ಹೆಣ್ತನದ ಮಡಿಲಲ್ಲಿ ಶರಣಾಗುತ್ತಾ…


”ವಿದ್ಯೆಯ ಸರಸ್ವತಿಗೆ ಮಕ್ಳಿಲ್ಲ. ಸುಖದ ಲಕ್ಷ್ಮಿಗೆ ಮಕ್ಳಿಲ್ಲ. ಹಸಿವು ನೀಗುವ ಅನ್ನಪೂರ್ಣೇಶ್ವರಿಗೆ ಮಕ್ಕಳಿಲ್ಲ. ಕಾಯೋ ದೇವಿ ದುರ್ಗೇನೂ ಬಂಜೇನೇ. ಹೆರೋರು ತಾಯಿ ಆದ್ರು. ಹೆರದೋರು ದೇವರಾದ್ರು. ತಾಯಾಗ್ಲಿಲ್ಲ ಬಿಡು. ದೇವಿ ಆಗ್ತೀನಿ…”
”ಹುಟ್ತಾ ಎಲ್ಲ ಹೆಣ್ಣುಮಕ್ಕಳು ದೇವತೆಯರೇ! ನೀವು ದೇವರಾಗಿ. ಅದುಬಿಟ್ಟು ಸೈತಾನರಾದ್ರೆ ಹೊಂದಿಕೊಳ್ಳೋ ಸಡಗರದಲ್ಲಿ ದೆವ್ವಗಳಾಗ್ತಾರೆ ಅವ್ರು!”
ಖ್ಯಾತ ನಟ, ರಂಗಕರ್ಮಿ ಮತ್ತು ನಿರ್ದೇಶಕರಾದ ಸೇತೂರಾಮ್ ರವರ ಕಥೆಯಲ್ಲಿ ಬರುವ ಮಹಿಳಾ ಪಾತ್ರವೊಂದು ಹೇಳುವ ಖಡಕ್ ಮಾತುಗಳಿವು.
ಇತ್ತೀಚೆಗೆ ಮಂಗಳೂರಿನಲ್ಲಿರುವ ಆಪ್ತರೊಬ್ಬರು ಸೇತೂರಾಮ್ ರವರ ‘ನಾವಲ್ಲ’ ಕಥಾಸಂಕಲನವನ್ನು ಕಳಿಸಿಕೊಟ್ಟಿದ್ದರು. ಶೀಘ್ರದಲ್ಲೇ ಮರುಮುದ್ರಣಗಳನ್ನು ಕಂಡಿದ್ದ ಮತ್ತು ಓದುಗರಿಂದ ಅಪಾರ ಪ್ರೀತಿಯನ್ನು ಪಡೆದಿದ್ದ ಈ ಕೃತಿಯನ್ನು ಇನ್ನಿಲ್ಲದ ಕುತೂಹಲದಿಂದಲೇ ಕೈಗೆತ್ತಿಕೊಂಡಿದ್ದೆ. ಓದುಗನಾಗಿ ಬಾಯಾರಿದ್ದ, ಬೊಗಸೆನೀರಿನ ತಲಾಶೆಯಲ್ಲಿ ಹೊರಟಿದ್ದ ನನಗಿಲ್ಲಿ ಸಿಕ್ಕಿದ್ದು ಮಾತ್ರ ಜೀವನದಿ. ಪುಟಗಳನ್ನು ತಿರುವುತ್ತಾ ಹೋದಂತೆ ಲೇಖಕರು ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ, ತಂತ್ರಗಾರಿಕೆಯಿಂದ ಹೊಸದೊಂದು ಲೋಕವನ್ನೇ ಅಲ್ಲಿ ತೆರೆದಿಟ್ಟಿದ್ದರು. ಅದು ಹೆಣ್ತನವನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ, ಹುಸಿ ಆಡಂಬರಗಳಿಲ್ಲದೆ, ತೋರಿಕೆಯ ಕಸರತ್ತುಗಳಿಲ್ಲದೆ, ಇದ್ದಿದ್ದನ್ನು ಇರುವಂತೆಯೇ ಹಸಿಹಸಿಯಾಗಿ ತೆರೆದಿಟ್ಟ ಲೋಕ. ಇಲ್ಲಿಯ ಕಥೆಗಳಲ್ಲಿರುವ ಹೆಣ್ಣುಮಕ್ಕಳು ಜೀವನವನ್ನು ಇಡಿಇಡಿಯಾಗಿ ಬದುಕಿದವರು. ಹೂವಿನ ಸುಗಂಧವನ್ನು ಆಸ್ವಾದಿಸುವಷ್ಟೇ ಗತ್ತಿನಲ್ಲಿ ಮುಳ್ಳನ್ನೂ ತನ್ನದಾಗಿಸಿಕೊಳ್ಳುವ ಛಾತಿಯುಳ್ಳವರು. ತನ್ನತನಕ್ಕೆ ಧಕ್ಕೆಯಾದಾಗ ಗೋಳಾಡುತ್ತಾ ಕೂರದೆ, ಅವರಿವರ ಮೇಲೆ ಗೂಬೆ ಕೂರಿಸದೆ ಸರ್ವಸಂಕೋಲೆಗಳನ್ನೂ ಕಿತ್ತೆಸೆದು ಮುನ್ನುಗ್ಗುವಂತಹ ಧೀರೆಯರು. ಒಂದೊಳ್ಳೆಯ ಫಿಕ್ಷನ್ ಓದಿ ಸಾಕಷ್ಟು ತಿಂಗಳುಗಳೇ ಕಳೆದುಹೋಗಿದ್ದ ಸಂದರ್ಭದಲ್ಲಿ ಈ ‘ನಾವಲ್ಲ’ ಅಚಾನಕ್ಕಾಗಿ ಬಂದು ನನ್ನೊಳಗೆ ದೊಡ್ಡಮಟ್ಟಿನ ತಳಮಳವನ್ನು ಹುಟ್ಟಿಸಿದ್ದಂತೂ ಸತ್ಯ. ಒಟ್ಟಿನಲ್ಲಿ ಸೇತೂರಾಮ್ ರವರ ‘ನಾವಲ್ಲ’ ನನ್ನ ಮಟ್ಟಿಗೆ ಕೃತಿಗಿಂತ ಹೆಚ್ಚಾಗಿ ಸಿಡಿದೇಳಲು ಇನ್ನೇನು ಕಾಯುತ್ತಿದ್ದ ಜ್ವಾಲಾಮುಖಿಯಂತಿರುವ ಹೆಣ್ಣಿನ ಒಡಲ ನೋವುಗಳನ್ನು ಕಥಾರೂಪದಲ್ಲಿ ತೆರೆದಿಟ್ಟ ವಿಶಿಷ್ಟ ಪ್ರಯತ್ನ. ಸಂಕಲನದ ಪುಟಪುಟವೂ ಸುಡುಸುಡು ನಿಗಿನಿಗಿ ಕೆಂಡ.
ಹೆಣ್ತನದ ಇಂಥದ್ದೇ ಹಸಿಹಸಿ ತುಡಿತಗಳನ್ನು ಕವಿತೆಗಳ ರೂಪದಲ್ಲಿ ಶಕ್ತಿಯುತವಾಗಿ ನಾನು ಕಂಡಿದ್ದು ರೂಪಿ ಕೌರ್ ರವರ ಕವಿತೆಗಳಲ್ಲಿ. ಈ ಕವಿತೆಗಳಲ್ಲೂ ಒಂದು ಬಗೆಯ ಪಯಣವಿದೆ. ಛಿದ್ರಗೊಂಡ ತನ್ನೊಳಗನ್ನು ನಿರಾಶೆಯಿಂದ ನೋಡುವುದರಿಂದ ಹಿಡಿದು ತನ್ನ ಅಣುಅಣುವಿನಲ್ಲೂ ಹೊಸ ಹೊಸ ಬ್ರಹ್ಮಾಂಡಗಳನ್ನು ಸೃಷ್ಟಿಸುವ ಹಂತದವರೆಗಿನ ಹೆಣ್ಣಿನ ಒಂದು ಅದ್ಭುತ ರೂಪಾಂತರ. ಇದು ಹೆಣ್ಣಿನಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ರೂಪಾಂತರಗಳಿಗೂ ಮೀರಿದ್ದು. ಅದು ಅಸಲಿಗೆ ಆಕೆಯ ಹೆಣ್ತನಕ್ಕೆ, ಅಸ್ತಿತ್ವಕ್ಕೆ ಸಂಬಂಧಪಟ್ಟಿದ್ದರಿಂದ ತನ್ನಿಂತಾನೇ ದೈವಿಕ ಕಳೆಯನ್ನು ಪಡೆದುಕೊಳ್ಳುವಷ್ಟು ಶಕ್ತಿಯುತವಾದದ್ದು. ಹೀಗಾಗಿಯೇ ಇಂಥದ್ದೊಂದು ರೂಪಾಂತರದ ಆಯಾಮವೇ ವಿಶಿಷ್ಟ ಎಂದೆನಿಸಿ ಇದು ಅಲೌಕಿಕವೋ ಅನ್ನಿಸಿಬಿಡುತ್ತದೆ. ಹೆಣ್ಣಿನ ಒಡಲಾಳದ ನೋವನ್ನು ಗದ್ಯದ ರೂಪದಲ್ಲಿ ಸೇತೂರಾಮ್ ರವರು ಅದೆಷ್ಟು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೋ, ಪದ್ಯದ ರೂಪದಲ್ಲಿ ರೂಪಿ ಕೌರ್ ಅಷ್ಟೇ ಅಸಾಮಾನ್ಯವಾಗಿ ತರಬಲ್ಲರು. ಅದರಲ್ಲೂ ನನ್ನಂತಹ ಭಾವಜೀವಿಗಳಿಗೆ ಇಂಥಾ ದಿಗ್ಗಜರ ಕೃತಿಗಳು ಯಾವ ‘Trigger Warning’ ಗಳಿಗೂ ಕಮ್ಮಿಯಿಲ್ಲ.
ಹೆಣ್ತನದ ಈ ಗುಂಗಿನಲ್ಲೇ ನನಗೆ ಅಂಗೋಲನ್ ಮಹಿಳೆಯರು ಮತ್ತೆ ನೆನಪಾಗುತ್ತಾರೆ. ಒಡಲಿನಲ್ಲೂ, ಸೆರಗಿನಲ್ಲೂ ಕೆಂಡವನ್ನು ತುಂಬಿಕೊಂಡಿದ್ದರೂ ಬದುಕೇ ಸ್ವತಃ ಇವರುಗಳೆದುರು ಮಂಡಿಯೂರಿ ನಿಲ್ಲುವಂತೆ ಅದ್ಭುತವಾಗಿ ಬದುಕುವವರು. ದಿನನಿತ್ಯದ ಜಂಜಾಟದಲ್ಲಿ ಸ್ವಂತಕ್ಕೆಂದು ಒಂದರ್ಧ ತಾಸು ಸಿಗದಿದ್ದರೂ ಈ ದಿನವೇ ನಮ್ಮದು ಎಂಬಂತಹ ಹುರುಪಿನಲ್ಲಿ ನಮಗೆ ಕಾಣಸಿಗುವವರು. ನಮ್ಮಲ್ಲಿಗೆ ಭಾರತದಿಂದ ಬಂದಿದ್ದ ಸಮಾಜಶಾಸ್ತ್ರಜ್ಞರಾಗಿದ್ದ ಡಾ. ಗೌರ್ ಹಿಂದೊಮ್ಮೆ ಹೀಗೆ ಕೇಳಿದ್ದರು: ”ಈ ಮಹಿಳೆಯರು ಇಲ್ಲದಿದ್ದರೆ ಇಲ್ಲಿಯ ಸಮಾಜದ ಗತಿಯೇನಾಗುತ್ತಿತ್ತು?”, ಎಂದು. ಆ ಒಂದು ಕಲ್ಪನೆಯಿಂದಲೇ ನಾನು ಹೈರಾಣಾಗಿದ್ದೆ. ಕೃಷಿ, ಚಿಕ್ಕಪುಟ್ಟ ವ್ಯಾಪಾರಗಳಿಂದ ಹಿಡಿದು ಸ್ಥಳೀಯ ಸಂಘಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇಲ್ಲಿಯ ಮಹಿಳೆಯರು ತಮ್ಮ ಕುಟುಂಬವನ್ನಷ್ಟೇ ಅಲ್ಲ, ಇಡೀ ದೇಶವನ್ನೇ ಪೊರೆಯುತ್ತಿದ್ದಾರೆ. ಅವರ ನಿರಂತರ ಶ್ರಮವು ಎಂಥಾ ಸಂಕಷ್ಟದ ಪರಿಸ್ಥಿತಿಗಳಲ್ಲೂ ಅವರಿಗೆ ಬದುಕುವ ಭರವಸೆಯನ್ನು ನೀಡಿದೆ, ಜೀವನಪ್ರೀತಿಯನ್ನು ಧಾರೆಯೆರೆದಿದೆ, ತಾನು ನಿಜಕ್ಕೂ ಸಾಧಿಸಬಲ್ಲೆ ಎಂಬ ಸಕಾರಾತ್ಮಕ ಧೋರಣೆಯನ್ನು ಅವರಲ್ಲಿ ತುಂಬಿದೆ.
ಹದಿನೈದೇ ಹದಿನೈದು ವರ್ಷಗಳ ಹಿಂದೆ ಅಂಗೋಲಾದಲ್ಲಿ ಯುದ್ಧವು ಮುಗಿದು ಸ್ಮಶಾನಮೌನವು ಆವರಿಸಿತ್ತು. ಒಂದೆರಡು ವರ್ಷಗಳಲ್ಲ, ಬರೋಬ್ಬರಿ ಎರಡೂವರೆ ದಶಕಗಳ ಕಾಲ ನಿರಂತರವಾಗಿ ನಡೆದ ಆಂತರಿಕ ಯುದ್ಧವದು. ಅಧಿಕಾರದ ಆಸೆಗಾಗಿ ತಮ್ಮತಮ್ಮಲ್ಲೇ ಕಚ್ಚಾಡಿಕೊಂಡ ಮತ್ತು ಈ ಹವನಾಗ್ನಿಯನ್ನು ಸದಾ ಉರಿಯುವಂತೆ ಕಾದಿಡಲು ತಮ್ಮದೇ ದೇಶದ ಜನರನ್ನು, ಸಂಪನ್ಮೂಲಗಳನ್ನು ಸೌದೆಗಳಂತೆ ಬಳಸಿದ ರಾಜಕೀಯ ಪಕ್ಷಗಳ ಆಟಕ್ಕೆ ಬಲಿಯಾಗಿದ್ದು ಮಾತ್ರ ಅಂಗೋಲನ್ ಜನತೆ. ಯುದ್ಧವೆಂದರೆ ತಮಾಷೆಯ ಮಾತೇ? ದೇಶದಾದ್ಯಂತ ಅದೆಷ್ಟೋ ಜನರ ಮಾರಣಹೋಮವಾಯಿತು. ಸತ್ತವರೇನೋ ಸತ್ತರು. ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲ್ಯಾಂಡ್-ಮೈನ್ ಗಳಿಗೆ ಬಲಿಯಾಗಿ ಶಾಶ್ವತವಾಗಿ ಅಂಗವಿಕಲರಾದರು. ಇಂದಲ್ಲಾ ನಾಳೆ ಯುದ್ಧವು ಅಂತ್ಯವಾಗಲಿದೆ ಎಂಬ ಕ್ಷೀಣ ಭರವಸೆಯ ದೀಪವೂ ಕ್ರಮೇಣ ಅಂಗೋಲನ್ನರ ಮನದಲ್ಲಿ ಆರಿಹೋಗಿತ್ತು. ಯುದ್ಧ ಮುಗಿದು ಇಷ್ಟು ವರ್ಷಗಳಾದರೂ ಅಂಗೋಲಾದ ಕೆಲ ಪ್ರದೇಶಗಳಲ್ಲಿ ಇಂದಿಗೂ ಈ ನೆಲಬಾಂಬುಗಳು ಇಲ್ಲಿಯ ನೆಲದ ಒಡಲಲ್ಲಿ ಹುದುಗಿಕೂತಿವೆ ಮತ್ತು ಅವುಗಳನ್ನು ನಿಷ್ಕ್ರಿಯಗೊಳಿಸುವ/ಹೊರತೆಗೆಯುವ ಕೆಲಸಗಳು ಜಾರಿಯಲ್ಲಿವೆ.
ಇಷ್ಟು ಭೀಕರ ಯುದ್ಧವನ್ನು ಸ್ವತಃ ಕಂಡ, ನಿತ್ಯವೂ ಜೀವವನ್ನು ಹಿಡಿಮುಷ್ಟಿಯಲ್ಲಿರಿಸಿ ಬದುಕುತ್ತಿದ್ದ ಅಂಗೋಲನ್ ಮಹಿಳೆಯರಿಗೆ ಇನ್ಯಾವ ಕಷ್ಟಗಳು ತಾನೇ ಹೆದರಿಸಬಲ್ಲದು? ಇಂದಿಗೂ ಬಹಳಷ್ಟು ಅಂಗೋಲನ್ನರು ಈ ಆಂತರಿಕ ಯುದ್ಧದ ಬಗ್ಗೆ ಮಾತನಾಡಲೂ ಇಚ್ಛಿಸುವುದಿಲ್ಲ. ಏಕೆಂದರೆ ಆ ದಿನಗಳ ಬಗ್ಗೆ ಮಾತನಾಡುವುದೆಂದರೆ ಅವರ ಹಳೆಯ ಗಾಯಗಳನ್ನು ಮತ್ತೆ ಕೆರೆದು ಹುಣ್ಣು ಮಾಡಿದಂತೆ. ಇನ್ನು ಯುದ್ಧದ ನಂತರದ ದಿನಗಳಲ್ಲಿ ಬಾಂಬುಗಳು ಗಾಳಿಯಲ್ಲಿ ಹಾರಾಡುತ್ತಿಲ್ಲ ಎಂಬುದನ್ನೊಂದು ಬಿಟ್ಟರೆ ಬೇರ್ಯಾವ ಸ್ತರದಲ್ಲೂ ಈ ಮಹಿಳೆಯರ ಜೀವನಮಟ್ಟವು ಅಷ್ಟಾಗಿ ಸುಧಾರಿಸಲಿಲ್ಲ. ಒಂದಷ್ಟು ಕಾಸು ಕೂಡಿಟ್ಟು ಏನಾದರೊಂದು ವ್ಯಾಪಾರವನ್ನು ಆರಂಭಿಸಿದರೂ ಇವತ್ತಿನ ಗಳಿಕೆ ಇವತ್ತಿಗಷ್ಟೇ ಎಂಬಂತಹ ಪರಿಸ್ಥಿತಿ. ಆದರೆ ಹಾಗೆಂದು ಕೈಚೆಲ್ಲುವಂತೆಯೂ ಇಲ್ಲ. ಬದುಕು ನಡೆಯಬೇಕಲ್ಲಾ!
ಮುಂಜಾನೆಯ ಸಿಹಿನಿದ್ದೆಗೆ ವಿದಾಯ ಹೇಳಿ ಒಮ್ಮೆ ಅಂಗೋಲಾದ ಬೀದಿಗಳಲ್ಲಿ ಸುಮ್ಮನೆ ವಿಹಾರಕ್ಕೆಂಬಂತೆ ಹೊರಡಬೇಕು. ಈ ಹೊತ್ತಿಗೆ ಇಲ್ಲಿಯ ಮಹಿಳೆಯರು ಸೂರ್ಯದೇವನೊಂದಿಗೇ ತಮ್ಮ ಸಾಮಾನುಗಳೊಂದಿಗೆ ಬಂದಾಗಿರುತ್ತದೆ. ಇರುವೆಗಳಂತೆ ಲಗುಬಗೆಯಿಂದ ಓಡಾಡುತ್ತಿರುವ ಸ್ಥಳೀಯ ಮಹಿಳೆಯರ ಜನಜಂಗುಳಿ.  ತಮ್ಮ ತಮ್ಮ ಸಾಮಾನುಗಳೊಂದಿಗೆ ದಿನವಿಡೀ ಕೂರುವ ಸಿದ್ಧತೆಯಲ್ಲಿರುವ ಮುಂಜಾನೆಯ ಗಡಿಬಿಡಿಯದು. ಇಲ್ಲಿಯ ಸ್ಥಳೀಯ ಮಾರುಕಟ್ಟೆಗಳಲ್ಲಂತೂ 98% ವ್ಯಾಪಾರಿಗಳು ಕೇವಲ ಮಹಿಳೆಯರಷ್ಟೇ. ಈ ಸಂಖ್ಯೆಯು ಉತ್ಪ್ರೇಕ್ಷೆಯದ್ದು ಎಂದು ಕೆಲ ಓದುಗರಿಗೆ ಅನ್ನಿಸಬಹುದು. ಆದರೆ ಮಾರುಕಟ್ಟೆಗಳಲ್ಲೂ, ರಸ್ತೆಯ ಬದಿಗಳಲ್ಲೂ, ಜನನಿಬಿಡ ಹೆದ್ದಾರಿಗಳಲ್ಲೂ… ಹೀಗೆ ಎಲ್ಲೆಲ್ಲೂ ತುಂಬಿಕೊಂಡಿರುವ ಅಂಗೋಲನ್ ಮಹಿಳಾ ವ್ಯಾಪಾರಿಗಳನ್ನು ನೋಡುತ್ತಿದ್ದರೆ ಇದೇನಪ್ಪಾ ಎಂದು ನಿಜಕ್ಕೂ ಅಚ್ಚರಿಪಡುವಂತಾಗುತ್ತದೆ. ಡಾ. ಗೌರ್ ಮಹಿಳೆಯರಿಲ್ಲದ ಅಂಗೋಲನ್ ಸಮಾಜವು ಹೇಗಿರಬಹುದು ಎಂದು ಊಹಿಸಿಕೊಳ್ಳಲು ಹೇಳಿದಾಗ ನಾನು ಗಾಬರಿಯಾಗಿದ್ದು ಈ ಕಾರಣಕ್ಕಾಗಿಯೇ.
ಇದು ಸ್ಥಳೀಯ ಮಾರುಕಟ್ಟೆಗಳ ಮಾತಷ್ಟೇ ಅಲ್ಲ. ಲುವಾಂಡಾದಂತಹ ನಗರ ಪ್ರದೇಶಗಳಲ್ಲೂ ಇವರದ್ದೇ ಕಾರುಬಾರು. ತಲೆಯ ಮೇಲೆ ದೊಡ್ಡ ಬಕೆಟ್ಟುಗಳನ್ನು ಇಟ್ಟುಕೊಂಡು ಬಾಳೆಹಣ್ಣು, ಸೋಪು, ಕನ್ನಡಿ, ನೋಟ್ ಬುಕ್, ಪೆನ್ನು, ಪಾಷಾಣ, ಹಣ್ಣು, ತರಕಾರಿಗಳು, ನೀರು, ಮೀನು… ಹೀಗೆ ತರಹೇವಾರಿ ವಸ್ತುಗಳನ್ನು ಮಾರುತ್ತಿರುತ್ತಾರೆ ಇಲ್ಲಿಯ ಹೆಂಗಸರು. ಇವರನ್ನು ಝುಂಗೇರಾ ಎಂದು ಕರೆಯುವುದು ಇಲ್ಲಿಯ ವಾಡಿಕೆ. ಈ ಝುಂಗೇರಾ ಮಹಿಳೆಯರ ಕಾರ್ಯಶೈಲಿಯು ಯಾವ ಕಸರತ್ತುಗಳಿಗೂ ಕಮ್ಮಿಯಿಲ್ಲ. ಬೆನ್ನಿಗೆ ಬಿಗಿಯಾಗಿ ಕಟ್ಟಿಕೊಂಡ ಬಟ್ಟೆಯಲ್ಲಿ ಆಕೆಯ ಮಗುವೊಂದು ಮಲಗಿದೆ. ಇನ್ನು ಕಂಕುಳಿನಲ್ಲೂ ಒಂದಿದ್ದರೆ ಮುಗಿದೇಹೋಯಿತು. ಇಷ್ಟಿದ್ದರೂ ನಗರಗಳ ಕೇಂದ್ರಭಾಗದಲ್ಲಿ ರಸ್ತೆಗಳ ಉದ್ದಗಲಕ್ಕೂ ಸಂಚರಿಸಿ ತಮ್ಮದೇ ಗುಂಗಿನಲ್ಲಿ ಸಾಗುತ್ತಿರುವ ಬಹುತೇಕ ಎಲ್ಲಾ ವಾಹನಗಳ ಪಕ್ಕಕ್ಕೂ ಬಂದು ವ್ಯವಹಾರ ಕುದುರಿಸಬಹುದೇ ಎಂದು ಪ್ರಯತ್ನಿಸಬೇಕು. ಈ ನಡುವೆ ಪುರುಸೊತ್ತು ಮಾಡಿಕೊಂಡು ತನ್ನ ಮಗುವಿಗೆ ಮೊಲೆಯನ್ನೂ ಕೊಡಬೇಕು. ಇದು ಮಳೆ, ಗಾಳಿ, ಬಿಸಿಲೆನ್ನದೆ ಅಂಗೋಲನ್ ಬೀದಿಗಳಲ್ಲಿ ನಿತ್ಯವೂ ಕಾಣುವ ದೃಶ್ಯ.
ಇನ್ನು ನಗರದ ಕೆಲ ಭಾಗಗಳಲ್ಲಿ ಝುಂಗೇರಾ ಮಹಿಳೆಯರ ದಿನಚರಿಗಳು ಯಾವ ಸಾಹಸಕ್ಕೂ ಕಮ್ಮಿಯಿಲ್ಲವೆಂಬಂತಿರುತ್ತವೆ. ರಸ್ತೆ ಬದಿಯಲ್ಲಿ ಬಟ್ಟೆಯೊಂದನ್ನು ಹಾಸಿ ವ್ಯಾಪಾರಕ್ಕೆ ಕೂರುವ ಈ ಮಹಿಳೆಯರು ಪೋಲೀಸರು ಆ ಪ್ರದೇಶದಲ್ಲಿ ಓಡಾಡುತ್ತಿಲ್ಲ ಎಂಬ ಖಚಿತ ಮಾಹಿತಿಯನ್ನಿಟ್ಟುಕೊಂಡೇ ಕೂರಬೇಕು. ಮದವೇರಿದ ಸಲಗದಂತೆ ಅಬ್ಬರಿಸುತ್ತಾ ಅಚಾನಕ್ಕಾಗಿ ಬಂದಿಳಿಯುವ ಪೋಲೀಸ್ ವ್ಯಾನುಗಳು ಈ ಗಲ್ಲಿಗಳಲ್ಲಿ ಹುಟ್ಟಿಸುವ ಗೊಂದಲಗಳು ಅಷ್ಟಿಷ್ಟಲ್ಲ. ಇವರು ಹೀಗೆ ಬರುತ್ತಿದ್ದಂತೆಯೇ ವ್ಯಾಪಾರಿಗಳು ದಿಕ್ಕಾಪಾಲಾಗಿ ಓಡತೊಡಗುತ್ತಾರೆ. ಪೋಲೀಸಪ್ಪನ ಕೈಗೆ ತಗಲ್ಹಾಕಿಕೊಂಡರೆ ತಮ್ಮ ಇಡೀ ತಿಂಗಳ ಆದಾಯವನ್ನು ಒಂದೇ ಏಟಿಗೆ ಕಕ್ಕಿಸಿಬಿಡುತ್ತಾರೆ ಎಂಬುದು ಇವರಿಗೆ ಚೆನ್ನಾಗಿ ಗೊತ್ತು. ಲುವಾಂಡಾದಂತಹ ನಗರಗಳಲ್ಲಿ ವ್ಯವಸ್ಥಿತ ವ್ಯಾಪಾರಿ ಸಂಕೀರ್ಣಗಳ ಸಂಖ್ಯೆ ಕಮ್ಮಿಯಿರುವುದು ಮತ್ತು ದಿನೇ ದಿನೇ ಹೆಚ್ಚುತ್ತಿರುವ ವ್ಯಾಪಾರಿಗಳ ಸಂಖ್ಯೆ ಇದರ ಹಿಂದಿನ ಕಾರಣಗಳಲ್ಲೊಂದು. ಹೀಗೆ ತನ್ನ ಹೊಟ್ಟೆಪಾಡಿಗಾಗಿ ವ್ಯಾಪಾರಕ್ಕೆಂದು ಇಳಿಯುವ ಮಹಿಳೆಗೆ ಬೇಕೆಂದಾಗ ಚಿರತೆಯಂತೆ ಓಡಲೂ ಗೊತ್ತಿರಬೇಕು. ಭ್ರಷ್ಟ ಪೋಲೀಸರ ಕೈಗೆ ಸಿಕ್ಕಿಕೊಂಡರೆ ಈ ಕುಣಿಕೆಯಿಂದ ಪಾರಾಗಿ ಬರುವಷ್ಟು ಸಮಯಪ್ರಜ್ಞೆಯೂ, ಚಾಲಾಕಿತನವೂ ಆಕೆಯಲ್ಲಿರಬೇಕು.
ಇದು ಅಂಗೋಲನ್ ಮಹಿಳೆಯರ ಬದುಕಿನ ಒಂದು ಸಂಕ್ಷಿಪ್ತ ನೋಟವಷ್ಟೇ. ಸಮಾಧಾನಕರ ಸಂಗತಿಯೆಂದರೆ ಅಂಗೋಲಾದಲ್ಲಿ ಉದ್ಯೋಗಾವಕಾಶಗಳು ಇಲ್ಲವೇ ಇಲ್ಲವೆಂದು ಗಂಡು ಅಡ್ಡದಾರಿಗಿಳಿಯುವಷ್ಟು ಸಲೀಸಾಗಿ ಹೆಣ್ಣು ಹೋಗುವುದಿಲ್ಲ. ಬೆವರು ಸುರಿಸಿ ಸಂಪಾದಿಸಿದ ಕಾಸಿನ ಮೌಲ್ಯ ಆಕೆಗೆ ಗೊತ್ತು. ಹೀಗಾಗಿಯೇ ಮನೆತುಂಬಾ ಇರುವ ಮಕ್ಕಳನ್ನೂ, ಕುಟುಂಬವನ್ನೂ, ಮನೆಕೆಲಸಗಳನ್ನೂ ಹೇಗೋ ಸಂಭಾಳಿಸಿಕೊಂಡು ಆಕೆ ಸೂರ್ಯ ಉದಯಿಸುವ ಮುನ್ನವೇ ಬೀದಿಗಿಳಿದು ಸೂರ್ಯಾಸ್ತದ ನಂತರವೇ ಮನೆಗೆ ವಾಪಾಸ್ಸಾಗುತ್ತಾಳೆ. ಗಂಡ ಇರಲಿ, ಇಲ್ಲದಿರಲಿ; ತಾನು ಆರ್ಥಿಕವಾಗಿ ಸ್ವತಂತ್ರಳಾಗಿರಲೇಬೇಕೆಂಬ ಹುಮ್ಮಸ್ಸಿನಲ್ಲಿ ಪರಿಸ್ಥಿತಿಗಳೊಂದಿಗೆ ಸೆಣಸಾಡುತ್ತಾಳೆ. ಸರಕಾರದ ಅಥವಾ ಇನ್ಯಾರದ್ದೋ ಸಹಾಯಕ್ಕಾಗಿ ಇವರೆಲ್ಲಾ ಕಾಯುತ್ತಾ ಕೂತಿದ್ದರೆ ನಿಂತ ನೀರಾಗಿ ಬಿಡುತ್ತಿದ್ದರೇನೋ. ಆದರೆ ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಸ್ಥಳೀಯ ಸಂಘಸಂಸ್ಥೆಗಳನ್ನು ಕಟ್ಟಿಕೊಂಡು, ಚರ್ಚುಗಳ ತಂಡಗಳಲ್ಲಿ ಸಕ್ರಿಯರಾಗಿದ್ದು ತಮ್ಮ ಬದುಕಿನ ಚುಕ್ಕಾಣಿಯನ್ನು ತಮ್ಮದೇ ಕೈಗಳಲ್ಲಿ ಹಿಡಿದು ಧೈರ್ಯವಾಗಿ ಮುನ್ನಡೆಯುತ್ತಿದ್ದಾರೆ. ವಾರಕ್ಕೆ ನಿಗದಿತವಾದ ಒಂದೋ ಎರಡೋ ದಿನ ಎಲ್ಲಾ ಮಹಿಳೆಯರು ತಮ್ಮ ಗುಂಪಿನ ಸಮಾಲೋಚನೆಗಳಲ್ಲಿ ಪಾಲ್ಗೊಳ್ಳಲು ಸಮವಸ್ತ್ರದ ದಿರಿಸಿನಲ್ಲಿ ನಗುವನ್ನು ಚೆಲ್ಲುತ್ತಾ, ಗುಂಪಾಗಿ ಹೋಗುವುದನ್ನು ನೋಡುವುದೇ ಚೆಂದ.
ಸ್ವಾವಲಂಬನೆಯಿಂದ ಬದುಕನ್ನು ಕಟ್ಟಿಕೊಂಡ ಅಂಗೋಲನ್ ಮಹಿಳೆಯರು ಮೊದಲೇ ಹೇಳಿದಂತೆ ಒಂದು ರೀತಿಯಲ್ಲಿ ತಮ್ಮ ಬದುಕನ್ನಷ್ಟೇ ಅಲ್ಲದೆ, ದೇಶದ ಬದುಕನ್ನೂ ಕಟ್ಟತೊಡಗಿದ್ದಾರೆ. ಜಗತ್ತಿನ ಪ್ರಸ್ತುತ ವೇಗವನ್ನು ಪರಿಗಣಿಸಿದರೆ ಅಂಗೋಲನ್ ಮಹಿಳೆಯರದ್ದು ಆಮೆವೇಗ ಎಂದು ಹೇಳಿ ಕೈತೊಳೆದುಕೊಳ್ಳುವುದು ಸುಲಭ. ಆದರೆ ತಮಗಿರುವ ಪರಿಮಿತ ಅವಕಾಶ, ಸಂಪನ್ಮೂಲಗಳನ್ನು ಬಳಸಿಕೊಂಡು ಘನತೆಯಿಂದ ತಲೆಯೆತ್ತಿ ಬದುಕುವ, ದೇಶದ ಆರ್ಥಿಕತೆಯೆಂಬ ಸೌಧವನ್ನು ಪುಟ್ಟ ಇಟ್ಟಿಗೆಗಳನ್ನಿಟ್ಟು ತಮ್ಮದೇ ಆದ ರೀತಿಯಲ್ಲಿ ಕಟ್ಟುತ್ತಿರುವ ಇವರ ಜೀವನಪ್ರೀತಿಯು ಅನುಕರಣೀಯ.
ಇಪ್ಪತ್ತೊಂದನೇ ಶತಮಾನದಲ್ಲೂ ಹೆಣ್ಣನ್ನು ಕೇವಲ ಸೌಂದರ್ಯಕ್ಕೆ, ಮೈಬಣ್ಣಕ್ಕೆ, ಆಕಾರಕ್ಕೆ, ದೇಹದ ಕೆಲ ಭಾಗಗಳಿಗಷ್ಟೇ ಸೀಮಿತಗೊಳಿಸುವ ಕೆಲ ಅರೆಬೆಂದ ಥಿಯರಿಗಳನ್ನು ನೋಡಿದರೆ ನನಗೆ ವಿಚಿತ್ರವೆನಿಸುವುದಿದೆ. ಆದರೆ ಇಂಥಾ ಸಂದರ್ಭಗಳಲ್ಲೇ ಅಂಗೋಲನ್ ಮಹಿಳೆಯರ ನೆನಪು ಮನದಲ್ಲಿ ಮೂಡಿ ಭರವಸೆಯ ಹಣತೆ ಬೆಳಗಿದಂತಾಗುತ್ತದೆ.

‍ಲೇಖಕರು Avadhi Admin

September 4, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: