ಕಡಲ ಅಲೆಗಳ ಲೆಕ್ಕ ಹಾಕುತ್ತಾ…

ಶ್ರೀದೇವಿ ಕೆರೆಮನೆ

ನಿನ್ನೂರ ಜಾತ್ರೆ

ಏಕೋ ನಿನ್ನೂರಲ್ಲಿ
ಜಾತ್ರೆ ಎಂದು ತಿಳಿದಾಗಲೆಲ್ಲ
ಒದ್ದಾಡುತ್ತದೆ ಹೃದಯ ವಿಲಿವಿಲಿ
ಯಾರಲ್ಲೂ ಹೇಳಲಾಗದ,
ಹೇಳಿದರೂ ಕೇಳಿದವರೆಲ್ಲ
ಕೈ ತೋರಿಸಿ ಕೇಕೆ ಹಾಕಿ ನಗುಬಹುದೆನ್ನುವ
ಭಯಕ್ಕೆ ಕಣ್ಣೀರು
ಒಳಗೊಳಗೇ ಇಂಗಿ ಹೋಗುತ್ತದೆ
ಅಲ್ಲೆಲ್ಲೋ ದೂರದಲ್ಲಿರುವ ಊರವಾಸಿಗಳೆಲ್ಲ
ಜಾತ್ರೆಯ ನೆಪಕ್ಕೆ
ಊರಿಗೆ ಬರುವುದನು ಹೇಳುವಾಗಿನ
ನಿನ್ನ ದನಿಯ ಸಂಭ್ರಮಕ್ಕೆ
ನಡುಗುತ್ತದೆ ಮನಸ್ಸು ಚಾಟಿ ಏಟು ತಿಂದಂತೆ
ಊರಿಗೆ ವರ್ಷಕ್ಕೊಮ್ಮೆ ಬರುವವರಲ್ಲಿ
ಯಾರ್ಯಾರು ಇದ್ದಿರಬಹುದು
ಎಂದು ಯೋಚಿಸುತ್ತ

ಆದರೂ ಕಡಲ ಅಲೆಗಳನ್ನೆಲ್ಲ
ಒಂದೊಂದಾಗಿ ಎಣಿಸಿ ಲೆಕ್ಕ ಹಾಕುತ್ತ
ಕಲ್ಪಿಸಿಕೊಳ್ಳುತ್ತೇನೆ ನೀನು ಜಾತ್ರೆಗೆಂದು
ಓಡಾಡಬಹುದಾದ ಸ್ಥಳಗಳನ್ನೆಲ್ಲ
ಜೊತೆಗೆ ಗೋಲಿಯಾಡಿದ ಗೆಳೆಯ
ನಗುತ್ತ ಪಂದ್ಯದಲ್ಲಿ ಸೋತು
ಕಳೆದುಕೊಂಡ ಗೋಲಿಗಳನ್ನೆಲ್ಲ ಕೇಳುತ್ತಿರಬಹುದು ವಾಪಸ್ಸು
ಬಡ್ಡಿ ಲೆಕ್ಕದಲ್ಲಿ
ಹೆಗಲ ಮೇಲೆ ಕೈ ಹಾಕಿ
ಹೈಸ್ಕೂಲಿನ ಸ್ನೇಹಿತನೊಬ್ಬ
ಅಂದು ವಿನಾಕಾರಣ ಆಡಿದ ಜಗಳಕ್ಕೆ
ಪ್ರಾಯಶ್ಚಿತ್ತವೆಂಬಂತೆ ಕರೆದೊಯ್ಯಬಹುದು
ಬೈಟೂ ಚಹಾ ಕುಡಿಯಲು
ಕಾಲೇಜಿನಲ್ಲಿ ಎಲ್ಲಾ ಒಳಗುಟ್ಟುಗಳನು
ಹಂಚಿಕೊಂಡ ಜೀವದ ಗೆಳೆಯ
ನಗುತ್ತಿರಬಹುದು ಪಕ್ಕೆ ತಿವಿದು
ಅಂದಿನ ಹುಡುಗಾಟಕ್ಕಾಗಿ

ಇತ್ತ ನಿನ್ನ ಕಣ್ಣುಗಳೂ ಹುಡುಕುತ್ತಿರಬಹುದು
ಯಾರು ಜೊತೆಗಿದ್ದರೂ ಎಡಬಿಡದೇ
ಎಲ್ಲಿದ್ದರೂ ಊರಜಾತ್ರೆಗೆಂದು ಬಂದೇ ಬರುವ
ಮೊದಲ ಪ್ರೇಮದ ಸವಿನೆನಪಿಗಾಗಿ
ನಿನ್ನನ್ನೇ ಹುಡುಕುವ ಬಾಡದ ಕಂಗಳಿಗಾಗಿ

ತಿಳಿದಿದೆ ನನಗೆ
ವರುಷ ಹನ್ನೆರಡು ಕಳೆದರೂ
ಮಸುಕಾಗದ ಪ್ರೀತಿಯ ಕುರಿತು
ಪದೇಪದೇ ಹೆಮ್ಮೆಯಿಂದ ಹೇಳುವ ನಿನ್ನ ಮಾತುಗಳಿಂದಲೇ
ವರುಷಗಳಿಂದ ನೋಡದಿದ್ದರೂ
ನಿನ್ನೆಯಷ್ಟೇ ಜೊತೆಗಿದ್ದ
ಬೆಚ್ಚನೆಯ ಭಾವ ಹೊಮ್ಮಿಸುವ ಒಲವು
ನಿನ್ನಂತರಾಳವ ಆವರಿಸಿದ ಪರಿಯ ಬಗ್ಗೆ
ಎಂದೂ ಬಾಡದ ಪ್ರೇಮವೆಂದು
ಎದೆಮುಟ್ಟಿ ಅನುಭವಿಸುವ ತನ್ಮಯತೆ ಕುರಿತು
ಈ ಒಂದು ದಿನಕ್ಕಾಗಿ
ವರ್ಷಪೂರ್ತಿ ಉಸಿರು ಬಿಗಿಹಿಡಿದು
ಕಾಯುತ್ತೇನೆ ಎನ್ನುವ
ನಿನ್ನ ಕಾತರತೆಯ ಆಳದ ಒನಪು
ಇರಿಯುತ್ತದೆ ಎದೆಯನ್ನು ಇಂಚಿಂಚಾಗಿ

ಅದಕ್ಕೆಂದೇ ನವೆಯುತ್ತೇನೆ ಒಳಗೊಳಗೇ
ಅದು ಗತ, ಇದು ವಾಸ್ತವ ಎನ್ನುವ
ನಿನ್ನ ಅಭಯಕ್ಕೂ ಮೀರಿ ತಹತಹಿಸುತ್ತೇನೆ
ಕಾದ ಎಣ್ಣೆ ಕೊತಕೊತ ಕುದಿಯುವಂತೆ
ನಿನ್ನೂರ ಜಾತ್ರೆಗೆ
ನೀನು ಸಂಭ್ರಮಿಸುವ ರೀತಿಗೆ

ಬೇಡಿಕೊಳ್ಳುತ್ತೇನೆ ಮತ್ತೆ ಮತ್ತೆ ಬೆಚ್ಚಿ ಬೀಳುತ್ತಲೇ
ನಿನ್ನೂರ ಯುಗಪುರುಷನಿಗೆ
ಹೊರುತ್ತೇನೆ ಹರಕೆ
ಹಣ್ಣು ಕಾಯಿ ಪಚ್ಚ ಕರ್ಪೂರ
ನನ್ನೂರ ಕಡಲ ಮೀನನು
ಬಿಟ್ಟು ಬಿಡುವ ಆಮಿಷವನೂ ಒಡ್ಡುತ್ತ
ನೂರೊಂದು ರೂಪಾಯಿ ಮುಡಿಪು ಕಟ್ಟಿ
ಒಂದು ಬಾಟಲಿ ಸಾರಾಯಿ
ಏಳುಕಟ್ಟು ಬೀಡಿ ಉಡಿ ತುಂಬಿಸುವ
ಒಪ್ಪಂದ ಮಾಡಿಕೊಳ್ಳುತ್ತೇನೆ
ನನ್ನೂರಿನ ಕಾಳಿ ತಟದ
ಖಾಪ್ರಿ ರಾಜನೆಂಬ
ಸಾಗರವ ದಾಟಿ ಗುಳೆ ಬಂದ ದೇವನಿಗೆ
ಮುಂದಿನ ವರುಷ ಆಗದೇ ಹೋಗಲಿ
ನನ್ನನ್ನು ಏಕಾಂಗಿಯಾಗಿಸುವ ನಿನ್ನೂರ ಜಾತ್ರೆ..

‍ಲೇಖಕರು avadhi

September 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ. ಪ್ರಾಂಶುಪಾಲರು

    ಶ್ರೀದೇವಿ ಕೆರೆಮನೆ ಮೇಡಂ ಅವರ ಕವಿತೆ ಒಳಸ್ಮರಣೆಯ ಗದ್ಯವನ್ನು ಓದಿದಂತಾಯ್ತು…ಕವಿತೆಗಳ ಆತ್ಮ ತುಂಬಿದ ತುಡಿತವೊಂದನ್ನು ಮತ್ತೆ ಮತ್ತೆ ಒಳಗಿನ ಹುಡುಕಾಟದಲ್ಲಿ ಮರುಸೃಷ್ಟಸಿಕೊಳ್ಳುವಂತ ವಿಶೇಷಣವನ್ನು ಧರಿಸಬೇಕಾಗುತ್ತದೆ. ಇಲ್ಲಿಯ ವಿವರಗಳು ಸಾಧಾರಣವಾಗಿ ಭಿನ್ನ ಸಂಸ್ಕೃತಿಯ ಪ್ರವರಗಳನ್ನು ಬಲ್ಲ ದೇಸಿ ಮನಸ್ಸುಗಳ ಆಂತರ್ಯವನ್ನು ಮೆತ್ತಿಕೊಳ್ಳುವ ಗುಣವಾಚಕಗಳೇ ಆಗಿರುತ್ತವೆ. ದಟ್ಟವಾದ ಕವಿತೆಯಾಗಲು ಇನ್ನೊಂದಿಷ್ಟು ಕಸುವು ಬೇಕಾದೀತು.

    ಪ್ರತಿಕ್ರಿಯೆ
  2. T S SHRAVANA KUMARI

    ಕವಿತೆಯ ಆಶಯ ನನಗೆ ಅರ್ಥವಾಗಲಿಲ್ಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: