ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗ್ಗೆ ಒಮ್ಮೆ ಗೋಡೆ ಹುಡುಕುತ್ತಿದ್ದಾಗ…

ಬಾದಲ್ ನಂಜುಂಡಸ್ವಾಮಿ

ಈ ಚಿತ್ರದ ಹಿನ್ನೆಲೆ ಹೇಳ್ಬೇಕು ಅನ್ನಿಸ್ತು ಇವತ್ತು. ಚಿತ್ರ ಸುಮಾರು ಎರಡು ವರ್ಷದ ಹಿಂದೆ ಬಿಡಿಸಿದ್ದು.
ಆಗ ನಮ್ಮೆಲ್ಲೆರನ್ನೂ ಕೋವಿಡ್ ಭಯ ಎಷ್ಟು ಆವರಿಸಿತ್ತು ಎಂದರೆ ಅದು ಎಲ್ಲರಿಗೂ ತಿಳಿದ ವಿಷಯ. ಆ ಸಮಯದಲ್ಲಿ ನಾನು ಕೋವಿಡ್ ಅವೇರ್ನೆಸ್ ನ ಅಭಿಯಾನ ಮಾಡುವಾಗ ಈ ಚಿತ್ರ ರಚಿಸಿದ್ದೆ. ಎಲ್ಲೆಲ್ಲಿ ಗೋಡೆ ಸಿಗುತ್ತದೋ ಅಲ್ಲಿ ಕೋವಿಡ್ ಸಂಬಂಧಿತ ಚಿತ್ರ ರಚಿಸುತ್ತಿದ್ದೆ.

ಹೀಗ್ಗೆ ಒಮ್ಮೆ ಗೋಡೆ ಹುಡುಕುತ್ತಿದ್ದಾಗ …ನನ್ನ ಇನ್ಸ್ಟಾಗ್ರಾಮ್ ಅಕೌಂಟಿಂದ ಬಾಲಾಜಿ ಎಂಬುವವರು “ನಮ್ಮ ಮನೆ ಹತ್ರ ಒಂದು ಗೋಡೆ ಇದೆ ಪೇಂಟ್ ಮಾಡ್ತೀರಾ?” ಎಂದು ಕೇಳಿಕೊಂಡರು. ನಾನು ಗೋಡೆ ನೋಡಿ ಹೇಳ್ತಿನಿ ಅಂದೆ. ಅಲ್ಲಿ ಹೋಗಿ ನೋಡಿದಾಗ ಗೋಡೆ ಸಣ್ಣ ರಸ್ತೆಯಲ್ಲಿತ್ತು. ಅವೇರ್ನೆಸ್ ಗಾಗಿ ಮಾಡುತ್ತಿದ್ದ ನಾನು ಜಾಸ್ತಿ ಜನ ಸೇರೋ ರಸ್ತೆಯನ್ನು ಹುಡುಕುತ್ತಿದ್ದೆ.

ಆದರೆ ಬಾಲಾಜಿ ಅಲ್ಲಿ ಯಾಕೆ ಪೇಂಟ್ ಮಾಡಬೇಕು ಅಂತ ವಿವರಿಸಿ ಹೇಳಿದಾಗ…ಅಯ್ಯೋ ಅನಿಸಿತು!! ನಾನು ಒಂದು ಕ್ಷಣ ಸುಮ್ಮನಾಗಿಬಿಟ್ಟೆ. ಆತನ ಬಗ್ಗೆ ಧಿಡೀರ್ ಗೌರವ ಉಕ್ಕಿ ಬಂದಿತು!

ಒಂದೆರಡ್ಮೂರು ವರ್ಷದಿಂದ ಅವರ ತಾಯಿಗೆ ಲಕ್ವ ಹೊಡೆದು…ಸ್ವಾಧೀನ ಕಳೆದುಕೊಂಡು ಒಂದೇ ಕಡೆ ಮಲಗಿದ್ದರು. ಅವರು ಮಲಗಿದ್ದ ಜಾಗದಲ್ಲಿ ಒಂದು ಕಿಟಕಿ ಇದ್ದು. ಅವರು ಆ ಕಿಟಕಿಯಿಂದ ಹೊರಗೆ ನೋಡಿದರೆ ಒಂದು ಗೋಡೆ ಕಾಣಿಸುತ್ತಿತ್ತು.

ಅವರು ಯಾವಾಗಲೂ ಮಲಗಿಕೊಂಡು ಆ ಖಾಲಿ ಗೋಡೆಯನ್ನೇ ದಿಟ್ಟಿಸುತ್ತಿದ್ದರು. ಆದ್ದರಿಂದ ಬಾಲಾಜಿ “ಇಲ್ಲೇನಾದ್ರು ಬರೀರಿ ನಮ್ಮಮ್ಮ ಅದನ್ನಾದ್ರೂ ನೋಡಿಕೊಂಡು ಖುಷಿಪಡಲಿ…ಬರೀ ಖಾಲಿ ಗೋಡೆ ದಿಟ್ಟಿಸ್ತಾ ಇರ್ತಾರೆ” ಎಂದು ಕೇಳಿಕೊಂಡರು. ಆಗ ಕರ್ಫ್ಯೂ ಇತ್ತು. ಬೇಗ ಬೇಗ ಏನಾದರು ಬರೆದು ಮನೆ ಸೇರಿಕೊಳ್ಳಬೇಕಿತ್ತು. ಮೇಲಿನದನ್ನು ಬರೆದು ಮನೆ ಸೇರಿಕೊಂಡೆ. ನಾ ಬರೆಯುವಾಗ ಬಾಲಾಜಿ ಊಟ ತಂದುಕೊಟ್ಟಿದ್ದರು. ಅವರ ಅಮ್ಮ ನಾನು ಚಿತ್ರ ಬರೆಯುವುದನ್ನೇ ಖುಷಿಯಿಂದ ನೋಡುತ್ತಿದ್ದರು.

ಇವತ್ತು ಬಾಲಾಜಿ ಫೋನ್ ಮಾಡಿ ನೊಂದುಕೊಳ್ಳುತ್ತಿದ್ದರು “ತಾಯಿ ಇವತ್ತು ತೀರ್ಕೋಬಿಟ್ರು …ಆ ಹುಡ್ಗ ಹೆಂಗೆ ಬರ್ದು ಹೋದ ಅಲ್ವಾ? ಅಂತ ಯಾವತ್ತೂ ನೆನಸ್ಕೊತ ಇದ್ರು… ನೀವ್ ಬರ್ದು ಹೋದ್ಮೇಲೆ…ಅವರು ಎದ್ದು ಓಡಾಡ್ತಾ ಇದ್ರು…ನಾನೂ ಅಕ್ಕ ಹೆಲ್ಪ್ ಮಾಡ್ತಾ ಇದ್ದೋ.”

ನನ್ನ ಮೇಲಿನ ಅಭಿಮಾನಕ್ಕೆ ಅವರು ನನ್ನ ಜಾಸ್ತಿ ಹೊಗಳ್ತಾ ಇದ್ರು ಅನ್ನಿಸಿತು. ಆದರೂ ಬಾಲಾಜಿ ಅವರು ತನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದ ರೀತಿಗೆ…ನಾನು ಯಾವತ್ತೂ ಶರಣು!

‍ಲೇಖಕರು Admin

11 October, 2022

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading