ಹುಸೇನ್ ಅವರೂ ಮತ್ತು ರಾಜ್ಯೋತ್ಸವವೂ

ಕೆ. ಪುಟ್ಟಸ್ವಾಮಿ

ಕೃಷ್ಣರಾವ್ ಎಂಬ ಗೆಳೆಯರಿದ್ದಾರೆ. ನನ್ನ ಖಾಸಾ ಗೆಳೆಯರಿಂದ ಪರಿಚಿತ. ಬಹಳಷ್ಟು ವರ್ಷದಿಂದ ಭೇಟಿಯಾಗಿರಲಿಲ್ಲ. ನನಗೆ ಪರಿಚಯ ಮಾಡಿಸಿದ ಪ್ರಿಯ ಗೆಳೆಯ ನಾಗುವಿನ ಅಣ್ಣನ ಮಗನ ಮದುವೆಗೆ ಹೊರಟಿದ್ದ ತಂಡ ನಾನೀಗಾಗಲೇ ಮದುವೆ ಮನೆ ಸೇರಿರಬಹುದೆಂದು ಫೋನಾಯಿಸಿತು.

ಆಗ ನಾನು ದೆಹಲಿಯಲ್ಲಿದ್ದೆ. ಅತ್ತ ಕಡೆಯಿಂದ ಸೂರನಹಳ್ಳಿ ಜಯರಾಮಣ್ಣ ‘ನಿನ್ನ ಜೊತೆ ಕೃಷ್ಣರಾವ್ ಮಾತನಾಡಬೇಕೆಂತೆ’ ಎಂದು ಆತನಿಗೆ ಫೋನ್ ನೀಡಿದರು. ,” ಅಣ್ಣಾ ಜ್ಞಾಪಕ ಇದೆಯಾ ” ಎಂದು ಕೇಳಿತು ದನಿ. ಹುಸೇನ್ ಇರೋವರೆಗೂ ನಿನ್ನನ್ನು ಹ್ಯಾಗೆ ಮರೆಯಲಿ ಎಂದೆ. ಅಣ್ಣಾ ನೆನಪಿಟ್ಕೊಂಡಿದ್ದೀಯ ಬುಡು ಅಂದ ಕೃಷ್ಣರಾವ್ ಅವರ ಖುಶಿಯ ನಗೆ ಕಿವಿಯನ್ನು ತುಂಬಿಕೊಂಡಿತು. ಈ ಕೃಷ್ಣ ರಾವ್ ಬೆಂಗಳೂರಿನವರು.

ಕನಕಪುರದಲ್ಲಿ ನನ್ನ ಗೆಳೆಯರೊಡಗೂಡಿ ಬಿಸಿನೆಸ್ ಮಾಡುತ್ತಿದ್ದರು. ಅವರು ಹೇಳಿದ ಪ್ರಕಾರ ಕಲಾವಿದ ಎಂ.ಎಫ್. ಹುಸೇನ್ ಅವರು ಬೆಂಗಳೂರಿಗೆ ಬಂದಾಗ ಅವರ ಬಂಧುಗಳ ಮನೆಗೆ ತಪ್ಪದೆ ಭೇಟಿ ನೀಡುತ್ತಿದ್ದರಂತೆ. ಹಾಗೆ ಬಂದಾಗ ಸಿಕ್ಕ ಬಿಳಿಯ ಹಾಳೆಯ ಮೇಲೆ ಚಿತ್ರ ಬಿಡಿಸಿ ಮಕ್ಕಳಿಗೆ ಕೊಡುತ್ತಿದ್ದರಂತೆ. ಹುಸೇನ್ ಅವರು ಬಿಟ್ಟುಹೋದ ಹಲವಾರು ಚಿತ್ರಗಳನ್ನು ಕೃಷ್ಣರಾವ್ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

ಅದರಲ್ಲಿ ಹುಸೇನರ ನೆಚ್ಚಿನ ಕುದುರೆಯ ಚಿತ್ರಗಳೂ ಇವೆ. ಕೃಷ್ಣರಾವ್ ಒಂದು ಘಟನೆ ಹೇಳುತ್ತಾರೆ…. ಅದೊಂದು ದಿನ ಹುಸೇನ್ ಅವರು ಬಂಧುಗಳ ಮನೆಗೆ ಬಂದದ್ದು ರಾಜ್ಯೋತ್ಸವ ದಿನದಂದು. ಅಂದು ದಿನಾಂಕ 1.11.1986. ಹುಸೇನರಿಗೆ ಏನು ಸ್ಫೂರ್ತಿ ಬಂತೋ?! ಅಥವಾ ಬಿಳಿಯ ಹಾಳೆ ಸಿಗುವುದು ತಡವಾಯಿತೋ?! ಅಂತೂ ಕಿಸೆಯಲ್ಲಿದ್ದ ಕೆಂಪು ಕಂದು ಬಣ್ಣದ ಎರಡು ರೂಪಾಯಿ ನೋಟಿನ ಮೇಲೆ ತಮ್ಮ ಡ್ರಾಯಿಂಗ್ ಪೆನ್ನಿನಿಂದ ಕನ್ನಡದ ಹೆಣ್ಣುಮಗಳನ್ನು ಮೂಡಿಸಿದರು.

ಕೊರಳಿಗೆ ಕಂಠೀಹಾರ. ಮೈತುಂಬ ಸೆರಗು. ತಲೆಗೆ ವಿಕ್ಟೋರಿಯಾ ರಾಣಿಯ ಕಿರೀಟ, ಎದೆಯ ಮೇಲೆ ಎರಡು ವಿಜಯ ಪದಕ ಇಟ್ಟರು. ತಲೆಯ ಬಲಭಾಗಕ್ಕೆ 1/XI/ ’86 ಹೀಗೆ ಮೂರು ಸಾಲಿನಲ್ಲಿ ದಿನಾಂಕ, ತಿಂಗಳು ಮತ್ತು ಇಸವಿಯನ್ನು ಬರೆದರು. ಅದೇಕೋ ತಿಂಗಳನ್ನು ಮಾತ್ರ ರೋಮನ್ ಅಂಕೆಯಲ್ಲಿ ಬರೆದರು. ಎಡ ಮೇಲುಭಾಗದಲ್ಲಿ ಲಂಬವಾಗಿ ತಮ್ಮ ಸಹಿ ಹಾಕಿದರು.

ಕೆಲವರು ಆ ಹೆಣ್ಣಿನ ಚಿತ್ರವನ್ನು ಹುಸೇನ್ ಅವರು ಬರೆದ ಕನ್ನಡ ರಾಜ ರಾಜೇಶ್ವರಿ ಅಥವಾ ಕನ್ನಡಾಂಬೆಯ ಚಿತ್ರವೆಂದರೆ ಹಲವರು ಅದು ಕನ್ನಡತಿಯ ಪ್ರಾತಿನಿಧಿಕ ಬಿಂಬವಿರಬಹುದೆಂದರು. ಅದೇನೇ ಇರಲಿ ಬಿಎಂಶ್ರೀ ಹೇಳಿದಂತೆ ಹುಸೇನ್ ಅವರು ಇವಳ ಮುಡಿಗೆ ಅವಳ ಮಕುಟವಿಟ್ಟದ್ದು ಸ್ಪಷ್ಟವಿತ್ತು.

ಈ ಚಿತ್ರ ಸಹ ಕೃಷ್ಣರಾವ್ ಅವರ ಸಂಗ್ರಹ ಸೇರಿತ್ತು. ಒಮ್ಮೆ ಭೇಟಿಯಾದಾಗ ಕೃಷ್ಣರಾವ್ ಗೆ ಅದೇನು ಕುಶಾಲಾಯಿತೋ, ಇಲ್ಲ ನನ್ನ ಬಗ್ಗೆ ಅದೆಂಥ ಪ್ರೀತಿಯುಂಟಾಯಿತೋ, ನನಗೆ ಆ ಸಣ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಅದನ್ನು ಮನೆಗೆ ತಂದು ಅನೇಕ ತಿಂಗಳ ಜೋಪಾನವಾಗಿಟ್ಟು ನಂತರ ಕಟ್ಟು ಹಾಕಿಸಿ ಸುರಕ್ಷಿತವಾಗಿಟ್ಟುಕೊಂಡೆ.

ಕಲಾವಿದ ಗೆಳೆಯರು, ಕೆ.ಟಿ.ಶಿವಪ್ರಸಾದ್ ಆದಿಯಾಗಿ, ಅದೊಂದು ಅಪರೂಪದ ಚಿತ್ರವೆಂದು ಬಣ್ಣಿಸಿದರು. ಆಗ ಅದನ್ಯಾರಾದರು ಕದ್ಧುಬಿಟ್ಟಾರೆಂಬ ಭಯ ಶುರುವಾಯಿತು. ಈಗದು ಪುಸ್ತಕಗಳ ಪಕ್ಕದಲ್ಲಿ ನನ್ನ ಬೆಡ್ ರೂಮಲ್ಲಿದೆ. ನನ್ನ ಬಳಿಯಿರುವ ಕೆಲವೇ ಕೆಲವು ಅಮೂಲ್ಯ ವಸ್ತುಗಳಲ್ಲಿ ಇದಕ್ಕೆ ಅಗ್ರಸ್ಥಾನ. ರಾಜ್ಯೊತ್ಸವದ ದಿನ ಭಾರತದ ಅಭಿಜಾತ ಕಲಾವಿದ ಬರೆದ ಚಿತ್ರ ನನ್ನಲ್ಲಿದೆ ಎನ್ನುವುದೇ ನನಗೊಂದು ಹೆಮ್ಮೆ. ಕಲಾವಿದನೊಬ್ಬ ಜನರೊಡನೆ ಆಚರಿಸಬಹುದಾದ ಉತ್ಸವದ ಪರಮ ಸ್ವರೂಪ ಇದೇ ಇರಬಹುದೇ?!!

‍ಲೇಖಕರು Avadhi

November 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: