ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇ ರಾಮ್..

ಎನ್.ರವಿಕುಮಾರ್ / ಶಿವಮೊಗ್ಗ

ಚರಕದ ಚಕ್ರಗಳು ತಿರುಗುತ್ತಲೆ  ಇವೆ.
ಕಾಲ ಗತಿಯ ಹಜಾರದೊಳಗೆ ರಾಮನಾಮವ ಭಜಿಸಿ- ಭಂಜಿಸಿ
ಅರ್ಪಿಸುವ ದೇವಗಾನವೆಂದು  ನಂಬಿಸಲಾಗುತ್ತಿದೆ.
ಸಾಲಂಕೃತ ಸಾರೋಟು- ಗದ್ದುಗೆಯ ಒಡ್ಡೋಲಗದಲ್ಲಿ
ಫಕೀರನ ಹೆಣದ ಮರೆವಣಿಗೆ ಹೊರಟಿದೆ.
ಹೆಗಲಿಗೆ  ಹೆಗಲು ಬದಲಿಸಿ| ಮಡಿಬಟ್ಟೆ ಮಾಸದಂತೆ
ರಾಮನಾಮ ಸತ್ಯ ದ ಸೂತಕ ಕಳೆಯಲು ಗರಿಕೆ-ಗೋ ಮೂತ್ರ ಚಿಮ್ಮಿಸಿ
ಒಳಮನೆಗಳು  ಪವಿತ್ರಗೊಂಡಿವು!
ದಣಿವರಿಯದೆ ತಿರುಗಿದ ಚರಕ
ನೂತ ನೂಲೊಳಗಿನ ಕಾರುಣ್ಯದ ಎಳೆಗಳ ಬಿಕ್ಕಳಿಕೆಗಳಿಗೆ ಕಿವಿ ಕಿವುಡಾಗಿವೆ.

ನಿಶ್ಯಸ್ತ್ರ  *ಸಂತನ*  ಎದೆಯ ಸೀಳಿದ ಗುಂಡುಗಳ
ವೀರಾವೇಶವಿನ್ನೂ  ತಣಿದಿಲ್ಲ. ಸಮರವೀರರಿಗೆಲ್ಲಾ
ಗರ್ಭಗುಡಿಯಲ್ಲಿ ಅಭಿಷೇಕವಂತೆ|
ಬೀದಿಯಲ್ಲಿ ಚಿಮ್ಮಿ ಚೆಲ್ಲಾಡಿದ ರಕ್ತವನ್ನು
ಪವಿತ್ರಗಂಗೆ ತಂದು ತೊಳೆದಿದ್ದಾರೆ
ಝಗಮಗಿಸುವ ಬೆಳಕಿನ ಪರದೆಯಲ್ಲಿ ತೂಗು ಬಿಟ್ಟ ಪುಡುಬಟ್ಟೆಯ
*ಫಕೀರ* ನ ಪಟಕ್ಕೆ ಹೂವಿನ ಎಸಳುಗಳ ಅರ್ಪಣೆ
ದೇಶಾನುದೇಶಗಳು ನೋಡುವಂತೆ-ಕೊಂಡಾಡುವಂತೆ
ಕಸ್ತೂರಿಗಂಧ,ಗುಲಾಬಿ ತೇಯ್ದ ಜಲ-ತೈಲದಿಂದ ತೊಳೆದು  ತೀಡಿದರೂ ಮುಂಗೈಗಳ
ಮೆತ್ತಿದ ನೆತ್ತರ ಘಮಟು  ಮೂಗು ಬಡಿಯುತ್ತಲೆ ಇದೆ.
ಚರಿತ್ರೆಯ *ಸತ್ಯ* ವನ್ನೂ ವರ್ತಮಾನದ ಸುಳ್ಳಿನ ಕುಲುಮೆಯಲ್ಲಿ  ಸುಡುವುದಾ ಕಂಡಿರಾ?
*……ಹೇ….. ರಾಮ್….. *

‍ಲೇಖಕರು avadhi

2 October, 2018

6 Comments

  1. Srinath nagaragadde

    ಚೆನ್ನಾಗಿದೆ. ಗುಲಾಬಿ ತೈಯುವುದು… ಇಂತಹ ಒಂದೆರಡು ಸಣ್ಣ ದೋಷಗಳನ್ನು ಬಿಟ್ಟರೆ ಅದ್ಭುತ ಭಾವ ಪ್ರಕಟಣೆ… ಸಂಘಿಗಳ ಮೇಲಿನ ಸಿಟ್ಟು ಕರಗುವ ತನಕ ಹೀಗೇ ಬರೆಯುತ್ತಿರಿ

    • N.Ravikumr

      ಸಂಘಿಗಳೆಂದು ನಾನೆಲ್ಲಿ ಹೇಳಿದೆ.

  2. shankanaadha

    ಹೇ ರಾಮ್….

    ನಿನ್ನ ನೆತ್ತರನ್ನು ಚೆಲ್ಲಿದ್ದು ಯಾವ ಕಾರಣಕ್ಕೆ ಎಂದು ಅರ್ಥ ಮಾಡಿಕೊಳ್ಳಲಿಲ್ಲ ಈ ಮೂರ್ಖರು.
    ಗೋಮಾತೆಯ ನೆತ್ತರ ಬಸಿದರೆ ಶಭಾಷ್ ಎನ್ನುವರು
    ದೇಶದ್ರೋಹಿಗಳ ಸದೆಬಡಿದರೆ ಹೌಹಾರುವರು.

    ನಿನ್ನ ಜೀವನದ ಆದರ್ಶ ಮನೆಮನೆ ಗಿರಿ ಗ್ರಾಮ ಗಲ್ಲಿಗಳಲ್ಲಿ ಹರಿದಿದೆ ನಿತ್ಯ ಗಂಗೆ.
    ಕುಡಿತ, ದುಶ್ಚಟಗಳ ಕಾಲಲ್ಲಿ ಒದ್ದು ನಡೆಯುವ ಶಕ್ತಿಗಳ
    ವ್ಯಕ್ತಿ ನಿರ್ಮಾಣ ಕಾರ್ಯ ನಡೆದಿದೆ ಸದ್ದಿಲ್ಲದೆ.

    ರಾಮರಾಜ್ಯದ ಕನಸು ನನಸು ಮಾಡುತಿಹೇವು
    ರಾಮ ಮಂದಿರಕ್ಕೆ ವಿಶ್ವಾರ್ಪಣೆಗೆ ಸಿದ್ಧಮಾಡಿಹೆವು.

    ನಿನ್ನ ಜೀವನವ ಸಾರ್ಥಕ ಮಾಡಿದೆವು.

    ಹೇ ರಾಮ್…..

  3. Venkatesh P

    ತುಂಬಾ ಚೆನ್ನಾಗಿದೆ ಅಣ್ಣಯ್ಯ, ಶುಭಾಭಿವಂದನೆಗಳು

  4. Sachinkumar Hiremath

    very interesting to read.. it impressed me..

  5. ಗೀತಾ ಎನ್ ಸ್ವಾಮಿ. ಪ್ರಾಂಶುಪಾಲರು. ಕಲ್ಪತರು ಪದವಿ ಪೂರ್ವ ಕಾಲೇಜು.ತಿಪಟೂರು

    ಹೇ ರಾಮ್ ಕವಿತೆ ಯ ಹುಡುಕಾಟ ದೊಡ್ಡದು. ಭಾರತದ ಒಟ್ಟು ಚರಿತ್ರೆಯನ್ನು ನಿಖರವಾಗಿ ಅಧ್ಯಯನ ಮಾಡಿದ ಐಡಿಯಲ್ ಮನಸುಗಳಿಗೆ ಗೊತ್ತು ಇಲ್ಲಿ ಕೇಡಿನಾಚೆ ನಿಂತು ಕಟ್ಟಿದ ಒಳ್ಳೆಯದು ಏನು ಉಳಿದಿಲ್ಲ ಅಥವಾ ಉಳಿಸಲಾರರು. ಬಣ್ಣ,ಬಾವುಟ, ಧರ್ಮ, ಜಾತಿ, ಆಯುಧಗಳಿಗೆಲ್ಲ ಹಿಂಸೆಯ ಜೀವತುಂಬುತ್ತಿರುವ ರಾಜಕಾರಣ ಕಾರುಣ್ಯವಿರೋಧಿ. ಇಲ್ಲಿ ಗಂಗೆ ಹೆಣ ಬಯಸುವಂತೆ ರಚ್ಚೆ ಹಿಡಿಸುತ್ತಾರೆ, ಗೋವುಗಳನ್ನು ಮಾತೆ ಮಾಡಿ ಹಸಿವನ್ನು ಹೆಚ್ಚಿಸಲಾಗ್ತಾ ಇದೆ. ಬರೀ ಭಾಷಣಗಳು ಮೂಲಕವೇ ಭ್ರಮೆ ಹಿಡಿಸಿ ದೇಶದ ತುಂಬಾ ಕ್ಷಾಮದ ಕ್ಷಯ ಹರಡಲಾಗ್ತಿದೆ. ಕಲಿತಜನ ಹಿಂಗುವ ಭ್ರಮೆಗಳನ್ನು ವೈಭವೀಕರಿಸಿ ತಮ್ಮ ಸೋಲನ್ನು ಅವಸಾನವನ್ನು ಗ್ರಹಿಸಲಾರದಷ್ಟು ಬೆಂದು ಹೋಗ್ತಿದ್ದಾರೆ. ಜೀವ ಹತ್ಯೆಯ ದಾಹ ಹೆಚ್ಚಿದರೆ ಚಪ್ಪಾಳೆ ತಟ್ಟಿ ಹುರಿದುಂಬಿಸುವ ಗುಂಪುಗಾರಿಕೆಗೆ ಚರಕದ ಶಾಂತ ಪ್ರಜ್ಞೆ ಯ ತನ್ಮಯತೆ ಅರ್ಥ ಆಗುತ್ತ ? ಶಾಂತಿ ಯ ಬೆರಗನ್ನು ಬಿತ್ತಿದ ದಾರ್ಶನಿಕರನ್ನೆಲ್ಲಾ ಬರ್ಬರವಾಗಿ ಕೊಂದವರಿಗೆ ಈ ದೇಶದಲ್ಲಿ ಕಳಂಕ ಬರಲ್ಲ. ವಿವೇಕ ಜಡವಾದಷ್ಟು ಮಾನವಪ್ರೇಮ ಒಣಗುತ್ತದೆ. ಕಲಿವ ಪಠ್ಯಗಳು ಬದಲಾಗಬೇಕಿದೆ. ರಾಮನನ್ನು ಧರ್ಮಕೂಟದಿಂದ ಬಿಡಿಸುವುದು ಮುಖ್ಯ ಈ ಕಾಲಕ್ಕೆ. ಒಟ್ಟು ಕವಿತೆಯ ಹುಡುಕಾಟ ಫಲ ಕೊಡಲಿದೆ ಆಗ……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading