ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೆರಡು ಗಜ಼ಲ್‌ಗಳು

ರಮೇಶ ಗಬ್ಬೂರ್

ಷರಾಬು ಮತ್ತು ಗಜಲ್


ಅವನು ಹಗಲುಗಳಲ್ಲಿ ಕುಡಿಯುತ್ತಿರಲಿಲ್ಲ ಆಮೇಲೆ ಕುಡಿಯದಿದ್ದರೆ ಹಗಲಾಗುತ್ತಿರಲಿಲ್ಲ ಸಾಕಿ
ಅವನು ಷರಾಬು ಇಲ್ಲದ ದಿನ ಸತ್ತು ಹೋಗುತ್ತಿದ್ದ ಸಾಯಲು ಇಷ್ಟವಿಲ್ಲದೆ ಸಾಕಿ
 
ಮನುಷ್ಯನನ್ನು ಸೋಲಿಸಬಹುದು ಆದರೆ ಅವನ ನಾಶ ಮಾಡಲಾಗುವುದಿಲ್ಲ
ಸಾವು ಅವನನೆತ್ತಿಯ ಮೇಲೆ ಪಾಳಿ ಕಾಯುತ್ತಿದ್ದರೂ ಬರೆಯುವುದವ ಬಿಡಲಿಲ್ಲ ಸಾಕಿ
 
‘ಮಾನ’ವೆಂಬ ವಾಸಿಯೇ ಆಗದಂತಹ ಕಾಯಿಲೆ ಅವನ ಹತ್ತಿರವೂ ಸುಳಿಯಲಿಲ್ಲ
‘ಕೀರ್ತಿ’ಎಂಬ ಸಾವಿನ ಚಿಕ್ಕತಂಗಿಯ ಹಿಂದೆ ಬೀಳದವನು ಸಾಕಿ
 
ಲೇಖನಿಗೆ ಮತ್ತೆ ಮತ್ತೆ ಷಾಯಿ ತುಂಬಿ ಬರೆಯದೆ ಷೇರ್ ಆಜಾದಿ ಮಾಡಿದವನು
ದೇಹಕೆ ಷರಾಬಿನ ಬಣ್ಣದ ಪಾನೀಯ ತುಂಬಿ ಪದಗಳ ಉದುರಿಸಿದವನು ಸಾಕಿ
 
ಕೇಳುವವನೂ ಚೆಂದ ಬದುಕಬಹುದೆಂದು ಗಜಲ್ ಕೇಳಿಸಿದವನ ಯಾರೆಂದು ಕೇಳಬೇಡ
ಅಲ್ಲಾನ ಕೇಳದೆ ಪೂರ್ತಿ ಆಯುಷ್ಯ ಬದುಕಿದ ಗಿರಿಯ ಶಿಷ್ಯ ಈ ‘ದಾಸ’ನ ಗಾಲಿಬ್ ಸಾಕಿ
ಟಿಪ್ಪಣಿ
ಅಲ್ಲಾ – ಇಸ್ಲಾಂ ಧರ್ಮದ ದೇವರ ಸಂಭೋದನೆ
ಷರಾಬು _ ಹೆಂಡ, ಮಧ್ಯ, ಸುರೆ
ಷಾಯಿ _ ಮಸಿ,
ಷೇರ್ _ ಗಜಲ್ನ ಎರಡು ಸಾಲು(ದ್ವಿಪದಿ)
ಗಿರಿ _ ಗಜಲ್ ಕವಿ ಅಲ್ಲಾಗಿರಿರಾಜ್
 
ನಿನ್ನಂತಾಗಲು ನನಗಿಷ್ಟವಿಲ್ಲ

ನಿನ ಕಣ್ಣಿನ ಸುರಮಾ ನೋಡಿ ಆಸ್ಥಾನದ ಹೊಗಳು ಭಟ್ಟನಾಗಲು ನನಗಿಷ್ಟವಿಲ್ಲ ಸಖಿ
ಆಡುವ ಗಿಡದ ಕೆಳಗೆ ಕುಳಿತು ನಿನ ನೆರಳು ಕದ್ದವನಾಗಲು ನನಗಿಷ್ಟವಿಲ್ಲ ಸಖಿ
 
ನಮ್ಮೂರ ತೋಟದೊಳು ಅರಳಿದ ಎಡಬೈತಲೆಯ ಹೆಣ್ಣು ನೀನಲ್ಲ್ಲದಿರಬಹುದು
ಗುಲಾಬಿ ದಳದ ಮುಳ್ಳ ಕಂಡು ಮೂರ್ಖನಾಗಲು ನನಗಿಷ್ಟವಿಲ್ಲ ಸಖಿ
 
ಸುಂದರ ಮೋಡಕರಗಿ ಮಳೆ ಬಿತ್ತುವಾಗ ಮಣ್ಣಿಗೆ ಹಿತವೆನಿಸಬಹುದು
ಸೋಗಿನ ಸೆರಗ ತೋಯಿಸಿ ಹರಗೋ ಸಾಲಲಿ ಕಳೆಯಾಗಲು ನನಗಿಷ್ಟವಿಲ್ಲ ಸಖಿ
 
ಡೋಣಿ ನೀರ ಕೆಳಗೆ ನಿಂತು ಕೂಡಿ ಆಡಿದ ಆಟ ಸುಖವಲ್ಲದಿರಬಹುದು
ಮರಳಿನಲಿ ಗುಬ್ಬಿಯಂತೆ ಗೂಡಕಟ್ಟಿ ಮನೆಬಿಟ್ಟು ಹಾರಲು ನನಗಿಷ್ಟವಿಲ್ಲ ಸಖಿ
 
ಹೊಗಳಿ ಬರೆಯೆಂದರೆ ಎಷ್ಟೊಂದು ಬರೆಯಲಿ ಹಿಡಿದ ಲೇಖನಿ ನಿನದಲ್ಲದಿರಬಹುದು
ಶಬ್ದಗಳ ಹಿಂದೆ ಮುಂದೆ ಮಾಡಿ ಸೀಳುವ ಗೋಡೆಕಟ್ಟಲು ನನಗಿಷ್ಟವಿಲ್ಲ ಸಖಿ
 
ಗೋಳಗುಮ್ಮಟದ ಒಳಗಿನ ರಂಭಾ ನೀನಾಗಲು ಕಾಲವು ಹಿಂದಕೆ ಓಡದೆ ಇರಬಹುದು
ಗಜಲ್ ಕವಿ ಈ ‘ದಾಸ’ನ ಸಖಿ ನೀರಿಂದ ಹೊರಬಿದ್ದ ಮೀನಾಗಲು ನನಗಿಷ್ಟವಿಲ್ಲ ಸಖಿ
 
ಟಿಪ್ಪಣಿ
ಸುರಮಾ – ಕಣ್ಣಿಗೆ ಹಚ್ಚುವ ದ್ರವ
ರಂಭಾ – ನಾಲ್ಕನೇ ಆದಿಲ್ ಷಾ ನ ಪ್ರೇಯಸಿ
 

‍ಲೇಖಕರು G

30 September, 2014

4 Comments

  1. ಬಸಪ್ಪ ನಾಗೋಲಿ

    ಗಬ್ಬೂರರ ಗಜಲ್ ಗಳು ಚೆನ್ನಾಗಿವೆ. ಕೀರ್ತಿ ಸಾವಿನ ಚಿಕ್ಕ ತಂಗಿ ಎಲ್ಲರಿಗೂ ಎಚ್ಚರಿಕೆ ಇರಲಿ ಅದರ ಹಿಂದೆ ಬೀಳಬಾರದು…

  2. anwar

    nice..very nice..

  3. ramesh gabbur

    ಅವಧಿಗೆ ಧನ್ಯವಾದಗಳು

  4. Anonymous

    Gazal matagi bandive Padagalu Ienastu Matagale Galeya

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading