್ಲಿ ಕೊಟ್ಟ ಉಡುಗೊರೆ ಹಣ ಈ ಪುಸ್ತಕದ ರೂಪತಾಳಿ ನನ್ನ ಸಂಗ್ರಹಕ್ಕೆ ಬಂತು. ಅದೆಷ್ಟು ವಿವರಗಳು ನಮ್ಮೆದುರು ಹರಡಿತ್ತು.

    ನನ್ನ ಹತ್ತಿರ ಈ ಕೋಶ ಇದೆ ಎಂದು ೧೯೮೯ರಲ್ಲಿ ‌ಒಮ್ಮೆ ಪ್ರಜಾವಾಣಿಯ ಗ್ರಂಥಾಲಯದಲ್ಲಿ ಜೊತೆಯಾಗಿ ಅಧ್ಯಯನ ‌ಮಾಡುತ್ತಿದ್ದಾಗ ಮುರಳೀಧರ ಖಜಾನೆಗೆ ಹೇಳಿದೆ. ತೋರಿದೆ. ಅವ ಒಯ್ದೇಬಿಟ್ಟ. ಅಣ್ಣಾ ಅದನ್ನು ಹಿಂದಕ್ಕೆ ಕೊಡಯ್ಯಾ ಎಂದಾಗ ಅದರ ಮೌಲ್ಯ‌ ಕೊಟ್ಟು ಹೊಸತು ತೆಗೆದುಕೋ ಎಂದುಬಿಟ್ಟ! ಪುಣ್ಯವಶಾತ್ ಈ ಕೋಶದ ಪ್ರತಿಗಳು‌ ಮುಗಿಯುವ ಮೊದಲು ಕೊಳ್ಳಲಾಯಿತು!‌‌‌

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: