ಮೂರು ಸಾನೆಟ್ಟುಗಳು
ಹೃದಯಶಿವ
ಸೂರ್ಯ ಸಾಯದ ಹೊರತು
ತಲೆಕೆಟ್ಟ ಬುಗುರಿ ತಾ ತಿರುತಿರುಗಿ ಸುಸ್ತಾಗಿ
ನೆಲಕೊರಗಿದಂತೆ ಈ ನಿಂತ ಬದುಕು. ನಿಗಿ ನಿಗಿ
ಸೂರ್ಯನಡಿಯೂ ನಡುಗಿ ತಣ್ಣಗಾಗಿರೆ ಹೃದಯ
ಮಡಿದ ಭಾವಗಳೀಗ ನಾರುವಂತಹ ಸಮಯ.
ನಿಟ್ಟುಸಿರಿನೇಕಾಕಿ ಸುಯ್ಲು ಗಾಳಿಯ ತುಂಬ
ಗೆದ್ದ ದೊಡ್ಡಸ್ತಿಕೆಯೊಳೆನಿತು ಕಾಲಕೆ ಜಂಬ.
ಸೂರ್ಯ ಸಾಯದ ಹೊರತು ರಾತ್ರಿ ಜನಿಸುವುದಿಲ್ಲ;
ಕತ್ತಲೊದಗುವವರೆಗೆ ಇಲ್ಲ ನನಗುಳಿಗಾಲ
ಎಲ್ಲಿ ಜಗ ಮಲಗುವುದೊ ಇರುಳ ಜೋಗುಳದನಿಗೆ,
ಅಲ್ಲೆಳೆಯಬಹುದು ನಾ ಕಾವ್ಯಬರೆ ಶಶಿಯೆದೆಗೆ.
ನಾಯಿಗಳು ಊಳಿಡಲು ದಟ್ಟಮೌನವ ಸೀಳಿ
ಓ ಎನದಿರವು ಸೀದೆದೆಯ ಭಾವಗಳು ಕೆರಳಿ.
ಸೂರ್ಯ ಸಾಯದ ಹೊರತು ರಾತ್ರಿ ಜನಿಸುವುದಿಲ್ಲ;
ಕತ್ತಲೊದಗುವವರೆಗೆ ಇಲ್ಲ ನನಗುಳಿಗಾಲ.
.
ಒಂದು ಮಾತು
ಗದ್ದೆಯಲಿ ಕಳೆಯು, ತೆನೆಯನು ನೋಡಿ ಸಿಟ್ಟಿನಲಿ
ಬರಿ ಜೊಳ್ಳುಭತ್ತವೆನ್ನಲು, ಮುಖಭಂಗವೇನು
ತೂಗುವ ತೆನೆಗೆ? ಧೂರ್ತ ಕಿವಿಮುಚ್ಚಿ ಕಿಚ್ಚಿನಲಿ
ಬಣ್ಣವಿಲ್ಲದ ನನ್ನ ನೇರನುಡಿ ಸಹಿಸದಿರೆ
ನಿಲ್ಲುವುದೆ ನುಡಿವ ನಾಲಿಗೆ? ನಾನೆಂತು ಬಲ್ಲೆ!
ನಾನೊಬ್ಬ ಹುಂಬ! ಗಾಳಿಯಾಲಿಸುವುದು ಬಿಡಿ,
ಪ್ರತಿಯಾಗಿ ಲಿಂಗ ತಾ ಅಹುದಹುದು ಎನಲೊಮ್ಮೆ
ಮೆಚ್ಚಿ ನನ್ನೊಳನುಡಿಯ ನಿಷ್ಠೆಯನು; ಹಾಗೇನೆ
ತಲೆಯೆತ್ತಿ ನಡೆಯುವುದು ಸತ್ಯ ತಾ ಜಂಬದಲಿ-
ಸಾಕೆನಗೆ, ಬಹುಮಾನವದು ನುಡಿವ ನಾಲಿಗೆಗೆ.
ಉರುಳುವುದು ಕಾಲ; ಉಳಿಯುವುದು ನುಡಿ ಸ್ಥಿರವಾಗಿ.
ನನಗಿಲ್ಲ ಗರ್ವದಂಟಿನ ನಂಟು; ತೆರೆಯುವೆನು
ನನ್ನೆದೆಯ ಬಾಗಿಲನು; ಸಹಜಗತಿಯ ಮಿಡಿತ
ನೆತ್ತರಲಿ ಓಡುವುದು ವಿಶ್ರಾಂತಿ ಇರದಂತೆ.
.
ರಾಜಿಗಿದು ಶುಭಕಾಲ
ನೀನಲ್ಲಿ ನಾನಿಲ್ಲಿ ನಡುವಲ್ಲಿ ಜೋಕಾಲಿ
ತೂಗುತ್ತಲಿರೆ ಕಾಲ ತೂಕಡಿಸುತಿದೆ ಪ್ರೀತಿ
ಅಪಶ್ರುತಿಯ ಹಾಡಲ್ಲಿ ತುಯ್ಯುತ್ತಲಿರೆ ದುಗುಡ
ಸಿಡಿಯುತ್ತಲಿದೆ ಹೃದಯ ತುಟಿಬಿಚ್ಚು ಸಂಗಾತಿ
ಕಟ್ಟಿದಾ ಕನಸುಗಳೆ ಕಟ್ಟಿಗೆಯು ಬಾಳೊಲೆಗೆ
ಕುದಿಕುದಿಯುತಿರೆ ಕಂಬನಿಯ ಪಾತ್ರೆಯೊಳು ಮನಸು
ಚೆಲುಗೆನ್ನೆಮೇಲೆ ತಾ ಸರಿಹೊಂದುವುದೆ ಕೆಂಡ
ಸರಿಸಿ ಇನ್ನಾದರೂ ಬಿಡು ನೀನು ಕಡುಮುನಿಸು
ಹಾದಿ ಉಳಿದಿರೆ ಬಾಕಿ ನಿಂತು ಬಿಟ್ಟರೆ ಹೇಗೆ
ಕೂಡಿ ಹಾಕುವ ಹೆಜ್ಜೆ ರಾಜಿಗಿದು ಶುಭಕಾಲ
ಮರೆತು ಬಾಳುವೆವೆಂಬ ಕಲ್ಪನೆಯೆ ಹಸಿಸುಳ್ಳು
ನೋಡದೋ ಬೆನ್ನಿಗಿದೆ ನೆನಪುಗಳ ಹಿಂಜೋಲ
ಒಂದಾಗಿ ಬದುಕೋಣ ಬಾ ಗೆಳತಿ ನಾಲ್ಕು ಚಣ
ಸಾವು ಕಟ್ಟಿದ ಬುತ್ತಿ ಬಿಚ್ಚಬೇಕೊಂದುದಿನ









ತಲೆಕೆಟ್ಟ ಬುಗುರಿ ತಾ ತಿರುತಿರುಗಿ ಸುಸ್ತಾಗಿ
ನೆಲಕೊರಗಿದಂತೆ ಈ ನಿಂತ ಬದುಕು. ಎಷ್ಟು ಚಂದ ಇವೆ ಎಲ್ಲ ಸಾನೆಟ್ ಗಳು.
ಅಧ್ಬುತ 🙂
ಮೂರೂ ಚೆನ್ನಾಗಿವೆ. ಮೂರನೆಯ ಪದ್ಯ, “ರಾಜಿಗಿದು ಶುಭಕಾಲ” ಹೆಚ್ಚು ಚೆನ್ನಾಗಿದೆ..:)
Hridaya Shiva ಒಂದಕ್ಕಿಂತ ಒಂದು….YES YES YES ರಾಜಿಗಿದು ಶುಭಕಾಲ! 🙂 (Y)
ಆಹಾ….ಚೆಂದವೋ ಚೆಂದ 🙂
ಚೆಂದ ಒಂದಕ್ಕಿಂತ ಒಂದು- ಎಂದು ನಾನು ದನಿಗೂಡಿಸುತ್ತೇನೆ
ರಾಜಿಗಿದು ಶುಭಕಾಲ : bahaLa ishtavaaytu 🙂
raajigidu shubakaala mattu ondu maatu thumba chennagive
ಸೂರ್ಯ ಸಾಯದ ಹೊರತು ರಾತ್ರಿ ಜನಿಸುವುದಿಲ್ಲ;
ಕತ್ತಲೊದಗುವವರೆಗೆ ಇಲ್ಲ ನನಗುಳಿಗಾಲ….
ee saalugalu nanna jeevanakku thumba hatthiravagiddavu, bt nanage helalalu aagade gantalalle ulida maathugalannu hrudaya shiva avara saalugalalli kande
nice..koneyadu tumbaa chennagide.
ಎಲ್ಲವೂ ಬಹಳ ಚೆನ್ನಾಗಿದೆ.
ಓದಿದ, ತಿದ್ದಿದ, ಇನ್ನಷ್ಟು ಬರೆಯಲು ಉತ್ತೇಜಿಸಿದ ಎಲ್ಲರಿಗೂ ಧನ್ಯವಾದಗಳು…