ಸಣ್ಣಮಾರಪ್ಪ ಚಂಗಾವರ ಶಿರಾ
ಯುಗಾದಿ ಹಬ್ಬದ ದಿನ ದಾಸರು ಕೈಯಲ್ಲಿ ಜಾಗಟೆ, ಬವನಾಸಿ ಹಿಡಿದು ಮನೆಗೆ ಬಂದಾಗಲೆ ಹಬ್ಬದ ಊಟ. ಅಲ್ಲಿಯವರೆಗೆ ಮಾಡಿದ್ದ ಹೋಳಿಗೆ ಬಿದಿರಿನ ಬುಟ್ಟಿಯಲ್ಲಿ ಜೋಪಾನವಾಗಿ ಇರುತ್ತಿದ್ದವು. ಏಕೆಂದರೆ ದಾಸರ ಪೂಜೆ ಕಾರ್ಯ ಮುಗಿಯುವವರೆಗೂ ಎಂಜಲು ಮಾಡುವಂತಿರಲಿಲ್ಲ.
ಯುಗಾದಿ ಎಂದರೆ ಸಾಕು ನಮಗೆ ನೆನಪಿಗೆ ಬರುವುದು ಬೇವು – ಬೆಲ್ಲ. ಆದರೆ, ನಮಗಾಗ ಯುಗಾದಿ ಎಂದರೆ ಹೋಳಿಗೆಗಳು ನೆನಪಿಗೆ ಬರುತ್ತಿದ್ದವು. ನಮ್ಮೂರಲ್ಲಿ ಇಂದಿಗೂ ಯುಗಾದಿ ಹಬ್ಬದ ವಿಶೇಷವೆಂದರೆ ಹೋಳಿಗೆಯೇ! ಅಂದು ಮಾಡಿದ ಹೋಳಿಗೆಗಳನ್ನು ಮೂರ್ನಾಲ್ಕು ದಿನಗಳ ಕಾಲ ಬಿದಿರಿನ ಬುಟ್ಟಿಯಲ್ಲಿಟ್ಟುಕೊಂಡು ತಿನ್ನುತ್ತಿದ್ದೆವು.
ಇಂದು ಯುಗಾದಿ ಹಬ್ಬದ ದಿನವಾದರೆ ಹಿಂದಿನ ದಿನ ರಾತ್ರಿ ಹೋಳಿಗೆ ತಯಾರಿಸುತ್ತಾರೆ. ಇದಕ್ಕಾಗಿ ಈಡೀ ರಾತ್ರಿ ನಿದ್ದೆಗೆಡುತ್ತಿದ್ದರು. ಮೊದಲಿಗೆ ಮೈದ ಹಿಟ್ಟನ್ನು ನೀರಿನಲ್ಲಿ ಕಲಸಿ ಅಂಟು ಬರಲೆಂದು ಬಟ್ಟೆಗಳನ್ನು ಕಲ್ಲಿಗೆ ಸೆಳೆದಂತೆ ಸೆಳೆಯುತ್ತಿದ್ದರು. ಇದರಿಂದ ಟಪ್ ಟಪ್ ಎನ್ನುವ ಶಬ್ದ ರಾತ್ರಿಯಲ್ಲಾ ಕೇಳಿಸುತ್ತಿತ್ತು.
ಮನೆಯವರೆಲ್ಲ ಒಂದೆಡೆ ಕುಳಿತುಕೊಂಡು ಒಬ್ಬರು ಮೈದ ಹಿಟ್ಟನ್ನು ವೃತ್ತಕಾರದಲ್ಲಿ ತೆಳುವಾಗಿ ಉಜ್ಜಿಕೊಟ್ಟರೆ ಮತ್ತೊಬ್ಬರು ಬೇಯಿಸಿದ ಬೆಳೆಕಾಳು ಹಾಗೂ ಬೆಲ್ಲದಿಂದ ರುಬ್ಬಿದ್ದ ಉಂಡೆಗಳನ್ನು ವೃತ್ತಕಾರದಲ್ಲಿದ್ದ ಮೈದಾ ಹಿಟ್ಟಿನಿಂದ ಮುಚ್ಚಿ ಕೈಯಿಂದ ತಟ್ಟುತ್ತಿದ್ದರು. ನಂತರ ಮತ್ತೊಬ್ಬರು ಒಲೆಯ ಮೇಲೆ ಬೇಯಿಸಿ ಬಿದಿರಿನ ಬುಟ್ಟಿಯಲ್ಲಿ ಹಾಕುತ್ತಿದ್ದರು. ನಾವು ಹೋಳಿಗೆ ತಯಾರಾಗುತ್ತಿದ್ದಂತೆ ತಿನ್ನಬೇಕೆಂದು ಕಾದು ಕುಳಿತಿರುತ್ತಿದ್ದವು. ಆದರೆ ನಮಗೆ ಸಿಗದಂತೆ ಹೋಳಿಗೆಯ ಬುಟ್ಟಿಯನ್ನು ಅಟ್ಟದ ಮೇಲಿಡುತ್ತಿದ್ದರು.

ಅಂದು ರಾತ್ರಿ ದೊಡ್ಡವರು ಹೋಳಿಗೆ ಮಾಡುತ್ತಿದ್ದರೆ ನಾನು ಮತ್ತು ನನ್ನ ಅಜ್ಜಿ ಮನೆಯ ಅಂಗಳದಲ್ಲಿ ಮಾತನಾಡುತ್ತ ಕುಳಿತಿರುತ್ತಿದ್ದವು. ಆಗ ನನ್ನ ಅಜ್ಜಿ ಆಕಾಶದಲ್ಲಿನ ನಕ್ಷತ್ರಗಳ ತೋರಿಸುತ್ತ ಕಥೆ ಹೇಳುತ್ತಿದ್ದಳು. ನಾನು ಹೋಳಿಗೆ ತಿನ್ನುವ ಆಸೆಯಿಂದ ಒಮ್ಮೊಮ್ಮೆ ಮನೆಯ ಒಳಗೆ ಹೋಗಿ ಬರುತ್ತಿದ್ದೆ. ಅಷ್ಟೋತ್ತಿಗಾಗಲೆ ನನ್ನಜ್ಜಿ ಮತ್ತೊಂದು ಕಥೆಯನ್ನು ಹೇಳಲು ಸಿದ್ಧವಾಗಿರುತ್ತಿದ್ದಳು.
ರಾತ್ರಿಯ ಕೆಲಸ ಮುಗಿದು ಬೆಳಕು ಮೂಡುತ್ತಿದ್ದಂತೆ ನಾವು ಗೆಳೆಯರೆಲ್ಲ ಸೇರಿ ಊರಿನ ಸ್ವಲ್ಪ ದೂರದಲ್ಲಿದ್ದ ಮಾವಿನ ಮರದ ಕಡೆಗೆ ಜೊತೆಯಾಗಿ ಹೋಗುತ್ತಿದ್ದೆವು. ನಂತರ ನಮ್ಮಲ್ಲೊಬ್ಬ ಮರವನ್ನೆರಿ ಮಾವಿನ ಎಲೆಗಳನ್ನು ಕಿತ್ತು ಕೆಳಗೆ ಹಾಕುತ್ತಿದ್ದನು. ಕಿತ್ತಿದ್ದ ಮಾವಿನ ಎಲೆಗಳನ್ನು ಎಲ್ಲರು ಸಮಾನವಾಗಿ ಹಂಚಿಕೊಂಡು ಮನೆಗೆ ಕಡೆಗೆ ಹೋಗುತ್ತಿದ್ದೆವು. ನಾವು ತೆಗೆದುಕೊಂಡು ಬಂದಿದ್ದ ಮಾವಿನ ಎಲೆಗಳಿಂದ ನನ್ನ ತಂದೆ ಬಾಗಿಲಿಗೆ ತೋರಣ ಮಾಡಿ ದಾರದಿಂದ ಕಟ್ಟುತ್ತಿದ್ದರು.
ನಂತರ ಯುಗಾದಿ ಹಬ್ಬಕ್ಕೆಂದೆ ತಂದಿದ್ದ ಹೊಸ ಬಟ್ಟೆಗಳನ್ನು ತೆಗೆದುಕೊಂಡು ಊರಿನ ಪಕ್ಕದಲ್ಲಿದ್ದ ಕೊಳವೆ ಬಾವಿಗೆ ಹೋಗಿ ಸ್ನಾನ ಮಾಡುತ್ತ ಚೆಲ್ಲಾಟ ಆಡುತ್ತಿದ್ದೆವು. ಸ್ನಾನ ಮುಗಿದ ಮೇಲೆ ನಾವೆಲ್ಲ ಹೊಸ ಬಟ್ಟೆಗಳನ್ನು ಧರಿಸಿಕೊಂಡು ನಮ್ಮೂರಿನ ದೇವಸ್ಥಾನದ ಹತ್ತಿರ ಹೊರಡುತ್ತಿದ್ದೆವು. ಅಷ್ಟೋತ್ತಿಗಾಗಲೆ ಊರಿನ ಜನರೆಲ್ಲಾ ದೇವಸ್ಥಾನದ ಮುಂಭಾಗದಲ್ಲಿ ನಿಂತಿರುತ್ತಿದ್ದರು. ನಾವು ಜನರ ಮಧ್ಯೆ ನಿಂತು ಪೂಜಾ ಕಾರ್ಯಕ್ರಮವನ್ನು ನೋಡುತ್ತಿದ್ದೆವು.
ಮೊದಲಿಗೆ ಗುಡಿಯಲ್ಲಿರುವ ದೇವರಿಗೆ ಅಲ್ಲಿಗೆ ಬಂದಿದ್ದವರೆಲ್ಲ ಪೂಜೆ ಸಲ್ಲಿಸುತ್ತಿದ್ದರು. ನಂತರ ದೇವಸ್ಥಾನದ ಮುಂಭಾಗ ದಾಸರು ಜಾಗಟೆ, (ಪೂಜಾ ಕಾಲದಲ್ಲಿ ಬಾರಿಸುವ ಲೋಹವಾಧ್ಯ) ಬವನಾಸಿ (ದಾಸರು ಉಪಯೋಗಿಸುವ ಭಿಕ್ಷಪಾತ್ರೆ) ಹಿಡಿದು ಮಣೆವು ತಿರುಗಿ ಪೂಜೆ ಮಾಡುತ್ತಿದ್ದರು. ತದನಂತರ ಅಲ್ಲಿಗೆ ಬಂದಿದ್ದವರಿಗೆಲ್ಲ ಬೇವು – ಬೆಲ್ಲವನ್ನು ಪ್ರಸಾದ ರೂಪದಲ್ಲಿ ಕೊಡುತ್ತಿದ್ದರು. ದಾಸರು ದೇವಸ್ಥಾನದಲ್ಲಿನ ಪೂಜೆ ಮುಗಿದ ಬಳಿಕ ಊರಿನ ಎಲ್ಲರ ಮನೆಗೆ ಹೋಗಿ ಊಟ ಮಾಡಬೇಕಿತ್ತು. ಅಲ್ಲಿಯವರೆಗೆ ಯಾರೊಬ್ಬರ ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ.
ದಾಸರು ಜಾಗಟೆ, ಬವನಾಸಿ ಹಿಡಿದು ಮನೆ ಮನೆಗೆ ತೆರಳಿ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದರು. ಇದನ್ನು ನೋಡಿ ನಮ್ಮ ಮನೆಗೆ ಬರಲೆಂದು ಅವರ ಹಿಂದೆಯೇ ಹೋಗುತ್ತಿದ್ದೆವು ನಾವು. ದಾಸರು ಮನೆಗೆ ಬಂದವರು ಪೂಜೆ ಮಾಡಿ ಜಾಗಟೆಯಲ್ಲಿ ಒಮ್ಮೆ ಶಬ್ದ ಬಾರಿಸಿ, ಸ್ವಲ್ಪ ಊಟ ಮಾಡಿ ಮುಂದಿನ ಮನೆಗೆ ಹೋಗುತ್ತಿದ್ದರು. ಮನೆಯಲ್ಲಿ ದಾಸರು ಬಂದು ಹೋಗುತ್ತಿದ್ದಂತೆ ನಾವು ತಟ್ಟೆಯನ್ನು ತೆಗೆದುಕೊಂಡು ರಾತ್ರಿ ಮಾಡಿದ್ದ ಹೋಳಿಗೆ ರುಚಿಯನ್ನು ಸವಿಯುತ್ತಿದ್ದೆವು. ಹೋಳಿಗೆ ಊಟ ಮುಗಿಯುತ್ತಿದ್ದಂತೆ ಮನೆಯಲ್ಲಿರುವ ಹಗ್ಗವನ್ನು ತೆಗೆದುಕೊಂಡು ಹೋಗಿ ಊರಿನ ಪಕ್ಕದಲ್ಲಿದ್ದ ಮರದ ಕೊಂಬೆಗಳಿಗೆ ಹಾಕಿ ಜೋಕಾಲಿ ಹಾಡುತ್ತಿದ್ದೆವು.






ಧನ್ಯವಾದಗಳು ಅವಧಿಗೆ
ನನಾಗಾದ ಅನುಭವ