ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಬೀಫಾಯಣ..

bha raviಭಾರವಿ 
ಎರಡು ವಾರಗಳ ಮೊದಲು ಎರಡು ದಿನಗಳ ಮಟ್ಟಿಗೆ ವ್ಯವಹಾರದ ನಿಮಿತ್ತ ಕೇರಳದ ಕಣ್ಣೂರಿಗೆ ಹೋಗಿದ್ದೆ. ಜೊತೆಯಲ್ಲಿ ಬೇಸರ ಕಳೆಯಲು ಹಾಗೂ ಡ್ರೈವಿಂಗ್ ಗೆ ಜೊತೆಯಾಗಲು ಸ್ನೇಹಿತನೊಬ್ಬನಿದ್ದ. ಈ ಬಾರಿ ಕೇರಳಕ್ಕೆ ಹೋಗುವಾಗ ತನ್ನನ್ನು ಕರೆದು ಕೊಂಡು ಹೋಗಲೇಬೇಕೆಂದು ಮೂರು ತಿಂಗಳ ಮೊದಲೇ ಅವನು ಕಟ್ಟಪ್ಪಣೆ ಮಾಡಿದ್ದ. ಮನೆಯಲ್ಲವನು ಮಡಿವಂತಿಕೆಯ ಬ್ರಾಹ್ಮಣನಾದರೂ ಸ್ನೇಹಿತರ ಜೊತೆ ಬೆರೆಯುವಾಗ ಸಂಪೂರ್ಣವಾಗಿ ಅಬ್ರಾಹ್ಮಣನಾಗಿ ಬಿಡುತ್ತಿದ್ದ.

. fork2ಬೆಳಿಗ್ಗೆ ಬೇಗನೆ ಹೊರಟವರು ಮಧ್ಯಾಹ್ನ 12 ಕ್ಕೆ ಕಣ್ಣೂರು ತಲುಪಿಕೊಂಡಿದ್ದೆವು. ಲಾಡ್ಜೊಂದರಲ್ಲಿ ರೂಮು ಪಡೆದುಕೊಂಡು ಫ್ರೇಶ್ ಆಗುವಾಗ ಸಮಯ 1.30 ದಾಟಿತ್ತು. ಮಧ್ಯಾಹ್ನ ಊಟ ಮಾತ್ರ ಮಾಡಲು ಒಂದು ಒಳ್ಳೆಯ ಹೋಟೆಲ್ ಅನ್ನು ಹೊಕ್ಕೆವು.(ಸಮಾರಾಧನೆಯೆಲ್ಲಾ ಸಂಜೆಗಿರಲಿ ಎಂದು!). ಕೇರಳದಲ್ಲಿ ಹೆಚ್ಚಿನ ಮಾಂಸಾಹಾರಿ ಹೋಟೆಲ್ ಗಳಲ್ಲಿ ’ಬೀಫ್’ ಮಾಮೂಲಿ. ನಾನು ಅಪರೂಪಕ್ಕೆ ಕೇರಳ, ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲಿ ವರ್ಷಕ್ಕೆ ಏಳೆಂಟು ಬಾರಿ ಬೀಫ್ ಸೇವಿಸುವುದುಂಟು. ಅದೂ ಹೆಚ್ಚಾಗಿ ಹಿಂದೂ ಸ್ನೇಹಿತರೊಂದಿಗೆ! ಮನೆಯಲ್ಲಿ ಮಾತ್ರ ಯಾರೂ ಸೇವಿಸುವುದಿಲ್ಲ. ಈ ನನ್ನ ಸ್ನೇಹಿತನೂ ಅಪರೂಪಕ್ಕೆ ಸಾತ್ ನೀಡಿದ್ದಾನೆ. ಹಾಗಾಗಿ ನಾನು ಅವನಿಗೆ ಬೀಫ್ ಬಿರಿಯಾನಿ ಹಾಗೂ ಚಿಲ್ಲಿ ಹೇಳೋಣ ಅಲ್ವಾ? ಅಂದೆ. ಅವನು ತಗ್ಗಿದ ಸ್ವರದಲ್ಲಿ ’ ಏ ಅವ್ರನ್ನ ಸ್ವಲ್ಪ ವಿಚಾರಿಸು, ಯಾವುದರ ಮಾಂಸ ಅಂತಾ?’ ಅಂದ.

ನಾನು ’ಅಲ್ಲಾ ಮಾರಾಯ, ಬೀಫ್ ಅಂದ್ರೆ ದನವೋ ಎತ್ತೋ ಯಾವುದೋ ಇರುತ್ತೆ ಬಿಡು. ಇಷ್ಟು ವರ್ಷಗಳಲ್ಲಿ ಕೇಳದವನು ಈಗ್ಯಾಕೆ ಹಾಗೆ ಕೇಳ್ತಿದೀಯಾ?’ ಅಂದೆ.

’ಹಾಗಲ್ಲ ಮಾರಾಯ, ಈಗ ದನದ ಮಾಂಸ ತಿನ್ನೋಕೆ ಯಾಕೋ ಮನಸ್ಸು ಹಿಂಜರಿಯುತ್ತೆ…ಮನೇಲಿ, ಹೊರಗೆ ಈಗೀಗ ಈ ಗೋಮಾತೆ ರಕ್ಷಿಸಿ ಅಂತ ಶುರುವಾದ್ಮೇಲೆ ನಂಗೆ ತಿನ್ನೋಕೆ ಮನಸ್ಸಾಗ್ತಿಲ್ಲ ಕಣೋ’ ತಣ್ಣನೆ ಸ್ವರದಲ್ಲಿ ಉಸುರಿದ.

’ಹಾಗಾದ್ರೆ ಸರಿ ಬಿಡು, ನೀನು ಚಿಕನ್ ತಗೋ’ ಅಂದೆ

’ನಂಗೆ ಬೀಫೇ ಇರ್ಲಿ, ಆದ್ರೆ ಅದು ಎತ್ತು, ಕೋಣ, ಎಮ್ಮೆ ಆದ್ರೆ ಓಕೆ.’ ಉತ್ತರಿಸಿದ.

’ಅದೌದು, ನಮ್ಗೆ ದನ ಅಲ್ಲಾ ಅಂತ ಹೇಳಿ ಅದನ್ನೇ ಕೊಟ್ರೆ?’ ಪ್ರಶ್ನಿಸಿದೆ.

’ಥೂ ನಿನ್ನ….ನೀವೆಲ್ಲಾ ಬರೀ ತಿನ್ನೋಕಾಯ್ತು ಅಷ್ಟೇ…ಎತ್ತಿನ ಮಾಂಸದಲ್ಲಿ ನಾರು ಜಾಸ್ತಿ, ಕೋಣ-ಎಮ್ಮೆಗಳ ಮಾಂಸ ತುಂಬಾ ಮೃದು, ರುಚಿ ಗೊತ್ತಾ?’ ಛೇಡಿಸುವವನಂತೆ ನುಡಿದ.

fork3 ’ಆಯ್ತು ಮಾರಾಯ…ನೀವು ಮಾತೆಯನ್ನು ತಿನ್ನಬೇಡಿ, ಪಿತೃಗಳನ್ನು, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮಂದಿರನ್ನು ಮಾತ್ರ ತಿನ್ನಿ…ಅಂದ ಹಾಗೆ ಬೀಫ್ ಮೇಲೆ ಒಂದು ಥೀಸೀಸ್ ಬರಿ’ ಅಂತಾ ನಗಾಡಿದೆ.

. ಅಷ್ಟರಲ್ಲಿ ಕಾಯುತ್ತಿದ್ದ ಮಾಣಿಗೆ ನನಗೆ ಬರುವ ಅರ್ಧಂಬರ್ಧ ಮಳಿಯಾಳಿಯಲ್ಲಿ ಯಾವುದರ ಮಾಂಸವೆಂದು ಕೇಳಿದೆ. ಅವನು ಕೋಣದ್ದು ಅಂದ ಕೂಡಲೇ ಈ ನನ್ನ ಅಬ್ರಾಹ್ಮಣ ಮಿತ್ರ ಖುಶಿಯಾದ. ಊಟ ಬಂದ ತಕ್ಷಣ ಟೇಸ್ಟ್ ನೋಡಿ ಸರಿಯಾಗಿದೆಯೆಂಬಂತೆ ಸಂತೃಪ್ತಿಯಿಂದ ತಲೆಯಾಡಿಸಿದ. ಕೈ ತೊಳೆದು ಬಿಲ್ ಪಾವತಿಸಿ ಹೊರಬರುವಾಗ ’ ಮಾರಾಯ, ಇನ್ಮುಂದೆ ನಾನೂ ಕೋಣ-ಎಮ್ಮೆನೇ ತಿನ್ನೊದ್’ ಅಂದೆ. ಪ್ರಶ್ನಾರ್ಥಕವಾಗಿ ಮುಖ ನೋಡಿದ. ’ನಿನ್ನಂಗೆ ನಂಗೆ ಸೆಂಟಿಮೆಂಟ್ ಅಲ್ಲಾ, ನೀನ್ ಹೇಳ್ದಂಗೆ ಅವು ಸಕತ್ ಟೇಸ್ಟ್ ಅಲ್ವಾ?’ ಅಂತಾ ನಕ್ಕೆ. ಅವನೂ ನಕ್ಕ.

‍ಲೇಖಕರು admin

25 November, 2015

1 Comment

  1. jithendra

    ಸ್ವಾಮಿ ನೀವು ಎಮ್ಮೆ ಎತ್ತು, ಕೋಣ ಹೆಗ್ಗಣ, ಹಂದಿ ಏನಾದರೂ ತಿನ್ನಿ ಅದನ್ನು ಬಹಿರಂಗಪಡಿಸಿ ಬೇರೆಯವರ ಭಾವನೆಗಳಿಗೇಕೆ ಘಾಸಿ ಮಾಡ್ತೀರೀ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading