ಹೆಣ್ಣಿನ ಬವಣೆಯ ತಣ್ಣಗೆ ಬಣ್ಣಿಸುವ ಚಿತ್ರ ‘ಅಮ್ಮಚ್ಚಿ ಎಂಬ ನೆನಪು'

ಡಾ. ಪಾರ್ವತಿ ಜಿ.ಐತಾಳ್

ಹೆಣ್ಣುಮಕ್ಕಳು ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಕಾಲವಿದು. ಹಿಂದೊಮ್ಮೆ ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿ, ಮನೆ-ಗಂಡ-ಮಕ್ಕಳ ಚಾಕರಿಗಷ್ಟೇ ತನ್ನ ಬದುಕನ್ನು ಸೀಮಿತಗೊಳಿಸಿಕೊಂಡು ತನ್ನೆಲ್ಲ ಆಸೆ-ಆಕಾಂಕ್ಷೆಗಳನ್ನು ಬಲವಂತವಾಗಿ ಬದಿಗೊತ್ತಿ ಕಳೆಯುತ್ತಿದ್ದ ಕಾಲವೊಂದಿತ್ತು ಎಂಬುದು ಪ್ರಾಯರ್ಶ ಇಂದಿನ ಅನೇಕರಿಗೆ ಗೊತ್ತಿರಲಾರದು. ಭೂತಕಾಲದ ಬಗ್ಗೆ ತಿಳಿದು ಏನಾಗಬೇಕಿದೆ ಅಂದಾರು ಕೆಲವರು. ಹಾಗಲ್ಲ. ಇತಿಹಾಸದ ಬಗ್ಗೆ ಜ್ಞಾನ ಇದ್ದರೆ ಮಾತ್ರ ನಮ್ಮ ಮುಂದಿನ ಹೆಜ್ಜೆಗಳು ನಿರ್ಧಾರವಾಗಲು ಸಾಧ್ಯ. ಈ ದೃಷ್ಟಿಯಿಮದ ಹೆಣ್ಣು ಇದುವರೆಗೆ ನಡೆದು ಬಂದ ದಾರಿಯ ಬಗ್ಗೆ, ಆಕೆ ಎದುರಿಸಿದ ಸಮಸ್ಯೆಗಳ ಬಗ್ಗೆ ಮತ್ತು ಅನುಭವಿಸಿದ ಸಂಕಟಗಳ ಬಗ್ಗೆ ಮನಮುಟ್ಟುವ ಚಿತ್ರಣವನ್ನು ನೀಡುವ, ಇತ್ತೀಚೆಗೆ ಬಿಡುಗಡೆಯಾದ ಕಲಾತ್ಮಕ ಚಿತ್ರ ‘ಅಮ್ಮಚ್ಚಿ ಎಂಬ ನೆನಪು’ ಎಲ್ಲರೂ ನೋಡಬೇಕಾದ ಒಂದು ಅಚ್ಚುಕಟ್ಟಾದ ದಾಖಲೆ.
ಇಡೀ ಚಿತ್ರವು ಸ್ತ್ರೀ ನಡೆದು ಬಂದ ದಾರಿಯ ಮೇಲಿನ ಒಂದು ಪಕ್ಷಿ ನೋಟದಂತಿದೆ. ಹಿರಿಯ ಕಥೆಗಾರ್ತಿ ವೈದೇಹಿಯವರ ಒಂದಕ್ಕೊಂದು ಕೊಂಡಿಯಿರುವಂತಹ ಮೂರು ಕಥೆಗಳ ಮುಖ್ಯಾಂಶಗಳನ್ನು ತೆಗೆದು ಇಲ್ಲಿ ನಿರ್ದೇಶಕಿ ಚಂಪಾ ಶೆಟ್ಟಿಯವರು ಅಚ್ಚುಕಟ್ಟಾಗಿ ಹೊಸೆದಿದ್ದಾರೆ .  ಗ್ರಾಮೀಣ ಮಧ್ಯಮವರ್ಗದ ಮನೆತನಗಳಲ್ಲಿ ಹೆಣ್ಣಿನ ಸ್ಥಿತಿಗತಿಗಳು ಮೂರು ತಲೆಮಾರುಗಳಲ್ಲಿ ಹೇಗಿದ್ದವು ಎಂಬುದನ್ನು ಪುಟ್ಟಮ್ಮತ್ತೆ, ಅಕ್ಕು ಮತ್ತು ಅಮ್ಮಚ್ಚಿಯರು ಪ್ರತಿನಿಧಿಸುತ್ತಾರೆ. ಮೂವರನ್ನೂ ಸಮಾಜವು ನಡೆಸಿಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಿಲ್ಲದಿದ್ದರೂ ಎದುರಾಗುವ ಕಷ್ಟಕರ ಸನ್ನಿವೇಶಗಳಿಗೆ ಅವರು ಪ್ರತಿಕ್ರಿಯಿಸುವ ರೀತಿ ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಕಾಲದ ಬದಲಾವಣೆಯೊಂದಿಗೆ ಸ್ತ್ರೀಯರ ಪರಿಸ್ಥಿತಿಯೂ ಬದಲಾಗಬಹುದಾದ ಸಾಧ್ಯತೆಯ ಹೊಳಹುಗಳೂ ಚಿತ್ರದಲ್ಲಿವೆ.

ಮೊದಲಿಗೆ ಬಿಚ್ಚಿಕೊಳ್ಳುವುದು ಪುಟ್ಟಮ್ಮತ್ತೆಯ ಕಥೆ. ಹೆಜ್ಜೆ ಹೆಜ್ಜೆಗೂ ಕಷ್ಟಗಳನ್ನೆದುರಿಸಿ ಹಣ್ಣಾಗಿರುವ ಪುಟ್ಟಮ್ಮತ್ತೆ ಈಗ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸ್ಥಿತಪ್ರಜ್ಞ ಸ್ಥಿತಿಯನ್ನು ತಲುಪಿದ್ದಾರೆ. ಸ್ನಾನಕ್ಕೆ ನೀರು ಕಾಯಿಸಿಲ್ಲವೆಂದು ಸಿಟ್ಟಿನ ಆವೇಶದಲ್ಲಿ ಹೆಂಡತಿಯನ್ನು ಬಾವಿಗೆ ನೂಕಿ ಸಾಯಿಸುವ ಆಕೆಯ ತಂದೆಯ ಕ್ರೌರ್ಯದೊಂದಿಗೆ ಪ್ರೇಕ್ಷಕರ ಹೃದಯ ಕಲಕುವ ದೃಶ್ಯಗಳು ಆರಂಭವಾಗುತ್ತವೆ.
‘ಹೆಣ್ಣಿಗೆ ಹೆಣ್ಣೇ ಶತ್ರು’ ಎಂದು ಪುರುಷ ಪ್ರಧಾನ ಪರಂಪರೆ ಹುಟ್ಟುಹಾಕಿರುವ, ಒಡೆದಾಳುವ ರೀತಿಯ ಸುಳ್ಳು ಹೇಳಿಕೆಗೆ ತದ್ವಿರುದ್ಧವಾಗಿ ಇಲ್ಲಿ ಅನಾಥೆ ಮತ್ತು ಅಸಹಾಯಕ ಸ್ಥಿತಿಯಲ್ಲಿರುವ ಪುಟ್ಟಮ್ಮತ್ತೆಗೆ ಆಶ್ರಯ ನೀಡಿ ಸಲಹುವವರೆಲ್ಲರೂ ತಾಯ್ತನದ ಕರುಳಿರುವ ಹೆಂಗಸರೇ. ರಾತ್ರಿ ಎಲ್ಲರೊಂದಿಗೆ ಮಲಗಿದ್ದ ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರವೆಸಗಲು ಕಾಮುಕನೊಬ್ಬ ಬಂದಾಗ, ಯಾವ ದೃಶ್ಯವನ್ನೂ ಸೃಷ್ಟಿಸದೆ ಮೌನವಾಗಿ ಅವನ ಮೈಗೆ ಪಿನ್ನಿನಿಂದ ಚುಚ್ಚಿ ಓಡಿಸುವ ಪುಟ್ಟಮ್ಮನ ಜಾಣ್ಮೆಗೆ ಯಾರಾದರೂ ತಲೆದೂಗಬೇಕು ಮದುವೆಯಾಗಿಯೂ ಹೆಣ್ಣುಮಗು ಹುಟ್ಟಿತೆಂದು ಆಕೆಯನ್ನು ಬಿಟ್ಟುಹೋಗುವ ಗಂಡನಿಂದಾಗಿ ಪುನಃ ಅನಾಥಳಾದವಳಿಗೆ ಸಿಗುವುದು ಶೇಷಮ್ಮನ ಅತ್ತೆಯ ಮಡಿಲು. ತಮ್ಮ ಮನೆಯ ಒಂದು ಭಾಗದಲ್ಲಿ ಆಕೆಗೆ ಇರಲು ಆಶ್ರಯ ಕೊಟ್ಟ ಮಹಾತಾಯಿಯಾಕೆ.
ಇದ್ದೊಬ್ಬ ಮಗಳನ್ನೂ ಕಳೆದುಕೊಂಡು, ಚಿತ್ರ ಆರಂಭವಾಗುವ ಹಂತದಲ್ಲಿ ಮೊಮ್ಮಗಳು ಚಿನಕುರುಳಿ ಅಮ್ಮಚ್ಚಿಯ ಜೊತೆಗೆ ಪುಟ್ಟಮ್ಮತ್ತೆ ಇಡೀ ಊರಿನಲ್ಲಿ ಹಪ್ಪಳ-ಸಂಡಿಗೆ-ಅಡುಗೆ ಕೆಲಸಗಳನ್ನು ವಹಿಸಿಕೊಳ್ಳುವ ಕಾಯಕದಲ್ಲಿ ತೊಡಗಿರುತ್ತಾಳೆ. ಯಾವುದೇ ಪ್ರತಿಭಟನೆಯಿಲ್ಲದೆ, ಸಂಪ್ರದಾಯದೊಂದಿಗೆ ರಾಜಿ ಮಾಡಿಕೊಂಡು ಬದುಕುವ ಒಬ್ಬ ಹೆಣ್ಣನ್ನು ಪುಟ್ಟಮ್ಮತ್ತೆಯಲ್ಲಿ ನೋಡುತ್ತೇವೆ.
ಎರಡನೆಯ ತಲೆಮಾರಿನ ಹೆಣ್ಣು ಅಕ್ಕು ಹಾಗಲ್ಲ. ತನ್ನನ್ನು ಮದುವೆಯಾಗಿ ಬಿಟ್ಟುಹೋದ , ತನ್ನಲ್ಲಿ ಸಹಜವಾಗಿದ್ದ ತಾಯ್ತನದ ಕನಸುಗಳನ್ನು ನುಚ್ಚುನೂರಾಗಿಸಿದ ಗಂಡನ ಬಗ್ಗೆ ಅವಳಿಗೆ ಸಹಿಸಲಾಗದ ಆಕ್ರೋಶವಿದೆ. ಚಿತ್ರವು ಅವಳ ವರ್ತನೆಯನ್ನು ಮನಶ್ಶಾಸ್ತ್ರೀಯ ನೆಲೆಯಿಂದ ನೋಡುತ್ತದೆ. ಆಕೆ ತಾನು ಬಸುರಿಯೆಂದೂ ತಾಯಿಯಾಗಿದ್ದೇನೆಂದೂ ಮಗು ತನ್ನ ಬಳಿಯಿದೆಯೆಂದೂ ಆಗಾಗ ಮನಸ್ಸಿಗೆ ಬಂದಂತೆ ಹಲುಬುತ್ತಿರುತ್ತಾಳೆ.
ಅವಳ ನೋವು ಏನೆಂದು ಅರ್ಥ ಮಾಡಲಾರದ ಮನೆಯವರು ಅವಳನ್ನು ಅರೆಮರುಳಿಯೆಂದು ಕರೆಯುತ್ತಾರೆ. ಅವಳು ಎಲ್ಲರ ತಾತ್ಸಾರ, ಭತ್ರ್ಸನೆ, ಅವಹೇಳನ, ಗೇಲಿಗಳಿಗೆ ಗುರಿಯಾಗುತ್ತಾಳೆ. ಆದರೆ ಅವಳು ಸುಮ್ಮನಿರುವುದಿಲ್ಲ. ತನ್ನ ಪ್ರತಿಭಟನೆಯನ್ನು ಹೊರಗೆಡಹುತ್ತಲೇ ಇರುತ್ತಾಳೆ. ಕೊನೆಯಲ್ಲಿ ಅವಳ ಕಾಟ ತಡೆಯಲಾರದೆ ಅವಳ ಗಂಡನನ್ನು ಹುಡುಕಿ ಕರೆಸಿದಾಗ ಅವಳು ಸಿಟ್ಟಾಗಿ ಅವನ ಮೇಲೆರಗಿ, ಅವನ ಜತೆಗೆ ಹೋಗಲೊಪ್ಪದಿರುವುದೇ ಅವಳು ತೋರಿಸುವ ಪ್ರತಿಭಟನೆ. ತನ್ನ ಆಸೆಗಳನ್ನು ಎಂದೂ ಅರ್ಥ ಮಾಡಿಕೊಳ್ಳದೆ ತನ್ನ ಮೇಲೆ ದೌರ್ಜನ್ಯವೆಸಗುವ ಮನೆಯ ಗಂಡುಮಗ ವಾಸು ಹೆಂಡತಿಯೊಂದಿಗಿನ ಸಂಬಂಧ ಸಾಲದೆಂದು ಬೇರೊಬ್ಬ ಹೆಂಗಸಿನ ಜತೆ ಸಂಬಂಧವಿಟ್ಟುಕೊಂಡಿದ್ದರ ಬಗ್ಗೆ ಹೇಳುವಾಗ ಸ್ತ್ರೀಪುರುಷರನ್ನು ಲೈಂಗಿಕ ಬಯಕೆಗಳ ವಿಚಾರದಲ್ಲಿ ತಾರತಮ್ಯ ದೃಷ್ಟಿಯಿಂದ ನೋಡುವ ಸಮಾಜದ ಅಮಾನವೀಯ ನೆಲೆಯತ್ತ ನಾವು ಗಮನ ಹರಿಸುವಂತಾಗುತ್ತದೆ.
ಮೂರನೆಯ ತಲೆಮಾರಿಗೆ ಸೇರಿದ ಅಮ್ಮಚ್ಚಿ ಬದಲಾವಣೆಯತ್ತ ಮುಖ ಮಾಡಿರುವ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತಾಳೆ. ಉತ್ಸಾಹದ ಬುಗ್ಗೆ, ದಿಟ್ಟತನದ ಪ್ರತೀಕ, ಲವಲವಿಕೆಯ ಮೂರ್ತಿ, ಸೌಂದರ್ಯದ ಖನಿ, ಸದಾ ಹೊಸತನದ ಕನಸು ಕಾಣುವ ಚಲನಶೀಲ ವ್ಯಕ್ತಿತ್ವ ಅವಳದ್ದು. ಅಜ್ಜಿ ಎಷ್ಟು ಶಾಂತಮೂರ್ತಿಯೋ ಅಮ್ಮಚ್ಚಿ ಅನ್ಯಾಯಕ್ಕೊಳಗಾದಾಗ ಕಿಡಿಕಾರುವ ರುದ್ರಮೂರ್ತಿ. ಯಾವುದೇ ಅನ್ಯಾಯವನ್ನಾದರೂ ಕಂಡಕಂಡಲ್ಲಿ ತಕ್ಷಣವೇ ಖಂಡಿಸುವ ಗುಂಡಿಗೆಯಿುದ್ದವಳು. ತಾನು ಬುದ್ಧಿವಂತಳಾಗಿದ್ದೂ ಬಡತನದ ಕಾರಣದಿಂದಾಗಿ ತನ್ನ  ಗೆಳತಿ ಸೀತಾಳಂತೆ ಶಾಲೆಗೆ ಹೋಗುವ ಅವಕಾಶ ತನಗೆ ಸಿಕ್ಕಿಲ್ಲವಲ್ಲಾ ಎಂಬ ಕೊರಗು ಅವಳಲ್ಲಿದೆ.
ಆದರೆ ತನಗೆ ಬೇಕಾದಂತೆ ಬದುಕು ಕಟ್ಟಿಕೊಳ್ಳುವ ಕನಸು ಕಾಣುವವಳು ಅವಳು. ಹಳ್ಳಿಯ ಯಾವ ಹೆಣ್ಣು ಮಕ್ಕಳು ಕಂಡು ಕೇಳರಿಯದ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳುವ ಹುಚ್ಚು ಅವಳಿಗೆ. ಎರಡು ಜಡೆ ಹಾಕಿಕೊಂಡು, ಮುಖಕ್ಕೆ ಪೌಡರು ಲೇಪಿಸಿಕೊಂಡು, ಕನ್ನಡಿಯಲ್ಲಿ ತನ್ನ ಅಂದ ಚೆಂದಗಳನ್ನು ನೋಡಿಕೊಳ್ಳುವ ಆಕೆ ಜೀವಂತಿಕೆಯ ಪ್ರತೀಕ. ಪೇಟೆಗೆ ಓದಲು ಹೋಗಿರುವ ಶಂಭಟ್ಟರ ಮಗನನ್ನು ಮದುವೆಯಾಗುವ ಆಸೆ ಅವಳಿಗೆ. ಪಕ್ಕದ ಮನೆಯ ಸೌದಾಮಿನಿಯನ್ನು ನೋಡಲು ಹುಡುಗ ಬರುತ್ತಾನೆಂದು ಗೊತ್ತಾದಾಗ ಪೇಟೆಯ ಹುಡುಗ ಹೇಗಿರುತ್ತಾನೆಂದು ನೋಡುವ ಕುತೂಹಲದಿಂದ ಅಜ್ಜಿಯ ಮಾತು ಕೇಳದೆ ಅಲ್ಲಿಗೆ ಹೋಗಿ ಅವರ ಸಂಭ್ರಮದಲ್ಲಿ ಪಾಲ್ಗೊಳ್ಳತ್ತಾಳೆ.
ಹುಡುಗನ ಕಣ್ಣಿಗೆ ಅಮ್ಮಚ್ಚಿಯ ಚೆಲುವಿನ ರಾಶಿ ಬಿದ್ದು ತನಗೆ ಅವಳೇ ಆದೀತೆಂದು ಹೇಳಿದಾಗ, ಶೇಷಮ್ಮ ಪುಟ್ಟಮ್ಮತ್ತೆಯನ್ನು ಬೈಯುತ್ತಾಳೆ. ಆಯ್ಕೆಯ ಅವಕಾಶವಿರುವುದು ಬರೇ ಗಂಡು ಮಕ್ಕಳಿಗೆ ಮಾತ್ರವೆಂದು ಸಾಬೀತು ಪಡಿಸುವ ಈ ಘಟನೆ ಅಮ್ಮಚ್ಚಿಯ ಮದುವೆಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಬೋಳುತಲೆಯ ಕುತಂತ್ರಿ ವೆಂಕಪ್ಪಯ್ಯನ ಜತೆಗೆ ಶೀಘ್ರದಲ್ಲೇ ಮಾಡಿಸುವ ಹುನ್ನಾರದಲ್ಲಿ ಕೊನೆಯಾಗುತ್ತದೆ. ವೆಂಕಪ್ಪಯ್ಯನ ಮೇಲೆ ಸೇಡು ತೀರಿಸುವ ಪಣತೊಟ್ಟ ಅಮ್ಮಚ್ಚಿ ಕಮಕ್ ಕಿಮಕ್ ಎನ್ನದೆ ಅವನ ಜತೆಗೆ ತಿರುಪತಿಗೆ ಹೋಗಿ, ಕೆಲವೇ ದಿನಗಳಲ್ಲಿ ಹಿಂತಿರುಗಿ ಒಬ್ಬಳೇ ಬಂದು ‘ ವೆಂಕಪ್ಪಯ್ಯ ಸತ್ತ’ ಎನ್ನುತ್ತ ನಗುತ್ತಾಳೆ. ಹೀಗೆ ತನಗಿಷ್ಟವಿಲ್ಲದ ಬದುಕನ್ನು ನಿರಾಕರಿಸುವ ಅಮ್ಮಚ್ಚಿ ಹೆಣ್ಣಿನ ದಿಟ್ಟತನದ ಪ್ರತೀಕವಾಗುತ್ತಾಳೆ.

 
ಆದರೆ ಪಿತೃಸಂಸ್ಕೃತಿಯ  ಆಲದ ಮರಕ್ಕೇ ಇನ್ನೂ ಆತುಕೊಂಡಿರುವ ಸಮಾಜದಲ್ಲಿ ಪ್ರವಾಹದ ವಿರುದ್ಧ ಈಜಾಡುತ್ತಿರುವ ಅಕ್ಕು-ಅಮ್ಮಚ್ಚಿಯಂಥವರ ಮುಂದಿನ ಭವಿಷ್ಯವೇನು? ಕೌಟುಂಬಿಕ ಬದುಕಿನ ಒಳಗಿದ್ದರೂ ಅಥವಾ ಅದರಿಂದ ಮುಕ್ತವಾಗಿ ಹೊರಗೆ ಬಂದರೂ ಅವಳದ್ದು ‘ಸರಪಳಿಯಿಲ್ಲದೆಯೇ ಬಂದಿ’ಯಾಗಿರುವ ಅನಿಶ್ಚಿತ ಬದುಕು. ಎಲ್ಲರೂ ಹೇಳುತ್ತಿರುವಂತೆ ಇಲ್ಲಿ ಮೂರಲ್ಲ, ಐದು ತಲೆಮಾರುಗಳ ಕಥೆಯಿದೆ. ಪುಟ್ಟಮ್ಮತ್ತೆಯ ತಂದೆಯ ಕ್ರೌರ್ಯದಿಂದ ಆರಂಭವಾಗುವ ಕಥೆ ವಿದ್ಯಾವಂತೆಯಾಗಿ ಕಥೆಗಾರ್ತಿಯಾಗಿ ಸಮಾಜದ ಮುಖ್ಯವಾಹಿನಿಯನ್ನು ಸೇರಿಕೊಳ್ಳುವ ಸೀತಾಳಲ್ಲಿ ಸಮಾಪ್ತಿಯಾಗುತ್ತದೆ.
ಪ್ರಾಯಶಃ ಕಥಾನಿರೂಪಕಿಯಾದ ಸೀತಾಳಂಥವರಿಗೆ ಹೆಣ್ಣು ಎದುರಿಸುವ ಸಂಕಷ್ಟಗಳ ಕುರಿತು ಮುಕ್ತವಾಗಿ ಹೊರಜಗತ್ತಿನವ ಮುಂದೆ ಹೇಳಿಕೊಳ್ಳುವ ಸಾಮಥ್ರ್ಯ ಲಭಿಸಬಹುದು. ಪರಂಪರೆಯ ಮುಂದುವರಿಕೆಯ ಹೆಸರಿನಲ್ಲಿ ಆಗುತ್ತಿರುವ ಹೆಣ್ಣಿನ ಶೋಷಣೆ , ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ, ಹೆಣ್ಣನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವ ಅಸಮತೋಲನ ದೃಷ್ಟಿಗಳನ್ನು ವಸ್ತುನಿಷ್ಠವಾಗಿ ನೋಡುವಒಂದು ಪ್ರಜ್ಞಾವಂತ ಪುರುಷವರ್ಗವೂ ಹುಟ್ಟಿಕೊಳ್ಳಬಹುದು, ಮತ್ತು ಅವರ ಮೂಲಕ ಒಂದಲ್ಲ ಒಂದು ದಿನ ನ್ಯಾಯ ಸಿಗಲೂ ಬಹುದು. ಇದು ಕಾಲದ ಹರಿವಿನೊಂದಿಗೆ ನಿರ್ಧಾರವಾಗಬೇಕಾದ ವಿಚಾರ.
ಇದು ಅನೇಕ ದೃಷ್ಟಿಗಳಿಂದ ಒಂದು ಯಶಸ್ವಿ ಚಿತ್ರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿತ್ರದುದ್ದಕ್ಕೂ ಕಾಣುವ ಗ್ರಾಮೀಣ ಪ್ರದೇಶದ ನಿಸರ್ಗ ರಮಣೀಯ ದೃಶ್ಯಗಳು, ಅತ್ಯುತ್ತಮ ಛಾಯಾಗ್ರಹಣ ನಿರ್ವಹಣೆಯ ಮೂಲಕ ಕಣ್ಮನ ಸೆಳೆಯುವಂತೆ ಮೂಡಿಬಂದಿವೆ. ತುಂಬಿ ಹರಿಯುವ ನದಿ, ಸೇತುವೆ, ದೋಣಿ, ಸಮುದ್ರ ಬಾವಿ, ಮರಗಿಡಗಳ ದಟ್ಟಣೆ, ಹೊಲ ಬಯಲುಗಳು, ಅಲ್ಲಲ್ಲಿ ಕಾಣುವ ಹಳೆಯ ಮನೆಗಳು, ಮನೆಗಳ ನಡುವಿನ ದಾರಿಗಳು, ಹಳ್ಳಿಗರ ಚಲನ ವಲನ ಓಡಾಟಗಳು-ಎಲ್ಲವೂ ಅತ್ಯಂತ ಮನೋಜ್ಞವಾಗಿವೆ.
ಅಮ್ಮಚ್ಚಿ, ಸೀತಾ, ಅಕ್ಕು, ಅಣ್ಣಯ್ಯ, ವೆಂಕಪ್ಪಯ್ಯ, ವಾಸು, ಶೇಷಮ್ಮ, ಅಪ್ಪಯ್ಯ, ಮಕ್ಕಳು, ಅಕ್ಕುವಿನ ಗಂಡ-ಎಲ್ಲರ ಅಭಿನಯ ತುಂಬ ಮನಮುಟ್ಟುವ ರೀತಿಯಲ್ಲಿ ಬಂದಿದೆ. ಅದರಲ್ಲೂ ಪುಟ್ಟಮ್ಮತ್ತೆಯ ಪಾತ್ರವನ್ನು ಓರ್ವ ಪುರುಷ ( ರಾಧಾಕೃಷ್ಣ ಉರಾಳ್) ನಟಿಸಿದ್ದಾದರೂ ಅದು ಎಲ್ಲೂ ಆಭಾಸವೆನಿಸದೆ ಬಹಳ ಸಹಜವಾಗಿ ಬಂದದ್ದು ಅಚ್ಚರಿ ಮೂಡಿಸುತ್ತದೆ. ಪುಟ್ಟಮ್ಮತ್ತೆಯ ತಾಯಿಯನ್ನು ಅವಳ ಗಂಡ ದರದರನೆ ಎಳೆದು ತಂದು ಬಾವಿಗೆ ನೂಕುವುದು, ತಾಯ್ತನದ ತೀವ್ರ ಬಯಕೆಯಲ್ಲಿ ಹುಚ್ಚಿಯಂತೆ ವರ್ತಿಸುವ ಅಕ್ಕುವನ್ನು ವಾಸು ದನವನ್ನು ಹೊಡೆದಂತೆ ಹೊಡೆಯುವುದು, ವೆಂಕಪ್ಪಯ್ಯನಿಂದ ಅತ್ಯಾಚಾರಕ್ಕೊಳಗಾಗಿ ಆಘಾತಕ್ಕೊಳಗಾದ ಅಮ್ಮಚ್ಚಿಯ ಸಂಕಟ- ಮೊದಲಾದ ಸನ್ನಿವೇಶಗಳು ಕರುಳು ಹಿಂಡುವಂತೆ ಚಿತ್ರಿತವಾಗಿವೆ.
ಆಧುನಿಕತೆಯ ಆಕ್ರಮಣಕ್ಕೊಳಗಾಗಿ ಮರೆಯಾಗುತ್ತಿರುವ ಉಡುಪಿ-ಕುಂದಾಪುರ ಪರಿಸರದ ಗ್ರಾಮೀಣ ಜನಪದ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಆಹಾರ ಪದ್ಧತಿಗಳು,(ಕೊಟ್ಟೆ ಕಡುಬಿನಂಥ ತಿಂಡಿಗಳ ತಯಾರಿ), ದೀಪಾವಳಿ ಆಚರಣೆಯ ವಿಸ್ತಾರವಾದ ವಿವರಗಳು, ಹೂವಿನ ಕೋಲು, ಜನಪದ ಹಾಡುಗಳು- ಎಲ್ಲವುಗಳಿಗೂ ಒಂದು ಸುಂದರ ವೇದಿಕೆಯಾಗಿಯೂ ಚಿತ್ರ ಕೆಲಸ ಮಾಡಿದೆ. ಅವು ಕಥೆಯೊಳಗೆ ಬರುವ ಸನ್ನಿವೇಶಗಳಾಗಿರುವುದರಿಂದ ಹೊರಗಿನಿಂದ ಹೇರಿದಂತೆ ಕಾಣುವುದಿಲ್ಲ.
ಹಬ್ಬದ ಆಚರಣೆಯಲ್ಲಿ ಹೆಂಗಸರ ಪಾಲ್ಗೊಳ್ಳುವಿಕೆಯು ಅಡುಗೆ ಮನೆಯ ಬೆಂಕಿಯ ಮುಂದೆ ಬೇಯುವಿಕೆಗೆ ಸೀಮಿತವಾಗಿದ್ದು , ಗಂಡಸರು ಬಲಿಯೇಂದ್ರನ ಮುಂದೆ ಹಾಡುತ್ತ ಕುಣಿಯುವಾಗ ಹೆಂಗಸರು ನಿಷ್ಕ್ರಿಯ ಪ್ರೇಕ್ಷಕರಾಗಿ ಕುಲಿತುಕೊಳ್ಳುವುದು ಧಾರ್ಮಿಕ ಕಾರ್ಯಗಳಲ್ಲಿ ಹೆಣ್ಣಿನ ಪಾತ್ರದ ಚಿತ್ರಣವನ್ನು ನೀಡಿ ಇಡಿಯ ಚಿತ್ರದ ಉದ್ದೇಶಕ್ಕೆ ಪೂರಕವಾಗಿಯೂ ನಿಲ್ಲುತ್ತದೆ.
ಎಲ್ಲಕ್ಕಿಂತ ಹೆಚ್ಚಿನ ಆಕರ್ಷಣೆಯೆಂದರೆ ಕುಂದಾಪುರದ ಆಡುಭಾಷೆಯ ಬಳಕೆ. ಕುಂದಾಪುರ ಭಾಷೆಯ ಬನಿಯನ್ನು, ಸೊಬಗನ್ನು ಮತ್ತು ಬಾಗು-ಬಳುಕುಗಳನ್ನು ಚಿತ್ರವು ಪೂರ್ತಿಯಾಗಿ ಬಳಸಿಕೊಂಡಿದೆ. ಹೆಚ್ಚಿನ ನಟರು ಹೊರಗಿನವರಾದರೂ ಅವರ ಉಚ್ಚಾರದಲ್ಲಾಗಲಿ, ಧ್ವನಿಯ ಏರಿಳಿತಗಳಲ್ಲಾಗಲಿ ಅಸಹಜತೆ ಕಂಡು ಬರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಅಲ್ಲಲ್ಲಿ ಬರುವ ಗಾದೆಯ ಮಾತುಗಳು ಸಂಭಾಷಣೆಗಳ ಸೌಂದರ್ಯಕ್ಕೆ ಮೆರುಗನ್ನಿತ್ತಿವೆ.
ಕೊನೆಯದಾಗಿ ಒಂದು ಸಣ್ಣ ಕೊರತೆಯ ಬಗ್ಗೆ ಒಂದು ಮಾತು. ಕಥಾನಿರೂಪಕಿಯಾಗಿ ಕೆಲಸ ಮಾಡುವ ಅಮ್ಮಚ್ಚಿಯ ಗೆಳತಿ ಸೀತಾ ಕಥೆಯ ಆರಂಭದಲ್ಲಿ ಪ್ರೌಢ ಚಿಂತಕಿಯಾಗಿ ಕಾಣಿಸಿಕೊಳ್ಳುವವಳು ಕೊನೆಯಲ್ಲಿ ಅಮ್ಮಚ್ಚಿಯನ್ನು ಖುಷಿಯಿಂದ ಬರಮಾಡಿಕೊಳ್ಳುವ ಗೆಳತಿಯಾಗಷ್ಟೇ ಬರುತ್ತಾಳೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ ಕೂಡಾ. ಆರಂಭದಲ್ಲಿ ನಮ್ಮ ಮುಂದೆ ಸೀತಾ ಕಾಣಿಸಿಕೊಳ್ಳುವುದು ಓರ್ವ ಕಥೆಗಾರ್ತಿಯಾಗಿ.
ಕೊನೆಯಲ್ಲಿ ಅವಳು ಮತ್ತೊಮ್ಮೆ ವರ್ತಮಾನಕ್ಕೆ ಬಂದು ಸಮಾಪನ ಕಾರ್ಯವನ್ನು ಕೈಗೊಂಡಿದ್ದಿದ್ದg ಅದು ಚಿತ್ರದ ರಚನಾ ಬಂಧಕ್ಕೊಂದು ಬಿಗಿಯನ್ನು ಒದಗಿಸುತ್ತಿತ್ತು .ಇದೊಂದು ಕೊರತೆಯನ್ನು ಬಿಟ್ಟರೆ ‘ಅಮ್ಮಚ್ಚಿಯೆಂಬ ನೆನಪು’ ಹೆಣ್ಣು ನಡೆದು ಬಂದ ದಾರಿಯನ್ನು ದಾಖಲಿಸುವ ಒಂದು ಐತಿಹಾಸಿಕ ಚಿತ್ರವಾಗಿ ಭರ್ಜರಿ ಯಶಸ್ಸನ್ನು ಸಾಧಿಸಿದೆಯೆಂಬುದರಲ್ಲಿ ಸಂದೇಹವಿಲ್ಲ.

‍ಲೇಖಕರು Avadhi

December 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: