ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೌಸ್ ವೈಫ್ ನ ಕಿಚ್ಚನ್ ಲೈಫು

ಚಂದ್ರಪ್ರಭ ಕಠಾರಿ

ನಡುಮನೆಯ ನೆಲದಾಳದಲಿ
ಬೇರು ಬಿಟ್ಟು
ಪುರುಷಾಹಂಕಾರದಲಿ ಕೊಬ್ಬಿ
ಬೆಳೆದ ರೆಂಬೆ ಕೊಂಬೆಗಳು
ಅಡುಗೆ ಕೋಣೆ
ಬೆಡ್ ರೂಮು
ವರಾಂಡ, ಬಚ್ಚಲ್ಲು
ಮನೆಯ ತುಂಬೆಲ್ಲಾ
ಹಬ್ಬಿ ಹರಡಿ
ಇಳೆಗೆ ಇಳೆ ಬಿದ್ದಲ್ಲಿ
ಮತ್ತೆ ಬೇರೂರಿದ
ಆಲದ ಮರದ ಬೀಳಲು
ಶತಮಾನದ ಗೋಜಲು.

ಬಿತ್ತಿ ಬೆಳೆಸಿದ
ಅಪ್ಪಂದಿರ ಮುಖದ
ಸನಾತನ ಸುಕ್ಕುಗಳು.
ಅದಕೆ ಜೋತು ಬಿದ್ದ
ಮಗಂದಿರ ಕುಪಿತ
ತದ್ರೂಪಿ ಮುಖಗಳು.

ಪಿತೃಪಕ್ಷದ ಅಮ್ಮ
ಕಿವಿಯಲ್ಲಿ ಊದಿದ
ಶಂಖದಾ ನಾದದ
ತರಂಗಾಂತರ
ಕನಸನೊತ್ತ ಕಣ್ಣುಗಳಿಗೆ
ಬಿದ್ದ ಸಂಸಾರದ
ಮಂಕುಬೂದಿ.

ತವರು ಮನೆಯ ಮಾನ
ಮಾಯರ್ದೆಗೆ
ನಾಚಿಕೆ ಅಂಜಿ

ಆಸೆಯ ಸಲ್ವಾರ್ ಕಮೀಜ್
ಮಿಡಿ, ಪ್ಯಾಂಟು ಶರಟು
ಉಡಿಗೆ ತೊಡಿಗೆಗಳ
ನಿರಾಶೆಯ ಕಣ್ಣೀರ ದಾ(ಧಾ)ರದಲಿ
ಕಟ್ಟಿ ಅಪ್ಪನ ಹಳೇ ಸೂಟುಕೇಸಿನಲಿ
ಅಟ್ಟಕ್ಕೆಸೆದು
ಉಟ್ಟ ಸೀರೆ ಹದಿನೆಂಟು
ಮೊಳದ್ದು.

ಬಾಬ್ ಕಟ್ ಬಾಯ್ ಕಟ್
ಮಾಡಿಸಿದ ಕೂದಲುಗಳ
ಅಮ್ಮನ ಸೆರಗಲ್ಲಿ ಮುಡಿ ಕಟ್ಟಿ
ಬೋಳು ಹಣೆಗೆ
ಇಟ್ಟ ಕುಂಕುಮ ರೂಪಾಯಿ
ಅಗಲದ್ದು.

ಆಳೆತ್ತರದ ಟೀಕ್ ಡೊರಲ್ಲಿ
ಬಗ್ಗಿ ಬಲಗಾಲು ಇಟ್ಟು
ಪುರುಷ ಕೋಟೆಯಲಿ
ತುಂಬಿದ ಅಕ್ಕಿ, ಆಸ್ಮಿತೆಯ
ಸೇರನೊದ್ದು ತಗ್ಗಿ ನಡೆದಾಗ
ಸ್ವಚ್ಚಂಧ ಚೆಂದದ
ದಿನಗಳಿಗೆ ಹಿಡಿದ ಪಿತೃಗ್ರಹಣ.

ತೊಳಿ ತೊಳಿ ತೊಳಿ
ಬಳಿ ಬಳಿ ಬಳಿ
ಉಜ್ಜು ಉಜ್ಜು ಉಜ್ಜು
ತಿಕ್ಕು ತಿಕ್ಕು ತಿಕ್ಕು

ಗುಡಿಸು ಸಾರಿಸು ಒರೆಸು

ಹಾಸು ಹೊದಿಸು

ಮಡಿಸು ಜೋಡಿಸು

ಕುದಿಸು ಕಾಯಿಸು
ಬೇಯಿಸು ಬಡಿಸು

ಹೇಳಿದಾಗ
ಹೇಳಿದಂತೆ ಮಲಗು

ಮಲಗಿಸು
ಲಾಲಿಸು ಪಾಲಿಸು
ಹಾಡಿ ಆನಂದದಲಿ ತೇಲಾಡಿಸು

ಮನೆಯೇ ಬೃಂದಾವನ
ಅಡುಗೆ ಮನೆಯೇ
ಏಕಾತನಾತೆಯ ಮಂತ್ರದಾ
ಲಯ.

ಮನೆ ಮಂದಿರದ
ಭಾವೀ ಯಜಮಾನ
ಇನ್ನೂ ಮಾಡಿಲ್ಲವೆಂದು ತಿಂಡಿ!
ದಿನಾ ಇದೇ ಗೋಳೆಂದು
ಚೀರುವ ಮಗರಾಮ

ಉಪ್ಪಿಟ್ಟು ತಯಾರಿ
ತರಾತುರಿಯಲಿ
ಬಿಸಿ ಬಾಂಡ್ಲಿ ತಾಗಿ
ಸುಟ್ಟುಕೊಂಡ
ಸುಂದರ ಚಿತ್ರಗಳ ಬಿಡಿಸಿದ
ಕೈಬೆರಳುಗಳ ಆಕ್ರಂದನ.

ಗಂಡನೆಂಬ ಮನೆಯ ದೇವರು
ಬನಿಯನ್ ಅಂಡರ್ ವೇರ್
ಕಾಣದೆ ಅಬ್ಬರಿಸುವ
ಹಾಲೀ ಯಜಮಾನನ ಕೂಗಿಗೆ
ವಾರ್ಡ್ ರೋಬಿನಲಿ ಹುಡುಕಾಟ

ಕೆಳಗೆ ಬಿದ್ದ
ಡಿಗ್ರಿ ಸರ್ಟಿಫಿಕೇಟಿನ ಕುಹಕ ನಗೆ!

ವಾಕಿಂಗ್ ಹೊರಟ ತಾತ
ಮಂದಿರದ ಉತ್ಸವ ಮೂರ್ತಿ.

ಕೈ ತಪ್ಪಿದ ಯಜಮಾನಿಕೆಯ
ಹಳಹಳಿಕೆಯಲಿ
ಚಪ್ಪಲಿ ಕಾಣದ್ದೊಂದು ನೆವ
ಅಕಟಕಟಾ!
ಹಲ್ಲು ಸೆಟ್ಟು ಮುರಿಯುವಂತೆ
ಹಲ್ಲು ಕಡಿತ ಕಟಕಟ

ಮೂರು ಗಂಟಿನ ತಾಳಿಗೆ
ಕುಂಕುಮವಿಟ್ಟು
ಕಣ್ಣಿಗೊತ್ತಿದ ಹೌಸ್ ವೈಫು
ಮೂರೊತ್ತು ಉರಿವ
ಗ್ಯಾಸ್ ಸ್ಟೌವಿನ ಕುಕ್ಕರಲ್ಲಿ
ಬೇಯಿಸಿದ್ದಾಳೆ ನಿಟ್ಟುಸಿರು

ಬುಸ್ ಬುಸ್ಸೆಂದು
ಕುದಿವ ಕುಕ್ಕರಿನ
ಸೀಟಿ ಕೂಗದೆ
ಮುಚ್ಚುಳ ಹಾರಿ
ನಿಟ್ಟುಸಿರೆಲ್ಲ ಚೆಲ್ಲಾಪಿಲ್ಲಿ
ಆಕಾಶ ಸೇರಿ
ಕಂಗೊಳಿಸುತ್ತಿವೆ ನಕ್ಷತ್ರಗಳಾಗಿ.

‍ಲೇಖಕರು Avadhi

14 March, 2021

2 Comments

  1. ಸಚಿನ್‌ಕುಮಾರ ಬ.ಹಿರೇಮಠ

    ಪುರುಷ ಕುಲ ನಾಚಿಕೆ ಪಡುವಂತಹ ಕವಿತೆ…ನಿಮ್ಮ ಕವಿತೆ ನಮ್ಮನ್ನೆಚ್ಚರಿಸಿದೆ..ಎಚ್ಚರಿಸುತ್ತಲೇ ಇರುತ್ತದೆ..

  2. ಚಂದ್ರಪ್ರಭ ಕಠಾರಿ

    ಧನ್ಯವಾದಗಳು ….ನಿಮ್ಮ ಅನಿಸಿಕೆಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading