ಹುಡುಗಿಯರೊಂದಿಗೆ ಬೆಳೆಯುವುದೆಂದರೆ ಅವರ ಕನಸು, ಕಳವಳಗಳೊಂದಿಗೇ ಬೆಳೆಯುವುದು..

ಲೇಖಕಿ ಸುಧಾ ಆಡುಕಳ ನಿನ್ನೆ ‘ಅವಧಿ’ಯಲ್ಲಿ ಬರೆದ “ಹೆಂಗರುಳೊಂದು ಎಲ್ಲರಲಿ ಮಿಡುಕಾಡುತಿರಲಿ” ಲೇಹಣಕ್ಕೆ ಕವಿ ಆನಂದ ಋಗ್ವೇದಿ ಪ್ರತಿಕ್ರಿಯಿಸಿದ್ದಾರೆ 

ಆನಂದ್  ಋಗ್ವೇದಿ

ನನ್ನ ಮೆಚ್ಚಿನ ಅಂಕಣಗಾರ್ತಿ ಮತ್ತು ನಾಟಕಗಳ ಲೇಖಕಿ ಸುಧಾ ಆಡುಕಳ ನಿನ್ನೆ ‘ಅವಧಿ’ಯಲ್ಲಿ “ಹೆಂಗರುಳೊಂದು ಎಲ್ಲರಲಿ ಮಿಡುಕಾಡುತಿರಲಿ” ಎಂದು ಮನನೀಯ ಮಾತುಗಳನ್ನು ಬರೆದಿದ್ದಾರೆ. ಹೆಣ್ಣು ಮಕ್ಕಳನ್ನು ಬೆಳೆಸುವಷ್ಟು ಕಾಳಜಿಯಿಂದಲೇ ಗಂಡು ಮಕ್ಕಳನ್ನೂ ಬೆಳೆಸಬೇಕು ಎಂಬ ಅವರ ಅಭಿಮತ ಅಭಿನಂದನೀಯ.

ಅವರ ಬರಹ ಓದುತ್ತಾ ನೆನಪು ಹಿಂದಕ್ಕೆ ಓಡಿತು. ಸುಧಾ ಆಡುಕಳ ಹೇಳಿದಂತೆ ನಾನು ಹುಡುಗಿಯರ ನಡುವೆಯೇ ಆಡಿ ಬೆಳೆದವನು. ನನ್ನ ಒಡ ಹುಟ್ಟಿದ ತಂಗಿಯೊಂದಿಗೇ, ಹತ್ತಾರು ಹೆಣ್ಣುಮಕ್ಕಳು ಮತ್ತವರ ಗೆಳತಿಯರು ಇದ್ದ ದೊಡ್ಡ ಸಮೂಹದಲ್ಲಿ ಬೆಳೆಯುವಾಗ ನಾನು ಹುಡುಗ, ಹಾಗಾಗಿ ಇವರಿಗಿಂತ ಭಿನ್ನ, ಪ್ರತ್ಯೇಕ ಎಂದು ಯಾವತ್ತೂ ಅನ್ನಿಸಿರಲಿಲ್ಲ.

ನನಗಿಂತ ಹಿರಿಯರಾದ ದೊಡ್ಡಮ್ಮನ ಮಕ್ಕಳಿಗೆ ಕರೆಯುವಂತೇ ಹಿರಿಯ ಸೋದರ ಮಾವನ ಹಿರಿಯ ಹೆಣ್ಣುಮಕ್ಕಳಿಗೆ ಅಕ್ಕಾ ಎಂದೇ ಕರೆದ ನಾನು, ಆ ಕಾರಣಕ್ಕೆ ಅವರ ಮದುವೆಯಾಗಿ ಬಂದವರನ್ನು ಅಕ್ಕರೆಯಿಂದ ಭಾವಾ ಎಂದೇ ಕರೆಯುತ್ತೇನೆ. ವಾವೆಯಲ್ಲಿ ಅಣ್ಣ ಅತ್ತಿಗೆಯರಾಗುವ ಅವರನ್ನು ಅಕ್ಕ ಭಾವ ಎಂದೇ ನಾನು ಕರೆಯುವುದರಿಂದ ಅವರ ಮಕ್ಕಳಿಗೂ ನಾನು ಆನಂದ ಮಾಮ!!

ಹುಡುಗಿಯರೊಂದಿಗೆ ಬೆಳೆಯುವುದೆಂದರೆ ಅವರ ನಗು, ಸುಮ್ಮಾನ, ತಡೆ ಹಿಡಿದ ಬಿಕ್ಕು, ಕನಸು, ಕಳವಳಗಳೊಂದಿಗೇ ಬೆಳೆಯುವುದು. ಅವರ ಮಾರ್ದವ ಮನಸು, ತಾಯಂತಹ ತಾಯ್ತನದ ತುಡಿತ, ಸದಾ ಮತ್ತೊಬ್ಬರ ಕನಸು ಕಾಯುವ ಕಾಯಕ ಎಲ್ಲಾ ಗೊತ್ತಿರದೇ ಅವರನ್ನು ಹೆಣ್ಣೆಂದು ಅರಿಯುವುದು, ಕರೆಯುವುದು ಕಷ್ಟ. ಅವರ ಆಟವೂ ಭಿನ್ನ. ಇರುವ ಪರಿಕರಗಳನ್ನೇ ಆಟಿಕೆ ಮಾಡಿಕೊಂಡು ಆಟದ ಉದ್ದಕ್ಕೂ ಸೋಲು ಗೆಲುವು ಗಮನಿಸದೇ ಸಂಭ್ರಮಿಸುವುದು ಅವರಿಗೆ ಬಾಲ್ಯದಲ್ಲೇ ಕರತಲಾಮಲಕ.

ಹಾಗೆಂದು ಹೆಣ್ಣು ಮಕ್ಕಳು ತಮ್ಮ ಮಿತಿಗಳಲ್ಲೇ ಇತಿ ಎಂಬಂತೆ ಇರುವವರಲ್ಲ. ನನ್ನ ಈ ಸಹ ಒಡನಾಡಿಗಳು ಎಲ್ಲರೂ ಪದವೀಧರರು. ಹಲವರು ಉದ್ಯೋಗಿಗಳಾಗಿ, ಸ್ವ ಉದ್ಯೋಗದ ಮೂಲಕವೂ ಸ್ವಾವಲಂಬಿಗಳಾದವರು. ಅವರ ಈ ಕೆಚ್ಚು ನನ್ನ ಕನಸನ್ನೂ ಗರಿಗೆದರಿಸಿಯೇ ನಾನೂ ಎಲ್ಲಾ ಅಡೆತಡೆಗಳ ದಾಟಿ ಸ್ನಾತಕೋತ್ತರ ಪದವಿ ಪಡೆದು, ಡಾಕ್ಟರೇಟ್ ಪಡೆಯುವಂತೆ ಪ್ರೇರೇಪಿಸಿದ್ದು.

ಹೆಣ್ಣೆಂದರೆ ಬರಿಯೇ ಬೊಂಬೆಯಲ್ಲ ಎಂಬ ಭಾವ ಬಿಂಬವನ್ನು ಮನದಲ್ಲಿ ಕೂರಿಸಿದ್ದವರು ನನ್ನ ತಾಯಿ. ದಿನಂಪ್ರತಿ ಊಟ ಮಾಡುವ ವೇಳೆ ಅವರು ಹೇಳುತ್ತಿದ್ದ ರಾಮಾಯಣ ಮಹಾಭಾರತ ಅಷ್ಟೇ ಅಲ್ಲ, ವಿನೋದಾ ಮತ್ತವಳ ನಾಲ್ಕಣ್ಣಂದಿರು ಎಂಬ ಕಾಲ್ಪನಿಕ ಕಥಾ ಸರಣಿಯ ಮೂಲಕ ಭ್ರಾತೃತ್ವ ಮತ್ತು ಬಂಧುತ್ವವನ್ನು ಮನಗಾಣಿಸಿದವರು ಅವರು.

ಎಲ್ಲಾ ತಾಯಂದಿರಿಗೂ ತಮ್ಮ ಮಗ ರಾಮನಂತಿರಲಿ ಎಂದೇ ಬಯಕೆ. ಆದರೆ ಅವನನ್ನು ಕೃಷ್ಣನಂತೆ ಅಲಂಕರಿಸುವ ಸಂಭ್ರಮ. ಹಾಗೆ ನೋಡಿದರೆ ರಾಮ ಮತ್ತು ಕೃಷ್ಣ ಪರಸ್ಪರ ವಿರೋಧಿ ಸ್ವಭಾವಗಳಲ್ಲ. ಪೂರ್ವ ಪರಂಪರೆಯ ಮೌಲ್ಯಗಳನ್ನು ಎತ್ತಿಹಿಡಿಯುವ, ಎಲ್ಲರನ್ನೂ ಸಮಭಾವದಲ್ಲಿ ನೋಡುವ ತ್ಯಾಗಮಯಿ ಮರ್ಯಾದಾ ಪುರುಷೋತ್ತಮ ರಾಮನಂತೆಯೇ ಕೃಷ್ಣನೂ ಕೂಡಾ. ಕೃಷ್ಣತ್ವ ಎಂಬುದು ಕಪಟವಲ್ಲ, ಚಾಣಾಕ್ಷತೆ ಮಾತ್ರ. ಅವ ಜಾರನಲ್ಲ, ಮಾನಿನಿಯರ ಮನದ ಮಾರ. ಕಾಮಿನಿಯರ ಕಾಮನೆಗೆ ಒಲಿದವನೇ ತನ್ನನ್ನು ಸಹೋದರ ಎಂದೇ ಪರಿಭಾವಿಸಿದ್ದ ದ್ರೌಪದಿಯ ದುಸ್ಥಿತಿಯಲ್ಲೂ ನೆರವಾಗುವುದೂ ಪುರುಷೋತ್ತಮ ಸ್ವರೂಪವೇ.

ತನ್ನ ಹೆತ್ತಿರದ ತಾಯಿ ಯಶೋಧೆಗೆ ಕಂದನಾಗುವ, ಮೋಸದಿಂದ ಮಾತೃತ್ವದ ಸೋಗಿನಲ್ಲಿ ಕೊಲ್ಲಲು ಯತ್ನಿಸುವ ಪೂತನಿಗೆ ಸಾವಾಗುವ ಈ ವಿಭಿನ್ನತೆಯೂ ಪರಿಪೂರ್ಣತ್ವಕ್ಕೆ ಮಾದರಿ. ಹಾಗೆಂದೇ ಅಮ್ಮನಿಂದ ಪರಿಚಿತರಾದ ಈ ರಾಮ ಕೃಷ್ಣರಲ್ಲಿ: ರಾಮ ನನ್ನ ಮಾರ್ಗದರ್ಶಕ, ಕೃಷ್ಣ ನನ್ನ ಆಂತರ್ಯದ ನೇಹಿಗ. ಎರಡೂ ರೂಪ ಧರಿಸಿಯೇ ನೈತಿಕ ಮೌಲ್ಯಗಳನ್ನು ಗೋವರ್ಧನ ಗಿರಿಯಂತೆ ಎತ್ತಿ ಹಿಡಿಯಬೇಕಾದ ಜವಾಬ್ದಾರಿ ನಮ್ಮೆಲ್ಲರದು.

ನನಗೂ ಎರಡು ಗಂಡು ಮಕ್ಕಳು. ಅವರು ಪ್ರತ್ಯೇಕವಾಗಿ ರಾಮನೋ ಕೃಷ್ಣನೋ ಆಗುವುದು ಬೇಡ. ಅವರು ರಾಮ ಕೃಷ್ಣರಾಗಲಿ. ಆ ರಾಮಕೃಷ್ಣ ಪರಮಹಂಸರಂತೆ ಎಲ್ಲರಲ್ಲೂ ತಾಯ್ತನವನ್ನ ಗುರುತಿಸಿ ಗೌರವಿಸಲಿ.

‍ಲೇಖಕರು avadhi

July 6, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: