ಹೊಸ ಬೆಳಕು ಚೆಲ್ಲಿದ ಸಂಗೀತ ಮತ್ತು ನೃತ್ಯ ಸಂಶೋಧನಾ ಸಮ್ಮೇಳನ

ಡಾ. ಮನೋರಮಾ ಬಿ.ಎನ್

ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ಮಾನವಿಕ ನಿಕಾಯದ ಸಂಗೀತ ಮತ್ತು ನೃತ್ಯ ಪ್ರದರ್ಶಕ ಕಲೆಗಳ ವಿಭಾಗವು ಇತ್ತೀಚಿಗೆ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸಂಗೀತ ಮತು ನೃತ್ಯ ಸಂಶೋಧನೆಯ ಸಮ್ಮೇಳನ/ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು.

ಜೈನ್ ವಿಶ್ವವಿದ್ಯಾನಿಲಯದ ಪ್ರದರ್ಶಕ ಕಲೆಗಳ ವಿಭಾಗವು ತನ್ನ ಕಲಾವಂತಿಕೆ ಮತ್ತು ಗುಣಮಟ್ಟದ ಸಂಶೋಧನಾ ಪ್ರಜ್ಞೆಗೆ ಹೆಸರಾಗಿದೆ. ಈಗಾಗಲೇ ಗುಣಮಟ್ಟದ ಅಧ್ಯಯನ ಮತ್ತು ಭಾರತೀಯ ಪರಂಪರೆಯ ವಿಸ್ತರಣೆಯಲ್ಲಿ ಗಮನಾರ್ಹವಾಗಿ ತನ್ನ ಛಾಪು ಮೂಡಿಸಿದೆ.

ಉದ್ಘಾಟನಾ ಸಮಾರಂಭದಲ್ಲಿ ನೃತ್ಯವಿಭಾಗದ ಪ್ರಾಧ್ಯಾಪಕಿ ಡಾ. ಶೋಭಾ ಶಶಿಕುಮಾರ್ ಅವರ ನೃತ್ಯಸಂಶೋಧನ ಮತ್ತು ಮೌಲಿಕ ಬರೆಹಗಳ ಕೃತಿ ‘ನಾಟ್ಯಾಯನ’ವು ಅನಾವರಣಗೊಂಡು ವಿಶ್ವವಿದ್ಯಾನಿಲಯದೊಳಗಿನ ಅಧ್ಯಾಪನ ವರ್ಗದ ಅಧ್ಯಯನಾಸಕ್ತಿಗೆ ಕನ್ನಡಿ ಹಿಡಿಯಿತು. ಪುಸ್ತಕದ ಪ್ರಥಮ ಪ್ರತಿಯನ್ನು ರಂಗಕರ್ಮಿ, ವಿಮರ್ಶಕ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಸ್ವೀಕರಿಸಿದರು. ‘ನೂಪುರ ಭ್ರಮರಿ’ ಈ ಪುಸ್ತಕವನ್ನ ಪ್ರಕಟಿಸಿದೆ.

ಆಶಯ ಭಾಷಣವನ್ನು ನೆರವೇರಿಸಿದ ಬಹುಶ್ರುತ ವಿದ್ವಾಂಸರೂ, ಕವಿಗಳೂ ಆದ ಶತಾವಧಾನಿ ಡಾ. ಆರ್ ಗಣೇಶ್ ಅವರು ಭಾರತೀಯ ಕಲಾ ಸಂಪ್ರದಾಯಗಳಲ್ಲಿ ಸಂಶೋಧನೆಗಿರುವ ಅವಕಾಶ, ಅನುಕೂಲ, ಸಾಧ್ಯತೆ, ಸಮಸ್ಯೆ, ನಡೆಯಬೇಕಾದ ಹಾದಿಗಳನ್ನು ತೆರೆದಿಟ್ಟು ಅಧ್ಯಯನಾರ್ಥಿಗಳಿಗೆ ಸ್ಪಷ್ಟ ದಿಕ್ಸೂಚಿಯನ್ನು ಇತ್ತರು. ಅವರ ಭಾಷಣದಲ್ಲಿ ನೃತ್ಯ ಮತ್ತು ಸಂಗೀತವು ಭರತನ ರಸಸೂತ್ರವನ್ನು ಅನುಸರಿಸಿ ನಡೆಯಬೇಕಾದ ಸಂಶೋಧನ ವಿಧಾನ, ಮಾರ್ಗ ಮತ್ತು ದೇಶೀಯ ಸಂಕೀರ್ಣತೆಗಳು, ಸಮಾಜ ಮತ್ತು ಕಲೆಯ ಸಂಬಂಧ, ಸನಾತನ ಧರ್ಮ ಮತ್ತು ಕಲೆ, ಕಲೆ ಹಾಗೂ ಆರ್ಥಿಕತೆ, ಶಾಸ್ತ್ರ, ಕೊರಿಯೋಗ್ರಫಿಯನ್ನಾಧರಿಸಿದ ಅಧ್ಯಯನಗಳ ರೀತಿನೀತಿ, ಸಿನೆಮಾಗಳಲ್ಲಿ ಕಲೆಗಾರಿಕೆ ಇತ್ಯಾದಿ ಅಧ್ಯಯನ ಸಾಧ್ಯತೆಯ ವಿಸ್ತಾರ ಚರ್ಚಿತವಾಯಿತು.

ಸಂಗೀತ ವಿಭಾಗ : ಮೊದಲ ದಿನದ ಸಂಶೋಧನ ಪ್ರಸ್ತುತಿಗಳ ಪೈಕಿ ‘Musical Reconstruction of Prabhanda Notation’ ಪ್ರಬಂಧ ಮಂಡಿಸಿದ ಕೆ. ಶ್ರೀಲತಾ ಅವರು ಹಾಗೂ ಶರಣ್ಯಾ ಗೋವಿಂದರಾಜ್ ಅವರು ತಮ್ಮ‘Application of Carnatic solkattu for Autism- A feasibility study’ ಪ್ರಸ್ತುತಿಗೆ ಅತ್ಯುತ್ತಮ ಸಂಶೋಧನ ಪ್ರಬಂಧ ಮಂಡನೆಯ ಹೆಗ್ಗಳಿಕೆಗೆ ಪಾತ್ರವಾದರು. ಕಾರ್ತಿಕ್ ಜಿ, ದೀಪಶ್ರೀ ಎಂ, ಜಾನಕಿ ಜಿ, ಐಶ್ವರ್ಯ ಮಹೇಶ್, ರಾಗಿಣಿ ಎ.ಆರ್, ನಾರಾಯಣ ಪಿ.ಅಯ್ಯರ್, ಅನುತಮಾ ಮುರಲಿ, ಸಮಿಧಾ ವೇದಬಾಲ, ನಿರ್ಮಲ್ ಹರೀಶ್, ನಂಬಿ ಪಿಳ್ಳೈ, ಮನೋಜ್, ನಿತಿನ್ ಹೂಗಾರ್, ವಿಭಾಶ್ರೀ ಎಂ.ಎಸ್, ಶರಣ್ಯಾ ಶ್ರೀರಾಮ್ ಅವರ ಸಂಶೋಧನ ಪ್ರಬಂಧಗಳೂ ಮಂಡಿತವಾಗಿ ಸಂವಾದಗಳಿಗೆ ಅವಕಾಶವಾದವು.

ಎರಡನೇ ದಿನದ ಅತ್ಯುತ್ತಮ ಪ್ರಸ್ತುತಿಗಳ ಅಭಿಧಾನ ಪಡೆದವರು ಅಭಿಜಿತ್ ಶೆಣೈ- ತಮ್ಮ ‘Applicability of statistical quantitative methods in Indian vocal music’ ಪ್ರಬಂಧಕ್ಕೆ ಮತ್ತು ಕೃತ್ತಿಕಾ ಶ್ರೀನಿವಾಸನ್ ಅವರ ‘Orality, Appropriation and Cultural negotiations with particular reference to Music and Dance’ ಪ್ರಬಂಧಕ್ಕೆ. ಶಿವಶಂಕರಿ ಜೆ, ವೀಣಾ ಕೆ.ಮೂರ್ತಿ, ರಕ್ಷಾ ರಾವ್, ಭಾವನಾ ಪ್ರಭಾಕರನ್, ಮೀನಾ ಗಣಪತಿ, ಭಾರ್ಗವ್ ರಂಗನಾಥ್, ಕೃತ್ತಿಕಾ ಶ್ರೀನಿವಾಸನ್, ಚಾರ್ಲ್ಸ್ ಗಾಡ್ವಿನ್, ರೂಪಾ ಶ್ರೀಕಾಂತ್ ಅವರ ಪ್ರಬಂಧಗಳು ಮಂಡಿಸಲ್ಪಟ್ಟವು.

ಸಂಶೋಧನ ಪ್ರಸ್ತುತಿಗಳ ಅಧ್ಯಕ್ಷತೆಯನ್ನು ಡಾ.ಕೆ. ವರದರಂಗನ್, ಡಾ. ಮೀರಾ ರಾಜಾರಾಂ ಪ್ರಾಣೇಶ್, ತಮಿಳ್ನಾಡಿನ ಡಾ. ವಿ. ಪ್ರೇಮಲತಾ ಮತ್ತು ಡಾ. ರಾಜಶ್ರೀ ರಾಮಕೃಷ್ಣ ಮತ್ತು ಅವರು ನಿರ್ವಹಿಸಿ ನಿರ್ಣಯಗಳನ್ನು ನೀಡಿದರು.

ನೃತ್ಯವಿಭಾಗ : ಮೊದಲ ದಿನದ ಸಂಶೋಧನ ಪ್ರಸ್ತುತಿಗಳ ಪೈಕಿ ಯುವ ವಿದ್ವಾಂಸ ಅರ್ಜುನ್ ಭಾರಧ್ವಾಜ್ ಅವರ ‘The merits and difficulties in bringing Chaturvidhabhinaya in classical literature with special focus on Mahakavyas of Kalidasa- Kumarasambhava-A study’ ಪ್ರಸ್ತುತಿಯು ವಿದ್ಯಾರ್ಥಿಗಳಿಂದ ಮೊದಲ್ಗೊಂಡು ಸಂಶೋಧಕರ ಪ್ರಧಾನ ಕೇಂದ್ರ ಬಿಂದುವಾಯಿತು. ಪ್ರಾಚೀನ ಸಾಹಿತ್ಯವನ್ನು ನೃತ್ಯಾತ್ಮಕವಾಗಿ ಅರ್ಥೈಸಿಕೊಳ್ಳುವ ಮೂಲಚೂಲಗಳನ್ನು ವಿವರಣಾತ್ಮಕವಾಗಿ ದರ್ಶಿಸಿಕೊಟ್ಟ ಈ ಪ್ರಬಂಧವು ಮೊದಲ ದಿನದ ಅತ್ಯುತ್ತಮ ಸಂಶೋಧನ ಪ್ರಸ್ತುತಿಯೆಂಬ ಹೆಗ್ಗಳಿಕೆಯನ್ನೂ ಪ್ರಶಸ್ತಿರೂಪದಲ್ಲಿ ಪಡೆಯಿತು. ಇನ್ನುಳಿದಂತೆ ಭರವಸೆಯ ಭವಿಷ್ಯದ ಅಧ್ಯಯನಾರ್ಥಿಗಳಾಗಿ ಮೇಘಾ ಆರ್ ಕೃಷ್ಣ ಅವರದ್ದೇ ಆದ ನೃತ್ಯ ನಾಟಕ ‘ಅವಲೋಕನ’ದ ಕುರಿತ ಪ್ರದರ್ಶನಾನಂತರದ ವಿಶ್ಲೇಷಣೆಯು ಕಲಾವಿದರು ಸಂಶೋಧನೆಗಿAತಲೂ ಮಿಗಿಲಾಗಿ ಆತ್ಮಾನುಸಂಧಾನಗೊಳಿಸಿಕೊಳ್ಳುವ ಹಾದಿಯ ನೆಲೆಬೆಲೆಗಳನ್ನು ಪ್ರಾಯೋಗಿಕವಾಗಿಯೂ ಚರ್ಚಿಸಿತು.

ನಾಗರಂಜಿತ ಎಸ್ ಅವರ ಪ್ರಬಂಧ ‘Current status and prospects of dance criticism’ ಪ್ರಸ್ತುತಿಯು ಕಲಾವಿಮರ್ಶೆಗಳ ಇತಿಹಾಸ, ಪ್ರಸ್ತುತತೆ, ಶೈಲಿ, ರಸದೃಷ್ಟಿ, ಭವಿಷ್ಯದ ಸಾಧ್ಯತೆಗಳ ಜೊತೆಜೊತೆಗೆ ಚಿಕಿತ್ಸಕ ಸಲಹೆಯನ್ನು ನೀಡಿ ಗಮನ ಸೆಳೆಯಿತು. ಇನ್ನುಳಿದಂತೆ ಡಾ. ವೀಣಾಮೂರ್ತಿ ವಿಜಯ್, ಸ್ನೇಹಾ ಕಪ್ಪಣ್ಣ, ಡಾ. ಪ್ರಿಯಾಶ್ರಿ ರಾವ್, ಸ್ನೇಹಾ ಶಶಿಕುಮಾರ್ ಹೈದರಾಬಾದ್, ಅಪೂರ್ವ ಎನ್ ಪ್ರಕಾಶ್ ಅವರು ಮೊದಲ ದಿನ ತಮ್ಮ ಸಂಶೋಧನ ಪ್ರಬಂಧಗಳನ್ನು ಮಂಡಿಸಿದರು.

ಎರಡನೆಯ ದಿನದ ಅತ್ಯುತ್ತಮ ಸಂಶೋಧನ ಪ್ರಸ್ತುತಿಯೆಂಬ ಮನ್ನಣೆಗೆ ಪಾತ್ರವಾಗಿದ್ದು ಜೈನ್ ವಿಶ್ವವಿದ್ಯಾನಿಲಯದ ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಶ್ರುತಿ ಚಲಂ ಮಹದೇವನ್ ಅವರ ‘Methodology Challenges in Performing Arts with special reference to Static Allied Arts- Amarachitra katha- A study’- ಪ್ರಬಂಧ. ಸ್ಪಷ್ಟತೆ, ನಿಖರತೆಗಳೊಂದಿಗೆ ನೃತ್ಯಾಧ್ಯಯನವನ್ನು ವಿಸ್ತರಿಸಿಕೊಳ್ಳುವ ಯಾದಿಯಲ್ಲಿ ಆವಿಷ್ಕಾರಿಕವಾದ ಚಿಂತನೆಗಳನ್ನು ಬೆಳೆಸುವಂತೆ ಮಂಡಿಸಲ್ಪಟ್ಟ ಈ ಪ್ರಬಂಧವು ನೃತ್ಯಾಧ್ಯಯನವು ಗಮನಿಸಿಕೊಳ್ಳಬಹುದಾದ ಅಪಾರ ಸಾಧ್ಯತೆಗಳಿಗೆ ಉತ್ತಮ ಉಪಕ್ರಮವೆಂಬಂತೆ ಮೂಡಿಬಂತು.

ಉಳಿದಂತೆ ಅನುಪಮಾ ಜಯಸಿಂಹ ಅವರ ‘The oral traditions giving rise to different banis of Bharatanatya’ ಚರ್ಚಾರ್ಹವಾದ ಸಂಗತಿಗಳ ಮಧ್ಯೆಯೂ ಒಳ್ಳೆಯ ದಾಖಲೀಕರಣವೆಂಬ ಪ್ರಶಂಸೆಯನ್ನು ಪಡೆಯಿತು. ಅಂತೆಯೇ ರಶ್ಮಿ ಥಾಪರ್ ಅವರ ‘Oral traditions in Indian Dance- Teaching methodologies of two different generations’  ಪ್ರಸ್ತುತಿಯೂ ಬಾಯ್ಮಾತಿನ ಸಂವಾದಗಳಲ್ಲಿ ತೋರಿಕೊಳ್ಳುವ ವಿಷಯಕ್ಕೆ ಸಂಶೋಧನಸ್ಪರ್ಶ ನೀಡುವ ಹಾದಿಯನ್ನು ಗಮನಾರ್ಹವಾಗಿ ತೋರಿಸಿತು. ಆಂಧ್ರದ ಅಪರ್ಣಾ ಧೂಲಿಪಲ್ಲ, ಹೈದರಾಬಾದ್‌ನ ಚೂಡಾಮಣಿ ಡಿ, ವಿದ್ಯಾರ್ಥಿಗಳಾದ ಯಶೀಲಾ ಭಾಸ್ಕರ್, ನವ್ಯಸುಧೀಂದ್ರ, ಕೃತ್ತಿಕಾ ಕುಮಾರ್ ಅವರ ಪ್ರಬಂಧಗಳೂ ಮಂಡಿಸಲ್ಪಟ್ಟವು. ಸಂಶೋಧನ ಪ್ರಸ್ತುತಿಗಳ ಅಧ್ಯಕ್ಷತೆಯನ್ನು ಡಾ.ಶೋಭಾ ಶಶಿಕುಮಾರ್ ಮತ್ತು ಡಾ. ಮನೋರಮಾ ಬಿ.ಎನ್ ನಿರ್ವಹಿಸಿ ನಿರ್ಣಯಗಳನ್ನು ನೀಡಿದರು.

ಮೊದಲನೆಯ ದಿನದ ಅಂತ್ಯಕ್ಕೆ ಸಂಗೀತ ಮತ್ತು ನೃತ್ಯವಿಭಾಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನೃತ್ಯ ವಿದ್ಯಾರ್ಥಿಗಳು ಸಂಶೋಧನಾತ್ಮಕವಾಗಿ ಕೊರವಂಜಿ ಅಧ್ಯಯನವನ್ನು ‘ಕಣಿ ಕಥಾಮಣಿ’ ಎಂಬುದಾಗಿ ನಿರ್ವಹಿಸಿದ ರೀತಿಯೇ ಒಂದು ಮೈಲಿಗಲ್ಲು. ಸಂಶೋಧನೆಗಳು ಪ್ರಯೋಗದಲ್ಲಿ ಅರಳಬೇಕೆನ್ನುವ ಆಶಯಕ್ಕೆ ಒತ್ತಾಸೆ ನೀಡಿದ ಕಾರ್ಯಕ್ರಮವೆನಿಸಿ ಶ್ಲಾಘನೆಗೆ ಪಾತ್ರವಾಯಿತು. ಡಾ. ಮನೋರಮಾ ಅವರ ‘ಕರ್ನಾಟಕದ ಕೊರವಂಜಿಗಳ’ ಕುರಿತ ಸಂಶೋಧನೆಯನ್ನು ಆಧರಿಸಿ ಜಾನಪದ ಕಥಾತಂತ್ರದ ಹನುಮ ಕೊರವಂಜಿ, ಹೆಳವನಕಟ್ಟೆ ಗಿರಿಯಮ್ಮಳ ಬ್ರಹ್ಮ ಕೊರವಂಜಿ, ಹಾಗೂ ರುಕ್ಮಿಣೀಬಾಯಿ ನರಸಾಪುರ ಅವರ ಶ್ರೀನಿವಾಸ ಕೊರವಂಜಿಯ ಸಾಹಿತ್ಯವನ್ನು ಬಳಸಿಕೊಳ್ಳಲಾಗಿತ್ತು. ಕರ್ನಾಟಕದ ಕೊರವಂಜಿಯ ವೈವಿಧ್ಯತೆಯನ್ನು ಯಥಾಸಾಧ್ಯ ದರ್ಶಿಸುವಂತೆ ಒಂದೇ ಸೂತ್ರದಲ್ಲಿ ಬಹು ಆಹಾರ್ಯದಿಂದ ನರ್ತಿಸಿದ ಮೊತ್ತಮೊದಲ ಪ್ರಯೋಗವಾಗಿ ಜೈನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಾಧನೆ ಮೇಲ್ಪಂಕ್ತಿಯದ್ದು. ಆಕರ್ಷಕವಾದ ಆಹಾರ್ಯಾಭಿನಯ, ಅದಕ್ಕೊಪ್ಪುವ ಸಾತ್ವಿಕ- ಆಂಗಿಕಗಳ ಪರಿಪಾಕ, ನಾಟ್ಯಶಾಸ್ತ್ರೋಚಿತವಾದ ಕರಣ- ಮತ್ತು ರಂಗ ನಿರ್ವಹಣೆಗಳ ಚಮತ್ಕಾರ, ಕಥಾತಂತುವನ್ನು ಪ್ರಸ್ತುತಪಡಿಸಿದ ರೀತಿ ಮನೋಜ್ಞವೆನಿಸಿತು. ಈಗಾಗಲೇ ತಮ್ಮ ಸ್ನಾತಕೋತ್ತರ ವಿದ್ಯಾಭ್ಯಾಸದ ಆಂಶಿಕ ಪೂರ್ಣತೆಗಾಗಿ ಈ ನೃತ್ಯರೂಪಕವನ್ನು ಹಿಮ್ಮೇಳ ಸಹಿತ ಅಕ್ಟೋಬರ್ ೨೦೧೯ರಲ್ಲಿ ಮಂಡಿಸಿದ್ದರಾದರೂ, ಈ ಬಾರಿ ಅದಕ್ಕಿಂತ ವಿಭಿನ್ನವಾಗಿ ಮತ್ತು ಚೊಕ್ಕದಾಗಿ ಸಿ.ಡಿ ಧ್ವನಿಮುದ್ರಿಕೆಯಲ್ಲಿ ಚಿಕ್ಕ ವೇದಿಕೆಯನ್ನೂ ಬಳಸಿಕೊಂಡು ನರ್ತಿಸಿದ ಕ್ರಮವೂ ಆಪ್ಯಾಯಮಾನವೆನಿಸಿತು.

ಈ ವಿಚಾರ ಸಂಕಿರಣದ ಆಶಯವೇ ಪ್ರದರ್ಶಕ ಕಲೆಗಳ ಸಂಶೋಧನ ವಸ್ತುಗಳಲ್ಲಿ ಕಂಡುಬರುವ ಸಾಧ್ಯತೆ, ಸಮಸ್ಯೆಗಳ ಕುರಿತು ಆಗಿದ್ದುದ್ದರಿಂದ; ಬಹ್ವಂಶ ಪ್ರಸ್ತುತಿಗಳ ಮಂಡನಕಾರರು ಸಂಶೋಧನ ವಿಷಯದೊಳಗಿನ ತಮ್ಮ ಸಮಸ್ಯೆಗಳನ್ನು ಎತ್ತಿ ತೋರಿಸುವ ಹಾದಿಯಲ್ಲಿ ಮಗ್ನರಾದರೇ ಹೊರತು ಸಂಶೋಧನ ವಸ್ತುಗಳನ್ನು ಗಮನಿಸುವ ತಲಸ್ಪರ್ಶಿಯ ಅವಕಾಶಗಳಿಂದ ತಾವಾಗೇ ಹೊರಗುಳಿದದ್ದು ನಿರಾಸೆಯೆನಿಸಿತು. ಈ ಹಿನ್ನೆಲೆಯನ್ನು ಗಮನಿಸಿಕೊಂಡಂತೆ ಸಮಾಪನ ಕಾರ್ಯಕ್ರಮಕ್ಕಿಂತ ಮೊದಲು ಆಯೋಜಿತವಾದ ವಿದ್ವತ್ ಸಂವಾದವು ಸಂಶೋಧನೆಯ ಆಳ-ಅಗಲಗಳನ್ನು ಪರಿಚಯಿಸಿಕೊಂಡು ಯುವ ಪೀಳಿಗೆಗೆ ಸೂಕ್ತ ನಿರ್ದೇಶನ ನೀಡುವಲ್ಲಿ ಸಫಲವಾಯಿತು. ಸಂಶೋಧನ ಮಾರ್ಗ, ವಿಧಾನ, ಕೈಗೊಳ್ಳುವ ತರಹೇವಾರಿ ರೀತಿಗಳು, ಯಶಸ್ಸು ಇತ್ಯಾದಿಗಳ ಬಗ್ಗೆ ಎರಡು ಗಂಟೆಗಳ ಕಾಲ ಸಂವಾದ ಕೇಂದ್ರೀಕೃತವಾಗಿತ್ತು.

ಕರ್ನಾಟಕದ ಕಲಾ ಸಂಶೋಧಕರಾದ ಡಾ.ಟಿ.ಎಸ್. ಸತ್ಯವತಿ, ಡಾ. ವರದರಂಗನ್, ಡಾ. ಮೀರಾ ರಾಜಾರಾಮ್ ಪ್ರಾಣೇಶ್, ಡಾ. ಶೋಭಾ ಶಶಿಕುಮಾರ್, ಡಾ. ಮನೋರಮಾ ಬಿ.ಎನ್ ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯದ ಸಂಗೀತ ವಿಭಾಗ ಮುಖ್ಯಸ್ಥೆ ಡಾ. ರಾಜಶ್ರೀ ರಾಮಕೃಷ್ಣ ಅವರು ಪಾಲ್ಗೊಂಡಿದ್ದ ಸಂವಾದವನ್ನು ಡಾ. ಆರತಿ ರಾವ್ ಉತ್ತಮವಾಗಿ ನಿರ್ವಹಿಸಿದರು.

ಗೋಖಲೆ ಸಂಸ್ಥೆ, ನೂಪುರ ಭ್ರಮರಿ ಮತ್ತು ಪೇಕ್ಷಾ ಸಂಸ್ಥೆಯವರ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಸಂಶೋಧನಾರ್ಥಿಗಳಿಗಾಗಿ ವ್ಯವಸ್ಥೆಗೊಳಿಸಲಾಗಿತ್ತು. ಎರಡು ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಡಾ. ಆರತಿ ರಾವ್, ಅರುಣ್ ಶ್ರೀನಿವಾಸನ್, ಮಧುಲಿಕಾ ಶ್ರೀವತ್ಸರಿಂದೊಡಗೂಡಿದ ಪ್ರಾಧ್ಯಾಪಕ ವರ್ಗದವರ ಶ್ರಮ ಅಭಿನಂದನೀಯ. ಸಂಶೋಧನ ಪ್ರಸ್ತುತಿಗಳ ಕೋಣೆಗಳನ್ನು ಭಾರತೀಯ ಕಲಾಪರಿವೇಷಕ್ಕೆ ಒಪ್ಪುವಂತೆ ಭರತ, ಆನಂದವರ್ಧನ, ಅಭಿನವಗುಪ್ತ, ಸಾರಂಗದೇವ, ರಾಮಾಮಾತ್ಯ ಎಂಬಿತ್ಯಾದಿ ಶಾಸ್ತ್ರಕಾರರ ಹೆಸರುಗಳ ಆಯತನದಲ್ಲಿ ಕಲಾತ್ಮಕವಾಗಿ ಸಿಂಗರಿಸಿ ವಿಭಾಗಿಸಿದ್ದು ಸ್ವಾಗತಾರ್ಹವೆನಿಸಿತು.

ದೇಶದ ಎಲ್ಲೆಡೆಯಿಂದ ಬಂದ ಸಂಶೋಧನಾಸಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರೂ ಬೆಂಗಳೂರು-ಕರ್ನಾಟಕದ ನೃತ್ಯಕಲಾವಿದರು, ಅಧ್ಯಾಪನ-ಸಂಶೋಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಅಷ್ಟಾಗಿ ತೊಡಗಿಸಿಕೊಳ್ಳದಿದ್ದದ್ದು ಅಚ್ಚರಿ ಮೂಡಿಸಿತು. ಕರ್ನಾಟಕದ ಕಲಾವಿದರುಗಳು ಇಂಥ ಶೈಕ್ಷಣಿಕ ಸಮ್ಮೇಳನದ ಪ್ರಯೋಜನವನ್ನು ಪಡೆದುಕೊಳ್ಳಬಹುದಿತ್ತು ಎಂದೆನಿಸಿದ್ದು ಸುಳ್ಳಲ್ಲ.

‍ಲೇಖಕರು avadhi

January 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: