ದೃಷ್ಟಿಯಂತೆ ಸೃಷ್ಟಿ…
ವೈ ಬಿ ಹಾಲಬಾವಿ
(ನಾಲ್ಕು ರುಬಾಯಿ)

1
ಅದೆಷ್ಟು ಕೌತುಕಗಳು ಹುದುಗಿವೆಯೋ ಈ ಸೃಷ್ಟಿಯಲ್ಲಿ
ಬಿಟ್ಟುಕೊಡದ ಗುಟ್ಟುಗಳೆಷ್ಟಿವೆಯೋ ಈ ಜಗದ ದೃಷ್ಟಿಯಲ್ಲಿ
ಜೀವ, ಜೀವಗಳ ಜಾಲ ರಹಸ್ಯವೀ ಗೋಳ ಓ ‘ಹಾಲ’
ವಿಧ, ವಿಧ ರೂಪ ರೂಪಾಂತರ ಬೆಸೆದಿದೆ ಈ ಸಮಷ್ಟಿಯಲ್ಲಿ
2
ಯಾರು ಪೂರ್ಣ, ಯಾವುದು ಪರಿಪೂರ್ಣ ಹೇಳು ಈ ಜಗದಿ
ಪೂರ್ಣ, ಪರಿಪೂರ್ಣ, ಅಪೂರ್ಣ ಪಾಕ, ಪರಿಪಾಕವೀ ಜಗದಿ
ಆದಿ, ಆನಾದಿ, ತುದಿ ಮೊದಲಿಲ್ಲದ ಕ್ರಿಯೆ ಪ್ರಕ್ರಿಯೆ ನೋಡ
ಓ ‘ಹಾಲ’ ಎಂತಹ ವಿಸ್ಮಯ ಕಾಲದ ನಡೆ ಈ ಜಗ ಹೃದಯದಿ
3
ಇಲ್ಲ ಇಲ್ಲಿ ಯಾವುದೂ ದೊಡ್ಡದು ಅತಿ ದೊಡ್ಡದು
ಎಲ್ಲಾ ಕಿರಿದು, ಅತಿ ಕಿರಿದು ಒಂದರ ಮುಂದೆ ಇನ್ನೊಂದು
ಬೀಜ ವೃಕ್ಷಕೆ ಮೂಲ, ಜೀವ ಕಾಯಕೆ ಮೂಲ ಓ ‘ಹಾಲ’
ಮೂಲ ನೆಲೆವು ಬತ್ತಲು ಇಲ್ಲ ಇಲ್ಲಿ ಯಾವುದೂ ಹಿರಿದು ಕಿರಿದು
4
ಸೋಡರು ಚಿಕ್ಕದಾದರೂ ಅದು ಹರಡುವ ಬೆಳಕು ದೊಡ್ಡದು
ಮಿಣುಕು ನಕ್ಷತ್ರಗಳಾದರೂ ಕತ್ತಲೆಗೆ ಒಡ್ಡವ ಬೆಳಕು ದೊಡ್ಡದು
ಹಿರಿದು, ತಾನೇ ಘನವೆಂಬ ಅಹಂ ಅಳಿಯದೆ ಹೋದರೆ ಹೇಗೆ?
ಓ ‘ಹಾಲ’ ತನ್ನ ತಾನು ಅರಿಯಲು ಅಂತರಂಗದ ಬೆಳಕು ದೊಡ್ಡದು
*ಇರಾನಿನ ಮೂಲದ ರುಬಾಯಿ ಉರ್ದು ಸಾಹಿತ್ಯದ ಕಾವ್ಯ ಕುಸುಮ. ಫಾರಸಿ ಕವಿಗಳ ಹೃದಯದ ಪ್ರೇಮ ರಸಧಾರೆ. ರುಬಾ ಎಂದರೆ ನಾಲ್ಕು. ಕನ್ನಡದ ಕಂದ ಪದ್ಯಗಳನ್ನು ಹೋಲುವ ನಾಲ್ಕು ಸಾಲಿನ ಕವನಗಳನ್ನು ರುಬಾಯಿ ಅಥವಾ ರುಬಾಯತ್ ಎಂದು ಕರೆಯುತ್ತಾರೆ. ರುಬಾಯಿಯ ಒಂದು, ಎರಡು ಮತ್ತು ನಾಲ್ಕನೇ ಸಾಲುಗಳು ಅಂತ್ಯ ಪ್ರಾಸವನ್ನು ಹೊಂದಿದ್ದು, ಮೊದಲನೇ ಸಾಲು ವ್ಯಾಖ್ಯಾನದಂತಿದ್ದರೆ ಮೂರನೇ ಸಾಲು ನಾಲ್ಕನೇ ಸಾಲಿನ ಭಾವನೆ ಮೂಡಿಸುತ್ತದೆ. ಒಂದು, ಎರಡು ಮತ್ತು ಮೂರನೇ ಸಾಲುಗಳು ರುಬಾಯಿಯ ದೇಹವಾದರೆ, ನಾಲ್ಕನೇ ಸಾಲು ರುಬಾಯಿಯ ಪ್ರಾಣವಾಗಿರುತ್ತದೆ. ಇದೇ ಮಾದರಿಯನ್ನು ಅಳವಡಿಸಿಕೊಂಡು ಕನ್ನಡದಲ್ಲಿ ಇದರ ಪ್ರಯೋಗವನ್ನು ಮಾಡಲಾಗಿದೆ. ಇಲ್ಲಿರುವ ನಾಲ್ಕು ರುಬಾಯಿ ಕನ್ನಡದಲ್ಲಿ ರಚಿಸಿರುವ ನನ್ನ ಸ್ವಂತ ರಚನೆಗಳಾಗಿವೆ.







– rubaayigalu chennagive naalke salugal rachanegalaadroo avu maadisuva darshan hiridaadudu.