ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
ನಿಮ್ಮ ಲೇಖನ ಸಂಗ್ರಹ ‘ಹೇಳತೇವ ಕೇಳ’ ಓದಿದೆ. ಅಸಹನೀಯ ಮೌನವೊಂದು ಕಾಡತೊಡಗಿತು. ಹೀಗೆ ಅದನ್ನು ಓದಿ ಮುಗಿಸಿದ ತಕ್ಷಣ ಅನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ. ನಮ್ಮಂತಹವರ ಮೌನಕ್ಕೆ ಮಾತಾದ ಪುಸ್ತಕವಿದು. ಹೆಚ್ಚಿಗೇನು ಹೇಳಲಾರೆ. -ಹೇಮಾ.
ಹೇಮಾ ಹೆಬ್ಬಗೋಡಿ
ಅಕ್ಕ ನಿನ್ನಂತೆ ನಾನು. ನೀನು ಹಾದ ಆ ಎಲ್ಲ ಹಾದಿಗಳಲ್ಲಿ ನಾನೂ ನಡೆದೆ. ಹೇಗೆ ಹೇಳಲಿ ಅಕ್ಕ ಮುಚ್ಚಿಟ್ಟ ಆ ಕತೆಗಳನ್ನು?
ಹೇಗೆ ತೋರಿಸಲಿ ಅಕ್ಕ ಮುಚ್ಚಿಟ್ಟ ಆ ಗುರುತುಗಳನ್ನು?
ಮನದ ಮೂಲೆಗಳಲ್ಲಿ ಮುಚ್ಚಿಟ್ಟ ಆ ಕಹಿ ಅನುಭವಗಳನ್ನು ಹೇಗೆ ಹೇಳಲೇ ಅಕ್ಕ?
ಚೀರಬೇಕಿನಿಸಿತು ಎದುರಾದಾಗಲೆಲ್ಲ ರಾಕ್ಷಸರು ನಾನೆಂದರೆ ಬರಿ ಮೊಲೆ ಮುಡಿಯಲ್ಲ, ಯೋನಿ- ತೊಡೆಯಲ್ಲ.
ಇಲ್ಲಕ್ಕ ಇನ್ನೂ ಗರಿಗೆದರಿ ನವಿಲಾಡುವ ಕನಸು ನನಸಾಗೇ ಇಲ್ಲ….
ಹೇಳತೇವ ಕೇಳ… ಓದುತ್ತಾ ಓದುತ್ತಾ ಕರುಳು ಹಿಂಡಿ, ಕೊರಳುಬ್ಬಿ ಬಂತು. ಛೇ! ನಾವು ಹುಡುಗಿಯರೆಲ್ಲ ಹೀಗೇನಾ? ಯಾಕೆ ಒಂದಲ್ಲ ಒಂದು ಹಂತದಲ್ಲಿ ಇಂತಹ ಕರಾಳ ಅನುಭವಗಳಿಗೆ ಅದು ಅಲಿಖಿತ ವಿಧಿಯೇನೋ ಎಂಬಂತೆ ಬಲಿಯಾಗುತ್ತೇವೆ. ಆಗುತ್ತಲಿದ್ದೇವೆ. ಹಕ್ಕಿಯಂತೆ ಹಾರುವ ಆಸೆಯಿದ್ದರೂ ಗರಿ ಬಿಚ್ಚಲು ಸಾವಿರ ಸಾರಿ ಅತ್ತಿತ್ತ ನೋಡಬೇಕು. ಮೀನಿನಂತೆ ಈಜಲು ಆಸೆಯಿದ್ದರೂ ಮೊಸಳೆಗಳ ಭಯದಲ್ಲಿ ನಲುಗಬೇಕು.
ಫೋಟೋ ಕೃಪೆ: ಮಾಲತಿ ಶೆಣೈ
ಎಲ್ಲೋ ಮರೆತಂತಿದ್ದ ಕೋಣೆಯೊಳಗಿನ ಕತ್ತಲು, ಆ ಕೈಗಳು, ಬಸ್ಸಿನ ಆ ಅಸಹ್ಯ ಹಿಂಸೆಗಳು, ಖುಷಿಯಲ್ಲಿ ದಾವಣಿ ಹಾರಿಸುತ್ತಾ ಗಾಡಿ ಓಡಿಸುತ್ತಿದ್ದಾಗ ಎದುರಾದ ಆ.. ಪ್ರಸಂಗಗಳು.. ಎಲ್ಲ ಎಲ್ಲ ತೇಲಿಬಂದವು.
ನಾವು ನಿಮ್ಮಂತೆ. ಏಕೆ ನಿಮಗಿದು ಕಾಣುವುದಿಲ್ಲ? ಹುಡುಗಿಯರೆಂದರೆ ವಸ್ತುಗಳಲ್ಲ, ನಿಮ್ಮ ಪ್ರತಿಸ್ಪರ್ಧಿಗಳಲ್ಲ, ನಿಮ್ಮಂತೆ ಈ ಭೂಮಿಯ ಜೀವಿಗಳು. ನಮಗೂ ಬದುಕಲು ಹಕ್ಕಿದೆ. ಹಾರಲು, ಈಜಲು, ನಲಿಯಲು ಹಕ್ಕಿದೆ. ಇನ್ನಾದರೂ ಅರಿಯಲಾರಿರಾ…?
ಹಿಂದೊಮ್ಮೆ ಓದಿದ್ದ ಅಮೃತಾಳ ಸಂಗಾತಿ ಇಮ್ರೋಜ್ ಬರೆದಿದ್ದ ಕವನಗಳು ನೆನಪಾದವು.
ಸಂಪೂರ್ಣ ಹೆಣ್ಣು
ನಡೀತಾ ನಡೀತಾ ಒಂದು ದಿನ
ಅಮೃತಾ ಕೇಳಿದಳು-
‘ನೀನು ಎಂದಾದರೂ woman with mind
Paint ಮಾಡಿದಿಯಾ?’
ಗಕ್ಕನೆ ನಿಂತೆ.
ನನ್ನೊಳಗೆ ನೋಡಿದೆ, ನನ್ನ ಹೊರಗೆ ನೋಡಿದೆ
ಉತ್ತರ ಎಲ್ಲೂ ಇರಲಿಲ್ಲ
ನಾಲ್ಕೂ ಕಡೆ ನೋಡಿದೆ.
ಪ್ರತಿ ದಿಕ್ಕಿನ ಕಡೆ ನೋಡಿ ಕಾದೆ.
ಆದರೆ ಯಾವ ದನಿಯೂ ಕೇಳಲಿಲ್ಲ, ಉತ್ತರವೂ ಬರಲಿಲ್ಲ.
ಉತ್ತರ ಹುಡುಕುತ್ತಾ ಹುಡುಕುತ್ತಾ
ಪೇಂಟಿಂಗ್ನ ಕ್ಲಾಸಿಕ್ ಕಾಲಕ್ಕೆ ಹೋದೆ.
ಅಮೃತಾ ಕೇಳಿದ ಹೆಣ್ಣು
ಹೆಣ್ಣೊಳಗಿನ ಆಲೋಚನೆ
ಆಲೋಚನೆಯ ಬಣ್ಣ
ಯಾವುದೇ ಪೇಂಟಿಂಗ್ನ ಬಣ್ಣದಲ್ಲಿ ಕಾಣಲಿಲ್ಲ.
ಯಾವುದೇ ಕಲೆಯ ಪುಸ್ತಕದಲ್ಲೂ ಕಾಣಲಿಲ್ಲ.
ಆ ಹೆಣ್ಣಿನ ಅವಳ ಆಲೋಚನೆಯ ಎಳೆಯನ್ನು ಹುಡುಕಿದೆ..
ಓಹ್!
ನೋಡ ನೋಡುತ್ತಾ ಆಶ್ಚರ್ಯವಾಯ್ತು..
ಯಾವ ಚಿತ್ರಕಾರನೂ ಹೆಣ್ಣನ್ನು ದೇಹಕ್ಕಿಂತ
ಮಿಗಿಲಾಗಿ ಯೋಚಿಸಿರಲಿಲ್ಲ, ಚಿತ್ರಿಸಿರಲಿಲ್ಲ.
ಸಂಪೂರ್ಣ ಹೆಣ್ಣು ದೇಹಕ್ಕಿಂತ ಮಿಗಿಲಾದವಳು.
ಹೆಣ್ಣಿನ ದೇಹದೊಂದಿಗೆ ಮಲಗಬಹುದು
ಆದರೆ ಕೇವಲ ದೇಹದೊಂದಿಗೆ ಎಚ್ಚರಗೊಳ್ಳಲು ಸಾಧ್ಯವಿಲ್ಲ.
ಒಂದುವೇಳೆ ಚಿತ್ರಕಾರರು ಸಂಪೂರ್ಣ ಹೆಣ್ಣಿನೊಂದಿಗೆ
ಎಚ್ಚರಗೊಂಡು ನೋಡಿದ್ದರೆ..
ಇಷ್ಟೊತ್ತಿಗೆ ಚಿತ್ರಕಲೆ ಬೇರೆಯೇ ರೀತಿಯಿರುತ್ತಿತ್ತು.
ಈಗಿನ ಮಾಡ್ರನ್ ಆರ್ಟ್ನಲ್ಲಿ ಕೂಡ ಇದರ ಸುಳಿವಿಲ್ಲ.
ಹೆಣ್ಣಿಲ್ಲ, ಗಂಡಿಲ್ಲ ಮತ್ತು ಯಾವುದೇ ಆಲೋಚನೆ ಕೂಡ ಇಲ್ಲ.
ಒಂದು ವೇಳೆ ಗಂಡು ಹೆಣ್ಣಿನೊಂದಿಗೆ ಎಚ್ಚರಗೊಂಡು ನೋಡಿದ್ದರೆ….
ಬದಲಾಗಿರುತ್ತಿತ್ತು- ಅವನ ಬದುಕು ಮತ್ತು ಪ್ರಪಂಚ.
ಬದುಕು ಬದುಕಲು ಯೋಗ್ಯವಾಗಿರುತ್ತಿತ್ತು-
ಅವನದು ಮತ್ತು ಅವನ ಪೀಳಿಗೆಯದು ಕೂಡ..
ಹೆಣ್ಣು
ಫ್ರಾನ್ಸಿನ ಪ್ರಸಿದ್ಧ ಕಾದಂಬರಿಯೊಂದರ
ಪಾತ್ರ ತನಗೆ ತಾನೇ ಹೇಳಿಕೊಳ್ಳುತ್ತದೆ-
ನನಗೆ ಜಗತ್ತಿನ ಎಲ್ಲ ಹೆಣ್ಣುಗಳೊಂದಿಗೆ
ಮಲಗಬೇಕೆಂದು ಆಸೆ
ಆದರೆ…
ಇದುವರೆಗೂ ಯಾರದೇ ಯಾವುದೇ
ಕಥೆ ಅಥವ ಕಾದಂಬರಿಯ ಪಾತ್ರಕ್ಕೆ
ಅನ್ನಿಸಿಲ್ಲ “ನಾನು ಆ ಹೆಣ್ಣಿನೊಂದಿಗೆ ಎಚ್ಚರಗೊಳ್ಳಬೇಕೆಂದು…”
ಮಲಗುವವನಿಗೆ ಕೇವಲ ದೇಹ ಸಿಗುತ್ತದೆ
ಹೆಣ್ಣು ಸಿಗುವುದು… ಎಚ್ಚರಗೊಂಡವನಿಗೆ ಮಾತ್ರ..
ಹೀಗೆ ಎಚ್ಚರಗೊಂಡು ನಮ್ಮನ್ನು ನಮ್ಮಂತಿರಲು ಬಿಡುವ ಸಮಾಜ ಕನಸಿನ ಗಂಟೇ? ಮರೀಚಿಕೆಯೇ? ಯಾಕೋ ದಿನ ದಿನದ ಸುದ್ದಿಗಳನ್ನು ಓದುವಾಗ.. ಹೀಗೆ ಅನ್ನಿಸಿ.. ಪುಟ್ಟ ಹುಡುಗಿಯ ಪುಟ್ಟ ಪಾದಗಳ ಗೆಜ್ಜೆ ದನಿ ಮನಸಿನಲ್ಲಿ ದುಗುಡ ತುಂಬುತ್ತದೆ..







“ಹೆಣ್ಣು ಸಿಗುವುದು… ಎಚ್ಚರಗೊಂಡವನಿಗೆ ಮಾತ್ರ “. ಬಹುಶಃ ಎಲ್ಲ ಹೆಣ್ಣುಗಳ ಮನದಾಳದ ಮಾತು. ಬರೆದ ರೀತಿ ಸೊಗಸಾಗಿದೆ
am sharing this in my blog…
thank u
malathi S
ಇಮ್ರೋಜರ ಕವಿತೆ ಕಾಡುತ್ತಿದೆ…
ಮಲಗುವವನಿಗೆ ಕೇವಲ ದೇಹ ಸಿಗುತ್ತದೆ
ಹೆಣ್ಣು ಸಿಗುವುದು… ಎಚ್ಚರಗೊಂಡವನಿಗೆ ಮಾತ್ರ..
ಎಷ್ಟು ಸತ್ಯ…
ಧನ್ಯವಾದಗಳು
ಒಂದು ವೇಳೆ ಗಂಡು ಹೆಣ್ಣಿನೊಂದಿಗೆ ಎಚ್ಚರಗೊಂಡು ನೋಡಿದ್ದರೆ….
ಬದಲಾಗಿರುತ್ತಿತ್ತು- ಅವನ ಬದುಕು ಮತ್ತು ಪ್ರಪಂಚ.
ಹೌದು… ನಂಗೂ ಹಾಗೇ ಅನ್ನಿಸುತ್ತೆ.
ತುಂಬಾ ಚೆನ್ನಾಗಿದೆ.