ಅಶ್ಫಾಕ್ ಪೀರಜಾದೆ
ಅವಳಿಗೀಗ ತಾಳ್ಮೆಯೂ ಇಲ್ಲ
ಸಖಿಯಲ್ಲವಳು ಸಾಕಿ ಅಂದರೆ
ಆಧುನಿಕ ಕಾಲದ ಬಾರ್ ಹುಡುಗಿ
ಈ ಸಾಕಿ ಮೋಡಿಗೆ ಸೋತ ಕವಿ
ಅವಳ ಹಿಂದೆ ಅಕ್ಷರಗಳು ಹಿಡಿದು
ನಡೆದು ಬಿಟ್ಟ ಅವಳ್ಯಾರು ಏನು
ಒಂದೂ ಯೋಚಿಸದೆ..
ಯಾರದೋ ಪರಿಕಲ್ಪನೆ ಕಡ ಪಡೆದು,
ತನ್ನ ವ್ಯಾಪಾರ, ಲಾಭಗೋಸ್ಕರ
ಬಾರೊಡೆಯ ತಂದುರಿಸಿದ ಚೆಂದದ
ಚಂದಿರ ಮನೋರಂಜನೆಯ ಸರಕು
ಪಾಪ ಅವಳಿಗೇನೋ ಅನಿವಾರ್ಯತೆ..
ಕವಿಗೆ ಮೊದಲೇ ನಶೆ
ಕುಡಿಯವ ಜರೂರತ್ತೇ ಇಲ್ಲ
ಈ ನರಕ ನಗರದಲ್ಲಿ ಒಂಟಿ
ಎದೆಗಾಯಗಳೆ ಅವಳ ಸಂಗಾತಿ
ಬದುಕು ಒಂದು ದಂತ ಕತೆ..
ಮೈತುಂಬ ಹುಲಿಯುಗುರು
ಕೆತ್ತಿದ ನೆತ್ತರ ಕಲೆಯ ಚಿತ್ರ
ಕಣ್ಣಿಂದ ಜಾರುವ ಒಂದೊಂದು
ಅಶ್ರುಬಿಂದುವಿನ ಹಿಂದೆ ಕುಟುಂಬದ
ಹಸಿದ ಉದರಗಳ ರೋದನ
ಶಾಪಗ್ರಸ್ತ ವೃದ್ಧ ರೋಗಜೀವಗಳ
ಜೀವನ್ಮರಣದ ಪ್ರಶ್ನೆಯಿದೆ
ಇದೆಲ್ಲ ಕವಿ ಕಣ್ಣಿಗೆ ಕಾಣುವುದಿಲ್ಲ
ಅಗೋಚರ ಉರಿಯೋ ಬೆಂಕಿ
ಅವಳ ನರನಾಡಿಗಳಲ್ಲಿದೆ..
ವಿರಹ ಕುಡಿದ ಹುಸಿ ಅಮಲಿನಲಿ
ಬಡಿಬಡಿಸುವ ಕವನ ಕನವರಿಕೆ
ನಮ್ಮದೇ ಗ್ರೇಟೆನ್ನುವ ನಮ್ಮ
ದುಕ್ಕದುಮ್ಮಾನದ ವಾದ
ಅವಳಿಗೆಲ್ಲಿ ಮುಟ್ಟಬೇಕು ಮೊದಲಿನಂತೆ
ಜಫರ್ ಮೀರ ಗಾಲೀಬರು
ನಿವೇದಿಸಿದೆಲ್ಲ ಕೇಳಲು ಸಾಕಿ
ಇಲ್ಲಿ ಹೃದಯ ಗೆಳತಿಯಲ್ಲ
ಅವಳಿಗೀಗ ತಾಳ್ಮೆಯೂ ಇಲ್ಲ
ದಿಲ್ಲಬರ್ ದಿಲ್ಲರುಬಾ
ಹಮ್ಮದಂ ದೋಸ್ತ ಯಾರು ಅಲ್ಲ
ನಗುವ ಮುಖವಾಡದ ಹಿಂದೆ
ತನ್ನ ನೋವು ಬಚ್ಚಿಟ್ಟು ನಗುವ
ಪಕ್ಕಾ ಪ್ರೊಫೆಷನಲ್ ಪ್ರ‍್ಯಾಕ್ಟಿಕಲ್
ಪವರ್ ಫುಲ್ ವುಮನ್
ತನ್ನ ಕಾಯಕಕ್ಕೆ ಮಾತ್ರ ನಿಷ್ಟಳು
ಮಧು ಬಟ್ಟಲಿಗೆ ಮದ್ಯ ಸುರಿಯುವುದಷ್ಟೆ
ಅವಳ ಕೆಲಸ, ಸುರೆ ಜತೆ ಕಿಕ್ ಕೊಡುವ
ಕಿರುನಗೆ ಮಾತ್ರ ಫ್ರೀ ಇರಬಹುದು
ಅದರಲ್ಲೆ ಕವಿ ಕವಿಗನಸು ಎಲ್ಲ
ಕೊಚ್ಚಿ ಹೋಗಬೇಕಷ್ಟೆ;
ಭಾವನೆಗಳಿಗೆ ಸ್ಪಂದಿಸುವ, ದಾಹ ನಂದಿಸುವ
ಎಲ್ಲ ಸಹಿಸುವ ಹಳೆಕಾಲದ ಸಾಕಿಯಂದೇ
ಭ್ರಮಿಸಿ ಕಪೋಕಲ್ಪಿತ ಮಧುಶಾಲೆಯಲ್ಲಿ ಕುಳಿತು
ಕನ್ನಡದ ಶಾಯರಿ ಗಜಲಗಳೆಲ್ಲ
ನಿವೇದಿಸಲು ಹೋದರೆ ಕೇಳರ‍್ಯಾರು ಗೆಳೆಯಾ
ಶಾಯರಿಯ ಒಂದೂ ಶಬ್ಧ ಸಹ
ಅವಳ ಕಿವಿಯಲ್ಲಿ ವಿರಮಿಸುವದಿಲ್ಲ
ಕವಿಭಾವ ಅವಳ ಹೃದಯ ಕದ ತಟ್ಟುವದಿಲ್ಲ
ಅವಳು ಇದಕ್ಕೆಲ್ಲ ಸ್ಪಂದಿಸುವುದೇ ಇಲ್ಲ
ಕವಿ ಹಾಡಿದೆಲ್ಲ ವ್ಯರ್ಥ ಶ್ರಮ ಏಕೆಂದರೆ
ಕವಿತೆ ಅವಳೊಡಲ ಬೆಂಕಿ ತಣ್ಣಗಾಗಿಸುವದಿಲ್ಲ
ಹಾಡು ಹೃದಯ ಕಣ್ಣೀರು ನಿಲ್ಲಿಸುವುದಿಲ್ಲ
ಅದು ಅವಳಿಗೂ ಚೆನ್ನಾಗಿ ಗೊತ್ತಿರುವ ವಿಷಯ !






ತುಂಬಾ ಚೆನ್ನಾಗಿದೆ
ಧನ್ಯವಾದಗಳು