ಸರೋಜಿನಿ ಪಡಸಲಗಿ,
ಹೊಸ ಹುಟ್ಟುನಾನೊಂದು ಮಾತು ಹೇಳಲೇ ನೀನೊಪ್ಪುವಿಯಾ ಅದನ
ಕೇಳಲಹುದೆ ನಿನ್ನ ಮನ ಅದನ ಒಂದು ಬಾರಿ ಉಸುರುವಿಯಾ
ಮೈಮರೆತ ಗಾಢ ನಿದಿರೆ ಅದ್ಹೇಗೆ ಸಾವು ಎಂಬೆ ನೀ
ಆ ನಿದಿರೆ ತಿಳಿದೇಳುವುದು ಎಂಥ ಮರುಹುಟ್ಟು ಹೇಳು ನೀ
ನಿದಿರೆ ಒಂದು ಮಧುರ ಮಾಯಾಲೋಕ ಕೇಳು ಗೆಳೆಯಾ
ಅಲ್ಲಿ ಕಾಂಬುದು ನೂರೆಂಟು ರಮ್ಯಲೋಕ ನೀ ಅರಿಯೆಯಾ

ಅಲ್ಲಿ ಕಾಣಬಹುದು ಅವಳ ದಿನ ದಿನವೂ ಹೊಸ ರೂಪದಿ
ಅವಳ ಕಣ್ಣ ಕನ್ನಡಿಯಲಿ ಹೊಳೆವ ನಿನ್ನ ಚಿರನೂತನ ಬಿಂಬವ
ಅವಳ ಹೃದಯ ವೀಣೆ ಝೇಂಕರೀಸಿ ಹೊಸ ಹಾಡನೊಂದ ನುಡಿಸೀತು
ಅಲ್ಲಿ ಮೂಡಿ ಬಂದೀತು ದಿನ ದಿನವೂ ಹೊಸ ಕತೆಯೊಂದು
ಈಗ ಹೇಳು ಬೇಕೆ ನಿನಗೆ ಈ ಹುಟ್ಟು ಸಾವಿನ ಕರ್ಮದಹಂಗು
ಸುತ್ತ ಮುತ್ತಿಹುದೇ ಸತ್ತುಹುಟ್ಟಿದೆಯಾ ಎಂಬ ಅವಳ ನಗುಮಾತ ಗುಂಗು
ಹುಷಾರು ಸರಿದೀತು ಅತ್ತಿತ್ತ ಅವಳ ಉಲಿವು ಈ ಜಂಜಾಟದಲಿ
ನರಳದೇ ಮುಳುಗು ಕನಸುಗಳಲಿ ತೇಲು ನೆನಪ ಹುಡುಕಾಟದಲಿ
ಸಾಯದೇ ಕೆಡದೇ ನೋಯದೇ ನಲುಗದೇ ಅಳಲದೆ ಮರುಗದೆ
ಅಲ್ಲಾದೀತು ನಿನ್ನ ಹೊಸ ಜನುಮ ಕಂಡೀಯ ಹೊಸ ಹುಟ್ಟನ
ಮನ ಅರಳಿ ನಿಂದೀತು ಮೊಗದಿನಗುವೊಂದು ಮೂಡೀತು
ಮನ ತುಂಬಿದ ಅವಳ ಬಿಂಬ ಕಣ್ಣು ತುಂಬಿ ಹೊಳೆದೀತು






ನಿದ್ರೆ ಕ್ಷಣಿಕ ಸಾವಲ್ಲ ಎಂದು ಪ್ರತಿಪಾದಿಸುವದರ ಜೊತೆಗೆ, ಪ್ರೀತಿಯ ನವಿರಾದ ಪದರುಗಳನ್ನು ತೋರಿಸುವ ಸುಂದರ ಕವಿಸಾಲುಗಳು!
ಅವಧಿ ಗೆ ನನ್ನ ಧನ್ಯವಾದಗಳು. ನಿಮ್ಮ ಸುಂದರ ಅನಿಸಿಕೆಗೆ ,ಆ ಅನಿಸಿಕೆ ಈವ ಪ್ರೋತ್ಸಾಹ ಕ್ಕೆ ನನ್ನ ಹೃದಯದಾಳದ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ.