ಹೆಂಗಸರಿಲ್ಲದ ಊರು…

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯನ್ನು ‘ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ‘ವಿಜಯ ಕರ್ನಾಟಕ’ದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

‘ ಈ ಊರಿನಲ್ಲಿ ಹೆಂಗಸರಿಲ್ಲ. ಸ್ವಯಿಚ್ಛೆಯಿಂದ ಬರುವವರಿಗೆ ಸ್ವಾಗತ ‘ ಎಂಬ ವಿಚಿತ್ರ ಬೋರ್ಡ್ ನೋಡಿ ತಕ್ಷಣ ಗಾಡಿ ನಿಲ್ಲಿಸಿದೆ. ದೊಡ್ಡ ಕಮಾನೊಂದನ್ನು ದಾಟಿಕೊಂಡು ಒಳಗೆ ಹೆಜ್ಜೆಯಿಡುತ್ತಾ ಊರಿನ ಅನ್ವೇಷಣೆಗೆ ಹೊರಟೆ. ಸಾಕಷ್ಟು ದೂರ ನೋಡಿದರೂ ಯಾರೂ ಕಾಣಿಸುತ್ತಲೇ ಇಲ್ಲ. ಅಲ್ಲಲ್ಲಿ ಹಳೆಯ ಕಾಲದ ಮನೆಗಳಿದ್ದವೆ ಹೊರತು ಅದರಲ್ಲಿ ಯಾರೂ ವಾಸವಿದ್ದಂತೆ ಕಾಣಿಸಲಿಲ್ಲ.

ಆ ಮನೆಗಳನ್ನು ನೋಡಿದರೇ  ತಿಳಿಯುತ್ತಿತ್ತು ಅವುಗಳಲ್ಲಿ ಜನ ವಾಸಿಸುವುದನ್ನು ನಿಲ್ಲಿಸಿ ದಶಕಗಳೇ ಕಳೆದಿರಬೇಕೆಂದು. ಇಡೀ ಊರು ಸುತ್ತಿದರೂ ಯಾರೊಬ್ಬರೂ ಕಾಣಲಿಲ್ಲ. ಎಲ್ಲ ಮನೆಗಳೂ ಹಾಳು ಬಿದ್ದಿದ್ದವು. ಹೀಗೆ  ಒಂದಿಡೀ ಊರಿನ ಜನ ತಂತಮ್ಮ ಮನೆಗಳನ್ನು ಬಿಟ್ಟು ಹೋದದ್ದಾದರೂ ಎಲ್ಲಿಗೆ ? ಊರಿಗೆ ಊರೇ ಊರುಬಿಟ್ಟೇನಾದರು ಹೋಗಿರಬಹುದೆ ? ಎಂಬ ಅನುಮಾನವಾಯಿತು.

ಹಾಗಾದರೆ ಊರಿನ ಪ್ರವೇಶದ್ವಾರದ ಬಳಿ ಆ ಥರದ ಬೋರ್ಡು ಹಾಕಿರುವವರು ಯಾರಿರಬಹುದು ? ಎಂದು ಯೋಚಿಸುತ್ತ ಮತ್ತೆ ಊರಿನ ಪ್ರವೇಶದ್ವಾರದ ಬಳಿ ಬಂದೆ. ಗಾಡಿ ಸ್ಟಾರ್ಟ್ ಮಾಡಕೊಂಡು ಹೊರಡುವ ಮುನ್ನ ಊರೊಳಗೆ ಯಾರಾದರೂ ಇರಬಹುದೆ ಎಂಬ ಸಂಶಯದಿಂದ ಮತ್ತೊಮ್ಮೆ ಕಣ್ಣಾಡಿಸಿದೆ. ಯಾರ ಸುಳಿವೂ ಇರಲಿಲ್ಲ.

ಅಲ್ಲಿಯೇ ನೇತು ಹಾಕಲಾಗಿದ್ದ ತುಕ್ಕು ಹಿಡಿದು ಹೋಗಿದ್ದ ಆ ಬೋರ್ಡನ್ನು ಒಮ್ಮೆ ದಿಟ್ಟಿಸಿ ನೋಡಿದೆ‌. ಅದು ಬಹಳ ಹಳೆಯ ಬೋರ್ಡ್ ಎಂಬುದನ್ನು ಬಿಟ್ಟು ಮತ್ಯಾವ ವಿಷಯವೂ ಅದರಿಂದ ಪತ್ತೆಯಾಗಲಿಲ್ಲ.

ಅರ್ಧ ಫರ್ಲಾಂಗು ಮುಂದೆ ಬರುತ್ತಿದ್ದಂತೆ ಯಾವುದೇ ಬೋರ್ಡ್ ಹಾಕಿಕೊಂಡಿರದ ಒಂದು ಕ್ಷೌರದಂಗಡಿ ಕಾಣಿಸಿತು. ಆಗಷ್ಟೆ ಯಾರೋ ಕ್ಷೌರ ಮಾಡಿಸಿಕೊಂಡು ಹೋಗಿದ್ದಿರಬೇಕು. ಆತ ನೆಲದ ಮೇಲೆ ಬಿದ್ದಿದ್ದ ಕೂದಲುಗಳನ್ನು ಒಟ್ಟು ಹಾಕಲು ಕಸ ಗುಡಿಸುತ್ತಿದ್ದ. ನಾನು ಅವನ ಅಂಗಡಿಯ ಬಳಿ ಗಾಡಿ ನಿಲ್ಲಿಸಿದ ಕಾರಣಕ್ಕೆ ಅವನಿಗೆ ಒಬ್ಬ ಗಿರಾಕಿ ಬಂದನೆಂಬ ಖುಷಿಯೇನು ಆಗಿರಲಿಕ್ಕಿಲ್ಲ ಎಂಬುದು ನನ್ನ ಕಡೆ ಕ್ಯಾರೆ ಎನ್ನದ ಅವನ ವರ್ತನೆಯಿಂದಲೇ ಅರಿವಾಯ್ತು.

ಅಪರಿಚಿತನಂತೆ ಕಂಡ ನಾನು ಅವನ ಬಳಿ ಕ್ಷೌರಕ್ಕಾಗಿ ಬಂದಿಲ್ಲ ಎಂಬುದು ಅವನಿಗೆ ಖಾತರಿಯಾಗಿರಬೇಕು ಹಾಗಾಗಿಯೇ ನನಗೆ ಸ್ವಾಗತ ಕೋರುವ ಯಾವುದೇ ಲಕ್ಷಗಳನ್ನು ಆತ ತೋರಿಸಲಿಲ್ಲ. ನಾನೇ ಅವನೆಡೆಗೆ ನಡೆದುಹೋಗಿ ‘ ಹಾಯ್ ‘ ಎಂದೆ‌. ‘ ಹ್ಞುಂ . ಏನು ?’ 

ಎಂದು ಪ್ರಶ್ನಾರ್ಥಕವಾಗಿ ನಿಂತನಾತ. 

‘ನೀವು ಈ ಊರಿನವರಾ ಅಥವಾ ಪಕ್ಕದೂರಿನವರ ?’ ಎಂದೆ. 

‘ ಇಲ್ಲಿ ಈ ಊರು ಮಾತ್ರ ಇದೆ . ಪಕ್ಕದೂರು ಎಂಬೋದು ಇಲ್ಲ ಸ್ವಾಮಿ ‘ ಅಂದ.

‘ ಯಾಕೆ ? ಈಗ ಬರುವಾಗ ನಾನೊಂದು ಊರು ನೋಡಿದೆನಲ್ಲ’ 

‘ ಊರು ನೋಡಿದ್ರಾ ಅಥವಾ ಬೋರ್ಡು ನೋಡಿದ್ರಾ? ‘

‘ ಅದೇ ಕಣ್ರಿ. ನಿಮ್ಮ ಹತ್ರ ಅದರ ಬಗ್ಗೆ ವಿಚಾರಣೆ ಮಾಡೋಕೆ ಅಂತಾನೆ ಬಂದೆ’ 

‘ ನೀವೇನು ವಿಚಾರಣೆ ಮಾಡೋದು ನನ್ನ ? ನಾನೇನು ಅಂಥ ತಪ್ಪು ಮಾಡಿದ್ದೀನಿ ? 

‘ ಅಯ್ಯೋ ನೀವೆಂಥ ತಪ್ಪು ಮಾಡಿಲ್ಲರ್ರಿ… ನಾನು ಆ ಊರಿನ ಬಗ್ಗೆ ವಿಚಾರಿಸಬೇಕಿತ್ತು. ನೀವು ನೆರೆಹೊರೆಯವರಲ್ವೆ? ನಿಮಗೆ ಗೊತ್ತಿಲ್ದೇ ಇರೋಕೆ ಸಾಧ್ಯವೆ ? ‘ 

‘ ಅಯ್ಯೋ ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ ಸ್ವಾಮಿ. ಸುಮ್ಮನೆ ನೀವು ನನ್ನನ್ನ ಯಾವ್ಯಾವುದೋ ವಿಷಯಕ್ಕೆ ಎಳೀಬೇಡಿ. ಕಟಿಂಗ್ ಮಾಡ್ಲೋ ಅಥವಾ ಶೇವಿಂಗ್ ಮಾಡ್ಲೋ ಹೇಳಿ ‘ 

ಹೀಗೆ ನನ್ನನ್ನು ಯಾವುದೋ ನಿಗೂಢ ರಹಸ್ಯವೊಂದನ್ನು ಭೇದಿಸಲು ಸಿವಿಲ್ ಡ್ರೆಸ್ ನಲ್ಲಿ ಬಂದಿರುವ ಪತ್ತೇದಾರಿ ಎಂದುಕೊಂಡ ಅವನು ತನಗೆ ಗೊತ್ತಿರುವುದನ್ನು ಹೇಳಲು ಹಿಂಜರಿದ. 

ನಾನು ಒತ್ತಾಯ ಮಾಡಲೂ ಹೋಗಲಿಲ್ಲ. ಆದರೆ ಹಾಗೆಯೇ ಹೋಗಲೂ ಮನಸಾಗಲಿಲ್ಲ. ಹಾಗಾಗಿ ಅವನ ಬಳಿ ಮತ್ತಷ್ಟು ಸಮಯ ಕಳೆದರೆ ಹೇಳಿದರೂ ಹೇಳಿಯಾನು ಎಂಬ ಆಸೆಯಿಂದ ನಾನು ಹೇರ್ ಕಟ್ ಮಾಡಿಸಬೇಕೆಂದು ಅವನಲ್ಲಿ ಹೇಳಿದೆ. ಸರಿ ಕುಳಿತುಕೊಳ್ಳಿ ಎಂದವನು ಹೇರ್ ಕಟ್ ಶುರು ಮಾಡಿದ.

ಆ ಅಂಗಡಿ, ಅದರ ಹೊರಮೈಗೆ ಅಂಟಿಕೊಂಡಿದ್ದ ಸಿನಿಮಾ ಪೋಸ್ಟರ್, ಅಲ್ಲಿನ ಕನ್ನಡಿ, ಒಂದು ಕಡೆ ಕಲ್ಲಿನ ಆಧಾರದ ಮೇಲೆ ನಿಂತಿದ್ದ ಕುಂಟುತ್ತಿದ್ದ ಆ ಮರದ ಕುರ್ಚಿ – ಇವುಗಳೆಲ್ಲ ನನ್ನನ್ನು ಬಾಲ್ಯಕ್ಕೆ ಕರೆದೊಯ್ದವು. ನಮ್ಮೂರಿನಲ್ಲಿದ್ದ ಬಸಂತಪ್ಪನ ಚೌರದಂಗಡಿ ನೆನಪಾಯ್ತು. ಹಾಗೆಯೇ ಇಡೀ ಊರಿನ ಎಲ್ಲಾ ವಿಷಯಗಳೂ ಅವನ ಅಂಗಡಿಯಲ್ಲಿ ಚರ್ಚೆಯಾಗುತ್ತಿದ್ದದ್ದೂ ನೆನಪಾಯಿತು.

ಅವನಿಗೆ ಬೇಕೋ ಬೇಡವೋ ಊರಿನ ಎಲ್ಲಾ ವಿಷಯಗಳು ಅವನ ಕಿವಿಗೆ ಬದ್ದಿರುತ್ತಿದ್ದವು. ಹಾಗಂತ ಅವನು ಹಿತ್ತಾಳೆ ಕಿವಿಯವನೇನೂ ಆಗಿರಲಿಲ್ಲ. ಅವನ ನೆನಪಲ್ಲಿ ನಾನಿರುವಾಗಲೇ ಈತ ಕತ್ತರಿ ಹೊರ ತೆಗೆದ. ಅರ್ಧಭಾಗ ತುಕ್ಕು ಹಿಡಿದಂತೆ ಕಾಣುತ್ತಿದ್ದ  ಆ ಕತ್ತರಿ ನೋಡಿ ಭಯಗೊಂಡ ನಾನು ‘ ಅಯ್ಯೋ, ಏನ್ರಿ ಇಷ್ಟು ಹಳೆ ಕತ್ತರಿ ಇಟ್ಕೊಂಡಿದ್ದೀರಾ ? ಭಯ ಆಗುತ್ತೆ ‘ ಅಂದೆ.

‘ ಏನಾಗಲ್ಲ ಬಿಡಿ ಸ್ವಾಮಿ.‌ ನಾನು ದಿನಾ ಎಷ್ಟು ಜನಕ್ಕೆ ಕಟಿಂಗ್ ಮಾಡ್ತೀನಿ. ಯಾರಿಗೂ ಏನೂ ತೊಂದ್ರೆ ಆಗಲ್ಲ’ ಎಂದ. ಅದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ. ಆದರೆ ಬದಲಿಗೆ ‘ತುಂಬಾ ಹಳೆಯ ವಸ್ತುಗಳನ್ನು ಬಳಸಬಾರದು‌’ ಎಂದೆ‌. ಅದೇ ದಾಟಿಯಲ್ಲಿ ಅವನು ‘ ತುಂಬಾ ಹಳೆಯ ವಿಷಯಗಳನ್ನು ಕೆದಕಬಾರದು’ ಅಂದ. 

‘ ಆದರೂ ಆ ಊರಿನ ವಿಶೇಷತೆ ಬಗ್ಗೆ ತಿಳಿದವರು ನೀವು ಹೇಳಿದ್ದರೆ ಖುಷಿಯಾಗುತ್ತಿತ್ತು ‘ ಎಂದೆ.

‘ ಆಯ್ತು ಸ್ವಾಮಿ ಹೇಳ್ತೀನಿ ‘ ಅಂದ‌ವನು ಹೇರ್ ಕಟ್ ಮಾಡುತ್ತಲೇ ಹೆಂಗಸರಿಲ್ಲದ ಊರಿನ ಪೂರ್ತಿ ವೃತ್ತಾಂತವನ್ನು ಈ ಕೆಳಗಿನಂತೆ ವಿವರಿಸಿದ. 

 ‘ ಆ ಊರಿನಲ್ಲಿ ನೂರಾರು ವರ್ಷಗಳ ಹಿಂದೆ ಎಲ್ಲ ಊರುಗಳಂತೆಯೇ ಜನ ತಕ್ಕಮಟ್ಟಿಗೆ ಜೀವನ ನಡೆಸುತ್ತಿದ್ದರಂತೆ. ಊರಿನ ಯಜಮಾನ ಅನ್ನಿಸಿಕೊಂಡವನು ಪಾಳೇಗಾರಿಕೆ ನಡೆಸುತ್ತಿದ್ದರೂ ಜನರ ಜೀವನಕ್ಕೆ ಯಾವುದೇ ಧಕ್ಕೆ ತರದೆ ಎಲ್ಲರೂ ತೃಪ್ತ ಜೀವನ ನಡೆಸುತ್ತಿದ್ದರಂತೆ.

ಎಲ್ಲವೂ ಸುಸೂತ್ರವಾಗಿದ್ದ ಸಮಯದಲ್ಲಿ  ಪಾಳೇಗಾರನ ಹೆಂಡತಿ ಅವರ ಮನೆಯ ಲೆಕ್ಕದಯ್ಯನನ್ನು ಪ್ರೇಮಿಸಿ ಅವರಿಬ್ಬರೂ ಧೈರ್ಯವಾಗಿ ಮದುವೆಯಾಗಿ ಬಂದು ಪಾಳೇಗಾರನ ಮುಂದೆ ನಿಂತು ತಮ್ಮ ನಡುವಿನ ಅನೂಹ್ಯ ಆಕರ್ಷಣೆ ಮತ್ತು ಪ್ರೀತಿಯ ಬಗ್ಗೆ ಹೇಳಿಕೊಂಡರಂತೆ. 

ತಕ್ಷಣಕ್ಕೆ ಕೆಂಡಾಮಂಡಲವಾದಂತೆ ಕಂಡ ಪಾಳೇಗಾರನು ಅದಕ್ಕೆ ತನ್ನ ಯಾವುದೇ ಆಕ್ಷೇಪ ಇಲ್ಲ ಎಂದು ಹೇಳಿ. ಹೆಂಡತಿಯನ್ನು ಸರಿಯಾಗಿ ಪ್ರೀತಿಸದ ತನ್ನ ಅಶಕ್ತತೆಯನ್ನು  ಹೇಳಿಕೊಂಡು ಕೊರಗಿದನು ಮತ್ತು ಮರುದಿನವೇ ಅವರಿಬ್ಬರೂ ತಮ್ಮಿಷ್ಟ ಬಂದಲ್ಲಿಗೆ ಹೋಗಿ ಸಂತಸದ ಜೀವನ ನಡೆಸಬಹುದೆಂದು ಒಪ್ಪಿಗೆ ಸೂಚಿಸಿದನು. ಇದನ್ನು ಕೇಳಿದ ವಿವಾಹಿತ ಪ್ರೇಮಿಗಳು ಖುಷಿಯಿಂದ ಆ ರಾತ್ರಿ ಹಗಲಾಗುವುದನ್ನು ಕಾತರದಿಂದ ಕಾದರು. 

‘ಕ್ರೌರ್ಯದ ಕೆಲಸ ಕತ್ತಲಲ್ಲಿ ಸಲೀಸು’ ಎಂಬ ಮಾತಿನಂತೆ ಬೆಳಗಾದಾಗ ಅವರಿಬ್ಬರ ಎದೆಯಿಂದ ಚೆಲ್ಲಿದ ರಕ್ತದಿಂದ ಪಾಳೇಗಾರ ಹಣೆಯಲ್ಲಿ ತಿಲಕ ಇಟ್ಟುಕೊಂಡಿದ್ದ. ಹಿಂದಿನ ದಿನ ನಯವಾದ ಮಾತುಗಳಲ್ಲಿ ಅವರ ಪ್ರೇಮವನ್ನು ಒಪ್ಪಿಕೊಂಡಂತೆ ನಟಿಸಿದ್ದ ಪಾಳೇಗಾರನ ಕೋಪ ಇವರಿಬ್ಬರ ಕೊಲೆಯಲ್ಲಿ ಅಂತ್ಯ ಕಂಡಿತ್ತು.

ತಳವಾರನನ್ನು ಕರೆಸಿ ಇಡೀ ಊರಿನ ಜನರನ್ನು ತನ್ನ ಮನೆಯ ಎದುರು ಆ ತಕ್ಷಣಕ್ಕೆ ಸೇರುವಂತೆ ಡಂಗುರ ಸಾರಿಸಲು ಹೇಳಿದ. ಅದರಂತೆಯೇ ಊರಿನ ಜನರೆಲ್ಲ ಜಮಾವಣೆ ಆದ ನಂತರ ಒಂದು ಭಯಾನಕವಾದ ಕಟ್ಟಪ್ಪಣೆ ಹೊರಡಿಸಿದ . 

‘ಕಟ್ಟಪ್ಪಣೆಯೆ ? ಏನದು ? ‘ ಎಂದು ನನ್ನ ಕುತೂಹಲವನ್ನು ಹೊರಹಾಕಿದೆ. 

” ನನಗೆ ಒಂದು ಹೆಣ್ಣಿನಿಂದ ಮೋಸವಾಗಿದೆ. ಎಷ್ಟು ಕಾಳಜಿಯಿಂದ ನೋಡಿಕೊಂಡರೂ ನನ್ನ ಕೆಲಸದಾಳಿನ ಸ್ಥಾನದಲ್ಲಿದ್ದವನನ್ನು ಪ್ರೇಮಿಸಿದಳು. ಅದಕ್ಕಾಗಿ ಅವಳಿಗೆ ಈ ಶಿಕ್ಷೆ ವಿಧಿಸಿದ್ದೇನೆ. ಇದು ಇಂಥ ಮೋಸಗಾರರಿಗೆ ಪಾಠವಾಗಬೇಕು. ಇದೇ ಸಮಯದಲ್ಲಿ ನಾನೊಂದು ಹೊಸ‌ ಕಟ್ಟಳೆಯೊಂದನ್ನು ಜಾರಿಗೆ ತರುತ್ತಿದ್ದೇನೆ. ಇನ್ನು ಮುಂದೆ ಈ ಊರಿನಲ್ಲಿ ಯಾವ ಹೆಂಗಸರಿಗೂ ಜಾಗವಿಲ್ಲ.

ನನಗೆ ಸಿಗದ ಹೆಣ್ಣಿನ ಸಾಂಗತ್ಯ ಬೇರೆ ಯಾವನಿಗೂ ಸಿಗಬಾರದು. ಯಾವೊಬ್ಬ ಹೆಣ್ಣೂ ಈ ಊರಿನಲ್ಲಿ ಇರಬಾರದು. ನಾಳೆಯ ತನಕ ಸಮಯ ಕೊಡುತ್ತೇನೆ. ನಿರ್ಧಾರ ನಿಮಗೆ ಬಿಟ್ಟದ್ದು ” ಎಂದು ಹೇಳಿ.

ಅಲ್ಲಿಯೇ ಬಿದ್ದಿದ್ದ ಅವರಿಬ್ಬರ ದೇಹಗಳನ್ನು ಕಾಲಲ್ಲಿ ಒದ್ದು ಹೋದನು. 

ಊರಿನ ಜನರಲ್ಲಿ ಮಹಾಮೌನ. ಕೆಲವರು ಸಿಟ್ಟಿಗೆದ್ದರು. ಕೂಗಾಡಿದರು. ಪ್ರತಿಭಟಿಸಿದರು. ಆದರೆ ಪಾಳೇಗಾರನ ಎದುರು ನಿಂತು ಊರಲ್ಲಿ ಉಳಿಯಬಹುದಾದ ಶಕ್ತಿ ಅಲ್ಲಿ ಯಾರಿಗೂ ಇರಲಿಲ್ಲ .‌ ಊರಲ್ಲಿದ್ದ ಗಂಡಸರಷ್ಟೆ ಸಿಟ್ಟು ಹೆಂಗಸರಿಗೂ ಬಂತು. ಆದರೆ ಅವರೆಲ್ಲರೂ ಅಸಾಹಯಕರಾಗಿದ್ದರು.

ತಮ್ಮ ಗಂಡಂದಿರ, ಅಣ್ಣ-ತಮ್ಮಂದಿರ, ತಂದೆ ,ಚಿಕ್ಕಪ್ಪ ,ದೊಡ್ಡಪ್ಪ ,ಗೆಳೆಯ,ತಾತ- ಇವರುಗಳ ಜೀವ ಉಳಿದರೆ ಸಾಕು ಎಂದುಕೊಂಡು. ಅವರನ್ನೆಲ್ಲ ತಾವೇ ಸಂತೈಸಿ ಊರು ಬಿಡಲು ಸಿದ್ದರಾದರು. ಮರುದಿನ ಬೆಳಗಾಗುವುದರೊಳಗೆ ಎಲ್ಲರೂ ತಂತಮ್ಮ ಮನೆಯ ಹೆಣ್ಮಕ್ಕಳನ್ನು ಅವರವರ ತವರು ಮನೆಗೆ ಮತ್ತು ಇತರೆ ಸಂಬಂಧಿಕರ ಮನೆಗೆ ಬಿಟ್ಟು ಬಂದರು.

ದಿನಗಳು ಉರುಳಿದಂತೆ ಊರಿನ ಗಂಡಸರಿಗೆ ಜೀವನ ಕಷ್ಟವಾಗ ತೊಡಗಿತು. ಹಗಲಿನಲ್ಲಿ ಕದ್ದು ತಮ್ಮ ಮನೆಯ ಹೆಂಗಸರಿರುವ ಊರುಗಳಿಗೆ ಹೋಗಿ ಬರಲು ಪ್ರಾರಂಭಿಸಿದರು. ಇದು ಊರಿನ ಪರಸ್ಪರರಿಗೆ ಗೊತ್ತಿದ್ದರೂ ಯಾರೊಬ್ಬರೂ ಈ ಬಗ್ಗೆ ಪಾಳೇಗಾರನ ಬಳಿ ಹೋಗಿ ದೂರು ಕೊಡಲಿಲ್ಲ. 

ಕ್ರಮೇಣ ಒಬ್ಬೊಬ್ಬರಾಗಿ ಆ ಗಂಡಸರೆಲ್ಲ ಊರು ಬಿಡತೊಡಗಿದರು‌. ತಂತಮ್ಮ ಕುಟುಂಬವನ್ನು ಕೂಡಿ ಬೇರೆ ಬೇರೆ ಕಡೆಗಳಲ್ಲಿ ಬದುಕು ಕಟ್ಟಿಕೊಂಡರು. ಕೊನೆಯಲ್ಲಿ ಉಳಿದ ನಾಲ್ಕಾರು ಜನ ಗಂಡಸರೆಂದರೆ ಆ ಪಾಳೇಗಾರನ ಮನೆಯಲ್ಲಿ ಕೆಲಸ ಮಾಡುತ್ತಿದ್ದವರು ಮಾತ್ರ. ಅವರನ್ನು ಕರೆದ ಪಾಳೇಗಾರ ಅವರೂ ಬೇಕಾದರೆ ಊರು ಬಿಟ್ಟು ಹೋಗಬಹುದೆಂದು ಮೆದುವಾಗಿ ಹೇಳಿದ.

‘ ಹಾಗೆಯೇ ಅವರು ಊರು ಬಿಟ್ಟರು ಮತ್ತು ಆ ಪಾಳೇಗಾರ ಸತ್ತು ಹೋದ . ಹಾಗಾಗಿ ಊರಿನಲ್ಲಿ ಈಗ ಯಾರೂ ಇಲ್ಲ ಅಲ್ಲವೆ ? ‘ ಎಂದು ನಾನು ಊಹಿಸಿ ಹೇಳಿದೆ. 

‘ ಇಲ್ಲ ಸ್ವಾಮಿ. ಅವನ ಮೆಲುದನಿಯ ಹಿಂದಿರುವ ಕ್ರೌರ್ಯವನ್ನು ಅರ್ಥ ಮಾಡಿಕೊಂಡ ಅವನ ಕೆಲಸದವರು ಎಲ್ಲೂ ಹೋಗದೆ ಅಲ್ಲಿಯೇ ಉಳಿದರು. ಊರಿನ ಇತರರಾದರೂ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಕದ್ದು ಭೇಟಿ ಮಾಡುತ್ತಿದ್ದರು .‌ಆದರೆ ಅವರಿಗೆ ಆ ಅವಕಾಶವೂ ಇರಲಿಲ್ಲ. ಇಷ್ಟೆಲ್ಲ ಘಟಿಸುವ ಸಮಯದಲ್ಲಿ ಹೆಂಗಸರಿಲ್ಲದ ಈ ಊರಿನ ಬಗ್ಗೆ ಪತ್ರಿಕೆಗಳಲ್ಲಿ , ಸಂತೆಗಳಲ್ಲಿ ,ಜಾತ್ರೆಗಳಲ್ಲಿ ,ಮದುವೆ ಸಮಾರಂಭಗಳಲ್ಲಿ ವಿಷಯ ಹರಡಿತು.

ಅವಾಗಲೇ ಆ ಪಾಳೇಗಾರ ಊರು ತೊರೆದವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಊರ ಹೊರಗೆ ಈ ಬೋರ್ಡ್ ಹಾಕಿಸಿದ. ತನ್ನಂತೆಯೇ ಹೆಂಗಸರಿಂದ ಮೋಸ ಹೋದ ಬೇಸತ್ತ ಪುರುಷರು ಈ ಊರನ್ನು ಹುಡುಕಿಕೊಂಡ ಬಂದೇ ಬರುತ್ತಾರೆ ಎಂಬ ನಂಬಿಕೆ ಅವನಿಗಿತ್ತು. 

ಅವನ ನಂಬಿಕೆ ಸುಳ್ಳಾಗಲಿಲ್ಲ. ನಿಧಾನಕ್ಕೆ ಒಂದಷ್ಟು ಜನ ಭಗ್ನ ಪ್ರೇಮಿಗಳೂ, ದಬ್ಬಾಳಿಕೆಗೆ ಒಳಗಾದವರು,ತಿರಸ್ಕರಿಸಲ್ಪಟ್ಟವರು, ಅನುಮಾನಕ್ಕೆ ತುತ್ತಾಗಿ ನೋವುಂಡವರೂ, ವಯಸ್ಸಾದರೂ ವಿವಾಹವಾಗದವರು ಮುಂತಾದ ಸ್ತ್ರೀ ದ್ವೇಷಿಗಳೆಲ್ಲರೂ ಬಂದು ನೆಲೆ ನಿಂತರು. ಪಾಳೇಗಾರನಿಗೆ ಸಂತಸವಾಯಿತು. ತನ್ನ ಯೋಚನೆ ಸರಿ ಇದೆ.

ಹೆಂಗಸರನ್ನು ಹುಡುಕಿಕೊಂಡು ಈ ಊರು ತೊರೆದವರೆಲ್ಲ ಮೂರ್ಖರೇ ಸರಿ. ಹೊಸಬರಿಂದಲೇ ಊರು ಮತ್ತೆ ಕಟ್ಟುತ್ತೇನೆ ಎಂದುಕೊಂಡ. ಬರೀ ಗಂಡಸರೇ ಇದ್ದ ಊರಿನಲ್ಲಿ ತಾವೆಲ್ಲ ಬಹಳ ಖುಷಿಯಾಗಿದ್ದೀವಿ ಎಂದು ಅವರೆಲ್ಲ ಅಂದುಕೊಂಡರು. 

ಒಂದು ದಿನ ಊರಿನವರನ್ನೆಲ್ಲ ಕರೆದ ಪಾಳೇಗಾರ, ತಾನು ತೀರ್ಥ ಯಾತ್ರೆಗೆ ಹೋಗಿ ಬರುವುದಾಗಿ ತಿಳಿಸಿ ತಾನು ಯಾವಾಗ ವಾಪಾಸ್ಸು ಬರುತ್ತೇನೆಂಬ ಬಗ್ಗೆ ಸ್ಪಷ್ಟತೆಯಿಲ್ಲವೆಂದೂ , ಬಾರದೆಯೂ ಇರಬಹುದೆಂದು ಹೇಳಿ ಅವರೆಲ್ಲರೂ ತಮ್ಮ ಈ ಜೀವನವನ್ನು ಕಠಿಣವಾದುದೆಂದು ಭಾವಿಸದೆ ಸಹಜವಾಗಿ ಇರಬೇಕೆಂದು , ಜಗತ್ತು ಒಂದು ದಿನ ಅವರೆಡೆಗೆ , ಆ ಊರಿನೆಡೆಗೆ ತಿರುಗಿ ನೋಡುವ ಸಮಯ ಬರುತ್ತದೆಂದು ಆಶ್ವಾಸನೆ ಕೊಟ್ಟು ಹೊರಟು ಹೋದ. 

ಹೌದು. ಅವನು ಹೇಳಿದ್ದು ಸುಳ್ಳಾಗಲಿಲ್ಲ . ಇಡೀ ಜಗತ್ತು ಈ ಊರಿನೆಡೆಗೆ ತಿರುಗಿ ನೋಡಿತ್ತು. ಆದರೆ ಹಾಗೆ ಜಗತ್ತು ಈ ಊರಿನೆಡೆಗೆ ತಿರುಗಿದ ದಿನ ಆ ಊರಿನಲ್ಲಿ ಒಬ್ಬನೇ ಒಬ್ಬ ನರಪಿಳ್ಳೆಯೂ ಇರಲಿಲ್ಲ. ದೊಡ್ಡ ಸ್ತ್ರೀ ದ್ವೇಷಿಗಳಂತೆ ಬಂದು ಸೇರಿಕೊಂಡವರೆಲ್ಲ ಒಬ್ಬೊಬ್ಬರಾಗಿ ಅಲ್ಲಿಂದ ನಾಪತ್ತೆಯಾಗಿದ್ದರು.

ಹೆಣ್ಣಿನ ಸ್ನೇಹ ,ಸಲುಗೆ, ಸರಸ ,ವಿರಸ,ಕೋಪ, ಕರುಣೆ, ಆಪ್ತತೆಯಿಂದ ದೂರವಾಗಿ ಬಹಳ ಕಾಲ ಇರಲಾರದಂಥ ಸಾಮಾನ್ಯ ಮನುಷ್ಯರು ತಾವು ಎಂಬುದು ಅವರೆಲ್ಲರಿಗೂ ಅರ್ಥವಾಗಿತ್ತು. ಈಗ ನೋಡಿ ಆ ಊರು ಖಾಲಿಯಾಗಿದೆ. ಎಷ್ಟೋ ವರ್ಷಗಳಿಂದ ಹೀಗೇ ಇದೆ. 

ಎಂದು ದೀರ್ಘವಾಗಿ ಖಾಲಿ ಊರಿನ ಆ ಕಥೆಯನ್ನು ಹೇಳಿ ಮುಗಿಸಿದ್ದ ಆ ಕ್ಷೌರಿಕ. ನನ್ನ ಹೇರ್ ಕಟ್ ಮಾಡಲು ಅಷ್ಟು‌ ಸಮಯವೇನೂ ಬೇಕಿರಲಿಲ್ಲ ಆದರೂ ಅವನು ಕತ್ರಿ ಹಿಡಿದುಕೊಂಡು ಮಾತಿನ ಮಧ್ಯದಲ್ಲಿ ಕೆಲಸಕ್ಕೆ ಬಿಡುವು ನೀಡಿ ಕಥೆ ಹೇಳಿ ಮುಗಿಸಿದ. ದುಡ್ಡು ಕೊಟ್ಟು ಹೊರಡುವಾಗ ಕೊನೆಯದಾಗಿ ನಾನು ಎರಡು ಪ್ರಶ್ನೆಗಳನ್ನು ಕೇಳಿದೆ. 

‘ ಅಲ್ಲ, ಈ ಊರು ಸೇರಿದ ಹೊಸಬರು ತಾವಾಗಿಯೇ ಬಂದವರು. ಮತ್ತೇಕೆ ಅವರು ಊರು ಬಿಟ್ಟರು ?’ 

‘ ಏನೋ ಸ್ವಾಮಿ. ನನಗೆ ಗೊತ್ತಿಲ್ಲ’  ಅಂದ 

‘ ಆ ಪಾಳೇಗಾರ ತೀರ್ಥಯಾತ್ರೆ ಮುಗಿಸಿ ಊರಿಗೆ ಬರಲಿಲ್ಲವೆ ? ‘ 

‘ ಅಯ್ಯೋ ಅದ್ರ ಬಗ್ಗೆ ಯಾರಿಗೂ ಗೊತ್ತಿಲ್ಲ ಸ್ವಾಮಿ‌. ಎಲ್ರೂ ಇಷ್ಟೆ ಕಥೆ ಹೇಳೋದು ‘ ಅಂದ . 

*       *     * 

ಈಗ ನನ್ನ ಪ್ರಶ್ನೆಗಳಿಗೆ ನಾನೇ ಉತ್ತರ ಕಂಡುಕೊಳ್ಳಬೇಕಾಗಿತ್ತು . ಆ ಉತ್ತರ ಬಹಳ ಸರಳ ಸತ್ಯವಾಗಿತ್ತು . 

” ಹೆಂಗಸರಿಲ್ಲದ ಊರಿನಲ್ಲಿ ಗಂಡಸರೂ ಇರಲಾರರು “

ಆ ಪಾಳೇಗಾರನೂ ಈ ಉತ್ತರದ ಪಾಲುದಾರನಾಗಿರಲೂಬಹುದು … 

October 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: