ಅಂತರಗಂಗೆಯಲ್ಲಿ …!!

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಉತ್ತರ ಪ್ರದೇಶದ ಮನಿಷಾಳ ಮೇಲೆರೆಗಿರುವ ಅತ್ಯಾಚಾರ, ಕೊಲೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈ ಹಿಂದೆ ನಿರ್ಭಯಾಳ ಮೇಲಿನ ಅತ್ಯಾಚಾರವೂ ಹೀಗೇ ದೇಶವನ್ನು ದಿಗ್ಭ್ರಮೆಗೊಳಿಸಿತ್ತು.     ಇಂತಹ  ದೇಶವನ್ನು ಪ್ರತಿಧ್ವನಿಸುವಂತೆ ಮಾಡುವ ಘಟನೆಗಳು ಈ ದೇಶದಲ್ಲಿ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯಗಳ ಒಂದು ಸಾಂಕೇತಿಕ ಇಣುಕು ನೋಟವಷ್ಟೇ…..     

ಆದರೆ ವಾಸ್ತವದಲ್ಲಿ ಈ ಭರತಮಾತೆಯ ಮಡಿಲಲ್ಲಿ ಪ್ರತಿ 22 ನಿಮಿಷಕ್ಕೊಬ್ಬ ಹೆಣ್ಣುಮಗಳು ಕ್ರೂರವಾಗಿ ಅತ್ಯಾಚಾರ ಕ್ಕೊಳಗಾಗುತ್ತಿದ್ದಾಳೆ.     ಅದರಲ್ಲೂ ವೇಶ್ಯಾವಾಟಿಕೆಯೆಂಬ ಪಾತಕ ಲೋಕದೊಳಗಿನ 68% ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗಿರುತ್ತಾರೆ. ಅತ್ಯಾಚಾರಕ್ಕೊಳಗಾದ ಅದೆಷ್ಟೋ ಹೆಣ್ಣುಗಳು ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಾರೆ.   

ಈ ಸಂದರ್ಭದಲ್ಲಿ ಈ ಹಿಂದೆ ಹದಿಹರೆಯದ ಕುಸುಮಾಳ ಮೇಲೆ ಅಂತರಗಂಗೆಯಲ್ಲಿ ಬರ್ಭರವಾಗಿ ನಡೆದಿದ್ದ ಅತ್ಯಾಚಾರವನ್ನು ಮರೆಯಲು ಸಾಧ್ಯವೇ ಇಲ್ಲ.     ಈ ಸಮಾಜದ, ವ್ಯವಸ್ಥೆಯ ಪರಿಧಿಯಲ್ಲಿ ಅವಳು ಲೈಂಗಿಕ ವೃತ್ತಿ ಮಹಿಳೆ ಎನ್ನುವುದೇ ಅವಳ ಮೇಲೆರೆಗಿದ ದೌರ್ಜನ್ಯದ ಗಂಭೀರತೆಯನ್ನು ಹುಸಿಗೊಳಿಸುವುದು ದುರಂತವೇ ಸರಿ !!!!

ಆ ದಿನ ಸಂಜೆ ಕೋಲಾರದ ಬಸ್ಟ್ಯಾಂಡ್ ಮುಂಭಾಗದಲ್ಲಿ ಗಿರಾಕಿಗಳಿಗಾಗಿ ಕಾಯುತ್ತಾ ನಿಂತಿದ್ದೆ. ಒಬ್ಬ ಆಟೋದಲ್ಲಿ ಬಂದ. 200 ಎಂದೆ, ಆಯ್ತು ಬಾ ಅಂದ. ಲಾಡ್ಜ್ ಗೆ ಹೋಗೋಕೆ ಅಂತ ಆಟೋ ಹತ್ತಿದೆ.

ಸಾಮಾನ್ಯವಾಗಿ ಗಿರಾಕಿಗಳು ಕುದುರಿದ ನಂತರ ಲಾಡ್ಜ್ ಗಳಿಗೆ ಅಥವಾ ಮನೆಗಳಿಗೆ ಹೋಗುವುದು ರೂಢಿ. ಆದರೆ ಇವತ್ತು ನಾನು ಹತ್ತಿದ್ದ ಆಟೋ ಬೇರೆ ದಾರಿ ಹಿಡಿದಿತ್ತು. ಆಟೋದವನು ಈ ಗಿರಾಕಿಗೆ ಪರಿಚಿತನಿದ್ದಾನೆ ಅಂತ ಗೊತ್ತಾಯ್ತು. ಎಲ್ಲಿಗೆ ಹೋಗ್ತಿರೋದು ಅಂತ ಪ್ರಶ್ನೆ ಮಾಡಿದೆ.  ಅದಕ್ಕವನು, ಎಲ್ಲಾ ವ್ಯವಸ್ಥೆ ಆಗೈತೆ ಬಾ ಅಂದ.

ಆಟೋದಲ್ಲಿ ಬಾಟಲ್ ಸ್ಟಾಕ್ ಇರೋ ಬಗ್ಗೆ ಅವರು ಮಾತಾಡ್ತಿದ್ರು. ಸುಮಾರು ಎರಡು ಫರ್ಲಾಂಗ್ ಹೋಗೋದ್ರೊಳಗೆ ಇನ್ನೊಬ್ಬ ಆಟೋ ಹತ್ತಿದ, ಮುಂದೆ ಸ್ವಲ್ಪ ದೂರಕ್ಕೆ ಇನ್ನೊಬ್ಬ… ಮತ್ತೊಬ್ಬ ಡ್ರೈವರ್ ಪಕ್ಕ ಜೋತು ಬಿದ್ದ. ಒಂದು ಕಿಮೀ ಹೋಗೋದ್ರೊಳಗೆ ಆಟೋದಲ್ಲಿ ನಾನಲ್ಲದೇ ಐದು ಜನವಾದ್ರು. ಕತ್ತಲಾವರಿಸುತ್ತಿದ್ದ ಸಮಯ, ನಿರ್ಜನ ಪ್ರದೇಶದಲ್ಲಿ ಆಟೋ ಸಾಗುತ್ತಿತ್ತು.

ಸ್ವಲ್ಪ ದೂರ ಹೋಗುವಷ್ಟರಲ್ಲಿ ನನಗೆ ಅರಿವಾಯಿತು, ಆಟೋ ದಲ್ಲಿರುವ ಯಾರೂ ಪ್ರಯಾಣಿಕರೇ ಅಲ್ಲ ಅಂತ. ನನ್ನನ್ನು ಕರೆದುಕೊಂಡು ಬಂದಿದ್ದ ಗಿರಾಕಿಯನ್ನು ಕೇಳಿದೆ, ಎಲ್ಲಿಗೆ ಹೋಗ್ತಾ ಇದ್ದೀವಿ? ಇವರೆಲ್ಲ ಯಾರು? ಅವನು ಮುಂದೆ ಹೇಳ್ತೀನಿ ಬಾ… ನಿನಗೇ ಎಲ್ಲ ಗೊತ್ತಾಗುತ್ತೆ ಅಂತ ಹೇಳಿದ. ನನಗೆ ಅಪಾಯದ ಸೂಚನೆಗಳು ಕಂಡವು. ಚೀರಬೇಕೆಂದುಕೊಂಡೆ, ನನ್ನ ಧ್ವನಿ ಅಲ್ಲೇ ಅಡಗಿ ಹೋಗುತಿತ್ತು. ಎಲ್ಲೆಲ್ಲೂ ನೀರವತೆ. ಪರಿಸ್ಥಿತಿಯ ಅರಿವಾಯಿತು.

ಲೈಂಗಿಕ ವೃತ್ತಿಯ ಬದುಕಿನಲ್ಲಿ ಇಂತಹ ಅದೆಷ್ಟೋ ಕಥೆಗಳನ್ನು ಕೇಳಿದ್ದೆ,  ಈ ದಿನ ನನಗೇ ಅಂತಹ ಭಯಾನಕ ಸ್ಥಿತಿಯ ಮುನ್ಸೂಚನೆ ಸಿಕ್ಕಿತ್ತು. ಕತ್ತಲಾವರಿಸುತ್ತಿತ್ತು. ಎಲ್ಲರೂ ಕುಡಿದು ತಲೆಗೇರಿಸಿ ಕೊಂಡಿರೋದು ಅವರ ಮಾತುಗಳಿಂದಲೇ ತಿಳೀತಿತ್ತು.  ಆಟೋ ಬೆಟ್ಟದ ಕಡೆಗೆ ಹೋಗ್ತಿರೋದು ಗೊತ್ತಾಯ್ತು.. ನನ್ನ ಜೀವವೇ ಬಾಯಿಗೆ ಬಂದಂತಾಯ್ತು… ಅಯ್ಯೋ ಏನು ಕಾದಿದೆಯೋ, ಈವತ್ತು ನನ್ನ ಕಥೆ ಮುಗಿದೇ ಹೋಯ್ತು ಮನಸ್ಸು ಚೀರುತ್ತಾ ಇತ್ತು….

ಆದರೂ ಅದನ್ನು ತೋರಿಸಿಕೊಳ್ಳದೇ, ನಾನೂ ಅವರ ಮಾತಿಗೆ ಮಾತು ಸೇರಿಸಿ ನನ್ನ ಧೈರ್ಯ ಪ್ರದರ್ಶನ ಮಾಡ್ತಿದ್ದೆ. ಇಳಿಸಿಬಿಡ್ರಿ, ಎಲ್ಲಿಗೆ ಹೋಗ್ತಿದ್ದೀರಿ ಅಂತ ಇಳಿಯೋಕೆ ಕೊಸರಾಡಿದೆ. ಅಕ್ಕಪಕ್ಕದಲ್ಲಿ ಆತು ಕೂತ್ಕೊಂಡಿದ್ದ ದಾಂಢಿಗರು ಇನ್ನಷ್ಟು ಒತ್ತರಿಸಿ ಕೂತ್ಕೊಂಡ್ರು. ಅಂತರಗಂಗೆಯ ತಪ್ಪಲಿಂದ ಹೊರಟ ಆಟೋ ಬೆಟ್ಟದ ಆ ಕಡೆಯ ಭಾಗದಲ್ಲಿ ನಿಂತಿತು. 

ಅಷ್ಟೊತ್ತಿಗಾಗಲೇ ಕತ್ತಲಾವರಿಸಿ ಬಿಟ್ಟಿತ್ತು. ಆಟೋದಿಂದ ಎಲ್ಲರೂ ಇಳಿದರು. ನನ್ನನ್ನೂ ಇಳಿಯಲು ಒಬ್ಬನು ಸೂಚಿಸಿದ.  ನಾನು ಅಲ್ಲೇ ಕುಳಿತಿದ್ದೆ ,  ಬಾಟಲಿಗಳ ಬಾಕ್ಸನ್ನು ಹೊರಗೆಳೆದುಕೊಂಡು ಎಲ್ಲರೂ ಮತ್ತೆ ಮತ್ತೆ ಕುಡಿಯಲಾರಂಭಿಸಿದರು.  ನನಗೂ ಕೊಟ್ಟರು. ನಾನು ಭಯದಲ್ಲಿ ನಿರಾಕರಿಸಲಾಗದೆ ಗಟಗಟ ಕುಡಿದುಬಿಟ್ಟೆ.

ಒಬ್ಬ ಆಟೋದೊಳಗೇ ನುಗ್ಗಿ ನನ್ನ ಮೇಲೆರಗಿದ… ನಾನು ಅಯ್ಯೋ, ಅಯ್ಯೋ ಅಂತ ಶಕ್ತಿ ಮೀರಿ ಕಿರುಚಿಕೊಂಡೆ. ಕೆಳಗಿದ್ದವನೊಬ್ಬ  ಹೇ ಬಾರೇ ಕೆಳಗೆ, ನೀನೇನು ಗರತಿಯಾ, ದಿನಕ್ಕೆ ಹತ್ತಿಪ್ಪತ್ತು ಗಿರಾಕಿಗಳನ್ನ ಸಂಭಾಳಿಸ್ತೀಯ, ನಾವು ನಿನಗೆ ಹೆಚ್ಚಾದ್ವಾ ?? ಅವನ ಹೊಲಸು ಮಾತುಗಳು ನನ್ನನ್ನು ಚುಚ್ಚುತ್ತಲೇ ಇದ್ವು… ನನ್ನ ಮೇಲೆರೆಗಿದವನು ನನ್ನ ಬ್ಲೌಸು ಹರಿದ…..

ನಾನೂ ಕುಡಿದುಬಿಟ್ಟಿದ್ದೆ,  ನನ್ನ ಯಾವ ಶಕ್ತಿಯೂ ನನ್ನನ್ನು ಕಾಪಾಡಲೇ ಇಲ್ಲ…. ಇಬ್ಬಿಬ್ಬರು ಸೇರಿ ನನ್ನನ್ನು ಕೆಳಗೆ ಕೆಡವಿದರು…. ನಿಮ್ಮ ಕಾಲಿಗೆ ಬೀಳ್ತೀನಿ, ನಾನು  ಬಸುರಿ, ನನ್ನ ಕೈಲಾಗೋಲ್ಲ….. ನನ್ನನ್ನು ಬಿಟ್ಟುಬಿಡಿ… ನನ್ನ ಯಾವ ಆಕ್ರಂದನವನ್ನೂ ಕೇಳಿಸಿಕೊಳ್ಳೋ ಸ್ಥಿತಿಯಲ್ಲೇ ಅವರಿರಲಿಲ್ಲ. ಅವರಲ್ಲಿ ಒಬ್ಬ ಮಾತ್ರ, ಯಾಕ್ರೋ ಬಸರೀನ ಕರ್ಕೊಂಡ್ಬಂದಿದ್ದೀರ, ಸತ್ತುಗಿತ್ತು ಹೋದ್ರೆ…? ಅಂದ.

ಒಬ್ಬರ ಮೇಲೊಬ್ಬರು ನನ್ನ ಮೇಲೆರಗಿದ್ರು…. ಒಡಲೊಳಗಿನ ಕರುಳು ಅಸಹನೀಯವಾಗಿ ಜರ್ಝರಿತವಾಗ್ತಿತ್ತು…..

ಇನ್ನು ಆಗೋದೇ ಇಲ್ಲ, ನಾನು ಸತ್ತೇ ಹೋದೆ ಅಂತ ಕಿರುಚ್ಕೊಂಡೆ. ಕೊನೆಗೆ ಒಬ್ಬ ಬಂದು ಮೇಲೆರಗಿದ ರಭಸಕ್ಕೆ , ಗಂಟೆಗಟ್ಟಲೆ ಒಡಲ ಕಡಲೊಳಗೆ ಜೀವನ್ಮರಣದ ಹೋರಾಟ ಮಾಡುತ್ತಿದ್ದ ನನ್ನ ಗರ್ಭದ ಚೀಲ ಚಿಂದಿಯಾಯ್ತು…. ಆ ದೂರ್ಥರ, ರಕ್ಕಸರ ಭಾರ, ಹೆರಿಗೆಯ ನೋವು ಹೆಣೆದುಕೊಂಡು ನನ್ನ ಜೀವ ಕಸಿಯುವ ಹಂತಕ್ಕೆ ಬಂದ್ವು. ಇದೇ ಕೊನೆ ಎಂಬಂತೆ ಚೀತ್ಕರಿಸಿಬಿಟ್ಟೆ, ‘ಕಾಪಾಡಿ’…..

ಇಡೀ ಅಂತರಗಂಗೆಯ ಕತ್ತಲನ್ನು ಬೇಧಿಸಿ ಪ್ರತಿಧ್ವನಿಸಿದ್ದನ್ನು ನಾನೇ ಕೇಳಿಸಿಕೊಂಡೆ, ಉಳಿದ ಜಗತ್ತೆಲ್ಲವೂ ಮೂಕವಾಗಿ ಕಿವುಡಾಗಿತ್ತು.  ದುರಳರಿಂದಾದ ಅತ್ಯಾಚಾರ, ಕರುಳ ಬಳ್ಳಿಯು ನನ್ನನ್ನು ತಿರಸ್ಕರಿಸಿ ಒಡೆದು ಹೊರಬಂದ ರಭಸ‌‌… ಎರಡರಿಂದಲೂ ನೆತ್ತರು ಹರಿಯತೊಡಗಿತು… ಬಂದವರ ಕೆಲಸ ಮುಗಿದಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ನನ್ನನ್ನು ನೋಡುವಷ್ಟೂ ಹೃದಯದಲ್ಲಿ ಬಡಿತವೇ ಇರಲಿಲ್ಲ ಅವರಿಗೆ…. ನನ್ನ ನರಳಾಟ ಕ್ಷೀಣಿಸಿತ್ತು….. ನಿಶ್ಚೇಷ್ಟಿತಳಾದೆ ನಾನು. ನನ್ನನ್ನು ಅಲ್ಲೇ ಬಿಸಾಡಿ ಅವರೆಲ್ಲಾ ಜಾಗ ಖಾಲಿ ಮಾಡಿದ್ರು…..

ಆಟೋ ಸ್ಟಾರ್ಟ್ ಆದ ಸೌಂಡ್‌ ಕೇಳಿಸಿತ್ತು.

ನರಳುತ್ತಲೇ ಕ್ಷೀಣಿಸಿದೆ…

ಕತ್ತಲು ಜಾರಿ ಬೆಳಕು ಜಾವದಲ್ಲಿತ್ತು. ಸಾವರಿಸಿಕೊಂಡೆ. ಹಿಂದಿನ ಕರಾಳ ರಾತ್ರಿಯ ಯಾವುದನ್ನೂ ನೆನೆಯುವ  ಮನಸ್ಸಿರಲಿಲ್ಲ…. ಕರುಳು ಕಿವುಚಿತು,  ಗರ್ಭದಲ್ಲಿ ಇನ್ನೇನು ಪಡಿಯಚ್ಚು ಮೂಡಿ ಹೆರಿಗೆ ಬೇನೆಯೊಂದಿಗೆ ಹೊರ ಜಗತ್ತಿಗೆ ಕಣ್ದೆರೆಯ ಬೇಕಿದ್ದ ನನ್ನ ನಕ್ಷತ್ರದ ಮೇಲೆರೆಗಿ ನನ್ನೊಂದಿಗೆ ಆ ಪುಟ್ಟ ಜೀವವನ್ನೂ ಅತ್ಯಾಚಾರ ಮಾಡಿಬಿಟ್ಟರಲ್ಲಾ ಆ ಕಾಮುಕರು…..

ಅಂತ ಹೃದಯ ಚೀರಾಡುತ್ತಿತ್ತು… ಜೀವವಾದರೂ ನಿಲ್ಲಬಾರದಿತ್ತಾ, ಇನ್ನೆಷ್ಟು ನೋವು ತಿನ್ನಬೇಕು ನನ್ನ ಈ ವಿನಾಕಾರಣದ ಬದುಕಿನಲ್ಲಿ….. ಇದ್ದಷ್ಟೂ ದಿನ ನನ್ನ ಕಿತ್ತು ತಿನ್ನುವವರಿಗಾಗಿ ನಾನೇಕೆ ಬಲಿಯಾಗಬೇಕು….

ತಡೆಯಲಾರದ ಕಿಬ್ಬೊಟ್ಟೆ ನೋವು, ನಿಲ್ಲಲಾರದ ರಕ್ತಸ್ರಾವ….. ಜೀವಚೈತನ್ಯಕ್ಕೇ ಕೊಳ್ಳಿಯಿಟ್ಟಿದ್ದಾರೆ…. ನಿರಂತರವಾಗಿ ವೇಶ್ಯಾವಾಟಿಕೆಯ ನೆಪದಲ್ಲಿ ತಮ್ಮ ತೆವಲು ತೀರಿಸಿಕೊಳ್ಳುವ ಈ ವ್ಯವಸ್ಥೆಯ ಸಾವಿರಾರು ಗರ್ಭಪಾತಗಳು ನನ್ನ ಸುತ್ತ ನರ್ತಿಸಿದಂತೆ ಭಾಸವಾಯ್ತು. ಅಲ್ಲಿದ್ದ ಗರಿಕೆಯೆಲ್ಲಾ ರಕ್ತಸಿಕ್ತವಾಗಿತ್ತು. ನನ್ನ ಕಂದಮ್ಮ ಜೀವತುಂಬುವ ಮೊದಲೇ ನಿರ್ಜೀವವಾಗಿತ್ತು. 

ಅಬ್ಬಾ!  ಇಂಥಾ ಅದೆಷ್ಟು ಗರ್ಭದ ಚೀಲಗಳು ಕಾಮುಕರ, ಅಮಾನುಷರ ದಾಳಿಯಿಂದಾಗಿ ಮಣ್ಣಾಗಿ ಬಿಟ್ಟಿವೆಯೋ… ಸಾವರಿಸಿ ಕೊಳ್ಳಲಾರದಾದೆ…. ಇನ್ನಿಲ್ಲದ ದಾಹದಿಂದ ಹಾಗೇ ತೆವಳಿಕೊಂಡು ಬಂದು ಅಲ್ಲೇ ಪಕ್ಕದಲ್ಲಿ ಗುಂಡಿಯೊಂದರಲ್ಲಿ ಮಲೆತಿದ್ದ ನೀರ ಬೊಗಸೆತುಂಬಿ ಕಣ್ಮುಚ್ಚಿ ಕುಡಿದೆ….. 

ನನ್ನಂತಹ ನೂರಾರು ದೌರ್ಭಾಗ್ಯರ ನೋವುಗಳಿಗೆ, ನಮ್ಮ ಮೇಲಿನ ಕ್ರೌರ್ಯಗಳಿಗೆ ಸಾಕ್ಷಿಯೆಂಬಂತೆ….. ಅಂತರಗಂಗೆ ಹಾಗೇ ನಿಂತಿದ್ದಾಳೆ!!ಎನಿಸಿತು…… ಕರುಳ ಬಗೆದ ಸಂಕಟ, ಅವರೆಲ್ಲ ಎದೆ ಸೀಳಿದ ನೋವು, ಮನದಲ್ಲಿ ಚೀತ್ಕರಿಸುತ್ತಿದ್ದ ಅಪಮಾನ, ಅರೆಬರೆ ಬೆತ್ತಲಾಗಿದ್ದ ದೇಹ, ತಡೆಯೋಕೆ ಆಗದಷ್ಟು ಹಸಿವು…..  ನನ್ನೊಳಗಿನ ಎಲ್ಲವನ್ನೂ ಒಟ್ಟು ಮಾಡಿ ಅಯ್ಯೋ, ಯಾರಾದ್ರೂ ಬನ್ನಿ ಅಂತ ಘೀಳಿಟ್ಟುಬಿಟ್ಟೆ. 

ಎಲ್ಲೋ ದೂರದಲ್ಲಿ ಸೈಕಲ್ ಶಬ್ದ ಕೇಳಿಸಿತು. ಬಿಡಲಾರದ ಕಣ್ಣುಗಳನ್ನು ತೆರೆದು ನೋಡಿದೆ. ಸಾಬಣ್ಣ ಸೈಕಲ್ ನಲ್ಲಿ ಸರ್ಕಸ್ ಮಾಡೋನಂತೆ ಬರ್ತಿದ್ದ. ಸಾಬಣ್ಣ ನಮಗೆಲ್ಲ ಪರಿಚಿತನೇ. ಅವನ ಪೂರ್ತಿ ಹೆಸರು ಏನೋ ಗೊತ್ತಿಲ್ಲ, ಎಲ್ಲರೂ ಅವನನ್ನು ಸಾಬಣ್ಣ ಅಂತಲೇ ಕರೆಯೋದು. ಸೈಕಲ್ ನ ಕ್ಯಾರಿಯರ್ ನಲ್ಲಿ   ಬ್ರೆಡ್, ಬಿಸ್ಕತ್, ಬನ್ಸ್, ಜೀರಾ ನೀರು…. ಎಲ್ಲಾ ತುಂಬ್ಕೊಂಡು ಮಾರ್ಕೊಂಡು ಬರ್ತಾನೆ.

ದುಡ್ಡಿದ್ರೆ ಕೊಡ್ತೀವಿ, ಇಲ್ಲದಿದ್ರೂ ಸಾಲ ಕೊಡ್ತಾನೆ. ಬೇಸರವಿಲ್ಲದೆ ನಮಗೆ ಸಾಲದ ಮೂಲಕ ನಮ್ಮ ಹಸಿವನ್ನು ತೀರಿಸೋ ಏಕೈಕ ವ್ಯಕ್ತಿ ಇವನು. ನನ್ನ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ‘ಸಾಬಣ್ಣಾ’ ಕೂಗಿದೆ. ಧ್ವನಿ ಬಂದತ್ತ ತಿರುಗಿದ. ಹೃದಯ ವಿದ್ರಾವಕ ಸ್ಥಿತಿಯಲ್ಲಿದ್ದ ನನ್ನನ್ನು ನೋಡಿ ಉಸಿರು ನಿಂತಂತಾಗಿಬಿಟ್ಟ. ಆ ಏರು ತಗ್ಗುಗಳಲ್ಲಿ ಓಡಲಾರದ ಸೈಕಲ್ಲನ್ನು ಅಲ್ಲೇ ದೂಡಿ ನನ್ನತ್ತ ಓಡಿಬಂದ. ಹತ್ತಿರ ಬಂದಾಗ ನನ್ನ ಗುರುತು ಸಿಕ್ಕಿತ್ತು….

ಅವ್ವಾ ಕುಸುಮಾ…. ಏನಾಯ್ತವ್ವ, ಏನವ್ವಾ ನಿನ್ನ ಸ್ಥಿತಿ ಅಂತ ಹೆತ್ತವ್ವನಂತೆ ನನ್ನನ್ನು ಅಪ್ಪಿ ಆರ್ತನಾದ ಮಾಡಿದ…. ಓಡಿ ಹೋಗಿ ಸೈಕಲ್ಲಿನಲ್ಲಿದ್ದ ನೀರು, ಬನ್ ತಂದುಕೊಟ್ಟ. ಹಸಿದು ಕಂಗೆಟ್ಟಿದ್ದ ಒಡಲು ಹಾತೊರೆದಿತ್ತು. ಉಸಿರು ತಿರುಗಿದಂತಾಯ್ತು. ಸಾಬಣ್ಣನೂ ದಿಗ್ಭ್ರಾಂತನಾಗಿ ಇಡೀ ಗಂಡಸು ಕುಲವನ್ನೇ ಶಪಿಸುತ್ತಿದ್ದ.

ಅಯ್ಯೋ ಹೂವಿನಂಥಾ ಮಗು ನೀನು, ಎಂಥಾ ಸ್ಥಿತಿ ಬಂತವ್ವಾ ತಾಯೀ…. ಅದ್ಯಾವ ಧನಪಿಶಾಚಿಗಳು ನಿನ್ನಂತಹ ಅರಿಯದವಳನ್ನು ಈ ನರಕಕ್ಕೆ ತಳ್ಳಿ ಬಿಟ್ರವ್ವಾ…. ತನ್ನ ಮಗಳಂತೆಯೇ ನನ್ನನ್ನು ಸಂಭೋದಿಸುತ್ತಿದ್ದ ಅವನಿಗೆ ಕಣ್ಣು ಕತ್ತಲಿಟ್ಟಿತ್ತು…. ದು:ಖದ ಮಡುವಿನಲ್ಲಿ ಬಿದ್ದಿದ್ದ ನನಗೆ ಆ ಆಪ್ತತೆಯು ಮತ್ತೆ ಬದುಕುವ ಅವಕಾಶ ಕೊಟ್ಟಿತ್ತು…….

‍ಲೇಖಕರು ಲೀಲಾ ಸಂಪಿಗೆ

October 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ತುಂಬಾ ವ್ಯಥೆ ಆಗ್ತಾ ಇದೆ ಲೀಲಕ್ಕ ಓದಿ…
    ಸಾಬಣ್ಣನವರ ಮಮತೆಗೊಂದು ಗೌರವ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: