ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಕ್ಕಳ ಸುಳಿಯ ಚಕ್ರತೀರ್ಥ..

ಕಪ್ಪು ಕಾಮನಬಿಲ್ಲು

ಶ್ರೀದೇವಿ ಕೆರೆಮನೆ

ಹೌದು, ನನಗೆ ಗೊತ್ತು
ನಾನು ಕರಿ ಕಪ್ಪು
ಅದು ನಿನಗೂ ಇಷ್ಟ ಎಂಬುದೂ
ಮಾತಿಗೆ ಮೊದಲು ಕಾಳಿಂದಿ
ಎಂದು ಸೊಂಟದ ಮಿಡತೆ ಚಿವುಟಿ
ಮೃದುವಾಗಿ ಛೇಡಿಸುತ್ತ
ನಿನಗೇ ನೀನು ಖುಷಿ ಅನುಭವಿಸುವುದನ್ನು
ಕಂಡೂ ಕಾಣದಂತೆ ಸುಮ್ಮನಿರುತ್ತೇನೆ
ನನಗೂ ಇಷ್ಟ ಎಂದೇ

ಹಾಲಿನ ಕೆನೆಗಿಷ್ಟು ಲಿಂಬೆ ರಸ ಬೆರೆಸಿ
ಚಿಟಿಕೆ ಅರಿಶಿಣ ಹಾಕಿ
ಒಂದೇ ಒಂದು ಹನಿ ಜೇನುತುಪ್ಪ ಸೇರಿಸಿ
ಮುಖಕ್ಕೆ ಲೇಪಿಸಿಕೊಳ್ಳಲೇ?
ತಿಳಿಗೊಳಿಸುವುದಂತೆ ಮುಖದ ಬಣ್ಣವನ್ನು
ಲಿಂಬೆರಸ ಮತ್ತು ಅರಿಶಿಣ
ನೀನು ಕೃಷ್ಣೆ ಎಂದಾಗಲೆಲ್ಲ
ನಾನು ನಗುತ್ತ ಕೇಳುವ ಪ್ರಶ್ನೆ
ನಿನ್ನ ಉತ್ತರ ಬೇಡ ಎಂದಾಗಿರುತ್ತದೆ
ಎಂದು ತಿಳಿದಿದ್ದರೂ

ಬೆಳಿಗ್ಗೆ ಬೆಳಿಗ್ಗೆ ನೀನು ಏಳುವ ಮೊದಲೇ
ಅರಶಿಣ ಹಚ್ಚಿ
ಕುದಿವ ನೀರಾವಿಗೆ ಒಡ್ಡಿ
ಮುಖ ತೊಳೆದು ಬಿಡುತ್ತೇನೆ
ಐದೇ ನಿಮಿಷದಲ್ಲಿ
ನಾನು ಬೇಕಂತಲೇ
ಗೋಗರೆಯುತ್ತೇನೆ ಮನಸಿಲ್ಲದಿದ್ದರೂ

ಎದ್ದ ಕೂಡಲೇ ನೀನು
ಹೆಜ್ಜೆಯ ಸಪ್ಪಳ ಕೇಳದಂತೆ
ಹಿಂಬದಿಯಿಂದ ಸೊಂಟ ಬಳಸಿ
ಕಿಬ್ಬೊಟ್ಟೆಯ ಮಿದುವ ಸುಖಿಸುತ್ತ
ಕುತ್ತಿಗೆಯ ಮೇಲೆ ಮುಖವಿಟ್ಟು
ಕೆನ್ನೆಗೆ ತುಟಿ ಆನಿಸುವುದನ್ನು
ನಾನೆಷ್ಟು ಕಾದಿರುತ್ತೇನೆಂಬುದು
ನಿನಗೂ ತಿಳಿದಿರುವ ವಿಷಯವೇ
ಹಾಗೆ ಮಾಡಿದರೆ ,
ನಾನು ಹತ್ತಿರ ಬಂದು
ತುಟಿಯನ್ನು ಹಳದಿಯಾಗಿಸಿಕೊಳ್ಳುವುದಿಲ್ಲ
ನಿನ್ನ ಮಾತು ಸ್ವಲ್ಪವೂ
ಅರ್ಥವಾಗದಂತೆ ಸೋಗು ಹಾಕುತ್ತೇನೆ

ಮೊನ್ನೆ ಯಾವುದೋ ನಟಿಯ
ಹೊಳೆವ ಅಚ್ಚ ಬಿಳುಪಿನ ಕೆನ್ನೆ ನೋಡುತ್ತ
ನೀನು ಲೊಟ್ಟೆ ಹೊಡೆದು
ಕಿರುಗಣ್ಣಲ್ಲಿ ನನ್ನ ಮುಖನೋಡಿದ್ದು ನನಗೂ ಗೊತ್ತು
ಬೇಡವೆಂದರೂ ಒಂದಿಷ್ಟು ಅಸೂಯೆ ಕಾಡಿ
ಮುಖ ಬಾಡಿ ಕಣ್ಣು ತಪ್ಪಿಸುತ್ತ
ನಾನು ಎದ್ದು ಹೋಗಿದ್ದು
ನಿನಗೂ ಬೇಸರವೆನ್ನಿಸಿದೆ.

ನಿನ್ನೆ ಅದೇ ಸುಂದರಿಯ
ನಗುತ್ತಿರುವ ಅರೆಬೆತ್ತಲೆಯ
ಬಿಕನಿ ಪೋಟೋ ಎದುರಿಗಿಟ್ಟರೂ
ನನ್ನ ಕೆನ್ನೆ ಸವರುತ್ತ
ಕುತ್ತಿಗೆಯ ಶಂಕು ತಿರುವಲ್ಲಿ
ಜಾರಿಬಿದ್ದವನಂತೆ ಕುಳಿತ
ನಿನ್ನ ಕುರಿತು
ಎಲ್ಲಿಲ್ಲದ ಮುದ್ದು ಉಕ್ಕಿ
ನಸು ನಕ್ಕಿದ್ದನ್ನು
ನೀನು ಗಮನಿಸಿಯೂ ಗಮನಿಸದಂತಿರುವಾಗ
ಅದೇ ಪೇಪರ್ ನ ಹಿಂಬಾಗದಲ್ಲಿ
ಮನಸ್ಸು ಕದಿಯುವಂತೆ ನಗುತ್ತಿರುವ
ನನ್ನ ಮೆಚ್ಚಿನ ಹೀರೋ ಬಗ್ಗೆ
ಮಾತನಾಡುವುದಾದರೂ ಹೇಗೆ?

ಕಪ್ಪು ಕಲ್ಲಿನಲ್ಲಿ ಕಡೆದಿಟ್ಟ ಶಿಲ್ಪ ಎನ್ನುತ್ತ
ಕುತ್ತಿಗೆಯ ಹೊರಳು
ಎದೆಯ ಮೆತ್ತೆಯ ಸೆಳೆತ
ಹೊಕ್ಕಳ ಸುಳಿಯ ಚಕ್ರತೀರ್ಥ
ಸಪೂರದ ಕಟಿ, ನಿತಂಬ ನೇವರಿಸುವ
ನಿನ್ನ ಬೆರಳುಗಳಲ್ಲಿರುವ
ವೈಣಿಕನ ನೈಪುಣ್ಯಕ್ಕೆ
ವೀಣೆಯೇ ಕರಗಿ ನೀರಾಗಿ
ಸಪ್ತ ಸ್ವರಗಳೂ ಮಿಳಿತಗೊಂಡು
ಕಾಮನಬಿಲ್ಲು ರೂಪುಗೊಳ್ಳುವಾಗ
ಎಲ್ಲಿದೆ ಬಣ್ಣದ ಹಂಗು

‍ಲೇಖಕರು avadhi

20 September, 2018

3 Comments

  1. ರಾಜು ಪಾಲನಕರ ಕಾರವಾರ

    ಶ್ರೀದೇವಿ ಮೇಡಂ ರವರೇ ನಿಮ್ಮ ಕವನ ತುಂಬಾ ಚೆನ್ನಾಗಿದೆ…ಕವನ ನನಗೆ ತುಂಬಾ ಇಷ್ಟ ಆಯ್ತು ನಿಮಗೆ ಅಭಿನಂದನೆಗಳು

  2. ಶ್ರೀಧರ ಬನವಾಸಿ

    ದಾಂಪತ್ಯದ ಒಲುಮೆಯ ರಸ ಕಾವ್ಯ!!
    ರಸಿಕ ಲಾಲಿತ್ಯ ಮೋಹ ಸಂವೇದನೆ!!
    ಇಷ್ಟವಾಯ್ತು ಮೆಡಮ್
    -ಶ್ರೀಧರ ಬನವಾಸಿ

  3. Veeresh

    ಬರವಣಿಗೆ ಶೈಲಿ ಹಿಡಿಸಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading