ಹೂವಿನ ಹಾರವನ್ನು ಹೊಂಗೆಯ ಮರಕ್ಕೆ ನೇತು ಹಾಕಿದೆ…

ನಿಜಶರಣ ವಿಶ್ವನಾಥ್

——

ಕೆಸಿ ರಘು ಅವರನ್ನು ಕೊನೆಯದಾಗಿ ನೋಡಲೆಬೇಕೆನಿಸಿತು. ಹಾಗನಿಸಲು ಅನೇಕ ಕಾರಣಗಳಿವೆ. ಒಂದು ಕಾರಣವನ್ನು ಈ ಇಲ್ಲಿ ಹೇಳಬೇಕಿನಿಸದೆ.

ನನ್ನ ಮಗಳು ಅಮ್ಮನ ಹೊಟ್ಟೆಯಲ್ಲಿದ್ದಾಗ, ತಾಯಿಯ ರಕ್ತ ಪರೀಕ್ಷೆಯಲ್ಲಿ ಟ್ರೈಝೋಮಿ 21 ಇರಬಹುದೆಂದು ವರದಿ ಬಂದಿತ್ತು. ಈ ಟ್ರೈಝೋಮಿ 21 ಎಂದರೇನೆಂದರೆ, 21ನೆಯ ಕ್ರೋಮೊಸೋಮು ಮೂರು ಇವೆ ಎಂದು ಅರ್ಥ. ಮನುಷ್ಯನ ಪ್ರತಿ ಜೀವಕೋಶದಲ್ಲಿ ಒಟ್ಟು 46 ಕ್ರೋಮೋಸೋಮುಗಳು ಇರುತ್ತವೆ. ಇವುಗಳಲ್ಲಿ ಸರಿಯಾಗಿ 23 ಅಪ್ಪನಿಂದಲೂ 23 ಅಮ್ಮನಿಂದಲೂ ಬಂದಿರುತ್ತವೆ. ಹೀಗೆ ಅಪ್ಪ ಅಮ್ಮನಿಂದ ಬಂದ ಕ್ರೋಮೋಸೋಮಗಳು ಜೋಡಿಯಾಗಿ ಇರುತ್ತವೆ. ಕೆಲವು ಬಾರಿ ಅಪ್ಪನಿಂದಲೋ ಅಮ್ಮನಿಂದಲೋ ಒಂದು ಕ್ರೋಮೊಸೋಮು ಹೆಚ್ಚು ಬಂದು ಬಿಟ್ಟರೆ ಆಗ ಯಾವುದಾದರೂ ಒಂದು ಜೋಡಿಯಲ್ಲಿ ಒಂದು ಎಕ್ಟ್ರಾ ಸೇರಿಕೊಂಡು ಮೂರಾಗುತ್ತವೆ.

ನನ್ನ ಮಗಳ ವಿಚಾರದಲ್ಲಿ 21 ನೇ ಕ್ರೋಮೊಝೋಮ್ ಟ್ರಿಪಲ್ ಅಂದರೆ ಮೂರು ಇರಬಹುದು ಎಂದು ರಕ್ತಪರೀಕ್ಷೆಯ ವರದಿ ಹೇಳುತ್ತಿತ್ತು. ಹೀಗೆ 21ನೇ ಕ್ರೋಮೋಝೋಮ್ 3 ಇದ್ದರೆ ಡೌನ್ ಸಿಂಡ್ರೋಮ್ ಇರುವ ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ. ಡೌನ್ ಸಿಂಡ್ರೋಮ್ ನಲ್ಲಿ ಒಂದು ಪ್ರಮುಖವಾದ ಸಮಸ್ಯೆ ಎಂದರೆ ಬುದ್ಧಿಮಾಂದ್ಯ ಮಗು ಹುಟ್ಟಬಹುದು. ಇದರಿಂದ ಸಂಕಷ್ಟಕೆ ಸಿಲುಕಿದೆ.

ಅನೇಕ ತಜ್ಞರನ್ನು ಭೇಟಿಯಾಗಿ ನಾನು ಅನೇಕ ಪ್ರಯತ್ನಗಳ ಮಾಡಿದರೂ ನನಗೆ ಸಮಾಧಾನವಾಗಲಿಲ್ಲ. ಆಗ ಕೆಸಿ ರಘುರವರಿಗೆ ವರದಿ ಕಳುಹಿಸಿ ನನ್ನ ಗೊಂದಲವನ್ನು ತೋಡಿಕೊಂಡೆ. ಅವರು ತನ್ನ ವೈಯಕ್ತಿಕ ಸಂಪರ್ಕವನ್ನು ಬಳಸಿ ಡಾ. ಪ್ರತಿಮಾ ಭಟ್ ಇದರಲ್ಲಿ ಹೆಚ್ಚು ತಜ್ಞರೆಂದು ಅವರ ಬಳಿ ಕಳುಹಿಸಿದರು. ಡಾ ಪ್ರತಿಮಾ ಭಟ್ ವಿದೇಶದಿಂದ ಮರಳಿ ಬಂದು ಬೆಂಗಳೂರಿನಲ್ಲಿ ಫೀಟಲ್ ಮೆಡಿಸನ್ ಎಂಬ ಆಸ್ಪತ್ರೆ ನಡೆಸುತ್ತಿದ್ದಾರೆ. ಡಾ. ಪ್ರತಿಮಾ ಭಟ್ ಬಳಿ ವರದಿಯನ್ನು ತೋರಿಸಿದಾಗ, ‘ತಾಯಿಯನ್ನು ಕರೆತನ್ನಿ, ನಾನು ಮಗುವನ್ನು ನೋಡಬೇಕು’ ಎಂದರು. ಸರಿ ಅದರಂತೆ ಅವರು ಕೊಟ್ಟ ದಿನಾಂಕದಂದು ತಾಯಿಯನ್ನು ಕರೆದುಕೊಂಡು ಹೋದೆನು. ಪ್ರತಿಬಾರಿಯೂ ಕರೆ ಮಾಡಿ ಏನಾಯ್ತು ಎಂದು ವಿಚಾರಿಸುತ್ತಿದ್ದ ಕೆ ಸಿ ರಘು, ಹಣದ ಅವಶ್ಯಕತೆ ಇದೆಯಾ? ನಾನು ಆಸ್ಪತ್ರೆಯ ಬಳಿಗೆ ಹಣ ಕಳಿಸುತ್ತೇನೆ ಎನ್ನುತ್ತಿದ್ದರು. ನಾನು ಹಣ ಇದೆ ಸರ್, ನಿಮ್ಮ ಮಾರ್ಗದರ್ಶನ ಬೇಕು ಎನ್ನುತ್ತಿದ್ದೆ. ಪ್ರತಿಮಾ ಭಟ್ ತಾಯಿಯ ಹೊಟ್ಟೆಯೊಳಗಿರುವ ಮಗುವನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ನೋಡಿದರು.

ಅವರು ಮೂರು ಆಪ್ಷನ್ ಮುಂದಿಟ್ಟರು. ರಕ್ತ ಪರೀಕ್ಷೆಯಲ್ಲಿ ಬಂದಿರುವ ವರದಿಯು ಸಂಪೂರ್ಣ ಖಚಿತವಲ್ಲ. 180 ಮಕ್ಕಳಿಗೆ ಒಂದು ಮಗು ಟ್ರೈಝೋಮಿ ಇರಬಹುದು. ನೀವು ಸಂಪೂರ್ಣ ಖಚಿತತೆ ಬೇಕೆಂದರೆ ಕ್ರೋಮೋಝೋಮ್ ಎಣಿಸುವ ಪರೀಕ್ಷೆ ಮಾಡುತ್ತೇವೆ. ಇದಕ್ಕಾಗಿ ತಾಯಿಯ ಹೊಟ್ಟೆಯೊಳಗಿನ ಗರ್ಭಚೀಲದೊಳಕ್ಕೆ ಅತೀ ಸಣ್ಣ ಸೂಜಿಯೊಂದನ್ನು ಚುಚ್ಚಿ ಎರಡು ಹನಿ ದ್ರವ ಹೊರತೆಗೆಯುತ್ತೇವೆ. ಈ ದ್ರವದಿಂದ ಕ್ರೋಮೋಝೋಮ್ ಪರೀಕ್ಷೆ ಮಾಡಿಸುತ್ತೇವೆ. ಆದರೆ ಈ ಸಂದರ್ಭದಲ್ಲಿ ಗರ್ಭಪಾತವಾಗುವ ಸಾಧ್ಯತೆಯೂ ಇರುತ್ತದೆ. ಈ ವರದಿಯಲ್ಲಿ ಶೇ100 ಖಚಿತತೆ ಇರುತ್ತದೆ. ಮತ್ತೊಂದು ಸಾಧ್ಯತೆಯೆಂದರೆ ಕ್ವಾಟ್ರಬಲ್ ಟೆಸ್ಟ್ ಎನ್ನುವ ಪರೀಕ್ಷೆ ಮಾಡಬಹುದು ಅದರಲ್ಲಿಯೂ ಶೇ99 ರಷ್ಟು ಮಾತ್ರ ಖಾತ್ರಿ.

“ಮೂರನೆಯ ಸಾಧ್ಯತೆ ಎಂದರೆ ನೀವು ಏನು ಮಾಡದೆ ಸುಮ್ಮನಿರಬಹುದು. ಏಕೆಂದರೆ ನಾನು ಮಗುವನ್ನು ನೋಡಿದ್ದೇನೆ ಮಗು ಆರೋಗ್ಯವಾಗಿದೆ. ಹೊಟ್ಟೆಯೊಳಗಿದ್ದಾಗ ಸ್ಕ್ಯಾನಿಂಗ್ ಗೂ ಸಿಗದೆ ತಪ್ಪಿಸಿಕೊಳ್ತಾ ಇತ್ತು. ಎಂದು ತಮಾಷೆ ಮಾಡಿದರು. ಅಂದರೆ ಅದು ತುಂಬಾ ಆಕ್ಟೀವ್ ಆಗಿದೆ. ದೇಹದ ಅಳತೆ ಸರಿಯಾಗಿ ಬೆಳವಣಿಗೆಯಾಗಿದೆ. ಯಾವ ಮಗುವಿನ ದೇಹ ಸರಿಯಾಗಿ ಬೆಳವಣಿಗೆ ಆಗಿರುತ್ತೊ ಆ ಮಗುವಿನ ಮೆದುಳೂ ಸರಿಯಾಗಿ ಬೆಳವಣಿಗೆ ಆಗಿರುತ್ತದೆ. ಆದರೆ ನಾನು ಹೇಳುತ್ತಿರುವುದೂ ಶೇ99 ಮಾತ್ರ. ಇದರ ಆಚೆಗೂ ಮಗುವಿಗೆ ಟ್ರೈಝೋಮಿ ಸಾಧ್ಯತೆ ಇರಬಹುದು” ಎಂದರು ಪ್ರತಿಮಾ ಭಟ್

ಮತ್ತೆ ಕೆಸಿ ರಘುರವರಿಗೆ ಪೋನ್ ಮಾಡಿದಾಗ ರಘುರವರು ಮೂರನೇ ನಿರ್ಧಾರದ ಜೊತೆಗೆ ಹೋಗಲು ಸಲಹೆ ನೀಡಿದರು. ಮತ್ತು ಸಂಶೋಧನೆಯೊಂದನ್ನು ವಿವರಿಸಿ ನಿಮ್ಮ ಮಗು ಚೆನ್ನಾಗಿ ಹುಟ್ಟಲಿದೆ ಎಂದರು. ಅವರು ಹೇಳಿದ ಸಂಶೋಧನೆ ಎಂದರೆ, ಅಪ್ಪ ಅಮ್ಮ ಇಬ್ಬರೂ ಸಕ್ಕರೆ ಕಾಯಿಲೆ ಇಲಿಗಳಿಗೆ ಹುಟ್ಟಿದ ಮರಿಗಳಿಗ ಉತ್ತಮ ಆಹಾರ ಕೊಡುತ್ತಾ ಸಾಗುತ್ತಾರೆ. ಆ ಮರಿಗಳಿಗೆ ಹುಟ್ಟುವ ಇಲಿಗಳು ಸಕ್ಕರೆ ಕಾಯಿಲೆ ಮುಕ್ತವಾಗಿ ಆರೋಗ್ಯವಾಗಿದ್ದವು. ಇದರ ಅರ್ಥ ಏನೇಂದರೆ, ಜೀನ್ ಸಂಬಂಧಿ ಯಾವುದೇ ತೊಂದರೆಗಳನ್ನು ಸರಿಯಾಗಿ ಆಹಾರ ಮತ್ತು ವಾತಾವರಣ ಕೊಡುವ ಮೂಲಕ ಮೀರಬಹುದು. “ಹಾಗೆ ಮಾಡಿ ವಿಶ್ವನಾಥ್, ಏನಿಲ್ಲ ಸರಿಯಾಗಿ ಮುದ್ದೆ, ಸೊಪ್ಪಿನ ಸಾರು, ನಿಮ್ಮ ಮನೆಯವರು ಮಟನ್ ತಿನ್ತಾ ಇದ್ದರೆ ಲಿವರ್ ತಿನ್ನಿಸಿ” ಎಂದರು.

ಅಂದಿನಿಂದ ಮನೆಯಾಕೆಯ ಸಂಪೂರ್ಣ ಜವಾಬ್ದಾರಿ ನಾನು ತೆಗೆದುಕೊಂಡೆನು. ಪ್ರತಿ ಹೊತ್ತಿಗೂ ಬಿಸಿಬಿಸಿ ಊಟ, ಮುದ್ದೆ, ಕಾಳು ಸಾರು. ತುಪ್ಪ, ಹಣ್ಣುಗಳು, ನೀರಾ, ಎಳನೀರು, ಮೊಸರು, ಮಜ್ಜಿಗೆ, ಎಲೆ ಅಡಿಕೆ ಇಷ್ಟೇ. ನನ್ನ ಮಡದಿಗೆ ಥೈರಾಯಿಡ್ ಇದೆ ಎಂದು ಎಂತದೋ ಮಾತ್ರೆ ಕೊಟ್ಟಿದ್ದರು. ಕ್ಯಾಲ್ಸಿಯಂ ಮತ್ತು ಕಬ್ಬಿಣದ ಮಾತ್ರೆ ಇದ್ದವು. ಎಲ್ಲವನ್ನು ತೆಗೆದು ಎಸೆದು ಬರೀ ಊಟ ಮಾಡಲು ಶುರು ಮಾಡಿದಳು.

ಮಗು ಹುಟ್ಟಿದಾಗ 3.8 ಕೆಜಿ ಇತ್ತು. ಆರೋಗ್ಯವಾಗಿದೆ. ಏನೂ ತೊಂದರೆ ಇಲ್ಲ ಎಂದರು ಡಾಕ್ಟರ್. ಈ ವಿಷಯವನ್ನು ಅವರಿಗೆ ತಿಳಿಸಿದೆ. ಒಮ್ಮೆ ಅವರು ನನಗೆ ಆರ್ಥಿಕವಾಗಿಯು ಸಹಾಯ ಮಾಡಿದ್ದರು. ಆ ದುಡ್ಡನ್ನು ವಾಪಸ್ಸು ಕೊಡಲು ಹೋದರೆ ಸುತಾರಾಂ ಪಡೆಯಲಿಲ್ಲ.

ನಾನು ಹೂವಿನಹಾರ ಹಿಡಿದು ಫೇಸ್ ಬುಕ್ ನಲ್ಲಿ ರಘುರವರನ್ನು ನೋಡಲು ಬನ್ನಿ ಎಂದಿದ್ದ ವಿಳಾಸಕ್ಕೆ ಹೋದಾಗ ಸೆಕ್ಯುರಿಟಿ ಹೇಳಿದ, “ಅರ್ಧಗಂಟೆಯಾಯ್ತು ಹೋಗಿ. ನೀವು ರಾಮಯ್ಯ ಆಸ್ಪತ್ರೆಗೆ ಹೋಗಿ” ಎಂದರು. ರಾಮಯ್ಯ ಆಸ್ಪತ್ರೆಗೆ ಹೋಗೋಣ ಎಂದು ಹೆಬ್ಬಾಳದವರೆಗೂ ಬಂದೆನು. ಅಲ್ಲಿಂದ ಗಿರೀಶ್ ಹಂದಲಗೆರೆ ಫೋನ್ ಮಾಡಿ ನಾನು ಇಲ್ಲಿದ್ದೇನೆ ಬರುತ್ತಿದ್ದೇನೆ ಎಂದೆನು. ಇಲ್ಲ ಆಸ್ಪತ್ರೆಗೆ ದೇಹವನ್ನು ಹಸ್ತಾಂತರಿಸಿ ಮುಗಿಯಿತು. ಅವರು ಅದನ್ನು ಪ್ರೀಝರ್ ನಲ್ಲಿ ಹಾಕಿ ಮುಚ್ಚಿಟ್ಟರು. ನಾವು ಹೊರಡುತ್ತಿದ್ದೇವೆ. ನೀವು ಬರುವುದು ಬೇಡ ಎಂದರು. ತನ್ನ ಸಾವಿನ ನಂತರವೂ ನಾನು ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಬೇಕೆಂದು ದೇಹವನ್ನು ಆಸ್ಪತ್ರೆಗೆ ದಾನ ಮಾಡಿದ್ದರು ರಘು ಸರ್.

ವಾಪಸ್ಸು ಹೊರಡುವಾಗ ಈ ಹೂವಿನ ಹಾರ ಏನು ಮಾಡುವುದೆಂದು ತಿಳಿಯಲಿಲ್ಲ. ಅಲ್ಲೊಂದು ಹೊಂಗೆಯ ಮರ ಕಂಡಿತು ಅದಕ್ಕೆ ನೇತು ಹಾಕಿದೆ. ಹೊಂಗೆಯ ನೆರಳಂಗೆ ಬದುಕಿದ್ದ ಅವರನ್ನು ಒಂದು ಕ್ಷಣ ನೆನೆದು ನಿಟ್ಟುಸಿರು ಬಿಟ್ಟು ಮನೆಯ ಕಡೆ ಹೊರಟೆ. ಹೋಗಿ ಬನ್ನಿ ಸರ್.. ನಮನಗಳು

‍ಲೇಖಕರು avadhi

October 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: