ಹೊಸ ಕಣ್ಣೋಟದಲ್ಲಿ ‘ಬೆರಳ್ಗೆ ಕೊರಳ್’

ಕುವೆಂಪುರವರ ‘ಬೆರಳ್ಗೆ ಕೊರಳ್’ ನಾಟಕದಲ್ಲಿ ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಇಂಗ್ಲಿಷ್ ಮಾತುಗಳು.
ವಿಶ್ವಾತ್ಮಕತೆ ಪಡೆದ ಕನ್ನಡ ನಾಟಕ

ಜಿ ಎನ್ ನಾಗರಾಜ್ 

ನಾಟಕದ ಫೋಟೋಗಳು ಎಂದಿನಂತೆ ತಾಯ್ ಲೋಕೇಶ್ 

ಬೆಂಗಳೂರಿನ ಕಲಾಗ್ರಾಮದಲ್ಲಿ ಈ ನಾಟಕದ ಪ್ರದರ್ಶನ ನೋಡಲು ಒಂದೆರಡು ನಿಮಿಷ ತಡವಾಗಿ ಒಳಹೊಗುವಾಗ ತೆಲುಗು, ತಮಿಳು ಮಾತುಗಳು ನನ್ನ ಕಿವಿದೆರೆಗೆ ಬಡಿದವು. ನಾನೇನಾದರೂ ತಪ್ಪು ನಾಟಕಕ್ಕೆ ಬಂದೆನೇನೋ ಎಂದು ಬೇರೆ ಕಡೆ ಇರಬೇಕು ನಾನು ನೋಡಬಂದ ನಾಟಕ ಎಂದು ಹಿಂತಿರುಗತೊಡಗಿದೆ. ಅಲ್ಲಿದ್ದ ಒಬ್ಬ ವ್ಯಕ್ತಿಯನ್ನು ಇದ್ಯಾವ ನಾಟಕ‌ ಎಂದು ಕೇಳಿದೆ. ಇದೇ ಕನ್ನಡದ ‘ಬೆರಳ್ಗೆ ಕೊರಳ್’ ಎಂದು ಖಾತರಿಗೊಳಿಸಿದರು.
ಆಶ್ಚರ್ಯದಿಂದಲೇ ಒಳಗೆ ಹೊಕ್ಕರೆ ಇಡೀ ಗೃಹ ಭರ್ತಿಯಾಗಿ ನೆಲದ ಮೇಲೇ ನೂರಾರು ಜನ ಕುಳಿತು ನೋಡುತ್ತಿದ್ದರು.

ನಾಟಕ ನೋಡಲು ಕುಳಿತರೆ ಆರು ಭಾಷೆಗಳ ಮಾತುಗಳು ಕೇಳ ಬಂದವು.
ಇದೇನು ಕನ್ನಡ ನಾಟಕವೇ ಅಥವಾ ಅದರ ಅನುವಾದವೇ ಎನ್ನಿಸಿತು ಕೆಲ ಕ್ಷಣ.

ನಾಟಕದಲ್ಲಿ ಅಲ್ಲಲ್ಲಿ ಆರು ಭಾಷೆಗಳ ಮಾತುಗಳು ನಾಟಕದ ಸಾರವನ್ನು ತಿಳಿಸಿಕೊಡುವಂತೆ ಬಂದರೂ ತಿರುಳು ಪೂರ್ತಿಯಾಗಿ ಕುವೆಂಪುರವರ ವಿಶಿಷ್ಟ ಹಳಗನ್ನಡದ ಭಾಷೆಯ ರಂಗರೂಪವೇ‌ ಆಗಿತ್ತು.
ಇದೇ ನಾಟಕವನ್ನು ಹಿಂದೆ ಮೈಸೂರು ರಂಗಾಯಣದ, ಇನ್ನೂ ಬಹಳ ಹಿಂದೆ ಉದಯರವಿ ಕಲಾವಿದರ ಪ್ರದರ್ಶನ ನೋಡಿದ್ದರೂ ಈ ಪ್ರದರ್ಶನ ‘ಪೊಚ್ಚಂಬೊಸತು’ ಎನಿಸಿತು.

ಈ ನಾಟಕವನ್ನು interpret ಮಾಡಿದ ರೀತಿ ಇದು ಮಹಾಭಾರತ ಕಾಲದ ಅನುಭವ ಮಾತ್ರವಾಗಿರದೆ ಇಂದು ಭಾರತದ ಯಾವುದೇ ಆದಿವಾಸಿ ಬುಡಕಟ್ಟು ಅನುಭವಿಸುತ್ತಿರುವ ಬೇಗೆಯೇನೋ, ಇಂದು ಅರಣ್ಯದ ಮೇಲೆ‌ ನಡೆಯುತ್ತಿರುವ ಆಕ್ರಮಣದ ಕುಕೃತ್ಯವೇನೋ ಎನಿಸುವಂತಿತ್ತು.
ಅಷ್ಟೇ ಅಲ್ಲ ಅಮೇರಿಕದ ರೆಡ್ ಇಂಡಿಯನ್, ಇಂಕಾ, ಮಾಯಾ, ಆಸ್ಟ್ರೇಲಿಯಾದ ಮಾವೋರಿ ಆದಿವಾಸಿಗಳು ಅನುಭವಿಸಿದ ಕ್ರೌರ್ಯದ ಬಿಂಬವಾಗಿ ಬಿಟ್ಟಿತು.

ಇಲ್ಲಿಯವರೆಗೆ ಭಾರತದ ಜಾತಿ ವ್ಯವಸ್ಥೆಯ ಕೀಳು ಮನೋಭಾವ ಎಸಗಿದ ಅಮಾನವೀಯತೆಯ ರಂಗ ರೂಪವೆನಿಸಿದ್ದ ಏಕಲವ್ಯನ ಕತೆ ಈ ತಿರುಳನ್ನು ಉಳಿಸಿಕೊಂಡೇ ಜಗತ್ತಿನೆಲ್ಲ ಆದಿವಾಸಿಗಳ ಮೇಲಿನ ಕ್ರೌರ್ಯದ ಕತೆಯಾಗಿ ವಿಶ್ವಾತ್ಮಕತೆಯನ್ನು ಪಡೆದುಬಿಟ್ಟಿತ್ತು.
ಕುವೆಂಪುರವರ ನಾಟಕಕ್ಕೆ ಈ ವಿಶ್ವಾತ್ಮಕತೆಯನ್ನು ದೊರಕಿಸಿದ ನಾಟಕದ ನಿರ್ದೇಶಕಿ ತಮಿಳುನಾಡಿನ ಪ್ರಸನ್ನ ರಾಮಸ್ವಾಮಿಯವರು ಅಭಿನಂದನಾರ್ಹರು.

ಈ ನಾಟಕದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ನಟರ ಜೊತೆಗೆ ಕೇರಳ, ತೆಲಂಗಾಣ, ತಮಿಳುನಾಡು, ಹರ್ಯಾಣ ರಾಜ್ಯಗಳ ನಟರೂ ಸೇರಿದ್ದರು. ಇವರು ಕುವೆಂಪುರವರ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ, ಸುಲಲಿತವಾಗಿ ಉಚ್ಚರಿಸಿದ, ಅಭಿನಯಿಸಿದ ರೀತಿ ಮೆಚ್ಚಬೇಕಾದುದೇ.

ಈ ನಾಟಕ ಕರ್ನಾಟಕದ ರಂಗ ಸಾಹಸಗಳ ಪರಂಪರೆಗೆ ಮತ್ತೊಂದು ಕೊಡುಗೆಯಾಗಲಿ. ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲ ಅಮೆರಿಕ, ಆಸ್ಟ್ರೇಲಿಯಾ, ಆಫ್ರಿಕಾಗಳಲ್ಲಿಯೂ ಪ್ರದರ್ಶನ ಕಾಣಲು ಅತ್ಯಂತ ಅರ್ಹ.
ತಮ್ಮದೇ ಅನುಭವ ಎಂದು ಅಲ್ಲಿಯ ಜನತೆ ಎದೆಗಪ್ಪಿಕೊಳ್ಳುವರೆಂಬ ಭರವಸೆ ಇದೆ.
ಕರ್ನಾಟಕದ ಹಲವು ರಂಗ ಸಾಹಸಗಳ ಕನಸುಗಾರರೂ ನಿರ್ದೇಶಕರೂ ಆದ ಬಸವಲಿಂಗಯ್ಯನವರು ಇದರ ಬೆನ್ನೆಲುಬಾಗಿದ್ದಾರೆ. ಎನ್‌ಎಸ್.ಡಿ ಬೆಂಗಳೂರಿನ ನಿರ್ಮಾಣದ ನಾಟಕ ಇದು.

‍ಲೇಖಕರು avadhi

November 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ನೋಡಿ ಅದರ ಅನುಭವ ಪಡೆದುಕೊಳ್ಳಬೇಕೆನಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: