‘ಪ್ಯಾರ್’ ಕಥನ ಅನಾವರಣದಲ್ಲಿ ಹೀರೋಯಿಸಂಯಿಲ್ಲದ ‘ಮನ್ಮರ್ಝಿಯಾನ್’
ಮ ಶ್ರೀ ಮುರಳಿ ಕೃಷ್ಣ
ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ನ ‘ಡಾರ್ಕ್ ಫಿಲ್ಮ್ಸ್’ ಎಂದರೆ ನೆನಪಿಗೆ ಬರುತ್ತಾರೆ ನಿರ್ದೇಶಕ ಅನುರಾಗ್ ಕಶ್ಯಪ್. ಅವರ ಚಲನಚಿತ್ರಗಳಲ್ಲಿ ಕ್ರೈಮ್, ಹಿಂಸೆ ಇತರ ಸಂಬಂಧಿತ ಅಂಶಗಳು ಇರುತ್ತವೆ. ಅದರೆ ಕಳೆದ ವರ್ಷ ತೆರೆಕಂಡ ಅವರ ‘ಮುಕ್ಕಾಬಾಝ್’ ಹಿಂದಿ ಚಲನಚಿತ್ರ ಮೂಲತಃ ಬಾಕ್ಸಿಂಗ್ ವಸ್ತುವನ್ನು ಹೊಂದಿದ್ದರೂ, ಅದೊಂದು ಪ್ರೇಮಕಥನವಾಗಿತ್ತು. ಇತ್ತೀಚೆಗೆ ಅವರ ನಿರ್ದೇಶನದ ‘ಮನ್ಮರ್ಝಿಯಾನ್’ rom-com ಚಲನಚಿತ್ರ ತೆರೆಕಂಡಿತು.
ಅಮೃತಸರದಲ್ಲಿ ಹಾಕಿ ಆಟಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟದ ಅಂಗಡಿಯನ್ನು ನಡೆಸುವ ಮಾಜಿ ಹಾಕಿ ಆಟಗಾರ್ತಿ ರೂಮಿ (ನಟಿ ತಾಪ್ಸಿ ಪನ್ನು) ಒಬ್ಬ ಅನಾಥ ಯುವತಿ. ಆಕೆ ತನ್ನ ಮಾಮನ ಮನೆಯಲ್ಲಿ ನೆಲೆ ನಿಂತಿರುತ್ತಾಳೆ. ವಿಕ್ಕಿ ಸಂಧು (ನಟ ವಿಕ್ಕಿ ಕೌಶಲ್), ಒಬ್ಬ ಅರೆಕಾಲಿಕ ಡಿಜೆ ಆಕೆಯ ಬಾಯ್ಫ್ರೆಂಡ್. ಪ್ರೀತಿಯ ವಿಷಯದಲ್ಲಿ ಇಬ್ಬರದ್ದೂ ಬಿಂದಾಸ್( ಈ ಪದವನ್ನು ನಕಾರಾತ್ಮಕವಾಗಿ ಬಳಸಲಾಗಿಲ್ಲ) ಮನೋಭಾವ. ಬೆಳ್ಳಂಬೆಳಿಗ್ಗೆಯೇ ಕಟ್ಟಡಗಳನ್ನು ಲಂಘನ ಮಾಡುತ್ತ ವಿಕ್ಕಿ ರೂಮಿಯ ಮನೆಯನ್ನು ಸೇರಿ ಆಕೆಯೊಡನೆ ‘ಫ್ಯಾರ್’ನಲ್ಲಿ ತೊಡಗುತ್ತಾನೆ (ಪ್ಯಾರ್ ಜೊತೆ ಅವರ ನಡುವೆ ದೈಹಿಕ ಕಾಮನೆಗಳ ತಣಿಸುವಿಕೆಯ ಮಿಲನೋತ್ಸವವೂ ಇರುತ್ತದೆ). ಇದರ ವಾಸನೆ ಅರಿತ ರೂಮಿಯ ಅತ್ತೆ(ಮಾಮನ ಪತ್ನಿ) ಆಕೆಗೆ ಗಂಡನ್ನು ಹುಡುಕುವ ಕಾರ್ಯಕ್ಕೆ ಸನ್ನದ್ಧಳಾಗುತ್ತಾಳೆ. ಇದನ್ನರಿತ ರೂಮಿ, ವಿಕ್ಕಿ ತನ್ನ ತಂದೆತಾಯಿಯೊಡನೆ ಮನೆಗೆ ಭೇಟಿ ನೀಡಿ ಮದುವೆಯ ಪ್ರಸ್ತಾಪವನ್ನು ಮಾಡುತ್ತಾನೆ ಎಂದು ಸಮಾಧಾನಪಡಿಸುತ್ತಾಳೆ.
ಆದರೆ ವಿಕ್ಕಿಯೋ ಹೊಣೆಗೇಡಿತನವನ್ನು ತನ್ನ ಹೆಗೆಲ ಮೇಲೆ ಸದಾ ಹೊತ್ತುಕೊಂಡೇ ರೂಮಿಯನ್ನು ಪ್ರೀತಿಸುತ್ತಿರುತ್ತಾನೆ. ಆಕೆಗೆ ತಿಳಿಸಿದಂತೆ ಆತ ತನ್ನ ತಂದೆತಾಯಿಯನ್ನು ರೂಮಿಯ ಮನೆಗೆ ಕರೆದುಕೊಂಡು ಬರುವುದಿಲ್ಲ. ಜವಾಬ್ದಾರಿಯುತ ನಡೆಗೆ ಸಂಬಂಧಿಸಿದಂತೆ ಆತನದ್ದು ಉಸುಕಿನ ಮೇಲಿನ ಓಟ! ನಂತರ ತಾವಿಬ್ಬರು ಪಲಾಯನ ಮಾಡೋಣ ಎಂದು ರೂಮಿ ವಿಕ್ಕಿಯ ಬಳಿ ಒಂದು ಸ್ಕೆಚ್ ಬಿಡಿಸುತ್ತಾಳೆ. ಇಬ್ಬರೂ ಕಂಬಿಕೀಳುತ್ತಾರೆ. ಜೀಪಿನಲ್ಲಿ ಪಯಣಿಸುವಾಗ ರೂಮಿಗೆ ವಿಕ್ಕಿಯ ದಿಶಾರಹಿತ, ಬೇಜವಾಬ್ದಾರಿ ಮುಖ ಮತ್ತೊಮ್ಮೆ ಅನಾವರಣಗೊಳ್ಳುತ್ತದೆ. ಸರಿ, ಆಕೆ ವಿಕ್ಕಿಯನ್ನು ಮನಸಾರೆ ಬೈದು ನಂತರ ಅರೇಂಜ್ಡ್ ಮ್ಯಾರೇಜ್ಗೆ ಸಮ್ಮತಿಸುತ್ತಾಳೆ.
ಈ ಹಂತದಲ್ಲಿ ಲಂಡನ್ನಲ್ಲಿ ಬ್ಯಾಂಕರ್ ಆಗಿರುವ ರಾಬಿ(ನಟ ಅಭಿಷೇಕ್ ಬಚ್ಚನ್)ಯ ಪ್ರವೇಶವಾಗುತ್ತದೆ. ಮದುವೆ ದಳ್ಳಾಳಿಯೊಬ್ಬ ಆತನಿಗೆ ರೂಮಿ, ಮತ್ತೊಬ್ಬ ಯುವತಿಯ ಹಿನ್ನೆಲೆ, ಅವರ ಕುಟುಂಬದ ವಿವರಗಳನ್ನು ನೀಡುತ್ತಾನೆ. ಮೊದಲ ನೋಟದಲ್ಲೇ ರಾಬಿಗೆ ರೂಮಿ ಆಪ್ಯಾಯಮಾನಳಾಗುತ್ತಾಳೆ. ಆತನಿಗೆ, ಫೇಸ್ಬುಕ್ನ ಪ್ರೊಫೈಲ್ನಿಂದ, ರೂಮಿಗೆ ಒಬ್ಬ ಬಾಯ್ಫ್ರೆಂಡ್ಯಿರುವ ವಿಷಯ ತಿಳಿಯುತ್ತದೆ. ಇದನ್ನರಿತೂ, ಸಮಚಿತ್ತದ, ಸಮಾಧಾನ ಮನೋಭಾವದ ರಾಬಿ ರೂಮಿಯನ್ನು ಮದುವೆಯಾಗಲು ನಿಶ್ಚಯಿಸುತ್ತಾನೆ. ರೂಮಿಯೂ ತನ್ನ ಸಮ್ಮತಿಯನ್ನು ಸೂಚಿಸುತ್ತಾಳೆ. ಆದರೆ ವಿವಾಹದ ಮುನ್ನ ದಿನ ವಿಕ್ಕಿ ರೂಮಿಯನ್ನು ಭೇಟಿ ಮಾಡಿ ಆಕೆಯಿಲ್ಲದೇ ತನ್ನ ಜೀವನ ಸಾಗುವುದು ದುಸ್ತರ ಎಂದು ಗೋಗರೆಯುತ್ತಾನೆ. ರೂಮಿ ರಾತ್ರಿಯೇ ರಾಬಿಯ ಬಳಿ ತೆರಳಿ ತಾನು ಆತನನ್ನು ಮದುವೆಯಾಗುವುದಿಲ್ಲ ಎಂದು ತಿಳಿಸುತ್ತಾಳೆ! ರೂಮಿಯ ಮನೆಗೆ ಕಾರನ್ನು ತೆಗೆದುಕೊಂಡು ಹೋಗುವ ವಿಕ್ಕಿ ಮಧ್ಯದಲ್ಲಿ ಮನಸ್ಸನ್ನು ಬದಲಾಯಿಸಿ ತನ್ನ ಮನೆಗೆ ಹಿಂದಿರುಗುತ್ತಾನೆ!
ರಾಬಿ ರೂಮಿಯರ ವಿವಾಹವಾಗುತ್ತದೆ. ಅವರು ಹನಿಮೂನ್ಗೆ ಕಾಶ್ಮೀರಕ್ಕೆ ತೆರಳುತ್ತಾರೆ. ರೂಮಿ ನಿಧಾನವಾಗಿ ರಾಬಿಗೆ ತೆರೆದುಕೊಳ್ಳುತ್ತಾಳೆ. ಆದರೆ ಏಕಾಏಕಿ ವಾಪಸ್ಸಾಗಬೇಕೆಂದು ರಾಬಿಗೆ ತಿಳಿಸುತ್ತಾಳೆ. ಪುನಃ ವಿಕ್ಕಿಯನ್ನು ಭೇಟಿ ಮಾಡಿ, ಆತನನ್ನು ತರಾಟೆ ತೆಗೆದುಕೊಳ್ಳಲು ಬಯಸುವ ರೂಮಿ ಆತನ ಸ್ಟುಡಿಯೋಗೆ ಹೋಗುತ್ತಾಳೆ. ಸರಿಯಾಗಿ ಬೈಯುತ್ತಾಳೆ; ನಂತರ ರತಿ-ಮನ್ಮಥರಾಗುತ್ತಾರೆ! ನಂತರ ರಾಬಿಯನ್ನು ಹೇಗೆ ಎದುರಿಸಬೇಕೆಂಬ ಚಡಪಡಿಕೆಯಲ್ಲಿ ನಲುಗುತ್ತಾಳೆ. ಮನೆಗೆ ಹಿಂದಿರುಗುವ ರೂಮಿ ರಾಬಿಯ ತೆಕ್ಕೆಯನ್ನು ಸೇರಿ ಕಂಬನಿ ಮಿಡಿಯುತ್ತಾಳೆ. ರಾಬಿ ಸಂತೈಸುತ್ತಾನೆ.
ತರುವಾಯ ಅವರೀರ್ವರೂ ಬೇರ್ಪಡಲು ನಿರ್ಧರಿಸಿ ಕೋರ್ಟಿನ ಮೆಟ್ಟಿಲುಗಳನ್ನು ಏರುತ್ತಾರೆ! ಅಂತಿಮವಾಗಿ ಅವರು ಯಾವ ಹಾದಿಯಲ್ಲಿ ಪಯಣಿಸುತ್ತಾರೆ ಎಂಬ ಕ್ಲೈಮಾಕ್ಸ್ನ್ನು ಸಿನಿಮಾ ವೀಕ್ಷಿಸಿದಾಗ ತಿಳಿಯುತ್ತದೆ.
ಪ್ರೇಮ ತ್ರಿಕೋಣವಿರುವ ಅನೇಕ ಹಿಂದಿ ಚಲನಚಿತ್ರಗಳು ಬಂದಿವೆ. ಹೀಗಾಗಿ ಈ ಚಲನಚಿತ್ರದ ಕಥನದಲ್ಲಿ ವಿಶೇಷವೇನೂ ಇಲ್ಲ. ಆದರೆ ಇಲ್ಲಿನ ಪ್ರಮುಖ ಪಾತ್ರಗಳು-ರೂಮಿ, ವಿಕ್ಕಿ ಮತ್ತು ರಾಬಿ, ತಮ್ಮಲ್ಲಿರುವ ದ್ವಂದ್ವಗಳು, ವಿರೋಧಾಭಾಸಗಳೊಡನೆ ಸಹಜವಾಗಿ ಮೂಡಿಬಂದಿವೆ. ಅಂದರೆ ಗ್ರೇಶೇಡ್ (ಕಂದು ಬಣ್ಣ) ಢಾಳಾಗಿ ಕಂಡು ಬರುತ್ತದೆ. ಈ ನಿಟ್ಟಿನಲ್ಲಿ ಚಲನಚಿತ್ರದ ಒಂದು ಹಾಡಿನ ಸಾಲುಗಳು-
ಕಾಲ ನಾ ಸಫೇದ್ ಹೈ
ಇಶ್ಕ್ ದ ರಂಗ್ ಯಾರಾ
ಗ್ರೇವಾಲಾ ಶೇಡ್…
ಝಾಮನಾ ಹೈ ಬದ್ಲಾ
ಮೊಹಬ್ಬತ್ ಭೀ ಬದ್ಲಿ
ಘೈನೆ ಪಿಟೇ ವರ್ಷನ್ ನೂ
ಮಾರೋ ಅಪ್ಡೇಟ್….
ಮುಖ್ಯ ಭೂಮಿಕೆಯಲ್ಲಿರುವ ಪಾತ್ರಗಳಿಗೆ ಹೇಳಿಮಾಡಿಸಿದಂತಿವೆ!
ರೂಮಿಯದ್ದು ಚಿನಕುರಳಿ ಪಾತ್ರ. ಆಕೆಯಲ್ಲಿ ಯೌವನದ ಮಸ್ತಿ, ಮೋಜಿನ ಜೊತೆಗೆ ಸ್ವಾರ್ಥವೂ ಇವೆ. ‘ಫ್ಯಾರ್’ಗಾಗಿ ತಹತಹಿಸುವ ಆಕೆ ‘ಪ್ಯಾರ್’ಗೂ ತನ್ನನ್ನು ಮುಕ್ತವಾಗಿ ತೆರೆದುಕೊಳ್ಳುತ್ತಾಳೆ! ಇಬ್ಬರು ಪುರುಷರ ನಡುವೆ ಹುಯ್ದಾಡುವ ಪಾತ್ರದಲ್ಲಿ ತಾಪ್ಸಿ ಪನ್ನು “ಸೈ” ಎನಿಸಿಕೊಳ್ಳುತ್ತಾರೆ. ಒಂದರ್ಥದಲ್ಲಿ ಪ್ಲೇಬಾಯ್ ಎನ್ನಬಹುದಾದ ಪಾತ್ರವನ್ನು ವಿಕ್ಕಿ ಕೌಶಲ್ ಜಬರ್ದಸ್ತಿಯಿಂದ ನಟಿಸಿದ್ದಾರೆ. ಆಭಿಷೇಕ್ ಬಚ್ಚನ್ ಪಾತ್ರಕ್ಕೆ ಸಂಯಮದ ಲೇಪನವಿದೆ. ಅವರು ಹೆಚ್ಚಾಗಿ ಕಂಗಳ ಮೂಲಕವೇ ಭಾವನೆಗಳನ್ನು ದಾಟಿಸುತ್ತಾರೆ. ಹೀರೋಯಿಸಂ ಇಲ್ಲದ ಅವರ ಪಾತ್ರದ ಕಟ್ಟೋಣ ಸ್ವಾಗತಾರ್ಹ ಹಾಗೂ ಅನುಕರಣೀಯ.
ಕನ್ನಿಕಾ ಧಿಲ್ಲೋನ್ರ ಕಥನದಲ್ಲಿ ಹಾಗೂ ಸಂಭಾಷಣೆಗಳಲ್ಲಿ ಪಂಜಾಬಿ ಭಾಷೆ ಆಗಾಗ್ಗೆ ಇಣುಕು ಹಾಕುತ್ತದೆ; ಹಾಡುಗಳಲ್ಲೂ ಕೂಡ. ಏಕಸಾಲಿನ ಸಂಭಾಷಣೆಗಳಲ್ಲಿ ಪಂಚ್ ಇದೆ. ವಿವಾಹದ ತರುವಾಯ ರಾಬಿ-ರೂಮಿಯರ ನಡುವೆ ಜರುಗುವ ಕೆಲವು ಸಂಭಾಷಣೆಗಳು ಮತ್ತು ರೂಮಿ-ವಿಕ್ಕಿಯ ‘ಫ್ಯಾರ್’ ಸುಳಿವು ಸಿಕ್ಕಾಗ ಆಕೆಯ ಮಾಮಿಯ ಹೊರತಾಗಿ ಇತರ ಹಿರಿಯರ ತಣ್ಣನೆ ಎನ್ನಬುದಾದ ಪ್ರತಿಕ್ರಿಯೆಗಳು ಭಾರತದ ಸಾಮಾಜಿಕ ಸಂದರ್ಭಗಳಿಗೆ ಹೊರತಾಗಿವೆ ಎಂದೆನಿಸಿದರೂ ಅವುಗಳನ್ನು ‘ಸಿನಿಮೇಟಿಕ್ ಲಿಬರ್ಟೀಸ್’ ಎಂದು ಪರಿಗಣಿಸಬಹುದೇನೋ? ಗೀತೆಗಳ ಸಂಖ್ಯೆ ಜಾಸ್ತಿಯೆನಿಸಿದರೂ, ಅಮಿತ್ ತ್ರಿವೇದಿಯವರ ಸಂಗೀತ ಗಮನೀಯ. ಕ್ಲೋಸ್ಅಪ್ ಹಾಗೂ ಎಕ್ಸ್ಟ್ರೀಮ್ ಕ್ಲೋಸ್ಅಪ್ ಶಾಟ್ಗಳನ್ನು ಸಮರ್ಥವಾಗಿ ಬಳಸಿಕೊಂಡಿರುವ ಸಿಲ್ವಿಸ್ಟರ್ ಫಾನ್ಸೇಕ್ರ ಕ್ಯಾಮೆರಾ ಕೆಲಸ ಅಚ್ಚುಕಟ್ಟಾಗಿದೆ. ರೂಮಿ ಮತ್ತು ವಿಕ್ಕಿ ಜೀಪಿನಲ್ಲಿ ಪಲಾಯನಗೈಯುವಾಗ ವಿಕ್ಕಿಯ ಮುಖಭಾವವನ್ನು ಸೆರೆಹಿಡಿದಿರುವ ಪರಿ ಇದಕ್ಕೊಂದು ನಿದರ್ಶನ. ಕಾಶ್ಮೀರದ ಹಿಮಾವೃತ ಶಿಖರಗಳ ಸೊಬಗನ್ನು ಸೊಗಸಾಗಿ ಕಾಣಿಸಿದ್ದಾರೆ. ಅಮೃತಸರದ ಮೊಹಲ್ಲಾಗಳು, ಗಲ್ಲಿಗಳೂ ಚೆನ್ನಾಗಿ ಮೂಡಿಬಂದಿವೆ.
ಮಧ್ಯಂತರದ ಮುನ್ನ ಚಲನಚಿತ್ರ ಚಕಚಕನೆ ಸಾಗುತ್ತದೆ. ನಂತರ ಸ್ವಲ್ಪ ಗತಿಯನ್ನು ಕಳೆದುಕೊಳ್ಳುತ್ತದೆ. ಪರಿಕಲ್ಪನೆಗಳ ಪುನರಾವರ್ತನೆಯೂ ಆಗುತ್ತದೆ. ಚಲನಚಿತ್ರದ ಲಂಬಕ್ಕೆ ಸ್ವಲ್ಪ ಕತ್ತರಿ ಪ್ರಯೋಗಿಸಬಹುದಿತ್ತು. ಅಂತ್ಯ ಸೂತ್ರಬದ್ಧ ಚೌಕಟ್ಟಿನೊಳಗೇ ಇದೆ. ಹೆಚ್ಚಿನ ವೀಕ್ಷಕರ ಸ್ಥಿತಿಸ್ಥಾಪಕ ಸಾಮಾಜಿಕ ನಿರೀಕ್ಷೆಗಳಿಗೆ ತಕ್ಕಂತೆ ಚಲನಚಿತ್ರಕ್ಕೆ ‘ಸುಹಾನ ಸಫರ್’ ರೀತಿಯ ಅಂತ್ಯ ಕಾಣಿಸಿದ್ದಾರೆಯೇ ಅನುರಾಗ್ ಕಶ್ಯಪ್ ಎಂಬ ಪ್ರಶ್ನೆಯೂ ಏಳುತ್ತದೆ!






ಧನ್ಯವಾದ..ಶ್ರೀ ಮೋಹನ್ ಹಾಗೂ ‘ಅವಧಿ’ ತಂಡಕ್ಕೆ..