ಹೆಣ್ಣಿನ ಕನಸಾಗಿ ರಾಧೆ..

ವರ್ತಮಾನದ ಹೆಣ್ಣಿನ ತಲ್ಲಣ

ಗಿರಿಧರ ಕಾರ್ಕಳ.

ಚಿತ್ರಗಳು: ಯಜ್ಞ

ರಾಧಾ ಕೃಷ್ಣರ  ಪ್ರೀತಿಯ ತಾಕಲಾಟಗಳ ಮೂಲಕ ಆಧುನಿಕ ಹೆಣ್ಣಿನ ತವಕ ತಲ್ಲಣಗಳನ್ನು ಸಮರ್ಥವಾಗಿ ತೆರೆದಿಟ್ಟ ವಿಶಿಷ್ಟ ಪ್ರಯೋಗ ಮಂಜುಳಾ ಸುಬ್ರಹ್ಮಣ್ಯ ಅವರ ಏಕವ್ಯಕ್ತಿ ಪ್ರದರ್ಶನ “ರಾಧೆ” ವಾಗಿ ಮೂಡಿ ಬಂದಿತು.

ತಾನು ಉತ್ಕಟವಾಗಿ ಪ್ರೀತಿಸಿದ ಶ್ಯಾಮ ಅನಿವಾರ್ಯವಾಗಿ ದೂರವಾದರೂ, ಆ ಪ್ರೀತಿಯ ಗಂಧ ಮಾಧುರ್ಯದ ಎಳೆಗಳನ್ನೇ ನೇಯ್ದು ಚಾದರವಾಗಿಸಿಕೊಂಡು, ತನ್ನೆಲ್ಲ ಹತಾಶೆ, ಅವಮಾನ, ನೋವು, ವಿಷಾದ ಕನವರಿಕೆಗಳನ್ನೆಲ್ಲ ಚಾದರದೊಳಗೇ ಜತನದಿಂದ ಕಾಪಿಟ್ಟುಕೊಂಡು – ತನ್ನ ಬದುಕನ್ನು ಘನತೆಯಿಂದ ಹೆಣೆದ “ರಾಧೆ” ಯನ್ನು ಅದೇ ಉತ್ಕಟತೆಯಿಂದ ನವಿರಾಗಿ, ಸೊಗಸಾಗಿ ಮಂಜುಳಾ ರಂಗದಲ್ಲಿ  ಅಭಿವ್ಯಕ್ತಿಸಿದರು.

ಸುಧಾ ಆಡುಕಳ ಬರೆದ ರಾಧಾಗೆ ರಂಗದಲ್ಲಿ ಜೀವಸ್ಪರ್ಶ ನೀಡಿದವರು ಇಬ್ಬರು..!! ರಾಧೆಯಾಗಿ ಮಂಜುಳಾ ಮತ್ತು ಹಿನ್ನೆಲೆಯ ಸುಂದರ ವಿನ್ಯಾಸ ಬರೆದ ಕಲಾವಿದ ಮೋಹನ್ ಸೋನ. ಮಂಜುಳ – ಸೋನ ಜುಗಲ್ ಬಂಧಿಯಲ್ಲಿ  “ರಾಧಾ” ಅದ್ಭುತ ದೃಶ್ಯಕಾವ್ಯವಾಗಿ ಅರಳಿ ಒಂದು ವಿಶಿಷ್ಟ ಅನುಭವವನ್ನೇ ಕಟ್ಟಿಕೊಟ್ಟಿತು. ಹಿನ್ನೆಲೆಯ ಗಾಢ ವರ್ಣದ ವಿನ್ಯಾಸ  ಅನೇಕ ಬಾರಿ ಮುನ್ನೆಲೆಯ ರಾಧೆಯ ಆಂಗಿಕ ಭಾವಗಳನ್ನು ಸ್ಫುಟವಾಗಿ ತೋರುವುದಕ್ಕೆ ಅಡ್ಡಿಯಾಯಿತೇನೋ ಅನ್ನಿಸಿದರೂ ರಾಧೆಯ ದುರಂತಗಳಿಗೆ ಆ ಅರ್ಥಪೂರ್ಣ ಗಾಢ ಹಿನ್ನೆಲೆಯೇ  ಅತ್ಯಂತ ಸೂಕ್ತವಾದ್ದು ಅನ್ನುವುದನ್ನು ಪ್ರಯೋಗದ ಒಟ್ಟು ಪರಿಣಾಮ ನಿಚ್ಚಳವಾಗಿ ತೋರಿಸಿ ಕೊಟ್ಟಿತು.

ರಾಧೆಯನ್ನೇ ಆವಾಹಿಸಿಕೊಂಡ ಮಂಜುಳಾ ಆ ಪಾತ್ರವೇ ತಾನಾದರು..!! ಒಂದೂವರೆ ಗಂಟೆಗಳ ಕಾಲ ಸತತವಾಗಿ ರಾಧೆಯ ಬದುಕಿನ ಅನನ್ಯತೆಯನ್ನು ಅದರೆಲ್ಲ ಒನಪು ವಯ್ಯಾರ,ನೋವು ನಲಿವು ಹತಾಶೆ ತಲ್ಲಣ  ಸಂತೋಷ ವಿರಹ ವಿಷಾದ… ಹೀಗೇ ಎಲ್ಲ ಭಾವಗಳೊಂದಿಗೆ ಪಾದರಸದ ಚಲನೆಯೊಂದಿಗೆ ಇಡೀ ರಂಗದಲ್ಲಿ ಆವರಿಸುತ್ತ ಕಡೆದಿಟ್ಟ ಪರಿ ನಿಜಕ್ಕೂ ಅನನ್ಯ..!!
ಧ್ವನಿ, ಬೆಳಕು (ಪ್ರಥ್ವಿನ್ ಉಡುಪಿ) ಮೆಲುದನಿಯ ಸಂಗೀತ ಸಂಯೋಜನೆ (ಬಿನು ಬಾಲಕೃಷ್ಣನ್) ಇಡೀ ಪ್ರಯೋಗಕ್ಕೆ ಪೂರಕವಾಗಿ ಮೂಡಿ ಬಂದಿತು. (ನಿರ್ವಹಣೆ: ಮಧ್ವರಾಜ್)

ರಾಧಾ ಕೃಷ್ಣರ ಕತೆಯೆಂದರೆ ಪ್ರೇಮ- ವಿರಹದ ಉತ್ಕಟ ಕಾವ್ಯ ಅನ್ನುವ ಸಾಮಾನ್ಯ ಕಲ್ಪನೆಯನ್ನು ಬದಿಗಿಟ್ಟು ,ಅದರಾಚೆಗೂ ಇರುವ ರಾಧೆಯ ಅಂತರಂಗದ ಪುಟಗಳನ್ನು ತೆರೆದಿಡುವ ಮೂಲಕ ನಮ್ಮ  ಕಾಲದ ಹೆಣ್ಣಿನ ತವಕ ತಲ್ಲಣಗಳಿಗೆ ರಾಧೆಯನ್ನು ರೂಪಕವಾಗಿಸುವ ಯತ್ನದಲ್ಲಿ  ಸುಧಾ,ಮಂಜುಳಾ ಮತ್ತು ನಿರ್ದೇಶಕ ಡಾ.ಶ್ರೀಪಾದ ಭಟ್ ಯಶಸ್ವಿಯಾಗಿದ್ದಾರೆ. ಈ ಪ್ರಯೋಗದ ಇನ್ನೊಂದು ಗಮನಾರ್ಹ ಸಕಾರಾತ್ಮಕ ಅಂಶವೆಂದರೆ – ಇಡೀ ಪ್ರಸ್ತುತಿಗೆ ಪೌರಾಣಿಕ ಕಾವ್ಯ ಭಾಷೆಯನ್ನು ಅವಲಂಬಿಸದೆ ನಮ್ಮ ನಿಮ್ಮ ಆಡುನುಡಿಯಲ್ಲೇ ರಾಧೆ ತನ್ನ ಅಂತರಂಗವನ್ನು ತೆರೆದಿಟ್ಟದ್ದು..!!

“ಹೆಣ್ಣಿನ ಅಸ್ಮಿತೆಯ ಚೆಹರೆಗಳು ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ರಾಧೆಯ ಆಯ್ಕೆ ಹೆಣ್ಣಿನ ಘನತೆಯ ದ್ಯೋತಕವೂ ಆಗಬಲ್ಲುದು.ಅವಲಂಬನವಿಲ್ಲದ ಒಂಟಿ ಬದುಕನ್ನು ಘನವಾಗಿ ಸಂಭ್ರಮದಿಂದ ಬದುಕುತ್ತಿರುವ ಆಧುನಿಕ ರಾಧೆಯತ್ತ ಕೃಷ್ಣನೂ ಶಾಮನಾಗಿ ಬರಬೇಕಾಗುತ್ತದೆ” ಅನ್ನುವ ನಾಟಕಕಾರರ ಆಶಯ ನುಡಿಯನ್ನು ರಂಗದಲ್ಲಿ ಮಂಜುಳಾ ಸಮರ್ಥವಾಗಿ ಸಾಕಾರಗೊಳಿಸಿದ್ದಾರೆ.

ಒಟ್ಟಿನಲ್ಲಿ – ವರ್ತಮಾನದ ಹೆಣ್ಣಿನ ಕನಸು  ಆಶಯಗಳಿಗೆ ಸಂವಾದಿಯಾಗಿ ರಾಧೆಯನ್ನು ರಂಗದಲ್ಲಿ ಸುಂದರವಾಗಿ ಅರಳಿಸಿದ ಮಂಜುಳಾ ಸುಬ್ರಮಣ್ಯ, ನಿರ್ದೇಶಕ ಶ್ರೀಪಾದ ಭಟ್, ಕಲಾವಿದ ಮೋಹನ್ ಸೋನ, ಹಿನ್ನೆಲೆ ತಂಡ, ಪ್ರಯೋಗವನ್ನು ಪ್ರಸ್ತುತಪಡಿಸಿದ ಅರೆಹೊಳೆ ಪ್ರತಿಷ್ಠಾನ. ಎಲ್ಲರೂ ಅಭಿನಂದನಾರ್ಹರು..!!

 

‍ಲೇಖಕರು Admin

December 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: