ಒದೆ ತಿನ್ನುವವನ ಒಂದು ಅಫಿಡವಿಟ್…

ನಮ್ಮೆಲ್ಲರ ಪ್ರೀತಿಯ ಬರಹಗಾರ, ಸಾಮಾಜಿಕ ಪ್ರಜ್ಞೆಯ ಕಾವಲುಗಾರ ನಾಗೇಶ್ ಹೆಗಡೆ ಇಲ್ಲಿ ಒಂದು ಅಫಿಡವಿಟ್ ಸಲ್ಲಿಸಿದ್ದಾರೆ. 

ಇಂದಿನ ಭಾರತದಲ್ಲಿ ಅತ್ಯಂತ ಹೆಚ್ಚು ಧಾಳಿಗೊಳಗಾಗಿರುವುದು ವಿಜ್ಞಾನ ಮತ್ತು ತಂತ್ರಜ್ಞಾನ 

ವಿಜ್ಞಾನವನ್ನು ದಶಕಗಳ ಕಾಲ ಉಸಿರಾಡಿರುವ, ವಿಜ್ಞಾನದ ತಪ್ಪು ಸರಿಗಳನ್ನು ವಿಶ್ಲೇಷಿಸುತ್ತಾ ಬರುತ್ತಿರುವ, ಜನಸಾಮಾನ್ಯರ ಬದುಕಿಗೆ ವಿಜ್ಞಾನವನ್ನು ನಿಲುಕಿಸಬೇಕು ಎಂದು ಪ್ರಯತ್ನಿಸುತ್ತಿರುವ ನಾಗೇಶ್ ಹೆಗಡೆ ಸಹಜವಾಗಿಯೇ ‘ಅಂಧ ಯುಗ’ವನ್ನು ಪ್ರಶ್ನಿಸಿದ್ದಾರೆ. 

ಪ್ರಶ್ನೆ, ವಿಮರ್ಶೆ ಎನ್ನುವುದೇ ದುಬಾರಿ ಆಗಿರುವ ಕಾಲದಲ್ಲಿ ನಾಗೇಶ್ ಹೆಗಡೆ ಅವರನ್ನು ಫೇಸ್ ಬುಕ್ ಕಲಿಗಳು ನೋಯಿಸುತ್ತಲೇ ಬಂದಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ನಾಗೇಶ್ ಹೆಗಡೆ ಅವರು ತಮ್ಮ ಒಲವು, ನಿಲವು, ತಮ್ಮ ನೈತಿಕತೆ ಬಗ್ಗೆ ಒಂದು ಶ್ವೇತಪತ್ರವನ್ನೇ ಹೊರಡಿಸಿದ್ದಾರೆ. ಓದಿ 

ನಾಗೇಶ್ ಹೆಗಡೆ 

ನನಗೆ ಇದನ್ನೆಲ್ಲ ಹೇಳಿಕೊಳ್ಳಲು ಮನಸ್ಸೊಪ್ಪುತ್ತಿಲ್ಲ. ಆದರೆ ಫೇಸ್ ಬುಕ್ ಗೆಳೆಯರಲ್ಲಿ ಅನೇಕರು ನನ್ನ ಮೇಲೆ ಹೆಚ್ಚುತ್ತಿರುವ ದಾಳಿಯಿಂದ ನೊಂದಿದ್ದಾರೆ. ಯಾರೋ ಯಾರದೋ ವಾಲ್ ಮೇಲೆ ನನ್ನ ವಿರುದ್ಧ ದಾಳಿ ನಡೆಸಿದ್ದಾರೆ ಎಂದು ನನ್ನ ಗಮನವನ್ನು ಸೆಳೆದು, ಮರುದಾಳಿಗೆ ನನ್ನನ್ನು ಹುರಿದುಂಬಿಸಲು ಯತ್ನಿಸುವವರೂ ಇದ್ದಾರೆ. ಕೆಲವು ದಾಳಿಕೋರರ ನಿಂದನೆಗಳಲ್ಲಿ ಸತ್ಯಾಂಶ ಇದ್ದೀತೆಂದು ಯುವ ಗೆಳೆಯರು ನಂಬುವ ಸಾಧ್ಯತೆ ಇದ್ದುದರಿಂದ ನಾನು ವಿವರಣೆ ನೀಡಬೇಕೆಂಬ ಒತ್ತಾಯ ಬರುತ್ತಿದೆ. ಹಾಗಾಗಿ ಈ ಅಫಿಡವಿಟ್‍:

• ನಾನು ಇದುವರೆಗೆ ಯಾವ ಪ್ರಶಸ್ತಿಗೂ ಅರ್ಜಿ ಹಾಕಿಲ್ಲ, ಲಾಬಿ ಮಾಡಿಲ್ಲ. ಇದುವರೆಗೆ ಅನೇಕ ಸಲಹಾ ಸಮಿತಿಗಳಲ್ಲಿ ಕೆಲಸ ಮಾಡಿದ್ದೇನಾದರೂ ಅವುಗಳ ಸದಸ್ಯತ್ವಕ್ಕಾಗಿ ಯಾವುದೇ ಅಕಾಡೆಮಿ, ಮಂಡಳಿಗಳಿಗೂ ವಿಶ್ವವಿದ್ಯಾಲಯಗಳಿಗೂ ಕೋರಿಕೆ ಸಲ್ಲಿಸಿಲ್ಲ. ಯಾರ ಮೂಲಕವೂ ಒತ್ತಾಯ ಹೇರಿಲ್ಲ.

• ನನಗೆ ಯಾವುದೇ (ಹಾಲಿ ಅಥವಾ ಮಾಜಿ) ಶಾಸಕ ಅಥವಾ ಸಚಿವರ ದೋಸ್ತಿ ಇಲ್ಲ. ನಾನು ಇದುವರೆಗೆ ನನ್ನ ಕೆಲಸಕ್ಕಾಗಿ ಅಂಥ ಯಾರನ್ನೂ ಭೇಟಿಯಾಗಿಲ್ಲ.

• ರಾಷ್ಟ್ರಪತಿ ಆಡಳಿತಾವಧಿಯಲ್ಲಿ ನನಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದರೂ ನನ್ನ ಹೆಸರನ್ನು ಯಾರು ಶಿಫಾರಸು ಮಾಡಿದರೋ ಗೊತ್ತಿಲ್ಲ. ಅಂಥ ಪ್ರಶಸ್ತಿಯ ಆಧಾರದ ಮೇಲೆ ‘ಜಿ’ ಕೆಟಗರಿಯ ನಿವೇಶನ ಸಿಗಬಹುದಾಗಿದ್ದರೂ ನಾನು ಅದಕ್ಕೆ ಅರ್ಜಿ ಹಾಕಲಿಲ್ಲ; ನಿವೇಶನ ಪಡೆದಿಲ್ಲ. ನಾನು ಬುದ್ಧಿಗೇಡಿಯೆಂದು ನಿಂದಿಸಬಹುದೇ ವಿನಾ ಬಕೆಟ್ಟು, ಬಾಲಬಡುಕ ಎಂದೆಲ್ಲ ಹೀಯಾಳಿಸುವುದರಲ್ಲಿ ಅರ್ಥವಿಲ್ಲ.

• ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ. ಹಿಂಸಾವಾದವನ್ನು ಎಂದೂ ಬೆಂಬಲಿಸುವುದಿಲ್ಲ. ಭಾರತದ ಸಂವಿಧಾನಕ್ಕೆ ನಾನು ಸಂಪೂರ್ಣ ಬದ್ಧನಾಗಿದ್ದೇನೆ. ಅದೇ ಈ ಇಹದಲ್ಲಿ, ಈ ದೇಶದಲ್ಲಿ, ನಮ್ಮನ್ನು ಕಾಪಾಡುವ ಧರ್ಮವೆಂದು ನಂಬಿದ್ದೇನೆ. ಪರದಲ್ಲಿ ನನಗೆ ನಂಬಿಕೆ ಇಲ್ಲ. ಯಾವ ದೇವರನ್ನೂ ನಾನಾಗಲೀ ನನ್ನ ಸಹಭಾಗಿನಿಯಾಗಲೀ ಪೂಜಿಸುವುದಿಲ್ಲ, ಪ್ರಾರ್ಥಿಸುವುದಿಲ್ಲ. ಆರ್ಯಸಮಾಜದಲ್ಲಿ ವಿವಾಹವಾಗುವ ಸಂದರ್ಭದಲ್ಲಿ ಅಲ್ಲಿನ ಪಂಡಿತರ ಒತ್ತಾಯದ ಮೇರೆಗೆ ರೂ.80 ಮೌಲ್ಯದ ಚಿನ್ನದ ತುಣುಕನ್ನು ಮಂಗಲಸೂತ್ರದಲ್ಲಿ ಹಾಕಿಸಿದ್ದು ಬಿಟ್ಟರೆ ನಾವು ಮತ್ತೆಂದೂ ಚಿನ್ನ-ಬೆಳ್ಳಿ ಖರೀದಿಸಿಲ್ಲ.

• ತೆರಿಗೆ ಕಟ್ಟಬೇಕಾದಷ್ಟು ವರಮಾನ ನನಗೆ ಇಲ್ಲವಾದರೂ ಪ್ರತಿವರ್ಷವೂ ವರಮಾನದ ಲೆಕ್ಕಾಚಾರವನ್ನು ಪ್ರಾಮಾಣಿಕವಾಗಿ ಸರಕಾರಕ್ಕೆ ಸಲ್ಲಿಸುತ್ತಿದ್ದೇನೆ.

• ನಾನು ಯಾವ ಧರ್ಮವನ್ನಾಗಲೀ ಆಹಾರ ಪದ್ಧತಿಯನ್ನಾಗಲೀ ಹೀಗಳೆಯುವುದೂ ಇಲ್ಲ; ಬೆಂಬಲಿಸುವುದೂ ಇಲ್ಲ. ಹಿಂದೂ ಧರ್ಮ ಮತ್ತು ನಮ್ಮ ಪರಂಪರೆಯಲ್ಲಿರುವ ಅನೇಕ ಉದಾತ್ತ ಅಂಶಗಳ ಬಗ್ಗೆ (ಉದಾ: ಲೋಕಾ ಸಮಸ್ತಾಃ ಸುಖಿನೋ ಭವಂತು…) ನನಗೆ ಹೆಮ್ಮೆಯಿದೆ. ಅಂಥವು ಕಾಣೆಯಾಗುತ್ತಿರುವ ಬಗ್ಗೆ ಬೇಸರವಿದೆ; ಮತ್ತು ಕಾಣೆಯಾಗಬೇಕಿದ್ದ ಅನೇಕ ಅನಿಷ್ಟ ಮೂಢ/ರೂಢ ಸಂಪ್ರದಾಯಗಳು, ಧೋರಣೆಗಳು ದಿನೇ ದಿನೇ ಹೆಚ್ಚುತ್ತಿರುವ ಬಗ್ಗೆ ಖೇದವಿದೆ.

• ಜರ್ನಲಿಸಂ ಬಿಟ್ಟರೆ ಬೇರೆ ಯಾವ ಇಸಂಗೂ ನನ್ನನ್ನು ಒಪ್ಪಿಸಿಕೊಂಡಿಲ್ಲ. ‘ವಿಜ್ಞಾನ ಲೇಖಕರಾಗಿ ವಿಜ್ಞಾನದ ಬಗ್ಗೆ ಮಾತ್ರ ಬರೆಯಿರಿ’ ಎಂಬ ಸಲಹಾಕಾರರಿಗೆ ನನ್ನ ಉತ್ತರ ಇಷ್ಟೆ: ನಾನು ಕೇವಲ ಪತ್ರಕರ್ತ. ವಿಜ್ಞಾನ-ತಂತ್ರಜ್ಞಾನಗಳ ದುರ್ಬಳಕೆಯಿಂದಾಗಿಯೇ ಜಗತ್ತಿನಲ್ಲಿ ಇಷ್ಟೆಲ್ಲ ಕ್ಲೇಶ, ಅಸಮಾನತೆ, ಆಕ್ರೋಶ ಹೆಚ್ಚುತ್ತಿದೆ ಎಂದು ನಂಬಿದ್ದೇನೆ. ಪತ್ರಕರ್ತನ ವೃತ್ತಿಧರ್ಮಕ್ಕೆ ನಾನು ಬದ್ಧನಾಗಿದ್ದೇನೆ. ನನ್ನ ಸೀಮಿತ ಶಕ್ತ್ಯಾನುಸಾರ ಪ್ರತಿಪಕ್ಷದಂತೆ (ನಾನು ಮತ ಹಾಕಿದ ರಾಜಕೀಯ ಪಕ್ಷವೇ ಅಧಿಕಾರಕ್ಕೆ ಬಂದರೂ) ಪ್ರಶ್ನಿಸುವ, ವಿಮರ್ಶಿಸುವ ಕೆಲಸ ಮಾಡುತ್ತೇನೆ. ಮತ ಹಾಕಲಾರದ ಜೀವಿಗಳ ಬದುಕುವ ಹಕ್ಕುಗಳ ಪರವಾಗಿ ನಿಲ್ಲುತ್ತೇನೆ. ನಮಗೆ ಈಗ ಲಭಿಸಿರುವಷ್ಟೇ ಸೌಕರ್ಯಗಳು ಮುಂದಿನ ಪೀಳಿಗೆಗೂ ಲಭಿಸಬೇಕೆಂಬ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತೇನೆ.

• ಅಧಿಕಾರದಲ್ಲಿದ್ದವರ ಸಾಧನೆಗಳನ್ನು ಸಾಮಾನ್ಯವಾಗಿ ಶ್ಲಾಘಿಸಲು ಹೋಗುವುದಿಲ್ಲ. ಏಕೆಂದರೆ ಆ ಕೆಲಸವನ್ನು ಮಾಡಲು/ಮಾಡಿಸಲು ಅಲ್ಲಿದ್ದವರಿಗೆ ಬೇಕಾದಷ್ಟು ಸಾಧನ-ಸವಲತ್ತುಗಳು ಇವೆ.

• ದೇಶದ ಭದ್ರತೆಗಾಗಿ ಮಿಲಿಟರಿಗೆ ಕೊಡುವುದಕ್ಕಿಂತ ಹೆಚ್ಚಿನ ಪ್ರಾಧಾನ್ಯವನ್ನು ನಾನು ಪ್ರಾಮಾಣಿಕ ಶಿಕ್ಷಕರಿಗೆ, ಸರಕಾರಿ ವೈದ್ಯರಿಗೆ, ಸೇವಾತತ್ಪರ ಅಧಿಕಾರಿಗಳಿಗೆ, ಹಾಗೂ ರೈತರಿಗೆ ಕೊಡುತ್ತೇನೆ. ಗಡಿಭದ್ರತೆಗೆ ಕೊಡುವಷ್ಟೇ ಮಹತ್ವವನ್ನು ದೇಶದ ನೈಸರ್ಗಿಕ ಸಂಪತ್ತಿನ ರಕ್ಷಣೆಗೂ, ಪ್ರಜೆಗಳ ಆರೋಗ್ಯ ಮತ್ತು ಶಿಕ್ಷಣಕ್ಕೂ ಕೊಡಬೇಕೆಂಬ ಧೋರಣೆ ನನ್ನದು.

• ಜಿಡಿಪಿ ಎಂಬುದು ದೇಶದ ಪ್ರಗತಿಯ ಅಳತೆಗೋಲು ಎಂಬುದನ್ನು ನಾನು ಎಂದೂ ನಂಬುವುದಿಲ್ಲ. ಅದು ಅಧಿಕಾರಕ್ಕೇರಿದವರು, ಏರಬಯಸುವವರು ಬಡಿಯುವ ತಮ್ಮಟೆಯೇ ವಿನಾ ಅದಕ್ಕೂ ಸಾಮಾಜಿಕ ಸಾಮರಸ್ಯಕ್ಕೂ, ನೆಮ್ಮದಿಗೂ ಸಂಬಂಧವಿಲ್ಲ ಎಂಬುದನ್ನು ನಂಬಿದ್ದೇನೆ.

• ನನ್ನನ್ನು ನಿಂದಿಸುವವರ ಅಭಿಪ್ರಾಯ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ. ನನ್ನ ಅಂಕಣ ಬರಹಗಳು “ಪ್ರಜಾವಾಣಿ”ಯಲ್ಲಿ ಪ್ರಕಟವಾಗುವುದರಿಂದ ಕೆಲವರು ಪದೇಪದೇ ‘ನಂದಿ ಮಾರ್ಕಿನ ಸೆಗಣಿ ಇದು’ ಎಂದು ನಿಂದಿಸಿದರೂ ಸಹಿಸಿಕೊಳ್ಳುತ್ತೇನೆ. ಏಕೆಂದರೆ ಸೆಗಣಿ ಅತ್ಯುತ್ತಮ ಸಾವಯವ ಸಂಪನ್ಮೂಲ ಅಷ್ಟೇ ಅಲ್ಲ, ಹೀಗೆ ನಿಂದಿಸುವವರೇ ಅದೊಂದು ಪವಿತ್ರ ದ್ರವ್ಯವೆಂದು ಶಾಸ್ತ್ರೋಕ್ತವಾಗಿ ಆಗಾಗ ಹೊಟ್ಟೆಗೆ ಹಾಕಿಕೊಳ್ಳುತ್ತಾರೆಂದು ನನಗೆ ಗೊತ್ತಿದೆ.

‍ಲೇಖಕರು avadhi

September 4, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: