ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸದೇನ ಬರೆಯಲಿ..?

ಮನುಷ್ಯ ಜಾತಿ ತಾನೊಂದೆ ವಲಂ

ಡಾ. ಪದ್ಮಿನಿ ನಾಗರಾಜು

ಹೊಸದೇನ ಬರೆಯಲಿ

ಯುದ್ದದ ಬಗ್ಗೆ

ಸಾವಿನ ಸೂತಕವಲ್ಲದೆ

ಗೆಲುವು ಒಬ್ಬರಿಗೆ

ಸೋಲು ಮತ್ತೊಬ್ಬರಿಗೆ

ಒಮ್ಮೊಮ್ಮೆ

ಗೆಲುವು ಸೋಲಿನ

ಲೆಕ್ಕಾಚಾರವಿಲ್ಲದೆ

ನಡೆಯುತ್ತವೆ ಯುದ್ದಗಳು

ಗಡಿಗಳಾಚೆಯ

ಸಂಬಂಧಗಳ

ಬೇಲಿಯಾಚೆಯೇ ಬಂಧಿಸಿ

ಶಿಕ್ಷಿಸುವ ಅವಾಂತರಗಳ

ಈಗ

ಯುದ್ಧಕ್ಕೆ

ಕೋವಿ, ಕತ್ತಿ, ಬೇಕಿಲ್ಲ

ಆನೆ ಕುದುರೆ ಒಂಟೆ ಬೇಕಿಲ್ಲ

ಅವ ಇವ ಮುಖಾಮುಖಿಯಲ್ಲ

ರಥಗಳಲ್ಲಿ ಕುಳಿತು

ಬಾಣಗಳ ಹೂಡಬೇಕಿಲ್ಲ

ಪರಾಕ್ರಮದ ಮಾತಿಲ್ಲ

ಎಲ್ಲಿಯೋ ಕುಳಿತು

ಒತ್ತಿದೊಂದರೊಂದು ಬಟನ್ನು

ಈ ದೇಶ ಹೊತ್ತಿ ಉರಿಯುತ್ತದೆ

ರಾಕೆಟ್ಟುಗಳು ದಾಳಿ ಮಾಡಿ

ಊರ ಸುಡುತ್ತವೆ

ಇಲ್ಲಿ

ಸತ್ತವರ ಲೆಕ್ಕಾಚಾರವಷ್ಟೆ

ಕೂಸು ಕಂದಮ್ಮಗಳು

ಕಣ್ಣುಬಿಡುವ ಮುಂಚೆ

ಮಣ್ಣಲ್ಲಿ ಮಣ್ಣಾಗುತ್ತವೆ

ಕಂದರದಲಿ ಹೊಕ್ಕಿದ್ದರು

ಹುಡುಕಿ ಕೊಲ್ಲುವ

ಮಿಸೈಲುಗಳ ದಾಳಿಗೆ

ಬದುಕುವವರು ಯಾರು

ಯುದ್ಧ

ಸೈನಿಕನಿಗೆ ಬೇಕಿಲ್ಲ

ಪ್ರಭುತ್ವಗಳ ಅಹಂಕಿಗೆ

ಇಲ್ಲಿ ಯಾರ್ಯಾರೋ

ಬಲಿಯಾಗುತ್ತಾರೆ

ಕಾದಾಡುವವನಿಗೆ

ನೂರೆಂಟು ದೇಶಗಳು

ಜೊತೆಯಾಗುತ್ತವೆ

ಯುದ್ಧ ನಡೆಯುತ್ತಲೇ

ಇರಬೇಕೆಂದು

ಬೇಲಿ ಬಳಿಯೇ

ಕಾದು ಕುಳಿತಿವೆ

ರಣಹದ್ದುಗಳು

ಇತಿಹಾಸ

ನೆನಪಿಸುತ್ತದೆ

ಅಶೋಕನ್ನನ್ನ

ಅಲೆಕ್ಸಾಂಡರನ್ನ

ಹಾಗೆ ಕಾದಾಡಿ

ಮಣ್ಣಾದವರನ್ನ

ಇಲ್ಲಿ ಯಾರಿಗೂ

ಪಾಠ ಬೇಕಾಗಿಲ್ಲ

ಯುದ್ಧ ಮಾಡುವುದು

ತನ್ನ ಪ್ರತಿಷ್ಠೆಗಾಗಿ

ದೇಶಕ್ಕಾಗಿ ನೆಲಕ್ಕಾಗಿ

ತನ್ನವರಿಗಾಗಿ!!

ಸತ್ತ

ಯುವಕರ ರಕ್ತ

ಬಲಿಯಾಕಿ ಗೆಲುವ

ಸಾಧಿಸಿ ಯಾವ

ಸಾಮ್ರಾಜ್ಯ ಕಟ್ಟಬೇಕಿದೆ

ಕೊರಳೊಡ್ಡಿದರೂ

ಕೊಲ್ಲಲಾಗದು ವೈರಿಯನು

ಶರಣು ಬಂದವನ ರಕ್ಷಣೆ

ಇವೆಲ್ಲ ಸವಕಲು ನಾಣ್ಯ

ದಯೆ ಇಲ್ಲದ

ಧರ್ಮವಾವುದು

ಕ್ಷಮೆ

ಜೀವನದ ದೀಕ್ಷೆ

ಪಾಠ ಕಲಿಯಬೇಕಿದೆ

ನಾನು ನೀನೂ

ಒಂದಾಗಿ ಬಾಳುವುದ

ಮನುಷ್ಯ ಜಾತಿ

ತಾನೋಂದೆ ವಲಂ

ಎಂಬುವುದ

******

      

‍ಲೇಖಕರು avadhi

23 January, 2025

4 Comments

  1. Krishna Khanapur

    ಯುದ್ಧವೇ ಮಾತನಾಡಿದಂತಿದೆ… ಅದ್ಭುತ ಕವಿತೆ.

  2. ನಿಡಸಾಲೆ ಪುಟ್ಟಸ್ವಾಮಯ್ಯ

    ಎಲ್ಲವೂ ಸರಳವಾಗಿ ಅರ್ಥಗರ್ಭಿತವಾಗಿವೆ. ಬರೆಯಿರಿ, ಬರೆಯುತ್ತಿರಿ. ನಿಮಗೆ ಅಭಿನಂದನೆಗಳು.

  3. Shama Nandibetta

    ಇಲ್ಲಿ ಯಾರಿಗೂ
    ಪಾಠ ಬೇಕಾಗಿಲ್ಲ
    ಯುದ್ಧ ಮಾಡುವುದು
    ತನ್ನ ಪ್ರತಿಷ್ಠೆಗಾಗಿ – ಕೊನೆಗೆ ತಾನೂ ಮಣ್ಣಾಗುವುದೇ ಎಂಬ ಅರಿವು ಬರುವ ವರೆಗೆ ಇಷ್ಟೇ

    ಈಗ
    ಯುದ್ಧಕ್ಕೆ
    ಎಲ್ಲಿಯೋ ಕುಳಿತು
    ಒತ್ತಿದೊಂದರೊಂದು ಬಟನ್ನು
    ಈ ದೇಶ ಹೊತ್ತಿ ಉರಿಯುತ್ತದೆ
    ರಾಕೆಟ್ಟುಗಳು ದಾಳಿ ಮಾಡಿ
    ಊರ ಸುಡುತ್ತವೆ – ತಂತ್ರಜ್ಞಾನವನ್ನು ಮನುಷ್ಯ ಬಳಸಿಕೊಳ್ಳುವ ನಿಷ್ಕಾರುಣ್ಯವಾದ ರೀತಿಗೆ ದೇಶಗಳ ಜೊತೆ ಎಷ್ಟೋ ಮನಸ್ಸುಗಳೂ ಹೊತ್ತಿ ಉರಿದಿವೆ. ಸುಟ್ಟ ದೇಹಗಳ ಲೆಕ್ಕಾವದರೂ ಸಿಕ್ಕೀತು; ಸತ್ತ ಮನಸ್ಸುಗಳದ್ದು ?

  4. ನಯನಾ ಎಸ್.

    ಬದುಕು ಇಷ್ಟೇ ಎನ್ನಿಸಿದರೂ ಜೀವನ ಪ್ರೀತಿಯನ್ನು ನೆನಪಿಸುವ ಕವನ.

    ಹಿಂಸೆಯ ದರ್ಶನ ನೀಡಿದರೂ ನಾವು ಸುರಕ್ಷಿತರಾಗಿದ್ದೇವೆ. ಇನ್ನೊಬ್ಬರಿಗೆ ಒಳ್ಳೆಯದು ಮಾಡೋಣ ಎಂಬ ಸದಾಶಯ ಈ ಕದನದಲ್ಲಿ ಮೂಡುತ್ತದೆ.

    ಅಭಿನಂದನೆ ಮೇಡಂ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading