ನವಿಲು ಕೂಗೋ ಮಡುಗು..

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. ‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಹಸಿರು, ನೀರು, ಆಗಸ ನೆಲ ಎಲ್ಲವೂ ಕೈಕೈ ಹಿಡಿದು ಜೊತೆಯಾಗಿ ಮೌನದಲ್ಲಿ ಅನಂತಗಳನ್ನು ಬೆಸೆದುಕೊಂಡಂತೆ ಸೆಳೆಯುವ ನವಿಲು ಕೂಗೋ ಮಡುಗು ನನ್ನ ಊರಿನತನಕ ತನ್ನ ಸೊಬಗಿನ ಬೇರುಗಳನ್ನು ಇಳಿಸಿಕೊಂಡು ಊರೊಳಗಿನ ಕುತೂಹಲಿಗಳಾದ ಅನೇಕರಿಗೆ ಸಮಷ್ಟಿ ಹಿತವನ್ನು ಕೊಡುತ್ತಲೇ ಬಂದಿದೆ. ಜಾನುವಾರುಗಳ ಗೆಳೆತನಕ್ಕೆ ಮುಂದಾಗಿ ಖಗಲೋಕದ ಕೂಗಿಗೆ ತನ್ನನ್ನು ಒಪ್ಪಿಸಿಕೊಂಡ ಈ ಮಡುಗಿನ ರೂಪವಿಸ್ಮಯಕ್ಕೆ ನಮ್ಮ ಚಿಕ್ಕಂದಿನ ಕಾಲ ಐಕ್ಯವಾಗಿ ಕನಸುಗಳು ಮೊಳೆತದ್ದು.  

 ಪ್ರೇಮಕ್ಕೆ ಹಲವು ಬಗೆಯ ಸಾವುಗಳು ಜೊತೆಯಾಗುತ್ತವೆ. ಅಚ್ಚರಿಗಳ ತುಂಬುಬೆರಗಿಗೆ ಅಂಟಿಕೊಂಡ ಈ ಮಡುಗಿನಲ್ಲಿ ಒಂದು ತಿಳಿಪ್ರೇಮ ಮುಳುಗಿ ಸತ್ತಿತು. ಒಳಿತಿನ ಉನ್ಮಾದಗಳನ್ನು ಮಳೆಯ ದಿನಗಳಲ್ಲಿ ಹೆಚ್ಚಿಸುವ ಈ ಮಡುಗು ಕಡುಗ್ರೀಷ್ಮ ಬಂತೆಂದರೆ ತನ್ನುದರಕ್ಕೆ ತುಂಬಿಕೊಳ್ಳುವ ಹಳ್ಳವನ್ನು ಒಣಗಿಸಿಕೊಂಡು ತಾನು ಮಾತ್ರ ಅಚ್ಚಗೆ ಮಲೆತ ನೀರಿನ ಜೊತೆ ಹಿಂಡಿಂಡು ನವಿಲುಗಳನ್ನು ಆಹ್ವಾನಿಸುತ್ತದೆ.

ಮಯೂರಗಳ ಹಿಂಡು ನಲಿಯಲು ಆಸರೆಯಾಗಿರುವ ಈ ಮಡುಗಿಗೆ ನನ್ನೂರಿನ ಜನ ” ನವಿಲು ಕೂಗೋ ಮಡುಗು”ಎಂದೇ ಹೆಸರಿಸಿದ್ದಾರೆ. ‘ಬಿದ್ರುಸಿಕ್ಕಿನ ಮಡುಗೆಂಬ’ ಇನ್ನೊಂದು ಇಂಥದೇ ಮಡುಗು ಬೇಸಿಗೆಯ ದಿನಗಳಲ್ಲಿ ಆಳಕ್ಕೆ ನೀರಿಟ್ಟುಕೊಂಡು ಸಣ್ಣವರಿದ್ದಾಗ ನಮ್ಮೂರಿನ ಮಕ್ಕಳಿಗೆಲ್ಲ ಪ್ರಾಥಮಿಕವಾಗಿ ಈಜಲು ಮೊದಲು ನೀರುಕೊಟ್ಟದ್ದು.

ಈ ಮಡುಗುಗಳಲ್ಲಿ ಅದೆಷ್ಟು ಸಲ ನಾವೆಲ್ಲ ಉಸಿರುಕಟ್ಟಿ ತೇಲಿ ಬದುಕಿದ್ದೇವೋ? ಯಾವ ಮಕ್ಕಳ ಉಸಿರನ್ನು ನಿಲ್ಲಿಸದ ಈ ಮಡುಗುಗಳು ಕ್ರಮೇಣ ಜಾತಿ ಎಂಬ ಆಯುಧಕ್ಕೆ ಪ್ರಾಣಕೊಡುತ್ತವೆಂದು ನಮಗಾಗ ತಿಳಿಯಲೇ ಇಲ್ಲ. ಊರಿನ ಒಳಗೆ ಜಾತಿಯ ಹಬೆ ಸುತ್ತಿಕೊಂಡು ಬಲೆಯಾಗಿ ನವಿಲಿನ ಮಡುಗಿಗೆ ಕಳಂಕ ತಂದದ್ದು ನಮ್ಮೂರಿನಲ್ಲಿ ಅಪಾಯಗಳು ವಾಸಿಸುತ್ತಿರುವ ಪೂರ್ವದ ಕುರುಹು.

ಊರಿಗೆ ಪ್ರಾಣಸಮೀರವಾದ ದೊಡ್ಡಳ್ಳದಲ್ಲಿ ಏಕವೂ ಹಲವು ವಿಸ್ಮಯಗಳು ವಿಸ್ತಾರಗೊಂಡು ನಮ್ಮ ಕಾಲ ಸುಖಿಸಿದ್ದು. ನವಿಲು ಕೂಗೋ ಮಡುಗಿನ ಮಗ್ಗುಲಲ್ಲೇ ಇರುವ ಗೊಂದಿಯೆಂಬ ದಟ್ಟ ಬೇಸಾಯ ನಡೆಯುವ, ತೆಂಗು ಬೆಳೆದ ನೆಲ ಗುಡ್ಡಗಳ ನೆರಳನ್ನು ಹೊದ್ದು ರಂಗೇರುತ್ತದೆ. ಇಲ್ಲಿ ಮಂಡಿಯವರೆಗೆ ಸಮತಟ್ಟಾಗಿ ಹರಿಯುವ ದೊಡ್ಡಳ್ಳದ ಎಡಕ್ಕೆ ಕಡಿಮರಗಳಿವೆ.(ನೇರ್ಲೆಮರ) ನಾಯಿ ನೇರ್ಲೆಹಣ್ಣು ಅಂತಲೇ ಈ ಮರದ ಹಣ್ಣಿಗೆ ಮುಗಿಬೀಳುತ್ತಿದ್ದದ್ದು ನಾವೆಲ್ಲ.

ನೇರ್ಲೆಹಣ್ಣಿನ ಕಾಲ ಬಂತೆಂದರೆ ಮಖ,ಮೈ,ಕೈ, ಬಾಯಿ ಬಟ್ಟೆಗಳಿಗೆಲ್ಲ ಹಣ್ಣಿನ ಕರೆ ಬಳಿದುಕೊಂಡು ಹೊತ್ತಿಳಿದ ಮೇಲೆ ಮನೆದಾರಿ ಹಿಡಿಯುತ್ತಿದ್ದ ನಾವು ಜಗುಲಿಯ ಕಂಬದಲ್ಲಿ ಹಗ್ಗ ಕಟ್ಟಿಸಿಕೊಂಡು ಶಿಕ್ಷೆಗೆ ಗುರಿಯಾದದ್ದಿದೆ. ಮುಣ್ಗಂಗೆ ನೀರಿರ್ತವೆ ಅಲ್ಲಲ್ಲೇ ಹಳ್ಳ ತಗ್ ಬಿದ್ದಂತೆ ಓಗೋಗಿ ಹಳ್ಳ ಬೀಳ್ತೀರಲ್ಲ ಆಜ್ಞೆ ಅಡ್ಡಿ ಐತ ಯಾರ್ದನನ; ನಿಮ್ ಮಕ್ ಮಣ್ಣಾಕ ಓಗ್ತೀರ ಇನ್ನೊಂದಿನ ಅತ್ಕಡಿಕೆ ಅಂತೆಲ್ಲಾ ಉಗ್ದು ಉಪ್ಪಾಕಿರು ನಾವೇನು ಬಗ್ಗಿದವರಲ್ಲ.

ನಾಯಿನೇರ್ಲೆ ಮರದ ಬಣ್ಣದಣ್ಣುಗಳ ಹಿಂದೆ ಬಿದ್ದು, ನೀರಲ್ಲಿ ಮುಳುಗೆದ್ದು ತೋಯುವ ಸಂಭ್ರಮಗಳನ್ನು ಕಳೆದುಕೊಳ್ಳದ್ದಕ್ಕೆ ನಮ್ಮ ಬಾಲ್ಯ ಜೀವಂತವಾಗಿದ್ದದ್ದು.

ಈ ಹಳ್ಳ ಹರಿಯುವ ಅನೇಕ ಕಡೆ ಸೀಗೆ ಮೆಳೆಗಳಿವೆ. ಮುಳ್ಳನ್ನು ಧರಿಸಿಯೇ ಫಲ ಕೊಡುವ ಮೆಳೆಯ ತುಂಬಾ ನೇತಾಡುವ ಸೀಗೆಕಾಯಿಗಳು ಬಿಟ್ಟವೆಂದರೆ ಇವು ಮುಗಿಯುವವರೆಗೂ ಮುಳ್ಳು ಗೀರಿದ ಗಾಯಗಳಿಂದ ಬಳಲುತ್ತಿದ್ದೆವು. ಅಪಾದ ಮಸ್ತಕ ಮುಳ್ಳು ತರಚಿದರೂ ನಾವೆಂದೂ ದುರ್ಬಲರಂತೆ ಅಂಜಿ ಮನೆಯಲ್ಲಿ ಕುಳಿತವರಲ್ಲ.

ಒಡ್ಡೊಡ್ಡಾಗಿ ಮುಳ್ಳಿನ ಸಖ್ಯವಿಡಿದು ಸೀಗೇಕಾಯಿ ಕೆಡವಿ ಮನೆಗೆ ತರುವುದೆಂದರೆ ಕಾಲವನ್ನೇ ಆವಾಹನೆ ಮಾಡಿಕೊಂಡಂತೆ. ಹಸಿಯ ಸೀಗೇಕಾಯಿಯನ್ನು ನುಣ್ಣಗೆ ಜಜ್ಜಿ ತಲೆಗತ್ತಿದ ಜಿಡ್ಡು ಬಿಡಿಸಿಕೊಳ್ಳುವುದೇ ಸಿರಿ. ನವಿಲುಗಳ ಕೂಗಿನೊಳಗೆ ಪ್ರವೇಶ ಮಾಡಿದ ಮಡುಗಿನ ಬಡ್ಡೆಯಲ್ಲಿ ಒಂದಷ್ಟು ನೆಲವನ್ನು ತಮ್ಮದಾಗಿಸಿಕೊಂಡ ತರೇದ್ ಗಿಡಗಳಿವೆ.

ಊರಿನ ಅನೇಕರು ಬೇಸಿಗೆ ಬಂತೆಂದರೆ ಈ ಸೌದೆಗೆ ಹೋಗುತ್ತಾರೆ. ಒಂದೊರೆ ತರೇದ್ ಸೌದೆ ತಂದ್ರೆ ಎಂಟ್ದಿನ ಭಂಗ ಇಲ್ಲ ಅಡ್ಗೆ ಮಾಡಕೆ‌. ದೀಪುರ್ದಂಗೆ ಉರಿತವೆ, ಕಾಳಪ್ಲ ಸುಡಕೆ ಈ ಸೌದೆ ಕೆಂಡ ಬಲ್ ಚೆಂದ ಅನ್ನೋ ಮಾತುಗಳನ್ನು ಪ್ರತೀ ಮನೆಯಲ್ಲೂ ಕೇಳಿಕೊಂಡೇ ಬೆಳೆದವಳು ನಾನು.

ಮಳೆಯಕಾಲ ನಮಗೆ ಕಾಣಿಸಿದ ದಿವ್ಯತೆಗಳನ್ನು ಎಷ್ಟಂತ ಹೇಳುವುದು. ತರೇದ್ ಗಿಡದಲ್ಲಿ ಎಮ್ಮೆ ತಪ್ಪಣ್ಣ,ಕೆಂಚ್ಗಾರ ಎಂಬ ಎರಡು ಪ್ರಬೇಧದ ಜೀರ್ಜಿಂಬೆಗಳು ಸಿಕ್ತಾ ಇದ್ವು. ಮಳೆಗಾಲ ಹುಟ್ಟಿತೆಂದರೆ ಇವುಗಳನ್ನು ಹಿಡಿದು ತರಲು ಗಿಡಕ್ಕೆ ಹೋಗುವ ದನಕುರಿಯವರ ಹಿಂದೆ ಬೀಳ್ತಿದ್ವಿ ನಾವು. ಒಂದು ವೇಳೆ ನಾವು ಹೋಗದಿದ್ದರೂ ದನಕುರಿಯವರು ಊರಾಗಿರೋ ಮಕ್ಕಳಿಗೆಲ್ಲ ಜೀರ್ಜಿಂಬೆ ಹಿಡ್ಕಂಬಂದು ಕೊಡರು.

ಖಾಲಿ ಬೆಂಕಿ ಪಟ್ಟಣಗಳಿಗಾಗಿ ಮನೆ ಮನೆ ಸಿದುಕ್ತಾ ಇದ್ವಿ ಜೀರ್ಜಿಂಬೆ ಸಾಕಕೆ.. ಮುಳ್ ಜಾಲಿಸೊಪ್ಪು ತಂದು ಮೇವಿಟ್ಟು ದಿನದರ್ದ ಉದ್ದನೆಯ ದಾರ ಕಟ್ಟಿ ಹಾರುವ ಸ್ವಾತಂತ್ರ್ಯ ನಿಮ್ಮದೇ ಎಂಬಂತೆ ಗುಂಯ್ ಗುಟ್ಟುವ ಇವುಗಳು ರೆಕ್ಕೆ ಬಿಚ್ಚಿದರೆ ನಮ್ಮ ಕಣ್ಣಿಗೆ ಅರ್ಸಾವೆ.

ನಮ್ಮ ಊರಿನ ಕರೇಹನುಮಣ್ಣ ಮಳೆ ಮಾಡ್ವಾತು ಅಂದ್ರೆ ಸಾಕು ಅಲಲಾ ಸ್ವಾಮಿ ರಥ ಏರೆವ್ನೆ, ದಬದಬ ಊರಗ್ಳು ಕೊಳೆ ಕೊಚ್ಕಂಡೋಗಿ ದೊಡ್ಡಳ್ಳ ಹರ್ಯಂಗೆ ಮಳೆ ಉಯ್ದ್ರೆ ಭೂಮ್ತಾಯಿ ಲಕಲಕ ಅಮ್ತಳೆ ನೋಡು ಅಂತೆಲ್ಲಾ ರಾಗಹಿಡ್ದು ಅಂಗಳಕ್ಕೆ ಇಳಿಯೋರು. ಸರಾಪು ಎಚ್ಚಾಗೆಯ್ತೆ ವರ್ಲುತನೆ ಬೀದೆಗೆ ಕುಕಂಡು ಕುಡುಕ್ ನನ್ ಗಡ್ಡೆ ಅಂತ ಅವರ ಹೆಂಡತಿ ಶಿವಕ್ಕ ಮಾಡುವ ಪೂಜೆ ನಮಗೇನು ಜಗಳವೆನಿಸುತ್ತಿರಲಿಲ್ಲ.

ನಮ್ಮನ್ನೆಲ್ಲಾ ಬಾಚಿ ತನ್ನ ತೆಕ್ಕೆಯೊಳಗೆ ಕಾಣಿಸಿಕೊಂಡ ನವಿಲು ಕೂಗೋ ಮಡುಗು, ಬಿದ್ರುಸಿಕ್ಕಿನ ಮಡುಗು, ಗೊಂದಿ ನೇರ್ಲೆಮರ, ತರೇದ್ ಗಿಡ, ಕೆಂಚ್ಗಾರ, ಎಮ್ಮೆತಪ್ಪಣ್ಮ, ಜಾಲಿಸೊಪ್ಪು ಕರೇಹನುಮಣ್ಣ ಎಲ್ಲಾ ಸೇರಿ ಊರು ನಾವು ಭವ್ಯಗೊಂಡು ನಿತ್ಯ ಪೌರ್ಣಮಿಯಾದದ್ದು ಒಂದು ಅನುಭಾವ.

ನವಿಲುಗಳ ಮಡುಗಿನ ಹಸಿರೊದ್ದ ಸುಂದರತೆಯನ್ನು ಮಳೆಯಲ್ಲಿ ನುಗ್ಗಿ ಮಿಂದೆದ್ದು ನಲಿದ ನಮಗೆ ಅಲ್ಲಿ ಜಾತಿ ಎಂಬ ಬರ್ಬರ ಮೃತ್ಯುವೊಂದು ಪ್ರವೇಶಿಸುತ್ತದೆ ಮುಂದೊಂದು ದಿನ ಎಂಬ ಅರಿವೇ ಇರಲಿಲ್ಲ. ಏಳನೇ ತರಗತಿಯವರೆಗೆ ಜೊತೆಗೆ ಆಡಿ ಉಂಡುಟ್ಟು ಬೆಳೆದವರು ಗೆಳತಿ ಮೀನ ನಾನು. ಎಂಟನೇ ತರಗತಿಗೆ ಬರಲೇ ಇಲ್ಲ ಅವಳು. ಬಡತನದ ಕಾರಣ ಮುಂದಿಟ್ಟುಕೊಂಡು ಶಾಲೆ ಬಿಡಿಸಿದರು ಅವಳನ್ನು.

ನಾನು ಪಿಯುಸಿ ಓದುವಾಗ ಒಂದು ದಿನ  ಅಮ್ಮ  ಈ ಬುಡ್ಬುಡ್ಕೇನು ಕೋಳ್ ಕೂಗ ಒತ್ನಗೆ ಬಡ್ಕಮ್ತಾವ್ನೆ ಮ್ಯಾಗ್ಳುರಸ್ತೆತಗಿರೊ ಅಳ್ಳೀಮರುತ್ತಗೆ, ಇವತ್ತು ಅಮಾಸೆ ಊರ್ಗೆ ಏನೋ ಕಾದೈತೆ ಅಂದ್ಕಂಡೆ ನನ್ನ ಎದ್ದಾಳ್ಸಿ ಅಟ್ಟಿಗುಡ್ಸಿ ಬಾಗ್ಲು ಸಾರ್ಸಕೇಳಿರು. ಬುಡ್ಬುಡ್ಕೆರು ಅಂದ್ರೆ ನಮಗೆಲ್ಲ ಅವಾಗ ಭಯ. ವಿಚಿತ್ರ ಮಾತು ಸದ್ದುಗಳಲ್ಲಿ ನಮ್ಮ ಮನಃಶಾಸ್ತ್ರವನ್ನೇ ದುರ್ಬಲಗೊಳಿಸುವ ಶಬುದವೊಂದು ಅವರ ಕೈಬಾಯಿಗಳಿಂದ ಹೊರಬೀಳೋದು.

ಊರ್ ಜನ್ವೆಲ್ಲ ಎದ್ದು ಅಮಾವಾಸ್ಯೆ ಗೆ ಜೊತೆ ಮಾಡಿ ಯಾರ್ಗೇನು ಗ್ರಾಚಾರ್ವೋ? ಅಂದ್ರು. ಅವತ್ತೇ ಕಾಕತಾಳೀಯವೆಂಬಂತೆ ಸರಿಮದ್ಯಾಹ್ನ ಒಂದು ಗಂಟೆಗೆ ಮ್ಯಾಗ್ಲುಕೇರಿ ಆಟ್ಠೆಗೆ ಜೋರು ರೋದನೆ ಕೇಳುಸ್ತು… ಅಮ್ಮ ಅವರಿಂದೆ ನಾವೆಲ್ಲ ಊರೊಳಕೆ ಹೋದ್ವಿ. ಊರ್ ಜನ್ವೆಲ್ಲ ಒಂದೇ ಕಡೆಗೆ ಗುಡ್ಡೇ ಆಕ್ಕಂಡು ಅತ್ತೆತ್ಲನ ಕಾಫಿ ಸೀಮೆ ಕಡಿಕೆ ಓಗಿ ಕೂಲಿನಾಲಿ ಮಾಡಿದ್ರೂ ಆಗದು ; ಒಡೋಗಿ ಲಗ್ನ ಮಾಡ್ಕಂಡವು ತಿರ್ಗ ಇತ್ಯಾಕ್ಬಂದ್ವೋ ಕಾಣೆ ಜೀವಕಳ್ಕಮಕೆ ಹೀಗೆ ತಲ್ಗೊಂದು ಮಾತು.

ರಾತ್ರಿ ನಮ್ಮೂರಿಗೆ ಹನ್ನೊಂದರ ಸುಮಾರಿಗೆ ಒಂದೇ ಬಸ್ಸು ಬಂದು ನಿಂತು ಬೆಳಿಗ್ಗೆ ಏಳಕ್ಕೆ ಹೋರಡೋದು. ಗೌಡ್ರು ರಂಗ ಮೀನಮ್ಮ ಎತ್ಕಡಿಕೋ ಓಗಿ ಮದ್ವೆ ಆಗಿ ರಾತ್ರಿ ಬಸ್ಸಿಗೆ ಬಂದಿದ್ದು ಯಾರೋ ನೋಡಿರಂತೆ ಸುದ್ದಿ. ತಿರುಗ್ದಿನ ನಡುನೆತ್ತಿಗೆ ಹೊತ್ತಿಳ್ದಾಗ ಆಗ್ಲೇ ನವ್ಲು ಕೂಗೋ ಮಡ್ಗಿನ್ ಗಡ್ಡೆಗೆ ಕೊಳ್ಳಗಿರೋ ಊವ್ನಾರನು ತಗಿದಂಗೆ ಕೈಯ್ಯಗೆ ಪಾಲಿಡಾಲ್ ಬಾಟ್ಲುನು ಇಡ್ಕಂಡು ಕುಡ್ದು ಸತ್ತವ್ಳೆ; ಅಯ್ಯೋ ಆ ಮಕ್ದಗೆ ಎದ್ ಬತ್ತಳೇನೋ ಅಂಬಗೈತೆ ಇನ್ನೂ ಕಳೆ. ರಂಗನ ಯಣ ಸಿಕ್ಕಿಲ್ಲ.

ಪೋಲೀಸ್ನರು ಬಂದು ಊರಾಗಿರೋ ದೊಡ್ಡ ರೋಟಿನೆಲ್ಲ ತರ್ಸಿ ಮಡ್ಗಿನ್ ತಳ್ಕತ್ತ ಇಕ್ಕಿ ದೇವಿರು ಯಣ ತೇಲ್ತಿಲ್ಲ ಹೀಗೆಲ್ಲಾ ಸುದ್ದಿ ಮೇಲೆ ಸುದ್ದಿಗಳು. ಸಂಜೆ ಐದರ ವೇಳೆಗೆ ಅವನು ಸಿಕ್ಕ. ಊರೆಲ್ಲ ಸೇರಿ ಕೇಸು ಶವಪರೀಕ್ಷೆ ಏನು ಆಗದಂಗೆ ಎನೇನೋ ಮಾಡಿರು.  ರಾತ್ರಿ ಹತ್ತರ ವೇಳೆಗೆ ಬೆಂಕಿಗಿಟ್ರು ಒಂದೇ ಚಿತೆ ಮೇಲೆ. ಸುಡುವುದರಲ್ಲಿ ಪಳಗಿದ ಜಾತಿಕಠಿಣರು ನಮ್ಮೂರಿನ ಆಸುಪಾಸಿನಲ್ಲಿ ಇದಾರೆ ಅಂತ ತಿಳಿದಿದ್ದೆ ಆಗ.  

ಒಂದು ವರ್ಷದ ತನಕ ಕೊಂದವರೆ ಗ್ವಾಮಾಳ್ಗೆ ಇಸ್ಕಿ ಆವಮ್ಮಣ್ಣಿಗೆ ಒಂದೇ ಸಲ ಉಸ್ರೋಗೆಯ್ತೆ, ರಂಗ ಬಿಡಿಸ್ಕಮಕೋಗಿ ಬಾದೆ ತಾಳಕಾಗ್ದೆ ನೀರಗೆ ಮುಣ್ಗಿ ಪ್ರಾಣಬಿಟ್ಟವ್ನೆ ಎನ್ನುವ ತಲೆಬುಡಗಳು ಸಿಗದ ನೂರಾರು ಅಂತೆಕಂತೆಗಳು ಊರನ್ನು ಆಳಿದವು. ಎಂತೆಂತದೋ ಮದಗಳಿಗೆ ಪ್ರೀತಿಯನ್ನು ಬಲಿಕೊಡುವ ದರ್ದಿಗೆ ಏನು ಹೇಳೋದು?

ನಾವೆಲ್ಲ ಊರಿನ ಹೊರಗಿನ ಅಟ್ಟಿಗಳ ಮನೆಯಲ್ಲಿ ರೊಟ್ಟಿ ತಿಂದದ್ದಕ್ಕೆ ಆ ಮನಗಳ ತುಂಬುಪ್ರೀತಿ ನಮಗಿಳಿದು ಮನುಷ್ಯರಾಗಿ ಚಿಂತಿಸಲು ಆಯಿತು. ಕದ್ರಣ್ಣನ ಗಲ್ಲೇಗುಂಡಿಯೊಳಗಿನ ನೀರಲ್ಲಿ ದಿನ ಬೆಳಗಾದರೆ ನೀರಾಟವಾಡಿದ್ದಕ್ಕೆ ಜಾತಿಧರ್ಮಗಳಾಚೆಗಿನ ನಿಜಬಾಳುನೋಡಲಾಯಿತು.

ನಮ್ಮೂರಿನ ಅನೇಕರ ತೋಟದಲ್ಲಿ ಕಾಯಿಕಿತ್ತುಕೊಡುವ ಬುಡೇನಣ್ಣ ಸಾಕೀರಕ್ಕ,ಹುಸೇನಣಯ ಅವರ ಇಡೀ ಕುಟುಂಬ ನಮಗೆಲ್ಲ ಕೈತುತ್ತು ನೀಡಿಗಲ ಮೇಲೆ ಆಡಿಸಿ ಬೆಳೆಸಿದ್ದಾರೆ. ಬಾಬಣ್ಣನಮ್ಮ ಮನೆಯ ಪಡಸಾಲೆಯಲ್ಲಿ ಕೂರಿಸಿಕೊಂಡು ಹೇಳಿದ ಭಕ್ತಪ್ರಹ್ಲಾದನ ಕಥೆ ಗಾಢವಾಗಿ ಮೈದುಂಬಿದೆ. ಒಳಗೆ ನಿಲ್ಲುವ ಮಹಾಮಾನವತೆ ಹೊತ್ತೇ ಹುಟ್ಟಿದ ಇವರೆಲ್ಲ ರೊಟ್ಟಿ ಪ್ರೀತಿ ಕೊಟ್ಟು ಸಾಕಿದ್ದಾರೆ.

ತಿಳಿನಗು,ಕೆಡುಕಿಲ್ಲದ ಪ್ರೇಮಕೊಟ್ಟ ಇಂಥವರೆಲ್ಲ ಇರುವುದಕ್ಕೆ ಊರಿಗೊಂದು ಮನಸಿದೆ. ಜಮೀನ್ದಾರರ ಮನೆಯಲ್ಲಿ ಹುಟ್ಟಿದರು ಬೆಳೆದಿದ್ದು ಊರಿನೆಲ್ಲ ಪ್ರೀತಿಯಷ್ಟೇ ಇರುವ ಮನೆಗಳಲ್ಲಿ. ಹೊರಗಿನವರು, ಒಳಗಿನವರು ಎಂದೆಲ್ಲಾ ವಿಂಗಡಿಸಿಕೊಂಡು ಬದುಕುವವರ ನಡುವೆಯೂ ನಾವು ಪ್ರೀತಿಯಷ್ಟಕ್ಕೆ ಕಾತರಿಸುವುದನ್ನು ತಿಳಿಸಿದ ಅಮ್ಮ ನನಗೆ ಎಲ್ಲವೂ ಆದರೂ.  ವರ್ಣವರ್ಗ ಪ್ರಜ್ಞೆ ಯಾರೊಳಗೆ ಮಾಯೆಯ ಮುಖಧರಿಸಿ ನುಸುಳಿತೋ ಕಾಣಲ್ಲ.

ಮಮತೆಕೊಟ್ಟ ಹಿರಿಜೀವಗಳ ಅರಿವು ಇನ್ನೂ ಇದೆ ನನ್ನ ಊರಲ್ಲಿ. ಈ ಕಾರಣಕ್ಕಾಗಿ “ಗ್ರಾಮಾಯಣ” ವನ್ನು ಮತ್ತೆ ಮತ್ತೆ ಓದುತ್ತೇನೆ.  ಮೀನ ರಂಗನಾಥನನ್ನು ತಿಂದು ತೇಗಿದವರ ಚಿತ್ರಗಳು ಮಾತ್ರ ಅಳಿಸುತ್ತಿಲ್ಲ. ಇದಕ್ಕಾಗಿ ನವಿಲುಗಳನ್ನು ಈಗಲೂ ಕರೆಸಿಕೊಳ್ಳುವ ಮಡುಗು ಅದೇಕೋ ಭಯಕಾಣಿಸುತ್ತದೆ.

ಮನುಷ್ಯರೊಳಗಿನ ಬರ್ಬರತೆಯನ್ನು ನಿಸರ್ಗವೇ ಹೊರಬೇಕ? ಮನೆಯಂತಿದ್ದ ಮಡುಗಿಗೆ ಜಾತಿಯ ಮರಣ ಬಳಿದವರು ಸತ್ತುಹೋಗಿದ್ದಾರೆ ಈಗ.  ಅನಂತವಾಗುತ್ತಲೇ ನಡೆಯುವ ಪ್ರೇಮ ಮಾತ್ರ ಸಾಯುತ್ತಲೇ ಇದೆ. ಭವರೋಗಗಳ ಮಾಲಿನ್ಯವನ್ನು ತಡೆಯಲು ಇನ್ನೆಂಥ ಹೋರಾಟಗಳು ನಡೆಯಬೇಕೋ ಈ ಪೃಥ್ವಿಯಲ್ಲಿ…

October 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ನಿಮ್ಮ ಬರಹ ಓದೋದೇ ಒಂದು ಹಬ್ಬ..ಹಳ್ಳಿಕೇರಿ ತಿರ್ಗಾಡಿ ಬಂದಂಗೆ.. ನಾಯಿನೇರ್ಲೆಗೆ ನಮ್ಮೂರ ಕಡೆ ಕುನ್ನೇರಲೆ ಅಂತೇವೆ.. ಜೀರ್ಜಿಂಬೆ ಕಂಡ್ರೆ ಹೆದ್ರತಿದ್ದೆ ನಾನು…
    ಉತ್ತಮ ಬರಹ

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಥ್ಯಾಂಕ್ಸ್ ರೇಣುಕಾ ಮೇಡಂ.

    ಪ್ರತಿಕ್ರಿಯೆ
  3. Kavishree

    ತಾತ ಹಿಡಿದು ತಂದ ಜೀರಜಿಂಬೆಗೆ ಬೆಂಕಿ ಪೊಟ್ಟಣಕೆ ಜಾಲಿ ಸೊಪ್ಪು ಹಾಕಿ ಇಟ್ಟು ಬೆಳಿಗ್ಗೆ ಎದ್ದು ಮೊಟ್ಟೆ ಇಟ್ಟಿದೆಯ ಎಂದು ನೋಡುವ ಕುತೂಹಲ, ಜೀರಜಿಂಬೆಗೆ ದಾರ ಕಟ್ಟಿ ಹಾರಿಸುವ ಸ್ಪರ್ಧೆ ನಡೆಯೋದು ಅದು ಆರೋದು ತಡಮಾಡಿದರೆ ಅದರ ಕಾಲ ಬೆರಳಿನಿಂದ ಹೊತ್ತಿದರೆ ಬೇಗ ಆರೋದು ಅಂತ ಸಂಭ್ರಮ ದ ಕಾಲ ಅನುಭವಿಸಿದ ನಾವೆ ಪುಣ್ಯವಂತರು ನಮ್ ಮಕ್ಕಳಿಗೆ ಅಂತ ಯೋಗ ಇಲ್ಲ.

    ಪ್ರತಿಕ್ರಿಯೆ
  4. Vishwas

    “ವಿವಿಧತೆಯಲ್ಲಿ ಏಕತೆ”. ನವಿಲು ಕೂಗೋ ಮಡುಗಿನ ಬದಿಗಿರುವ, ಬಿದ್ರುಸಿಕ್ಕಿನ ಮಡುಗೆಂಬ ಜಾತಿ, ಊರಿನ ಹೃದಯದಂತಿರುವ ದೊಡ್ಡಳ್ಳವೆಂಬ ಜಾತಿ, ನೇರಳೆ ಮರಗಳೆಂಬ ಜಾತಿ, ಮುಳ್ಳಿನ ವಸ್ತ್ರ ಧರಿಸಿದ ಸೀಗೇಕಾಯಿ ಮೆಳೆಗಳೆಂಬ ಜಾತಿ, ತರೇದ್ ಸೌದೆ ಎಂಬ ಜಾತಿ, ಎಮ್ಮೆ ತಪ್ಪಣ್ಣ,ಕೆಂಚ್ಗಾರ ಜೀರ್ಜಿಂಬೆಗಳೆಂಬ ಜಾತಿ. ಇಷ್ಟೆಲ್ಲಾ ಜಾತಿಯವರನ್ನು, ಪ್ರಕೃತಿ ತನ್ನ ಮಡಿಲಿನಲ್ಲಿ ಮುದ್ದಾಗಿ ಸಾಕುತ್ತಿರುವ ತಾಯಿತನವನ್ನು ನೋಡಿ ಎಷ್ಟೆಲ್ಲಾ ಕಲಿಯಬಹುದೆಂದು, *ಅಕ್ಕನ ಲೇಖನವು* ತನ್ನ, ‘ಪದ ಕಂಠ’ದಿಂದ ಕೂಗಿ ಕರೆದು ಹೇಳಿದೆಂತನಸಿತು ನನಗೆ. ಎಲ್ಲರನ್ನೂ ಸಾಕುತ್ತಿರುವ ಪ್ರಕೃತಿಯು, ತನ್ನಲ್ಲಿ ಮನುಷ್ಯನೆಂಬ ಜಾತಿಗೂ ನೆಲೆ ಕೊಟ್ಟಾಗ, ಅವನು ಪ್ರೀತಿ ಎಂಬ ಮಗುವನ್ನು ಮಗುವಿನಂತಲ್ಲದೆ, ಮೃಗದಂತೆ ನೋಡುವುದೆಷ್ಟರವರೆಗೂ ಸರಿ??! ನಾವು ಇದನ್ನು ಯೋಚಿಸಿದಾಗ ನಮ್ಮಲ್ಲಿ ಕಾಡುವ, ಉತ್ತರ ಗೊತ್ತಿದ್ದರೂ, ಉತ್ತರಿಸಲಾಗದ ಪ್ರಶ್ನೆಗಳು ಇಂತಿವೆ.

    ಮಯೂರರನ್ನೇ ಮನದಾಳದಿಂದ ಮನೆಮಾಡಿಕೊಳ್ಳುವ ಮನೋಬಲವಿರುವ ಮಡುಗಿಗೆ, ಜಾತಿವಾದವೆಂಬ ಮರಣಾಯುಧದ ಬಿಸಿಯನ್ನು ತಗ್ಗಿಸಲು, ಪ್ರೀತಿ ಪರಿವಾಳದ ರಕ್ತವು ಬೇಕಾದೀತೆ??!

    ಮೀನಾ, ರಂಗಾರ
    ಮರಣದಿಂದ ಮೈಲಿಗೆಯಾದ ಮಡುಗನ್ನು ಮಡಿಮಾಡಲಾಗುವುದೇ??!

    ಪ್ರೇಮಿಗಳ ಸತ್ತದ್ದು ಆತ್ಮಹತ್ಯೆಗಿಡಾಗಿದ್ದರಿಂದಲೇ ಇರಬಹುದು, ಆದರೆ ಆತ್ಮಹತ್ಯೆ ಅಲ್ಲ! ಅದು ಕೊಲೆ, ಬರ್ಬರವಾದ, ಜಾತಿಕಠಿಣತೆ ಎಂಬ ರಕ್ಕಸನು ಮಾಡಿರುವ ಕೊಲೆ. ಅದು ಪ್ರೇಮಿಗಳ ಸಾವಲ್ಲ, ಪ್ರೇಮದ್ದೇ ಸಾವು.

    ಇವುಗಳಿಗೆ ಉತ್ತರ ಸಿಗಲು, ಜಾತಿ ಎಂಬ ಕೊಳಕು ಕಳೆದು, ಜ್ಞಾನವೆಂಬ ಬೆಳಕು ಬೆಳಗಲು, ಕಠಿಣ ಶಿಕ್ಷಣವೆನೂ ಬೇಕಿಲ್ಲ,
    ಅಕ್ಕನ ಲೇಖನವನ್ನು ಓದಿದರೆ ಸಾಕು.

    ಪ್ರತಿಕ್ರಿಯೆ
  5. N.Ravikumar telex

    ಅಬ್ಬಬ್ಬಾ ಅದೆಂತ ಬೆರಗಿನ ಬರಹ..ನಿಜಕ್ಕೂ ಕನ್ನಡ ಬರಹ ಲೋಕಕ್ಕೆ ಭಿನ್ನ ಆಯಾಮವೊಂದು ದಕ್ಕಿದಂತಾಗಿದೆ. ಮೇಡಂ. ಅವಧಿಗೆ ಧನ್ಯವಾದಗಳು .ಇಂತಹ ಬದುಕ ಬರಹ ದರ್ಶಿಸಿದ್ದಕ್ಕೆ

    ಪ್ರತಿಕ್ರಿಯೆ
  6. ಗೀತಾ ಎನ್ ಸ್ವಾಮಿ

    ಧನ್ಯವಾದಗಳು ರವಿಯಣ್ಣ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: