
ಮಹಾಂತೇಶ ನವಲಕಲ್
೧
ಒಂದು ದಿನ
ಬಂಗಾರ ಮಾಡುವ ಅಕ್ಕಸಾಲಿಗನ
ಬಂಗಾರದ ಒಡೆವೆಯ ಬಣ್ಣ ಬಿಳಿಚಿಕೊಂಡಿತು
ಆತ ಬಣ್ಣವನ್ನು ಕಾಮನಬಿಲ್ಲಿನಲ್ಲಿ, ಹಿತ್ತಲಲಿ,
ಮತ್ತೆ ಪುಟ್ಟ ಅಗ್ಗಿಷ್ಠಿಕೆಯ ಕುಲುಮೆಯಲ್ಲಿ, ಹುಡುಕಿದ.
ಯಾರಾದರೂ ಮಾಂತ್ರಿಕ ಬಂದು
ಮಂತ್ರದಂಡದಿಂದ ಮಾಯ ಮಾಡಿರಬಹುದು
ಎಂದು ಬೆಟ್ಟ ಗುಡ್ಡ ತೊರೆ ಹಳ್ಳಗಳ ಹುಡುಕಿದ.
ನಿರಾಶೆಯಾಯಿತು
ಕಳೆದುಹೋದ
ಬಂಗಾರದ ಬಣ್ಣ ಅವನಿಗೆ ಸಿಗಲಿಲ್ಲ
೨
ಯಾರೋ ಹೇಳಿದರು
ಹಂಸ ಪಕ್ಷಿಯೊಂದು
ಹಾರಿಬಂದು ಅಕ್ಕಸಾಲಿಗನ ಕಾರ್ಯಾಗಾರ ಹೊಕ್ಕಿತಂತೆ ,
ಅಲ್ಲಿಯ ಸ್ವರ್ಣ ದ್ರವ ಕುಡಿಯಿತಂತೆ
ಮತ್ತೆ ಎತ್ತಲೋ ಹಾರಿತಂತೆ
ಇದನ್ನು ಕೇಳಿ ಅಕ್ಕಸಾಲಿಗ
ಕಳೆದುಹೋದ
ಬಣ್ಣವನು ಮತ್ತೆ ಹುಡುಕ ಹತ್ತಿದ
ಸಮುದ್ರತೀರ’ ಕೊಳಗಳು ; ಹಿಮಚ್ಛಾದಿತ ಬಯಲು
ಆದರೂ ಎಲ್ಲಿಯೂ ಸಿಗಲಿಲ್ಲ ಕುರುಹು

೩
ಒಬ್ಬ ಹಳ್ಳಿಯ ಹೈದ
ಒಂದು ದಿನ ಇವನಿಗೆ ಸಿಕ್ಕು ಹೇಳಿದ .
ನಮ್ಮೂರಿನ ಮರಡಿ ಗುಡ್ಡ ದ ಪಕ್ಕದಲಿ
ಒಂದು ಕೆರೆಯಿದೆ ಅದಕ್ಕೆ ಅಂಟಿಕೊಂಡು
ಸಾವಿರಾರು ಹೊನ್ನಾವರಿಕೆ ಮರಗಳಿವೆ
ಇವಗಳನು ನೆಟ್ಟಿದ್ದು ಒಂದು ಹಂಸಪಕ್ಷಿ.
ಮತ್ತೆ ಹೇಳಿದ
ಏನು ಹೇಳಲಿ
ಮತ್ತೆ ಹಂಸ ಪಕ್ಷಿ
ಹಾರುತ್ತಾ ಹಾರುತ್ತಾ
ಏಳು ತೂಕದ ರಾಣಿಯತ್ತ ಹಾರಿ ಹೋಯಿತು.
ತನ್ಮಯತೆಯಿಂದ ಅವಳ ಹೊಳಪಾದ ಪಾದಗಳ ನೆಕ್ಕಿತು.
ಈಗ ಅರ್ಥವಾಯಿತು
ಇವನಿಗೆ ಕಳೆದುಹೋದ ಬಂಗಾರ ಬಣ್ಣ ಎಲ್ಲಿದೆಯೆಂದು
೪
ಆ ಬಂಗಾರದ ಬಣ್ಣಕ್ಕೆ ಹಾಗೆಯೇ ಉಗಮದ ಗುಣ ಇರುವುದರಿಂದ
ಮತ್ತೆ ಈ ಜಗದಲಿ ಹುಟ್ಟಿ ಬಂದಿತು
ಕಷ್ಟವಿಲ್ಲದೆ.
ಅದಕೆ ಈಗ ಸಾವಿಲ್ಲದ ಕೇಡಿಲ್ಲದೆ ನಡಿಗೆ
ಯಾಕೆಂದರೆ
ಅಕ್ಷರದ ಪುಟದಲಿದೆ ಬಂಗಾರದ ಅಡುಗೆ
ಹೊನ್ನಾವರಿಕೆಯಾಗಿ ಆ ಮಲ್ಲಿಗೆ ತೂಕದ ರಾಣಿಯಾಗಿ”






0 Comments