ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಳಬೇಕಲ್ಲ ನಾ ನನ್ನ ಮಗಳಿಗೆ..

ಸರೋಜಿನಿ ಪಡಸಲಗಿ

ಒಂದೊಮ್ಮೆ ತುಂಬ ಹೆಮ್ಮೆ ನಾ ಹೆಣ್ಣೆಂದು
ತೋರಬಲ್ಲೆ ನನ್ನೊಡಲ ತುಂಬಿದ ವಿರಾಟ್ ವಿಶ್ವವನ್ನು
ಲಾವಣ್ಯ ಲಾಲಿತ್ಯಗಳ ಒಡತಿಯಾಗಿ ಎಂದು
ನನಗೆ ಗರ್ವ ಯಾರಿಗುಂಟು ಆ ಸೌಭಾಗ್ಯ ಎಂದು
ಆದರೀಗ ಯಾಕೋ ವೈರಾಗ್ಯ ಅಮ್ಮನ ಮಾತಿನ
ಅರ್ಥ ಹೊಳೆದು

ಉದ್ದುದ್ದ ಮೊಗ್ಗಿನ ಜಡೆ ನಾಗರಕುಚ್ಚು
ಜಡೆ ಬಿಲ್ಲೆ ಇಟ್ಟು ವೈಯ್ಯಾರದಿ ಜಡೆ ಓಲಾಡಿಸುತ
ಜರೀ ಲಂಗದ ತುಂಬು ನೆರಿಗೆ ಚಿಮ್ಮಿಸುತ
ದಾವಣಿಯ ಸೆರಗು ಹಾರಿಸಿ ಕುರುಳು ಸರಿಸಿ
ವಾರೆನೋಟ ಬೀರುತ್ತ
ಕುಲುಕಿ ಬಳುಕಿ ನಡೆವಾಗ ಅಮ್ಮನ ಮೃದು ಎಚ್ಚರಿಕೆ
ಹೆಣ್ಣಾಗಿ ಬಂದಿರುವಿ ಇಲ್ಲಿಗೆ ಜೋಕೆ ಜೋಕೆ ಬಲು ಜೋಕೆ
ಮರೆಯಲುಂಟೇ ಅಮ್ಮನ ಮಾತನು
ಹೇಳಬೇಕಲ್ಲ ನಾ ನನ್ನ ಮಗಳಿಗೆ

ಸೀರೆಯ ನೀರೆಯಾಗಿ ಕಣ್ತುಂಬ ಕನಸು ತುಂಬಿ
ಎದೆ ತುಂಬ ಮೃದು ಭಾವಗಳುಬ್ಬರಿಸಿ
ಚಿಗುರು ಮೀಸೆಯಡಿಯ ಹುಸಿ ನಗುವಿಗೆ ಕರಗಿ
ಪಯಣ ಹೊಸ ಬದುಕಿನತ್ತ ಆತನ ಜೊತೆಯಾಗಿ
ಹೃದಯದೊಡತಿಯಾಗಿ ಆ ಮನೆಯ ಸೊಸೆಯಾಗಿ
ಅತ್ತಿಗೆಯಾಗಿ ಓರಗಿತ್ತಿಯಾಗಿ ಹೊಸ ರಂಗಿನಲಿ ರಂಗಾಗಿರುವಾಗ
ಅಮ್ಮನ ಮೃದು ಎಚ್ಚರಿಕೆ ಹೆಣ್ಣಾಗಿ ಬಂದಿರುವಿ ಇಲ್ಲಿಗೆ
ಜೋಕೆ ಜೋಕೆ ಬಲು ಜೋಕೆ
ಮರೆಯಲುಂಟೇ ಅಮ್ಮನ ಮಾತನು
ಹೇಳಬೇಕಲ್ಲ ನಾ ನನ್ನ ಮಗಳಿಗೆ

ಮಡದಿಯಾದೆ ಮರೆತು ಮಗಳು ಸೋದರಿ
ಎಂಬುದನು ತಾಯಾದೆ
ಕರುಳ ಕುಡಿಗಳ ಎದೆಯಲಿ ಕಾಪಿಟ್ಟು
ಕಂಗಳಲಿ ಬಚ್ಚಿಟ್ಟು ತೇಲಿದೆ ಹೊಸ ಲೋಕದಲಿ
ಹಂಚುವುದನು ಕಲಿತೆ ನೀಡುವುದನು ಅರಿತೆ
ಜೀವದ ಪರಿವೆ ಇರದೇ ನಾನೇನೆಂಬ ಅರಿವೇ
ಇರದೇ
ಪ್ರತಿಯೊಂದು ನನ್ನದೆಂಬುದನು ಹರಿದು ಹಂಚಿದೆ
ಅಕ್ಷಯವೇ ಏನೋ ಎಲ್ಲಾ ಎಂಬಂತೆ ಮೆರೆದೆ
ಯಾವುದೋ ಮೋಹದಲಿ ವ್ಯಾಮೋಹದಲಿ
ತಪ್ಪು ಎಣಿಸುವುದನು ಕಲಿಯಲೇ ಇಲ್ಲ
ಕುರುಡಿಯಾದೆ ಕಿವುಡಿಯಾಗಿ ಬಿಟ್ಟೆ
ಕಂಡೇ ಇಲ್ಲ ಕೇಳಲೇ ಇಲ್ಲ ಏನೂ ಎಂಬಂತೆ
ಹೆಣ್ಣಾಗಿ ಬಂದಿರುವೆನಲ್ಲ ಇಲ್ಲಿಗೆ
ಮರೆಯಲುಂಟೆ ಅಮ್ಮನ ಮಾತನು
ಹೇಳಬೇಕಲ್ಲ ನಾ ನನ್ನ ಮಗಳಿಗೆ

ಆದಿಶಕ್ತಿ ಜಗನ್ಮಾತೆ ದೈವಸ್ವರೂಪಿಣಿ ಹೆಣ್ಣು
ಎಂಬರು ಎಲ್ಲಾ ಹೌದೆ
ಅರಸುತಿಹೆ ಉತ್ತರವೇ ಸಿಗಲಿಲ್ಲ ಎಲ್ಲೂ ಇನ್ನೂ
ಹರಿವ ನೀರ ದಡದಲಿ ಒಂದು ಚಣ ಕುಳಿತು
ಬಗ್ಗಿ ನನ್ನ ಮುಖ ನಾನೇ ನೋಡಲೆಳೆಸುವೆ
ಒಮ್ಮೊಮ್ಮೆಯಾದರೂ ಕಾಣಲು ನನ್ನ ಬಹುರೂಪಿತ್ವವನು
ಅದು ಸ್ವಚ್ಛ ನಿರಭ್ರ ನೀಲ ಸಲಿಲ ಅಲ್ವೇ
ಕೃಷ್ಣೆ ಗಂಗೆ ತುಂಗೆ ಕಾವೇರಿ ಯಮುನೆ
ಬಲ್ಲದು ಎಲ್ಲಾ ಬಚ್ಚಿಟ್ಟು ತನ್ನೊಳಗೆ ತಾ
ಹರಿವುದನು ಮುಂದೆ ಸಾಗುವುದನು
ಸಾಗರದೊಡಲಲಿ ಸೇರಿ ಮರೆಯಾಗುವುದನು
ನನ್ನಂತೆಯೇ ಎಲ್ಲಾ ಬಂದಿಲ್ವೆ ಹೆಣ್ಣಾಗಿ ಇಲ್ಲಿಗೆ
ಮತ್ತೆ ಮರೆಯಲುಂಟೆ ಅಮ್ಮನ ಮಾತನು
ಹೇಳಬೇಕಲ್ಲ ನಾ ನನ್ನ ಮಗಳಿಗೆ
ನಾ ನನ್ನ ಮಗಳಿಗೆ

‍ಲೇಖಕರು Avadhi

29 September, 2020

1 Comment

  1. Vasundhara KM

    ಹೆಣ್ಣಿನ ಸ್ಥಿತ್ಯಂತರ ನಿರೂಪಣೆ ಆಪ್ತವಾಗಿ ಮೂಡಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading